Tuesday, 13 February 2024

ರೈತ ಹೋರಾಟದ ಹೆಸರಲ್ಲಿ


ದೆಹಲಿಯಲ್ಲಿ ರೈತರ ಹೋರಾಟ ಆರಂಭವಾಗಿದೆ. ಸಂತೋಷ. ಅವರ ಬೇಡಿಕೆ ಏನು?  ಈಗ ಇರುವ 24 ಬೆಳೆಗಳಿಗೆ ಮಾತ್ರ ಸೀಮಿತವಾಗಿರುವ ಬೆಂಬಲ ಬೆಲೆಯನ್ನು ಎಲ್ಲ ಬೆಳೆಗಳಿಗೂ ವಿಸ್ತರಿಸಬೇಕು, ಸಾಲ ಮನ್ನಾ ಮಾಡಬೇಕು ಹಾಗೂ ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಬೇಕು ಎಂಬುದು. ತಮಾಷೆ ಅಂದರೆ ಸ್ವಾಮಿನಾಥನ್ ವರದಿಯಲ್ಲಿ ಬಹುಶಃ ಅವರಿಗೆ ರೈತರಿಗೆ ವಿಮೆ ಹಾಗೂ ಬೆಂಬಲ ಬೆಲೆ ಕೊಡಬೇಕು ಎಂಬ ಅಂಶಗಳು ಮಾತ್ರ ಕಂಡಿರಬೇಕು. ಆವರದಿಯನ್ನು ಯಥಾವತ್ ಜಾರಿ ಮಾಡಿದರೆ ಮತ್ತೆ ಇವರು ಹೋರಾಟ ಮಾಡುತ್ತಾರೆ. ಏಕೆಂದರೆ ಅದೇ ವರದಿಯಲ್ಲಿ ರೈತರ ಮಧ್ಯೆ ಸ್ಪರ್ಧಾತ್ಮಕತೆ ತರಬೇಕು ಎಂದು ಹೇಳಿದೆ. ನೆನಪಿರಲಿ. ಹಿಂದೆ ಮೋದಿ ಸರ್ಕಾರ ಈ ಯತ್ನಕ್ಕೆ ಕೈ ಹಾಕಿದಾಗ ರೈತರು ಹಾಗೂ ಅವರ ಪರ ದೊಡ್ಡ ಹೋರಾಟ ನಡೆದಿತ್ತು. 

ಇನ್ನೊಂದು ಮಜವೆಂದರೆ ಇದು ರೈತರ ಹೋರಾಟ. ಇದರಲ್ಲಿ ರಾಜಕೀಯ ಬೇಡ ಎಂದು ಕಾಂಗ್ರೆಸ್ ಹೇಳುತ್ತಿದೆ. ಇಲ್ಲಿ ನಡೆಯುತ್ತಿರುವುದು ರೈತರ ಹೆಸರಿನ ರಾಜಕೀಯವೇ. ಏಕೆಂದರೆ ಈ ಹೋರಾಟದಲ್ಲಿ ಪಾಲ್ಗೊಂಡ ರೈತರೆಲ್ಲ ಕಾಂಗ್ರೆಸ್, ಮತ್ತು ಅದರ ಮಿತ್ರಪಕ್ಷಗಳ ಆಡಳಿತದ ರಾಜ್ಯದ ರೈತರು ಮಾತ್ರ.

