Saturday, 28 June 2025

ಚಿಂತನೆಗೆ ಒಳಪಡಿಸುವ ಕೃತಿ


ಇದೀಗ ನಾಡಿನ ಯುವ ವಿದ್ವಾಂಸರಾದ ಪ್ರಾಧ್ಯಾಪಕ ಡಾ. ಅಜಕ್ಕಳ ಗಿರೀಶ ಭಟ್ ಅವರ ಕೃತಿಯೊಂದು ಪ್ರಕಟವಾಗಿದೆ. ಇದು ಅವರ ಪ್ರೀತಿಯ ಭಾಷೆಗೆ ಸಂಬಂಧಿಸಿದ ಕೃತಿ, ಅವರು ಮೂಲತಃ ಭಾಷಾ ಪ್ರಾಧ್ಯಾಪಕರು, ಆ ಬಗ್ಗೆ ಹೆಚ್ಚು ಚಿಂತಿಸುವವರು ಆದ್ದರಿಂದ ಅವರ ಬಹುತೇಕ ಅಲ್ಲ, ಇದುವರೆಗೆ ಸ್ವತಂತ್ರವಾಗಿ ಅವರು ಪ್ರಕಟಿಸಿದ ಸುಮಾರು ೨೭ ಕೃತಿಗಳಲ್ಲಿ ಭಾಷೆಗೆ ಸಂಬಂಧಿಸಿದ ಒಂದಾದರೂ ಗಂಭೀರ ಚರ್ಚೆ ಇದ್ದೇ ಇದೆ, ಸಾಲದ್ದಕ್ಕೆ ಆಗಾಗ ನಮ್ಮ ಸಮಾಜದಲ್ಲಿ ಭಾಷೆಗೆ ಸಂಬಂಧಿಸಿದ ವಿಚಾರ ಚರ್ಚೆಗೆ ಬಂದಾಗ ಅವರು ಸುಮ್ಮನಿರದೇ ಖಡಾಖಂಡಿತವಾದ ತಮ್ಮ ನಿಲುವನ್ನು ಬರೆಹ ರೂಪದಲ್ಲಿ ಹೇಳುತ್ತಲೇ ಇರುತ್ತಾರೆ. ಸದ್ಯ ಈ ಕೃತಿಯಲ್ಲಿನ ೧೨ ವಿವಿಧ ಶೀರ್ಷಿಕೆಗಳ ಬರೆಹಗಳು ಬರೀ ಇದೇ ಕೆಲಸ ಮಾಡಿವೆ. ನಾಡಿನ ಹಿರಿಯ ಭಾಷಾ ವಿದ್ವಾಂಸರಾದ ಪ್ರೊ. ಕೆ ವಿ ನಾರಾಯಣ ಅವರು ರಚಿಸಿದ, ಅಕಾಡೆಮಿ ಪ್ರಶಸ್ತಿ ಪಡೆದ ನುಡಿಗಳ ಅಳಿವು ಕೃತಿ ಒಂದು ನೆಪವಾಗಿದೆ. ಈ ಕೃತಿ ಪ್ರಸ್ತುತ ಕೃತಿಗೆ ಸರಿಯಾದ ಆರಂಭ ನೀಡಿದೆ, ಕಿಕ್ ಸ್ಟಾರ್ಟ್ ಅಂತಾರಲ್ಲ, ಹಾಗೆ ಆರಂಭ ನೀಡಿದೆ. ಆದರೆ ತಮ್ಮ ಈ ಕೃತಿಯ ಆಶಯ, ಉದ್ದೇಶಗಳನ್ನು ಅವರು ಶುರುವಾತಿನಲ್ಲೇ ಸ್ಪಷ್ಟಮಾಡಿದ್ದಾರೆ. ಭಾರತೀಯ ಕೃತಿ ರಚನಾ ಪರಂಪರೆಯಲ್ಲಿನ ಒಂದು ಪ್ರಮುಖ ಸಂಗತಿ ಎಂದರೆ, ಈ ಕೃತಿ ಯಾರಿಗಾಗಿ, ಏಕೆ, ಇದರ ಓದಿನಿಂದ ದೊರೆಯುವ ಲಾಭ ಏನು ಎಂಬುದನ್ನು ಸ್ಪಷ್ಟ ಮಾಡುವುದಾಗಿದೆ. ಇದನ್ನು ಇಲ್ಲಿ  ಅಜಕ್ಕಳರು ಅನುಸರಿಸಿದ್ದಾರೆ. ಈ ಕೃತಿ ಮುಖ್ಯವಾಗಿ ಮೂರು ಆಯಾಮ ಹೊಂದಿದೆ ಅಂದಿದ್ದಾರೆ, ಇದು ಹೌದು.ಒಟ್ಟಾರೆಯಾಗಿ ಭಾಷೆಯ ಬಗೆಗಿನ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವುದು, ಕೆವಿಎನ್ ಅವರ ನುಡಿಗಳ ಅಳಿವು ಕೃತಿಯನ್ನು ಅರ್ಥ ಮಾಡಿಕೊಳ್ಳುವುದು, ಅನಂತರ ಅದರಲ್ಲಿ ಲೇಖಕರು ಏನು ಹೇಳುತ್ತಿದ್ದಾರೆಂದು ತಾವು ಅರ್ಥ ಮಾಡಿಕೊಂಡಿದ್ದನ್ನು ಓದುಗರ ಮುಂದೆ ಇಡುವುದು ಹಾಗೂ ಲೇಖಕರ ಚಿಂತನೆಯನ್ನು ರಚನಾತ್ಮಕವಾಗಿ ವಿಮರ್ಶಿಸುವುದು, ಅನ್ನುತ್ತಾರೆ. ಇದರ ಜೊತೆಗೆ ನಾಲ್ಕನೆಯ ಉದ್ದೇಶವನ್ನು ನಾನು ಹೇಳಬಹುದು, ಕೃತಿ ಓದಿದ ಅನಂತರ ಈ ಬಗ್ಗೆ ಸ್ವಲ್ಪವಾದರೂ ಓದುಗರು ಚಿಂತಿಸುವಂತೆ ಮಾಡುವುದು. ಇವೆಲ್ಲವೂ ಕೃತಿಯ ಮೂಲಕ ಈಡೇರಿವೆ. ಲೇಖಕರು ಶುರುವಿನಲ್ಲೇ ಎತ್ತುವ ಒಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ, ಹೌದು, ಈ ಭಾಷೆಯನ್ನು ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾನಿಲಯ ಮಟ್ಟದವರೆಗೆ ಭಾಷೆಯನ್ನು ಪಠ್ಯವಾಗಿಸುವ ಉದ್ದೇಶವೇನು ಎಂಬ ಚರ್ಚೆಗೆ ತಮ್ಮ ಅಭಿಪ್ರಾಯವನ್ನು ಕೊಡುತ್ತಾರೆ, ಓದಿನ ಹಂತ ಬೆಳೆದಂತೆ ಭಾಷಾ ಪ್ರೌಢಿಮೆ ಮಕ್ಕಳಲ್ಲಿ ವೃದ್ಧಿಸುವಂತೆ ಮಾಡಲು ಈ ಪಠ್ಯಗಳು ಇರುತ್ತವೆ, ಆದರೆ ಪಠ್ಯಪುಸ್ತಕಗಳು ಈ ಉದ್ದೇಶವನ್ನು ಈಡೇರಿಸುತ್ತವೆಯೇ ಎಂಬ ಪ್ರಶ್ನೆಯನ್ನು ಮತ್ತೆ ಮುಂದಿಡುತ್ತಾರೆ, ಬಹುತೇಕ ಭಾಷಾ ಅಧ್ಯಾಪಕರು ತಮಗೆ ತಾವೇ ಈ ಪ್ರಶ್ನೆಯನ್ನು ಕೇಳಿಕೊಂಡಿರುವುದಿಲ್ಲ, ಮಾತ್ರವಲ್ಲ, ವಿಶ್ವವಿದ್ಯಾಲಯಗಳಲ್ಲಿ ಭಾಷಾ ಓಧನೆ ಮಾಡುವ ಬಹುತೇಕರು ಇದಕ್ಕೆ ಸಮರ್ಪಕ ಉತ್ತರ ಕೊಡಲಾರರು, ಅಲ್ರೀ ಇದು ನಮ್ಮ ಭಾಷೆ, ವಿಶ್ವವಿದ್ಯಾಲಯದಲ್ಲಿ ಇರಬೇಕಾದುದು ಕಡ್ಡಾಯ ಎಂಬ ಹೋರಾಟಗಾರರ ಮಾತನ್ನೇ ಹೇಳುತ್ತಾರೆಯೇ ವಿನಾ ಅಜಕ್ಕಳರು ಕೊಡುವ ಸ್ಪಷ್ಟ ಉತ್ತರ ಕೊಡಲಾರರು.

ಬಹತೇಕ ಲೇಖಕರು ಅದರಲ್ಲೂ ಕವಿಗಳು ಬರೆಯಲೇ ಬೇಕು ಎಂಬ ಕರಣಕ್ಕೆ ಬರೆದಂತೆ ಅಜಕ್ಕಳರು ಇಲ್ಲಿನ ಲೇಖಕರು ಬರೆದಿಲ್ಲ,ಈಗ ಎದ್ದಿರುವ ಭಾಷಿಕ ವಿಚಾರ, ಚರ್ಚೆ ಸಮಂಜಸವಲ್ಲ ಇದನ್ನು ಗಂಭೀರ, ವ್ಯಾಪಕ ಸಂವಾದಕ್ಕೆ ತೆರೆಯಬೇಕು ಎಂಬ ತೀವ್ರ ಒತ್ತಡದಲ್ಲಿ ಬರೆಯುತ್ತಾರೆ. ಅವರು ಕೊಡುವ ಅಥವಾ ತರ್ಕಿಕ ವಿಚಾರಗಳು ಸುಲಭಕ್ಕೆ ನಿರಾಕರಿಸುವಂಥವಲ್ಲ, ಆದರೆ ಗಂಭೀರವಾಗಿ ವಿಚಾರ ಮಾಡುವಂತೆ ಮಾಡುತ್ತವೆ. ಇದು ಲೇಖಕರ ಉದ್ದೇಶವನ್ನು ಈಡೇರಿಸುತ್ತವೆ.

