Friday, 27 June 2025

ಜಪಾನ್ ನಲ್ಲಿ ಅಕ್ಕಿ ಕೊರತೆ - ಕಲಿಯಬೇಕಾದ ಪಾಠ


ಸದ್ಯ ಜಗತ್ತಿನಲ್ಲಿ ಜಪಾನ್ ನಲ್ಲಿ ಕಾಣಿಸಿರುವ ಅಕ್ಕಿಯ ಕೊರತೆಯ ವಿಷಯ ಚರ್ಚೆಗೆ ಬಂದಿದೆ, ಇದು ಕೇವಲ ಜಪಾನಿನ ಸಮಸ್ಯೆ ಮಾತ್ರವಲ್ಲದ ಕಾರಣ ನಮಗೆಲ್ಲ ಇದು ಪಾಠವೊಂದನ್ನು ಹೇಳುತ್ತಿದೆ, ಜಪಾನ್ ಮತ್ತು ಭಾರತಗಳ ಬಾಂಧವ್ಯ ಸಾವಿರಾರು ವರ್ಷಗಳಷ್ಟು ಹಳೆಯದು, ಆದರೆ ಆಗ ಇದ್ದುದು ಆಧ್ಯಾತ್ಮಿಕ ಹಾಗೂ ಸಂಪ್ರದಾಯದ ಕಾರಣಕ್ಕೆ ಇದ್ದ ಸಂಬಂಧ ೧೯೫೦ ರ ದಶಕದ ಅನಂತರ ಆಧುನಿಕ ವ್ಯಾಪಾರ ವ್ಯವಹಾರಗಳಿಗೆ ಆಧುನಿಕ ರಾಜತಾಂತ್ರಿಕ ವ್ಯವಸ್ಥೆಗೆ ತೆರೆದುಕೊಂಡಿತು. ಅನೇಕ ಕಾರಣಗಳಿಗೆ ಭಾರತಕ್ಕೂ ಜಪಾನ್ ಗೂ ಸಾಂಪ್ರದಾಯಿಕ ಹಾಗೂ ಆಚರಣಾತ್ಮಕ ಸಹ ಸಂಬಂಧಗಳಿವೆ. ಭಾರತದಲ್ಲೂ ಜಪಾನ್ ನಲ್ಲೂ ಅಕ್ಕಿ ಕೇವಲ ಆಹಾರಧಾನ್ಯ ಮಾತ್ರವಲ್ಲ, ಅದಕ್ಕೆ ಧಾರ್ಮಿಕ ಮಹತ್ವವಿದೆ, ನಂಬಿಕೆಗಳಿವೆ. ಹಾಗಾಗಿ ಆ ದೇಶ ಅಕ್ಕಿಗೆ ಇನ್ನಿಲ್ಲದ ಪ್ರಾಮುಖ್ಯವನ್ನು ಕೊಡುತ್ತದೆ, ಹಾಗಂತ ಅಲ್ಲಿ ಬತ್ತ ಮಾತ್ರವಲ್ಲದೇ ಗೋದಿ, ಕಬ್ಬು, ಬಾರ್ಲಿ, ಜೋಳಗಳನ್ನು ಹತ್ತಾರು ಬಗೆಯ ತರಕಾರಿ, ಬೇಳೆಕಾಳುಗಳನ್ನು ಬೆಳೆಯುತ್ತಾರೆ, ಆದರೆ ಅಕ್ಕಿಗೆ ಅಲ್ಲಿ ಸಾಂಪ್ರದಾಯಿಕ ಪ್ರಾಧಾನ್ಯತೆ ಇದೆ. ಆದ್ದರಿಂದ ಅದು ಅಲ್ಲಿ ನಿತ್ಯದ ಪ್ರಧಾನ ಆಹಾರ ಪದಾರ್ಥವೂ ಆಗಿದೆ, ಈಗ ಜಪಾನ್ ನಲ್ಲಿ ಅಕ್ಕಿಯ ತೀವ್ರಕೊರತೆ ಕಾಣಿಸಿದೆ, ಈ ಸಮಸ್ಯೆಯ ಸುಳಿವು ೨೦೨೩ರಿಂದಲೇ ಕಾಣತೊಡಗಿತ್ತಾದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಆಗಿನಿಂದಲೂ ಅಲ್ಲಿ ಅಕ್ಕಿಯ ಬೆಲೆ ಒಂದೇ ಸಮನೆ ಏರತೊಡಗಿತ್ತು, ಆದರೆ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಶೇಖರಿಸಿಡುವ ಕೆಲಸ ಮಾಡಿತೇ ವಿನಾ ಉತ್ಪನ್ನ ಹೆಚ್ಚಿಸುವ ಕ್ರಮಕ್ಕೆ ಮುಂದಾಗಲಿಲ್ಲ, ಕೃಷಿ ವಿಚಾರದಲ್ಲಿ ಉತ್ಪನ್ನದ ದೃಷ್ಟಿಯಿಂದ ಭಾರತ, ಅಮೆರಿಕ, ಚೀನಾ ಮತ್ತು ಬ್ರೆಜಿಲ್ ದೇಶಗಳು ಮುಂದೆ ಇದ್ದರೆ ತಾಂತ್ರಿಕತೆಯ ದೃಷ್ಟಿಯಿಂದ ಅಸ್ರೇಲ್, ಜಪಾನ್ ಗಳು ತುಂಬ ಮುಂದಿವೆ, ಜಪಾನ್ ನಲ್ಲಿ ಕೃಷಿಯೋಗ್ಯ ಭೂಮಿ ಪ್ರಮಾಣ ಕಡಿಮೆಯಾದ ಕಾರಣ ಅಲ್ಲಿ ಗಾಳಿಯಲ್ಲಿ ಹಾಗೂ ಕುಂಡಗಳಲ್ಲಿ ನೀರಲ್ಲಿ ಆಹಾರ ಬೆಳೆ ತೆಗೆಯುವ ಏರೋಪೋನಿಕ್, ಹೈಡ್ರೋಪೋನಿಕ್ ಕೃಷಿಗಳು ಇವೆ, ಸಾಲದ್ದಕ್ಕೆ ಅಲ್ಲಿ ಬೊನ್ಸಾಯ್ ಹಾಗೂ ನಿವಾಕಿ ಎಂಬ ಸಸ್ಯಗಳನ್ನು ಕಿರಿದಾಗಿ ಬೆಳೆಸುವ ಸಂಪ್ರದಾಯಿಕ ಕಲೆ ಇದೆ, ನೂರಾರು ವರ್ಷಗಳ ಮರ ಕುಂಡದಲ್ಲೇ ಇಷ್ಟುದ್ದ ಇರುವಂತೆ ಈ ಕಲೆಯಲ್ಲಿ ಮಾಡಲಾಗುತ್ತದೆ, ಇಂಥ ಗಿಡಮರಗಳ ಕಲೆ ಅವರಿಗೆ ಸಿದ್ಧಿಸಿದೆ. ಅದರೆ ಬತ್ತದವಿಷಯದಲ್ಲಿ ಅವರು ಸಾಂಪ್ರದಾಯಿಕ ಬೆಳೆಯ ರೀತಿಯನ್ನೇ ನೆಚ್ಚಿಕೊಂಡಿದ್ದಾರೆ, ಈ ಕೃಷಿಯಲ್ಲಿ ಅವರಿಗೆ ಹೊಡೆತವಾದುದು ಕೃಷಿಯ ಚಟುವಟಿಕೆಯಲ್ಲಿ ಕೇವಲ ವೃದ್ಧರು ಮಾತ್ರ ಇರುವಂತಾದುದು, ಯುವಕರೆಲ್ಲ ನಗರದ ಜೀವನ ಹಾಗೂ ಪ್ರವಾಸೋದ್ಯಮದತ್ತ ಆಕರ್ಷಿತವಾದುದು ಕೃಷಿಯಲ್ಲಿ ಯಾವುದೇ ಲಾಭ ಕಾಣದ ರೈತರು ಅದರಿಂದ ವಿಮುಖರಾದುದು ಇನ್ನೊಂದು ಪ್ರಮುಖ ಕಾರಣ. ನಮ್ಮ ದೇಶ ಕೂಡ ಕೃಷಿ ವಿಚಾರದಲ್ಲಿ ಇದೇ ಮಾರ್ಗದಲ್ಲಿ ಸಾಗುತ್ತಿದೆ ಎಂಬುದನ್ನು ಗಮನಿಸಬೇಕು. ಸದ್ಯ ಅಲ್ಲಿ ಐದು ಕೆಜಿಯ ಅಕ್ಕಿ ಚೀಲಕ್ಕೆ ೪ ಸಾವಿರ ಜಪಾನಿ ಯೆನ್ ದರವಿದೆ, ಇದು ಇಳಿಕೆ ಕಂಡ ದರವೆನ್ನಲಾಗಿದೆ. ಒಂದು ಯೆನ್ ಅಂದರೆ ನಮ್ಮ ಹಣದಲ್ಲಿ ೬೦ ಪೈಸೆ. ಜಪಾನ್ ನಲ್ಲಿ ಹೆಚ್ಚಿದ ಪ್ರವಾಸೋದ್ಯಮ ದಂಧೆ ಕೂಡ ಅಕ್ಕಿಯ ಕೊರತೆಗೆ ದೊಡ್ಡ ಕಾರಣವೆನ್ನಲಾಗಿದೆ. ಅಲ್ಲಿನ ಹೊಟೇಲ್ ಉದ್ಯಮದ ಬೇಡಿಕೆಯನ್ನು ಪೂರೈಸಲಾಗದ ಜೊತೆಗೆ ಕಡಿಮೆ ಉತ್ಪದನೆಗಳು ಸೇರಿ ಇಂದಿನ ಸಮಸ್ಯೆ ಎದುರಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಅಕ್ಕಿ ರಫ್ತು ಮಾಡುವ ಭಾರತವನ್ನು ಜಪಾನ್ ಈಗ ನೆಚ್ಚಿದೆ. ಆದರೆ ಭಾರತ ಸೋನಾ ಮಸೂರಿ ಹಾಗೂ ಬಾಸುಮತಿ ಬದಲು ಅಲ್ಲಿಗೆ ಈಶಾನ್ಯ ರಾಜ್ಯದಲ್ಲಿ ಬೆಳೆಯುವ ಹೆಚ್ಚು ಅಂಟಿನ ಗುಣವುಳ್ಳ ಜೋಹಾ ಮತ್ತು ಚೋಕುವಾ ಅಕ್ಕಿಗಳನ್ನು ಕಳಿಸುವ ಯೋಚನೆ ಮಾಡುತ್ತಿದೆ. ಜಪಾನ್ ನಲ್ಲಿ ಸರಿಯಾಗಿ ಮಳೆ ಆಗದಿದ್ದುದು ಜೊತೆಗೆ ವಿಪರೀತ ಚಂಡಮಾರುತದಿಂದ ಬೆಳೆದ ಬೆಳೆ ಹಾಳಾದುದು, ಮತ್ತೆ ಮತ್ತೆ ಸಂಭವಿಸಿದ ಭೂಕಂಪ ಮೊದಲಾದ ನೈಸರ್ಗಿಕ ವಿಕೋಪಗಳು ದೊಡ್ಡ ಹೊಡೆತ ಕೊಟ್ಟವು.

