Friday, 2 January 2026

ಮಾದರಿ ಅಭಿನಂದನ ಕೃತಿ


ಕನ್ನಡದಲ್ಲಿ ಅತ್ಯಂತ ಹೆಚ್ಚಾಗಿ ಹೊರಬರುತ್ತಿರುವ ಸಾಹಿತ್ಯ ಪ್ರಕಾರ ಕೃತಿಗಳಲ್ಲಿ ಮುಂಚೂಣಿಯಲ್ಲಿರುವುದು ಅಭಿನಂದನಾ ಗ್ರಂಥಗಳು. ಒಂದು ರೀತಿಯಲ್ಲಿ ಇದನ್ನು ಹೊರತರುವುದು ತುಂಬ ಸುಲಭ. ಯಾರನ್ನು ಕುರಿತು ಕೃತಿ ಹೊರತರಲಾಗುತ್ತಿದೆಯೋ ಅವರ ರಕ್ತ ಸಂಬಂಧಿಗಳು, ಮಿತ್ರರು, ವಾಕಿಂಗ್ ಮಿತ್ರರು, ಚಹಾ ಮಿತ್ರರು ಹೀಗೆ ಒಂದಿಷ್ಟು ಜನರನ್ನು ಕಲೆಹಾಕಿ ನಿಮ್ಮ ಇಂಥ ಮಿತ್ರರ ಬಗ್ಗೆ ಏನಾದರೂ ಬರೆದುಕೊಡಿ ಎಂದು ಕೇಳಿದರಾಯ್ತು, ಅವರಿಗೂ ತಾವು ಲೇಖಕರಾಗುವ ಖುಷಿ, ಸಂಪಾದಕರಿಗೆ ಲೇಖನ ಕಲೆಹಾಕಿದ ಖುಷಿ, ಗ್ರಂಥ ಪ್ರಕಟಣೆಗೆ ಸಿದ್ಧವಾಗಿಬಿಡುತ್ತದೆ, ಯಾರಾದರೂ ಪ್ರಕಟಣೆ ಮಾಡಿಯೇ ಮಾಡುತ್ತಾರೆ, ಪುಸ್ತಕವನ್ನು ಯಾರೂ ಅಲ್ಲದಿದ್ದರೂ ಗ್ರಂಥಾಲಯ ಇಲಾಖೆ ಪ್ರಕಾಶಕರಿಗೆ ಕನಿಷ್ಠ ಬೆಲೆ ಬರುವ ಸಂಖ್ಯೆಯಲ್ಲಿ ಖರೀದಿ ಮಾಡಿಯೇ ಮಾಡುತ್ತದೆ. ಆಯ್ತಲ್ಲಾ ಸರ್ಕಾರಿ ಗ್ರಂಥಾಲಯಕ್ಕೆ ದೂಳು ತಿನ್ನಲು ಮತ್ತೊಂದು ಕೃತಿ ಸಿದ್ಧ. ಅದಕ್ಕೆ ಬಳಸಿದ ಕಾಗದಕ್ಕಾಗಿ ನೆಲಕ್ಕುರುಳಿದ ಮರಗಳಿಂದ ಪರಿಸರ ನಾಶ, ಹೊಸ ಪುಸ್ತಕ ಎಂದು ಖರೀದಿಸಿದ ಓದುಗರ ಹಣ ನಷ್ಟ, ಇಷ್ಟೇ ಕೊನೆಗೆ ಉಳಿಯುವುದು, ಓದುಗರ ಪಾಲಿಗೆ ತಾನು ಇಂಥದ್ದೊಂದು ಪುಸ್ತಕಕ್ಕೆ ಇಷ್ಟು ಹಣ ಹಾಳು ಮಾಡಿದ್ದೆ, ಬದಲಾಗಿ ಎಲ್ಲಾದರೂ ಬೀದಿ ಬದಿ ದೋಸೆ ತಿನ್ನಬಹುದಾಗಿತ್ತು ಎಂಬ ಕಹಿ ನೆನಪು ಶಾಶ್ವತವಾಗಿರುತ್ತದೆ. ಇತ್ತೀಚೆಗೆ ಕನ್ನಡದಲ್ಲಿಹೊರಬರುತ್ತಿರುವ ಬಹುತೇಕ ಅಭಿನಂದನ ಗ್ರಂಥಗಳು ಇಂಥವೇ ಆಗಿವೆ. ತನ್ನ ಹೆಸರಲ್ಲೂ ಒಂದು ಪುಸ್ತಕ ಹೊರಬರಲಿ ಎಂದು ಬಯಸುವವರು ಮೊದಲು ಯೋಚಿಸುವುದೇ ತನಗೆ ಈಗ ಎಷ್ಟು ವರ್ಷವಾಗಿದೆ, ಅಭಿನಂದನ ಗ್ರಂಥಹೊರತರುವ ವಯಸ್ಸಾಯಿತೇ ಎಂದು, ಹೇಗಾದರೂ ಈ ಭೂಮಿಯ ಮೇಲೆ ಐವತ್ತು ವರ್ಷ ಬದುಕಿದ್ದರೆ ಕನ್ನಡದಲ್ಲಿ ನಿಮ್ಮ ಕ್ಷೇತ್ರ ಸಾಹಿತ್ಯವಾಗಿದ್ದರೆ ಕಷ್ಟವಿಲ್ಲ, ಅಥವಾ ಬೇರೆ ಯಾವುದೇ ಆಗಿರಲಿ, ಪುಸ್ತಕ ಹೊರತರುವುದು ಕಷ್ಟವಲ್ಲ. ಇನ್ನು ಅಧ್ಯಾಪನ, ಶಿಕ್ಷಣ ಹಾಗೂ ಅಧಿಕಾರದ ಜಾಗದಲ್ಲಿದ್ದರೆ ಮುಗಿದೇ ಹೋಯ್ತು. ಒಂದಲ್ಲ, ಎರಡಕ್ಕಿಂತ ಹೆಚ್ಚು ಇಂಥ ಗ್ರಂಥಗಳು ಬರಬಹುದು, ಇಂಥ ಸ್ಥಾನದಲ್ಲಿದ್ದವರ ಹಿಂದೆ ಬಾಲವಾಗಿದ್ದವರ ಸಂಖ್ಯೆ, ಅವರ ಗುಂಪುಗಾರಿಕೆ ಮೇಲಾಟ ಮೊದಲಾದವುಗಳ ಆಧಾರದಲ್ಲೂ ಅವರ ಅಭಿನಂದನಾ ಗ್ರಂಥಗಳ ಸಂಖ್ಯೆ ನಿರ್ಧಾರವಾಗುವುದುಂಟು. ಕನ್ನಡದಲ್ಲಿ ಇಂಥ ನಿದರ್ಶನಗಳಿವೆ. ರಾಜಕೀಯ ಕ್ಷೇತ್ರದವರಂತೂ ಕಡ್ಡಾಯವಾಗಿ ತಮಗೆ ಐವತ್ತು ತುಂಬುತ್ತಿದ್ದಂತೆ ತಮ್ಮ ಅಭಿನಂದನ ಗ್ರಂಥದ ಬಗ್ಗೆ ತಯಾರಾಗುತ್ತಾರೆ, ಅವರ ಹಿಂದೆ ಮುಂದೆ ಹಾಯುವ ಬಕೆಟ್ ಹಿಡಿದೇ ಇರುವ ಮೇಷ್ಟ್ರುಗಳಿಗೂ ಸಹಿತಿ ಅನಿಸಿಕೊಂಡ ಧೀರರಿಗೂ ಕೊರತೆ ಇರದಿರುವುದು ಅವರಿಗೆ ಒಂದು ಅಡ್ವಾಂಟೇಜು. ಈ ಬಕೇಟ್ ಜನ ಯಾರು ಸಂಪಾದಕರಾಗುವುದೆಂದು ಕಚ್ಚಾಡಬಹುದು, ಅದನ್ನು ನಿಯಂತ್ರಿಸುವುದು ನೇತಾಗಳಿಗೆ ಕಷ್ಟವಲ್ಲ, ಇಬ್ಬರಿಗೂ ಎರಡು ಗ್ರಂಥಗಳ ಹೊಣೆ ಹಂಚಿದರೆ ಮುಗಿಯಿತು. ಈಚೆಗೆ ಕನ್ನಡದಲ್ಲಿ ಹೊರಬಂದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಪ್ರೊ. ಎಚ್ ಎಂ ಮಹೇಶ್ವರಯ್ಯ ಅವರ ಅಭಿನಂದನ ಗ್ರಂಥ ಭಾಷಾ ಮಂದಾರದಲ್ಲೂ ಸ್ವಲ್ಪ ಈ ಎಲ್ಲ ಸಾಕ್ಷಿಗಳ ಕುರುಹೂ ಸಿಗುತ್ತದೆ. ಸದರಿ ಪ್ರಾಧ್ಯಾಪಕರು ದಶಕಗಳ ಕಾಲ ಅಪಾರ ಶಿಷ್ಯ ಬಳಗದ ಪ್ರೀತಿಯ ಗುರುಗಳಾಗಿದ್ದವರು, ವಿಶ್ವವಿದ್ಯಾನಿಲಯದ ಹಲವಾರು ಜವಾಬ್ದಾರಿಗಳನ್ನು ಹುದ್ದೆಗಳನ್ನು ನಿರ್ವಹಿಸಿದ್ದವರು, ಆದ್ದರಿಂದ ಅವರ ಸುತ್ತ ಶಿಕ್ಷಣ ವಲಯದವರೇ ಇರುತ್ತಿದ್ದುದರಿಂದ ಅವರಿಗೆ ಒಂದು ಅಭಿನಂದನಾ ಗ್ರಂಥ ಹೊರತರುವುದು ನೀರು ಕುಡಿದಷ್ಟು ಕಷ್ಟ. ಆದರೂ ಅವರ ನೆನಪಿಬಲ್ಲಿ ಭಾಷಾ ಮಂದಾರ ಎಂಬ ಹೆಸರಿನ ಅಭಿನಂದನಾ ಗ್ರಂಥವೊಂದು ಹೊರಬಿದ್ದಿದೆ. ಈ ಕೃತಿ ಗಂಭೀರ ಅಧ್ಯಯನಕ್ಕೇನೂ ಅಲ್ಲ, ಬದಲಿಗೆ ಅವರ ಬಹುಮುಖ ವ್ಯಕ್ತಿತ್ವದ ಪರಿಚಯಕ್ಕೆ ಓದಬಹುದು.

