ಕ್ರಿಸ್ ಮಸ್ ಎಂದ ಕೂಡಲೇ ಕ್ಯರೊಲ್, ಸ್ಯಾಂಟಾ ಕ್ಲಾಸ್ ಮುಂತಾದವುಗಳು ಸರ್ವೇ ಸಾಮಾನ್ಯವಾದ ಆಕರ್ಷಣೆಗಳು. ಇನ್ನು ಮನೆಯಲ್ಲಿ ತಿಂಡಿ ತಿನಿಸುಗಳನ್ನು ತಯಾರಿಸುವುದು, ಮನೆಯನ್ನು ’ಕ್ರಿಸ್ ಮಸ್ ಟ್ರಿ’, ’ನೆಟಿವಿಟಿ ದೃಷ್ಯದ’ ಗೊಂಬೆಗಳಿಂದ ಅಲಂಕರಿಸುವುದು, ಮನೆಯ ಮುಂದೆ ಕ್ರಿಸ್ ಮಸ್ ಸ್ಟಾರ್ ಆಕಾರದ ದೀಪಾಲಂಕಾರ ಮಾಡುವುದು ಕ್ರಿಸ್ ಮಸ್ ಹಬ್ಬದ ತಯಾರಿಯ ಭಾಗವಾಗಿವೆ. ಕ್ರಿಸ್ ಮಸ್ ಹಬ್ಬದ ಹಿಂದಿನ ರಾತ್ರಿಯ ಹಾಗೂ ಕ್ರಿಸ್ ಮಸ್ ಹಬ್ಬದ ಬೆಳಗಿನ ’ಮಾಸ್’ನಲ್ಲಿ ಭಾಗವಹಿಸಿ, ಮನೆಗೆ ಹಿಂದಿರುಗಿ ಊಟೋಪಚಾರಗಳನ್ನು ಮುಗಿಸಿದರೆ ಕ್ರಿಸ್ ಮಸ್ ಹಬ್ಬದ ಸಂಭ್ರಮಾಚರಣೆಗಳು ಮುಗಿದಂತೆ.
ಕ್ರಿಶ್ಚಿಯನ್ನರ ಪ್ರಕಾರ ಕ್ರಿಸ್ ಮಸ್ ಹಬ್ಬವು ಕ್ರಿಸ್ತನ ಜನನದ ಸಂಕೇತ. ಅವರ ಪ್ರಕಾರ ಮನುಷ್ಯರ ಉದ್ಧಾರಕ್ಕಾಗಿ, ಮನುಷ್ಯರನ್ನು ಅವರ ದುಸ್ಥಿಯಿಂದ ರಕ್ಷಿಸುವುದಕ್ಕಾಗಿ ಅವರು ನಂಬುವ ದೇವರು ನರವತಾರವೆತ್ತಿ ಲೋಕಕ್ಕೆ ಬಂದ ದಿನ. ಕ್ರಿಶ್ಚಿಯಾನಿಟಿಯ ಈ ಕಥಾನಕದ ಹಿನ್ನೆಲೆಯಲ್ಲಿ, ಇಡೀ ಪಾಶ್ಚಾತ್ಯ ಸಂಸ್ಕೃತಿಯು ಮನುಷ್ಯರನ್ನು ಕುರಿತು, ಅವರ ಸ್ಥಿತಿ-ಗತಿ, ಸ್ವಭಾವ, ಮನುಷ್ಯರ ಈ ವಿಮೋಚನಾ ಕಥಾನಕದಲ್ಲಿ ತಮ್ಮ ದೇವರ ಪಾತ್ರ ಇತ್ಯಾದಿ ಕುರಿತು ಅನೇಕ ಪರಿಕಲ್ಪನೆಗಳನ್ನು ಕಳೆದೆ ೨೦೦೦ ವರ್ಷಗಳಲ್ಲಿ ಕಟ್ಟಿಕೊಂಡಿದೆ. ಅಷ್ಟೇ ಅಲ್ಲದೆ, ಕ್ರಿಶ್ಚಿಯಾನಿಟಿಯು ಜಗತ್ತಿನ ಇತರೆ ಸಂಸ್ಕೃತಿಗಳಲ್ಲಿರುವ ಜನರನ್ನೂ ಸಹ ಇದೇ ದೃಷ್ಟಿಕೊನದಲ್ಲಿ ನೋಡುತ್ತದೆ. ಮುಂದುವರಿದು ಇದೇ ಪರಿಕಲ್ಪನೆಗಳನ್ನು ಆಧರಿಸಿ ಮಾನವರನ್ನು, ಮಾನವ ಸಮಾಜ ಸಂಸ್ಕೃತಿಗಳನ್ನು ಅಧ್ಯಯನ ಮಾಡುವ ವಿಧಾನಗಳನ್ನೂ ಪಾಶ್ಚಾತ್ಯ ಸಂಸ್ಕೃತಿ ಕಟ್ಟಿಕೊಟ್ಟಿದೆ.
ಆದರೆ ಇಂದು ಭಾರದಲ್ಲಿ ಕ್ರಿಸ್ ಮಸ್ ಹಬ್ಬ ಆಚರಿಸುವಾಗ, ಕ್ರಿಶ್ಚಿಯಾನಿಟಿ ಹೇಳುವ ಈ ಕಥಾನಕವನ್ನು ಕುರಿತು ಮಾತನಾಡಿದರೂ, ಭಾರತೀಯ ಸಂಪ್ರದಾಯಗಳಲ್ಲಿರುವ ಆಚರಣಾ ವಿಧಾನಗಳು ಕ್ರಿಸ್ ಮಸ್ ಆಚರಣೆಯಲ್ಲಿ ಬೆರೆತಿರುವುದು ಸ್ಪಷ್ಟವಾಗಿ ಕಾಣುತ್ತದೆ. ವಿಶೇಷವಾಗಿ ಭಾರತದ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯಗಳಲ್ಲಿ ಇದು ತೀವ್ರವಾಗಿ ಕಾಣುತ್ತದೆ. ಮಧ್ಯ ಏಶಿಯಾದ ಪ್ರಾಂತ್ಯಗಳಲ್ಲಿ ಆರಂಭವಾದ ಕ್ರಿಶ್ಚಿಯಾನಿಟಿಯು, ಯುರೋಪಿನಲ್ಲಿ ಹರಡುತ್ತಾ ಬಂದ ಸಂದರ್ಭದಲ್ಲಿ, ಮಾನವರ ಸ್ಥಿತಿಗತಿ, ಅವರ ಸ್ವಭಾವದ ಬಗ್ಗೆ ವಾದಗಳನ್ನು ಕಟ್ಟುಲು ಮುಂದಾಯಿತು. ಈ ಪ್ರಯತ್ನದ ಹಿಂದಿದ್ದ ಸಾಂಸ್ಕೃತಿಕ ಹಿನ್ನೆಲೆಯಾಗಲಿ, ಸಾಂಸ್ಕೃತಿಕ ಅನುಭವವಾಗಲಿ ಭಾರತೀಯ ಕ್ರಿಶ್ಚಿಯನ್ನರಿಗೆ ಪರಿಚಯವಿಲ್ಲ. ಅಷ್ಟೇ ಅಲ್ಲದೆ, ಪಾಶ್ಚಾತ್ಯ ಸಂಸ್ಕೃತಿಯಲ್ಲಿ, ಕ್ರಿಶ್ಚಿಯಾನಿಟಯ ಈ ಕಥಾನಕವು ಜನರ ಸಾಂಸ್ಕೃತಿಕ ಅನುಭವದ ಭಾಗವಾಗಿ, ಅವರ ಬದುಕನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ರೂಪಿಸಿ, ಆ ರೀತಿಯ ಬದುಕಿಗೆ ಜೋಡಣೆಯಾಗುವಂತೆ ವೈಚಾರಿಕ ಸಾಂಸ್ಥಿಕ ವ್ಯವಸ್ಥೆಗಳನ್ನು ನಿರ್ಮಾಣ ಮಾಡಿತು. ಅದರ ಪರಿಣಾಮವಾಗಿ ಮನುಷ್ಯರ ಬಗ್ಗೆ ಕ್ರಿಶ್ಚಿಯಾನಿಟಿ ಹೇಳಿವ ಕಥಾನಕವು ಇನ್ನೂ ಆಳವಾಗಿ ಪಾಶ್ಚಾತ್ಯರ ಅನುಭವದಲ್ಲಿ ಇಂದಿಗೂ ಬೇರೂರಿದೆ. ಭಾರತದಲ್ಲಿ ಈ ಯಾವುದೇ ವ್ಯವಸ್ಥೆಗಳು ಪಾಶ್ಚಾತ್ಯರ ಸಂದರ್ಭದಲ್ಲಿರುವಂತೆ ಅನುಭವ ಜನ್ಯವಾದವುಗಳಲ್ಲ. ಭಾರತದಲ್ಲಿರುವ ಚರ್ಚ್ ಗಳು, ಚರ್ಚ್ ಗೆ ಸಂಬಂಧಿಸಿದ ಸಂಸ್ಥೆಗಳು ಪಾಶ್ಚಾತ್ಯ ಕ್ರಿಶ್ಚಿಯನ್ ಮಿಷನರಿಗಳು ಕಟ್ಟಿದ ಪ್ರಯತ್ನಗಳೇ ವಿನಹ ಭಾರತೀಯ ಕ್ರಿಶ್ಚಿಯನ್ನರ ಅನುಭವದಿಂದ ಹುಟ್ಟಿದವುಗಳಲ್ಲ. ಭಾರತೀಯ ಸಂಸ್ಕೃತಿಯು ಸಹ ಮನುಷ್ಯನ ಸ್ಥಿತಿ-ಗತಿಯ ಬಗ್ಗೆ, ಕ್ರಿಶ್ಚಿಯಾನಿಟಿ ಹುಟ್ಟುವುದಕ್ಕೂ ಸಾವಿರಾರು ವರ್ಷಗಳ ಹಿಂದಿನಿಂದಲೇ ಆಲೋಚಿಸಿದೆ. ಮನುಷ್ಯನಿಗೆ ಆನಂದದ, ಮುಕ್ತಿಯ ಮಾರ್ಗವನ್ನು ಭಾರತೀಯ ಸಂಸ್ಕೃತಿಯು ತನ್ನ ಅನೇಕಾನೇಕ ಪರಂಪರೆಗಳ ಮೂಲಕ ಇಂದಿನ ತನಕ ದಾಟಿಸಿದೆ.
ಈ ಹಿನ್ನೆಲೆಯಲ್ಲಿ ಮನುಷ್ಯನ ಸ್ಥಿತಿ-ಗತಿಯನ್ನು ಕುರಿತು, ಆನಂದದ ಮಾರ್ಗವನ್ನು ಕುರಿತು ಎರಡು ಸಂಸ್ಕೃತಿಗಳು ಎರಡು ಸಂಪೂರ್ಣವಾಗಿ ಭಿನ್ನವಾದ ದಾರಿಗಳನ್ನು ತೆಗೆದುಕೊಂಡಿವೆ ಎಂದಂತೂ ಹೇಳಬಹುದು. ಒಂದು ಕಡೆ ಪಾಶ್ಚಾತ್ಯ ಜಗತ್ತಿನಲ್ಲಿ ಯೆಹೂದಿ ಪರಂಪರೆಯು ಮನುಷ್ಯರ ಸ್ಥಿತಿ-ಗತಿಯ ಬಗ್ಗೆ ವಿಚಾರಮಾಡಿದ ಸವಾಲುಗಳಿಗೆ ನಿತ್ಯ ಪರಿಹಾರ ಎಂಬಂತೆ ಕ್ರಿಶ್ಚಿಯಾನಿಟಿಯು ಕ್ರಿಸ್ ಮಸ್ ಕಥಾನಕವನ್ನು ಕಟ್ಟಿ ಬೆಳೆಸಿದೆ. ಇನ್ನೊಂದು ಕಡೆ ಭಾರತೀಯ ಸಂಸ್ಕೃತಿಯು ಅದೇ ರೀತಿಯ ಸವಾಲಿಗೆ ನಿತ್ಯ ಪರಿಹಾರವಾಗಿ ಮುಕ್ತಿ ಮಾರ್ಗವನ್ನು ಇತಿಹಾಸ ಹಾಗೂ ಇತರೆ ಪರಂಪರೆಗಳ ಮೂಲಕ ಕಟ್ಟಿ ಕೊಟ್ಟಿದೆ. ಒಂದು ಕಡೆ ಈ ವಿಚಾರಕ್ಕೆ ಸಂಬಂಧಿಸಿದ ಚರ್ಚೆಗಳು ತನ್ನದೇ ರೂಪ ಪಡೆದುಕೊಂಡು ಕ್ರಿಶ್ಚಿಯಾನಿಟಿಯ ಚೌಕಟ್ಟಿನಲ್ಲಿ ರಿಲಿಜಿಯಸ್ ಡಾಕ್ಟ್ರಿನ್ನು ಗಳಾಗಿ ಪ್ರಶ್ನಾತೀತ ವಿಚಾರಗಳಾಗಿ ಬೆಳೆದಿವೆ. ಮತ್ತೊಂದು ಕಡೆ ಭಾರತೀಯ ಪರಂಪರೆಗಳು ಬೇರೆಯದೇ ರೂಪ ಪಡೆದುಕೊಂಡು ಇದನ್ನು ಜ್ಞಾನವಾಗಿ, ಸಂವಾದದ ವಿಷಯವನ್ನಾಗಿಸಿಕೊಂಡಿದೆ. ಕ್ರಿಶ್ಚಿಯಾನಿಟಿಯ ಪ್ರಕಾರ ಆನಂದದ ಬದುಕು ಈ ಜಗತ್ತಿನಲ್ಲಿ ಸಾಧ್ಯವಿಲ್ಲ. ಭಾರತೀಯ ಪರಂಪರೆಗಳು ಹಾಗೂ ಇಲ್ಲಿನ ಸಂಪ್ರದಾಯಗಳು ಆನಂದದ ಬದುಕು ಈ ಜಗತ್ತಿನಲ್ಲಿ ಸಾಧ್ಯ ಎಂದು ಹೇಳುತ್ತವೆ. ಅದೇನೇ ಇರಲಿ, ಭಾರತೀಯ ಕ್ರಿಶ್ಚಿಯನ್ ಸಮುದಾಯಗಳು, ಅನುಭವದ ದೃಷ್ಟಿಯಲ್ಲಿ ಒಂದು ಕಡೆ ಭಾರತೀಯವಾಗಿವೆ. ಆದರೆ ಮತ್ತೊಂದು ಕಡೆ, ಅದಕ್ಕೆ ಸರಿಹೊಂದದ ಪಾಶ್ಚಾತ್ಯ ಅನುಭವದ ಕ್ರಿಶ್ಚಿಯನ್ ಕಥಾನಕಗಳನ್ನು ಜೋಡಿಸಿಕೊಂಡಿವೆ. ಇದರ ಪರಿಣಾಮವಾಗಿ ಕ್ರಿಶ್ಚಿಯನ್ ಸಮುದಾಯಗಳು ಭಾರತದ ಇತರೆ ಸಂಪ್ರದಾಯಗಳ ಜೊತೆಗೆ ವ್ಯವಹರಿಸುವಾಗ ವ್ಯತ್ಯಾಸಗಳನ್ನುಂಟುಮಾಡಬಹುದೇ? ಅಥವಾ ಕ್ರಿಶ್ಚಿಯನ್ ಸಮುದಾಯಗಳೂ ಸಹ ತೀರ ಸುಲಭವಾಗಿ ಇಲ್ಲಿನ ಅನೇಕ ಸಮುದಾಯಗಳಲ್ಲೊಂದಾಗಿ ಬೆರೆಯುತುಹೋಗುತ್ತವೆಯೇ? ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಅಥವಾ ಇಂತಹ ವಿಷಯವನ್ನು ಕುರಿತು ಸರಿಯಾದ ಪ್ರಶ್ನೆ ಕೇಳುವುದು ಹೇಗೆ? ಇವುಗಳ ಬಗ್ಗೆ ಆಲೋಚಿಸ ಬೇಕಿದೆ.

No comments:
Post a Comment