Wednesday, 18 September 2024

ಕನ್ನಡ ಸಾರಸ್ವತಲೋಕಕ್ಕೊಂದು ಹೊಸ ಓದು


ಈಗ ಲೇಖಕರಾದ, ಬ್ಲಾಗರ್ ಆದ ಮಿತ್ರ ರಾಕೇಶ ಶೆಟ್ಟರು ಹೊಸ ಓದನ್ನು ಕೊಟ್ಟಿದ್ದಾರೆ. ಕೃತಿಯ ಹೆಸರು' ಮುಚ್ಚಿಟ್ಟ ಕರ್ನಾಟಕದ ಚರಿತ್ರೆ'. ಯಾಕೆ ಇದು ಹೊಸ ಓದು ಅಂದರೆ - ಇದು ಇತಿಹಾಸದ ಹೊಸ ಓದು. ಇದುವರೆಗೆ ಶಾಲೆ ಕಲಿತ ನಾವು ಯಾರೂ ಕೇಳಿರದ ಇತಿಹಾಸದ ಸಂಗತಿಗಳು ಇರುವುದರಿಂದ ನಮ್ಮಲ್ಲಿನ ಅಂದರೆ ನಮ್ಮ ದೇಶದ ಸಮಸ್ಯೆ ಇರುವುದೇ ಇಲ್ಲಿ- ಇತಿಹಾಸದಲ್ಲಿ. ನಮ್ಮ ದೇಶಕ್ಕೆ ಆಧುನಿಕ ಇತಿಹಾಸ ಅಥವಾ ಚರಿತ್ರೆ ಕೊಟ್ಟವರು ಬ್ರಿಟಿಷರು. ಅದನ್ನು ಹೇಗೆ ನೋಡಬೇಕು, ಯಾವುದು ಇತಿಹಾಸ ಅನಿಸಿಕೊಳ್ಳುತ್ತದೆ. ಅದಕ್ಕೆ ಆಧಾರಗಳು ಯಾವುವು ಎಂಬುದನ್ನೂ ತಿಳಿಸಿದವರೂ ಅವರೇ. ಅದನ್ನೇ ನಾವು ಉರು ಹೊಡೆದು ಮುಂದುವರೆಸಿಕೊಂಡು ಶಿರಸಾವಹಿಸಿ ಪಾಲಿಸಿಕೊಂಡುಬರುತ್ತಿದ್ದೇವೆ. ಅದಕ್ಕೆ ವಿರುದ್ಧವಾದ ಅಥವಾ ಪ್ರತಿಯಾದ ಸಾಲುಗಳನ್ನು ನಾವು ಒಪ್ಪಲು ತಯಾರಿಲ್ಲ ಎಂಬಂತೆ ನಮ್ಮನ್ನು ನಮ್ಮ ಶಾಲಾ ವ್ಯವಸ್ಥೆ ಅಣಿಗೊಳಿಸಿ ಕೃತಾರ್ಥವಾಗಿದೆ.ಆದರೆ ಈಚೆಗೆ ಈ ದೃಷ್ಟಿಕೋನ ಬದಲಾಗುತ್ತಿದೆ. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಕಾರಣದಿಂದ ಸಾಮಾಜಿಕ ಜಾಲ ತಾಣಗಳ ಪ್ರಾಚುರ್ಯದಿಂದ ಜನರ ವಿವಿಧ ಬಗೆಯ ಅಭಿಪ್ರಾಯಗಳಿಗೆ ವೇದಿಕೆಗಳು ಸಾರ್ವಜನಿಕವಾಗಿ ದೊರೆಯುತ್ತಿದೆ. ಈ ಮೊದಲು ಪರಿಸ್ಥಿತಿ ಹೀಗೆ ಇರಲಿಲ್ಲ. ಸಾರ್ವಜನಿಕ ವೇದಿಕೆಯ ಜೊತೆಗೆ ಅಲ್ಲಿ ಹೇಳಬೇಕಾದ ವಿಷಯಗಳಿಗೂ ನಿರ್ದಿಷ್ಟ ದಿಕ್ಕು ದೆಸೆ, ನಿಯಂತ್ರಣ ಇರುತ್ತಿತ್ತು. ಈ ನಿಯಂತ್ರಣವನ್ನು ಕೂಡ ಯಾರು ಹೇಗೆ ಎಂಬುದೂ ನಿರ್ಧಾರವಾಗಿರುತ್ತಿತ್ತು. ಅಭಿಪ್ರಾಯ ಸ್ವಾತಂತ್ರ್ಯ ಮುಕ್ತತೆಗಳು ಮಾತಲ್ಲಿ ಮಾತ್ರ ಇತ್ತು ಅಂದರೂ ತಪ್ಪಿಲ್ಲ. ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಿಯಂತ್ರಿತ ಮಾಧ್ಯಮಗಳು ಮೂಲೆ ಸೇರಿವೆ. ಸಾಮಾಜಿಕ ಮಾಧ್ಯಮ ಮುಕ್ತತೆ ಕೊಟ್ಟಿದೆ. ಹೀಗಾಗಿ ಜನರ ಅಭಿಪ್ರಾಯಕ್ಕೆ ಒಂದಲ್ಲ ಒಂದು ವೇದಿಕೆ ಸಾರ್ವಜನಿಕವಾಗಿ ಲಭಿಸಿ ಮುಕ್ತ ಚರ್ಚೆ ಆಗುತ್ತದೆ. ಲೆಕ್ಕವಿಲ್ಲದಷ್ಟು ಜನ ತಮ್ಮ ಮಾತನ್ನು ಹೇಳಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಹಿಂದೆ ಹತ್ತಿಕ್ಕಿದ್ದ ಮಾತು, ವಿಷಯಗಳೆಲ್ಲ ಎಲ್ಲ ಕ್ಷೇತ್ರಗಳಿಂದಲೂ ಹೊರಬರುತ್ತಿವೆ. ನಮ್ಮೆಲ್ಲರನ್ನೂ ಬೇಗ ಪ್ರಭಾವಿಸುವ ಹಾಗೂ ಕಾಡುವ ಇತಿಹಾಸ ಇಂಥ ವಿಷಯಗಳಲ್ಲಿ ಒಂದು. ಬೇರೆ ಬೇರೆ ಈ ಮೊದಲು ಚರಿತ್ರೆ ಅಥವಾ ಇತಿಹಾಸದ ಬಗ್ಗೆ ಅದರ ಪಂಡಿತರು ಅನಿಸಿಕೊಂಡವರು ಅದರಲ್ಲೂ ಎಲ್ಲವನ್ನೂ ತಮ್ಮ ನಿಲುವು, ಸಿದ್ಧಾಂತಗಳ ಮೂಲಕ ಪ್ರತಿಪಾದಿಸುತ್ತಿದ್ದ ರೋಮಿಲಾಥಾಪರ್ ಅವರಂಥವರು ಮಾತ್ರ ಮಾತನಾಡಬಹುದಿತ್ತು. ಆದರೆ ಇಂದು ಇತಿಹಾಸದ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ಯಾರು ಬೇಕಾದರೂ ಮಾತನಾಡಬಹುದು. ಏಕೆಂದರೆ ಇಂದು ಯಾರು ಮಾತನಾಡುತ್ತಾರೆಂಬುದಕ್ಕಿಂತಲೂ ಏನು ಮಾತನಾಡುತ್ತಿದ್ದಾರೆಂಬುದು ಮುಖ್ಯವಾಗುತ್ತದೆ. ಆದ್ದರಿಂದಲೇ ಇತಿಹಾಸದಂಥ ವಿಷಯದ ಬಗ್ಗೆ ಇಂದು ಹೊಸ ತಲೆಮಾರಿನ ವಿಕ್ರಂ ಸಂಪತ್, ಅಭಿಜಿತ್ ಚಾವ್ಡಾರಂಥ ಹೊಸ ಯುವ ವಿದ್ವಾಂಸರು ಕಾಣಿಸಿಕೊಳ್ಳಲು ಸಾಧ್ಯವಾಗಿದೆ. ಜೊತೆಗೆ ನಮ್ಮ ಯಾವುದೇ ವಿಷಯದ ಬಗ್ಗೆ ಹತ್ತಾರು ಮೂಲಗಳಿಂದ ವಿಷಯ ಹೊರತೆಗೆದು ಚರ್ಚಿಸಬಹುದಾಗಿದೆ. ಇಲ್ಲಿ ರಾಕೇಶ್ ಶೆಟ್ಟರು ಕೂಡ ಇಂಥ ಯತ್ನವನ್ನು ಮಾಡಿದ್ದಾರೆ. ಅವರ ವೃತ್ತಿ ತಂತ್ರಜ್ಞಾನ, ಆಸಕ್ತಿ ಸಾಹಿತ್ಯ, ಇತಿಹಾಸ, ಸಂಸ್ಕೃತಿ ಇತ್ಯಾದಿ. ತಮ್ಮ ಆಸಕ್ತಿಯನ್ನು ಈ ಕೃತಿಯಲ್ಲಿ ಸಾಧಿಸಿಕೊಳ್ಳಲು ಏನೆಲ್ಲ ಶ್ರಮಪಡಬೇಕಾಯಿತು ಎಂಬುದನ್ನು ಲೇಖಕರು ಇದರಲ್ಲಿ ದಾಖಲಿಸಿದ್ದಾರೆ. ತಾವು ಯಾವ ಕಾರಣಕ್ಕೆ ಈ ಕೆಲಸಕ್ಕೆ ಕೈ ಹಾಕಬೇಕಾಯಿತು ಎಂಬುದನ್ನೂ ಹೇಳಿದ್ದಾರೆ. ಅಷ್ಟೇ ನಮ್ರವಾಗಿ ಇದು ತಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯೇ ವಿನಾ ಇದೇ ಸಂಪೂರ್ಣ ಸತ್ಯ ಎಂದಲ್ಲವೆಂದು ಹೇಳಿದ್ದಾರೆ. ಹೌದು. ನಿಸರ್ಗದಲ್ಲಿ ಎಲ್ಲವೂ ಬದಲಾಗುವಂತೆ ನಮ್ಮ ದೃಷ್ಟಿಯೂ ಬದಲಾಗುತ್ತದೆ. ಇತಿಹಾಸದ ಬಗ್ಗೆ ಇಂದು ಆಗಿರುವುದೂ ಅದೇ.ನಮಗೆ ಪಾಶ್ಚಾತ್ಯರು ಹೇಳಿಕೊಟ್ಟ ಇತಿಹಾಸ ಕಾಲಿಟ್ಟ ಕಡೆಯಲ್ಲೆಲ್ಲ ಘರ್ಷಣೆ ಆಗುತ್ತದೆ, ಶಾಂತಿ ನೆಲೆಸುವುದು ಕಷ್ಟವಾಗುತ್ತದೆ. ದಾಖಲೆಗಳು ದೊರೆತಂತೆ ಇತಿಹಾಸ ಮಾತಾಡುತ್ತಲೇ ಹೋಗುತ್ತದೆ. ಅಲ್ಲಿ ಮೌನ ಇರುವುದಿಲ್ಲ. ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಬ್ರಿಟಿಷ್ ಪೂರ್ವದಲ್ಲಿ ನಮ್ಮ ಸಮಾಜದಲ್ಲಿ ಗತ ಇತ್ತು. ಅದು ಕಾಲಾತೀತವಾಗಿದ್ದು ಅದನ್ನು ನಾವು ಜೀವಿಸುತ್ತಿದ್ದೆವು. ಅದರಲ್ಲಿ ನಂಬಿಕೆ ಮತ್ತು ಶ್ರದ್ಧೆಗಳಿದ್ದವು, ಆಚರಣೆ, ಸಂಪ್ರದಾಯಗಳನ್ನು