ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೂ ಪುರಾಣದ ನಂಟಿದೆ. ಇದು ಗೌತಮ ಮುನಿಗಳ ಕಾಲದ್ದೆನ್ನಲಾಗಿದೆ. ಬೆಂಗಳೂರು ಕಟ್ಟಿದ ಕೆಂಪೇಗೌಡರ ಕಾಲದಲ್ಲಿ ಇದು ವಿಶೇಷ ಸ್ಥಾನ ಮಾನ ಪಡೆದುಕೊಂಡಿತು.ಈ ಗವಿ ಗಂಗಾಧರೇಶ್ವರ ದೇವಸ್ಥಾನ ೮ ಮತ್ತು ೯ ನೆಯ ಶತಮಾನದಿಂದ ಜನರ ಗಮನ ಸೆಳೆಯತೊಡಗಿತು. ಈಚೆಗೆ ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಹಾಗೂ ಸಂಕ್ರಾಂತಿಯಂದು ನಿರ್ದಿಷ್ಟ ಸಮಯದಲ್ಲಿ ಸೂರ್ಯನ ರಶ್ಮಿ ದೇವಸ್ಥಾನದ ತುಂಬ ಒಳಭಾಗದಲ್ಲಿರುವ ಶಿವಲಿಂಗದ ಮೇಲೆ ನೇರವಾಗಿ ಬೀಳುವ ವಿಸ್ಮಯದ ಕಾರಣದಿಂದ ಹೆಚ್ಚು ಜನಪ್ರಿಯವಾಗಿದೆ, ಹಾಗೆ ನೋಡಿದರೆ ನಮ್ಮ ದೇಶದಲ್ಲಿರುವ ಪ್ರಾಚೀನ ವಾಸ್ತುವನ್ನು ಹೊಂದಿರುವ ಬಹುತೇಕ ದೇವಾಲಯಗಳಲ್ಲಿ ಒಂದಲ್ಲ ಒಂದು ಬಗೆಯ ಇಂಥ ಕೌತುಕ ಅಡಗಿರುತ್ತದೆ. ಉದಾಹರಣೆಗೆ ಶೃಂಗೇರಿಯ ಚಂದ್ರ ಮೌಳೇಶ್ವರ ದೇವಸ್ಥಾನದ ಒಳಭಾಗದಲ್ಲಿರುವ ಒಂದೊಂದೂ ಕಂಬಗಳ ಮೇಲೆ ಪ್ರತಿ ತಿಂಗಳು ಬದಲಾಗುವ ಸೂರ್ಯಪಥಕ್ಕೆ ಅನುಸಾರವಾಗಿ ಒಂದೊಂದು ಕಂಬದ ಮೇಲೆ ಮೊದಲ ಕಿರಣ ಬೀಳುತ್ತದೆ ಅನ್ನಲಾಗುತ್ತದೆ. ಇಂಥ ಅಸಂಖ್ಯಾತ ಖಗೋಳ ವಿಸ್ಮಯಗಳು ಸದ್ಯ ನಮ್ಮ ದೇಶದಲ್ಲಿ ಉಳಿದಿರುವುದು ದೇವಾಲಯಗಳಲ್ಲಿ ಮಾತ್ರ, ಆದರೆ ನಮ್ಮ ಪೂರ್ವಜರಲ್ಲಿದ್ದ ಇಥ ಜ್ಞಾನ ಮುಂದಿನ ತಲೆಮಾರುಗಳಿಗೆ ಹರಿದು ಬರಲೇ ಇಲ್ಲ, ಅದು ಸಾಧ್ಯವಾಗುತ್ತಿತ್ತೋ ಏನೋ ಆದರೆ ಅಂಥ ಪ್ರಯತ್ನ ನಡೆಯುವಷ್ಟರಲ್ಲಿ ವಸಾಹತುಗಳ ಆಕ್ರಮಣದಿಂದ ಭಾರತದ ಇಂಥ ಜ್ಞಾನ ಪರರ ಪಾಲಾಯಿತು ಅಥವಾ ನಿಂತು ಹೋಯಿತು ಎಂದು ಧರ್ಮಪಾಲ್ ಪ್ರಾಚೀನ ಭಾರತದ ವಿಜ್ಞಾನ ತಂತ್ರಜ್ಞಾನ ಕುರಿತ ತಮ್ಮ ಇಂಡಿಯನ್ ಸೈನ್ಸ್ ಆಂಡ್ ಟೆಕ್ನಾಲಜಿ ಎಂಬ ಕೃತಿಯೊಂದರಲ್ಲಿ ಸ್ಪಷ್ಟವಾಗಿ ದಾಖಲಿಸುತ್ತಾರೆ.
