Sunday, 4 January 2026

ಮನುಷ್ಯನ ಹಸ್ತಕ್ಷೇಪ ಸರಿಯಲ್ಲ


ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಘನಾಶಿನಿ ಮತ್ತು ಬೇಡ್ತಿ ನದಿಗಳ ಜೋಡಣೆ ಕುರಿತ ವಿರೋಧ ಜೋರಾಗುತ್ತಿದೆ, ನಮ್ಮ ಆಧುನಿಕ ನಾಗರಿಕ ಜಗತ್ತಿನ ಹಣೆಬರೆಹವೆಂದರೆ ನಮ್ಮ ಅನುಕೂಲಕ್ಕೆ ತಕ್ಕಂತೆ ನಿಸರ್ಗದ ವಸ್ತು ವಿಷಯಗಳು ವರ್ತಿಸಬೇಕು ಎಂಬುದು, ನೈಸರ್ಗಿಕವಾದ ಇವುಗಳ ಪ್ರಕೃತಿಗೆ ನಾವು ಹೊಂದಿಕೊಳ್ಳಬೇಕು ಎಂಬ ಮನೋಭಾವವೇ ನಮ್ಮಲ್ಲಿಲ್ಲ, ಬದಲಾಗಿ ನಮ್ಮ ಅನುಕೂಲಕ್ಕೆ ತಕ್ಕಂತೆ ಅವುಗಳನ್ನು ಬದಲಿಸಿಕೊಳ್ಳುವ ತಿರುಚುವ ಮತ್ತು ತಿರುಗಿಸಿ ಮೆರೆಯುವ ಮನೋಭಾವ ಹೆಚ್ಚಾಗಿ ಕಾಣಿಸುತ್ತದೆ, ನಿಸರ್ಗದ ಮೇಲೆ ಮಾಡುವ ಮನುಷ್ಯನ ಇಂಥ  ಅವಿವೇಕತನ ಭವಿಷ್ಯದಲ್ಲಿ ಎಂಥ ಪರಿಣಾಮ ಬೀರಬಲ್ಲುದು ಎಂಬ ಅರಿವು ಕೂಡ ನಮಗಿಲ್ಲ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದೂ ಇಲ್ಲ ಬಿಡಿ. ಅದೆಲ್ಲ ಯಾರಿಗೆ ಬೇಕಾಗಿದೆ ಎಂಬ ಹುಂಬತನ ನಮಗಿದೆ. ಇದಿಂದ ಆಗುವ ಅವಾಂತರಗಳನ್ನು ತಡೆಯುವ ಶಕ್ತಿಯನ್ನು ನಾವು ಕಳೆದುಕೊಂಡಿರುತ್ತೇವೆ, ಉದಾಹರಣೆಗೆ ನಿಸರ್ಗ ಬುದ್ಧಿವಂತ ಮನುಷ್ಯನನ್ನು ಸೃಷ್ಟಿಸಿದಂತೆ ತಾನು ಕೂಡ ಕೃತಕ ಬುದ್ಧಿಮತ್ತೆಯ ಯಂತ್ರ ಮಾನವನನ್ನು ಸೃಷ್ಟಿಸಿ ಇದೀಗ ಅದರ ಕೈಗೆ ಸಿಕ್ಕಿ ಹೈರಾಣಾಗುತ್ತಿದ್ದಾನೆ, ಅಮೆರಿಕ ಚೀನದಂಥ ದೇಶಗಳಲ್ಲಿ ಈ ಎಐಗಳು ಮನುಷ್ಯನ ನಿಯಂತ್ರಣ ಮೀರಿ ಅವನ ವಿರುದ್ಧವೇ ತಿರುಗಿ ನಿಂತಿರುವುದು ಆ ದೇಶಗಳ ತಲೆಬಿಸಿ ಹೆಚ್ಚಿಸಿವೆ, ಯಾಕೆಂದರೆ ಈ ಎಐಗಳನ್ನು ಸೈನಿಕರ ¨ದಲು ಸೇನೆಗೆ ಬಳಸಲಾಗಿತ್ತು, ಅವು ಈಗ ಒಗ್ಗಟ್ಟಾಗಿ ಮಾನವ ಸೈನಿಕರ ವಿರುದ್ಧ ಸೆಟೆದು ನಿಂತು ಆಂತರಿಕ ಯುದ್ಧಕ್ಕೆ ನಿಂತುಬಿಟ್ಟಿವೆ. ಹೇಳಿಕೇಳಿ ಅವಕ್ಕೆ ಉಸಿರಿಲ್ಲ, ಪ್ರಾಣ ಹೋಗುವ ಪ್ರಶ್ನೆ ಇಲ್ಲ, ಆದ್ದರಿಂದ ನೀವು ಸಿಡಿಸುವ ಮದ್ದುಗುಂಡು, ಬಾಂಬುಗಳೆಲ್ಲ ಅವಕ್ಕೆ ಏನೂ ಮಾಡಲಾರವು ಬದಲಾಗಿ ಅವುಗಳ ವಿರುದ್ಧ ಹೋರಾಟಕ್ಕೆ ನಿಂತ ಮನುಷ್ಯರು ಫಜೀತಿಗೆ ಸಿಲುಕುತ್ತಾರೆ, ಹೀಗಾಗಿ ಈ ಎಐಗಳು ಈಗ ಮನುಷ್ಯನ ಪಾಲಿಗೆ ಭಸ್ಮಾಸುರ ಸೃಷ್ಟಿಯಂತಾಗಿದೆ, ನಿಸರ್ಗ ವ್ಯವಹಾರದಲ್ಲಿ  ಮಾಡಬಾರದ ತಲೆಹರಟೆ ಮಾಡಿ ಈಗ ಮನುಷ್ಯ ದಿಕ್ಕುಗಾಣದೇ ನಿಂತಿದ್ದಾನೆ. ಈಗ ಸಹಜವಾಗಿ ಹರಿಯುತ್ತಿರುವ ನದಿಗಳ ನೀರನ್ನು ತನ್ನ ಬಳಕೆಯ ಅಗತ್ಯಕ್ಕೆ ತಕ್ಕಂತೆ ತಿರುಗಿಸಿಕೊಂಡು ಮತ್ತೆ ನಿಸರ್ಗ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಲು ಮುಂದಾಗಿದ್ದಾನೆ, ಇದರ ಪರಿಣಾಮ ಕೂಡ ಅನಾಹುತಕಾರಿಯೇ ಆಗಬಲ್ಲುದು.

