Saturday, 3 January 2026

ಹೊಸ ಕಾಬಂಬರಿಯ ಪರಿಚಯ


ನಾ.ಮೊಗಸಾಲೆಯವರ ಈಚಿನ ಕಾದಂಬರಿ ಇದ್ದೂ ಇಲ್ಲದ್ದು ಕುರಿತು ನಾಡಿನ ನಲ್ವತ್ತಕ್ಕೂ ಹೆಚ್ಚು ಬರಹಗಾರರು ತಮ್ಮ ನೋಟ ಮತ್ತು ಅಭಿಪ್ರಾಯವನ್ನು ಒಂದೆಡೆ ದಾಖಲಿಸಿದ ಇಹಪರದ ಧ್ಯಾನ ಎಂಬ ಸಂಕಲನ ಕೃತಿ ಇದೀಗ ಮಾರುಕಟ್ಟೆಗೆ ಬಂದಿದೆ. ಒಂದು ಕೃತಿಯನ್ನುಗಂಭೀರವಾಗಿ ಓದುವವರಿಗೆಲ್ಲ ಆ ಕೃತಿ ಕುರಿತ ನೋಟವೊಂದು ಇದ್ದೇ ಇರುತ್ತದೆ ಹಾಗೂ ಒಂದು ಕೃತಿಯಬಗ್ಗೆ ಎಷ್ಟೆಲ್ಲ ನೋಟಗಳು ಇರಲು ಸಾಧ್ಯ ಎಂಬುದನ್ನು ಕೂಡ ಈ ಕೃತಿ ಮನಗಾಣಿಸುತ್ತದೆ. ವಸ್ತುವೊಂದನ್ನು ಬೇರೆ ಬೇರೆ ದಿಕ್ಕಿನಿಂದ ನೋಡಿದಾಗ ಅದು ಬೇರೆ ಬೇರೆಯಾಗಿಯೇ ಕಾಣುತ್ತದೆ. ಹಾಗೆ ಕೃತಿಯೊಂದನ್ನು ಓದಿದಾಗ ಕೂಡ ಓದುಗರ ಹಿನ್ನೆಲೆ, ಅವರ ಅಧ್ಯಯನ, ದೃಷ್ಟಿಕೋನ ಮೊದಲಾದವುಗಳ ಹಿನ್ನೆಲೆಯಲ್ಲಿ ಅವರ ನೋಟ ಸ್ಪಷ್ಟವಾಗುತ್ತದೆ, ಅಂದರೆ ನೈಜ ಕೃತಿಯೊಂದು ಓದುಗರೊಂದಿಗೆ ಮೌನವಾಗಿ ನಡೆಸುವ ಸಂವಾದ ಇದು, ಇಂಥ ಸಂವಾದ ನಡೆದಷ್ಟೂ ಕೃತಿ ಅಷ್ಟು ಯಶಸ್ವಿಯಾಗುತ್ತದೆ.