ಜೊತೆಗೆ ಅಜಕ್ಕಳರು ಇಲ್ಲಿ ತೆರೆಯುವ ಹೊಸ ದಾರಿಯೆಂದರೆ ಭಾಷೆ ಕುರಿತು ಪಾಶ್ಚಾತ್ಯರ ದೃಷ್ಟಿಗೆ ಬದಲಾಗಿ ಭಾರತೀಯ ನೋಟವನ್ನು ಅಳವಡಿಸಿಕೊಳ್ಳಬೇಕಿದೆ ಎಂಬ ಅರಿವು ಮೂಡುವಂತೆ ಮಾಡುವುದು, ಭಾಷೆ ಯಾವುದೇ ಇರಲಿ, ಅದರ ಮುಖ್ಯ ಉದ್ದೇಶ ಸಂವಹನ, ಜೊತೆಗೆ ತಲಂತರದ ಜ್ಞಾನವನ್ನು ಹಿಡಿದಿಡುವುದು, ಅದರಲ್ಲಿ ಮೇಲೆ, ಕೆಳಗೆ, ಶ್ರೇಷ್ಠ, ಕನಿಷ್ಟ ಎಂದೆಲ್ಲ ಎಣಿಸುವುದು, ಸಂಸ್ಕೃತ ಬ್ರಾಹ್ಮಣರ ಭಾಷೆ ಎಂದು ಬಗೆದು ದೂರವಿಡುವುದು ಮೊದಲದ ನಿಲುವು ಹುಟ್ಟಿದ್ದು ಪಾಶ್ಚಾತ್ಯರಿಂದ ಇದು ನಮ್ಮ ಪರಂಪರೆಗೆ ಹೊಂದುವುದಿಲ್ಲ, ಮುಖ್ಯವಾಗಿ ಭಾಷೆಯೊಂದು ಜೀವ ವಿಕಾಸದಂತೆ ವಿಕಾಸವಾಗುತ್ತದೆ ಎಂಬ ನಿಲುವನ್ನು ಸೂಕ್ಷ್ಮವಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ, ಜೊತೆಗೆ ಭಾಷೆಯನ್ನು ಉಳಿಸಲು ಆಯಾ ಸಮುದಾಯಗಳನ್ನು ಉಳಿಸಬೇಕು, ಆರ್ಥಿಕತೆ, ಆಹಾರ ಒದಗಿಸುವ ಮೂಲಕ ರಕ್ಷಿಸಲು ಮುಂದಾಗಬೇಕು ಎಂಬಂತಹ ಚರ್ಚೆಯನ್ನು ಕೂಡ ಹಾಗಾದರೆ ಸಾಹಿತ್ಯ, ಅಕಾಡೆಮಿ ಸಮಾಜ ಕಲ್ಯಾಣ ಇಲಾಖೆಯ ಕೆಲಸಕ್ಕೆ ಮುಂದಾಗಬೇಕೇ ಎಂಬ ಪ್ರಶ್ನೆಗೆ ಓದುಗರು ಚಿಂತಿಸುವಂತೆ ಮಾಡುತ್ತಾರೆ, ಈ ಬಗ್ಗೆ ಅವರು ಕೇಳುವ ಪ್ರಶ್ನೆ ಹಾಗೂ ಕೊಡುವ ಉತ್ತರ ಸಮಂಜಸವಾಗಿದೆ. ಜನ ಕಲ್ಯಣ ಕೆಲಸ ಬೇರೆ, ಭಾಷಾ ಯೋಜನೆ ಬೇರೆ ಭಾಷಾ ಯೋಜನೆಯ ಕೆಲಸ ಜನಕ್ಕೆ ಊಟ ಕೊಡುವುದಲ್ಲ ಎಂದು ಸೂಕ್ಷ್ಮವಾಗಿ ತಿಳಿಸುತ್ತಾರೆ. ತುಳುನಾಡಲ್ಲಿ ಸಣ್ಣ ಸಂಖ್ಯೆಯಲ್ಲಿರುವ ಕೊರಗರ ಭಾಷೆ ಯೋಜನೆ ಹಾಕಿಕೊಂಡು ಪುಸ್ತಕ ಪ್ರಕಟಿಸಿದರೆ ಈ ಯೋಜನೆ ಕೊರಗರಿಗೆ ಪಡಿತರ ಕೊಟ್ಟಿಲ್ಲ ಎಂದು ಆಕ್ಷೇಪಿಸುವುದು ಹಾಸ್ಯಸ್ಪದವಾಗುತ್ತದೆ ಎಂದು ಮನಗಾಣಿಸುತ್ತಾರೆ. ಇದು ಭಾಷೆಗೆ ಸಂಬಂಧಿಸಿದ ಎಲ್ಲ ಅಯಾಮಗಳಿಗೂ ಕೈ ಹಾಕಿದೆ. ಒಟ್ಟಿನಲ್ಲಿ ಭಾಷೆಗೆ ಸಂಬಂಧಿಸಿದಂತೆ ಸ್ವಲ್ಪವಾದರೂ ಆಸಕ್ತಿ ಇದ್ದವರಲ್ಲಿ ಈ ಕೃತಿ ಹತ್ತಾರು ಪ್ರಶ್ನೆಗಳ ಜೊತೆಗೆ ತಲೆ ತುಂಬ ಚಿಂತನೆಗಳನ್ನು ಹಾಕುತ್ತದೆ. ಕೃತಿಯ ಯಶಸ್ಸು ಇರುವುದೇ ಇಲ್ಲಿ.