ಸಹಜವಾಗಿ ಸಾವಿರಾರು ವರ್ಷಗಳಿಂದ ಒಂದು ನಿರ್ದಿಷ್ಟ ಮಾರ್ಗದಲ್ಲಿ ಹರಿಯುವ ನೀರನ್ನು ನೆಚ್ಚಕೊಂಡು ಅನೇಕಾನೇಕ ಜಲಚರಗಳು ಜೀವಿಸುತ್ತವೆ, ಕೆಲವಕ್ಕೆ ನಿತ್ಯ ಪ್ರತೀ ಕ್ಷಣ ನೀರು ಅತ್ಯಗತ್ಯ ನಿರ್ದಿಷ್ಟ ಮಾರ್ಗದ ನೀರನ್ನು ಬೇರೆಡೆ ತಿರುಗಿಸಿದರೆ ಅಂಥ ಜೀವಿಗಳಿಗೆ ತೊಂದರೆಯಾಗುತ್ತದೆ, ಜಲಚರಗಳ ಇನ್ನೊಂದು ತಮಾಷೆಯ ಸಂಗತಿ ಎಂದರೆ ಒಂದು ನಿರ್ದಿಷ್ಟ ಗುಣದ ನೀರಿಗೆ ಹೊಂದಿಕೊಂಡ ನಿರ್ದಿಷ್ಟ ಜಲಚರಗಳಿಗೆ ಎಲ್ಲ ನೀರೂ ಒದಗಿಬರುವುದಿಲ್ಲ. ಕೆಲವು ಆಮೆಗಳನ್ನು ಬೇರೆ ಕಡೆಯ ನೀರಿಗೆ ಜೀವಿಸಲು ಬಿಟ್ಟರೆ ಅವು ಪ್ರಾಣಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ, ಇದೇ ರೀತಿ ಮೀನುಗಳು ಕೂಡ. ಪರಿಸ್ಥಿತಿ ಇಷ್ಟು ಸೂಕ್ಷ್ಮವಾಗಿರುವಾಗ ನದಿ ನೀರನ್ನು ಬೇರೆಡೆ ತಿರುಗಿಸುವ ಸಾಹಸಕ್ಕೆ ಕೈಹಾಕುವುದು ಸಮಂಜಸವಲ್ಲ, ಕೆಲವು ಸೂಕ್ಷ್ಮ ಜಲಚರಗಳಿಗೆ ಸಂಪೂರ್ಣ ಬದಲಾದ ನೀರಿನ ರಸಾಯನಿಕ ಕ್ರಿಯೆ ವಿನಾಶಕಾರಿ ಆಗಬಲ್ಲುದೆಂದು ಜಲ ರಸಾಯನ ವಿಜ್ಞಾನ ಹೇಳುತ್ತದೆ, ಜಲ ರಸಾಯನ ನಿರ್ದಿಷ್ಟ ಮಣ್ಣು ಮತ್ತು ಅದರ ರಸಾಯನಿಕ ಕ್ರಿಯೆಯನ್ನು ಅವಲಂಬಿಸಿರುತ್ತದೆ, ನದಿ ಒಂದೇ ಕಡೆ ಹರಿಯುವಾಗ ಅದರ ರಾಸಾಯನಿಕ ಕ್ರಿಯೆಯಲ್ಲಿ ವ್ಯತ್ಯಾಸವಾಗುವುದಿಲ್ಲ, ಆದರೆ ಅದೆ ನದಿಯ ಆಸುಪಾಸಿನ ಮಣ್ಣಿನ ಗುಣ ಒಂದೇ ಆಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಅಕಸ್ಮಾತ್ ನದಿಯ ಆಸುಪಾಸಿನಲ್ಲಿ ಶವಸಂಸ್ಕಾರ ನಡೆಯುತ್ತಿದ್ದ ಸನ್ನಿವೇಶಗಳಿದ್ದರೆ ಅಂಥ ಮಣ್ಣಿನ ಗುಣ ಸಂಪೂರ್ಣ ಬದಲಾಗಿರುತ್ತದೆ, ಇಂಥ ಮಣ್ಣು ಜಲಚರಗಳಿಗೆ ವಿನಾಶಕಾರಿಯೇ ಹೌದು. ಬೇಡ್ತಿ ಮತ್ತು ಅಘನಾಶಿನಿ ಆಸುಪಾಸಿನಲ್ಲಿ ಇಂಥ ಜಾಗಗಳು ಅನೇಕವಿವೆ, ನೀರನ್ನು ನಮ್ಮ ಸ್ವಾರ್ಥಕ್ಕೆ ತಿರುಗಿಸಿ ಆ ನೀರಿನಲ್ಲಿ ಬದುಕುಕಟ್ಟಿಕೊಂಡ ಸಾವಿರಾರು ಜಲಚರಗಳ ಜೀವಕ್ಕೆ ಮಾತ್ರವಲ್ಲ, ಸಂತತಿಗೇ ಹಾನಿಯಾಗಿ ಆ ಜಂತು