Sunday, 23 July 2023

ಇತಿಹಾಸವನ್ನು ತಿದ್ದುವುದು ಸರಿಯಲ್ಲ


ಈಗ ದೇಶದೆಲ್ಲೆಡೆ ವಾರಾಣಸಿಯ ಜ್ಞಾನವ್ಯಾಪಿ ಮಸೀದಿಯ ಮತ್ತು ಅಲ್ಲಿ ಶಿವಮಂದಿರ ಇತ್ತು ಎಂಬ ಬಗ್ಗೆ ಚರ್ಚೆ ಮಾತ್ರವಲ್ಲ ಐತಿಹಾಸಿಕ ಆಧಾರಗಳನ್ನು ವೈಜ್ಞಾನಿಕವಾಗಿ ಕೆದಕುವ ಮತ್ತು ಬೆದಕುವ ಕೆಲಸ ಕಾನೂನಾತ್ಮಕವಾಗಿ ನಡೆಯುತ್ತಿದೆ. ಇದರ ಬಗ್ಗೆ ಇನ್ನಿಲ್ಲದ ಪರ-ವಿರೋಧ ವಾದಗಳು ಕೂಡ ಕಾಣಿಸುತ್ತಿವೆ. ನಿಜವಾಗಿ ಇತಿಹಾಸದಿಂದ ಪಾಠಕಲಿಯಬೇಕೇ ವಿನಾ ಅದನ್ನು ತಿದ್ದಲು ಹೋಗಬಾರದು. ಇದು ಸರಿಯಲ್ಲ. ಅಲ್ಲದೆ ಮೂರ್ಖತನ ಕೂಡ. ಇತಿಹಾಸದ ಕಾಲಗರ್ಭದಲ್ಲಿ ಯಾವುದೋ ಸಮಯ, ಸಂದರ್ಭ ಏನೇನೋ ಘಟನೆಗಳು ಸಂಭವಿಸಿ ಹೋಗಿರುತ್ತವೆ. ಅವುಗಳನ್ನು ಶತಮಾನಗಳ ಅನಂತರ ಸರಿಪಡಿಸುವ ಪ್ರಯತ್ನಕ್ಕೆ ಕೈಹಾಕಬಾರದು. ಪ್ರಸ್ತುತ ವಾರಾಣಸಿಯ ಜ್ಞಾನವ್ಯಾಪಿ ಸಮಸ್ಯೆ ಕೂಡ ಇದೇ ಬಗೆಯದು ಇದು ಮೇಲ್ನೋಟಕ್ಕೆ ಇತಿಹಾಸದಲ್ಲಿ ನಡೆದುಹೋದ ಯಾವುದೋ ಘಟನೆಯನ್ನು ಸರಿಪಡಿಸುವ ಯತ್ನವಾಗಿ ಕಾಣಿಸಬಹುದು. ಆದರೆ ಇದು ಕೊನೆಯೇ ಇಲ್ಲದ ಸಮಸ್ಯೆಗೆ ಕಾರಣ ಆಗಬಹುದು. ಏಕೆಂದರೆ ಹಿಂದೂ ಮತ್ತು ಮುಸ್ಲಿಂ ಎಂಬ ಪ್ರಶ್ನೆ ಮಾತ್ರ ಇಲ್ಲಿ ಇಲ್ಲ. ಆಗಿಹೋದ ಘಟನೆಯೊಂದು ಹಾಗಾಗಬಾರದಿತ್ತು ಹೀಗಾಗಬೇಕಿತ್ತು ಎಂದು ಸರಿಪಡಿಸಲು ಹೊರಟ ಮೂರ್ಖತನದ ಯತ್ನವಾಗಿ ಇದು ಕಾಣಿಸುತ್ತದೆ. ಏಕೆಂದರೆ ಇತಿಹಾಸದಲ್ಲಿ ಇಂಥ ಅನೇಕಾನೇಕ ಘಟನೆಗಳು ನಡೆದುಹೋಗಿವೆ. ಯಾವುದೋ ಕಾಲದಲ್ಲಿ ಸಮುದಾಯವೊಂದರ ಭಾವನೆಗಳ ಮೇಲೆ ನಡೆದಿದೆ ಎನ್ನಲಾದ ದಬ್ಬಾಳಿಕೆಯನ್ನು ಈಗ ಸರಿಪಡಿಸಲು ಹೊರಡುವುದು ಯಾವ ಕಾರಣಕ್ಕೂ ಸರಿ ಎನಿಸುವುದಿಲ್ಲ. ಯಾವುದಾದರೂ ಒಂದು ಸಮುದಾಯಕ್ಕೆ ತನಗೆ ಜಯ ದೊರೆಯಿತು ಎಂಬ ಅಹಮಿಕೆ ತೃಪ್ತಗೊಳ್ಳಬಹುದು ಅಷ್ಟೇ. 

