Wednesday, 19 April 2023

ಜನಸಂಖ್ಯೆ ಹೆಚ್ಚಳ ಶಾಪವಲ್ಲ


ಅನೇಕ ವಿಷಯಗಳಲ್ಲಿ ಮುಂಚೂಣಿಯಲ್ಲಿರುವ ಭಾರತ ಈಗ ಜನಸಂಖ್ಯೆಯಲ್ಲೂ ಮುಂಚೂಣಿಗೆ ಬಂದಿದೆ. ಜನಸಂಖ್ಯೆ ಎಂದ ಕೂಡಲೆ ಅದನ್ನು ಪ್ರಗತಿಗೆ ಮಾರಕ ಎಂಬಂತೆ ನಕಾರಾತ್ಮಕ ಧೋರಣೆಯಲ್ಲಿ ಕಾಣಲಾಗುತ್ತದೆ. ಆದರೆ ಇದು ಅಷ್ಟು ಸರಿಯಲ್ಲ. ಇದನ್ನು ಸಂಪನ್ಮೂಲ ಎಂಬಂತೆ ಗುಣಾತ್ಮಕವಾಗಿಯೂ ನೋಡಬಹುದು. ಇದನ್ನು ಇಲ್ಲಿ ಪರಿಶೀಲಿಸಲಾಗಿದೆ.

ಇತ್ತೀಚಿನ ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ವರದಿಯು, ಪ್ರಪಂಚದ 163 ದೇಶಗಳ ಹತ್ತಾರು ವಿಷಯಗಳನ್ನು ಮಾನದಂಡವಾಗಿಟ್ಟುಕೊಂಡು ಸಿದ್ಧವಾಗಿದೆ. ಮಾನವ ಅಭಿವೃದ್ಧಿ ಎಂದರೆ ಒಬ್ಬೊಬ್ಬರೂ ಐಷಾರಾಮಿ ಜೀವನ ನಡೆಸುವಂತೆ ಹಣ ಸಂಪಾದಿಸುವುದು ಎಂದು ಯಾರಾದರೂ ತಿಳಿದಿದ್ದರೆ ಅದು ಮೂರ್ಖತನ. ವ್ಯಕ್ತಿ ಮತ್ತು ಸಮಾಜ ಎರಡೂ ಸಂಗತಿಗಳ ಸಾಂಗತ್ಯ ಮಾನವ ಅಭಿವೃದ್ಧಿಯಲ್ಲಿದೆ. ಹೀಗಾಗಿಯೇ ವಿಶ್ವಸಂಸ್ಥೆಯ ವರದಿ ಸಮಾಜದಲ್ಲಿನ ಆರೋಗ್ಯ, ಶಿಕ್ಷಣ, ಆದಾಯ, ಅಸಮಾನತೆ, ಬಡತನ, ಲಿಂಗ ವ್ಯವಸ್ಥೆ, ಸುಸ್ಥಿರತೆ, ಜನಸಂಖ್ಯೆ, ಸಂಶೋಧನೆ ಮತ್ತು ತಾಂತ್ರಿಕತೆ, ವ್ಯಾಪಾರ ವಹಿವಾಟುಗಳನ್ನು ಗಮನಿಸಿ ದೇಶದ ಮಾನವ ಅಭಿವೃದ್ಧಿಯ ವರದಿ ತಯಾರಿಸಿದೆ. ಬದಲಾದ ಜಾಗತಿಕ ದೃಷ್ಟಿಕೋನದಲ್ಲಿ ಜನಸಂಖ್ಯೆಯನ್ನು ಸಂಪನ್ಮೂಲ ಎಂದು ತಿಳಿಯಲಾಗುತ್ತಿದೆ. ಆದರೆ ನಮ್ಮಲ್ಲಿ ಒಂದು ಚಾಳಿ ಇದೆ. ಕೆಟ್ಟದಕ್ಕೆಲ್ಲ ಶನೈಶ್ಚರ ಕಾರಣ ಎಂಬಂತೆ ಕುಂಠಿತ ಅಭಿವೃದ್ಧಿ ಕೆಲಸಗಳಿಗೆಲ್ಲ ದೇಶದ ಜನಸಂಖ್ಯಾ ಹೆಚ್ಚಳವೇ ಕಾರಣ ಎನ್ನುತ್ತೇವೆ. ಇದು ಸರಿಯಲ್ಲ. ಪ್ರಪಂಚದಲ್ಲಿ ಜೀವಿಸುತ್ತಿರುವ ಯಾರೊಬ್ಬರೂ ಜನಸಂಖ್ಯಾ ಹೆಚ್ಚಳವನ್ನು ಬಯ್ಯುವಂತಿಲ್ಲ. ಅವರನ್ನೂ ಸೇರಿಸಿಯೇ ಜನಸಂಖ್ಯೆ ಹೆಚ್ಚಿರುತ್ತದೆ! ಹಾಗಾಗಿ ಜನಸಂಖ್ಯೆಯನ್ನು ತೆಗಳಲು ಯಾರಿಗೂ ನೈತಿಕ ಹಕ್ಕಿಲ್ಲ. ಅಲ್ಲದೇ ನಕಾರಾತ್ಮಕವಾಗಿ ಜನಸಂಖ್ಯೆಯನ್ನು ನೋಡುವ ಅಗತ್ಯವೂ ಇಲ್ಲ. 

ಸಣ್ಣ ನಿದರ್ಶನ ನೋಡೋಣ. ಈಚೆಗೆ ಕರ್ನಾಟಕದ ಲೋಕಾಯುಕ್ತರು ಭ್ರಷ್ಟ ಸರ್ಕಾರಿ ಅಧಿಕಾರಿಗಳನ್ನು ಎಂದಿನಂತೆ ಹಿಡಿದರು. ಇವರಲ್ಲಿ ಒಬ್ಬ ಬಿಬಿಎಂಪಿ ಇಂಜಿನಿಯರ್, ಮತ್ತೊಬ್ಬ ಆರ್‍ಟಿಒ ಅಧಿಕಾರಿ. ಮೊದಲನೆಯವನ ಆದಾಯ ನ್ಯಾಯವಾಗಿ ರೂ. ಒಂದು ಕೋಟಿ ಐದು ಲಕ್ಷ ಇರಬೇಕಿತ್ತು, ಎರಡನೆಯವನ ನ್ಯಾಯ ಆದಾಯ ರೂ. ಎಪ್ಪತ್ತು ಲಕ್ಷ ಇರಬೇಕಿತ್ತು. ಆದರೆ ಕ್ರಮವಾಗಿ ಇದ್ದುದು ರೂ. 2 ಕೋಟಿ 34 ಲಕ್ಷ ಹಾಗೂ ರೂ.2 ಕೋಟಿ 7 ಲಕ್ಷ! ಕಾಫಿ ಎಸ್ಟೇಟುಗಳು, ಬಹುಮಹಡಿ ಕಟ್ಟಡಗಳು, ಕೆಜಿಗಟ್ಟಲೆ ಬಂಗಾರ ಇತ್ಯಾದಿ, ಇತ್ಯಾದಿ. ಒಬ್ಬ ಗೋವಿಂದಯ್ಯ ಮತ್ತೊಬ್ಬ ನಾಸಿರ್ ಅಹಮದ್. ಜಾತೀಯತೆ ಬೇರೆ ಕಡೆ ಇರಬಹುದು; ಭ್ರಷ್ಟಾಚಾರ ಮಾತ್ರ ಜಾತ್ಯತೀತ! ಇವರಿಬ್ಬರು ಈಚೆಗೆ ಬಲೆಗೆ ಬಿದ್ದ ತಿಮಿಂಗಿಲಗಳು. ಹೀಗೆ ಬಲೆಗೆ ಬಿದ್ದ ಅಸಂಖ್ಯ ಜನರ ಜಾತಕ ಲೋಕಾಯುಕ್ತ ವೆಬ್‍ಸೈಟಿನಲ್ಲಿ ಈಗಲೂ ಲಭ್ಯ. ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ ಎಂಬುದೂ ಅಚ್ಚರಿಯ ಸಂಗತಿಯಲ್ಲ. ಈಗ ಹೇಳಿ. ರಸ್ತೆ ಮಾಡಿಸದೇ ಆ ಹೆಸರಲ್ಲಿ ಹಣ ಲಪಟಾಯಿಸುವುದು, ವಾಹನ ಓಡಿಸದ ಆಸಾಮಿಗೂ ಲೈಸನ್ಸ್ ಕೊಡುವುದು, ಪ್ರತ್ಯಕ್ಷ ನೋಡದೇ ಕಿತ್ತು ಹೋದ ಬಸ್ಸು, ಲಾರಿಗೂ ಎಫ್‍ಸಿ ಕೊಡುವುದು ಮೊದಲಾದ ಹಲ್ಕಾ ಕೆಲಸಗಳಿಗೂ ಜನಸಂಖ್ಯಾ ಹೆಚ್ಚಳಕ್ಕೂ ಏನಾದರೂ ಸಂಬಂಧವಿದೆಯೇ? ಇಲ್ಲ.

