ಪ್ರಾಯಃ 2017ರಲ್ಲಿರಬೇಕು. ರಾಜ್ಯದಲ್ಲಿ ಕನ್ನಡವೇ ಪ್ರಾಥಮಿಕ ಹಂತದಲ್ಲಿ ಕಲಿಕಾ ಮಾಧ್ಯಮವಾಗಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಇದಕ್ಕೆ ಪರ-ವಿರೋಧ ನಿಲುವುಗಳು ವ್ಯಕ್ತವಾದವು. ಪ್ರಕರಣ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯಿತು. ನ್ಯಾಯಾಲಯದ ತೀರ್ಪು ‘ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ’ ಎಂದು ಬಂತು. ಈ ತೀರ್ಪು ಬರುತ್ತಿದ್ದಂತೆ ಕರ್ನಾಟಕದಲ್ಲಿ ಖಾಸಗಿ ಶಾಲೆಗಳವರು ಸಂಭ್ರಮ ವ್ಯಕ್ತಪಡಿಸಿದರೆ ಕನ್ನಡ ಹೋರಾಟಗಾರರು ಮತ್ತು ಸಾಹಿತಿಗಳು ಇದರಿಂದ ಕನ್ನಡ ಸರ್ವನಾಶವಾಗುತ್ತದೆ ಎಂಬಂತೆ ಸಂಕಟ ಪಟ್ಟಿದ್ದರು. ಆದರೆ ನಿಜವಾದ ಪರಿಸ್ಥಿತಿ ಹೀಗೇನೂ ಇರಬೇಕಾಗಿಲ್ಲ. ಏಕೆಂದರೆ ಒಂದೂವರೆ ಸಾವಿರ ವರ್ಷಕ್ಕಿಂತ ಹೆಚ್ಚಿನ ಇತಿಹಾಸವುಳ್ಳ ಕನ್ನಡ ಇಲ್ಲಿಯವರೆಗೆ ಉಳಿದುಬಂದಿರುವುದು ಶಾಲೆ, ಶಿಕ್ಷಣ ಸಂಸ್ಥೆಗಳು, ಅದಕ್ಕಿಂತ ಹೆಚ್ಚಾಗಿ ಕಲಿಕೆಯ ಕಡ್ಡಾಯ ಮಾಧ್ಯಮವಾಗಿ ಯಾವುದಾದರೂ ಆಡಳಿತ ಹೊರಡಿಸಿದ ಆದೇಶದಿಂದಲ್ಲ. ಯಾವುದೇ ಭಾಷೆ ಯಾವುದೇ ರೀತಿಯ ಹೇರಿಕೆ ಅಥವಾ ಒತ್ತಾಯದಿಂದ ಉಳಿದುಬರುವುದಿಲ್ಲ ಆಯಾ ಪ್ರದೇಶದ ಜನಸಮುದಾಯಗಳ ಬಳಕೆ ಮತ್ತು ಪ್ರೀತಿಯಿಂದ ಹಾಗೂ ಸಕಾರಾತ್ಮಕ ಪರಿಸರದಿಂದ ಭಾಷೆ ಉಳಿದುಬರುತ್ತದೆ ಕನ್ನಡ ಕೂಡ ಇಷ್ಟು ವರ್ಷಗಳ ಕಾಲ ಉಳಿದುಬಂದಿರುವುದು ಇದೇ ರೀತಿಯ ಕಾರಣಗಳಿಂದ. ದೇಶದಲ್ಲಿ ಆಯಾ ಪ್ರಾಂತ್ಯದ ಭಾಷೆಗಳು ಸೂಕ್ತ ಸಾಮಾಜಿಕ ಪರಿಸರದಿಂದ ಉಳಿದುಬಂದಿದ್ದವು. ಬ್ರಿಟಿಷ್ ವಸಾತುಶಾಹಿ ಆಡಳಿತ ಭಾರತದಲ್ಲಿ ಕಾಲಿಟ್ಟಮೇಲೆ ಇಂಥ ಪರಿಸ್ಥಿತಿ ಬದಲಾಗತೊಡಗಿತು. ಬ್ರಿಟಿಷ್ ಆಡಳಿತ ನಮ್ಮ ದೇಶಕ್ಕೆ ಬರುವ ಮುಂಚೆ ದೇಶದ ಉದ್ದಗಲದಲ್ಲಿ ಆಯಾ ಭಾಷೆಗಳಲ್ಲಿ ಅಥವಾ ಆಯಾ ವಿದ್ಯಾರ್ಥಿಗಳು ಬಯಸುವ ಭಾಷೆಗಳಲ್ಲಿ ಸಾಂಪ್ರದಾಯಿಕ ಶಿಕ್ಷಣ ಸಮಾಜದ ಎಲ್ಲ ವರ್ಗಕ್ಕೂ ಸಿಗುತ್ತಿತ್ತೆಂದು ಧರಂಪಾಲ್ ಅವರು ತಮ್ಮ ‘ದಿ ಬ್ಯೂಟಿಫುಲ್ ಟ್ರೀ’ ಎಂಬ ಕೃತಿಯಲ್ಲಿ ಅಂಕಿಅಂಶಗಳ ಸಹಿತ ತೋರಿಸಿಕೊಟ್ಟಿದ್ದಾರೆ. ಉದಾಹರಣೆಗೆ ಕನ್ನಡದ ಬಳ್ಳಾರಿ ಮತ್ತು ಬೀದರ್ ಪ್ರಾಂತ್ಯಗಳಲ್ಲಿ ಕನ್ನಡದ ಜೊತೆಗೆ ಪಾರ್ಸಿ, ಉರ್ದು ಮತ್ತು ತೆಲುಗು ಭಾಷೆಗಳು ಪ್ರಾಥಮಿಕ ಕಲಿಕಾ ಹಂತದಲ್ಲಿ ಇದ್ದವು. ಆ ಪ್ರದೇಶದ ಸಮಾಜ ತಮ್ಮ ಮಕ್ಕಳನ್ನು ತಮಗೆ ಇಷ್ಟವಾದ ಕಲಿಕೆಗೆ ಪ್ರೀತಿಯಿಂದ ಕಳುಹಿಸಿಕೊಡುತ್ತಿದ್ದರು. ಅಲ್ಲೆಲ್ಲೂ ಕಲಿಕೆಯ ಮಾಧ್ಯಮ ಸಮಸ್ಯೆಯೂ ಆಗಲಿಲ್ಲ, ಸಂಘರ್ಷಕ್ಕೆ ವಸ್ತುವೂ ಆಗಲಿಲ್ಲ. ಈ ಎಲ್ಲಾ ಭಾಷೆಗಳ ಜೊತೆಗೆ ಕನ್ನಡ ಕೂಡ ಚೆನ್ನಾಗಿಯೇ ಉಳಿದು ಬೆಳೆದು ಬಂದಿತ್ತು. ದೇಶದ ಇತರ ಭಾಷಾ ಪ್ರಾಂತ್ಯಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇರಲಿಲ್ಲ. ಭಾಷಿಕ ಕಾರಣಕ್ಕಾಗಿ ಇಂಥ ಸಂಘರ್ಷಗಳು ನಡೆಯಲೂ ಆರಂಭವಾದದು ಭಾಷಾವಾರು ಪ್ರಾಂತ್ಯ ರಚನೆಯಾದ ಮೇಲೆ. ಅಲ್ಲಿಯವರೆಗೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಸಂಪ್ರದಾಯ, ಆಚರಣೆ ಮತ್ತು ತಲಾಂತರಗಳ ಕಲೆಗಳು ಜನರ ನಡುವೆ ಆಯಾ ಭಾಷೆಗಳಲ್ಲಿ ಉಳಿದು ಬಂದುದರಿಂದ ಭಾಷೆ ಸಮೃದ್ಧವಾಗಿ ಉಳಿದುಬಂದಿತು. ಕನ್ನಡವನ್ನೇ ನೋಡುವುದಾದರೆ ನಮ್ಮ ಸಂಪ್ರದಾಯದಲ್ಲಿ ಜನಪದ ಹಾಡುಗಳು, ಕೀರ್ತನೆ, ಗಮಕ, ಯಕ್ಷಗಾನ ಮೊದಲಾದವುಗಳಿಂದ ಹಿಡಿದು ಸುಗ್ಗಿ ಹಾಡು, ಕೋಲೆಬಸವನ ಕುಣಿತದ ಹಾಡು ಮತ್ತು ಮಾತು ಮೊದಲಾದವೆಲ್ಲ ಕನ್ನಡದಲ್ಲೇ ಸಹಜವಾಗಿ ಇರುತ್ತಿದ್ದವು. ಹೋದಲ್ಲಿ ಬಂದಲ್ಲಿ ಜನರ ಕಿವಿಯ ಮೇಲೆ ಮತ್ತು ಪರಿಸರದಲ್ಲಿ ಕನ್ನಡವೇ ಕಂಪು ಹರಡುತ್ತಿತ್ತು. ಕಿವಿಯ ಮೇಲೆ ಇಂಪು ಬೀರುತ್ತಿತ್ತು. ಹೀಗೆ ಸಹಜ ರೀತಿಯಲ್ಲಿ ಭಾಷೆ ಉಳಿದು ಬರಬೇಕೇ ವಿನಾ ಯಾವುದೇ ನಿಯಮಗಳ ಮೂಲಕ ಅಲ್ಲ. ಕನ್ನಡ ಮಾಧ್ಯಮ ಕಲಿಕೆಯಲ್ಲಿ ಕಡ್ಡಾಯ ಎಂಬುದು ಕೂಡ ಇದೇ ರೀತಿಯದ್ದು. ಈ ಕಾರಣಕ್ಕಾಗಿಯೇ ಪರ-ವಿರೋಧ ಚರ್ಚೆಗಳು ಉಂಟಾದದು ಮತ್ತು ಸರ್ವೋಚ್ಚ ನ್ಯಾಯಾಲಯ ತೀರ್ಪು ಕೊಡಬೇಕಾಗಿ ಬಂದದು. ಹಾಗೆ ನೋಡಿದರೆ ಕನ್ನಡ ಕಲಿಕೆ ಮಾಧ್ಯಮವಾಗಬೇಕು ಎಂಬ ಸಮಸ್ಯೆಯ ಮೂಲ 40 ವರ್ಷಗಳ ಹಿಂದಿದೆ. ಗೋಕಾಕ್ ಸಮಿತಿ 1981ರಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡವೇ ಕಲಿಕಾ ಮಾಧ್ಯಮವಾಗಬೇಕು ಎಂದು ವರದಿ ನೀಡಿದ್ದರ ಆಧಾರದಲ್ಲಿ 1982ರಲ್ಲಿ ಸರ್ಕಾರ ಹೀಗೆ ಆದೇಶ ನೀಡಿತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. 1984ರಲ್ಲಿ ಕೇಸು ಬಿತ್ತು. ಸ್ವಲ್ಪ ಕಾಲ ಸುಮ್ಮನಿದ್ದ ಸರ್ಕಾರ ಮತ್ತೆ 1994ರಲ್ಲಿ 1ರಿಂದ 4 ನೇ ತರಗತಿವರೆಗೆ ಕನ್ನಡವಲ್ಲದೇ ಬೇರೆ ಮಾಧ್ಯಮದಲ್ಲಿ ಕಲಿಸುವ ಶಾಲೆಗಳಿಗೆ ಅನುಮತಿ ಕೊಡುವುದಿಲ್ಲ ಎಂದು ಆದೇಶಿಸಿತು. ಕೆಲವು ಖಾಸಗಿ ಶಾಲೆಗಳು ಕನ್ನಡದಲ್ಲೇ ಕಲಿಸುತ್ತೇವೆಂದು ಅನುಮತಿ ಪಡೆದು ಇಂಗ್ಲಿಷ್‍ನಲ್ಲಿ ಬೋಧಿಸತೊಡಗಿದವು. ಮತ್ತೆ ತಕರಾರು ಎದ್ದು ನ್ಯಾಯಾಲಯದ ಮೆಟ್ಟಿಲಿಗೆ ಹೋಯಿತು. ಮತ್ತೆ ಸರ್ಕಾರದ ಆದೇಶ ಬಿತ್ತು. 