ನಮ್ಮ ದೇಶಕ್ಕೆ ಇದು ಖಂಡಿತ ಒಂದು ಪಾಠವನ್ನು ಹೇಳುತ್ತಿದೆ, ನಮ್ಮ ದೇಶದ ರಾಜಕಾರಣದ ಅಧಿಕಾರ ಹಿಡಿಯಲು ಮತಗಳನ್ನು ಹೆಚ್ಚು ಪಡೆಯುವುದು ಮಾತ್ರ ಲೆಕ್ಕ. ಅದನ್ನು ಹೇಗಾದರೂ ಪಡೆಯಲಿ, ಈ ದೃಷ್ಟಿಯಿಂದ ಹೆಚ್ಚು ಮತ ಗಳಿಸಲು ರಾಜಕೀಯ ಪಕ್ಷಗಳು ಜನರಿಗೆ ವಿವಿಧ ಆಮಿಷಗಳನ್ನು ಒಡ್ಡಿ ಮತ ಪಡೆಯುವ ಸರಳ ವಿಧಾನ ಹುಡುಕಿಕೊಂಡಿದ್ದಾರೆ ಇಂಥ ಆಮಿಷಗಳಲ್ಲಿ ಉಚಿತ ಕೊಡುಗೆಗಳೂ ಸೇರಿವೆ, ಇಂಥ ಉಚಿತಗಳ ಆಸೆಗೆ ಪಕ್ಕಾಗುವ ಜನತೆ ಅಂಥ ಪಕ್ಷಗಳಿಗೆ ಮತ ಹಾಕಿ ಅಧಿಕಾರಕ್ಕೆ ತರುತ್ತಾರೆ, ಆಗ ಎಲ್ಲವೂ ಉಚಿತವಾಗಿ ಸಿಗುವ ಕಾರಣ ಜನತೆ ಕೌಶಲಗಳನ್ನು ಕಲಿಯುವುದಿಲ್ಲ, ಇರುವ ಕೌಶಲಗಳನ್ನೂ ಮರೆಯುತ್ತಾರೆ, ಇದರ ಪರಿಣಾಮವಾಗಿ ಈಗಾಗಲೇ ಅನೇಕ ರಾಜ್ಯಗಳಲ್ಲಿ ಗ್ರಾಮಗಳಲ್ಲಿ ಯಾವ ಕೆಲಸವನ್ನೂ ಅದರಲ್ಲೂ ಕೃಷಿ ಕೆಲಸಗಳನ್ನು ಮಾಡುವ ಕಾರ್ಮಿಕರಿಲ್ಲದೇ ಕೃಷಿ ಚಟುವಟಿಕೆಗಳು ಸ್ತಬ್ದವಾಗಿವೆ, ಹೀಗಾದಾಗ ತಾವು ಕೊಟ್ಟ ಉಚಿತಗಳ ಆಶ್ವಾಸನೆ ಈಡೇರಿಸಲು ಸರ್ಕಾರಗಳು ಬೇರೆ ಕಡೆಯಿಂದ ಸಾಲ ಮಾಡಿ ಆಹಾರ ಧಾನ್ಯ ಒದಗಿಸಬೇಕಾಗುತ್ತದೆ, ಬಹುತೇಕ ಕಡೆ ಈಗ ಹೀಗೆಯೇ ಆಗುತ್ತಿದೆ. ವೃಥಾ ಕೃಷಿ ಭೂಮಿ ಹಾಳು ಬೀಳುವುದರ ಜೊತೆಗೆ ಸರ್ಕಾರ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ, ಇವುಗಳ ಮಧ್ಯೆ ನೈಸರ್ಗಿಕ ಮಳೆ ಬರಗಳ ಹೊಡೆತ ಬಿದ್ದರೆ ನಾಶವಾಗಲು ಸಮಯವೇ ಬೇಡ. ಜಪಾನ್ ನಲ್ಲಿ ಉಚಿತಗಳು ಇಲ್ಲದಿದ್ದರೂ ಕೃಷಿಗೆ ಆದ್ಯತೆ ಇಲ್ಲದ ಕಾರಣಕ್ಕೆ ಹಾಗೂ ನೈಸರ್ಗಿಕ ಹೊಡೆತಗಳ ಕಾರಣದಿಂದ ಪರಿಸ್ಥಿತಿ ಹದಗೆಟ್ಟು ಹೋಯಿತು. ೨೦೨೨ರಲ್ಲಿ ೭.