ಪ್ರಪಂಚದಲ್ಲಿರುವ ಪ್ರಮುಖ ಮರುಭೂಮಿಗಳಲ್ಲಿ ನಮ್ಮ ದೇಶದ ಥಾರ್ ಕೂಡ ಒಂದು, ಇದುವರೆಗೆ ಇದು ಮರುಭೂಮಿಯಾಯೇ ಇತ್ತು, ಈಗ ಇದು ಹಸಿರು ಕಾಡಾಗಿ ಬದಲಾಗುತ್ತಿದೆ, ಇದು ದೇಶದ ಹಾಗೂ ಜಗತ್ತಿನ ನಿದ್ದೆ ಕೆಡಿಸತೊಡಗಿದೆ, ಹೌದು, ಮರುಳುಗಾಡು ಹಸಿರಾದರೆ ಖುಷಿಪಡಬೇಕಲ್ಲ ಅನ್ನುವವರಿಗೆ ಇಲ್ಲೊಂದು ಪಾಠವಿದೆ, ಸಾಮಾನ್ಯವಾಗಿ ನಾವೆಲ್ಲ ಪರಿಸರವೆಂದರೆ ಹಸಿರಿನಿಂದ ಕೂಡಿದ ಕಾಡು ಮಾತ್ರ ಎಂದು ತಿಳಿಯುತ್ತೇವೆ, ತಪ್ಪು. ಪರಿಸರ ಎಂದರೆ ಅಲ್ಲಿ ಕಾಡಿನ ಜೊತೆಗೆ ಬಯಲು, ಕಲ್ಲುಬಂಡೆಗಳು ಮಣ್ಣಿನ ಗುಡ್ಡಗಳು, ಪರ್ವತಗಳ ಜೊತೆಗೆ ಮರಳುಕಾಡು ಕೂಡ ಇರಬೇಕಾಗುತ್ತದೆ. ಹಾಗಿಲ್ಲದಿದ್ದರೆ ಅದು ಪರಿಸರ ಸಮತೋಲನವನ್ನು ಕೆಡಿಸಿ ಪರಿಸ್ಥಿತಿಯನ್ನು ಅಯೋಮಯಗೊಳಿಸುತ್ತದೆ. ಈಗ ಥಾರ್ ನಿರ್ಮಿಸುತ್ತಿರುವ ಪರಿಸ್ಥಿತಿ ಇದೇ. ಇದು ಇದ್ದಕ್ಕಿದ್ದಂತೆ ಆಗಿಲ್ಲ, ಇದು ೧೯೫೦ರ ದಶಕದಿಂದ ಶುರುವಾಗುತ್ತದೆ. ಹಿಂದೊಂದು ಕಾಲದಲ್ಲಿ ದಟ್ಟ ಕಾಡಾಗಿದ್ದ ಇದು ಅನಂತರ ಮರಳುಗಾಡಾಗಿ ಈಗ ಮತ್ತೆ ಹಸಿರಾಗುತ್ತಿದೆ, ಇಂಥ ನಾಟಕೀಯ ಬದಲಾವಣೆಯಿಂದ ವಾತಾವರಣ ವಿಪರೀತವಾಗಿ ಬದಲಾಗುತ್ತಿದೆ, ಮಳೆ ಬೆಳೆಗಳ ಮೇಲೆ ಹೊಡೆತಬೀಳುತ್ತಿದೆ, ಮುಂದೊಂದು ದಿನ ಸದ್ಯದಲ್ಲಿ ಇಡೀ ದೇಶ ಬರಗಾಲಕ್ಕೆ ತುತ್ತಾಗುವ ಹಾಗೂ ಆಹಾರವಿಲ್ಲದೇ ಒದ್ದಾಡುವ ಪರಿಸ್ಥಿತಿಗೆ ದೂಡತೊಡಗಿದೆ, ಇದರ ಬಗ್ಗೆ ಈಗಾಗಲೇ ವಿಜ್ಞಾನಿಗಳು ಎಚ್ಚರಿಕೆ ಕೊಡತೊಡಗಿದ್ದಾರೆ, ಹಾಗಾದರೆ ಥಾರ್ ನಲ್ಲಿ ಆಗುತ್ತಿರುವುದೇನು?