2009ರಲ್ಲಿ ಕೇಸು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯಿತು, ಮತ್ತೆ ಇದೇ ರೀತಿಯ ತೀರ್ಪು ಹೊರಬಿತ್ತು. ಈ ತೀರ್ಪಿನಿಂದ ಕನ್ನಡ ಶಾಶ್ವತವಾಗಿ ಸತ್ತೇ ಹೋಗುತ್ತದೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಹೌದೇ? ಇದರಿಂದ ಕನ್ನಡ ಸತ್ತೇ ಹೋಗುತ್ತಾ? ನಮ್ಮ ದೇಶದಲ್ಲಿ ಬಹುತೇಕ ಭಾಷಿಕ ಸಮುದಾಯಗಳು ಒಂದಕ್ಕಿಂತ ಹೆಚ್ಚು ಭಾಷೆಗಳ ಸಂಪರ್ಕದಲ್ಲಿ ಸಾವಿರಾರು ವರ್ಷಗಳಿಂದ ಇವೆ. ಉದಾಹರಣೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುವವರು ತೆಲುಗು, ತಮಿಳು ಕೃತಿಗಳನ್ನು ಸೊಗಸಾಗಿ ನಿರೂಪಿಸುತ್ತಾರೆ. ಮೂಲತಃ ಕನ್ನಡೇತರ ಮೂಲದ ಸಾಹಿತಿಗಳಾದ ಮಾಸ್ತಿ, ಡಿ.ವಿ.ಜಿ. ಜಯವಂತ ದಳವಿ, ಕುಂ.ವೀ, ಬೊಳುವಾರು, ಕೈಯಾರ ಮೊದಲಾದವರ ಮನೆಯ ಭಾಷೆ ಬೇರೆಯಾದರೂ ಕನ್ನಡಕ್ಕೆ ಅಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ಇಲೆಲ್ಲೂ ಭಾಷೆ ಒಂದು ಸಮಸ್ಯೆಯಾಗಿ ಕಾಡಿಲ್ಲ. ಆದರೆ ಇಂದು ನಮಗೆ ಕಲಿಕಾ ಮಾಧ್ಯಮವಾಗಿ ಕನ್ನಡ ಮತ್ತು ಇತರ ಭಾಷೆಗಳು ಸಮಸ್ಯೆಯಾಗಿ ಏಕೆ ಕಾಣುತ್ತಿದೆ?
ಪ್ರತಿವರ್ಷದ ಶೈಕ್ಷಣಿಕ ಅಧಿಕೃತ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಂತದಲ್ಲಿ ಓದುತ್ತಿರುವ ಮಕ್ಕಳು ಇಂಗ್ಲಿಷ್ ಮಾಧ್ಯಮದ ಮಕ್ಕಳಿಗಿಂತ ಹೆಚ್ಚಾಗಿದ್ದಾರೆ. ಅದೇ ರೀತಿ, ಉರ್ದು, ಮರಾಠಿ, ಹಾಗೂ ತಮಿಳು, ಹಾಗೂ ತೆಲುಗು ಓದುವ ಮಕ್ಕಳು ಕೂಡ ಇದ್ದಾರೆ. ಪ್ರೌಢಶಾಲೆಯ ಮಟ್ಟದವರೆಗೆ ಕನ್ನಡ ಮಾಧ್ಯಮ ಆಯ್ದುಕೊಂಡವರ ಸಂಖ್ಯೆ ಇನ್ನೂ ಹೆಚ್ಚು. ಇಂಗ್ಲಿಷ್ ಮಾಧ್ಯಮದ ಸಂಖ್ಯೆ ಕೂಡ ಕಡಿಮೆಯೇನೂ ಇಲ್ಲ. ಈ ಅಂಕಿಅಂಶ ಏನು ಹೇಳುತ್ತಿದೆ ಅಂದರೆ ಕರ್ನಾಟಕದ ಭೌಗೋಳಿಕ ವ್ಯಾಪ್ತಿಯಲ್ಲಿ ಕನ್ನಡವಲ್ಲದೇ ಉಳಿದ ಮಾತೃಭಾಷಿಕ ಮಕ್ಕಳೂ ಕಲಿಕೆಯಲ್ಲಿದ್ದಾರೆ. ದೇಶದಲ್ಲಿ ತ್ರಿಭಾಷಾಸೂತ್ರ ಜಾರಿಯಾದ ಮೇಲೆ ಶಾಲಾ ಹಂತದಲ್ಲಿ ಮಕ್ಕಳು ತಮಗೆ ಇಷ್ಟವಾದ ಯಾವುದೇ ಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಯುವ ಅವಕಾಶವಿದೆ. ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಕಲಿಸುವ ಶಿಕ್ಷಕ ಮಿತ್ರರೊಬ್ಬರ ಪ್ರಕಾರ ಅವರ ತರಗತಿಗೆ ಕನ್ನಡೇತರ ಅದರಲ್ಲೂ ಉತ್ತರ ಭಾರತದ ಮಕ್ಕಳು ಹೆಚ್ಚಾಗಿ ಬರುತ್ತಾರೆ. ಆ ಮಕ್ಕಳ ಕನ್ನಡ ಓದು-ಬರಹ ಪರವಾಗಿಲ್ಲ ಆದರೆ ಮಾತು ಅಷ್ಟು ಚೆನ್ನಾಗಿಲ್ಲವಂತೆ. ದ್ವಿತೀಯ ಮತ್ತು ತೃತೀಯ ಭಾಷೆಯಾಗಿ ಅನ್ಯ ಭಾಷೆಗಳನ್ನು ಕಲಿಯುವ ಕನ್ನಡ ಮಕ್ಕಳು ಕೂಡ ಹೀಗೆಯೇ ಇರುತ್ತಾರೆ. ಮನೆ ಮತ್ತು ಸುತ್ತಲಿನ ಪರಿಸರವೆಲ್ಲ ಒಂದೇ ಭಾಷೆಯಿಂದ ಆವೃತವಾದಾಗ ಆ ಭಾಷೆ ಸಮೃದ್ಧವಾಗಿ ಬೆಳೆಯುತ್ತದೆ. ಇದು ಕಾನೂನು ಮೂಲಕ ಸಾಧ್ಯವಿಲ್ಲ. ಕನ್ನಡವೇ ಕಲಿಕಾ ಮಾಧ್ಯಮ ಎಂದರೆ ಇವರೆಲ್ಲ ಏನು ಮಾಡಬೇಕು? ಕರ್ನಾಟಕದಲ್ಲಿದ್ದ ಮೇಲೆ ಕನ್ನಡದಲ್ಲೇ ಕಲಿಯಬೇಕು ಎಂದು ಷರತ್ತು ವಿಧಿಸುವಂತಿಲ್ಲ. ನಮ್ಮದು ಗಣರಾಜ್ಯ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಪಂಕ್ತಿಭೇದ ಪ್ರಶ್ನಿಸುವವರು ಭಾಷಾಭೇದವನ್ನೂ ಪ್ರಶ್ನಿಸಬೇಕಾಗುತ್ತದೆ.
ಈಗ ಮತ್ತೆ ನಾವು ಕಲಿಕಾ ಮಾಧ್ಯಮಕ್ಕೆ ಹಿಂದಿರುಗೋಣ. ಕಲಿಕಾ ಮಾಧ್ಯಮಕ್ಕೂ ಜ್ಞಾನಗಳಿಕೆಗೂ ಮತ್ತು ಭಾಷೆಯೊಂದರ ಅಳಿವು-ಉಳಿವಿಗೂ ಸಂಬಂಧವಿಲ್ಲ ಎಂಬುದು ಸ್ಪಷ್ಟ. ಹಾಗಾದರೆ ಕಲಿಕಾ ಮಾಧ್ಯಮ ಮತ್ತು ಜ್ಞಾನ ಗಳಿಕೆಗೆ ಕಲ್ಪಿಸಿರುವ ಸಂಬಂಧ ತೀರಾ ಕೃತಕವಾದದು ಮತ್ತು ಭಾಷೆಗಳ ನಡುವೆ ಹುಟ್ಟಿಸಿರುವ ವೈರತ್ವ ಕೂಡ ಸರಿಯಾದುದಲ್ಲ. ಭಾಷೆಯನ್ನು ಒಂದು ಸಂವಹನ ಮಾಧ್ಯಮ ಭಾಷೆಯೇ ಜ್ಞಾನವಲ್ಲ ಎಂಬ ವೈಜ್ಞಾನಿಕ ಸತ್ಯವನ್ನು ಅರ್ಥಮಾಡಿಕೊಂಡಾಗ ಕಲಿಕಾ ಮಾಧ್ಯಮದ ಸಂಗತಿ ಕ್ಷುಲ್ಲಕವಾಗಿ, ರಾಜಕೀಯದ್ದಾಗಿ ಕಾಣುತ್ತದೆ. ಆಗ ಭಾಷೆಯೊಂದರ ಅಳಿವು-ಉಳಿವು ಕಲಿಕಾ ಮಾಧ್ಯಮದಿಂದ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಮ್ಮ ಸಂಪ್ರದಾಯ ಬೆಳೆಸಿಕೊಂಡು ಬಂದ ಜ್ಞಾನ ಪರಂಪರೆಯನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ.
ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಓದಿಸಬೇಕೆಂಬ ನಿರ್ಧಾರ ಪಾಲಕ, ಪೋಷಕರದ್ದು ಎಂದು ವಿಶ್ವಸಂಸ್ಥೆ ಬಹಳ ಹಿಂದೆಯೇ ಜಾಗತಿಕ ಮಾರ್ಗದರ್ಶಿ ಸೂತ್ರ ನೀಡಿದೆ. ಎಲ್ಲ ದೇಶಗಳೂ ಅದನ್ನು ಪಾಲಿಸುತ್ತಿವೆ ಎಂಬುದನ್ನು ಈ ಜಗತ್ತಿನ ಭಾಗವಾದ ನಾವು ಮರೆಯುವಂತಿಲ್ಲ. 1998ರಲ್ಲಿ ತಮಿಳುನಾಡು ಸರ್ಕಾರವೂ ಪ್ರಾಥಮಿಕ ಹಂತದಲ್ಲಿ ತಮಿಳು ಮಾಧ್ಯಮವೇ ಕಡ್ಡಾಯ ಎಂದು ಆದೇಶ ಹೊರಡಿಸಿದಾಗ ಮದ್ರಾಸ್ ಉಚ್ಚ ನ್ಯಾಯಾಲಯ ಆ ಆದೇಶವನ್ನು 2001ರಲ್ಲಿ ರದ್ದು ಮಾಡಿತ್ತು. ಆಗಲೂ ಆ ನ್ಯಾಯಾಲಯ ನೀಡಿದ ತೀರ್ಪು ಕರ್ನಾಟಕ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪುಗಳಿಗೆ ಅನುಗುಣವಾಗಿಯೇ ಇತ್ತು. ಹಾಗಾದರೆ ಈ ಯಾವುದೇ ನ್ಯಾಯಾಲಯದ ಆಶಯಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ ಅಲ್ಲವೇ?
