Friday, 14 March 2025

ಹೋರಾಟಗಾರರೇ ಇತ್ತ ನೋಡಿ


ಕರ್ನಾಟಕದಲ್ಲಿ ಒಂದು ಅಂದಾಜಿನಂತೆ ಎರಡು ಸಾವಿರಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳಿವೆ, ಇದರಲ್ಲಿ ಆ ಸೇನೆ, ಈ ಸೇನೆಗಳೆಲ್ಲ ಸೇರಿವೆ, ಹೋಬಳಿ ಮಟ್ಟದ ಸಂಘಗಳಿವೆ, ಇವುಗಳ ಮೂಲ ಉದ್ದೇಶ ಒಂದೇ. ಕನ್ನಡದ ನೆಲ ಜಲ ರಕ್ಷಣೆ, ಆದರೆ ಇವೆಲ್ಲ ಅನ್ಯ ಭಾಷೆಯ ವಿರುದ್ಧದ ಹೋರಾಟವೇ ನಿಜವಾದ ಕನ್ನಡ ರಕ್ಷಣೆ ಎಂದು ಭಾವಿಸಿವೆ, ಆಗಲಾದರೂ ಅವು ಏನು ,ಮಾಡುತ್ತವೆ? ನೆರೆ ರಾಜ್ಯದ ಸಾರಿಗೆ ಸಂಪರ್ಕ ತಡೆಯುವುದು, ಅನ್ಯ ರಾಜ್ಯದ ಜನರ ಮುಖಕ್ಕೆ ಮಸಿ ಬಳಿದು ಈಗ ಕನ್ನಡ ಸಾರ್ಥಕವಾಯ್ತು ಎಂಬಂತೆ ಬೀಗುವುದು ಇಷ್ಟೇ. ಇದು ನೈಜ ಕನ್ನಡ ಕೆಲಸವೇ? ಇವುಗಳಲ್ಲಿ ಒಂದಾದರೂ ಸಂಘಟನೆ, ಹಿರಿಯ ಸಾಹಿತ್ಯಪರಿಷತ್ತನ್ನೂ ಒಳಗೊಂಡಂತೆ ಕನ್ನಡ ನೆಲ ಜಲ ರಕ್ಷಣೆಯ ಒಂದಾದರೂ ನೈಜ ಕೆಲಸವನ್ನು ಭೌತಿಕವಾಗಿ ಮಾಡಿ ತೋರಿಸಿ ಮಾದರಿ ಆಗಿದ್ದಿದೆಯೇ? ಇದ್ದರೂ ಅದು ಅಂಥ ಕೆಲಸ ಮಾಡಿದವರ ಸನ್ಮಾನ, ಸಾಹಿತ್ಯ ಪ್ರಕಟಣೆಗೆ ಸೀಮಿತವಾಗಿದೆ, ಆದರೆ ಈಗ ಕನ್ನೆ ನೆಲ ಜಲ ರಕ್ಷಣೆಯ ಅಪೂರ್ವ ಕೆಲಸ ಮಾಡಿ ತೋರಿಸಿ ಇಡೀ ನಾಡು ಧನ್ಯರಾಗುವ ಕೆಲಸ ಮಾಡುವ ಸಂದರ್ಭ ಹಾಗೂ ಸನ್ನಿವೇಶ ಎದುರಾಗಿದೆ. ಇದನ್ನು ಅದ್ಯಾವ ಕನ್ನಡ ಸಂಸ್ಥೆ ಮಾಡಿ ಮಾದರಿಯಾಗುವ ಅವಕಾಶ ಪಡೆಯುತ್ತದೋ ಕಾದು ಕಂಡು ಧನ್ಯರಾಗೋಣ, ನಮಗೆಲ್ಲ ತಿಳಿದಂತೆ ಬೆಂಗಳೂರಲ್ಲಿ ಅಂದರೆ ಕರ್ನಾಟಕದ ರಾಜಧಾನಿಯ ಮಡಿಲಲ್ಲಿ ಕೆಲವು ದಶಕಗಳ ಹಿಂದೆ ಒಂದಲ್ಲ ಎರಡಲ್ಲ ಮೂರು ಜೀವಂತ ನದಿಗಳಿದ್ದು ನಾಡನ್ನು ಹಸಿರಾಗಿಟ್ಟಿದ್ದವು. ಇವನ್ನು ಜೀವಂತ ಸಮಾಧಿ ಮಾಡಲಾಯ್ತು, ಅವುಗಳಲ್ಲಿ ವೃಷಭಾವತಿ ಇನ್ನೂ ಕೋಮಾದಲ್ಲಿದೆ. ಬೆಳೆದು ನಿಂತ ನಗರಗಳ ಮಧ್ಯೆ ಇವುಗಳ ಮರುಜೀವದ ಕೆಲಸ ಸಾಧ್ಯವೇ ? ಎಂಬ ಪ್ರಶ್ನೆಗೆ ನಮಗಿಂತ ದೊಡ್ಡದಾಗಿ ಬೆಳೆದುನಿಂತ, ಆದರೆ ಅದೇ ರೀತಿ ನದಿ ನುಂಗಿದ್ದ ಮುಂಬೈನಲ್ಲಿ ಅಂಥ ನದಿಗೆ ಮತ್ತೆ ಅಧ್ಬುತ ಮರುಜೀವ ಕೊಟ್ಟು ಸಾಧನೆ ಮೆರೆದು ಅಸಾಧಾರಣ ಕೆಲಸವನ್ನು ಸಾಧಿಸಲಾಗಿದೆ. ಹೌದು. ಅದರ ವಿವರ ಇಲ್ಲಿದೆ.  ಸತ್ತ ನದಿಗೆ ಮರುಜೀವ ಕೊಟ್ಟು ಅಪೂರ್ವ ಸಾಧನೆ ಮಾಡಿದ ಹೆಗ್ಗಳಿಕೆ ಮಾಡುವ ಅವಕಾಶವಂತೂ ಸದ್ಯ ಬೆಂಗಳೂರಿಗೆ ತಪ್ಪಿದೆ, ಆದರೆ ಒಂದಲ್ಲ, ಎರಡಲ್ಲ, ಮೂರು ನದಿಗಳನ್ನು ಪುನರುಜ್ಜೀವಗೊಳಿಸಿದ ಹಿರಿಮೆ ಸಾಧಿಸುವ ಅವಕಾಶ ಇನ್ನೂ ಇದ್ದೇ ಇದೆ, ಅದನ್ನು ನಮ್ಮೆಲ್ಲರ ಪ್ರಾತಿನಿಧಿಕ ಸಂಸ್ಥೆ ಹೆಮ್ಮೆ ಕನ್ನಡ ಸಾಹಿತ್ಯ ಪರಿಷತ್ತು ತಂತ್ರಜ್ಞರ, ಪರಿಸರವಾದಿಗಳ ಹಾಗೂ ಸರ್ಕಾರದ ನೆರವಿನಿಂದ ಇಂಥದ್ದೊಂದು ಬಕೆಲಸ ಮಾಡುವಂತಾಗಲಿ, ಆಗದ್ದನ್ನು ಆಗುಮಾಡಲಿ. ಕನ್ನಡದ ಸಕಲ ಶ್ರೇಯಸ್ಸು ಅದಕ್ಕೆ ಈ ಮೂಲಕ ಸಿಗುವಂತಾಗಲಿ. ಅದರ ವಿವರ ಇಲ್ಲಿದೆ. ಬೆಂಗಳೂರಲ್ಲಿ ಜೀವಂತವಾಗಿದ್ದ ವೃಷಭಾವತಿ, ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳ ಕತೆ ಏನು? ಅವು ಸತ್ತು ಸುಣ್ಣವಾದ ಬಗೆ ಹೇಗೆ ಎಂಬುದನ್ನು ಇದೇ ಬ್ಲಾಗಲ್ಲಿ ಸರಣಿಯ ಓಪಾದಿಯಲ್ಲಿ ಈಗಾಗಲೇ ಗಮನಿಸಲಾಗಿದೆ. ಆಸಕ್ತರು ಆಯಾ ಹೆಸರಿನಡಿಯಲ್ಲಿ ಇವನ್ನು ಓದಬಹುದು. ಈಗ ಇವನ್ನು ಸರಿಪಡಿಸುವ ಮಾದರಿಯ ಬಗ್ಗೆ ಇಲ್ಲಿ ಗಮನಿಸಬಹುದು. ಮುಂಬೈನ ಸಾಂಬಾಜಿನಗರದ ಕಾಮಾ ನದಿಗೂ ನಮ್ಮ ಈ ಮೂರೂ ನದಿಗಳಿಗೂ ಇರುವ ಸಾಮ್ಯ ಒಂದೇ. ಆದರೆ ಕಾಮಾ ಮರುಉಟ್ಟು ಪಡೆಯಿತು, ನಮ್ಮ ನದಿಗಳು ಇನ್ನೂ ಸತ್ತೇ ಇವೆ, ಇಷ್ಟೇ ವ್ಯತ್ಯಾಸ. ಕಾಮಾ ಮತ್ತೆ ಹುಟ್ಟಿದ್ದು ಹೇಗೆ? ನೋಡುವಾ.