ಆದರೆ ಅನಂತರ ಕೂಡ ನಮ್ಮ ಪ್ರಯತ್ನ ನಮ್ಮ ದೇಶದ ಜ್ಞಾನ ಪರಂಪರೆಯನ್ನು ಹೇಗಾದರೂ ಮಾಡಿ ಪುನರೂಪಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುವ ಬದಲು ವಿದೇಶಿಗರು ಕಲಿಸಿದ ಅವರ ಪಾಠಗಳನ್ನೇ ಕಲಿಸುವ ನಿರಂತರವಾಗಿ ಬೋಧಿಸುವ ಕೆಲಸದಲ್ಲಿ ಮಗ್ನವಾಗಿದ್ದೇವೆ, ನಮ್ಮ ದೇಶದ ಇಂಥ ವಿಶೇಷ ಮಾತ್ರವಲ್ಲ, ನೀರಿನ ನಿರ್ವಹಣೆ, ಪರಿಸರ ಸಂರಕ್ಷಣೆ ಪಶು ಪಕ್ಷಿಗಳನ್ನು ಕುರಿತ ಜ್ಞಾನ, ಔಷಧ ಮೊದಲಾದವನ್ನು ಕಂಡಾಗಲೆಲ್ಲ ನಮ್ಮ ಪ್ರಾಚೀನ ಜ್ಞಾನ ಮತ್ತೆ ಯಾವಾಗ ಮರು ಜನ್ಮ ಪಡೆಯುತ್ತದೋ ಎಂದು ಖೇದವಾಗುತ್ತದೆ, ಆದರೆ ಈಚೆಗೆ ಅಲ್ಲಲ್ಲಿ ಇಂಥ ಪ್ರಯತ್ನಗಳು ಸರ್ಕಾರಗಳ ಕೆಲವು ಪ್ರಯತ್ನಗಳಿಂದ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ವಿಶೇಷವಾಗಿ ಮಂತ್ರ ಚಿಕಿತ್ಸೆ ಕುರಿತ ಜ್ಞಾನವಂತೂ ಅಚ್ಚರಿ ಹುಟ್ಟಿಸುತ್ತದೆ, ಇಂಥ ಚಿಕಿತ್ಸೆಯಲ್ಲಿ ಯಾವುದೇ ಲೇಪನ ಅಥವಾ ಸೇವನೆಯ ಮಾಧ್ಯಮಗಳಿಲ್ಲದೇ ಕಾಹಿಲೆ ಗುಣಪಡಿಸಲಾಗುತ್ತದೆ, ಹಾವು ಕಡಿತದ ವಿಷಕ್ಕೂ ಇಂಥ ಚಿಕಿತ್ಸೆಯ ಪ್ರಯೋಗ ನಡೆಯುತ್ತದೆ, ಕೆಲವು ಕಡೆ ಇದು ಇನ್ನೂ ಜೀವಂತವಾಗಿದೆ ಆದರೆ ಇದು ಎಲ್ಲ ಕಡೆ ಹರಡುವಂತೆ ಪ್ರಯತ್ನಗಳು ನಡೆಯುವ ಅಗತ್ಯವಿದೆ. ಆಧುನಿಕ ರೀತಿಯಲ್ಲಿ ಸಂಶೋಧನೆಗಳು ನಡೆಯಬೇಕಿದೆ.
ಕೆಲವು ಸಂದರ್ಭಗಳಲ್ಲಿ ಜಾದೂ ವಿದ್ಯೆಯಂಥ ಕ್ರಮಗಳಿಂದ ನಾಪತ್ತೆಯಾದ ವಸ್ತು ಅಥವಾ ವ್ಯಕ್ತಿ, ಪ್ರಾಣಿಗಳು ಎಲ್ಲಿವೆ ಎಂದು ಖಚಿತವಾಗಿ ಹೇಳುವ ಜನ ಕೂಡ ವಿರಳವಾಗಿದ್ದಾರೆ, ಮೊದಲು ಇಂಥ ಅಪರೂಪದ ವಿದ್ಯೆಗಳು ಇರುವ ಸ್ಥಳಗಳನ್ನು ಪತ್ತೆ ಹಚ್ಚುವ ಕೆಲಸ ನಡೆದು ಅದನ್ನು ವ್ಯವಸ್ಥಿತವಾಗಿ ಆಸಕ್ತರು ಕಲಿಯುವ ಮತ್ತು ಕಲಿಸುವ ಕೆಲಸ ಜರೂರಾಗಿ ನಡೆಯಬೇಕಿದೆ, ಹೀಗಾದಾಗ ನಮ್ಮ ಪರಂಪರೆಯ ನೈಜ ಜ್ಞಾನ ನಮಗೆ ಲಭಿಸಿ ನಮ್ಮ ಜೀವನ ಹೆಚ್ಚು