ರೈತರು ಮುಗ್ಧರು ನಿಜ. ಅವರ ಹೆಸರಲ್ಲಿ ಏನು ಮಾಡಿದರೂ ಅವರಿಗೆ ಅರ್ಥವಾಗುವುದಿಲ್ಲ.ಕಾವೇರಿ ಗಲಾಟೆಯನ್ನೇ ನೋಡಿ ಅದು ಎರಡು ರಾಜ್ಯಗಳಿಗೆ ಸೇರಿದ ಪಕ್ಕಾ ರೈತರಿಗೆ ಸೇರಿದ ಗಲಾಟೆ. ಆದರೆ ಅದರಲ್ಲಿ ರೈತರ ಮಧ್ಯಸ್ಥಿಕೆಯೇ ಇಲ್ಲ. ಈ ಸಂಬಂಧ ಗಲಾಟೆ ಆದಾಗ ರೈತರು ಜೈಲು ಸೇರುತ್ತಾರೆ. ಸದ್ಯದ ಗಲಾಟೆಯಲ್ಲೂ ರೈತರ ಹೆಸರಲ್ಲಿ ದೊಡ್ಡ ಕುಳಗಳು ಲಾಭ ಮಾಡಿಕೊಳ್ಳಲು ಹೊರಟಿವೆ. ಆದರೆ ಆಗಲಿ. ಈ ಹೋರಾಟದ ಫಲವಾಗಿ ಸಾಲ ಮನ್ನಾ ಆದರೆ ಅದರ ಲಾಭ ಸಿಕ್ಕಿದ್ರೆ ಸಿಗಲಿ ಎಂಬ ಆಸೆ. ಆದರೆ ಸಾಲ ಮನ್ನಾದಿಂದ ನಿಜವಾದ ಬಡ ರೈತರಿಗೆ ಆಗುವ ಲಾಭ ಬಹಳ ಕಡಿಮೆ. ಏಕೆಂದರೆ ಬಡ ರೈತರು ಶಕ್ತಿ ಮೀರಿ ಸಾಲ ಮಾಡಲು ಹೋಗುವುದೇ ಇಲ್ಲ. ಅಂಥವರ ಸಾಲ ಒಟ್ಟೂ ಒಂದು ಲಕ್ಷ ದಾಟಿದರೆ ಹೆಚ್ಚು. ಆದರೆ ಟಿಕಾಯತ್ ಅಂಥವರು ಲಕ್ಷಾಂತರ ಕೋಟಿ ರೂಗಳನ್ನು ರೈತನೆಂಬ ಹೆಸರಲ್ಲಿ ಕೊಳ್ಳೆ ಹೊಡೆಯುತ್ತಾರೆ. ತಾನು ರೈತನೆಂಬ ಹೆಸರಲ್ಲಿ ನಯಾಪೈಸೆ ತೆರಿಗೆಯನ್ನೂ ಕಟ್ಟುವುದಿಲ್ಲ. ಹೊಡೆತ ಯಾರಿಗೆ ಲಾಭ ಯಾರಿಗೆ ನೀವೇ ಯೋಚಿಸಿ. ನಿಜವಾಗಿ ರೈತನ ಹೆಸರಿನ ದೊಡ್ಡ ಕುಳಗಳು ರೈತರ ಹೆಸರಿನ ಯಾವ ಚಿಲಗಲರೆ ಸವಲತ್ತನ್ನೂ ಬಿಡುವುದಿಲ್ಲ. ಅದು ಹಸಿರು ಕಾರ್ಡೇ ಇರಲಿ, ರೈತ ಪ್ರೋತ್ಸಾಹದ ಹಣವೇ ಇರಲಿ. ದುರಂತ ಎಂದರೆ ನಿಜವಾದ ಬಡ ರೈತರಿಗೆ ತಮಗಾಗಿ ಏನೆಲ್ಲ ಸವಲತ್ತುಗಳಿವೆ ಎಂಬ ಸಂಗತಿಯೇ ತಿಳಿದಿಲ್ಲ, ಆದರೆ ಈ ಎಲ್ಲ ಲಾಭ ಹೋಗುತ್ತಿರುವುದು ದೊಡ್ಡ ರೈತ ಕುಳಗಳಿಗೆ. ಇದನ್ನು ತಪ್ಪಿಸಲು ಯಾವುದಾದರೂ ಹೊಸ ಚಿಂತನೆಗೆ ಸರ್ಕಾರಗಳು ಮುಂದಾಗಬೇಕಿದೆ. ಅರ್ಹ ರೈತರಿಗೆ ಮಾತ್ರ ಸವಲತ್ತು ಸೌಲಭ್ಯಗಳು ಲಿಸುವಂತೆ ಮಾಡಬೇಕಿದೆ.