ಅದರ ಹೆಸರು ಕಾಮಾ ನದಿ. ಇದು ನಮ್ಮ ಮಹಾನ್ ನಗರ ಮುಂಬೈನ ಹೃದಯಭಾಗ ಸಾಂಬಾಜಿ ನಗರದಲ್ಲಿ ಕೆಲವು ದಶಕಗಳ ಹಿಂದಿನವರೆಗೆ ಸುಗಮವಾಗಿ ಆನಂದವಾಗಿ ಹರಿಯುತ್ತಿತ್ತು. ಇದರಲ್ಲಿ ತಮ್ಮದೇ ಬದುಕು ಕಟ್ಟಿಕೊಂಡಿದ್ದ ಮೀನುಗಾರ ಸಮುದಾಯ ತಮ್ಮ ಸಂಸ್ಕೃತಿಯನ್ನು ಹರಡಿಕೊಂಡಿತ್ತು, ಆ ನಗರ ಬೆಳೆದಂತೆ ಈ ನದಿ ನಿಧಾನವಾಗಿ ಸಾಯತೊಡಗಿತು, ಒಂದೆರಡು ದಶಕಗಳಲ್ಲಿ ಇದು ಸಂಪೂರ್ಣವಾಗಿ ಚರಂಡಿಯಾಗಿ ಅದು ಕಾಪಾಡಿಕೊಂಡು ಬಂದಿದ್ದ ಮೀನುಗಾರರ ಬದುಕು ಸಂಸ್ಕೃತಿಯೂ ಸೇರಿ ಎಲ್ಲವೂ ಚರಂಡಿ ಪಾಲಾಯಿತು, ಸಾಲದ್ದಕ್ಕೆ ಪ್ರತೋಈ ಮಳೆಗಾಲದಲ್ಲಿ ಮುಂಬೈ ಮುಳುಗಲು ಕಾರಣವಾಯ್ತು. ಇದನ್ನು ತಡೆಯಲಾಗದ ಮುಂಬೈ ಜನತೆ ಪ್ರವಾಹದ ಮೂಲ ಕಾರಣ ಪತ್ತೆ ಮಾಡಲು ಮುಂದಾದರು, ಆಗ ಗೋಚರಿಸಿದ್ದೇ ಕಾಮಾ ನದಿ. ಅವರು ಇಲ್ಲಿಗೇ ನಿಲ್ಲದೇ ಆ ನದಿಯ ಪುನರುಜ್ಜೀವನ ಕೆಲಸಕ್ಕೆ ಮುಂದಾದರು, ಮೊದಲು ಈನದಿ ಕಾಪಾಡಿದ್ದ ಹಕ್ಕಿ ಪಕ್ಷಿಗಳು ನಾಪತ್ತೆ ಆದವು. ಅದರ ಪರಿಸರ ಸಂಪೂರ್ಣ ಗತಿಗೆಟ್ಟಿತ್ತು, ಆ ನದಿಯ ಪರಿಸರದಿಂದ ಜನ ದನಗಳು ಆದಷ್ಟು ದೂರ ಓಡಿದವು. ನಮ್ಮ ಇಂದಿನ ಕೆಂಗೇರಿಯ ಪರಿಸರವನ್ನು ಊಹಿಸಿ. ಸೇಮ್ ಟು ಸೇಮ್. ಆದರೆ ಪುಣ್ಯ. ಈ ಕಾಮಾ ನದಿ ಈಗ ಮರುಜೀವಪಡೆದಿದೆ. ಅದರ ಪರಿಸರದಿಂದ ದೂರ ಓಡಿಹೋಗಿದ್ದ ಜನದನಗಳೆಲ್ಲ ಅದನ್ನು ಹುಡುಕಿ ವಾಪಸು ಬರುತ್ತಿವೆ, ಸುಂದರ ಕನಸಾಗಿದ್ದ ನದಿ ಇದೀಗ ನನಸಾಗಿದೆ. ಇದರ ಸಂಪೂರ್ಣ ವಿವರ ಯೂಟ್ಯೂಬ್ ನಲ್ಲಿ ವಿಡಿಯೋ ರೂಪದಲ್ಲಿದೆ, ಆಸಕ್ತರು ನೋಡಿ, ನಮ್ಮದೇಕೆ ಆಗುವುದಿಲ್ಲ ಎಂದು ಚಿಂತಿಸಿ.

ಮುಂಬೈ ಮಹಾ ಮಳೆಗೆ ಆ ಊರು ಪ್ರತೀ ಬಾರಿ ನಲುಗದಿದ್ದರೆ ಕಾಮಾ ಹುಟ್ಟು ಸಾಧ್ಯವಾಗುತ್ತಿರಲಿಲ್ಲ ಅನ್ನಿ. ಆಯಿತು. ಆದರೆ ನಮ್ಮ ಬೆಂಗಳೂರು ಕೂಡ ಮಳೆಗಾಲದಲ್ಲಿ ಅಲ್ಲಲ್ಲಿ ಮುಳುಗುತ್ತದೆ ಆದರೆ ಮುಂಬೈ ಸಮುದ್ರದ ಬಳಿ ಇದೆ ಕಷ್ಟ ಜಾಸ್ತಿ, ಬೆಂಗಳೂರು ಸಾಕಷ್ಟು ಮೇಲಿದೆ, ಸಂಕಟ ಕಡಿಮೆ. ಹೀಗಾಗಿ ನದಿಗಳ ಬಗ್ಗೆ ನಮ್ಮ ಸೋಮಾರಿತನ ಹೆಚ್ಚು, ಮಳೆಗಾಲದಲ್ಲಿ ಮೈಸೂರು ರಸ್ತೆಯ ಸ್ಥಿತಿಯನ್ನು ಒಮ್ಮೆ ಊಹಿಸಿ, ಅದರಿಂದ ನಾವು ಏನಾದರೂ ಪಾಠ ಕಲಿತಿದ್ದೀವಾ? ಹೇಳಿಕೊಳ್ಳಲು ಬೆಂಗಳೂರಲ್ಲಿ ಇಡೀ ನಾಡಿನ ಎಲ್ಲ ಕಡೆಯ ಪರಿಸರವಾದಿಗಳು ತಜ್ಞರಿದ್ದಾರೆ, ಸಿಕ್ಲಾಪಟ್ಟೆ ತಿಳಿದವರಿದ್ದಾರೆ, ನಮಗಿರುವುದು ಒಂದೇ ಭೂಮಿ ಎಂದು ಹೇಳುವ ಪತ್ರಕರ್ತರು, ಪತ್ರಿಕೆಗಳಿವೆ, ಆದರೆ ಇವರಿಂದ ಬೆಂಗಳೂರಿನ ಯಾವ ನದಿಗೂ ಉಪಯೋಗವಾಗಿಲ್ಲ, ಹಾಗೆ ನೋಡಿದರೆ ಮಹಾರಾಷ್ಟçದಲ್ಲಿ ಹೀಗೆ ಒಂದಲ್ಲ, ಸತ್ತು ಹೋಗಿದ್ದ ಎರಡು ನದಿಗಳು ಮರುಜೀವ ಪಡೆದು ತಮ್ಮ ಪರಿಸರಕ್ಕೆ ಮರುಹುಟ್ಟು ಕೊಟ್ಟಿವೆ, ನದಿ ಸತ್ತು ಇಡೀ ಊರು ಗುಳೇ ಹೋಗಿ ಹಾಳುಬಿದ್ದಿದ್ದ  ಮಹಾರಾಷ್ಟ್ರಾದ ಹೆಚ್ಚೂ ಕಡಿಮೆ ಪ್ರತೀ ಜಿಲ್ಲೆಯಲ್ಲಿಯೂ ಈಗ ನದಿ ನೀರು ಪುನರುಜ್ಜೀವನ ಯೋಜನೆಗಳು ಅಧಿಕೃತವಾಗಿವೆ. ೧೯೮೦ರ ವೇಳೆಗೆ ಸೋಲಾಪುರ ಬಳಿಯ ಶಿಂಡಿ ಎಂಬ ಹತಪಾಡಿಯಲ್ಲಿ ಕುಡಿಯಲು ಹನಿ ನೀರೂ ಇಲ್ಲದೇ ಕೃಷಿ ಚಟುವಟಿಕೆಯನ್ನೂ ಮಾಡಲಾಗಸೇ ಗತಿಗೆಟ್ಟ ಇಡೀ ಊರಿನ ಜನ ಸಾರ್ವತ್ರಿಕವಾಗಿ ಬೇರೆಡೆ ಗುಳೇ ಹೋಗಿ ಇಡೀ ಊರು ಭೂತದ ಗ್ರಾಮ ಎನಿಸಿಕೊಂಡಿತ್ತು ಅಂತರ್ಜಲ ಹಳ್ಳ ಹಿಡಿದು ಸಾವಿರಾರು ಅಡಿಯಲ್ಲೂ ಹನಿ ನೀರು ಸಿಗುತ್ತಿರಲಿಲ್ಲ, ಇದನ್ನು ಗಮನಿಸಿದ ಸೋಲಾಪುರ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ತಂಡ ಪಣತೊಟ್ಟು ಊರಲ್ಲಿದ್ದ ನದಿಗೆ ಜೀವ ಬರಿಸಿ, ಅಂತರ್ಜಲ ಕೈ ಮಟ್ಟಕ್ಕೆ ಬರುವಂತೆ ಮಾಡಿ ಊರು ಬಿಟ್ಟಿದ್ದ ಜನ ಮರಳುವಂತೆ ಮಾಡಿ ಇಡೀ ಊರು ಬೆಳೆಗಳಿಂದ ಈಗ ಕಂಗೊಳಿಸುವಂತೆ ಮಾಡಿದ್ದಾರೆ, ಮಹಾರಾಷ್ಟçದಲ್ಲಿ ಒಂದೊಂದು ಕಡೆಯೂ ಇಂಥ ಕತೆಗಳು ಈಗ ದಾಮಾನ್ಯ. ಇದಲ್ಲವೇ ನಮಗೆ ಮಾದರಿ? ಇಲ್ಲಿಯೂ ಭಾಷೆಯ ವಿರೋಧ ಕಟ್ಟಿಕೊಂಡು ಅದನ್ನು ಮಾದರಿ ಎಂದು ಪರಿಗಣಿಸದ ಮೂರ್ಖತನ ನಮ್ಮದು. ನಮ್ಮ ಹೋರಾಟಗಾರರು ಊರೂರಲ್ಲೂ ಇರುವ ನದಿ ಕರೆಕಟ್ಟೆಗಳ ಪುನರುಜ್ಜೀವನಕ್ಕೆ ಹಠ ತೊಟ್ಟು ನೆಲ ಜಲ ರಕ್ಷಿಸುವ ಹೋರಾಟಕ್ಕೆ ಹೊಸ ದಿಕ್ಕಿ ಕೊಟ್ಟು ಅಸಾಧಾರಣ ಜನ ಬೆಂಬಲ ಗಳಿಸಬೇಕಿದೆ. ಇದಾಗಲಿ. 

ಇರಲಿ, ಈಗ ಮುಂಬೈ ಮಹಾನಗರದ ಕಾಮಾ ನದಿಗೆ ಬರುವಾ. ಇದರ ಪುನರುಜ್ಜೀವನ ಕೆಲಸ ಎರಡು ದಶಕಗಳ ಹಿಂದೆ ಶುರುವಾಯ್ತು. ಇದಕ್ಕೆ ಸ್ಥಳೀಯ ಸಂಸ್ಥೆಗಳು, ಪರಿಸರವಾದಿಗಳು ಸರ್ಕಾರದ ಮಂಡಳಿಗಳು ಎಲ್ಲ ಸಾಥ ಕೊಟ್ಟವು, ಪ್ರಮುಖವಾಗಿ ನಾಲ್ಕು ಸಂಸ್ಥೆಗಳು ನಿಂತವು. ಮೂರು ಲಕ್ಷ ಟನ್ ಕಸ ತೆಗೆದು ನದಿಯನ್ನು ಮೂಲ ರೂಪಕ್ಕೆ ಬರುವಂತೆ ಮಾಡಲಾಯ್ತು, ಮೊದಲು ಅದರ ಮೂಲ ನಕ್ಷೆ ರಚಿಸಿ ಅದರ ಬೆನ್ನು ಹತ್ತಿ ಜಾಗ ಬಿಡಿಸಿಕೊಡುತ್ತ ಹೋದಂತೆ ನದು ಹುಟ್ಟಲಾರಂಭಿಸಿತು. ಈಗ ಅದು ಹುಟ್ಟಿ ಒಂದು ಜೀವಂತ ನದಿ ಇದ್ದರೆ ಅದರ ಪರಿಸರ ಹೇಗಿರುತ್ತದೋ ಹಾಗೆ ಪರಿಸರ ಮರು ನಿರ್ಮಿತವಾಗಿದೆ. ಕಾಮಾ ನದಿ ಪುನರುಜಜೀವನ ಪಡೆದ ಮೇಲೆ ಅದು ಪ್ರವಾಸೀ ತಾಣವಾಗಿ ಬದಲಾಗಿದೆ. ಅಲ್ಲಿನ ಪ್ರವಾಹದ ಕಾಟ ನಿಲ್ಲುವಿದರ ಜೊತೆಗೆ ನದಿ ಕೂಡ ಹುಟ್ಟಿದೆ. ನಮ್ಮ ವೃಷಭಾವತಿ ನದಿಗೆ ಅದರ ರಿಪೇರಿ ಹೊಣೆ ಹೊತ್ತ ಮಂಡಳಿಯೇನೋ ಇದೆ, ಆದರೆ ಅದರ ಕೆಲಸ ಏನು? ಇದುವರೆಗೆ ಅದು ಏನು ಮಾಡಿದೆ ಎಂಬುದು ಯಾರಿಗೂ ತಿಳಿದಿಲ್ಲ, ಕನಿಷ್ಠ ಹೀಗೆ ಪುನರುಜ್ಜೀವನ ಕೆಲಸ ಮಾಡಿ ಇಷ್ಟು ವರ್ಷ ಜನರ ಹಣ ತಿಂದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ.ಜೊತೆಗೆ ಇದಕ್ಕೆ ನಮ್ಮ ಕನ್ನಡ ನೆಲ ಜಲ ಹೋರಾಟಗಾರರು ಸಾಥ್ ಕೊಡಲಿ, ನಾವೆಲ್ಲ ಜೊತೆಗೂಡೋಣ. ಅಲ್ವಾ?



Friday, 7 March 2025

ನಾಡಿಗ್ ರ ಹೊಸ ಸಂಕಲನ


ಕವಿ ವಾಸುದೇವ್ ನಾಡಿಗ್ ನನ್ನ ಆತ್ಮೀಯ ಮಿತ್ರ, ನಮ್ಮ ಸ್ನೇಹ ಮೊಳಕೆ ಒಡೆದಿದ್ದೇ ಮೈಸೂರು ಸಾಹಿತ್ಯ ಸಮ್ಮೇಳನದಿಂದ. ಅಲ್ಲಿಂದ ಮುಂದೆ ನಮ್ಮ ಮಿತ್ರತ್ವ ಸಾಹಿತ್ಯದ ಜೊತೆಜೊತೆಗೆ ಬೆಳೆಯುತ್ತ ಬಂದಿದೆ. ಆಗಾಗ ಕಚ್ಚಾಟಗಳಾಗಿವೆ, ಸಾಹಿತ್ಯ ಕುರಿತು ಕೆಟ್ಟದಾಗಿ ಸ್ವಂತದ್ದೇನೋ ಎಂಬಂತೆ ಕಚ್ಚಾಟಮಾಡಿಕೊಂಡಿದ್ದೇವೆ. ಯಾರೂ ಹಿಸ್ಸೆ ವಿಷಯ ಬಿಟ್ಟು ಹಿಂಗೆ ಬಡಿದಾಡಲಾರರು ಅನಿಸುತ್ತದೆ, ನಮ್ಮ ಕಚ್ಚಾಟ ಕಂಡು ವಿಷಯ ತಿಳಿದ ಜನ ಮಾಡಲು ಕೆಲಸ ಇಲ್ವಾ ಅಂದಿದ್ದೂ ಇದೆ. ನಮ್ಮ ಸಾಹಿತ್ಯದ ವಾದ ವಿವಾದ ಆ ಮಟ್ಟದ್ದು. ಸದ್ಯ ಕೊಳ್ಳೇಗಾಲದಲ್ಲಿ ಒಳ್ಳೆಯ ವಕೀಲ ಅನಿಸಿಕೊಂಡಿರುವ ಮಿತ್ರ ರುದ್ರಾರಾಧ್ಯ ಆಗಾಗ ಏನಪ್ಪಾ ನಿಮ್ಮ ಹೊಸ ಜಗಳ ಏನು ಎಂದು ಕೇಳುವುದುಂಟು. ಆತ ಕೂಡ ಉತ್ತಮ ಸಾಹಿತ್ಯ ಪ್ರೇಮಿ. ವಾಸು ಮತ್ತು ನನ್ನ ಜಗಳಗಳಿಗೆ ಈತ ಅನೇಕ ಬಾರಿ ಸಾಕ್ಷಿ ಆಗಿದ್ದಾನೆ. ಅದಿರಲಿ. ಇದು ನಮ್ಮ ವರಾತ. ಈಗ ವಿಷಯಕ್ಕೆ ಬರುವಾ. ಈಚೆಗೆ ವಾಸು ಬರೆದ ಹೊಸ ಕವಿತೆಗಳ ಸಂಕಲನ ಹೊರಬಂದಿದೆ. ಹೆಸರು-ಇರು-ಇರದಂತೆ ಇರು. ಇದರ ಹೆಸರೇ ಸಂಕೇತಾತ್ಮಕ, ಪ್ರತಿಮಾತ್ಮಕ ಅನಿಸುವಂತಿದೆ.