ಒಟ್ಟಿನಲ್ಲಿ ಈ ಕೃತಿಯ ಬಗ್ಗೆ ಅಜಕ್ಕಳರು ಹೇಳಿದ ಮೂರು ಉದ್ದೇಶಗಳ ಜೊತೆಗೆ ನಾನು ಹೇಳಿದ ನಾಲ್ಕನೆಯ ಉದ್ದೇಶವನ್ನೂ ಸೇರಿಸಿಕೊಂಡರೆ ಈ ಕೃತಿ ಸಾರ್ಥಕತೆ ಪಡೆಯುತ್ತದೆ, ಆದರೆ ನಾನು ಹೇಳಿದ ಉದ್ದೇಶವನ್ನು ಸ್ವತಃ ಲೇಖಕರು ಹೇಳಲಾಗುವುದಿಲ್ಲ, ಲೇಖಕರ ಶೈಲಿ ಹೇಗಿದೆ ಎಂದರೆ ಕತೆ ಕಾದಂಬರಿಗಳು ಅವುಗಳದೇ ಶೈಲಿಯ ಕಾರಣಕ್ಕೆ, ಸರಳ ಭಾಷೆಯಿಂದ ಓದಿಸಿಕೊಂಡರೆ, ಈ ಕೃತಿ ಸರಳ ಪ್ರಸ್ತುತತೆಯಿಂದ ಓದಿಸಿಕೊಂಡುಹೋಗುತ್ತದೆ. ವಿಷಯ ಗಂಭೀರವಾಗಿದ್ದರೂ ಕೃತಿ ಸರಳವಾಗಿದೆ ಅನ್ನುವುದು ಇದರ ಹೆಚ್ಚುಗಾರಿಕೆ. ಈಚೆಗೆ ಈ ಬಗೆಯ ವಿಷಯಗಳ ಬಗ್ಗೆ ಹೇಳುವವರೇ ಕಡಿಮೆ ಆಗಿರುವಾಗ ಅಜಕ್ಕಳರ ಪ್ರಯತ್ನ ಸ್ತುತ್ಯರ್ಹ ಅನಿಸುತ್ತದೆ. ಈ ಕೃತಿಯನ್ನು ಕೊಂಡು ಓದಿ ಅವರ ಚಿಂತನೆಯನ್ನು ಬೆಳೆಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರದು. ಅದನ್ನು ಆಗುಮಾಡೋಣ.



ಕೃತಿ ವಿವರ

ಕೃತಿ: ಭಾಷೆಯಿಲ್ಲವೆಂದಾದರೆ,

ಲೇಖಕರು: ಅಜಕ್ಕಳ ಗಿರೀಶ್ ಭಟ

ಪ್ರಕಾಶಕರು: ಚಿಂತನಬಯಲು ಪ್ರಕಾಶನ, ಬಂಟ್ವಾಳ; ಪುಟ: ೮೮

ಬೆಲೆ: ೧೦೦ ರೂ.

ಮೊದಲ ಮುದ್ರಣ - ೨೦೨೫

No comments:

Post a Comment