೫ ಮೆಟ್ರಿಕ್ ಮಿಲಿಯನ್ ಟನ್ ಅಕ್ಕಿ ಉತ್ಪಾದಿಸಿದ್ದ ಜಪಾನ್ ೨೦೨೫ರಲ್ಲಿ ಇದರ ಉತ್ಪಾದನೆಯಲ್ಲಿ ತೀವ್ರ ಕುಸಿತ ಕಂಡಿತು, ಜೊತೆ ಸೇರಿದ ಪ್ರವಾಸಿಗರ ಬೇಡಿಕೆ ಪೂರೈಕೆ, ಚಂಡಮಾರುತ, ಭೂಕಂಪಗಳು ಭಾರೀ ಹೊಡೆತ ನೀಡಿದವು. ನಮ್ಮ ದೇಶದಲ್ಲೂ ಆಹಾರ ಧಾನ್ಯಗಳ ಉತ್ಪಾದನೆ ಕುಸಿತೊಡಗಿದೆ, ಇದಕ್ಕೆ ಕೃಷಿಯಲ್ಲಿ ಆಗುವ ನಷ್ಟದ ಜೊತೆಗೆ ಯಾವುದೇ ಲಾಭ ಇಲ್ಲದಿರುವುದು, ಯುವ ಜನತೆ ಕೃಷಿಗೆ ಆಸಕ್ತಿ ತೋರಿಸದಿರುವುದು ಕೂಡ ಸೇರಿವೆ, ಜಪಾನ್ ಸಮಸ್ಯೆಯಲ್ಲಿ ಇವೂ ಸೇರಿದ್ದವು ಎಂಬುದನ್ನು ಗಮನಿಸಬೇಕು.ನಮ್ಮಲ್ಲಿ ಸರಿಯಾದ ವಿತರಣಾ ವ್ಯವಸ್ಥೆ ಕೂಡ ಇಲ್ಲ ಎಂಬುದನ್ನು ಗಮನಿಸಿದರೆ ಈ ಬಗೆಯ ಸಮಸ್ಯೆ ಉಂಟಾದರೆ ನಮಗೆ ಬೇಗನೇ ಹಾನಿಯಾಗುವುದು ನಿಶ್ಚಿತ. ಈ ಬಗ್ಗೆ ನಾವು ಸದಾ ಎಚ್ಚರದಿಂದ ಇದ್ದು ಇಂಥ ಪರಿಸ್ಥಿತಿ ಎದುರಾದರೆ ಎದುರಿಸುವ ತಯಾರಿಯನ್ನು ಈಗಿಂದಲೇ ಮಾಡಿಕೊಳ್ಳುವುದು ಉಚಿತ.

ಅಡುಗೆ ಆಗಿದ್ದರೂ ಊಟ ಮಾಡಲು ಸಮಯ ಸಿಕ್ಕಿಲ್ಲವೆಂದರೂ ಅಡುಗೆಯೇ ಆಗದಿದ್ದುದರಿಂದ ಊಟ ಆಗಿಲ್ಲವೆಂದರೂ ಆಗುವುದು ಹಸಿವೆಯೇ. ಕಾರಣ ಏನೇ ಇರಲಿ, ಪರಿಣಾಮವೊಂದೇ. ಹೀಗೆ ನಮ್ಮ ದೇಶದ ಪರಿಸ್ಥಿತಿ  ಬೇರೆ ಅಂದರೂ ಪರಿಣಾಮ ಹೀಗೆಯೇ ಆಗಬಹುದು ಅನಿಸದೇ ಇರದು. ಹಾಗಾಗಿ ನಾವು ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಹಾಗೆ ನಡಿದರೆ ಇದು ಇಡೀ ಜಗತ್ತಿಗೆ ಗಂಟೆ ಬಾರಿಸಿದೆ. ಏಕೆಂದರೆ ಇಡೀ ಜಗತ್ತಿನಲ್ಲಿ ಕೃಷಿಗೆ ಕೊಡುತ್ತಿರುವ ಆದ್ಯತೆ ನಗಣ್ಯ, ಅಲ್ಲದೇ ನಮ್ಮ ಜೀವನ ಸೈಲಿ ಕೂಡ ಚಿಂತೆಗೆ ದೂಡುತ್ತಿದೆ, ಪ್ರಾಕೃತಿಕ ವಿಕೋಪಗಳು ಎಲ್ಲ ಕಡೆ ಸಾಮಾನ್ಯವಾಗಿವೆ, ಇಂಥ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಿಗಾಗಿ ಆದಿಮಾನವನಂತೆ ಆಹಾರ ಸಂಗ್ರಹಿಸಿಡಬೇಕಾದ ಸಂದರ್ಭ ಕಾಣಿಸುತ್ತಿದೆ, ಆದಿ ಮಾನವ ಗುಹೆಯಲ್ಲಿಟ್ಟರೆ ನಾವು ಆಧುನಿಕ ಗೋಡೌನ್‌ಗಳಲ್ಲಿಡಬೇಕಿದೆ ಅಷ್ಟೇ.

No comments:

Post a Comment