2014ರ ಮೇ 29 ಕರ್ನಾಟಕ ಲೋಕಾಯುಕ್ತರು ಐವರು ಅಧಿಕಾರಿಗಳ ಮೇಲೆ ದಾಳಿ ನಡೆಸಿ ಹದಿನೈದು ಕೋಟಿ ರೂ. ಅಕ್ರಮ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಂಡರು. ಈ ಐವರ ಬಳಿ ಏನುಂಟು ಏನಿಲ್ಲ? ಒಬ್ಬನ ಬಳಿಯಂತೂ ಕೆಜಿಗಟ್ಟಲೆ ಬಂಗಾರ, ಅಪಾರ ಹಣ, ಎರಡು ಭವ್ಯ ಬಂಗಲೆ, ಬೆಂಗಳೂರು ಸುತ್ತಮುತ್ತ ಏಳು ಸೈಟುಗಳು, ನಾಲ್ಕಾರು ಎಕರೆ ಭೂಮಿ, ವಾಣಿಜ್ಯ ಸಂಕೀರ್ಣಗಳು... ಇತ್ಯಾದಿ, ಇತ್ಯಾದಿ. ಇಂಥ ಪ್ರಕರಣಗಳು ಆಗಾಗ ಬಹಿರಂಗವಾಗುತ್ತಲೇ ಇರುತ್ತವೆ. ಲೋಕಾಯುಕ್ತರು ಹಿಡಿಯುವ ಪ್ರಕರಣಗಳಲ್ಲದೇ ಅಲ್ಲಲ್ಲಿ ಕೆಲವು ವ್ಯಕ್ತಿಗಳು ಹಿಡಿದುಕೊಡುವ, ಮಾಧ್ಯಮಗಳ ಕುಟುಕು ಕಾರ್ಯಾಚರಣೆಯಲ್ಲೂ ಸಿಕ್ಕಿಬೀಳುವ ಭ್ರಷ್ಟರಿದ್ದಾರೆ. ಕರ್ನಾಟಕದಲ್ಲಿ 1986ರಿಂದ ಲೋಕಾಯುಕ್ತ ಕೆಲಸಮಾಡುತ್ತಿದೆ. 2001ರಲ್ಲಿ ಎನ್ ವೆಂಕಟಾಚಲ ಅವರು ಲೋಕಾಯುಕ್ತರಾಗಿ ಬರುವವರೆಗೆ ಇಂಥದ್ದೊಂದು ಸಂಸ್ಥೆ ಇದೆ, ಅದರ ಕಾರ್ಯವ್ಯಾಪ್ತಿ ಬಗ್ಗೆ ಜನಕ್ಕೆ ಗೊತ್ತೇ ಇರಲಿಲ್ಲ. ಅವರು ಬರುವ ಮೊದಲು ಎ ಡಿ ಕೌಶಲ್, ರವೀಂದ್ರನಾಥ ಪ್ಯಾನೆ, ಅಬ್ದುಲ್ ಹಕೀಂ ಎಂಬುವರೆಲ್ಲ ಲೋಕಾಯುಕ್ತರಾಗಿದ್ದರು, ಅವರೆಲ್ಲ ಯಾವಾಗ ಬಂದರು, ಏನು ಮಾಡಿದರು, ಯಾವಾಗ ಹೋದರು ಎಂಬುದೆಲ್ಲ ಲೋಕಾಯುಕ್ತ ಕಚೇರಿಯ ದಾಖಲೆಗಳಲ್ಲಿದೆ. ಭ್ರಷ್ಟರಲ್ಲಿ ಎಚ್ಚರ ಹುಟ್ಟಿಸುವ ಮಾತಿರಲಿ, ಅನ್ಯಾಯವಾದರೆ ಇಂಥದ್ದೊಂದು ಸಂಸ್ಥೆಗೆ ದೂರು ಕೊಡಬಹುದಪ್ಪಾ ಎಂಬ ಅರಿವನ್ನು ಕೂಡ ಕನಿಷ್ಠಪಕ್ಷ ಜನರಲ್ಲಿ ಅವರು ಹುಟ್ಟಿಸಲಿಲ್ಲ. ನಮ್ಮ ಭ್ರಷ್ಟ ವ್ಯವಸ್ಥೆ ಅದುವರೆಗೆ ಲೋಕಾಯುಕ್ತರನ್ನೂ ತನ್ನ ಹಿಡಿತದಲ್ಲಿ ಇಟ್ಟುಕೊಂಡಿತ್ತೋ ಏನೋ? ಅದಿರಲಿ. ಅದು ಅವರವರ ಕಾರ್ಯಶೈಲಿ.
