Sunday, 22 June 2025

ಉತ್ತಮ ಪ್ರಯತ್ನ


ಇದೀಗ ಮಾರುಕಟ್ಟೆಗೆ ಮಧುರಾ ತಮನ್ ಕರ್ ಅವರ ಕರ್ನಾಟಕದ ಚಿತ್ಪಾವನರ ಹಬ್ಬಗಳು ಎಂಬ ಕೃತಿ ಬಂದಿದೆ, ಅನೇಕ ಕಾರಣಗಳಿಗೆ ಇದು ಮುಖ್ಯವೆನಿಸುತ್ತದೆ. ಹಿಂದೆ ವಸಾಹತು ಕಾಲದಲ್ಲಿ ಕ್ರಿಶ್ಚಿಯನ್ ಮಿಶನರಿಗಳು ಭಾರತವನ್ನು ಅರ್ಥಮಾಡಿಕೊಳ್ಳುವ ಅನಿವಾರ್ಯತೆಯಲ್ಲಿ ಇಲ್ಲಿನ ರೀತಿ ನೀತಿ ಸಾಮಾಜಿಕ ವರ್ತನೆಗಳನ್ನು ತಿಳಿದುಕೊಳ್ಳಲು, ಆ ಮೂಲಕ ತಮ್ಮ ಆಡಳಿತಕ್ಕೆ ಅನುಕೂಲ ಮಾಡಿಕೊಳ್ಳಲು ಇಲ್ಲಿನ ಹಬ್ಬ ಜಾತ್ರೆಗಳ ಅಧ್ಯಯನ ಮಾಡಿದ್ದರು, ಮತಪ್ರಚಾರಕನಾಗಿ ಬಂದ ಅಬೆ ಡುಬೋಯಿಯ ಹಿಂದೂ ಮ್ಯಾನರ್ಸ್ ಕಸ್ಟಮ್ಸ್ ಆಂಡ್ ಸೆರಮನೀಸ್ ಎಂಬ ಕೃತಿ  ಇದಕ್ಕೊಂದು ನಿದರ್ಶನ.  ಆದರೆ ಇಲ್ಲೆಲ್ಲ ಪರಕೀಯಯರು ಪರಕೀಯರಾಗಿ ಇವನ್ನೆಲ್ಲ ನೋಡುವಾಗ ಅವರಿಗೆ ಅನಿಸಿದ್ದನ್ನು ಅವರ ಅನುಭವದ ಹಿನ್ನೆಲೆಯಲ್ಲಿ ಸಂಗ್ರಹಿಸಿ ದಾಖಲಿಸುವಾಗ ಸಾಕಷ್ಟು ಅಪಚಾರಗಳಾಗಿವೆ, ಆದರೆ ಶತಮಾನಗಳ ಹಿಂದೆ ನಮ್ಮ ಆಚಾರ ವಿಚಾರಗಳ ಮಾಹಿತಿ ಸಿಗುತ್ತದೆ ಎಂಬುದಷ್ಟೇ ಇವುಗಳಿಗೆ ಮಹತ್ವ ಬರಲು ಕಾರಣ, ನಾವು ಇಂದು ಇವುಗಳ ಮಾಹಿತಿಯನ್ನಷ್ಟೇ ಪಡೆದು ಅವರ ವಯಕ್ತಿಕ ವಿಶ್ಲೇಷಣೆಯನ್ನು ಬಿಡಬೇಕು, ಇಲ್ಲವಾದಲ್ಲಿ ಪಾಶ್ಚಾತ್ಯರ ವಿವರಣೆಯೇ ನಿಜವಾಗುತ್ತದೆ, ಎಷ್ಟೋ ವಿಷಯಗಳಲ್ಲಿ ಹೀಗಾಗಿದೆ, ಆದರೆ ಭಾರತದಂಥ ವೈವುಧ್ಯಮಯ ಸಮಾಜ, ಸಂಪ್ರದಾಯಗಳಿರು ದೇಶದಲ್ಲಿ ಸಮುದಾಯದ ಸದಸ್ಯನೇ ತಮ್ಮ ಬಗ್ಗೆ ದಾಖಲಿಸುವುದು ಹೆಚ್ಚು ವಿಶ್ವಾಸಾರ್ಹವಾಗುತ್ತದೆ, ಈ ಕೃತಿಯ ಮೊದಲ ಗುಣ ಇದುದೇಶದಪ್ರಮುಖ ಸಮುದಾಯಗಳಲ್ಲೊಂದಾದ ಬ್ರಾಹ್ಮಣರಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಉಪ ಪಂಗಡಗಳಿವೆ ಎಂದು ಅಂದಾಜಿಸಲಾಗಿದೆ, ಇವುಗಳಲ್ಲಿ ಒಂದು ಚಿತ್ಪಾವನರು, ಮೂಲತಃ ಮಹಾರಾಷ್ಟ್ರದವರಾದ ಇವರು ದೇಶದ ಎಲ್ಲ ಕಡೆ ಉದ್ಯೋಗ, ಜೀವನೋಪಾಯಕ್ಕಾಗಿ ಶತಮಾನಗಳ ಹಿಂದೆಯೇ ಹರಡಿ ಹೋಗಿದ್ದಾರೆ, ಹೀಗೆ ಇವರು ಕರ್ನಾಟಕಕ್ಕೆ ೩-೪ನೆಯ ಶತಮಾನದಲ್ಲಿ ಆ ಕಾಲದ ರಾಜರ ಆಹ್ವಾನದ ಮೇರೆಗೆ ಬಂದರೆಂದು ತಿಳಿಯುತ್ತದೆ, ಹಾಗೆ ಬಂದವರು ಮೊದಲು ಶಿವಮೊಗ್ಗ ಬಳಿಯ ತಾಳಗುಂದದಲ್ಲಿ ನೆಲೆ ನಿಂತರು, ಕ್ರಮೇಣ ಬೇರೆಡೆ ಹರಡಿಕೊಂಡರು, ಮಾತ್ರವಲ್ಲ ಆಯಾ ಪ್ರದೇಶಗಳ ಜನ ಸಮುದಾಯಗಳ ಜೊತೆ ಒಂದಾದರು, ಇಷ್ಟಾದರೂ ತಮ್ಮ ಮೂಲತನವನ್ನು ಕಾದಿಟ್ಟುಕೊಂಡುಬಂದರು, ಇವುಗಳಲ್ಲಿ ಅವರ ಆಚಾರ ವಿಚಾರ, ಹಾರ, ಸಂಪ್ರದಾಯಗಳು ಉಳಿದಿರುವುದನ್ನು ನೋಡಬಹುದು, ಆದರೆ ಇವರು ಸ್ಥಳೀಯ ಆಹಾರ ಪದ್ಧತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ, ಇವರು ಸಸ್ಯಾಹಾರಿಗಳು,ಹೀಗಾಗಿ ಉತ್ತಮ ಸಸ್ಯಾಹಾರ ಬಗೆಗಳನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ, ಉದಾಹರಣೆಗೆ ಮಲೆನಾಡು, ಕರಾವಳಿ ಭಾಗದ ಹವ್ಯಕರಲ್ಲಿ ಪ್ರಚಲಿತವಾಗಿರುವ ತಂಬುಳಿ, ಮಜ್ಜಿಗೆ ನೆಂಚಿಕೆಗಳನ್ನೂ ಅಳವಡಿಸಿಕೊಂಡಿದ್ದಾರೆ, ಇಂಥ ಸಣ್ಣಪುಟ್ಟ ವಿಚಾರಗಳ ಕಡೆಗೆ ಮಧುರಾ ಅವರು ಓದುಗರ ಗಮನ ಸೆಳೆಯುತ್ತಾರೆ, ಅಲ್ಲದೇ ವಾರ್ಷಿಕ ಆವರ್ತನದಂತೆ ಬರುವ ಹಬ್ಬ ಹರಿದಿನಗಳ ವಿವರ ಕೊಡುತ್ತಾರೆ, ಆಯಾ ಸಂದರ್ಭಗಳ ಆಹಾರ ವಿಶೇಷಗಳನ್ನು, ಆಚರಣೆಗಳ ವಿವರ ನೀಡುತ್ತಾರೆ, ಸಾಧ್ಯವಾದಲ್ಲೆಲ್ಲ ಆಯಾ ಸಂದರ್ಭಗಳಿಗೆ ಸಂಬಂಧಿಸಿದ ಕಥೆ ಪುರಾಣಗಳ ಹಿನ್ನೆಲೆ ಕೊಡುತ್ತಾರೆ, ಇವೆಲ್ಲ ಒಂದು ರೀತಿಯಲ್ಲಿ ಮಾನವ ಶಾಸ್ತ್ರೀಯ ದಾಖಲಾತಿಯಂತೆ ಕಾಣಿಸುತ್ತವೆ, ಅಷ್ಟು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ವಿವರಗಳನ್ನು ಕೊಡುತ್ತಾರೆ, ಇವನ್ನು ಗಮನಿಸಿದರೆ ಅವರು ಹೇಳುವುದು ಇನ್ನೂ ಸಾಕಷ್ಟಿದೆ, ಸದ್ಯ ಇಲ್ಲಿ ಇಷ್ಟು ತಿಳಿಸಿದ್ದಾರೆ ಅನಿಸುತ್ತದೆ.

ಮಧುರಾ ಅವರು ವೃತ್ತಿಪರ ಬರಹಗಾರ್ತಿಯಲ್ಲ, ಶೈಕ್ಷಣಿಕ ಕ್ಷೇತ್ರದವರೂ ಅಲ್ಲ, ಅವರೊಬ್ಬ ಸಾಮಾನ್ಯ ಗೃಹಿಣಿ. ಆದರೆ ಸಜ್ಜನ, ಸದಭಿರುಚಿಯ ಗೃಹಿಣಿ, ಹೀಗಾಗಿ ಅವರ ಆಸಕ್ತಿ ತಮ್ಮ ಜೊತೆಗಿರುವವರಿಗೆ ಶಿಕ್ಷಣ, ಓದು ಮೊದಲಾದವನ್ನು, ಸಾಮಾಜಿಕ ಒಡನಾಟ ಕಲ್ಪಿಸಿ ಉತ್ತಮ ಅಭಿರುಚಿ ಬೆಳೆಸುವಂಥ ಕೆಲಸದಲ್ಲಿ ನಿರಂತರ ತೊಡಗಿಸಿಕೊಂಡಿದ್ದಾರೆ, ಹೀಗಾಗಿ ಅವರು ಉದ್ಯೋಗನಿಮಿತ್ತ ದೇಶಾದ್ಯಂತ ಓಡಾಡುತ್ತಿದ್ದ ಪತಿಯ ಜೊತೆ ತಾವೂ ಹೋಗಿ ಅಲ್ಲೆಲ್ಲ ತಮ್ಮ ಅಭಿರುಚಿಯನ್ನು ಬೆಳೆಸಿದ್ದಾರೆ, ತಾವೂ ಬೆಳೆದಿದ್ದಾರೆ, ಇವರಿಗೆ ಓದು ಬರೆಹದ ಆಸಕ್ತಿ ಹುಟ್ಟಿ ಬೆಳೆದಿದ್ದು ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಸದಾಶಿವ ರಾವ್ ಬಾಪಟ್ ಅವರಿಂದ. ತಂದೆಯಿಂದ ನಿತ್ಯ ದಿನಚರಿ ಬರೆಯುವ ಹವ್ಯಾಸ ಬೆಳೆಸಿಕೊಂಡ ಮಧುರಾ ಅವರಿಗೆ ಮನೋರಮಾ ಬಾಪಟ್ ಅವರಿಂದ ಹಾಡು ಹಸೆ, ಪುರಾಣ ಕತೆಗಳ ಪರಿಚಯ ಮಾಡಿಕೊಂಡರು ಇವೆಲ್ಲ ಇವರ ವ್ಯಕ್ತಿತ್ವ ಬೆಳವಣಿಗೆಗೆ ನೆರವಾದವು, ಅದು ಈ ಕೃತಿಯಲ್ಲಿ ಕಾಣಿಸುತ್ತದೆ. ನಿಜವಾಗಿ ಆಧುನಿಕ ಶಿಕ್ಷಣವೇತ್ತರೆಂದು ಕರೆದುಕೊಂಡವರು ನಮ್ಮ ಪರಂಪರೆ ಮತ್ತು ಸಂಪ್ರದಾಯಗಳನ್ನು ಪಾಶ್ಚಾತ್ಯ ದೃಷ್ಟಿಕೋನದಿಂದ ಹೀಗಳೆಯುತ್ತಾರೆ, ಆದರೆ ಇದು ಮನುಷ್ಯನನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಮಧುರಾ ಅವರ ಈ ಪುಟ್ಟ ಕೃತಿ ಮನಗಾಣಿಸುತ್ತದೆ. ಕೇವಲ ೬೪ ಪುಟಗಳ ಪುಟ್ಟ ಕೃತಿ ಇದು, ಆದರೆ ಚಿತ್ಪಾವನ ಪಂಗಡದ ವಿಶ್ವ ದರ್ಶನ ಮಾಡಿಸುತ್ತದೆ ಕನ್ನಡಿಯಲ್ಲಿ ಆನೆ ತೋರಿಸಿದಂತೆ. ನೋಡಿ ನಮ್ಮಲ್ಲಿ ಒಂದು ಪ್ರಸಿದ್ಧ ಮಾತಿದೆ, ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂದು, ಹೌದು ಕಲಿತ ಹೆಣ್ಣು ಹತ್ತಾರು ಜನರಿಗೆ ಕಲಿಸುತ್ತಾಳೆ, ತಲೆ ಮಾರುಗಳನ್ನು ರೂಪಿಸುತ್ತಾಳೆ, ಇಲ್ಲಿ ಪದವೀಧರರಾದ ಮಧುರಾ ಅವರು ಇದನ್ನೇ ಮಾಡಿದ್ದಾರೆ.