ನಾಡಿಗ್ ಬರೆದ "ವೃಷಭಾಚಲದ ಕನಸು" ಸಂಕಲನದಿಂದ ಇಲ್ಲಿಯವರೆಗೆ ಎಲ್ಲ ಪದ್ಯಗಳನ್ನೂ ಗಮನಿಸುತ್ತಾ ಬಂದಿದ್ದೇನೆ. ೧೯೯೦ರ ದಶಕದಿಂದ ಇಲ್ಲಿಯವರೆಗೆ ನಮ್ಮಿಬ್ಬರ ಸಾಹಿತ್ಯಕ ಕಚ್ಚಾಟವೂ ಬೆಳೆದಿಲ್ಲ, ಅಂತೆಯೇ ವಾಸುವಿನ ಕವಿತಾ ರಚನೆಯ ವಿಧಾನ ಕೂಡ. ಅವನಿಗೆ ಸಂಕೇತ-ಪ್ರತಿಮೆಗಳ ಮೇಲೆ ಅಸಂಗತಗಳನ್ನು ಕಾವ್ಯದಲ್ಲಿ ಸಂಗತಮಾಡುವುದರಲ್ಲಿ ಹೆಚ್ಚು ಮೋಹ. ಇದನ್ನು ಆತ ಮೊದಲ ಸಂಕಲನದಿಂದ ಹಾಗೆಯೇ ಕಾಪಿಟ್ಟುಕೊಂಡು ಬಂದಿದ್ದಾನೆ, ಅದರಲ್ಲೇ ಪ್ರಯೋಗಮಾಡಿ ನೋಡುತ್ತಿದ್ದಾನೆ. ಅದು ಅವನ ಕೈಗೆ ಹತ್ತಿದೆ. ಆದರೆ ಅವನ ಅನುಭವದ ಹಿನ್ನೆಲೆಯಲ್ಲಿ ನೋಡಿದರೆ ಆತ ಈಗ ಸ್ವಲ್ಪ ರಾಗ, ಲಯಬದ್ಧತೆ ಹಾಗೂ ಗೇಯಗುಣದ ಕಾವ್ಯರಚನೆಯತ್ತ ಹೊರಳುವುದು ಒಳಿತು ಹಾಗೂ ಇದಕ್ಕೆ ಸಕಾಲ ಅನಿಸುತ್ತಿದೆ, ಇಲ್ಲಿಯವೆರೆ ನಾವಿಬ್ಬರು ಎಷ್ಟು ಕಚ್ಚಾಡಿದರೂ ನಾನು ಅವನ ಕಾವ್ಯ ಶೈಲಿಯ ಬಗ್ಗೆ ಸೊಲ್ಲೆತ್ತಲಿಲ್ಲ, ಪ್ರತಿಯೊಬ್ಬ ಕವಿಗೂ ಅವನದೇ ಆದ ಪದಗುಣ ಹತ್ತಿರುತ್ತದೆ, ಆತ ಬಯಸದೆಯೂ ಅದು ಕಾಗದದ ಮೇಲೆ ಮೂಡುತ್ತ ಹೋಗುತ್ತದೆ, ಇದು ಅನ್ಯರ ಒತ್ತಡದಿಂದ ಬದಲಾಗಬಾರದು ಯಾರೂ ಒತ್ತಡ ಕೂಡ ಹಾಕಬಾರದು. ಅದು  ಸ್ವಂತ, ಆದರೆ ಈ ಸಂಕಲನದಲ್ಲಿ ಬಿನ್ನಹಕೆ ಬಾಯಿದೆ, ಸಾಪಸಾ ಕವಿತೆಗಳಲ್ಲಿ ಸ್ವಲ್ಪ ಅಂಥ ಛಾಯೆ ಇದೆ, ಗೇಯ ಗುಣದ ಪದ್ಯಗಳಿಗೆ ವಾಸು ಈಗ ಹೊರಳಿಕೊಳ್ಳುವ ಅಗತ್ಯ ಸಾಹಿತ್ಯ ಲೋಕಕ್ಕೆ ಅಗತ್ಯವಿದೆ, ಅಂದರೆ ಆತ ಕುವೆಂಪು, ಬೇಂದ್ರೆ, ಕೆ ಎಸ್ ನ ರಂತೆ ಹಾಡುಗವಿ ಆಗಬೇಕೆಂದಲ್ಲ, ಅಡಿಗರಂತೆ ತಲೆ ತಿನ್ನುವ ಪದ್ಯ ರಚಿಸುತ್ತಲೆ ಇರಲಿ ಎಂದೂ ಅಲ್ಲ, ಇವೆರಡರ ನಡುವಿನ ಹಾದಿಯನ್ನು ಎಚ್ ಎಸ್ ವಿ, ಸುಬ್ರಾಯ ಚೊಕ್ಕಾಡಿ ಮೊದಲಾದವರು ಕಂಡಿದ್ದಾರೆ, ವಾಸು ಈ ಮಾರ್ಗದಲ್ಲಿ ಸಾಗಿದರೆ ಒಳಿತು ಅನಿಸುತ್ತದೆ, ಇದರಿಂದ ವಾಸುವಿಗೂ ಕನ್ನಡಕ್ಕೂ ಶ್ರೇಯಸ್ಸಿದೆ ಅನಿಸುತ್ತಿದೆ. ಇನ್ನೂ ಒಂದು ವಿಷಯವಿದೆ, ಇಂಥ ಪದ್ಯಗಳ ಮಿತಿ ಎಂದರೆ ಯಾವ ಪದ್ಯದ ಸಾಲನ್ನು ಇದೇ ಸಂಕಲನದ ಬೇರೆ ಪದ್ಯದ ಸಾಲಿನೊಳಗೆ ಸೇರಿಸಿಬಿಟ್ಟರೆ ಅಂಥ ವ್ಯತ್ಯಾಸವೇನೂ ಆಗದು. ಈ ಕಾರಣಕ್ಕೆ ಇಂಥವು ಒಳ್ಳೆಯ ಪದ್ಯಗಳು ಅನಿಸಲಾರವು, ಹೆಚ್ಚುಕಾಲ ಉಳಿಯಲಾರವು, ಉತ್ತಮ ಕಾವ್ಯದಲ್ಲಿ ಒಂದು ಪದವನ್ನು ಸೇರಿಸಲೂ ಆಗಬಾರದು, ತೆಗೆಯಲೂ ಆಗಬಾರದು, ಅಂಥ ಕಾವ್ಯವನ್ನು ನಾನು ವಾಸುವಿನಿಂದ ನಿರೀಕ್ಷೆ ಮಾಡುತ್ತಿದ್ದೇನೆ.

ಓದಿನ ಹರಹು ಹಾಗೂ ರಚನೆಯ ಶಕ್ತಿಯ ಹಿನ್ನೆಲೆಯಲ್ಲಿ ವಾಸು ಇದನ್ನು ಸಾಧಿಸಬಲ್ಲ. ಅದಾಗಲಿ, ಇದುವರೆಗಿನ ವಾಸು ಕವಿತೆ ವಚನಗಳಂತೆ ಒಂದು ಬಗೆಯ ಏಕತಾನತೆಯಲ್ಲಿ ಕಾಣಿಸುತ್ತಿವೆ, ಅವನ ಮೊದಲ ಸಂಕಲನದಿAದ ಇಲ್ಲಿಯವರೆಗಿನ ಯಾವ ಪದ್ಯವನ್ನು ಓದಿದರೂ ಅದು ಒಂದೇ ಬಗೆಯ ಶೈಲಿಯಲ್ಲಿ ಮೈತಾಳಿದ್ದು ಗ,ಮನಕ್ಕೆ ಬರುತ್ತದೆ, ವಚನಗಳನ್ನು  ಅಂಕಿತ ತೆಗೆದು ಓದಿದರೆ ಯಾವ ವಚನ ಬಸವಣ್ಣನದು, ಯಾವುದು ಅಲ್ಲಮನದು ಎಂದು ಹೇಳುವುದು ಕಷ್ಟ. ವಾಸೂ ಪದ್ಯಗಳು ಸದ್ಯ ಈ ಸ್ಥಿತಿ ತಲುಪಿವೆ. ಪದ್ಯಗಳಿಗೂ ಬದಲಾವಣೆ ಬೇಕಲ್ವಾ. ಈ ಕಾರಣಕ್ಕೆ. ವಾಸು ಬೆಳೆಯಲಿ ಎಂಬ ಕಾರಣಕ್ಕೆ. ಈ ಸಂಕಲನದ ಪದ್ಯಗಳಿಗೆ ಭಾರತೀಯ ಅಧ್ಯಾತ್ಮದ ಗಂಧವಿದೆ, ಇಂಥ ಜನರೊಡನೆ ಇದ್ದರೂ ಇಲ್ಲದಂತೆ ಅಂದರೆ ನೀರಿನಲ್ಲಿ ಕಮಲದ ಎಲೆ ಹರಡಿಕೊಂಡಿದ್ದರೂ ಅದು ನೀರನ್ನು ಅಂಟಿಸಿಕೊಳ್ಳದಂತೆ ಇರದಂತೆ ಇಲ್ಲಿ ಇರಬೇಕೆಂಬುದು ಕವಿಯ ಆಶಯ. ನಿಜ, ನಮಗೆ ಅನೇಕ ಬಾರಿ ಇಂಥವರೊಂದಿಗೆ ಹೇಗಪ್ಪಾ ಏಗುವುದು ಅನಿಸುತ್ತದೆ, ಆದರೆ ದು ಜೀವನ. ಇಲ್ಲಿ ಇದ್ದಂತೆಯೂ ಇಲ್ಲದಂತೆಯೂ ಇರಬೇಕಾದುದು ಅನಿವಾರ್ಯ. 

ಈ ಸಂಕಲದಲ್ಲೂ ವಾಸೂವಿನ ಚಿತ್ರಕವಿತ್ವ ಉಳಿದಿದೆ, ಕೆಲವು ಬಹಳ ಶಕ್ತಿಯುತವಾಗಿ ಬಂದಿವೆ, ಈ ಕಾರಣದಿಂದ ವಾಸುದೇವ್ ನಾಡಿಗ್ ಹೊಸ ಕವಿಗಳ ಸಾಲಿನಲ್ಲಿ ಮುಂದೆ ಇದೆ. ಅವನಿಗೆ ಸ್ವಂತಿಕೆ ಇದೆ. ತಮ್ಮ ಪದ್ಯಗಳ ಹಣೆಬಹೆಹವನ್ನು ತಾವೇ ಬಗೆದು ನೋಡಿದ್ದಾರೆ. ಇದು ವಾಸುದೇವ್ ನಾಡಿಗ್ ರ ಹೊಸ ಕವನ ಸಂಕಲನವೇ ವಿನಾ ಕನ್ನಡಕ್ಕೆ ಹೊಸದನ್ನೇನಾದರೂ ಕೊಡುವ ಸಂಕಲನವಲ್ಲ, ಎಂದಿನ ವಾಸುದೇವ್ ಇಲ್ಲಿಯೂ ಪುನರುತ್ಪಾದನೆ ಆಗಿದ್ದಾನೆ. ಆದರೆ ಇದರಲ್ಲಿ ಆಧುನಿಕ ಜೀವನದ ಒತ್ತಡದಲ್ಲಿ ಕನಿಷ್ಠ ಮಾನವೀಯ ಸಂಬಂಧಗಳನ್ನು ಕಾಣಲು ಆಗದ ಅಸಹಾಯಕ ಸ್ಥಿತಿಯನ್ನೇ ಇಲ್ಲಿ ಕಾವ್ಯವಾಗಿಸಿದ್ದಾರೆ, ಇದನ್ನು ಗಮನಿಸಿದರೆ ವಾಸು ಹೊಂದಿರುವ ಕಾವ್ಯ ಶಕ್ತಿ ಎಂಥದ್ದು ಎಂಬುದು ಅರಿವಾಗುತ್ತದೆ, ಖುಷಿಯೂ ಅಚ್ಚರಿಯೂ ಆಗುತ್ತದೆ, ಕಾವ್ಯಕ್ಕೆ ಏನೆಲ್ಲವೂ ವಸ್ತುವಾಗಬಲ್ಲವು ಇದಕ್ಕೆ ಇಲ್ಲಿ ವಾಸು ಸಾಮಗ್ರಿ ಒದಗಿಸಿದ್ದಾರೆ.  