ಸಂತೋಷಮಯವಾಗುತ್ತದೆ, ಮನುಕುಲಕ್ಕೆ ಆ ಜ್ಞಾನದ ಲಾಭ ದೊರೆಯುತ್ತದೆ. ಆದರೆ ಇಷ್ಟೆಲ್ಲ ಆಗುವ ಮೊದಲು ಸದ್ಯ ನಮ್ಮಲ್ಲಿ ನೆಲೆಯೂರಿದ ಇಂಥವೆಲ್ಲ ಮೌಢ್ಯ ಅನ್ನುವ, ಸಾರಾಸಗಟಾಗಿ ಮೊದಲೇ ಅಲ್ಲಗಳೆಯುವ ಪೂರ್ವಗ್ರಹ ಮನೋಭಾವ ದೂರವಾಗಬೇಕಿದೆ. ಇದರಿಂದ ನೈಜವಾದ ಕಲಿಕೆ ಅಂದರೇನೆಂಬುದು ಜಗತ್ತಿಗೆ ತಿಳಿಯುತ್ತದೆ. ಮುಖ್ಯವಾಗಿ ನಮಗೆ ಅರಿವಾಗಿ ನಾವೇನು ಮಾಡುತ್ತಿದ್ದೇವೆ ಎಂಬುದು ತಿಳಿಯುತ್ತದೆ. ನಮ್ಮ ಪರಂಪರೆಯಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಆಚರಣೆಗಳು ನಡೆಯುತ್ತವೆ. ಇದು ಆಹಾರ, ಔಷಧ ಇತ್ಯಾದಿ ಜೀವನದ ಎಲ್ಲ ವಲಯಗಳಿಗೂ ಅನ್ವಯ. ಇವೆಲ್ಲ ಒಟ್ಟಾಗಿ ನಮ್ಮ ಪರಂಪರೆಯ ಜ್ಞಾನವನ್ನು ತೋರಿಸುತ್ತವೆ, ಇವನ್ನೆಲ್ಲ ನಾವು ಕಾಯ್ದುಕೊಂಡು ಬಂದಿದ್ದಕ್ಕಿಂತ ಕಳೆದ ಒಂದೆರಡು ಶತಮಾನಗಳಲ್ಲಿ ಕಳೆದುಕೊಂಡಿದ್ದೇ ಹೆಚ್ಚು. ನಮಗೆ ಇದುಮೊದಲು ಅರ್ಥವಾಗಬೇಕಿದೆ. ಇಂಥ ಸಂಪ್ರದಾಯಗಳ ಒಂದೊಂದು ಎಳೆಯನ್ನು ಹಿಡಿದುಕೊಂಡು ಇದರಲ್ಲಿ ಇಂಥ ವಿಜ್ಞಾನವಿದೆ ಅನ್ನುವಷ್ಟು ತಿಳಿವಳಿಕೆ ಬರುತ್ತಿದೆ. ಉದಾಹರಣೆಗೆ ಇಂದಿನ ಸಂಕ್ರಾಂತಿಯನ್ನೇ ನೋಡಿ. ಸಂಕ್ರಾಂತಿಯಲ್ಲಿ ಶತಮಾನಗಳಿಂದ ಹಂಚಿಕೊಳ್ಳುವ ಆದರೆ ಇದುವರೆಗೆ ಏಕೆಂದು ಯಾರೂ ಕೇಳದ ಎಳ್ಳು ಬೆಲ್ಲ ಪರಸ್ಪರ ಹಂಚಿಕೊಂಡು ತಿನ್ನುವ ಕ್ರಮವನ್ನು ಹಿಡಿದು ಇದರ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಎಣ್ಣೆಯ ಅಂಶ ಹಾಗೂ ರೋಗ ನಿರೋಧಕ ಶಕ್ತಿ ದೊರೆಯುತ್ತದೆ, ನೋಡಿ ನಮ್ಮ ಹಿರಿಯರು ವಿಜ್ಞಾನವನ್ನು ಎಷ್ಟು ಚೆನ್ನಾಗಿ ಅರಿತಿದ್ದರೆಂದು ಹೇಳಲಾಗುತ್ತದೆ, ಬಹುತೇಕ ಎಲ್ಲ ಹಬ್ಬ ಹರಿದಿನಗಳ ಸಂಪ್ರದಾಯವನ್ನೂ ಇಷ್ಟಕ್ಕೇ ಸೀಮಿತಗೊಳಿಸಿ ಸಂಭ್ರಮಿಸಲಾಗುತ್ತದೆ. ನಮ್ಮ ಪರಂಪರೆ ಇಷ್ಟೇ ಅಲ್ಲ
ಈ ನೆಪದಲ್ಲಿ ಇನ್ನೇನೂ ಹೇಳುವುದಿಲ್ಲ.

No comments:
Post a Comment