ಈ ಭ್ರಷ್ಟರು ಅಂತಿಂಥವರಲ್ಲ. ರಾಷ್ಟ್ರದ ಅರಣ್ಯ ಸಂಪತ್ತು ಕಾಯುವ ಐಎಫ್‍ಎಸ್ ಅಧಿಕಾರಿಯಿಂದ ಹಿಡಿದು ಸಮಾಜದ ಆರೋಗ್ಯ ಕಾಪಾಡಬೇಕಾದ ಅಬಕಾರಿ ಅಧಿಕಾರಿವರೆಗೆ ಎಲ್ಲ ಬಗೆಯವರೂ ಇದ್ದಾರೆ. ಇವರಲ್ಲಿ ಯಾರನ್ನಾದರೂ ಸಿಕ್ಕಿಬೀಳುವ ಮೊದಲು ಭ್ರಷ್ಟಾಚಾರ ಕುರಿತು ಮಾತನಾಡಿ ಎಂದು ಸಾರ್ವಜನಿಕ ವೇದಿಕೆಗೆ ಕರೆದಿದ್ದರೆ ಖಂಡಿತ ಭ್ರಷ್ಟಾಚಾರದಿಂದ ಆಗುವ ಅನಾಹುತ ಏನೇನು, ನಮ್ಮ ದೇಶ ಭ್ರಷ್ಟಾಚಾರ ರಹಿತವಾಗಬೇಕು ಇತ್ಯಾದಿ ಭಯಾನಕ ಭಾಷಣ ಮಾಡುತ್ತಿದ್ದರು. ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣರಾಜ್ಯ ದಿನ ಅಥವಾ ಗಾಂಧಿ ಜಯಂತಿ ದಿನ ಎಲ್ಲಾದರೂ ಶಾಲಾ ಮಕ್ಕಳ ಮುಂದೆ ಇಂಥ ಸಾಕಷ್ಟು ಭಾಷಣ ಮಾಡಿರಲೂ ಸಾಕು! ನಮ್ಮ ವ್ಯವಸ್ಥೆಯಲ್ಲಿನ ಬಹುತೇಕ ಅಧಿಕಾರಿಗಳು, ಅವರಿಗೆ ಆಶ್ರಯದಾತರಾದ ನೇತಾಗಳು ಇವರೆಲ್ಲ ಹೀಗೆ ಮುಖವಾಡ ಹಾಕಿರುವವರೇ. ಮಾಡುವುದು ಒಂದು, ಹೇಳುವುದು ಇನ್ನೊಂದು ಇವರ ಧರ್ಮ. ಸಮಾಜ ಕೂಡ ಇದನ್ನು ಒಪ್ಪಿಕೊಂಡಿದೆ. ಆದರೆ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು ಎಂಬ ಆದರ್ಶದ ಬೆನ್ನು ಹತ್ತುವುದನ್ನು ಬಿಟ್ಟಿಲ್ಲ. ಇದೊಂದು ಆಶಾದಾಯಕ ಸಂಗತಿ. ಇಂದಲ್ಲ ನಾಳೆ ಸರಿಯಾಗಬಹುದೇನೋ ಎಂಬ ಕನಸನ್ನು ಇದು ಜೀವಂತ ಇಟ್ಟಿದೆ.