ಜೀವನದ ವೈರುಧ್ಯ, ವಿರೋಧಾಭಾಸಗಳನ್ನು ರಹಸ್ಯ, ವೈಚಿತ್ರ್ಯಗಳನ್ನು ಹಾಗೂ ಉತ್ತರ ಸಿಗದ ಪ್ರಶ್ನ್ನೆಗಳನ್ನು ಕಂಡು ಅವುಗಳನ್ನೇ ಪ್ರತೀಮಾತ್ಮಕ ರೂಪದಲ್ಲಿ ಕಾವ್ಯ ಮಾಡುತ್ತ ಓದುಗರ ಬುದ್ಧಿಗೆ ಇಷ್ಟು ಕಾಲ ಕೆಲಸ ಕೊಡುತ್ತ ಬಂದ ವಾಸುವಿಗೆ ಬದುಕಿನ ಸಂಕಟಗಳೂ ಸಾಕಷ್ಟು ಪರಿಚಿತ, ಇವೆಲ್ಲ ಭಾವಲಹರಿಯ ರೂಪದಲ್ಲಿ ಓದುಗನ ಮನ ತಟ್ಟಿ ಸವನ ಮನದ ಸಂಕಟಗಳು ಕೊಚ್ಚಿಹೋಗುವಂಥ ಪದ್ಯ ರಚನೆ ಇನ್ನು ಮುಂದೆ ವಾಸುವಿನ ಪೆನ್ನಿ ನಿಂದ ಮೂಡಿಬರಲಿ ಎಂಬುದಷ್ಟೇ ನನ್ನ ಆಶಯ. 


ಕೃತಿ ವಿವರ - ಇರು ಇರದಂತೆ ಇರು,ಕವನ ಸಂಕಲನ

ವಾಸುದೇವ್ ನಾಡಿಗ್,

ಪ್ರಕಾಶಕರು- ಗೋಮಿನಿ ಪ್ರಕಾಶನ, ತುಮಕೂರು

ಮೊದಲ ಮುದ್ರಣ-೨೦೨೪, ಬೆಲೆ ೧೨೦ ರೂ. ಐಎಸ್‌ಬಿಎನ್-೯೭೮-೮೧-೯೮೧೭೪೭-೮-೯

ಮ್ಯಾಪ್ಲಿತೋ, ೭೦ ಜಿಎಸ್ ಎಂ ಕಾಗದ.

   


Wednesday, 5 March 2025

ಎಲ್ಲರ ಬಳಿಯೂ ಇರಬೇಕಾದ ಮಿತ್ರಾರ್ಜಿತ


ಹಿರಿಯರಾದ ಎ ಎನ್ ಮೂರ್ತಿರಾವ್, ಗೊರೂ ರಾಮಸ್ವಾಮಿ ಅಯ್ಯಂಗಾರ್ ಅವರಂಥವರು ಬೆಳೆಸಿದ ಕನ್ನಡ ಲಲಿತ ಪ್ರಬಂಧ ಪ್ರಕಾರವನ್ನು ಮತ್ತಷ್ಟು ಬೆಳೆಸಿ ವಿಸ್ತರಿಸಿದವರು ಅ. ರಾ ಮಿತ್ರರು.  ಇದು ಇವರ ಹೆಚ್ಚುಗಾರಿಕೆ. ಲಲಿತ ಪ್ರಬಂಧಕ್ಕೆ ಅವರು ತೆಗೆದುಕೊಳ್ಳುವ ವಸ್ತುಗಳು ಬೆರಗು ಹುಟ್ಟಿಸುತ್ತವೆ, ೧೯೩೫ ಫ಼ೆಬ್ರವರಿ ೨೫ರಂದು ಜನಿಸಿದ ಮಿತ್ರವರಿಗೆ ಈಗ ತೊಂಬತ್ತು. ಅದು ಕೇವಲ ಅವರ ಜನನ ದಿನದಿಂದ ಇಲ್ಲಿಯವರೆಗಿನ ವರ್ಷಗಳ ಲೆಕ್ಕ. ಆದರೆ ಅವರು ಮಾನಸಿಕವಾಗಿ ಯುವಕರು, ಯುವಕರು ನಾಚುವಂಥ ಯೌವ್ವನ ಅವರದು. ಅವರು ಹಳ್ಳಿಯ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಕಷ್ಟಕಪಟ್ಟು ಓದಿ ಅಲ್ಲಿಯೂ ಮಿತ್ರರನ್ನು ಸಂಪಾದಿಸಿ ಕನ್ನಡ ಉಪನ್ಯಾಸಕರಾಗಿ, ಪಾಚಾರ್ಯರಾಗಿ, ಅನೇಕ ಕಡೆ ದುಡಿದು, ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳಿಸಿ ಹಲವರನ್ನು ಬೆಳೆಯಿಸಿ ಧನ್ಯರಾದರು. ಇಂದಿಗೂ ಅವರು ಹಿಂದೆ ಬಿಟ್ಟುಹೋದ ಎಲ್ಲ ಕಡೆಯವರು ಇಂದಿಗೂ ಛೆ. ಮಿತ್ರವರು ನಮ್ಮೊಂದಿಗೆ ಈಗಲೂ ಇದ್ದಿದ್ದರೆ ಅನ್ನುತ್ತಾರೆಂದರೆ ಇದು ಒಬ್ಬ ವ್ಯಕ್ತಿ ಗಳಿಸ ಬೇಕಾದುದು, ಹುಟ್ಟಿದ ಮೇಲೆ ಸಾರ್ಥಕ ಅನಿಸಿಕೊಳ್ಳಲು ಅಗತ್ಯವಾದುದು. ಇದನ್ನು ಅವರು ಮಾಡಿಸಾಧಿಸಿದ್ದಾರೆ, ಅವರು ಹೋದಲ್ಲೆಲ್ಲ ಅರ್ಜಿಸಿದ್ದು ಇದನ್ನೇ, ನಾನಂತೂ ಅವರ ಸಂಪರ್ಕ ಪಡೆದು ಅವರನ್ನು ಅರ್ಜಿಸಿಕೊಂಡಿದ್ದೇನೆ. (ಸಂಪಾದಿಸಿಕೊಂಡಿದ್ದೇನೆ). ಇಷ್ಟು ಸಾಕು ನನಗೆ. ನಿಮಗೆ? ಜೊತೆಗೆ ಮಿತ್ರಾರ್ಜಿತವನ್ನೂ ಅರ್ಜಿಸಿಕೊಂಡಿದ್ದೇನೆ. ನೀವು?