ಸರ್ವನಾಶವಾದರೆ ಜವಾಬ್ದಾರಿ ಯಾರು? ಕರ್ನಾಟಕದಲ್ಲಿ ಕಂಡುಬರುವ ಅಪರೂಪದ ಜಿಂಕೆ ವರ್ಗದಲ್ಲಿ ಕೃಷ್ಣ ಮೃಗವೂ ಒಂದು, ಇದು ಇಡೀ ದೇಶದಲ್ಲಿ ಗುಜರಾತ್, ಆಂಧ್ರದ ರಾಜಮುಂಡ್ರಿ ಪ್ರದೇಶ, ಕರ್ನಾಟಕದ ಮಧುಗಿರಿ ಬಳಿಯ ಮೈದನ ಹಳ್ಳಿ ಮತ್ತು ರಾಣೆಬೆನ್ನೂರು ಬಳಿ ಮಾತ್ರ ಸಹಜವಾಗಿ ಕಂಡು ಬರುತ್ತಿದ್ದವು. ಇವುಗಳಲ್ಲಿ ಈಗ ರಾಣೆಬೆನ್ನೂರು ಬಳಿ ಇವು ಕಾಣದಂತಾಗಿ ಅವೆಲ್ಲ, ಆಂಧ್ರದ ಕಡೆ ವಲಸೆ ಹೋಗಿವೆ, ಕಾರಣ ಮನುಷ್ಯನ ಅವಿವೇಕತನ ಮತ್ತು ಪರಿಸರ ಅಂದರೆ ಕಾಡು ಎಂಬ ಅಜ್ಞಾನ. ಯಾಕೆಂದರೆ ಪರಿಸರದಲ್ಲಿ ಈಗಾಗಲೇ ಹೇಳಿದಂತೆ ಮರಗಿಡಗಳಂತೆ ಹುಲ್ಲುಗಾವಲು, ಕಲ್ಲುಬಂಡೆಗಳ ಗುಡ್ಡಗಳೆಲ್ಲ ಇರಬೇಕು, ಬರೀ ಮರಗಿಡಗಳು ಮಾತ್ರ ಪರಿಸರವಲ್ಲ, ಈ ಕೃಷ್ಣಮೃಗಗಳು ಬಹಳ ಸೂಕ್ಷ್ಮ ಪ್ರಾಣಿಗಳು, ನಮ್ಮ ದೇಶದಲ್ಲಿ ವಿನಾಶದ ಅಂಚಿನ ಜೀವಿಗಳಲ್ಲೊಂದು. ಇವುಗಳ ಹತ್ಯೆ ಮನುಷ್ಯನ ಕೊಲೆಗೆ ಸಮಾನ. ಮರಗಿಡಗಳು ಹೆಚ್ಚಿಲ್ಲದ ಹುಲ್ಲುಗಾವಲಿನಲ್ಲಿ ಆಗಾಗ ಅಪಾಯ ಇದೆಯಾ ಎಂದು ಆಗಾಗ ತಲೆ ಎತ್ತಿ ಬಹು ದೂರದವರೆಗೆ ನೋಡುತ್ತಾ ಮೇಯುವುದು ಇವುಗಳ ಸ್ವಭಾವ ಕಾಡು ಇರುವಲ್ಲಿ ಅವುಗಳ ಈ ಸ್ವಭಾವಕ್ಕೆ ಧಕ್ಕೆ ಆಗುತ್ತದೆ. ಅವು ಆಗ ಹೆದರುತ್ತವೆ, ಇವು ಇರುವಲ್ಲಿ ಮಾತ್ರ ಇವುಗಳ ಸಹಚರ ಎನಿಸಿದ ದಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಎಂಬ ಹಕ್ಕಿ ಕೂಡ ಸಹಜವಾಗಿ ಇರುತ್ತಿತ್ತು.ಕೆಲವು ವರ್ಷಗಳ ಹಿಂದೆ ರಾಣೆಬೆನ್ನೂರಿಗೆ ಬಂದ ಅರಣ್ಯಾಧಿಕಾರಿಯೊಬ್ಬರು ಈ ಬಯಲಿನಲ್ಲಿ ಕಾಡು ಬೆಳೆಸಿ ಸರ್ಕಾರದ ಶಬ್ಬಾಸ್‌ಗಿರಿ ಪಡೆಯಲು ಮುಂದಾಗಿ ಆ ಪ್ರಯತ್ನದಲ್ಲಿ ಯಶಸ್ವಿಯಾದರು. ಆದರೆ ಆ ಜಾಗದಲ್ಲಿ ಕಾಡು ಬೆಳೆಯುತ್ತಿದ್ದಂತೆ ಕೃಷ್ಣಮೃಗಗಳು ತಮಗೆ ಬೇಕಾದ ಪರಿಸರ ಹುಡುಕಿ ಹೋದವು. ಈಗ ಅಲ್ಲಿ ಕೃಷ್ಣ ಮೃಗಗಳೂ ಇಲ್ಲ, ಗ್ರೇಟ್ ಇಂಡಿಯನ್ ಬಸ್ಟರ್ಡ್ಗ ಇಲ್ಲ, ನಷ್ಟ ಯಾರಿಗೆ? ಇಂಥ ಅವಾಂತರಕ್ಕೆ ಕೊನೆಯಿಲ್ಲ. 