ಅಂದಹಾಗೆ 2013ರಲ್ಲಿ ಭ್ರಷ್ಟಾಚಾರದಲ್ಲಿ ಭಾರತದ ಸ್ಥಾನ ಪ್ರಪಂಚದಲ್ಲಿ 94, ಅಭಿವೃದ್ಧಿಯಲ್ಲಿ 136! ಭ್ರಷ್ಟಾಚಾರದಲ್ಲಿ ಮೇಲು ಮೇಲಕ್ಕೂ ಅಭಿವೃದ್ಧಿಯಲ್ಲಿ ಕೆಳ ಕೆಳಗೂ ಹೋಗುತ್ತಿದೆ. ಒಂದು ಕಿ.ಮೀ ಉದ್ದದ ಯಾವ ರಸ್ತೆಗೆ ಅಗಲ ಎಷ್ಟಿರಬೇಕು, ಜಲ್ಲಿ ಕಲ್ಲು ಎಷ್ಟು ಹಾಕಬೇಕು, ಡಾಂಬರು ಯಾವ ಪ್ರಮಾಣದಲ್ಲಿರಬೇಕು ಇತ್ಯಾದಿ ಮಾನದಂಡಗಳಿವೆ. ಲೆಕ್ಕದಲ್ಲಿ ಇವನ್ನೆಲ್ಲ ತೋರಿಸಲಾಗುತ್ತದೆ. ಅಷ್ಟೇ ಪ್ರಮಾಣದ ಹಣ ಪಡೆಯಲಾಗುತ್ತದೆ. ಆದರೆ ಗುಣಮಟ್ಟ ಮಾತ್ರ ಇರುವುದಿಲ್ಲ. ಅರ್ಧಗಂಟೆಯಲ್ಲಿ ಐದಾರು ಕಿಮೀ ರಸ್ತೆ ಕಾಮಗಾರಿ ಮುಗಿಸಲಾಗುತ್ತದೆ. ಒಂದೆರಡು ದಿನದಲ್ಲಿ ಲಾರಿ ಬಸ್ಸುಗಳ ಚಕ್ರದ ಜೊತೆಗೇ ಹೊಸ ರಸ್ತೆಯೂ ಹೋಗಿರುತ್ತದೆ! ಮೀಸಲಾದ ಹಣ ಮಾತ್ರ ವ್ಯವಸ್ಥಿತವಾಗಿ ವ್ಯಯವಾಗಿರುತ್ತದೆ. ಇಂಥ ಕಳಪೆ ಕಾಮಗಾರಿಗೂ ಜನಸಂಖ್ಯೆಗೂ ಏನಾದರೂ ಸಂಬಂಧವಿದೆಯೇ? ಇಲ್ಲ.

