Monday, 15 May 2023

ಉಪಾಧ್ಯ ಅವರ ಮತ್ತೊಂದು ಕೃತಿ


2021ರಲ್ಲಿ ಪ್ರಕಟವಾದ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್. ಉಪಾಧ್ಯ ಅವರ ‘ಅನಿಕೇತನ ಪ್ರಜ್ಞೆ ಮತ್ತು ಕನ್ನಡ’ ಅವರ 45 ಆಯ್ದ ಲೇಖನಗಳನ್ನು ಒಳಗೊಂಡ ಸಂಗ್ರಹವಾಗಿದೆ. ಇದರಲ್ಲಿ ವೈವಿಧ್ಯಮಯವಾದ ಲೇಖನಗಳಿವೆ.

ಶಾಸನಗಳು, ಶಬ್ಧಕೋಶ, ಭಕ್ತ ಪರಂಪರೆ, ಭಾಷಾ ಸಂಬಂಧ ಮುಂತಾದ ವಿಶಿಷ್ಟ ಲೇಖನಗಳಿವೆ. ಕನ್ನಡದಲ್ಲಿ ಮಹಾಭಾರತದ ವಸ್ತುವನ್ನು ಇಟ್ಟುಕೊಂಡು ತುರಂಗ ಭಾರತ ಎಂಬ ಮಹಾಕಾವ್ಯ ರಚಿಸಿದ ಪರಮದೇವನ ಬಗ್ಗೆ ಕೂಡ ಒಂದು ಲೇಖನವಿದೆ. ಒಟ್ಟಿನಲ್ಲಿ ಉಪೇಕ್ಷಿತ ವಸ್ತು ವಿಷಯಗಳ ಲೇಖನ ಸಂಗ್ರಹ ಇದಾಗಿದೆ. ಹಾಗಾಗಿ ಕನ್ನಡ ಸಾಹಿತ್ಯ ಓದುವ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಮತ್ತು ಸಾಹಿತ್ಯ ಪ್ರಿಯರಿಗೆ ಈ ಕೃತಿ ಅನಿವಾರ್ಯ ಕೈಪಿಡಿಯ ಸ್ವರೂಪವನ್ನು ಪಡೆದುಕೊಂಡಿದೆ. ಒಂದೊಂದು ಲೇಖನವೂ ಹೊಸಹೊಸ ವಿಷಯ ಮತ್ತು ವಿಚಾರಗಳನ್ನು ನಮ್ಮ ಮುಂದೆ ಇಡುತ್ತದೆ. ಉದಾಹರಣೆಗೆ ಮೋಲ್ಸ್ ವರ್ತ್ ಶಬ್ದಕೋಶ ಮತ್ತು ಕಿಟ್ಟೆಲ್ ಕೋಶ ಎಂಬ ಲೇಖನ ಹತ್ತು ಹಲವು ಕುತೂಹಲಕರ ಸಂಗತಿಗಳನ್ನು ನಮ್ಮ ಮುಂದೆ ಇಡುತ್ತದೆ. ಕನ್ನಡದಲ್ಲಿ ಕಿಟ್ಟೆಲ್ ಕೋಶಕ್ಕೆ ಅಪೂರ್ವ ಸ್ಥಾನವಿದೆ. ಆದರೆ ಈ ಕೋಶಕ್ಕೆ ಮೋಲ್ಸ್ ವರ್ತ್‍ನ ಮರಾಠಿ- ಇಂಗ್ಲಿಷ್ ಶಬ್ದಕೋಶ ಮುಖ್ಯ ಪ್ರೇರಣೆ ಎಂಬುದು ನಮ್ಮಲ್ಲಿ ಬಹುತೇಕರಿಗೆ ತಿಳಿದಿಲ್ಲ. ಈ ಶಬ್ದಕೋಶವನ್ನು ಮಾದರಿಯಾಗಿ ಇಟ್ಟುಕೊಂಡು ಕಿಟ್ಟೆಲ್ ತಮ್ಮ ಕೋಶ ರಚಿಸಿದ್ದಾರೆ. ಕಿಟ್ಟೆಲ್ ಕೋಶದಂತೆಯೇ ಮೋಲ್ಸತ ವರ್ತ್‍ನ ಕೋಶವು ಕೂಡ ಮರಾಠಿಯಲ್ಲಿ ವಿಶಿಷ್ಟ ಸ್ಥಾನ ಪಡೆದು ಅಪೂರ್ವವೆನಿಸಿದೆ. ಇದರ ಪ್ರೇರರಪಣೆಯಿಂದ ಆನಂತರ ಮರಾಠಿಯಲ್ಲಿ ಅನೇಕ ಶಬ್ದಕೋಶಗಳು ಹೊರಬಂದಿವೆ. ಮೋಲ್ಸ್ ವರ್ತ್ ಕೋಶ ಹೇಗೆ ವಿಶಿಷ್ಟ ಇದು ಕಿಟ್ಟೆಲ್ ಮೇಲೆ ಮತ್ತು ಅವರ ಕೋಶದ ಮೇಲೆ ಹೇಗೆ ನೇರ ಪ್ರಭಾವ ಬೀರಿದೆ ಎಂಬುದನ್ನು ಎಳೆಎಳೆಯಾಗಿ ಈ ಲೇಖನದಲ್ಲಿ ವಿವರಿಸಲಾಗಿದೆ. ಇದೇ ರೀತಿ ಇಲ್ಲಿರುವ ಎಲ್ಲ ಲೇಖನಗಳು ಒಂದಲ್ಲ ಒಂದು ಬಗೆಯಲ್ಲಿ ಗಮನ ಸೆಳೆಯುತ್ತವೆ. ಮರಾಠಿ ಸಂತ ಕವಿಗಳ ಕನ್ನಡ ಪ್ರೇಮ ಎಂಬ ಲೇಖನ ಅಪೂರ್ವವಾಗಿದೆ. ಇದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಪರಸ್ಪರ ಸಾಂಸ್ಕøತಿಕ ಮತ್ತು ಸಾಹಿತ್ಯಕ ಕೂಡುಕೊಳ್ಳುವಿಕೆಗೆ ಮತ್ತು ಅಪೂರ್ವ ಸಾಮರಸ್ಯಕ್ಕೆ ಅಬ್ಧುತವಾದ ನಿದರ್ಶನವನ್ನು ಕೊಟ್ಟಿದೆ. ಭಾಷೆಯ ವಿಷಯದಲ್ಲಿ ಈ ಎರಡು ರಾಜ್ಯಗಳ ರಾಜಕೀಯ ನೇತಾರರು ಹುಟ್ಟಿಸುವ ಕಚ್ಚಾಟವನ್ನು ಈ ಬಗೆಯ ಲೇಖನಗಳು ಹೊಡೆದು ಹಾಕುತ್ತವೆ. ಮರಾಠಿಯ ಪ್ರಸಿದ್ಧ ಸಂತ ಜ್ಞಾನೇಶ್ವರರ ಪ್ರಸಿದ್ಧ ಗೀತೆ ‘ಕಾನಡಾ ಹೋ ವಿಠ್ಠಲ ಕರ್ನಾಟಕು’ ಎಂಬುದು ಅವರ ದೈವ ವಿಠ್ಠಲ ಕರ್ನಾಟಕ ಮೂಲದವನು ಎಂಬುದನ್ನು ಸಾರಿ ಹೇಳುತ್ತದೆ. ಎಂಬುದನ್ನು ಎತ್ತಿ ತೋರಿಸುತ್ತದೆ. ಇಂಥ ಅನೇಕ ಸಾಂಸ್ಕøತಿಕ ಸಂಗತಿಗಳನ್ನು ಪ್ರಸ್ತುತ ಕೃತಿ ಎತ್ತಿ ತೋರಿಸುತ್ತಾ ಕನ್ನಡ ಹೇಗೆ ಸರ್ವ ಪ್ರಿಯವಾಗಿದೆ ಅದರ ಪ್ರಜ್ಞೆ ಹೇಗೆ ಅನಿಕೇತನವಾಗಿದೆ, ವಿಶಾಲವಾಗಿದೆ ಎಂಬುದನ್ನು ಢಾಳಾಗಿ ಎತ್ತಿತೋರಿಸುತ್ತದೆ. ಕನ್ನಡವೆಂದರೆ ಸುಮ್ಮನೆ ವೈಭವೀಕರಿಸುವುದು, ಭಾವನಾತ್ಮಕವಾಗಿ ವೀರಾವೇಶದಿಂದ ಅರಚಾಡುವುದು ಮುಂತಾವುದವುಗಳಿಗೆ ಅರ್ಥವಿಲ್ಲ ಬದಲಾಗಿ ಇಂಥ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ ಕನ್ನಡದ ವಿಶ್ವತ್ಮಾಕತೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯ ಇಂದಿನ ದಿನದಲ್ಲಿ ಹೆಚ್ಚಾಗಿದೆ ಎಂಬುದನ್ನು ಈ ಕೃತಿಯ ಪ್ರತಿಯೊಂದು ಲೇಖನಗಳು ಮನಗಾಣಿಸುತ್ತವೆ. ಈ ದೃಷ್ಟಿಯಿಂದ ಪ್ರಸ್ತುತ ಕೃತಿಯನ್ನು ಪ್ರತಿಯೊಬ್ಬ ಕನ್ನಡಿಗರೂ ಕೊಂಡು ಓದಿ ಅರ್ಥ ಮಾಡಿಕೊಳ್ಳಬೇಕಾದ, ತಮ್ಮ ಕನ್ನಡದ ಅರಿವನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ. ಪ್ರಸ್ತುತ ಕೃತಿಯನ್ನು ಮಂಡ್ಯದ ಶ್ರೀರಾಮ ಪ್ರಕಾಶನ ಪ್ರಕಟಿಸಿದೆ.

ಈ ಕೃತಿ ಬೇಕಾದವರು 9448930173 ಸಂಖ್ಯೆಯನ್ನು ಸಂಪರ್ಕಿಸಬಹುದು. ಈ ಕೃತಿ ನಾನೂರು ಪುಟಗಳನ್ನು ಹೊಂದಿದ್ದರೂ ಇದರ ಬೆಲೆ 440 ರೂಪಾಯಿಗಳಾಗಿದ್ದರೂ ಇದು ಕೈಗಾಗಲೀ ಜೇಬಿಗಾಗಲೀ ಭಾರವಲ್ಲ. ಬದಲಾಗಿ ನಮ್ಮ ಮಿದುಳಿಗೆ ಒಂದಿಷ್ಟು ಹೊಸ ವಿಷಯ ಮತ್ತು ವಿಚಾರಗಳನ್ನು ಮೇಯಲು ಕೊಟ್ಟು ತುಂಬಾ ಉಪಕರಿಸುತ್ತದೆ. ಇಂಥ ಕೃತಿಯನ್ನು ಕೊಡಮಾಡಿದ ಡಾ. ಜಿ.ಎನ್. ಉಪಾಧ್ಯ ಅವರು ನಿಜಕ್ಕೂ ಸಾರ್ಥಕ ಕೆಲಸ ಮಾಡಿದ್ದಾರೆ. ಅವರಿಗೆ ಸಮಸ್ತ ಕನ್ನಡಿಗರೂ ಅಭಿನಂದನೆ ಹೇಳಬೇಕಿದೆ.