ಒಂದು ಕೃತಿ ರಚನೆಗೆ ಉತ್ತಮ ಅಭಿರುಚಿ ಇದ್ದರೆ ಸಾಕು, ನೀವು ಶಿಕ್ಷಣ ಕ್ಷೇತ್ರದಲ್ಲಿರಬೇಕಿಲ್ಲ, ಪತ್ರಕರ್ತರಾಗಿ ಇರಬೇಕಿಲ್ಲ, ಓದಲು ಬರೆಯಲು ಬಂದು, ತಾವು ಏನು ಹೇಳಲು ಹೊರಟಿದ್ದೇವೆಂಬ ಸ್ಪಷ್ಟತೆ ಇದ್ದರೆ ಸಾಕು, ಅದನ್ನು ಸರಳವಾಗಿ ದಾಖಲಿಸುತ್ತಾ ಹೋದರೆ ಅದೇ ಸಾಹಿತ್ಯವಾಗುತ್ತದೆ ಎಂಬುದು ಇಲ್ಲಿ ತಿಳಿಯುತ್ತದೆ, ಅಷ್ಟಕ್ಕೂ ಇಲ್ಲಿ ಮಧುರಾ ಅವರು ತಮ್ಮ ಚಿತ್ಪಾವನ ಸಮುದಾಯದ ಆಚಾರ- ವಿಚಾರ, ಸಂಪ್ರದಾಯ, ರೀತಿ ರಿವಾಜುಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ದಾಖಲಿಸುವ ಯತ್ನ ಮಾಡಿದ್ದಾರೆ, ಯಶಸ್ವಿಯೂ ಆಗಿದ್ದಾರೆ, ಹಾಗೆ ನೋಡಿದರೆ ಈ ಬಗೆಯ ಸಮುದಾಯಗಳ ಸಂಪ್ರದಾಯಗಳನ್ನು ದಾಖಲಿಸುವ ಯತ್ನ ಎಲ್ಲ ಪಂಗಡಗಳಲ್ಲೂ ಆಗಬೇಕಿದೆ, ಇದಕ್ಕೊಂದು ಆರಂಭವನ್ನು ಮಧುರಾ ಅವರು ಹಾಕಿದ್ದಾರೆ ಅನ್ನಬಹುದು. ಸಾರಾಸಗಟಾಗಿ ಗಣೇಶ ಚತುರ್ಥಿ, ದೀಪಾವಳಿಯಂಥ ಒಂದಿಷ್ಟು ಹಬ್ಬಗಳನ್ನು ದಾಖಲಿಸಿ ನಮ್ಮ ದೇಶದ ಹಬ್ಬಹರಿದಿನಗಳು ಇಷ್ಟೇ ಅಂದರೆ ಸಾಕಾಗುವುದಿಲ್ಲ, ಅವು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ, ಆಹಾರ, ಆಚರಣೆಗಳಲ್ಲಿ ತಮ್ಮ ಸ್ವಂತಿಕೆ ಉಳಿಸಿಕೊಳ್ಳುತ್ತವೆ, ನಿಜವಾಗಿ ಇವೇ ನಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ಹಿಡಿದಿಟ್ಟುಕೊಂಡಿರುತ್ತವೆ, ಆದ್ದರಿಂದಲೇ ಈ ಬಗೆಯ ದಾಖಲಾತಿಗಳು ಆಗಬೇಕಿದೆ ಅನ್ನುವುದು, ಸುಮ್ಮನೇ ಮದುವೆ, ಗಂಡ, ಮಕ್ಕಳು, ಮನೆ , ಸಂಸಾರ ಎಂದುಕೊಂಡು ಅಷ್ಟರಲ್ಲೇ ಜೀವನ ಮುಗಿಸುವ ಶಿಕ್ಷಣ ಪಡೆದ ಸಾಮಾನ್ಯ ಗೃಹಿಣಿಯರಿಗೆ ಮಧುರಾ ಅವರು ನಿಮ್ಮಲ್ಲಿ ಈಗಾಗಲೇ ಇರುವ ಜ್ಞಾನದಿಂದಲೇ ಏನಾದರೂ ಕ್ರಿಯೇಟಿವ್ ಆಗಿ ಮಾಡಲು ಸಾಧ್ಯ ಎಂದು ಕಾಣಿಸಿದ್ದಾರೆ, ಜ್ಞಾನದ ವಿಷಯದಲ್ಲಿ ಸಣ್ದು ದೊಡ್ಡದು ಎಂದಿಲ್ಲ, ನಮಗೆ ಹೊಸದೆನಿಸುವ, ಸಣ್ಣ ಮಾಹಿತಿಯೂ ಜ್ಞಾನವೇ. ಈ ದೃಷ್ಟಿಯಿಂದ ಈ ಕೃತಿ ಹೊಸ ಬೆಳಕು ಕಾಣಿಸುತ್ತದೆ. ಪ್ರಸ್ತುತ ಕೃತಿಯಲ್ಲಿ ಮಧುರಾ ಅವರು ಸಾಧ್ಯವಾದಷ್ಟು ಮಾಹಿತಿಗಳನ್ನು ಹಾಗೂ ಚಿತ್ಪಾವನ ಸಮುದಾಯದ ಸಾಂಸ್ಕೃತಿಕ ಅನನ್ಯತೆಯನ್ನು ದಾಖಲಿಸುವ ಕೆಲಸ ಮಾಡಿದ್ದಾರೆ, ಆದರೆ ಚಿತ್ಪಾವನರು ಇಷ್ಟೇ ಅಲ್ಲ, ಅವರ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮೊದಲಾದ ಕ್ಷೇತ್ರಗಳ ಸಾಧನೆ ಸಾಕಷ್ಟಿದೆ, ಇವೆಲ್ಲ ಇಲ್ಲಿ ದಾಖಲಾಗದಿದ್ದರೂ ಅವು ಈ ಕೃತಿಯ ವ್ಯಾಪ್ತಿಯಿಂದ ಹೊರಗು. ಆದರೆ ಒದು ಕರ್ನಾಟಕ ಚಿತ್ಪಾವನ ಸಮುದಾಯದ ಸಂಪ್ರದಾಯದ ಕೈಪಿಡಿಯಂತಿದೆ. ಈ ಕಿರು ಕೃತಿಗೆ ಅಧ್ಯಯನಾಸಕ್ತರಾದ ಮಧುರಾ ಅವರು ತಮ್ಮ ಸ್ವಾನುಭವದ ಜೊತೆಗೆ ಅನೇಕ ಪರಾಮರ್ಶನಗಳನ್ನು ತಿರುವಿಹಾಕಿ, ಇದು ಗಂಭೀರ ಕೃತಿ ಆಗುವಂತೆ ಮಾಡಿದ್ದಾರೆ.