ಅದು ಬೆಳೆಸಿತ್ತು. ಆದರೆ ಪಾಶ್ಚಾತ್ಯ ಹಿಸ್ಟರಿಯ ಚಿಂತನೆ ಹಾಗೂ ದೃಷ್ಟಿಕೋನ ಬಂದಮೇಲೆ ಎಲ್ಲವನ್ನೂ ಪ್ರಶ್ನಿಸುವ, ಶ್ರದ್ಧೆಯನ್ನು ಅಲುಗಾಡಿಸುವ ಕೆಲಸ ವ್ಯವಸ್ಥಿತವಾಗಿ ನಡೆಯತೊಡಗಿತು. ಇದರಿಂದ ಸಾಮಾಜಿಕ ಶಾಂತಿ ಮತ್ತು ನೆಮ್ಮದಿಗಳು ಇಲ್ಲವಾದವು. ಪಾಶದಚಾತ್ಯ ಹಿಸ್ಟರಿಯ ದೃಷ್ಟಿ ನಮ್ಮಲ್ಲಿ ನುಸುಳುವವರೆಗೂ ರಾಮಾಯಣ ಮತ್ತು ಮಹಾಭಾರತಗಳಂಥ ಗ್ರಂಥಗಳ ಯಾವ ವಿವರಗೂ ವಿವಾದಕ್ಕೆ ಆಸ್ಪದ ಮಾಡಿರಲಿಲ್ಲ. ಆದರೆ ಇಂದು ಅವುಗಳ ಸಣ್ಣಪುಟ್ಟ ವಿಚಾರಗಳೂ ಗದ್ದಲಕ್ಕೆ ಕಾರಣವಾಗುತ್ತಿವೆ. ಅದು ರಾಮಸೇತು, ಮಹಾಭಾರತ ಯುದ್ಧ ನಡೆದಿದ್ದು ನಿಜವಾ ಇತ್ಯಾದಿ ಆಗಿರಬೇಕಿಲ್ಲ. ಗಾಂಧಾರ, ಥುರಾ ಇವೆಲ್ಲ ಇಂದು ಎಲ್ಲಿವೆ ಕುರುಕ್ಷೇತ್ರ ಯುದ್ಧದಲ್ಲಿ ಅಷ್ಟುಜನ ಹೊಡೆದಾಡುವಷ್ಟು ಜಾಗ ಎಲ್ಲಿತ್ತು ಇತ್ಯಾದಿ ಏನು ಬೇಕಾದರೂ ಆಗಬಹುದು. ಪಾಶ್ಚಾತ್ಯ ಹಿಸ್ಟರಿ ದೃಷ್ಟಿ ನಮ್ಮ ಶ್ರದ್ಧೆ ಮತ್ತು ನಂಬಿಕೆಗಳನ್ನು ಮತ್ತೆ ಮತ್ತೆ ಘಾಸಿಗೊಳಿಸುತ್ತಿದೆ.ಅದು ಅಯೋಧ್ಯೆ ಆಗಲಿ, ಆಗ್ರಾ ಆಗಲಿ, ಯಾವುದೇ ಜಾಗವಾಗಲಿ, ವ್ಯಕ್ತಿ ಆಗಲಿ ಇವೆಲ್ಲಕ್ಕೂ ಹಿಸ್ಟರಿಯಲ್ಲಿ ಎರಡೂ ಕಡೆ ಮಾತನಾಡಬಹುದಾದ ದಾಖಲೆಗಳು ದೊರೆಯುತ್ತವೆ. ನಮ್ಮ ರಾಜ್ಯದಲ್ಲಿ ಈಚೆಗೆ ಇಂಥ ದೃಷ್ಟಿಯಿಂದ ಹೆಚ್ಚು ಚರ್ಚೆಗೆ ಒಳಗಾದ ವ್ಯಕ್ತಿ ಅಂದರೆ ಅದು ಟಿಪ್ಪು ಸುಲ್ತಾನ. ಒಂದಿಷ್ಟು ಜನ ಆ ಕಡೆ ನಿಂತರೆ ಮತ್ತಷ್ಟು ಜನ ಈ ಕಡೆ ನಿಂತು ಹೊಡೆದಾಡುತ್ತರೆ, ಇಬ್ಬರ ಬಳಿ ಇರುವ ಅಸ್ತ್ರ ಒಂದೇ. ಅದು ಹಿಸ್ಟರಿ ಕೇಳುವ ದಾಖಲೆ. ಸಾಲದ್ದಕ್ಕೆ ಆಧುನಿಕ ಹಿಸ್ಟರಿ ಒಂದು ನಿರ್ದಿಷ್ಟ ವಾದಕ್ಕೆ ಬದ್ಧವಾಗಿ ಹಿಸ್ಟರಿ ಅಂದರೆ ಇಷ್ಟೇ ಹೇಳಬೇಕು ಎಂಬುದನ್ನೂ ಕಲಿಸಿ ತಾನು ಪ್ರತಿಪಾದಿಸುವ ದಾಖಲೆ ಆಧಾರಿತ ಸತ್ಯದ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ರಾಕೇಶ್ ಶೆಟ್ಟರು ಈ ಕೃತಿಯಲ್ಲಿ ಆಧುನಿಕ ಹಿಸ್ಟರಿಯ ದೃಷ್ಟಿಯನ್ನೇ ಬಳಸಿಕೊಂಡು ಇದುವರೆಗೆ ಅದು ಏನೆಲ್ಲವನ್ನು ಹೇಳಿದೆ, ಅದರ ದೃಷ್ಟಿಯಲ್ಲಿ ಎಲ್ಲೆಲ್ಲಿ ಏನು ಇರಬೇಕಿತ್ತು ಎಂದು ಸಾಧಾರ ತೋರಿಸಿದ್ದಾರೆ. ನಿಜ. ಆಧುನಿಕ ಹಿಸ್ಟರಿ ಕೆಲವು ಸಂಗತಿಗಳನ್ನು ಉದ್ದೇಶಪೂರ್ವಕ ಪಕ್ಕಕ್ಕೆ ಸರಿಸುತ್ತದೆ. ಮೈಸೂರು ಅರಸು ಮನೆತನ ಹಾಗೂ ಟಿಪ್ಪೂ ಕುರಿತ ವಿಷಯಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಂತೆ ರಾಕೇಶ್ ಶೆಟ್ಟರು ಅದೇ ಹಿಸ್ಟರಿಯ ಆಯುಧಗಳನ್ನು ಬಳಸಿ ಪ್ರತಿ ದಾಖಲೆ ಕೊಡುತ್ತಾರೆ, ಚರ್ಚೆ ಅಥವಾ ವಿವಾದವನ್ನು ಜೀವಂತ ಇಡುತ್ತಾರೆ. ಅಲ್ಲಿಗೆ ಆಧುನಿಕ ಹಿಸ್ಟರಿಯ ಒಂದು ದೃಷ್ಟಿ ಸಾಧಿತವಾಯಿತು. ಆಧುನಿಕ ಶಾಲೆ ಅಥವಾ ಉನ್ನತ ಶಿಕ್ಷಣ ಪಡೆದ ನಮಗೆ ಯಾರಿಗೂ ಮೈಸೂರು ರಾಜಮನೆತನ ಹಾಗೂ ಟಿಪ್ಪು ಕುರಿತು ಮಾತನಾಡುವಾ ಅಥವಾ ಓದುವಾಗ ಸೀತಾದಂಡು ಎಂಬ ಹೆಸರು ಕೇಳಿದ ಅಥವಾ ಓದಿದ ನೆನಪೇ ಇರುವುದಿಲ್ಲ, ಹೌದು ಟಿಪ್ಪು ಬಗ್ಗೆ ನಮ್ಮಿ ಪ್ರತಿವರ್ಷ ಸಾಕಷ್ಟು ಚರ್ಚೆ ಆಗುತ್ತದೆ. ಆದರೆ ಇಲ್ಲಿ ಇದೇ ಮೊದಲ ಬಾರಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸೀತಾದಂಡಿನ ಪ್ರಸ್ತಾಪ ಬರುತ್ತದೆ. ಟಿಪ್ಪು ಕುರಿತು