ಇಸ್ರೇಲಿನಲ್ಲಿ ಅರೇಬಿಕ್ ಜೊತೆ ಹೀಬ್ರೂ ಕೂಡ ಇಂದು ಅಧಿಕೃತ ಆಡಳಿತ ಭಾಷೆ. ಕ್ರಿ.ಶ ಆರಂಭದ ವೇಳೆಗೆ ಜನಮಾನಸದಿಂದ ದೂರವಾಗಿ ನಿಜಕ್ಕೂ ಸತ್ತೇ ಹೋಗಿದ್ದ ಈ ಭಾಷೆಗೆ 19ನೆಯ ಶತಮಾನದಿಂದ ಜೀವಕೊಡುವ ಕೆಲಸ ಒಬ್ಬ ವ್ಯಕ್ತಿಯಿಂದ ನಡೆಯತೊಡಗಿತು. ಒತ್ತಡ, ಹೇರಿಕೆ ಮೂಲಕ ಅಲ್ಲ, ಸಾಂಸ್ಕøತಿಕ ಎಚ್ಚರ ಹಾಗೂ ಅಭಿಮಾನವನ್ನು ಯಹೂದಿ ಜನರಲ್ಲಿ ಹುಟ್ಟಿಸುವ ಮೂಲಕ. ಅದಕ್ಕೆ ಏನೆಲ್ಲ ಕೆಲಸ ನಡೆಯಿತು ಎಂಬುದೇ ಬೇರೆ ಕತೆ. ಆದರೆ ಈಗ ಅಮೆರಿಕವೂ ಸೇರಿ ಪ್ರಪಂಚದ 9 ದಶಲಕ್ಷ ಜನ ಈ ಭಾಷೆ ಮಾತನಾಡುತ್ತಾರೆ! ಸರ್ಕಾರ ಅಲ್ಲಿ ಹೀಬ್ರೂವನ್ನು ಎಲ್ಲೂ ಕಡ್ಡಾಯ ಮಾಡಿರಲಿಲ್ಲ, ಜನರ ಯತ್ನಕ್ಕೆ ಪೂರಕ ವಾತಾವರಣ, ಉತ್ತೇಜನಗಳನ್ನು ನೀಡಿತ್ತು ಅಷ್ಟೆ. ಈಗ ಹೇಳಿ. ಜನ ಮನಸ್ಸು ಮಾಡಿದರೆ ಏನು ಬೇಕಾದರೂ ನಡೆಯುತ್ತದೆ. ಅವರಿಗೆ ಬೇಡ ಅಂದರೆ ಜನತಂತ್ರ ವ್ಯವಸ್ಥೆಯಲ್ಲಿ ನೀವು ಯಾವುದೇ ಹೇರಿಕೆ, ಒತ್ತಡ, ಬೆದರಿಕೆ ಒಡ್ಡುವಂತಿಲ್ಲ. ಅದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಸುಪ್ರೀಂ ಕೋರ್ಟ್ ಭಾಷೆ ಎಂದಲ್ಲ, ಯಾವುದೇ ವಿಷಯದಲ್ಲೂ ಗಮನಿಸುವುದು ಈ ಸಂಗತಿಯನ್ನು. ಈಗ ಆಗಿರುವುದೂ ಅದೇ. ಕನ್ನಡ ಕಲಿಸಬೇಡಿ ಎಂದು ಘನ ನ್ಯಾಯಾಲಯ ಹೇಳಿಲ್ಲ. ಮುಗಿಬಿದ್ದು ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲೇ ಕಲಿಸುವ ಶಾಲೆಗೆ ಸೇರಿಸುತ್ತೇವೆ ಎಂದರೆ ಅದನ್ನೂ ಬೇಡ ಅನ್ನುವುದಿಲ್ಲ. ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಕುಸ್ಮಾ) ಕೂಡ ಒಂದು ಭಾಷೆಯಾಗಿ, ವಿಷಯವಾಗಿ ಕನ್ನಡವನ್ನು ಕಲಿಸಲು ಸಿದ್ಧವಿದೆ. ಅದು ಕೂಡ ಕನ್ನಡ ವಿರೋಧಿ ಸಂಘವಲ್ಲ. ಆದರೆ ಈ ಸಂಸ್ಥೆಯ ಜೊತೆ ಸೇರಿ ದಶಕಗಳ ಕಾಲ ಕನ್ನಡ ನೆಲದ ಪೋಷಕರು, ಪಾಲಕರು ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುತ್ತಾರೆಂದರೆ ಸಮಸ್ಯೆಯನ್ನು ಸರ್ಕಾರ ಸರಿಯಾಗಿ ಅರ್ಥಮಾಡಿಕೊಂಡಿಲ್ಲ, ಹೋರಾಟಗಾರರು, ಸಾಹಿತಿಗಳು, ಮಾಧ್ಯಮಗಳು ಸರ್ಕಾರವನ್ನು ಹಾದಿ ತಪ್ಪಿಸುತ್ತಿವೆ ಎಂದೇ ಅರ್ಥ.