ನಮ್ಮ ದೇಶದ ಜನಸಂಖ್ಯೆ ಸದ್ಯ 100 ಕೋಟಿ 21 ಲಕ್ಷ (2011ರ ಗಣತಿ). ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ ಮತ್ತು ಮಿತ ಬಳಕೆಯ ದೃಷ್ಟಿಯಿಂದ ಜನಸಂಖ್ಯೆಗೆ ಮಿತಿ ಅನಿವಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅಂಥ ಪ್ರಯತ್ನ ನಮ್ಮ ದೇಶದಲ್ಲಿ 80ರ ದಶಕದಿಂದ ಸಮರ್ಪಕವಾಗಿ ನಡೆಯುತ್ತಿದೆ, ಪರಿಣಾಮಕಾರಿಯೂ ಆಗುತ್ತಿದೆ. ಜನಸಂಖ್ಯಾ ಏರಿಕೆ ದರ ನಿಯಂತ್ರಣ ಕಾಣುತ್ತಿದೆ. ಅದು ಬೇರೆ ಪ್ರಶ್ನೆ. ಆದರೆ ಇರುವ ಜನ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದೇವೆಯೇ? ಅದೂ ಇಲ್ಲ. 35 ವರ್ಷ ವಯೋಮಾನದೊಳಗಿನ ದುಡಿಯುವ ಶಕ್ತಿಯುಳ್ಳ ಯುವಕರ ಪ್ರಮಾಣ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಭಾರತದ ದೃಷ್ಟಿಯಿಂದ ಈ ಸಂಗತಿ ಆಶಾದಾಯಕ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. ಭಾರತದಲ್ಲಿ ಈ ವಯೋಮಾನದ ಯುವಕರ ಪ್ರಮಾಣ ಶೇ.65. ಎಂಥ ಶಕ್ತಿ ಇದು! ಚೀನಾ, ಜಪಾನ್‍ನಂಥ ದೇಶಗಳಲ್ಲಿ ಇಂಥ ಶಕ್ತಿ ಕುಸಿದುಹೋಗಿದೆ. ಈ ವಿಷಯದಲ್ಲಿ ಯೂರೋಪ್ ದೇಶಗಳಂತೂ ಕಂಗಾಲಿನ ಸ್ಥಿತಿಯಲ್ಲಿವೆ. ಈ ಶಕ್ತಿಯನ್ನು ನಾವು ಸದುಪಯೋಗ ಮಾಡಿಕೊಳ್ಳುವಲ್ಲಿ ಸಫಲರಾಗಿಲ್ಲ ಎಂಬುದು ವಿಷಾದದ ಸಂಗತಿ. ಸರಿಯಾದ ಶಿಕ್ಷಣ, ಉದ್ಯೋಗಾವಕಾಶ ಇಲ್ಲದ ಯುವಜನತೆ ದಿಕ್ಕುತಪ್ಪುತ್ತಿದೆ. ದರೋಡೆ, ಅತ್ಯಾಚಾರ, ಕೊಲೆಗಳಂಥ ಮಹಾ ಅಪರಾಧಗಳಲ್ಲಿ ಯುವಕರ ಸಂಖ್ಯೆ ಏರುತ್ತಿದೆ. ಸದ್ಯ ಸೈಬರ್ ಅಪರಾಧಗಳಲ್ಲಿ ಶೇ.68 ಹಾಗೂ ಶಿಕ್ಷಾರ್ಹ ಅಪರಾಧಗಳಲ್ಲಿ ಶೇ.44 ಯುವಕರಿದ್ದಾರೆ. ಇದರಿಂದಾಗಿ ಸಮಾಜದ ಆರೋಗ್ಯ ಹಾಳಾಗುತ್ತಿದೆ. ಯುವಕರಲ್ಲಿ ಹೆಚ್ಚುತ್ತಿರುವ ಅಸಹನೆಗೆ ಕಾರಣ ಹತ್ತು ಹಲವು. ಆದಾಯ ಸರಿಯಾಗಿಲ್ಲದಿರುವುದು, ಅರ್ಹತೆಗೂ ಮೀರಿದ ಮಹತ್ವಾಕಾಂಕ್ಷೆ, ವಯೋಸಹಜ ದೈಹಿಕ-ಮಾನಸಿಕ ಒತ್ತಡ ಮೊದಲಾದವು ಇವುಗಳಲ್ಲಿ ಸೇರಿವೆ. ಇವೆಲ್ಲ ವ್ಯಕ್ತಿಯ ಆಂತರಿಕ ಸಮಸ್ಯೆಗಳು. ಅದರ ಪರಿಣಾಮ ಸಾಮಾಜಿಕ. ಮನೆ ಮನೆಯಲ್ಲೂ ಕೌಟುಂಬಿಕ ವ್ಯವಸ್ಥೆ ಹಳಿ ತಪ್ಪಿರುವುದೇ ಇಂಥ ಸಮಸ್ಯೆಗೆ ಕಾರಣ. ಸರ್ಕಾರದ ನೀತಿ ನಿಲುವುಗಳು ಕೌಟುಂಬಿಕ ವ್ಯವಸ್ಥೆಯನ್ನು ಪರೋಕ್ಷವಾಗಿ ನಿರ್ಧರಿಸುತ್ತವೆ. ಬಹುತೇಕ ನೀತಿ ನಿರೂಪಣೆಯಲ್ಲಿ ಕುಟುಂಬದ ಮೇಲೆ ಅದು ಉಂಟುಮಾಡುವ ಪರಿಣಾಮವನ್ನು ಅಲಕ್ಷಿಸಲಾಗುತ್ತದೆ. ಸರ್ಕಾರದ ನೀತಿಗಳಲ್ಲಿ ವ್ಯಕ್ತಿ-ಕುಟುಂಬ-ಸಮಾಜದ ಏಕಸೂತ್ರತೆ ಅತ್ಯಗತ್ಯ. ಹೀಗಾಗಿಯೇ ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿಯ ವರದಿಯಲ್ಲಿ ಆರೋಗ್ಯ, ಶಿಕ್ಷಣ, ಆದಾಯಗಳಲ್ಲಿ ವ್ಯಕ್ತಿಗತ ಸಾಧನೆ ಅಗತ್ಯವಾದರೂ ವ್ಯಕ್ತಿ ಸಾಧನೆಗೆ ಸಾಮಾಜಿಕ ಪರಿಸ್ಥಿತಿ ಅಡ್ಡಬರುವಂತಿದ್ದರೆ ಹಾಗೂ ಪ್ರಗತಿ ಕುರಿತ ಸಾಮಾಜಿಕ ಮತ್ತು ವ್ಯಕ್ತಿ ಗ್ರಹಿಕೆಗಳು ಭಿನ್ನವಾದರೆ ಅದು ಮಾನವ ಅಭಿವೃದ್ಧಿಯನ್ನು ಖಚಿತಪಡಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. 

ಅತ್ಯುತ್ತಮ, ಉತ್ತಮ, ಮಧ್ಯಮ ಹಾಗೂ ಕೆಳ ತರಗತಿಯ ಮಾನವ ಅಭಿವೃದ್ಧಿ ಎಂದು ನಾಲ್ಕು ರೀತಿಯಲ್ಲಿ ದೇಶಗಳ ಅಭಿವೃದ್ಧಿಯನ್ನು ವಿಂಗಡಿಸಲಾಗಿದೆ. ಭಾರತ ಮಧ್ಯಮ ತರಗತಿಯಲ್ಲಿದೆ. ನಾರ್ವೆ ಅತ್ಯುತ್ತಮ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅತಿ ಕಡಿಮೆ ಭ್ರಷ್ಟತೆ ಇರುವ ದೇಶಗಳಲ್ಲಿ ನಾರ್ವೆಯೂ ಒಂದು (5 ನೇ ಸ್ಥಾನ). ಅತ್ಯುತ್ತಮ ಪಟ್ಟಿಯಲ್ಲಿ ನಮ್ಮ ರಾಜ್ಯದ ಗಾತ್ರದಷ್ಟಿರುವ ಮಾಲ್ಟಾ, ಲಾಟ್ವಿಯಾಗಳೂ ಇವೆ. ಉತ್ತಮ ತರಗತಿಯಲ್ಲಿ ಕ್ಯುಬಾ, ಮಲೇಷ್ಯಾ ಜೊತೆ ಶ್ರೀಲಂಕಾ ಕೂಡ ಇದೆ. ಮಧ್ಯಮ ತರಗತಿಯಲ್ಲಿರುವ ನಮಗಿಂತಲೂ ಬಾಂಗ್ಲಾ, ಪಾಕಿಸ್ತಾನ ಮತ್ತು ಕೀನ್ಯಾ ಕೆಳಗಿವೆ ಎಂಬುದಷ್ಟೇ ನಮಗಿರುವ ಸಮಾಧಾನ.