ವಾರಾಣಸಿಯ ನ್ಯಾಯಾಲಯದ ಆದೇಶದಂತೆ ಜ್ಞಾನವ್ಯಾಪಿ ಮಸೀದಿಯ ಪ್ರದೇಶದಲ್ಲಿ ಸರ್ವೇಕ್ಷಣೆ ನಡೆದು ಅಲ್ಲಿ ಹಿಂದೂ ಸಮುದಾಯದ ದೇವರುಗಳ ಪ್ರತಿಮೆಗಳು ಮತ್ತು ಭಾವನಾತ್ಮಕ ಅವಶೇಷಗಳು ದೊರೆತಿವೆ ಎಂದು ಹೇಳಲಾಗಿದೆ. ಇದರಿಂದ ಒಂದು ಗುಂಪು ವಿಜಯೋತ್ಸವ ಆಚರಿಸುತ್ತಲೇ ಇದ್ದರೆ ಮತ್ತೊಂದು ಗುಂಪು ಏನನ್ನೋ ಕಳೆದುಕೊಂಡ ಶೋಕದಲ್ಲಿದೆ. ಇಂಥ ಘಟನೆಗಳು ನಡೆಯಬಾರದು ನಾಗರೀಕ ಸಮಾಜದಲ್ಲಿ ನಮಗೆಲ್ಲಾ ಮಾಡಲು ಬೇರೆ ಬೇಕಾದಷ್ಟು ಕೆಲಸಗಳಿವೆ. ಹೀಗೆಲ್ಲಾ ಇತಿಹಾಸದ ಘಟನೆಗಳನ್ನು ತಿದ್ದುತ್ತಾ ಕುಳಿತರೆ ಅದಕ್ಕೆ ಅಂತ್ಯವಿಲ್ಲ ಹಾಗೂ ಅದರ ಪರಿಣಾಮಕ್ಕೂ ಕೊನೆಯಿಲ್ಲ.

ಪ್ರಸ್ತುತ ಅತ್ಯಂತ ಪ್ರಸಿದ್ಧವೆನಿಸಿರುವ ಕೆಲವು ಸ್ಥಳಗಳನ್ನು ನಿದರ್ಶನವಾಗಿ ಗಮನಿಸೋಣ. ಉದಾಹರಣೆಗೆ ಪುರಿಯ ಜಗನ್ನಾಥ, ಪಂಢರಾಪುರದ ವಿಠ್ಠಲ, ಧರ್ಮಸ್ಥಳದ ಮಂಜುನಾಥ, ಉಡುಪಿ ಕೃಷ್ಣ, ತಿರುಪತಿಯ ತಿಮ್ಮಪ್ಪ, ಬಿಳಿಗಿರಿ ರಂಗನಾಥ, ಮಲೆಮಾದೇಶ್ವರ ಮೊದಲಾದ ಸ್ಥಳಗಳು ಹೊಂದಿರುವ ಪುರಾಣೇತಿಹಾಸಗಳನ್ನು ಆಧಾರ ಸಹಿತ ಹುಡುಕಲು ಅಥವಾ ಕೆದಕಲು ಆರಂಭಿಸಿದರೆ ಅವುಗಳಿಂದ ಹೊರಬರುವ ಪುರಾವೆಗಳು ಎಂದಿಗೂ ಮುಗಿಯದ ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ತರತ್ತವೆ. ಉದಾಹರಣೆಗೆ ತಿರುಪತಿಯ ತಿಮ್ಮಪ್ಪ ವೈಷ್ಣವರ ಆರಾಧ್ಯದೈವ, ವಿಷ್ಣುವಿನ ಅವತಾರವೆಂದು ಹೇಳಲಾಗುತ್ತದೆ. ಆದರೆ ಈ ತಿಮ್ಮಪ್ಪನ ವೆಂಕಟರಮಣ, ವೆಂಕಟೇಶ, ಬಾಲಾಜಿ ಮೊದಲಾದ ಜನಪ್ರಿಯ ಹೆಸರುಗಳು ಅತ್ಯಂತ ಪ್ರಸಿದ್ಧ ವಿಷ್ಣು ಸಹಸ್ರನಾಮದಲ್ಲಿ ಬರುವುದೇ ಇಲ್ಲ. ಅದಿರಲಿ ಆದರೆ 13ನೆಯ ಶತಮಾನದ ವೇಳೆಗೆ ರಾಮಾನುಜಾಚಾರ್ಯರು ಬಂದು ಇದಕ್ಕೊಂದು ನೆಲೆ ಕಾಣಿಸುವವರೆಗೆ ಇದಕ್ಕೆ ಹೇಳಿಕೊಳ್ಳುವ ಮಹತ್ವ ಇದ್ದಂತೆ ಕಾಣಿಸುವುದಿಲ್ಲ. ಆದರೆ ಅದಕ್ಕಿಂತ ಮುಂಚೆ ಶಂಕರಾಚಾರ್ಯರು ಅಲ್ಲಿ  ಶ್ರೀಚಕ್ರ ಸ್ಥಾಪಿಸಿದ್ದರೆಂದು ಹೇಳಲಾಗುತ್ತದೆ. ಇದಕ್ಕೂ ಮುಂಚೆ ಅದು ಶೈವಕ್ಷೇತ್ರವಾಗಿತ್ತು ಅದಕ್ಕೂ ಮೊದಲು ಇಂದಿನ ವೆಂಕಟೇಶ ಮೂರ್ತಿ ಒಬ್ಬ ಜೈನ ತೀರ್ಥಕರನ ವಿಗ್ರಹವೆಂದು ವಾದಗಳಿವೆ. ಇದಕ್ಕೆ ಪೂರಕವಾಗಿ ಅಲ್ಲಿನ ಕೆಲವು ಸಂಪ್ರದಾಯ, ಆಚರಣೆಗಳನ್ನು ನಿದರ್ಶನವಾಗಿ ಕೊಡಲಾಗುತ್ತದೆ. ಕೆಲವು ಪೂರಕ ಕುರುಹುಗಳು ಕೂಡ ಇದಕ್ಕೆ ಲಭಿಸುತ್ತವೆ. ಅಂತೆಯೇ ಜಗನ್ನಾಥ, ವಿಠ್ಠಲ, ಮಾದೇಶ್ವರ, ಬಿಳಿಗಿರಿ ರಂಗ ಇವರೆ¯್ಲ ಆದಿವಾಸಿ ಸಮುದಾಯಗಳ ಮೂಲದೈವಗಳೆಂಬ ಪ್ರತೀತಿ ಇದೆ. ಇಂದು ನಮ್ಮೆದುರು ಇರುವ ಅನೇಕಾನೇಕ ಶೈವ ದೇವಾಲಯಗಳು ಮೂಲತಃ ಜೈನ ಬಸದಿಗಳೆಂದು ಹೇಳಲಾಗುತ್ತದೆ.

ಇದಕ್ಕೆ ಪೂರಕವಾಗಿ  ಅನೇಕ ಸಾಹಿತ್ಯಕ ಮತ್ತು ಐತಿಹಾಸಿಕ ದಾಖಲೆಗಳು ದೊರೆಯುತ್ತವೆ. ಹನ್ನೆರಡು ಮತ್ತು ಹದಿಮೂರನೆಯ ಶತಮಾನಗಳಲ್ಲಿ ವೀರಶೈವ ಮತದ ಚಳವಳಿ ತೀವ್ರವಾಗಿ ನಡೆದಿತ್ತು. ಜೈನ ಮತ್ತು ವೀರಶೈವ ಮತಗಳ ನಡುವೆ ಘರ್ಷಣೆಗಳೂ ನಡೆಯುತ್ತಿದ್ದವು. ವಿಜಾಪುರ ಜಿಲ್ಲೆಯ ತಾಳಿಕೋಟೆಯ ಶಾಸನದಲ್ಲಿ (ಪಗರಟಿಗೆ 300 ಹಾಗೂ ವಿರೂಪರಸನ ಶಾಸನಗಳು) ಜೈನರ ರಕ್ತ ಕಕ್ಕಿಸಿದ, ನಾಲಗೆ ಕಿತ್ತ, ಚರ್ಮ ಸುಲಿದ, ಜೈನ ದೇಗುಲಗಳನ್ನು ನೆಲಸಮ ಮಾಡಿದ ವಿವರಗಳಿವೆ. (ಈ ಬಗ್ಗೆ ಹಂಪನಾ ಅವರ ಲೇಖನ ಗಮನಿಸಬಹುದು- ಜನ್ನ- ಒಂದು ಮರು ಚಿಂತನೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2008, ಪುಟ 1-10)ವೀರಶೈವರ ದಾಳಿಗೆ ಸಿಲುಕಿ ತತ್ತರಿಸಿದ ಜೈನರು ಉತ್ತರ ಭಾಗವನ್ನು ತೊರೆದು ದಕ್ಷಿಣದ ಹೊಯ್ಸಳರ ಆಶ್ರಯಕ್ಕೆ ಬಂದರು. 

ಈ ರೀತಿ ಇತಿಹಾಸದಲ್ಲಿ ಆಯಾ ಕಾಲದಲ್ಲಿ ಪ್ರಬಲವಾಗಿದ್ದ ಸಮುದಾಯಗಳು ಮತಧರ್ಮ ಅನುಸರಿಸುತ್ತಿದ್ದ ರಾಜರು ದುರ್ಬಲ ಸಮುದಾಯ ಮತ್ತು ಮತಧರ್ಮಗಳ ಮೇಲೆ ಸಾಕಷ್ಟು ದಬ್ಬಾಳಿಕೆ ಮಾಡಿದ್ದು ಇತಿಹಾಸದಲ್ಲೇ ದಾಖಲೆ ಸಮೇತ ಲಭಿಸುತ್ತದೆ. ಇವುಗಳನ್ನೆಲ್ಲ ಮೂಲರೂಪಕ್ಕೆ ತರುತ್ತೇವೆ ಎಂದು ಹೊರಟರೆ ಸಮಾಜದ ಶಾಂತಿ ಮತ್ತು ನೆಮ್ಮದಿಯ ಕಥೆ ಏನಾಗಬೇಕು? ಇದಕ್ಕೆ ಕೊನೆಯಾದರೂ ಎಂದು? 

ಭಾರತೀಯ ಪರಂಪರೆ ಮತ್ತು ಸಂಪ್ರದಾಯದಲ್ಲಿ ಅನೇಕ ಆಧ್ಯಾತ್ಮಿಕ ಧಾರೆಗಳು ಮತ್ತು ಚಿಂತನೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಆಚರಣೆಗಳು ಶತಮಾನಗಳಿಂದ ಹಾಸುಹೊಕ್ಕಾಗಿ ಮುಂದುವರೆದುಕೊಂಡು ಬರುತ್ತಿವೆ. ಇವುಗಳಿಗೆ ಬೇಕಾದಷ್ಟು ಪರ-ವಿರೋಧ ದಾಖಲೆಗಳು ಲಭಿಸಬಹುದು. ಆದರೆ ಇವೆಲ್ಲವುಗಳ ಉದ್ದೇಶ ಸಂತೋಷ ಮತ್ತು ಆನಂದವನ್ನು ಪಡೆಯುವುದೇ ಆಗಿದೆ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಇದನ್ನು ಮೂಲಾಧಾರವಾಗಿಟ್ಟುಕೊಂಡು ಭಾರತೀಯ ಸಮುದಾಯಗಳು ಪರಂಪರೆಯನ್ನು ರೂಪಿಸಿಕೊಂಡಿವೆ. ಈ ಸಮಾಜದಲ್ಲಿ ಸೇರಿಹೋದ ಸಮುದಾಯಗಳು ಕೂಡ ಇದೇ ಮನಃಸ್ಥಿತಿಯನ್ನು ರೂಪಿಸಿಕೊಂಡಿವೆ. ಉದಾಹರಣೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬರುವ ಸಿದ್ಧಿ ಸಮುದಾಯ ಮೂಲತಃ ಮೂಜಾಂಬಿಕದಿಂದ ಪೋರ್ಚುಗಿಸರ ಕಾರಣದಿಂದ ಭಾರತಕ್ಕೆ ಬಂದಿತೆಂದು ಹೇಳಲಾಗುತ್ತದೆ. ಈಗ ಆ ಸಮುದಾಯ ತನ್ನ ಮೂಲ ಭಾಷೆ, ಮೂಲದೈವ, ಆಚರಣೆ ಇತ್ಯಾದಿಗಳನ್ನು ಉಳಿಸಿಕೊಂಡಿಲ್ಲ ಅದು ಸಂಪೂರ್ಣ ಭಾರತೀಯ ಸಮುದಾಯಗಳ ಅನುಕರಣೆಯನ್ನೇ ತನ್ನದಾಗಿಸಿಕೊಂಡಿದೆ. ತಾನಿರುವ ಪರಿಸರದ ಭಾಷೆ ಸಂಪ್ರದಾಯಗಳನ್ನು ತನ್ನದಾಗಿಸಿಕೊಂಡು