ಕರ್ನಾಟಕದಲ್ಲಿರುವ ಪ್ರಾಥಮಿಕ ಶಾಲೆಗಳ ಅಂಕಿ ಅಂಶಗಳ ಪ್ರಕಾರ ಸರ್ಕಾರಿ ಶಾಲೆಗಳಿಗಿಂತ ಅನುದಾನವಿಲ್ಲದ ಖಾಸಗಿ ಶಾಲೆಗಳೇ ಹೆಚ್ಚಾಗಿವೆ ಮತ್ತು ಪ್ರತಿವರ್ಷ ಇವು ಹೆಚ್ಚತ್ತಲೇ ಹೋಗುತ್ತಿವೆ. ಪಾಲಕ, ಪೋಷಕರ ಒತ್ತಡ ಇದಕ್ಕೆ ಕಾರಣ. ನಿಜವಾಗಿ ನಮ್ಮಲ್ಲಿ ಮಾತೃಭಾಷೆಯಿಂದಲೇ ಕಲಿಕೆ ಸಾಧ್ಯ ಎಂದು ಹಕ್ಕೊತ್ತಾಯ ಮಾಡಿದರೆ ಇದರಿಂದ ಉಂಟಾಗುವ ಸಮಸ್ಯೆ ಸಂಕೀರ್ಣವಾಗುತ್ತಾ ಹೋಗುತ್ತದೆ. ಉದಾಹರಣೆಗೆ ಕರ್ನಾಟಕದಲ್ಲಿ ಮಾತೃಭಾಷೆ ಕನ್ನಡವೇ ಕಲಿಕಾ ಮಾಧ್ಯಮ ಆಗಬೇಕು ಎಂದರೆ ಯಾವ ಕನ್ನಡ ಎಂಬ ಪ್ರಶ್ನೆ ಎದುರಾಗುತ್ತದೆ. ಮಾತೃಭಾಷೆ ಎಂದರೆ ಸಂವಿಧಾನದ 350 (ಎ) ವಿಧಿಯಂತೆ ಯಾವುದೇ ರಾಜ್ಯದ ಭಾಷಾ ಅಲ್ಪಸಂಖ್ಯಾತರ ಭಾಷೆ ಎಂದರ್ಥ ಎಂದಿದೆ ನ್ಯಾಯಾಲಯ. ಹಾಗಾದರೆ ಕನ್ನಡದಲ್ಲಿ ಹವ್ಯಕ, ಕೊಂಕಣಿ, ಕೊಡವ, ತುಳು, ಸಂಕೇತಿ ಮೊದಲಾದ ಭಾಷಾ ಅಲ್ಪ ಸಂಖ್ಯಾತರು ನಮ್ಮ ಮಕ್ಕಳಿಗೆ ನಮ್ಮ ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ ಎಂದು ಸರ್ಕಾರಕ್ಕೆ ದುಂಬಾಲು ಬಿದ್ದರೆ... ಸರ್ಕಾರ ಇದನ್ನು ಆಗುಮಾಡಬಲ್ಲುದೇ? ಸಾಧ್ಯವೇ ಇಲ್ಲ. ಕನ್ನಡ ಕಲಿಕೆಯಲ್ಲಿ ಇರುವ ಪಠ್ಯಗಳು ಮತ್ತು ಮಾಧ್ಯಮಗಳಲ್ಲಿ ಬಳಕೆಯಾಗುವ ಕನ್ನಡದಲ್ಲಿ ಕರಾವಳಿ, ಉತ್ತರ ಕರ್ನಾಟಕ, ಕೊಡವ, ಮಲೆನಾಡು ನಂಜನಗೂಡು-ಎಳಂದೂರು ಕನ್ನಡಗಳು ಬಳಕೆಯಾಗುವುದಿಲ್ಲ. ಇವುಗಳ ಮೇಲೆ ಮೈಸೂರು-ಬೆಂಗಳೂರು ಕನ್ನಡವನ್ನು ಹೇರುವ ಪ್ರಯತ್ನ ಆಗುವುದಿಲ್ಲವೇ?
ಇತ್ತೀಚೆಗೆ ಕರ್ನಾಟಕ ರಾಜ್ಯದ ಎಸ್.ಎಸ್.ಎಲ್.ಸಿ ಫಲಿತಾಂಶ ಹೊರಬಿದ್ದಿದ್ದು ಇದು ಅನೇಕ ಆಸಕ್ತಿದಾಯಕ ಸಂಗತಿಗಳನ್ನು ಹೊರಹಾಕಿದೆ. ಇದರ ಪ್ರಕಾರ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಮಕ್ಕಳ ಸರಾಸರಿ ಫಲಿತಾಂಶ ಶೇ. 80ರ ಮೇಲಿದ್ದರೆ ನಮ್ಮ ಕನ್ನಡ ಮಾಧ್ಯಮದ ಮಕ್ಕಳು ಶೇ. 60-70ರಷ್ಟು ಉತ್ತೀರ್ಣರಾಗಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ಬಗೆಯ ಫಲಿತಾಂಶ ಕಂಡುಬರುತ್ತಿದೆ. ಇದನ್ನು ಗಮನಿಸುವ ಹೋರಾಟಗಾರರು ಮತ್ತು ಭಾಷಾ ಪ್ರೇಮಿಗಳು ಇಂಗ್ಲಿಷ್ ಮೌಲ್ಯಮಾಪಕರು ಇಂಗ್ಲಿಷ್ ಮಾಧ್ಯಮದ ಮಕ್ಕಳ ಪತ್ರಿಕೆಯನ್ನು ಉದಾರವಾಗಿ ಪರಿಗಣಿಸಿ ಅಂಕಗಳನ್ನು ಉದಾರವಾಗಿ ಕೊಡುತ್ತಿದ್ದಾರೆ. ಇದರಿಂದ ಕನ್ನಡ ಮಾಧ್ಯಮದ ಮಕ್ಕಳಿಗೆ ಅನ್ಯಾಯ ಅಪಚಾರಗಳಾಗುತ್ತಿದ್ದು ಕನ್ನಡ ಮೌಲ್ಯಮಾಪಕರು ಕೂಡ ಉದಾರವಾಗಿ ಕನ್ನಡ ಮಕ್ಕಳಿಗೆ ಅಂಕ ಕೊಡಬೇಕೆಂಬ ಒತ್ತಾಯ ಮಾಡುತ್ತಾರೆ. ಆಯ್ತು. ಹಾಗೆಯೇ ಮಾಡೋಣ. ಕನ್ನಡ ಮಾಧ್ಯಮ ಮಕ್ಕಳಿಗೆ ಎಳೆದೆಳೆದು ಅಂಕ ಕೊಟ್ಟು ಶೇ. 