ಕನ್ನಡದಲ್ಲಿ ಕೃತಿ ಬರೆಯುವವರಿಗೆ ಕೊರತೆ ಇಲ್ಲ, ಆದರೆ ಪ್ರಕಾಶಕರು ತಮ್ಮ ಲಾಭದ ದೃಷ್ಟಿಯಲ್ಲಿ ಕತೆ ಕಾದಂಬರಿಗಳನ್ನು ಮಾತ್ರ ಪ್ರಕಟಿಸುವುದರಲ್ಲಿ ಮಗ್ನರಾಗಿದ್ದಾರೆ, ಹೀಗಾಗಿ ಕನ್ನಡದಲ್ಲಿ ಹತ್ತರು ಅಲಕ್ಷಿತ ಕ್ಷೇತ್ರಗಳಲ್ಲಿ ಕೃತಿಗಳು ಹೊರಬರುವ ಅವಕಾಶ ತೆರೆದೇ ಇದೆ, ಅಂಥ ಒಂದು ಕ್ಷೇತ್ರದ ಕೊರತೆಯನ್ನು ಮಧುರಾ ಅವರು ಇಲ್ಲಿ ತುಂಬುವ ಯತ್ನ ಮಾಡಿದ್ದಾರೆ, ಪ್ರಕಾಸಕರಾದ ಪತ್ರಕರ್ತ ಗಣೇಶ ಅಮೀನಗಢ ಪ್ರಕಾಶಕರ ಮಿತಿಯನ್ನು ದಾಟುವ ಯತ್ನ ಮಾಡಿದ್ದಾರೆ, ಈ ದೃಷ್ಟಿಯಿಂದ ಪ್ರಸ್ತುತ ಕೃತಿ ಅಭಿನಂದನೀಯ. ಕೃತಿಯಲ್ಲಿ ಅಲ್ಲಲ್ಲಿ ಚಿತ್ರಗಳನ್ನು ಒದಗಿಸಿದ್ದಾರೆ, ಆದರೆ ಕೆಲವು ಶಬ್ದಗಳಿಗೆ ಅಥವಾ ಪರಿಭಾಷೆಗಳಿಗೆ ಅನುಬಂಧದಲ್ಲಿ ಅರ್ಥ ವಿವರ ಕೊಡಬಹುದಿತ್ತು ಅನಿಸಿತು, ಕರ್ನಾಟಕದಲ್ಲೇ ಕೇವಲ ಚಿತ್ಪಾವನ ಪಂಗಡದ ಕರಾವಳಿ, ಮಲೆನಾಡು, ಬಯಲು ಸೀಮೆ ಪ್ರದೇಶದಲ್ಲಿ ಎಷ್ಟು ವ್ಯತ್ಯಾಸಗಳಿವೆ ಎಂಬುದನ್ನು ಇಲ್ಲಿ ನೋಡಿದರೆ ನಮ್ಮ ಕರ್ನಾಟಕ, ಹಾಗೂ ಇಡೀ ದೇಶ ಇನ್ನೆಷ್ಟು ಸಾಂಸ್ಕೃತಿಕವಾಗಿ ಸಮೃದ್ಧ ಎಂಬುದನ್ನು ಊಹಿಸುವುದೂ ಸಾಧ್ಯವಿಲ್ಲ, ಇಂಥದ್ದೊಂದು ಉತ್ತಮ ಪ್ರಯತ್ನ ಮಾಡಿದ ಮಧುರಾ ತಮನ್ ಕರ್ ಅವರನ್ನು ನಾವೆಲ್ಲ ಅಭಿನಂದಿಸೋಣ. ಅವರಿಂದ ಇಂಥ ಇನ್ನಷ್ಟು ಅಧಿಕೃತ ಕೃತಿಗಳು ಹೊರಬರಲಿ.


ಕೃತಿ ವಿವರ:

ಕರ್ನಾಟಕದ ಚಿತ್ಪಾವನರ ಹಬ್ಬಗಳು

ಮಧುರಾ ತಾಮನ್ ಕರ್, 

ಕವಿತಾ ಪ್ರಕಾಶನ, ಮೈಸೂರು, ಬೆಲೆ- ೭೫ ರೂ. ಪುಟಗಳು-೬೪


  

  

 


No comments:

Post a Comment