ಥಾರ್ ಮರುಭೂಮಿಗೆ ಬಹುದೊಡ್ಡ ಇತಿಹಾಸವಿದೆ, ಇದು ವೇದಕಾಲದಿಂದ ಅಲ್ಲಲ್ಲಿ ಪ್ರಸ್ತಾಪವಾಗಿದೆ,ಯಮುನಾ ನದಿಯ ಹರಿವು ಇಲ್ಲಿತ್ತೆಂದು ಇದು ಬಹಳ ಫಲವತ್ತಾದ ಪ್ರದೇಶವಾಗಿತ್ತೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಾಚೀನ ಕಾಲದಲ್ಲಿದ್ದ ಹಕ್ರಾನದಿ ಸಮೃದ್ಧ ಪ್ರದೇಶವಾಗಿ ಇದನ್ನು ಇಟ್ಟಿತ್ತು. ಸಿಂಧೂ ನಾಗರಿಕತೆಯ ಕಾಲದಲ್ಲಿ ಈ ಪ್ರದೇಶ ಅತ್ಯಂತ ಸಂಪದ್ಭರಿತವಾಗಿತ್ತಂತೆ, ಪ್ರಕೃತಿಯಲ್ಲಿ ಭೂ ಪ್ರದೇಶಗಳು ಹೀಗೆ ಕಾಲ ಕಾಲಕ್ಕೆ ವ್ಯತ್ಯಾಸವಾಗುತ್ತಿರುತ್ತದೆ. ಆದರೆ ಒಂದೇ ಬಗೆಯಲ್ಲಿ ಯಾವ ಭೂಪ್ರದೇಶವೂ ಇರುವುದಿಲ್ಲ, ಇಂದು ಕಾಡು ಇರುವ ಜಾಗ ಕೋಟ್ಯಂತರ ವರ್ಷಗಳ ಹಿಂದೆ ಬಯಲು ಸೀಮೆ ಆಗಿದ್ದಿರಬಹುದು, ಇಂದು ಭೂಮಿಯ ಆಳದಲ್ಲಿ ನೈಸರ್ಗಿಕ ತೈಲ ಲಭಿಸುವ ಜಾಗ ಹಿಂದೆ ಸಮೃದ್ಧ ಕಾಡಿನಿಂದ ಕೂಡಿದ್ದವು ಎಂಬುದು ಎಲ್ಲ ಪ್ರದೇಶಗಳಲ್ಲೂ ಸಾಬೀತಾಗಿದೆ, ಆ ಕಾಲದ ಮರ ಗಿಡಗಳು, ಪ್ರಾಣಿ ಅವಶೇಷಗಳು ಇಂದು ಇಂಧನ ಮೂಲಗಳಾಗುತ್ತವೆ. ಹಾಗಾಗಿ ಪ್ರಕೃತಿಯಲ್ಲಿ ಯಾವ ಯಾವ ಜಾಗದಲ್ಲಿ ಏನೇನು ಇದೆಯೋ ಅವಕ್ಕೆಲ್ಲ ಪ್ರಾಮುಖ್ಯ ಇದ್ದೇ ಇದೆ, ಅವನ್ನು ಹಾಗೆಯೇ ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯ, ಬದಲಾಗಿ ಕಾಡುಗಳನ್ನು ಕಡಿದು ಬಯಲಾಗಿಸುವುದು, ಮರಳುಗಾಡನ್ನು ಕಾಡಾಗಿಸುವುದು ಮುಂತಾದ ಹಸ್ತಕ್ಷೇಪಗಳು ಪ್ರಕೃತಿಯ ದೃಷ್ಟಿಯಿಂದ ತಲೆಹರಟೆ ಮಾತ್ರವಲ್ಲ ನಮಗೆ ಅಪಾಯಕಾರಿ ಕೂಡ, ಯಾಕೆ ಎಂಬುದನ್ನು ಥಾರ್ ಮರುಭೂಮಿಯ ಬದಲಾವಣೆಯ ಮೂರ್ಖತನ ತಿಳಿಸುತ್ತದೆ.