90ರಷ್ಟು ಫಲಿತಾಂಶ ಬರುವಂತೆ ಮಾಡಿದೆವು ಎಂದೇ ಇಟ್ಟುಕೊಳ್ಳೋಣ! ಇದರಿಂದ ಮಕ್ಕಳ ಜ್ಞಾನಮಟ್ಟ ಬೆಳೆಯಿತೇ? ಇಂದರಿಂದ ಹುಟ್ಟುವ ಮುಂದಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದು ಹೇಗೆ? ಒಟ್ಟಿನಲ್ಲಿ ಕಲಿಕಾ ಮಾಧ್ಯಮದಲ್ಲಿ ಸಮಾನ ಅವಕಾಶ ಮತ್ತು ಆಯ್ಕೆಗಳನ್ನು ಪೋಷಕರಿಗೆ ಬಿಡಬೇಕು ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ಮಾಧ್ಯಮದಲ್ಲೂ ರಾಜಿ ಮಾಡಿಕೊಳ್ಳಬಾರದು ಕನ್ನಡದ ಕಂಪು ಮತ್ತು ಇಂಪು ಯಾವಾಗಲೂ ಇರುವ ವಾತಾವರಣ ರೂಪಿಸಬೇಕು. ಮಕ್ಕಳ ಕಿವಿ, ಕಣ್ಣು ಹಾಗೂ ಅವರ ಪಂಚೇಂದ್ರಿಯಗಳಿಗೆ ಕಲಿಕೆಯ ಅನುಭವ ದಕ್ಕಬೇಕು ಆಗ ಮಾತ್ರ ಭಾಷೆ, ಶಿಕ್ಷಣ, ಸಮಾಜ ಉದ್ದಾರವಾಗುತ್ತದೆ.
ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಕಲಿತರೆ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ ಎಂಬ ಭ್ರಮೆ 1990ರ ದಶಕದಿಂದ ಪಾಲಕರ ತಲೆಯಲ್ಲಿ ಹೊಗತೊಡಗಿತು. ಇಂಥ ವಾತಾವರಣ ನಿರ್ಮಿಸಿದ್ದು ಸರ್ಕಾರದ ನೀತಿಗಳೇ ವಿನಾ ಬೇರೆ ಯಾವುದೂ ಅಲ್ಲ. ಜಿಲ್ಲಾ, ತಾಲ್ಲೂಕು ಕೇಂದ್ರಗಳಿಂದ ದೂರವಿರುವ ಬಹುತೇಕ ಗ್ರಾಮೀಣ ಮಕ್ಕಳು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲೇ ಇಂದಿಗೂ ಕಲಿಯುತ್ತಾರೆ. ಏಕೆಂದರೆ ಅವರಿಗೆ ಬೇರೆ ಆಯ್ಕೆ ಇಲ್ಲ. ಆಯ್ಕೆ ಇದ್ದಿದ್ದರೆ? ಸರ್ಕಾರದ ಬಳಿ ಇದಕ್ಕೆ ಉತ್ತರವಿಲ್ಲ. ಶಿಕ್ಷಕರಿಗೆ, ಅಧಿಕಾರಿಗಳಿಗೆ ಇನ್ನಿಲ್ಲದ ಸವಲತ್ತು, ಊಟ ಕೊಡುವ, ಹಣ ಕೊಡುವ ಆಮಿಷಗಳನ್ನು ಮಕ್ಕಳಿಗೆ ನೀಡಿಯೂ ಸರ್ಕಾರಿ ಶಾಲೆಗಳು ದಿನೇ ದಿನೇ ಸೊರಗುತ್ತಿವೆ. ಇದರ ಬಗ್ಗೆ ಬೇಕಾದಷ್ಟು ಚರ್ಚೆಗಳೂ ಆಗಿವೆ. ಆದರೂ ಪಾಲಕರು ಅನಿವಾರ್ಯವಲ್ಲದಿದ್ದರೆ ಖಂಡಿತ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಬಯಸುತ್ತಿಲ್ಲ. ಇದರ ಮೂಲ ಕಾರಣಗಳನ್ನು ಸರ್ಕಾರ ಶೋಧಿಸಿ ಸರಿಪಡಿಸಿದ್ದರೆ ಇಂಥ ದುರ್ಗತಿ ಬರುತ್ತಿರಲಿಲ್ಲ. ಬೇಡವೆಂದು ದೂರ ಹೋಗುವ ಜನರನ್ನು ಹಗ್ಗ ಹಾಕಿ ಎಳೆದು ತರುತ್ತೇವೆ ಎಂಬುದು ಸರಿಯಲ್ಲ. ಮಕ್ಕಳಿಗೆ ಉತ್ತಮ ವ್ಯವಸ್ಥೆ, ಮೂಲಸೌಕರ್ಯ ಒದಗುವುದನ್ನು ಕಂಡು ಅವರೇ ಒಲಿದು ಓಡೋಡಿ ಬರುವಂತೆ ಮಾಡದೇ ಹಿಡಿದಿಡುವ ಕಾನೂನು ಮಾಡಲು ಹೊರಟರೆ ಯಶಸ್ಸು ದೊರೆಯದು.