ಅದರಿಂದಾಗುವ ನೈಸರ್ಗಿಕ ಅನಾಹುತಕ್ಕೆ ಹೊಣೆಹೊರುವವರು ಯಾರು? ಸರ್ಕಾರ ತಾನೇ ಹೊಣೆ ಅಂದರೂ ಪ್ರಾಕೃತಿಕ ವಿನಾಶ ತುಂಬುವುದು ಹೇಗೆ? ಇಂಥ ಪ್ರಶ್ನೆಗಳಿಗೆ ಉತ್ತರ ಸಿಗದೇ ನದಿ ತಿರುಗಿಸಲು ಮುಂದಾಗುವುದು ಸರಿಯಲ್ಲ, ಯಾಕೆಂದರೆ ನಿಸರ್ಗದ ವಿನಾಶದ ದುಷ್ಪರಿಣಾಮದ ಹೊಣೆಯನ್ನು ಯಾರೂ ತುಂಬಲು ಸಾಧ್ಯವಿಲ್ಲ.

ಇಷ್ಟೇ ಅಲ್ಲ, ಕೃತಕವಾಗಿ ನದಿ ಜೋಡಣೆ ಅಥವಾ ಸೇರಿಸುವಿಕೆಯಿಂದ ಖಂಡಿತವಾಗಿಯೂ ಜಲಚರಗಳಿಗೆ ಮಾತ್ರವಲ್ಲ, ಕಾಡಿನ ಪರಿಸರ ಹಾಗೂ ವನ್ಯಜೀವಿಗಳ ಬದುಕಿಗೂ ಸಂಕಷ್ಟ ಎದುರಾಗುತ್ತದೆ, ಒಂದು ನಿದರ್ಶನವನ್ನು ನೋಡಬಹುದು ಭಾರತದಲ್ಲಿ ಬೃಹತ್ ಅಣೆಕಟ್ಟುಗಳ ಯೋಜನೆಗಳು ಬರುವವರೆಗೆ ಅಂದರೆ ಐದಾರು ದಶಕಗಳ ಹಿಂದಿನವರೆಗೆ ಸಹಜವಾಗಿ ಹರಿಯುವ ನೀರಿಗೆ ಕಟ್ಟೆ ಕಟ್ಟಿ ನೀರು ನಿಲ್ಲಿಸಿದ ಪರಿಆಮವಾಗಿ ಕೇರಳದಿಂದ ಒರಿಸ್ಸಾವರೆಗೆ ಋತುಮಾನ ಬದಲಾದಂತೆ ಆಹಾರ ಸೇವಿಸುತ್ತಾ ಸ್ವಚ್ಛಂದವಾಗಿ ಓಡಾಡಿಕೊಂಡು ಆರೋಗ್ಯಪೂರ್ಣವಾಗಿದ್ದ ಆನೆಗಳು ಈಗ ಅವುಗಳ ತಲೆಮಾರುಗಳ ಮಾರ್ಗದಲ್ಲಿ ಓಡಾಡಲು ಸಾಧ್ಯವಾಗದೇ ಬೇರೆ ಹೊಸ ಗುಂಪಿನ ಆನೆಗಳ ಜೊತೆಗೆ ಬೆರೆಯಲಾಗದೇ ಒಂದೇ ಗುಂಪಿನಲ್ಲಿ ಸಂತತಿ ಸೃಷ್ಟಿಸಿಕೊಳ್ಳುತ್ತ ವಿನಾಶದ ಅಂಚಿಗೆ ಬರುತ್ತಿವೆಮ ಇವುಗಳ ಮುಕ್ತ ಸಂಚಾರಕ್ಕೆ ನಮ್ಮ ಅಣೆಕಟ್ಟುಗಳು, ರಸ್ತೆ, ಬೇಲಿ, ಹಳ್ಳ ತೋಡಿ ಅವುಗಳ ಸಂಚಾರಕ್ಕೆ ತಡೆ ಒಡ್ಡಿರುವುದು ಕಾರಣವಾಗಿದೆ ಅನ್ನುತ್ತದೆ ಈಚಿನ ಒಂದು ವರದಿ, ಇನ್ನು ಕೆಲವು ವರ್ಷಗಳವರೆಗೆ ಇದೇ ರೀತಿ ಆನೆಗಳಲ್ಲಿ ಒಳ ಸಂತತಿ ಪ್ರಕ್ರಿಯೆ ಮುಂದುವರೆದರೆ ಅವು ಸಾಮೂಹಿಕ ಸಂಕ್ರಾಮಿಕ ಕಾಹಿಲೆಗೆ ಳಗಾಗಿ ಸಂಪೂರ್ಣ ನಾಶವಾಗುವ ಅಪಾಯವಿದೆ ಅನ್ನಲಾಗಿದೆ, ಹೀಗೆ ನೈಸರ್ಗಿಕ ವ್ಯವಹಾರದಲ್ಲಿ ಮನುಷ್ಯ ಹಸ್ತಕ್ಷೇಪ ನಡೆದಲ್ಲೆಲ್ಲ ಸಾಕಷ್ಟು ಅನಾಹುತಗಾಗಿವೆ, ಇವನ್ನೆಲ್ಲ ಗಮನಿಸಿ ಇಂಥ ನದಿ ಜೋಡಣೆಯ ಅಧ್ವಾನದ ಯೋಜನೆಯನ್ನು ಕೈಬಿಡುವುದು ಒಳಿತು ಅನಿಸುತ್ತದೆ.

 

 ಡಾ. ಶ್ರೀಪಾದ್ ಭಟ್

ಸಹಾಯಕ ಪ್ರಾಧ್ಯಾಪಕರು, 

ಕನ್ನಡ ವಿಭಾಗ, 

ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು


No comments:

Post a Comment