ಅವರು ಅ ರಾ ಮಿತ್ರರು. ಅವರ ಹೆಸರೇ ಹೇಳುವಂತೆ ಎಲ್ಲರ ಮಿತ್ರರು ಅವರು ಅರಿ ಮಿತ್ರರು ಕೂಡ. ಅಷ್ಟಕ್ಕೂ ಅವರಿಗೆ ಅರಿಗಳೇ ಇಲ್ಲ ಅನಿಸುತ್ತದೆ, ಮೊದಲನೆಯದಾಗಿ ಅವರ ಸ್ವಭಾವ ಅಂಥದ್ದಲ್ಲ, ಎರಡನೆಯದಾಗಿ ಅವರ ವೃತ್ತಿ ಪ್ರವೃತ್ತಿ ಕೂಡ ಎಲ್ಲರನ್ನೂ ಬೆಸೆಯುವಂಥದ್ದು, ಅದು ೨೦೧೧ರ ಅವಧಿ. ತುಮಕೂರು ವಿಶ್ವವಿದ್ಯಾನಿಲಯ ಕನ್ನಡದ ಖ್ಯಾತ ಕವಿ ಕುಮಾರ ವ್ಯಾಸನನ್ನು ಕುರಿತ ಅಧ್ಯಯನಕ್ಕಾಗಿ ಪೀಠವೊಂದನ್ನು ಸ್ಥಾಪಿಸಿ ಅದಕ್ಕೆ ನನ್ನನ್ನು ಸಂಯೋಜಕನನ್ನಾಗಿ ನೇಮಿಸಿತ್ತು.ನನಗೆ ಆಗ  ಸೂಕ್ತ ಮಾರ್ಗದರ್ಶನದ ಅಗತ್ಯವಿತ್ತು, ಗುರುಗಳಾದ ಪ್ರೊ. ಟಿ ವಿ ವೆಂಕಟಾಚಲ ಶಾಸ್ತ್ರಿಗಳು ಬೆನ್ನ ಹಿಂದೆ ಇದ್ದರು, ಜೊತೆಗೆ ಬಹು ಪ್ರಮುಖವಾದ ಯೋಜನೆಯೊಂದನ್ನು ಸಿದ್ಧಪಡಿಸಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದಾಗ ಅದಕ್ಕೆ ಅನುಮತಿ ಸಿಕ್ಕಿತು. ಅದು ಕುಮಾರವ್ಯಾಸ ಭಾರತದ ಪರಿಷ್ಕೃತ ಸಂಪುಟ ಹೊರತರುವುದು, ಇದಕ್ಕಾಗಿ ಒಂದು ತಜ್ಞ ಸಮಿತಿ ಮಾಡಬೇಕಿತ್ತು, ಶಾಸ್ತ್ರಿಗಳು ಅಧ್ಯಕ್ಷರು ಇದರಲ್ಲಿ ಮಾನ್ಯ ಅ ರಾ ಮಿತ್ರರು ಕೂಡ ಒಬ್ಬ ಪ್ರಮುಖ ಸಲಹಾಗಾರರು. ಆಗ ಹೆಚ್ಚೂಕಡಿಮೆ ವಾರಕ್ಕೊಮ್ಮೆ ಗಣಕ ಪರಿಷತ್ತಿನಲ್ಲಿ ಕುಮಾರವ್ಯಾಸ ಕೃತಿ ಕುರಿತು ಚರ್ಚೆ, ಸಭೆ ಈ ಸಮಯ ನನ್ನ ಜೀವನದ ಸೌಭಾಗ್ಯ. ಎಂತೆಂಥ ಸಭೆ-ಚರ್ಚೆ!. ಇದನ್ನು ಕುರಿತೇ ಪ್ರತ್ಯೇಕ ಬರೆಯಬೇಕಿದೆ. ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ಆರರವರೆಗೆ ನಡೆಯುತ್ತಿತ್ತು. ಊಟ ತಿಂಡಿ, ಕಾಫಿ ಎಲ್ಲ ಅಲ್ಲೇ. ಆದರೆ ತರಿಸಿದ ಅನ್ನಾಹಾರಗಳೆಲ್ಲ gಆರಿಹೋಗಿರುತ್ತಿದ್ದವು. ಸಭೆಯ ಸ್ವಾರಸ್ಯ, ರುಚಿ ಹಾಗೆ ಇರುತ್ತಿತ್ತು, ಒಂದೊಂದು ಪದ್ಯದ ಪದಗಳ ಅರ್ಥ, ಹಿಂದಿನ ವ್ಯಾಖ್ಯಾನಕಾರರು ಕೊಟ್ಟ ಅರ್ಥ ಪರಿಶೀಲನೆ ಮಧ್ಯೆ ಮಧ್ಯೆ ಹರಟೆ, ಸಲ್ಲಾಪ, ಹಳೆಯ ಹಿರಿಯ ಸಾಹಿತಿಗಳೊಂದಿಗಿನ ಒಡನಾಟದ ನೆನಪು ಹೊರಹಾಕುತ್ತಿದ್ದ ಶಾಸ್ತ್ರಿಗಳು ಮತ್ತು ಮಿತ್ರರು. ನಾವೆಲ್ಲ ಆಸಕ್ತಿ, ಕುತೂಹಲದಿಂದ ಮುಂದೆ ಎಂದು ಕಾದಿರುತ್ತಿದ್ದ ಸಂದರ್ಭ.ಅಬ್ಬಬ್ಬಾ! ಮತ್ತೆ ಮುಂದಿನ ಸಭೆಗೆ ಕಾಯುವ ಮೊದಲೇ ಅಲ್ಲೇ ದಿನಾಂಕ ನಿಗದಿ ಆಗುತ್ತಿತ್ತು. ಆ ಸಮಯದಲ್ಲಿ ಮಾನ್ಯ ಮಿತ್ರರ ಹಾಸ್ಯದ ಜೊತೆಗೆ ವಿದ್ವತ್ತಿನ ಪರಿಚಯ ಹತ್ತಿರದಿಂದ ಆಯಿತು. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಕುಮಾರವ್ಯಾಸ ಏನು ಹೇಳೈ ಕರ್ಣ ಚಿತ್ತ ಪದ್ಯದಿಂದ ಪರಿಚಿತನಾಗಿ ಪ್ರಿಯನಾಗಿದ್ದ, ಕಾಲೇಜು ದಿನಗಳಲ್ಲಿ ಸಂಕಲ್ಪಗಳು ಮತ್ತಿತರ ಪ್ರಬಂಧಗಳಿಂದ ಮಿತ್ರರು ಪ್ರಿಯರಾಗಿ ಹೋಗಿದ್ದರು. ಯೋಗಾಯೋಗ ಇವೆರಡೂ ಈ ಪೀಠದ ನೆಪದಲ್ಲಿ ನನ್ನ ಜೀವನದಲ್ಲಿ ಕೂಡಿದವು. ಅಷ್ಟರಲ್ಲಿ ಮಿತ್ರರ ಕುಮಾರವ್ಯಾಸ ಭಾರತ ಕುರಿತ ಕೃತಿ ಹೊರಬಂದಿತ್ತು. ಅದೊಂದೇ ಅಲ್ಲ, ಆ ಕೃತಿ ಹೊರತರುವಾಗ ಅವರು ಮಾಡಿದ್ದ ಅಧ್ಯಯನ ಮಾಡಿದ್ದ ಪ್ರತೀ ಕೃತಿಗಳ ಪುಟ ಪುಟದ ಶಬ್ದಗಳೂ ಅವರ ಬಾಯಲ್ಲಿತ್ತು. ಸಂದ?ರ್ಭ ಬಂದಾಗಲೆಲ್ಲ ಹಾಗೆಯೇ ಉದುರುತ್ತಿದ್ದವು. ಅದರ ಅರ್ಥ- ವಿರುದ್ಧಾರ್ಥ ಆ ಪದ ಬಳಸಿ ರಚಿತವಾದ ಇತರರ ಕೃತಿಗಳು- ಅದರ ವಿಶೇಷ- ಒಂದೇ ಎರಡೇ.ಅವರು ಕನ್ನಡ ಸಾಹಿತ್ಯದ ಶಬ್ದಕೋಶ ವಿಶ್ವಕೋಶ ಎರಡೂ ಹೌದು ಅನಿಸಿತು. ನನ್ನ ಇನ್ನೊಂದು ಭಾಗ್ಯ ಮಾನ್ಯ ಶಾಸ್ತ್ರಿಗಳು ಜೊತೆಗಿದ್ದುದು, ಅವರು ಕೂಡ ಹಳೆಗನ್ನಡ, ವ್ಯಾಕರಣ, ಛಂದಸ್ಸು, ಶಾಸನ ಇತ್ಯಾದಿಗಳ ವಿಶ್ವಕೋಶ, ಇಂಥ ಒಡನಾಟ ಸಿಕ್ಕಿದ್ದು ಸುಕೃತ. ಅದಾಯಿತು. ಕೃತಿ ಕೂಡ ಸೊಗಸಾಗಿ ಕನ್ನಡ ಗಣಕ ಪರಿಷತ್ತಿನ ವತಿಯಿಂದ ಹೊರಬಂದು ಜನಮನ್ನಣೆ ಪಡೆಯಿತು. ಅದು ಕುಮಾರವ್ಯಾಸ ಭಾರತ ಕೃತಿ ಕುರಿತ ಬರೀ ಪರಿಷ್ಕಾರವಲ್ಲ. ಸಮಗ್ರ ವಿಶ್ವಕೋಶ. ಆ ಎರಡು ಸಂಪುಟಗಳನ್ನು ಗಮನಿಸಿದವರು ಹೇಳುವ ಮಾತು ಇದು, ಕನ್ನಡದಲ್ಲಿ ಅಂಥ ಕೃತಿ ಇದೇ ಮೊದಲಬಾರಿ ಬಂದಿದೆ ಅನ್ನುವಷ್ಟರ ಮಟ್ಟಿಗೆ ಅದು ಆಧುನಿಕ ಸಿಡಿ ರೂಪದಲ್ಲೂ, ಗಾಯನಗಳ  ಜೊತೆಗೂ ಹೊರಬಂದಿದೆ.ಇದಕ್ಕೆ ಕಾರಣಕತೃರು ಈ ಇಬ್ಬರು ಹಿರಿಯರು ಕಾರಣ. ಈ ನೆಪದಲ್ಲಿ ಮಿತ್ರರ ಜೊತೆ ಅನೇಕಾನೇಕ ದಿನ ಕಳೆಯುವಂತಾಯ್ತಲ್ಲ, ಅಷ್ಟು ಸಾಜು ನನ್ನ ಭಾಗ್ಯಕ್ಕೆ. ಉಳಿದಂತೆ ಗಣಕ ಪರಿಷತ್ತಿನ ಶ್ರೀ ನರಸಿಂಹ ಮೂರ್ತಿ, ಶಬ್ದಕೋಶ ಪಂಡಿತರಾದ ಶ್ರೀ ಕೃಷ್ಣ, ಸಂಯೋಜಕ ನಾನು, ಹಾಗೂ ಗಮಕಿಗಳಾದ ಡಾ. ಎ ವಿ ಪ್ರಸನ್ನ, ಶಾಸನ ತಜ್ಞರಾದ ಡಾ. ಗಣೇಶ್. ಆ ಸಭೆಗಳು ಹೇಗೆ ಇರುತ್ತಿದ್ದವೆಂದರೆ ಇದರಲ್ಲಿ ಪಾಲ್ಗೊಂಡಿದ್ದೇ ಪೂರ್ವಜನ್ಮ ಸುಕೃತ. ಈ ಬಗ್ಗೆ ಮತ್ತೆ ಬರೆಯುವೆ, ಆ ಹರಟೆ, ವಿದ್ವತ್ ಚರ್ಚೆ ಗೋಷ್ಠಿ, ತಮಾಷೆ, ಸ್ವಾರಸ್ಯ ಬಣ್ಣಿಸಲು ಕಷ್ಟ. ಸುಮ್ಮನೇ ಪದ್ಯಗಳ ಮೇಲೆ ಕಣ್ಣಾಡಿಸುತ್ತ ಕುಳಿತಿರುತ್ತಿದ್ದ ಮಿತ್ರರು ದಿಢೀರನೆ ಇಲ್ಲಿ ನೋಡಿ ಈ ಕುಮಾರ ವ್ಯಾಸ ಎಂಥ ಕಿಡಿಗೇಡಿ ಅನ್ನುತ್ತ ಒಂದು ಪದ ಹಿಡಿದು ಅರೆಯುತ್ತಿದ್ದರು ಇದಕ್ಕೆ ಶಾಸ್ತ್ರಿಗಳ ಪೂರಕ ಸೇರ್ಪಡೆಗಳು, ಪ್ರಸನ್ನರ ವ್ಯಾಖ್ಯಾನ, ಕೃಷ್ಣ ಅಥವಾ ಗಣೇಶರ  ಸಾಹಿತ್ಯದಒಗ್ಗರಣೆ- ಮೂರ್ತಿಗಳ ಮೇಲೋಗರ. ಆಗಾಗ ಬಂದು ವೀಕ್ಷಿಸುತ್ತಿದ್ದ ಮೈಸೂರಿನ ಪ್ರೊ. ಪಂಡಿತಾರಾಧ್ಯ, ಪರಿಷತ್ತಿನ ಶ್ರೀನಿವಾಸ ಶಾಸ್ತ್ರಿಗಳ ಮೆಲುಕಾಟ. ಒಂದಕ್ಕಿಂತ ಒಂದು, ಹೊತ್ತು ಹೋಗಿದ್ದೇ ತಿಳಿಯುತ್ತಿರಲಿಲ್ಲ. ಇಂಥ ಸಭೆಗಾಗಿ ಮತ್ತೆ ಇಂಥ ಸಾಹಿತ್ಯಕ ಯೋಜನೆ ರೂಪಿಸಬೇಕಿದೆ. ಆಗ ಅನಿಸಿದ್ದು ಕನ್ನಡದಲ್ಲಿ ಇಂಥ ಗೋಷ್ಠಿ- ಸಭೆಗಳು ಸಾರ್ವಕಾಲಿಕ ದಾಖಲೆಯಾಗಿ ಡಿಜಿಟಲ್ ರೂಪದಲ್ಲಿರಬೇಕು ಅನಿಸಿದ್ದಿದೆ, ನೋಡುವಾ ಮೂರ್ತಿಗಳು ಮನಸ್ಸು ಮಾಡಿದರೆ ಆಗಬಹುದು. ಇದರಿಂದ ಹಿರಿಯರ ವಾದಗಳ ಸ್ವರೂಪ ಕನ್ನಡ ವಿದ್ವತ್ ಪರಂಪರೆಯ ಸ್ವರೂಪ ದಾಖಲಾಗುತ್ತದೆ, ಮುಂದಿನ ತಲೆಮಾರಿಗೆ ಮಾದರಿಯಾಗುತ್ತದೆ.