ಸಂತೋಷದಿಂದಿದೆ. ಉದಾಹರಣೆಗೆ ಒಂದು ಸಿದ್ಧಿ ಕುಟುಂಬ ತನ್ನ ಸಂಪರ್ಕಕ್ಕೆ ಬಂದ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತಾಚಾರಗಳನ್ನು ಆನಂದದಿಂದ ಒಪ್ಪಿಕೊಂಡು ಯಾವಾಗ ಯಾವುದು ಸರಿ ಅನಿಸುತ್ತದೆಯೋ ಅದನ್ನು ಅನುಸರಿಸಿ ಆನಂದದಿಂದ ಬದುಕುತ್ತಿದೆ. ಉದಾಹರಣೆಗೆ ಗಣಪಾಸಿದ್ಧಿಯ ಮಗ ಮಹಮ್ಮದ ಸಿದ್ಧಿ ಎಂದು, ಮಗಳು ಪಾತಿಮಾ ಸಿದ್ಧಿ ಎಂದು ಹೆಸರು ಇಟ್ಟುಕೊಂಡಿರಬಹುದು. ಅವರು ತಮಗೆ ಇಷ್ಟವಾದವರನ್ನು ಮದುವೆಯೂ ಆಗಬಹುದು. ಇಂಥ ಅನೇಕ ಮದುವೆಗಳು ಈಗಲೂ ಅವರಲ್ಲಿ ನಡೆಯುತ್ತದೆ. ಆ ಪ್ರದೇಶದ ಬ್ರಾಹ್ಮಣ ಮಹಿಳೆಯರು ಕೂಡ ಸಿದ್ಧಿಗಳೊಂದಿಗೆ ಸಂತೋಷದಿಂದ ಸಂಸಾರಮಾಡಿಕೊಂಡು ಇರುವ ನಿದರ್ಶನಗಳಿಗೆ ಕೊರತೆಯಿಲ್ಲ.

ಹೀಗೆ ನಮ್ಮ ಸಮುದಾಯ ಎಲ್ಲ ಕಾಲದಲ್ಲೂ ಸಂತೋಷದ ಮತ್ತು ಆಯಾ ಸಂದರ್ಭಕ್ಕೆ ಸರಿಎನಿಸಿದ ಘಟನೆಗಳನ್ನು ಆಧರಿಸಿ ಬರುತ್ತಿದೆ. ಇವುಗಳನ್ನು ಇನ್ನಯಾವುದೋ ಕಾಲದಲ್ಲಿಟ್ಟು ಸರಿಪಡಿಸಲು ಹೋಗುವುದು ಹೇಗೆ ಸಮಂಜಸವಾಗುತ್ತದೆ? ಹಾಗೂ ಇವುಗಳಿಂದ ಆಗುವ ಪ್ರಯೋಜನವಾದರೂ ಏನು? ನಮಗೆ ಅಶಾಂತಿಯೊಂದನ್ನು ಬಿಟ್ಟು ಬೇರೆ ಲಭಿಸುವುದಾದರೂ ಏನು? ಹೀಗಾಗಿ ಇತಿಹಾಸದ ಘಟನೆಗಳನ್ನು ಅಲ್ಲಿಗೇ ಬಿಟ್ಟು ಮುಂದೆ ಸಾಗುವುದು ಸರಿ ಅನಿಸುತ್ತದೆ.


Saturday, 22 July 2023

ಕನ್ನಡ ಜೈನ ಸಾಹಿತ್ಯದ ಇನ್ನೊಂದು ಸಂಪುಟ.


ಹಿರಿಯ ಕನ್ನಡ ವಿದ್ವಾಂಸರಾದ ಡಾ. ಎಸ್.ಪಿ. ಪದ್ಮ ಪ್ರಸಾದ್ ಅವರು ಕನ್ನಡ ಜೈನ ಸಾಹಿತ್ಯ ಸಂಪುಟಗಳನ್ನು ಹೊರತರುತ್ತಿರುವುದು ಕನ್ನಡ ಸಾಹಿತ್ಯಪ್ರಿಯರಿಗೆ ತಿಳಿದಿದೆ. ಈಗಾಗಲೇ ಈ ಸಂಬಂಧವಾಗಿ ಅವರು ಮೂರು ಸಂಪುಟಗಳನ್ನು ಹೊರತಂದಿದ್ದಾರೆ, ಇದು ಈ ಸರಣಿಯ ನಾಲ್ಕನೆಯ ಸಂಪುಟವಾಗಿದೆ.

ಪ್ರಸ್ತುತ ಸಂಪುಟದಲ್ಲಿ 1575ರಿಂದ 1775ರವರೆಗಿನ ಕಾಲದ ಕನ್ನಡ ಜೈನ ಸಾಹಿತ್ಯ ಕೃತಿಗಳ ಸಮಗ್ರ ವಿವರವಿದೆ. ಪ್ರಕಟಣೆಗೆ ಶಕ್ತಿ ಹಾಗೂ ಸಹಕಾರ ದೊರಕಿದರೆ ಇನ್ನೂ ಎರಡು ಸಂಪುಟ ಹೊರತರಬಹುದು. ಆದರೆ ಏನು ಮಾಡುವುದು? 'ವಿಟಮಿನ್ ಎಂ' ಕೊರತೆ ಅನ್ನುತ್ತಾರೆ ಅವರು. ಅದು ನಿಜ. ಈಗಾಗಲೇ ಅವರು ಕೆಲವು ಸಾಹಿತ್ಯ ಸಂಸ್ಕೃತಿ ಪ್ರಿಯರ ನೆರವು ಪಡೆದಿದ್ದರೂ ಲೇಖಕರ ಗೌರವ ಧನ, ಹಕ್ಕುಗಳ ವಿಚಾರ ಇತ್ಯಾದಿ ಸಂಗತಿಗಳಿಗೆ ಕೈಯಿಂದ ಸಾಕಷ್ಟು ಹಣ ಹಾಕಿಕೊಂಡು ಕೈ ಕಟ್ಟಿಕೊಂಡು ಕುಳಿತಿದ್ದಾರೆ. ಇಂಥ ಸಾಹಿತ್ಯ ಸಾಧನೆಯ ಮಹತ್ತ್ವ ಗಮನಿಸಿ ಸರ್ಕಾರ ಇದನ್ನು ಉತ್ತೇಜಿಸಿ ಎಲ್ಲ ಗ್ರಂಥಾಲಯಗಳಿಗೆ ತಲಪುವಂತೆಖರೀದಿಸಿ ಎಲ್ಲ ಕಡೆ ಸಂಸ್ಕೃತಿ ಇಲಾಖೆ ಅಥವಾ ಪುಸ್ತಕ ಪ್ರಾಧಿಕಾರದ ಮೂಲಕ ವ್ಯವಸ್ಥೆ ಮಾಡಬೇಕು. ಅಚ್ಚರಿಯ ಸಂಗತಿ ಎಂದರೆ ಸರ್ಕಾರದ ವಿರುದ್ಧ ಯಾರಾದರೂ ಸಾಮಾಜಿಕ ಜಾಲತಾಣವೂ ಸೇರಿದಂತೆ ಎಲ್ಲಾದರೂ ಏನಾದರೂ ಪ್ರಕಟಿಸಿ ಚೋದ್ಯ, ವ್ಯಂಗ್ಯ ಮಾಡಿದರೂ ಅದನ್ನು ಗಮನಿಸಿ ಏನಾದರೂ ಕ್ರಮ ಅಥವಾ ಜ್ಯಲಿಗೆ ಕಳಿಸುವ ಎಚ್ಚರಿಕೆ ಕೊಡುವ ಎಚ್ಚರ ಇರುವಾಗ ಇಂಥ ಪ್ರಯತ್ನಗಳು ಸರ್ಕಾರದ ಗಮನಕ್ಕೆ ಏಕೆ ಬರುವುದಿಲ್ಲ ಎಂಬುದು! ಅದಿರಲಿ, ಒಳ್ಳೆಯದು ಗಮನಕ್ಕೆ ಬರುವುದು ಯಾವಾಗಲೂ ಲೇಟು.