೧೦ ಸಾವಿರದಿಂದ ೮ ಸಾವಿರ ವರ್ಷಗಳ ಹಿಂದೆ ಹಕ್ರಾ ಮತ್ತು ಸಟ್ಲೆಜ್ ನದಿಗಳ ಹರಿವು ಸರಸ್ವತಿ ನದಿ ಎಂದು ಹೆಸರಾಗಿತುಜ್ನಾಲ್ಕರಿಂದ ಐದು ಸಾವಿರ ವರ್ಷಗಳ ಹಿಂದೆ ಬದಲಾದ ಮಳೆಗಾಲ ಹಾಗೂ ಪ್ರಮಾಣಗಳಿಂದ ಈ ಪ್ರದೇಶ ಒಣಗಿ ಹಕ್ರಾ ನದಿ ಪ್ರದೇಶ ಬರಡಾಯಿತು. ಹರಪ್ಪಾ ಸಿಂಧೂ ನಾಗರಿಕತೆ ನಾಶವಾಗತೊಡಗಿತು. ೧೯೫೦ರ ದಶಕದಲ್ಲಿ ರಾಜಸ್ಥಾನ ಕಾಲುವೆ ಎಂದು ಕರೆಸಿಕೊಂಡಿದ್ದು ಅನಂತರ ಇಂದಿರಾ ಗಾಂಧಿ ಕಾಲುವೆ ಅನಿಸಿಕೊಂಡ ಕಾಲುವೆ ಈ ಮರು ಭೂಮಿ ಮೂಲಕ ಸುಮಾರು ೬೫೦ ಕಿಲೋ ಮೀಟರ್ ದೂರ ಹರಿಯುತ್ತದೆ, ಇದರ ಪರಿಣಾಮದಿಂದ ಈ ಕಾಲುವೆಯ ಅಕ್ಕಪಕ್ಕ ಕೃಷಿ ಚಟುವಟಿಕೆಗಳು ಮತ್ತೆ ಶುರುವಾಗಿ ಸ್ವಲ್ಪ ಹಸಿರು ಕಾಣಲಾರಂಭಿಸಿತು. ೧೭೦೦ರಿಂದ ೧೯೦೦ರವರೆಗೆ ಈ ಪ್ರದೇಶದಲ್ಲಿ ಸುಮಾರು ಹತ್ತು ಬಾರಿ ಭೀಕರ ಬರಗಾಲವನ್ನು ಇದು ಕಂಡಿದೆ, ನೆಹರೂ ಪ್ರಧಾನಿ ಆದಾಗ ವಿಜ್ಞಾನಿ ಕನ್ವರ್ ಸೆನ್ ಅನ್ನುವವರು ಸಿಂಧ್ ಪ್ರದೇಶದ ನದಿಗಳ ಹೆಚ್ಚುವರಿ ನೀರನ್ನು ಪಂಜಾಬಿನ ಶುಷ್ಕ ಭೂಮಿಗೆ ಹರಿಸುವ ಯೋಜನೆಯ ಸಲಹೆ ಕೊಟ್ಟರು, ಅದೇ ಇಂದಿನ ಇಂದಿರಾ ಕಾಲುವೆ, ಈ ಕಾಲುವೆ ಬಂದ ಮೇಲೆ ಜಾಲಿ ಜಾತಿಯ ಒಣಭೂಮಿಯ ಗಿಡವನ್ನು (ನಾವು ಬಳ್ಳಾರಿ ಜಾಲಿ ಅನ್ನುವ ಗಿಡ) ಈ ಪ್ರದೇಶದಲ್ಲಿ ಎಲ್ಲ ಕಡೆ ಬಿತ್ತಿ ಸುತ್ತ ಹಸಿರು ಕಾಣುವಂತೆ ಮಾಡಲಾಯಿತು, ಇದರಿಂದ ಥಾರ್ ಮರುಭೂಮಿಯ ಜಾಗ ಹಸಿರು ಆಗುವಂತೆ ಮಾಡಲಾಯಿತು, ಇದರಿಂದ ದೇಶದ ಮಳೆ ಮಾರುತಗಳು ಅಯೋಮಯ ಆಗತೊಡಗಿತು, ಇಂದಿನ ಜಾಗತಿಕ ಉಷ್ಣತೆಯ ಪರಿಣಾಮದಿಂದ ಥಾರ್ ಪ್ರದೇಶ ಮಳೆ ಮಾರುತಕ್ಕೆ ಅಪಾಯ ಒಡ್ಡಿದೆ. ಈಗ ದೇಶದೆಲ್ಲೆಡೆ ಬೇಕಾ ಬಿಟ್ಟಿ ಮಳೆ, ಕಡಿಮೆ ಅಥವಾ ಅತಿ ಮಳೆ ಆಗಿ ಅವಾಂತರ ಉಂಟುಮಾಡುತ್ತಿದೆ, ಹವಾಮಾನ ವೈಪರೀತ್ಯದಿಂದ ರಾಸ್ಥಾನದಲ್ಲಿ ಈಚೆಗೆ ವಿಪರೀತ ಮಳೆ-ಪ್ರವಾಹಗಳು ಕಾಣಿಸುತ್ತಿವೆ.