ಕನ್ನಡದ ಅಪೂರ್ವ ಸಾಹಿತಿಗಳಲ್ಲೊಬ್ಬರಾದ ಮಿತ್ರರು ಇದೀಗ ತೊಂಬತ್ತು ಸಾರ್ಥಕ ವಸಂತಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಶಿಷ್ಯಕೋಟಿ ಮತ್ತು ಅವರು ಅರ್ಜಿಸಿದ ಅಪಾರ ಸ್ನೇಹ ಹಾಗೂ ಅಭಿಮಾನ ವರ್ಗ ಅವರಿಗೆ 'ಮಿತ್ರಾರ್ಜಿತ ಎಂಬ ಕೃತಿಯನ್ನು ಈಚೆಗೆ ಸಮರ್ಪಿಸಿದೆ, ಒಬ್ಬ ಸಜ್ಜನ ತಾನು ಬಾಲ್ಯದಲ್ಲಿ ಪಡೆದ ಮೌಲ್ಯವನ್ನು ಶಿಸ್ತಿನಿಂದ ಪಾಲಿಸಿದರೆ ಏನೆಲ್ಲ ಅರ್ಜಿಸಬಹುದು ಎಂಬುದು ಈ ಸಾರ್ಥಕ ಕೃತಿಯಿಂದ ತಿಳಿಯುತ್ತದೆ. ಈ ಕೃತಿಯಲ್ಲಿ ಅವರು ಅರ್ಜಿಸಿದ ಭೌತಿಕ ಆಸ್ತಿಪಾಸ್ತಿಗಳ ವಿವರ ಕಿಂಚಿತ್ತೂ ಇಲ್ಲ, ನಮಗೆ ಅದರ ಅಗತ್ಯವೂ ಇಲ್ಲ, ಆದರೆ ಒಬ್ಬ ಸಜ್ಜನ ವ್ಯಕ್ತಿ ಏನನ್ನು ಅರ್ಜಿಸಬಹುದು, ಅದರ ಫಲವೇನು ಎಂಬ ಪಾಠ ಇಲ್ಲಿದೆ. ಈ ಕೃತಿಯಲ್ಲಿ ಅವರ ವ್ಯಕ್ತಿತ್ವದ ಹತ್ತುಮುಖ ತೋರಿಸುವ ೮೪ ಲೇಖನಗಳಿವೆ, ಒಂದೊಂದೂ ಮಾಹಿತಿಪೂರ್ಣ. ಮಿತ್ರರ ವ್ಯಕ್ತಿತ್ವ ತೋರಿಸುವ ಸ್ತುತ್ಯರ್ಹ ಪ್ರಯತ್ನ. ಇದರಲ್ಲಿ ಶತಾವಧಾನಿ ಗಣೇಶರ ಲೇಖನ ಮಿತ್ರರ ವ್ಯಕ್ತಿತ್ವವನ್ನು ಕನ್ನಡಿಯಲ್ಲಿ ಕರಿಯನ್ನು ತೋರಿಸುವ ಪ್ರಯತ್ನದಂತಿದೆ, ಉಳಿದವು ಇದನ್ನು ವಿಸ್ತರಿಸುವ ದಾಖಲೆ ಕೊಡುತ್ತವೆ. ಈ ಕೃತಿಯ ಇನ್ನೊಂದು ಮುಖ್ಯ ವಿಶೇಷವೆಂದರೆ ಬಹುತೇಕ ಇಂಥ ಕೃತಿಗಳು ಅಭಿನಂದಿತರ ಕುಟುಂಬ ವರ್ಗ ಹಾಗೂ ಶಿಷ್ಯವರ್ಗದಿಂದ ಜೈಕಾರ ಹಾಕಿಸುವ ಕೆಲಸ ಮಾಡಿ ಇಂಥ ಕೆಲಸ ಮಾಡಿದ ಪ್ರಪಂಚದಲ್ಲಿ ಬೇರೆ ಇಲ್ಲದವರು ಇವರೇ ಅನ್ನುವ ಕೆಲಸ ಮಾಡುವುದೇ ಹೆಚ್ಚು. ಒಂದು ರೀತಿಯಲ್ಲಿ ಅಭಿನಂದನ ಗ್ರಂಥಗಳು ವ್ಯಕ್ತಿಯ ಭಜನೆ ಮಾಡುತ್ತವೆ, ಆದರೆ ಇದು ಹಾಗಲ್ಲ, ಮಿತ್ರರ  ವ್ಯಕ್ತಿತ್ವದ ವಸ್ತುನಿಷ್ಠ  ಪರಿಚಯವನ್ನು ಮಾಡಿಕೊಡುತ್ತದೆ, ಇದನ್ನು ಓದಿದ ಅವರ ಪರಿಚಿತರು ಇಷ್ಟೇ ಅಲ್ಲ, ಇನ್ನೂ ಇದರಲ್ಲಿರಬೇಕಾದ ಸಂಗತಿಗಳು ಬೇಕಾದಷ್ಟಿವೆ, ಅನ್ನುವ ಅಸಮಾಧಾನ ಹುಟ್ಟುವಂತೆಯೂ ಬೇಕಾದರೆ ಮಿತ್ರರ ಅಭಿನಂದನಾ ಕೃತಿಯ ಮತ್ತಷ್ಟು ಸಂಪುಟಗಳನ್ನು ಹೊರತರುವಂತೆಯೂ ಆಸೆ ಹುಟ್ಟಿಸುತ್ತದೆ. ಇದು ಇದರ ವಿಶೇಷ, ಹೀಗೆ ಯಾವುದೇ ಕೃತಿ ಓದುಗನಲ್ಲಿ ಓದಿನ ಅತೃಪ್ತಿಯನ್ನು ಉಂಟುಮಾಡಬೇಕು ಆಗ ಅದು ಉತ್ತಮ ಕೃತಿಯಾಗುತ್ತದೆ, ಈ ಸಾಲಿಗೆ ಸೇರುವ ಅಭಿನಂದನ ಗ್ರಂಥ ಇದು.  ಮಿತ್ರರ ಪಾಲಿಗೆ ನಾನು ಒಬ್ಬ ಏಕಲವ್ಯನಂಥ ಶಿಷ್ಯ. ನನ್ನಂಥವರು ಅವರಿಗೆ ಸಹಸ್ರ ಸಂಖ್ಯೆಯಲ್ಲಿರಬಹುದು, ಆದರೆ ನಾನು ಈ ಕೃತಿಯನ್ನು ಓದುವಾಗ ಛೆ ಇದರಲ್ಲಿ ಬರೆಯುವ ಅವಕಾಶ ನನಗೆ ಸಿಗಲಿಲ್ಲವಲ್ಲಾ ಹೂವಿನ ಜೊತೆ ನಾರು ಕೂಡ ಸ್ವರ್ಗ ಸೇರಬಹುದಿತ್ತಲ್ಲಾ ಎಂದು ಪುಟ ಪುಟ ತಿರುಗಿಸಿದಾಗಲೂ ಅನಿಸಿದೆ, ಆದರೆ ಹೂವಿನ ಜೊತೆ ಸೇರಲೂ ನಾರು ಪುಣ್ಯಮಾಡಿರಬೇಕು. ನಿಜ. ನನ್ನ ಅನುಭವಕ್ಕೆ ಬಂತು. ಮಿತ್ರರ ಬರೆಹವನ್ನು ಒಮ್ಮೆ ಓದಿದರೆ ಅಲ್ಲಿ ವಿವರಿಸಿದಂಥ ಸಂದರ್ಭ ಬಂದಾಗಲೆಲ್ಲ ಓದುಗರು ಅವರನ್ನು ನೆನಪು ಮಾಡಿಕೊಳ್ಳುತ್ತಾರೆ,  ಇದು ಮಿತ್ರರ ಹೆಚ್ಚುಗಾರಿಕೆ, ಅವರು ಎಂಥ ಕಡೆಯಲ್ಲೂ ಹಾಸ್ಯ ಹುಡುಕಿ ಇದ್ಯಾಕೆ ನಮಗೆ ಹೊಳೆಯಲಿಲ್ಲ ಎಂದು ಹೊಟ್ಟೆ ಉರಿಯುವಂತೆ ಮಾಡಬಲ್ಲರು. ಕನ್ನಡದ ಪ್ರಸಿದ್ಧ ಗಾದೆ - ನಾರಿ ಮುನಿದರೆ ಮಾರಿ ಎಂಬುದು. ಇದರಲ್ಲೂ ಅವರಿಗೆ ಹಾಸ್ಯಕಂಡಿದೆ, ಆಯ್ತಪ್ಪಾ,ನಾನು ಮಾರಲು ತಯಾ ರು ಕೊಳ್ಳುವವತು ಯಾರು ಎಂಬುದು ಅವರ ಪ್ರಶ್ನೆ. ಇದನ್ನು ಓದಿದ ಮೇಲೆ ಯಾವುದೇ ಗಾದೆ, ನುಡಿಗಟ್ಟು ಓದಿದಾಗಲೂ ನಾನು ಹೀಗೆ ನೋಡಲು ಸಾಧ್ಯವೇ ಎಂದು ನೋಡುತ್ತೇನೆ. ಇಲ್ಲ ಇದುವರೆಗೆ ಒಂದೂ ಸಿಕ್ಕಿಲ್ಲ, ಇಂಥ ಇನ್ನೆಷ್ಟು ಅಸ್ತçಗಳು ಅವರ ಬತ್ತಳಿಳಿಕೆಯಲ್ಲಿವೆಯೋ? ಯಾವಾಗ ಹೊರಬರುತ್ತವೋ ನೋಡಬೇಕು, ಅವರ ಎಲ್ಲ ಬರೆಹಗಳೂ ಅಪೂರ್ವ, ಆದರೆ ಅವರ ಲಲಿತ ಪ್ರಬಂಧಗಳು, ಅದರಲ್ಲೂ ಸಂಕಲ್ಪಗಳು ಎಂಬ ಕೃತಿ ನನ್ನ ಪ್ರಕಾರ ಎವರ್ ಗ್ರೀನ್. ಅದು ನನ್ನ ಪಾಕಿಗೆ ಭಗವದ್ಗೀತೆಯಿದ್ದಂತೆ. ಮನಸ್ಸು ಭಾರ ಅನಿಸಿದಾಗಲೆಲ್ಲ ಇದು ನನ್ನ ನೆರವಿಗೆ ಬಂದಿದೆ, ಹೊಸ ಉತ್ಸಾಹ ತುಂಬಿದೆ. ಅವರ ಎಲ್ಲ ಕೃತಿಗಳೂ ನನ್ನ ಬಳಿ ಭದ್ರವಾಗಿವೆ ಎಂದು ಹೆಮ್ಮೆಯಿಂದ ಹೇಳುವೆ.ವಕನ್ನಡ ಸಹಿತ್ಯದಲ್ಲಿ ಕಥೆ, ಕಾದಂಬರಿ ಕಾವ್ಯ ಇತ್ಯಾದಿ ಬೇರೆ ಬೇರೆ ಪ್ರಕಾರಗಳಿವೆ, ಇವುಗಳಲ್ಲಿ ಹೆಚ್ಚು ಜನಪ್ರಿಯವಾದುದು ಕಾದಂಬರಿ, ಹೊಸ ಕಾದಂಬರಿ ಯಾವುದು ಬಂದಿದೆ ಎಂದು ಓದುಗರು ಸಾಮಾನ್ಯವಾಗಿ ಕಾಯುತ್ತಾರೆ, ಆದರೆ ಇಷ್ಟೇ ಗರಿಷ್ಠ ಸ್ಥಾನವನ್ನು ಲಲಿತ ಪ್ರಬಂಧಕ್ಕೆ ತಂದುಕೊಟ್ಟವರು ಮಿತ್ರರು. ಇzದು ಸಾಮಾನ್ಯ ಸಾಧನೆಯಲ್ಲ. ಕನ್ನಡ ಲಲಿತ ಪ್ರಬಂಧಕ್ಕೆ ಅರಾಮಿತ್ರ ಪರ್ಯಾಯವಾಗಿದ್ದಾರೆ. ಅವರ ಪ್ರಭಾವದಿಂದ ಬರವಣಿಗೆಗೆ ತೊಡಗಿದವರು ಅಸಂಖ್ಯ. ಇದು ಕೂಡ ಅವರಿಗೆ ಗಮನಕ್ಕೆ ಬಾರದ ಸಾಧನೆ.ಒಟ್ಟಿನಲ್ಲಿ ಖರೀದಿಸಿ ಓದಿದ ಅನಂತರ ಎದೆಗೆ ಅವುಚಿಕೊಳ್ಳುವ ಕೃತಿಯೊಂದು ಕನ್ನಡಕ್ಕೆ ಸಿಕ್ಕಿದೆ, ಇದರ ಸಂಪಾದಕರಾದ ರಾಮನಾಥ್ ಹಾಗೂ ಸೌಮ್ಯ ಮಿತ್ರ ಅವರು ಹಾಗೂ ಪ್ರಕಟಣೆ ಮಾಡಿದ ಬೆಂಗಳೂರಿನ ತೇಜು ಪಬ್ಲಿಕೇಶನ್ಸ್ ಬವರು ಕನ್ನಡಿಗರ ಅಭಿನಂದನೆಗೆ ಅರ್ಹರು.