ಪ್ರಸ್ತುತ ಸಂಪುಟದಲ್ಲಿ ಒಟ್ಟು 68 ಲೇಖನಗಳಿದ್ದು, ಇವುಗಳಲ್ಲಿ 28ಕ್ಕೂ ಹೆಚ್ಚು ಲೇಖನಗಳನ್ನು ಸ್ವತಃ ಸಂಪಾದಕರಾದ ಪದ್ಮಪ್ರಸಾದರು ಬರೆದಿದ್ದಾರೆ ಅಂದರೆ ಇಲ್ಲಿರುವ ಲೇಖನಗಳಲ್ಲಿ ಸಿಂಹಪಾಲು ಅವರದೇ.  ಇದು ಅವರ ಶ್ರಮವನ್ನು ಮಾತ್ರವಲ್ಲ, ಇಂಥ ಕೆಲಸಗಳಲ್ಲಿ ಕೆಲಸ ಮಾಡುವವರ ಸಂಖ್ಯೆಯ ಕೊರತೆಯನ್ನೂ ತೋರಿಸುತ್ತದೆ. ಇದು ಜೈನ ಸಾಹಿತ್ಯಕ್ಕೆ ಮಾತ್ರವಲ್ಲ, ಒಟ್ಟಾರೆ ಸಾಹಿತ್ಯ ವಿಷಯಕ್ಕೆ ಅನ್ವಯಿಸಿಯೂ ಹೇಳಬಹುದು. ಏನು ಮಾಡುವುದು? ಪರಿಸ್ಥಿತಿಯೇ ಹಾಗಿದೆ. ಜೈನ ಸಾಹಿತ್ಯದ ಈ ಎಲ್ಲ ಸಂಪುಟಗಳನ್ನು ಪದ್ಮಪ್ರಸಾದರು ಕೇವಲ ಸಂಪಾದನೆ ಮಾಡಿಲ್ಲ, ಬಹುತೇಕ ಕಡೆ ಅಗತ್ಯ ತಿದ್ದುಪಡಿ, ಹೊಸ ವಿಷಯಗಳ ಶೋಧನೆ ಆಗಿರುವಾಗ ಆಯಾ ವಿಷಯಗಳಿಗೆ ಸೇರ್ಪಡೆ ಇತ್ಯಾದಿ ಅಗತ್ಯ ಸಂಶೋಧನೆಯ ಕೆಲಸವನ್ನೂ ಮಾಡಿ ಒಂದು ಸಮಗ್ರ ಸ್ಪಷ್ಟ ಸಾಹಿತ್ಯ ಕೃತಿ ಓದುಗರಿಗೆ ಲಭಿಸುವಂತೆ ಮಾಡಿದ್ದಾರೆ.ಈ ಸಂಪುಟಗಳ ವಿಶೇಷ ಅಂದರೆ, ಸಾಮಾನ್ಯವಾಗಿ ಎಲ್ಲ ಸಾಹಿತ್ಯ ಚರಿತ್ರೆಗಳಲ್ಲಿರುವಂತೆ ಇಲ್ಲಿ ಕೇವಲ ಕವಿ, ಕೃತಿಕಾರರ ಇತಿವೃತ್ತ, ಕೃತಿಗಳ ಮೇಲು ಮೇಲಿನ ವಿವರಗಳಷ್ಟೇ ಖಂಡಿತ ಇಲ್ಲ, ಇಲ್ಲಿ ಮುಖ್ಯವಾಗಿ ಕವಿ ಕೃತಿಗಳ ವಿಮರ್ಶೆ, ವಿಶ್ಲೇಷಣೆಗೆ ಮಹತ್ವ ಕೊಡಲಾಗಿದೆ. ಇದಕ್ಕೂ ಸಕಾರಣವಿದೆ. ಯಾವುದೋ ಒಬ್ಬ ಕವಿ ಯಾವುದೋ ಕಾಲದಲ್ಲಿ ಕೃತಿ ರಚಿಸಿದ. ಆಯಿತು, ಆ ಕವಿಯ ಕಾಲ ಅದಲ್ಲ . ಇದು, ಎರಡು ಮೂರು ವರ್ಷ ಹಿಂದೆ ಮುಂದೆ ಇದ್ದ, ಅವನ ಹುಟ್ಟೂರು ಅದಲ್ಲ. ನಮ್ಮ ಬಹುತೇಕ ಸಾಹಿತ್ಯ ಚರಿತ್ರೆಗಳು ಇದನ್ನೇ ಮಾಡಿವೆ, ಆದರೆ ಈ ಮಾತಿಗೆ ಪ್ರಸ್ತುತ ಸಂಪುಟಗಳು ಅಪವಾದವಾಗಿವೆ. ಈ ಕಾರಣಕ್ಕಾಗಿ ಇವು ವಿಶಿಷ್ಟವಾಗಿವೆ.  ಈ ಕಾರಣಕ್ಕಾಗಿ ಈ ಸಂಪುಟಗಳು ಎಲ್ಲ ಸಾಹಿತ್ಯಪ್ರಿಯರ ಬಳಿ, ಎಲ್ಲ ಗ್ರಂಥಾಲಯಗಳಲ್ಲಿ ಅಗತ್ಯವಾಗಿ ಇರಲೇಬೇಕು.