ನಾ. ಮೊಗಸಾಲೆಯವರು ಈಗಾಗಲೇ ಹದಿನೈದು ಕಾದಂಬರಿಗಳನ್ನೂ ಆರು ಕವನಸಂಕಲನಗಳನ್ನೂ ಹಲವಾರು ಸಂಪಾದನಾ ಕೃತಿಗಳನ್ನೂ ಅಪರಿಮಿತವಾಗಿ ಕನ್ನಡ ಕಟ್ಟುವ ಸಂಘಟನಾ ಕೆಲಸಗಳನ್ನೂ ಮಾಡಿ ಕರ್ನಾಟಕದ ಮನೆ ಮಾತಾಗಿದ್ದಾರೆ, ಅವರು ಜನಿಸಿದ್ದು ೧೯೪೪ರಲ್ಲಿ ವೈದ್ಯ ವೃತ್ತಿ, ಹವ್ಯಾಸ ಕನ್ನಡ ಸಂಘಟನೆ, ಸಾಹಿತ್ಯ ರಚನೆ, ಇವರ ಮೊದಲ ಕೃತಿ ಮಣ್ಣಿನ ಮಕ್ಕಳು ಪ್ರಕಟವಾಗಿದ್ದು ೧೯೬೫ರಲ್ಲಿ. ಅಂದಿನಿಂದ ನಿರಂತರವಾಗಿ ಅವರ ಸಾಹಿತ್ಯ ಕೈಂಕರ್ಯ ಸಾಗುತ್ತ ಬಂದಿದೆ. ಕೃತಿ ಒಂದೇ ಆದರೂ ಅದು ತನ್ನನ್ನು ತಾನು ಎಷ್ಟೆಲ್ಲ ಬಗೆಯಲ್ಲಿ ಓದಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲೊಂದು ಪುರಾವೆ ಇದೆ, ಹಾಗೆ ನೋಡಿದರೆ ಕನ್ನಡದಲ್ಲಿ ೧೯೦೫ರಲ್ಲಿ ನಾರಾಯಣ ಐಯ್ಯಂಗಾರ್ ಅವರು ಮೊದಲ ಬಾರಿ ಕನ್ನಡದಲ್ಲಿ ಮೊದಲ ವಿಮರ್ಶೆ ಬರೆದರು, ಅಂದಿನಿಂದ ಹೊಸಗನ್ನಡದಲ್ಲಿ ವಿಮರ್ಸೆಯ ಪ್ರಕಾರ ಮೂಡಿ ಇಂದು ಬೃಹತ್ ವೃಕ್ಷವಾಗಿ ಬೆಳೆದಿದೆ. ನವೋದಯ ಸಂದರ್ಭದಲ್ಲಿ ವಿಮರ್ಶೆ ವಿಸ್ತಾರವಾಗಿ ಬೆಳೆಯಿತು,ನವ್ಯ ಮತ್ತು ದಲಿತ ಬಂಡಾಯ ಕಾಲದಲ್ಲಿ ಹುಲುಸಾಗಿ ಬೆಳೆಯುತು, ಆದರೆ ಒಂದೇ ಕೃತಿ ಕುರಿತು ಮೊಗಸಾಲೆಯವರ ಕೃತಿಗಳಿಗೆ ಬಂದಂತೆ ಪ್ರತ್ಯೇಕ ವಿಮರ್ಶಾ ಸಂಕಲನ ವಿಶಢಷವಾಗಿ ಬಂದಂತಿಲ್ಲ, ಹಾಗೆಂದು ಮೊಗಸಾಲೆಯವರ ಕೃತಿ ಕುರಿತು ಇಂಥ ವಿಮರ್ಶಾ ಸಂಕಲನ ಹೊರಬರುತ್ತಿರುವುದು ಇದೇ ಮೊದಲ ಬಾರಿಯಲ್ಲ, ಸದರಿ ಲೇಖಕ ೨೦೧೭ರಲ್ಲಿ ಮೊಗಸಾಲೆಯವರ ಮುಖಾಂತರ ಕಾದಂಬರಿ ಕುರಿತು ಭಿನ್ನ ಆಯಾಮಗಳ ಮುಖಾಂತರ ಎಂಬ ವಿಮರ್ಶಾ ಸಂಕಲನ ಹೊರತಂದು ಪ್ರಕಟಿಸಿದ್ದು ಇಂಥ ಮೊದಲ ಪ್ರಯತ್ನವಾಗಿತ್ತು, ಈಗ ಮೊಗಸಾಲೆಯವರ ಮತ್ತೊಂದು ಕಾದಂಬರಿ ಕುರಿತು ಇಂಥದ್ದೇ ಸಂಕಲನ ಚೆನ್ನಾಗಿ ಹೊರಬಂದಿದೆ. ಕನ್ನಡದಲ್ಲಿ ಈ ಬಗೆಯ ವಿಮರ್ಶಾ ಸಂಕಲನಗಳು ಹೊರಬರುವ ಅಗತ್ಯವಿದೆ, ಇದುವರೆಗೆ ಕುವೆಂಪು, ವೇಂದ್ರೆ, ಕಾರಂತರಂಥವರ ಕೃತಿಗಳನ್ನು ಕುರಿತು ಸಾವಿರಾರು ವಿಮರ್ಶೆಗಳು ಪ್ರಕಟವಾಗಿದ್ದರೂ ಅವೆಲ್ಲ ಎಲ್ಲೆಲ್ಲೋ ಚೆದುರಿಹೋಗಿವೆ, ಆದರೆ ಇಂಥ ಲೇಖಕರ ವಿವಿಧ ಕೃತಿಗಳನ್ನು ಕುರಿತಂತೆ ವಿಮರ್ಶಾ ಕೃತಿಗಳು ಪ್ರಕಟವಾಗಿವೆ. ಸಾಹಿತ್ಯ ಅಕಾಡೆಮಿಯೇ ಶತಮಾನದ ವಿಮರ್ಶೆ ಸಂಕಲನ ಪ್ರಕಟಿಸಿದೆ. ವಿಮರ್ಶೆ ಕುರಿತ ಎಲ್ಲ ಆಯಾಮಗಳು, ಕನ್ನಡದ ಪ್ರಮುಖ ಕೃತಿಗಳ ಉತ್ತಮ ವಿಮರ್ಶೆ ಇಲ್ಲಿದೆ. ಒಬ್ಬ ಲೇಖಕರ ವಿವಿಧ ಕೃತಿಗಳ ವಿಮರ್ಶಾ ಸಂಕಲನ ಕನ್ನಡದಲ್ಲಿ ಪ್ರಕಟವಾಗಿ ದಶಕಗಳೇ ಕಳೆದಿವೆ.  ಆದರೆ ಒಂದೇ ಕೃತಿ ಕುರಿತ ಒಂದೇ ವಿಮರ್ಶಾ ಸಂಕಲನ ಪಡೆದಕನ್ನಡದ ಮೊದಲ ಸಾಹಿತಿ ಪ್ರಾಯಃ ನಾ. ಮೊಗಸಾಲೆಯವರು. ಇದಕ್ಕಾಗಿ ಅವರನ್ನು ಅಭಿನಂದಿಸಬೇಕಿದೆ.