ಜನಪದರಲ್ಲಿ ಸಾಕಷ್ಟು ಸಂಗತಿಗಳು ಇವೆಯಾದರೂ ಆಧುನಿಕ ಹಿಸ್ಟರಿ ಅವನ್ನೆಲ್ಲ ಮಾನ್ಯ ಮಾಡುವುದಿಲ್ಲ. ನಮ್ಮ ಮೌಖಿಕ ಪರಂಪರೆಯಲ್ಲಿ ಅದಕ್ಕೆ ಸಾಕಷ್ಟು ಬೆಲೆ ಇದೆ. ಏಕೆಂದರೆ ಅದು ನಮ್ಮ ಗತ. ಬ್ರಿಟಿಷ್ ಪೂರ್ವದ ನಮ್ಮ ಚರಿತ್ರೆ. ಇದನ್ನು ಆಧಾರವಾಗಿಟ್ಟುಕೊಂಡು ಜನಪದ ತಜ್ಞ ಹನೂರು ಕೃಷ್ಣ ಮೂರ್ತಿಯವರ ಅಜ್ಞಾತನೊಬ್ಬನ ಆತ್ಮ ಚರಿತ್ರೆ ಎಂಬ ಕಾದಂಬರಿಯನ್ನೂ ರಚಿಸಿದ್ದಾರೆ. ಅದು ಆಧುನಿಕ ಹಿಸ್ಟರಿ ಆಧರಿಸಿದ್ದಲ್ಲ. ಮೌಖಿಕ ಪರಂಪರೆ ಆಧರಿಸಿದ್ದು. ಜನಸಾಮಾನ್ಯರಿಗೆ ಇದು ಹಿಡಿಸುತ್ತದೆ, ಆಪ್ತವಾಗುತ್ತದೆ, ಹಿಸ್ಟರಿಗೆ ಅಲ್ಲ. ಈ ಕೃತಿಯಲ್ಲಿ ರಾಕೇಶರು ದಾಖಲಿಸುವ ಬಹುತೇಕ ಸಂಗತಿಗಳು ಹಾಗೂ ತಿರುಮಲರಾವ್  ಮತ್ತು ನಾರಾಯಣರಾವ್, ಉರಿಗೌಡ, ಹುಲಿಗೌಡರಂಥ ಹೆಸರುಗಳು ನಮಗೆ ತೀರಾ ಅಪರಿಚಿತವಾದವು. ಇದುವರೆಗೆ ಒಂದೇ ಒಂದು ರಸ್ತೆಗೂ ಅವರ ಹೆಸರು ಇಡದಂತೆ ಆಧುನಿಕ ಹಿಸ್ಟರಿ ನೋಡಿಕೊಂಡಿದೆ. 

ಪ್ರಾಥಮಿಕ ಶಾಲಾ ಪಠ್ಯದಿಂದ ಹಿಡಿದು ಉನ್ನತ ಶಿಕ್ಷಣ ಪಠ್ಯದವರೆಗೆ ಯಾರದು ಯಾವುದನ್ನು ಬೋಧಿಸಬೇಕು ಎಂಬುದನ್ನು ತೀರ್ಮಾನಿಸುವ ಶಕ್ತಿಗಳು ಲಾಬಿಗಳು ಪಾಶ್ಚಾತ್ಯ ಚಿಂತನೆಯ ಪ್ರಭಾವದಲ್ಲಿ ಮುಳುಗಿಹೋಗಿವೆ. ಯಾವುದೇ ವಿಷಯದ ಪಠ್ಯ ಸಿದ್ಧಾಂತ ಬೋಧೊಸುತ್ತದೆಯೇ ವಿನಾ ಸಾಹಿತ್ಯ ಪಠ್ಯ ಸಾಹಿತ್ಯವನ್ನಾಗಲಿ, ಇತಿಹಾಸದ ಪಠ್ಯ ಚರಿತ್ರೆಯನ್ನಾಗಲೀ ಮಕ್ಕಳಿಗೆ ಕಲಿಸುವ ಬದಲು ಒಂದು ನಿರ್ದಿಷ್ಟ ಚಿಂತನೆಗೆ ಸದಸ್ಯರನ್ನು ಸೃಷ್ಟಿಸಿಕೊಡುತ್ತದೆ. ಭಾಷೆಯ ಪಠ್ಯ ಭಾಷೆಯನ್ನು ಎಲ್ಲಿಂದ ಹೇಗೆ ಕಲಿಯಬೇಕು ಅನ್ನುವುದಕ್ಕಿಂತಲೂ ಭಾಷಿಕ ರಾಜಕಾರಣ ಹಾಗೂ ಅನ್ಯ ಭಾಷೆಗಳ ವಿರುದ್ಧ ಎತ್ತಿಕಟ್ಟುತ್ತದೆ. ಹಾಗಾಗಿ ನಮ್ಮ ಸಂಪೂರ್ಣ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಏನನ್ನು ಕಲಿಸಬೇಕಿತ್ತೋ ಅದನ್ನು ಬಿಟ್ಟು ಬೇರೆಲ್ಲವನ್ನೂ ಮಾಡಲು ಕಲಿಸುತ್ತದೆ. ಹೊರತಾಗಿ ಯಾವುದಾದರೂ ವಿಷಯದ ಜ್ಞಾನ ಬೇಕು ಅನಿಸಿದರೆ ಸ್ವಂತ ಪರಿಶ್ರಮ ಅಗತ್ಯವಾಗುತ್ತದೆ. ಅಂಥ ಅಗತ್ಯವನ್ನು ಈ ಕೃತಿ ಪೂರೈಸಲು ಶ್ರಮಿಸುತ್ತದೆ. ಹಾಗೆ ನೋಡಿದರೆ, ಮೈಸೂರನ್ನು ನೆಪವಾಗಿಟ್ಟುಕೊಂಡು ರಾಕೇಶರು ಮಾಡಿದ ಇತಿಹಾಸದ ಈ ಕೆಲಸ ನಮ್ಮ ದೇಶದ ಹಳ್ಳಿಯ ಇತಿಹಾಸದ ವಿಷಯದಲ್ಲೂ ನಡೆದು ಹೊಸದಾಗಿ ಗ್ರಾಮ ಚರಿತ್ರೆಗಳನ್ನು ರೂಪಿಸುವ ದಂಡು ಸಿದ್ಧವಾಗªಬೇಕಿದೆ. ಆಗ ಮಾತ್ರ ಪಾಶ್ಚಾತ್ಯ ರೂಪಿತ ಇತಿಹಾಸದ ಬದಲಾಗಿ ನಮಗೆ ನಮ್ಮ ಗತದ ಚಿತ್ರಣ ಲಭಿಸಲು ಸಾಧ್ಯ. ಇಂಥ ಕೆಲಸ ಎಲ್ಲ ಕಡೆ ಶುರುವಾಗಲಿ. ಇದು ನೇರ ಮಾರಾಟದಲ್ಲಿ ಮಾತ್ರವಲ್ಲದೇ ಆನ್ ಲೈನ್ ನಲ್ಲೂ ಲಭ್ಯ ಅನ್ನುವುದು ಖುಷಿಯ ಸಂಗತಿ. ಬಹುತೇಕ ಪುಸ್ತಕಗಳಂತೆ ಇದನ್ನು ಸಾಧ್ಯವಾದಷ್ಟು ಶಕ್ತಿ ಬಳಸಿ ಆದಷ್ಟು ದೂರ ಎಸೆಯುವಂಥದ್ದಲ್ಲ, ಎತ್ತಿಟ್ಟುಕೊಂಡು ಮತ್ತೆ ಮತ್ತೆ ಗಮನಿಸಬೇಕಾದ್ದು. ಇದರಿಂದ ನಮ್ಮ ಸಾಂಪ್ರದಾಯಿಕ ಜ್ಞಾನಭಂಡಾರಕ್ಕೆ ಮಾನ್ಯತೆ ದೊರೆಯುತ್ತದೆ.




ಕೃತಿ ವಿವರ: ಮುಚ್ಚಿಟ್ಟ ಕರ್ನಾಟಕ ಚರಿತ್ರೆ, ಲೇ: ರಾಕೇಶ್ ಶೆಟ್ಟಿ, 

ಪರಕಾಶಕರು - ನಿಲುಮೆ ಪ್ರಕಾಶನ, ಬೆಂಗಳೂರು, ಬೆಲೆ- ರೂ-೩೧೫.

ಪುಟಗಳು-೩೭೨


 


 

 


No comments:

Post a Comment