ಸಾಹಿತ್ಯ ಚರಿತ್ರೆಯ ಸಾಲಿನಲ್ಲಿ ಈ ಸಂಪುಟಗಳಿಗೆ ಒಂದು ಜಾಗ ಖಂಡಿತ ಮೀಸಲು ಇರುತ್ತದೆ. ಇನ್ನು ಖಾಸಗಿ ಗ್ರಂಥ ಸಂಗ್ರಹಕಾರರು ಓದಲಿ, ಬಿಡಲಿ, ಕಪಾಟಿನ ಅಲಂಕಾರಕ್ಕಾದರೂ ಇವನ್ನು ಸಂಗ್ರಹಿಸಬೇಕು ಎಂದರೆ ಕನ್ನಡ ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡುವವರು ಇವುಗಳನ್ನು ಓದಬೇಕಾದುದು ಅನಿವಾರ್ಯ. ಹತ್ತಾರು ವರ್ಷಗಳ ಹಿಂದೆಯೇ ನಾನು ಕನ್ನಡ ಸಾಹಿತ್ಯ ಚರಿತ್ರೆಯನ್ನು ಸಂಪೂರ್ಣವಾಗಿ ಓದಿಬಿಟ್ಟಿದ್ದೇನೆ ಅನ್ನುವವರು ಕೂಡ ಇವುಗಳ ಮೇಲೆ ಕಣ್ಣಾಡಿಸಲೇಬೇಕು. ಏಕೆಂದರೆ ಇದುವರೆಗೆ ಪ್ರಕಟವಾದ ಎಲ್ಲ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳಲ್ಲೂ ಆಯಾ ಕಾಲದ ಕೆಲವು ಗೊತ್ತಾದ ಕವಿ ಕೃತಿಗಳ ವಿಷಯವನ್ನೇ ಸ್ವಲ್ಪ ಇಳಿಸಿ, ಬೆಳೆಸಿ ಕೊಡಲಾಗಿದ್ದರೆ, ಪ್ರಸ್ತುತ ಸಂಪುಟಗಳಲ್ಲಿ ಅಂಥ ಕಡೆ ಅಲಕ್ಷಿತ ಅಥವಾ ನಿರ್ಲಕ್ಷಿತ ಕವಿ ಕೃತಿಗಳ ಸಮಗ್ರವೂ ಸವಿವರವೂ ಆದ ಮಾಹಿತಿ ಹಾಗೂಕೃತಿ ಪರಿಚಯ ಮಾಡಿಕೊಡಲಾಗಿದೆ. ಅಷ್ಟಲ್ಲದೇ  ಕನ್ನಡದ ಹಿರಿ-ಕಿರಿಯ ಗ್ರಂಥ ಸಂಪಾದನಕಾರರ ಅಪರೂಪದ ಸಂಶೋಧನೆ, ಕವಿ ಕೃತಿ ಕುರಿತ ಅವರ ಅಭಿಪ್ರಾಯಗಳನ್ನು ಇಲ್ಲಿ ಒಂದೇ ಕಡೆ ಸಿಗುವಂತೆ ಮಾಡಿರುವುದು ಸಣ್ಣ ಕೆಲಸವಲ್ಲ. ಹೀಗಾಗಿ ಈ ಕೆಲಸವನ್ನು ಸಮಸ್ತ ಕನ್ನಡಿಗರು, ಕನ್ನಡ ಅಭಿಮಾನಿಗಳು ಕನ್ನಡವೆಂದರೆ ಮೈನಿಮಿರುವುದು, ಮನಸ್ಸು ಅಭಿಮಾನದಿಂದ ತುಂಬಿ ಕುಣಿಯುವುದು ಇತ್ಯಾದಿ ಬರೀ ಮಾತನ್ನು ಬದಿಗಿಟ್ಟು ಕೊಂಡು ಓದಿ ಅರಿತು ಬೆಳೆಯುವುದು ಉಚಿತ ಅನಿಸುತ್ತದೆ. ಇಂಥ  ಸಾಹಸದ ಕೆಲಸವನ್ನು ಏಕಾಂಗಿಯಾಗಿ ಮಾಡಿ ಕನ್ನಡಕ್ಕೆ ಕೊಡುಗೆ ನೀಡಿದಡಾ. ಪದ್ಮ ಪ್ರಸಾದರನ್ನು ಈಗ ಅಭನಂದಿಸುವ ಸರದಿ ನಮ್ಮದು. ಅವರ ಈ ಶ್ರಮಕ್ಕೆ ಸಲ್ಲ ಬೇಕಾದ ಎಲ್ಲ ಬಗೆಲ ಸಮ್ಮಾನ ಗೌರವಗಳೂ ಲಭಿಸಲಿ.