ಪ್ರಸ್ತುತ ಕೃತಿಯಲ್ಲಿ ಮೊಗಸಾಲೆಯವರ ಕೇವಲ ಇದ್ದೂ ಇಲ್ಲದ್ದು ಕಾದಂಬರಿ ಕುರಿತ ೩೭ ವಿಮರ್ಶೆಗಳ ಜೊತೆಗೆ ಮೊಗಸಾಲೆಯವರ  ಬರೆಹ ಸಾಹಿತ್ಯ, ಕನ್ನಡ ಸೇವೆ ಕುರಿತ ನಾಡಿನ ಪ್ರಮುಖರ ಅನಿಸಿಕೆಗಳು ಹಾಗೂ ಮೊಗಸಾಲೆಯವರ ಸಂದರ್ಶನ ಸೇರಿದೆ. ಒಟ್ಟಿನಲ್ಲಿ ಒಬ್ಬ ಲೇಖಕರು ಕೃತಿಯೊಂದನ್ನು ರಚಿಸಿದಾಗ ಅದರ ಹಿಂದೆ ಏನೆಲ್ಲ ಚಿಂತನೆಗಳು ಇರಲು ಸಾಧ್ಯ ಎಂಬ ಸಾಹಿತ್ಯಾಸಕ್ತರ ಕುತೂಹಲ ತಣಿಸುವ ಯತ್ನ ಇಲ್ಲಿದೆ. ಇಂಥ ಪ್ರಯತ್ನಗಳು ಸಾಹಿತ್ಯದಲ್ಲಿ ಹೆಚ್ಚಿದಷ್ಟೂ ಒಬ್ಬ ಲೇಖಕರನ್ನು ಓದುಗ ಮತ್ತು ವಿಮರ್ಶಕರು ಹೆಚ್ಚು ಚೆನ್ನಾಗಿ ಅರಿಯಲು ನೆರವಾಗುತ್ತದೆ. ಮೊಗಸಾಲೆಯವರ ಹೆಗ್ಗಳಿಕೆ ಅಂದರೆ  ಕನ್ನಡ ಕಾದಂಬರಿ ಏಕತಾನತೆಯ ದಾರಿ ಹಿಡಿಯುತ್ತಿದೆ ಅನಿಸುವ ಸಂದರ್ಭದಲ್ಲಿ ಭಿನ್ನ ರೀತಿಯಲ್ಲಿ ಕಾದಂಬರಿ ನೀಡಿ ಕನ್ನಡ ಕಾದಂಬರಿಗೆ ಹೊಸ ಚೈತನ್ಯ ತುಂಬಿದ ಹೆಗ್ಗಳಿಕೆ ಇರುವ ನಾ. ಮೊಗಸಾಲೆಯವರ ಕೃತಿ ಕುರಿತ ವಿಮರ್ಶಾ ಸಂಕಲನ ಪ್ರತ್ಯೇಕವಾಗಿ ಪ್ರಕಟವಾಗಿ ಮಾದರಿ ತೋರಿಸಿರುವುದು, ಇಂಥ ಪ್ರವೃತ್ತಿ ಕನ್ನಡದ ಎಲ್ಲ ಬರಹಗಾರರ ಕೃತಿಗಳಿಗೂ ದೊರೆಯುವಂತಾಗಲಿ, ಒಂದು ಇಂಥ ಪರಂಪರೆಯೇ ಬೆಳೆಯಲಿ ಎಂದಷ್ಟೇ ಇಲ್ಲಿ ಹಾರೈಸಬಹುದು.


ಕೃತಿ ವಿವರ:

ಇಹಪರದ ಧ್ಯಾನ - ನಾ. ಮೊಗಸಾಲೆಯವರ ಇದ್ದೂ ಇಲ್ಲದ್ದು ಕಾದಂಬರಿಯನ್ನು ಕುರಿತ ವಿಮರ್ಶಾ ಲೇಖನಗಳ ಸಂಗ್ರಹ.

ಸಂಪಾದಕರು - ಸುಭಾಷ್ ಪಟ್ಟಾಜೆ

ಪ್ರಕಾಶಕರು - ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ, ಮೊದಲ ಮುದ್ರಣ - ೨೦೨೪

ಪುಟಗಳು -೨೩೨

ಬೆಲೆ - ೨೮೫ ರೂ.

ಐಎಸ್ ಬಿಎನ್ - ೯೭೮೮೧೯೭೨೯೩೭೮


No comments:

Post a Comment