ಕೇಂದ್ರವಿರಲಿ, ರಾಜ್ಯವಿರಲಿ ಎರಡೂ ಸರ್ಕಾರಗಳ ಸಾಮಾಜಿಕ ಯೋಜನೆಗಳಲ್ಲೇ ಭ್ರಷ್ಟಾಚಾರ ಅತಿಯಾಗಿರುವುದು ಎಂಬುದನ್ನು ಎಲ್ಲ ಸಮೀಕ್ಷೆಗಳೂ ಒಪ್ಪುತ್ತವೆ. ಸಾಮಾಜಿಕ ಸಮಸ್ಯೆಗಳಿಗೆ ರಾಜಕೀಯ ಅಥವಾ ಆರ್ಥಿಕ ಪರಿಹಾರ ನೀಡುವುದರಿಂದ ಪರಿಸ್ಥಿತಿ ಹದಗೆಡುತ್ತಿದೆ. ಸಾಮಾಜಿಕ ಸಮಸ್ಯೆಗೆ ಸಾಮಾಜಿಕ ಪರಿಹಾರವೇ ಅಗತ್ಯ. ಉದಾಹರಣೆಗೆ ಜಾತಿ ಸಮಸ್ಯೆಯನ್ನೇ ನೋಡಿ. ಅದೊಂದು ಸಾಮಾಜಿಕ ಸಮಸ್ಯೆ. ಜಾತಿ ವಿನಾಶಕ್ಕೆ ಕಂಡುಕೊಂಡ ಮಾರ್ಗಗಳೆಲ್ಲ ಒಂದೋ ರಾಜಕೀಯ ಅಥವಾ ಆರ್ಥಿಕವಾಗಿವೆ. ರಾಜಕೀಯ ಮತ್ತು ಆರ್ಥಿಕ ಉದ್ದೇಶ ಈಡೇರಿದರೂ ಜಾತಿ ಮಾತ್ರ ಹಾಗೆಯೇ ಇದೆ, ಮತ್ತಷ್ಟು ಸಂಕೀರ್ಣವಾಗುತ್ತಿದೆ!

ಸಾಮಾಜಿಕ ಯೋಜನೆಗಳ ಜಾರಿಯಲ್ಲಿನ ನಮ್ಮ ವೈಫಲ್ಯಗಳನ್ನು ಜನಸಂಖ್ಯೆ ಹೆಚ್ಚಳದ ಮೇಲೆ ಕೂರಿಸಿ ಕೈತೊಳೆದುಕೊಳ್ಳುವ ಕುಂಟು ನೆಪದ ಪ್ರವೃತ್ತಿ ಇನ್ನಾದರೂ ಕೊನೆಗಾಣಬೇಕಲ್ಲವೇ? ಸಾಮಾಜಿಕ ಯೋಜನೆಗಳನ್ನು ರೂಪಿಸುವ ದೃಷ್ಟಿ, ಅದರ ಜಾರಿ ಮೊದಲಾದವುಗಳ ಮರುಮೌಲ್ಯಮಾಪನ ನಮ್ಮಲ್ಲಿ ನಡೆಯದಿದ್ದರೆ ದೇಶದ ಮಾನವ ಅಭಿವೃದ್ಧಿಯ ಕನಸು ಎಂದೂ ನನಸಾಗುವಂತೆ ಕಾಣುವುದಿಲ್ಲ.






ಪುಸ್ತಕ:
ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298