ಈ ಕೃತಿಯಲ್ಲಿ ಒಂದು ನ್ಯೂನ ಕಾಣಿಸಿತು, ಅದು ಮಿತ್ರರ ಕೃತಿಗಳ ಪಟ್ಟಿ ಹಾಗೂ ಅವರ ಕಿರು ಪರಿಚಯ ಮಾಡುವ ಮಾಹಿತಿಯ ಪಟ್ಟಿ. ಹೊರತಾಗಿ ಇದೊಂದು ಮನೆ ಮನೆಯಲ್ಲಿ ಇರಬೇಕಾದ ಅಭಿನಂದನ ಕೃತಿ. ನೀವು ಸಾಹಿತ್ಯ ಪ್ರಿಯರಾಗಿದ್ದರೆ ಈ ಕೃತಿ ಇಲ್ಲದಿದ್ದರೆ ನಿಮ್ಮ ಗ್ರಂಥ ಸಂಗ್ರಹ ನಿಜಕ್ಕೂ ಅಪೂರ್ಣ ಎಂದಷ್ಟೇ ಹೇಳಬಹುದು. 

ಇಂಥ ಕೃತಿಯನ್ನು ಓದದವರ ಜೀವನ ವ್ಯರ್ಥ ಎಂದು ಸದ್ಯಕ್ಕೆ ಹೇಳಲು ಅಡ್ಡಿ ಇಲ್ಲ.ಈ ಕೃತಿ ಸಾಂಪ್ರದಾಯಿಕ ಪುಸ್ತಕ ಅಂಗಡಿಗಳಲ್ಲಿ ಮಾತ್ರವಲ್ಲದೇ ಅಂತರ್ಜಾಲದಲ್ಲೂ ಆನ್ ಲೈನ್ ನಲ್ಲಿ ಕೂಡಲೇ ಲಭ್ಯವಾಗಲಿ, ಜಗದಗಲ ಮಿತ್ರರ ಕಂಪು  ಹರಡಲಿ. 

ನಿಮ್ಮ ಬಳಿ ಪಿತ್ರಾರ್ಜಿತ ಇರಲಿ ಬಿಡಲಿ, ಆದರೆ ಮಿತ್ರಾರ್ಜಿತ ಇಲ್ಲದಿದ್ದರೆ ಅದು ಬಹುದೊಡ್ಡ ನಷ್ಟ. ಇದಕ್ಕೆ ಅವಕಾಶ ಕೊಡಬೇಡಿ.


ಪುಸ್ತಕ ವಿವರ- ಮಿತ್ರಾರ್ಜಿತ

 ಅರಾ ಮಿತ್ರ ಅಭಿನಂದನ ಗ್ರಂಥ

ಸಂಪಾದಕರು-ಎನ್ ರಾಮನಾಥ್ ಮತ್ತು ಸೌಮ್ಯ ಮಿತ್ರ. 

 ತೇಜು ಪಬ್ಲಿ ಕೇಶನ್ಸ, ಬನಶಂಕರಿ ಎರಡನೇ ಹಂತ, ಬೆಂಗಳೂರು

 ಬೆಲೆ- ರೂ ೪೫೦, ಮೊದಲ ಮುದ್ರಣ- ೨೦೨೫

ಪ್ರತಿಗಳಿಗೆ- ೯೪೪೮೦೫೦೫೬೩