ಆದರೆ ಇದು ಕನ್ನಡಕ್ಕೆ ಮತ್ತೊಂದು ಭಜನಾ ಕೃತಿಯಾಗಿ ಬಂದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಇದರಲ್ಲಿ ಮುಖ್ಯವಾಗಿ ಮಹೇಶ್ವರಯ್ಯನವರು ಕೆಲಸ ಮಾಡಿದ ಕ್ಷೇತ್ರಗಳಾದ ಜಾನಪದ, ಸಮಾಜ, ಭಾಷಾವಿಜ್ಞಾನ ಮೊದಲಾದವುಗಳಿಗೆ ಸಂಬಂಧಿಸಿದ ಕುತೂಹಲಕರ ವಿಷಯಗಳ ಬಗ್ಗೆ ಗಂಭೀರ ಬರೆಹಗಳಿವೆ, ಇದರಲ್ಲಿ ಸಂಕಲಿತವಾದ ಮೂವತ್ತು ಲೇಖನಗಳಲ್ಲಿ ಭಾಷೆ, ಸಂಸ್ಕೃತಿಗಳನ್ನು ಕುರಿತು ಆಸಕ್ತಿ ಇರುವವರು ಓದಲೇಬೇಕಾದ ಲೇಖನಗಳಿವೆ, ಅದರಲ್ಲೂ ಸಮಾಜ, ಭಾಷೆ ಮತ್ತು ಸಾಹಿತ್ಯ ಕುರಿತು ಪಾಠ ಮಾಡುವ ಮೇಷ್ಟುçಗಳಂತೂ ಓದಲೇಬೇಕಾದವು ಇಲ್ಲಿವೆ, ಉದಾಹರಣೆಗೆ ಆರ್ಯ, ದ್ರಾವಿಡ ಕುರಿತ ಚರ್ಚೆ ಬಂದಾಗ ಕೇವಲ ಮೇಲ್ನೋಟದ ವಾದ ಮಾಡುತ್ತ, ಅದರ ಸತ್ಯಾಸತ್ಯತೆಯ ಬಗ್ಗೆ ವೈಜ್ಞಾನಿಕ ಪುರಾವೆ ಏನಿದೆ ಎಂದು ಗಮನಿಸದೇ ದ್ರಾವಿಡ ಪರ ಎನ್ನುವ ರಾಜಕೀಯ ನಿಲುವಿನ ಪಾಠ ಮಾಡುವ ಅಥವಾ ಆರ್ಯ ಎಂದರೆ ಪುರೋಹಿತಶಾಹಿ ಆಗುವ ಅಪಾಯವಿದೆ ಎಂಬ ಭಾವನೆಯಿಂದ ಅಸ್ಪಷ್ಟ ಮಾತನಾಡುವ ಜನರೇ ನಮ್ಮ ಮಧ್ಯೆ ಹೆಚ್ಚು, ಇಂಥವರು ತಮ್ಮ ದೃಷ್ಟಿಯನ್ನು ಅಗಲಗೊಳಿಸಿಕೊಳ್ಳಲು ಉಪಯುಕ್ತವಾದ ಸವದತ್ತಿಮಠ ಅವರ ಲೇಖನ, ಭಾನುಮತಿಯವರ ಜಲಶಾಸ್ತ್ರ ಕುರಿತ ಬರೆಹ, ಕರ‍್ತಿಕ್ ಅವರ ಸಂಗೀತ ರತ್ನಾಕರ ಕುರಿತ ಬರೆಹಗಳು, ತಾರಾನಾಥರ ಪುಟ್ಟ, ಆದರೆ ಗಹನ ವಿಚಾರ ಹೇಳುವ ಬರೆಹಗಳು - ಪಟ್ಟಿ ಮಾಡುತ್ತ ಹೋಗಬಹುದು, ಹೀಗೆ ಒಟ್ಟಾರೆ ಈ ಅಭಿನಂದನ ಕೃತಿ ಕೇವಲ ಮಹೇಶ್ವರಯ್ಯನವರಿಗೆ ಮಾತ್ರವಲ್ಲದೇ ಈ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರಿಗೂ ಮಾಡುತ್ತಿರುವವರಿಗೂ ಏಕಕಾಲಕ್ಕೆ ಅಭಿನಂದನೆ ಹೇಳುವಂತಿದೆ, ಕನ್ನಡದ ಹಾಸುಬೀಸು ಹೇಗಿದೆ ಎಂಬುದರ ಚಿತ್ರಣ ಒಂದೇ ಕಡೆದೊರೆಯುತ್ತದೆ. ಇದಕ್ಕಾಗಿ ಸಂಪಾದಕರನ್ನು ನಾವೆಲ್ಲ ಭಿನಂದಿಸಬೇಕಿದೆ, ಈ ಕೃತಿಯಲ್ಲಿನ ಒಂದೇ ಒಂದು ಕೊರತೆ ಎಂದರೆ ಮಹೇಶ್ವರಯ್ಯನವರು ಕೆಲಸ ಮಾಡಿದ ಕ್ಷೇತ್ರಗಳಲ್ಲಿ ಉಳಿಸಿಹೋದ ಕುರುಗಳಾದ ಅವರ ಕೃತಿಗಳ ವಿಮರ್ಶೆ, ಅವುಗಳನ್ನು ಕುರಿತ ವಸ್ತುನಿಷ್ಠ ಪರಿಶೀಲನೆ ಆಗಬೇಕಿತ್ತು ಅನ್ನುವುದು, ಇದೊಂದು ಸೇರಿದ್ದರೆ ಕೃತಿಯ ತೂಕ ಇನ್ನಷ್ಟು ಹೆಚ್ಚುತ್ತಿತ್ತು, ಈ ಕೃತಿ ಎಲ್ಲೋ ಯಾರ ಬಳಿಯೋ, ಗ್ರಂಥಾಲಯದಲ್ಲೋ ಕಣ್ಣಿಗೆ ಬಿತ್ತು, ಕಣ್ಣಾಡಿಸಿದೆ ಅನ್ನುವಂಥ ಕೃತಿಯಲ್ಲ, ಸಮಾಹ, ಸಂಸ್ಕೃತಿ ಮತ್ತು ಸಾಹಿತ್ಯದ ಆಸಕ್ತರು ಜೋಪಾನವಾಗಿ  ಖರೀದಿಸಿ ಆಗಾಗ ಅಧ್ಯಯನ ಮಾಡಬೇಕಾದುದು, ಒಂದು ಅಭಿನಂದನ ಗ್ರಂಥ ಹೀಗಿದ್ದರೆ ಚೆಂದ ಅನಿಸುವಂತಿದೆ ಇದು. ಈ ಕಾರಣಕ್ಕಾಗಿ ಕೇವಲ ಈ ಕೃತಿಯ ಮೂಲಕ ಅಭಿನಂದನೆಗೆ ಒಳಗಾದವರಿಗೆ ಮಾತ್ರವಲ್ಲ, ಇದಕ್ಕೆ ಲೇಖನ ಬರೆದವರನ್ನೂ ಸಂಪಾದಕರನ್ನೂ ಏಕಕಾಲಕ್ಕೆ ಅಭಿನಂದಿಸುವಂತೆ ಇದು ಮಾಡುತ್ತದೆ. ಅಭಿನಂದನ ಗ್ರಂಥ ಹೊರತರಲು ಯಾವುದೇ ನೆಪ ಬೇಕಿಲ್ಲ. ನಿಷ್ಕಲ್ಮಶ ಪ್ರೀತಿ ಮತ್ತು ಗೌರವಗಳು ಸಾಕು ಎಂಬುದಕ್ಕೆ ಇದೇ ನಿದರ್ಶನವಾಗಿದೆ.


ಕೃತಿಯ ವಿವರ:

ಭಾಷಾ ಮಂದಾರ - ಎಚ್.ಎಂ. ಮಹೇಶ್ವರಯ್ಯ ಮತ್ತು ರಾಜೇಶ್ವರಿ ಮಹೇಶ್ವರಯ್ಯ ಅಭಿನಂದನ ಗ್ರಂಥ

ಮೊದಲ ಮುದ್ರಣ- ೨೦೨೧,

ಬೆಲೆ-೩೮೦ ರೂ, ಪುಟಗಳು-೩೫೦ 


 


No comments:

Post a Comment