ಇದೇ ಎಸ್.ಎಸ್.ಎಲ್.ಸಿ ಫಲಿತಾಂಶದ ಜೊತೆಗೆ ಕನ್ನಡ ಮತ್ತು ಗ್ರಾಮೀಣ ಭಾಗದಲ್ಲಿ ಆಂಗ್ಲಭಾಷೆಯ ಶಿಕ್ಷಕರ ಸಮಸ್ಯೆಯ ಕೊರತೆ ಕೂಡ ವರದಿಯಾಗಿದೆ. ರಾಜ್ಯದ ಬಹುತೇಕ ಶಾಲೆಗಳಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಆಂಗ್ಲಭಾಷೆಯನ್ನು ಬೋಧಿಸುವ ಶಿಕ್ಷಕರ ಪ್ರಮಾಣ ತುಂಬಾ ಕಡಿಮೆ ಇದೆ. ಅದರಲ್ಲೂ ಸರಿಯಾಗಿ ಭಾಷೆ ಕಲಿಸುವ ಶಿಕ್ಷಕರು ದೊರಕುವುದು ತುಂಬಾ ದುರ್ಲಭ. ಈ ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ರಾಜ್ಯದ ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಕಲಿಕೆಗೆ ಒತ್ತಾಸೆ ಕೊಡುವ ನಿರ್ಧಾರ ಕೈಗೊಂಡು ಗ್ರಾಮೀಣ ಮಕ್ಕಳನ್ನು ಆಧುನಿಕ ಜಗತ್ತಿನಲ್ಲಿ ಸ್ಪರ್ಧಾತ್ಮಕಗೊಳಿಸಲು ಮುಂದಾಗಿದ್ದರು. ಹೀಗೆ ಮಾಡಿದರೆ ಕನ್ನಡ ಸರ್ವನಾಶವಾಗುತ್ತದೆ ಎಂದು ಚಿಂತಕರು, ಮುಂದಿನ ಸಾಲಿನ ಸಾಹಿತಿಗಳು ಮೊದಲಾದವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜೊತೆ ಸೇರಿ ಹೋರಾಟ ನಡೆಸಿ ಹಾಗಾಗದಂತೆ ಮಾಡುವಲ್ಲಿ ಯಶಸ್ಸು ಕಂಡಿದ್ದರು. ಇದು ದಶಕಗಳ ಹಿಂದಿನ ಮಾತು ಚಿಂತಕರ ಮತ್ತು ಸಾಹಿತಿಗಳ ಬಯಕೆಯಂತೆಯೇ ಶಿಕ್ಷಣ ಕೊಡಲಾಗುತ್ತಿದೆ. ಆದರೆ ಪರಿಸ್ಥಿತಿ ಹಾಗೂ ಶಿಕ್ಷಣ ಸುಧಾರಣೆ ಆಯಿತೇ? ಇಲ್ಲ. ಅಂದರೆ ಸಮಸ್ಯೆಯ ಮೂಲ ಬೇರೆಲ್ಲೊ ಇದೆ ಎಂದರ್ಥ. ಹಾಗಾದರೆ ಸಮಸ್ಯೆ ಎಲ್ಲಿದೆ? ಇದು ಖಂಡಿತವಾಗಿಯೂ ಭಾಷೆ ಅಥವಾ ಮಾಧ್ಯಮದ್ದಲ್ಲ. ಮಕ್ಕಳು ಆಯಾ ಕಾಲದ ಅಗತ್ಯಕ್ಕೆ ಅನುಗುಣವಾಗಿ ಸಿದ್ಧವಾಗುವಂತೆ ಯಾವುದೇ ಮಾಧ್ಯಮದಲ್ಲಾಗಲಿ ನಾವು ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದೇವೆಯೇ ಎಂಬುದು ಮುಖ್ಯ. ಸುಮ್ಮನೆ ನೋಡುವುದಾದರೆ ಬೆಂಗಳೂರಿನಂಥ ನಗರದ ಬಹುತೇಕ ಕಡೆಗಳಲ್ಲಿ ಅನೇಕ ಬಗೆಯ ಉದ್ಯೋಗಗಳಿಗೆ ಲಕ್ಷಾಂತರ ಅವಕಾಶಗಳಿವೆ. ವ್ಯಂಗ್ಯ ಎಂದರೆ ಎಲ್ಲ ಬಗೆಯ ವಿಷಯದಲ್ಲಿ ಪದವಿ ಪಡೆದ ಅಷ್ಟೇ ಪ್ರಮಾಣದ ನಿರುದ್ಯೋಗಿಗಳು ಕೂಡ ಇದ್ದಾರೆ.
ಪ್ರಾಥಮಿಕ ಹಂತದಲ್ಲಿರುವ ಮೂರು ಬಗೆಯ ಪಠ್ಯಗಳು, ಸರ್ಕಾರ ಪದೇ ಪದೇ ಮೂಗು ತೂರಿಸುವ 14 ಹಂತಗಳ ಅಸಂಬದ್ಧ ಆಡಳಿತ ವ್ಯವಸ್ಥೆ, ಬದ್ಧತೆ ಇಲ್ಲದ ಶಿಕ್ಷಕರು, ಇತ್ಯಾದಿ ಸಮಸ್ಯೆಗಳನ್ನು ಜರೂರಾಗಿ ಸರಿಪಡಿಸಲು ಮುಂದಾಗುವ ಬದಲು ಕನ್ನಡವನ್ನೇ ಮಾಧ್ಯಮವನ್ನಾಗಿ ಹೇರುವ ಕಾನೂನು ಮಾರ್ಗ ಹುಡುಕುವ ವಿಫಲ ಯತ್ನದಲ್ಲಿ ಕಾಲತಳ್ಳಿದರೆ ಕನ್ನಡ ಉಳಿಸುವ ಆಶಯ ಮತ್ತು ಸಮಾಜದಲ್ಲಿ ಜ್ಞಾನ ತುಂಬುವ ಕೆಲಸ ಮತ್ತಷ್ಟು ದೂರವಾಗುತ್ತದೆ.
No comments:
Post a Comment