ಸಾಮಾನ್ಯವಾಗಿ ಗಾಳಿಯಲ್ಲಿನ ಒತ್ತಡ ಉಷ್ಣವಲಯದಿಂದ ಶೀತ ವಲಯದ ಕಡೆ ಒತ್ತಡ ಹೆಚ್ಚಿರುವ ಕಡೆ ಚಲಿಸಿ ಮಳೆ ತರುತ್ತವೆ. ಆದರೆ ಈಗ ಥಾರ್ ಪ್ರದೇಶದ ಹೆಚ್ಚಿನ ಒತ್ತಡ ಕಡಿಮೆ ಒತ್ತಡವುಳ್ಳ ಪ್ರದೇಶಕ್ಕೆ ಚಲಿಸಿ ಮಳೆ ತರಿಸುತ್ತದೆ, ಆದರೆ ಥಾರ್ ವಲಯದಲ್ಲಿ ಈಗ ಮಳೆ ಹೆಚ್ಚಿಸುತ್ತಿವೆ. ಮಳೆ ಬೀಳಬೇಕಾದ ಜಾಗದಲ್ಲಿ ಕಡಿಮೆ ಮಳೆಯೂ ಕಡಿಮೆ ಮಳೆ ಜಾಗದಲ್ಲಿ ಹೆಚ್ಚು ಮಳೆಯೂ ಆಗತೊಡಗಿದೆ, ಇದರ ಜೊತೆಗೆ ಮರುಭೂಮಿಯಲ್ಲಿರುತ್ತಿದ್ದ ಮಿಡತೆಗಳು ಥಾರ್ ಹಸಿರಾದ ಕಾರಣ ಅವುಗಳ ಸಂತಾನೋತ್ಪತ್ತಿ ಹೆಚ್ಚಿ ದೇಶದೆಲ್ಲೆಡೆ ಹರಡಿದರೆ ಇವು ಎಲ್ಲೆಡೆ ಆಹಾರ ಕೊರತೆ ಉಂಟುಮಾಡಲಿವೆ, ಇದು ಇನ್ನೊಂದು ಆತಂಕ. ಹಿಂದೆ ೧೯೦ರ ದಶಕದಲ್ಲಿ ಈ ಮಿಡತೆಗಳು ಆಫ್ರಿಕಾದಿಂದ ವಲಸೆ ಬಂದು ಗೋದಿ ಬತ್ತಗಳನ್ನು ಮುಕ್ಕಿ ಆತಂಕ ಹುಟ್ಟಿಸಿದ್ದವು, ಥಾರ್ ಹಸಿರಾಗಿ ಇವುಗಳ ಸಂತತಿ ಹೆಚ್ಚಿ ದೇಶದ ಆಹಾರವನ್ನು ಇವು ಬರಿದು ಮಾಡುವುದು ನಿಶ್ಚಿತ ಅನ್ನಲಾಗುತ್ತಿದೆ, ಒಟ್ಟಿನಲ್ಲಿ ಸಹಜವಾಗಿದ್ದ ಮರುಭೂಮಿಯೊಂದನ್ನು ನಮ್ಮ ಹಸ್ತಕ್ಷೇಪದಿಂದ ಬದಲಾಯಿಸಿದ ಆತಂಕ ಈಗ ನಮ್ಮನ್ನು ಚಿಂತೆಗೆ ದೂಡಿದೆ. ನೋಡಿ, ಪ್ರಾಕೃತಿಕವಾಗಿದ್ದ ವಲಯವೊಂದನ್ನು ನಮ್ಮ ಮೂಗಿನ ನೇರಕ್ಕೆ ಬದಲಿಸಿದರೆ ಏನೆಲ್ಲ ಅಪಾಯ ಮುಂದಾಗುತ್ತದೆ ಎಂಬುದಕ್ಕೆ ಥಾರ್ ಮರುಭೂಮಿಯ ನಕಾಸೆ ವದಲಾವಣೆ ಉತ್ತಮ ಉದಾಹರಣೆ. ಹಾಗಾಗಿ ಹೇಳುವುದು ನಿಸರ್ಗದಲ್ಲಿ ಎಲ್ಲವೂ ಮುಖ್ಯ, ಪ್ರಕೃತಿ ಅಂದರೆ ಕಾಡು ಮಾತ್ರವಲ್ಲ ಎಂದು. ಪ್ರಕೃತಿಯಲ್ಲಿನ ಹಸ್ತಕ್ಷೇಪ ಕಾಣಲು ನಾವು ಥಾರ್ ಗೆ ಹೋಗಬೇಕಿಲ್ಲ, ಅದು ನಮ್ಮ ಕರ್ನಾಟಕದಲ್ಲೇ ಸಿಗುತ್ತದೆ, ಕರ್ನಾಟಕದ ರಾಣೆಬೆನ್ನೂರು ಮತ್ತು ತುಮಕೂರಿನ ಮಧುಗಿರಿಯ ಮೈದನಹಳ್ಳಿಯಲ್ಲಿನ ಬಯಲು ಪ್ರದೇಶದಲ್ಲಿ ಜಿಂಕೆ ವರ್ಗದ ಕೃಷ್ಣ ಮೃಗ ಎಂಬ ಪ್ರಾಣಿ ಕಂಡುಬರುತ್ತದೆ. ಸಾಮಾನ್ಯವಾಗಿ ಇವು ಕಾಡು ಇರುವಲ್ಲಿರುವುದಿಲ್ಲ, ಬಯಲು ಪ್ರದೇಶದ ಹುಲ್ಲು ಇರುವ ಕುರುಚಲು ಗಿಡಗಳಿರುವ ಜಾಗದಲ್ಲಿರುತ್ತವೆ, ಹುಲ್ಲು ಮೇಯುತ್ತ ಆಗಾಗ ತಲೆ ಎತ್ತಿ ತಮಗೆ ಅಪಾಯ ಇದೆಯಾ ಎಂದು ನೋಡುತ್ತ ಇರುವುದು ಇವುಗಳ ಜಾಯಮಾನ. ಇವು ಇರುವಲ್ಲಿ ಅಪರೂಪದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಎಂಬ ಪಕ್ಷಿ ಇರುತ್ತದೆ, ಈ ಹಕ್ಕಿಗೂ ಕೃಷ್ಣ ಮೃಗಕ್ಕೂ ನಂಟು, ಆದರೆ ಬಯಲನ್ನು ಕಾಡಾಗಿಸುವ ಹಂಬಲದಿಂದ ಸರ್ಕಾರ ಯೋಜನೆ ಹಾಕಿಕೊಂಡು ರಾಣೆಬೆನ್ನೂರಿನ ಇವುಗಳ ಜಾಗದಲ್ಲಿ ಕಾಡು ಬೆಳೆಸಿತು. ಪರಿಣಾಮ ಕೃಷ್ಣ ಮೃಗಗಳು ಜಾಗ ಖಾಲಿ ಮಾಡಿದವು, ಜೊತೆಗೆ ಗ್ರೇಟ್ ಇಂಡಿಯನ್ ಬಸ್ಟರ್ಡ್ ಕೂಡ ನಾಪತ್ತೆ ಆಯಿತು. ಎಲ್ಲ ಕಡೆ ಕಾಡು ಇರಬೇಕೆಂಬ ಹುಚ್ಚುತನದ ಪರಿಣಾಮ ಇದು. ಥಾರ್ ಕೂಡ ಈ ಪಾಠವನ್ನು ಇನ್ನೊಂದು ರೀತಿಯಲ್ಲಿ ಹೇಳುತ್ತಿದೆ. ಪ್ರಕೃತಿಗೆ ಅನುಗುಣವಾಗಿ ಮನುಷ್ಯ ಬಿಟ್ಟು ತನ್ನ ಅತಿ ಬುದ್ಧಿವಂತಿಕೆಯನ್ನು ಅಲ್ಲಿ ಕಾಣಿಸಲು ಮುಂದಾದರೆ ಏನಾಗುತ್ತದೆ ಎಂಬುದಕ್ಕೆ ಇವು ಉತ್ತಮ ನಿದರ್ಶನಗಳಾಗಿವೆ, ಸದ್ಯ ತುಮಕೂರಿನ ಮಧುಗಿಯ ಮೈದನಹಳ್ಳಿಯಲ್ಲೂ ಕೃಷ್ಣಮೃಗಗಳಿದ್ದು ಅವು ಕ್ಷೇಮವಾಗಿವೆ, ಇಲ್ಲಿಯೂ ಕಾಡು ಬೆಳೆಸುವ ಹುಚ್ಚುತನಕ್ಕಿಳಿದರೆ ಕೃಷ್ಣಮೃಗಗಳನ್ನು ನಮ್ಮ ರಾಜ್ಯ ಕಳೆದುಕೊಳ್ಳುತ್ತದೆ, ಜೊತೆಗೆ ಅಪರೂಪದ ಹಕ್ಕಿಯನ್ನೂ.

No comments:
Post a Comment