ಭ್ರಷ್ಟಾಚಾರವನ್ನು ಹೊಡೆದೋಡಿಸಬೇಕು ಎಂಬುದು ಪ್ರಾಚೀನ ಕಾಲದಿಂದಲೂ ನಮ್ಮಲ್ಲಿರುವ ಕಾಳಜಿ. ಆದರೇನು? ಇತ್ತೀಚೆಗೆ ಟ್ರಾನ್ಸ್‍ಪರೆನ್ಸಿ ಇಂಟರ್‍ನ್ಯಾಶನಲ್ ಸಂಸ್ಥೆ 177 ದೇಶಗಳಲ್ಲಿ ಕೈಗೊಂಡ ಸಮೀಕ್ಷೆಯ ವರದಿ ಹೊರಬಿದ್ದಿದೆ. 2013ರ ಈ ವರದಿ ಪ್ರಕಾರ ಭ್ರಷ್ಟಾಚಾರದಲ್ಲಿ ಭಾರತ 94ನೆಯ ಸ್ಥಾನದಲ್ಲಿದೆ. 100ನೇ ಸ್ಥಾನದ ನಂತರ ಇರುವ ಪಾಕಿಸ್ತಾನ, ಲಿಬಿಯಾ, ನೇಪಾಳಗಳಿಗಿಂತ ನಾವು ಉತ್ತಮ ಎಂದು ಹೆಮ್ಮೆಪಡಬಹುದು! ಪ್ರಪಂಚದ ಭ್ರಷ್ಟಾತಿಭ್ರಷ್ಟ ದೇಶಗಳಲ್ಲಿ ಮಯನ್ಮಾರ್, ಸೋಮಾಲಿಯಾಗಳು ಸೇರಿದ್ದರೆ ಭ್ರಷ್ಟಾಚಾರವೇ ಇಲ್ಲದ ದೇಶಗಳಲ್ಲಿ ಡೆನ್ಮಾರ್ಕ್, ಫಿನ್ಲೆಂಡ್, ನ್ಯೂಜಿಲೆಂಡ್, ಸಿಂಗಪುರ ಮತ್ತು ಸ್ವೀಡನ್ ಸೇರಿವೆ. ಎಲ್ಲ ವಿಷಯಗಳಲ್ಲೂ ನಾವು ಮಾದರಿ ಎಂದು ಪರಿಗಣಿಸುವ ಅಮೆರಿಕ 20ನೇ ಸ್ಥಾನದಲ್ಲೂ ಬ್ರಿಟನ್ 13ನೇ ಸ್ಥಾನದಲ್ಲೂ ಇವೆ.
ಹುಟ್ಟಿನಿಂದ ಶ್ಮಶಾನ ಸೇರುವವರೆಗೆ ಲಂಚ ಪೀಕುತ್ತಲೇ ಇರಬೇಕಾದ ಪರಿಸ್ಥಿತಿ ಇರುವ ನಮ್ಮ ದೇಶವೇ ಪರವಾಗಿಲ್ಲ ಎಂಬ ಸ್ಥಾನದಲ್ಲಿದ್ದರೆ ಇನ್ನು ಭ್ರಷ್ಟಾತಿಭ್ರಷ್ಟ ದೇಶಗಳ ಜನರ ಕತೆ ಏನೆಂದು ಊಹಿಸಲೂ ಸಾಧ್ಯವಾಗದು. ಲಂಚಗುಳಿತನ ಹೆಚ್ಚು ನಡೆಯುವುದು ವಾಹನ, ಭೂಮಿ, ಕಂಪನಿಗಳ ನೊಂದಣಿ ಕಚೇರಿಗಳಲ್ಲಿ, ಜನನ-ಮರಣ ದಾಖಲೆ ನೀಡುವ ಮಹಾನಗರ ಪಾಲಿಕೆಗಳಲ್ಲಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ. ಬೆಂಗಳೂರಿನಲ್ಲಿ ಜನನ ಪ್ರಮಾಣ ಪತ್ರ ಪಡೆಯಲು ಸಾಮಾನ್ಯವಾಗಿ 450-3000ರೂ ತೆರಬೇಕು. ಇನ್ನು ಭೂ ದಾಖಲೆ ಲಂಚ ದರ ಭೂಮಿ ಇರುವ ಜಾಗ, ಅಳತೆ ಮೊದಲಾದ ಸಂಗತಿಗಳನ್ನು ಅವಲಂಬಿಸಿದ್ದರೂ ಕನಿಷ್ಠ 20 ಸಾವಿರ ರೂ.ಕೊಡಲೇಬೇಕು. ಇದೆಲ್ಲಕ್ಕಿಂತ ಹೀನ ಎಂದರೆ ಶವ ಸಂಸ್ಕಾರದ್ದು. ಶವವನ್ನು ವ್ಯಾನಿನಿಂದ ಇಳಿಸಲು 100ರೂ, ಶವಸ್ನಾನಕ್ಕೆ 150ರೂ, ಶವಪರೀಕ್ಷೆಗೆ 500-2500ರೂ, ಶವ ಹೂಳಲು 1000ರೂ. ಕೊಡಬೇಕು. ಇದು ಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಸಾಮಾನ್ಯ ಲಂಚ ದರ. ಅಪಘಾತ ಪ್ರಕರಣವಾದರೆ ಇದರ ಹತ್ತರಷ್ಟು ಹಣ ಪೊಲೀಸ್ ಮತ್ತು ಆಸ್ಪತ್ರೆಗೇ ಹೋಗುತ್ತದೆ. ಹಣ ನೀಡದಿದ್ದಲ್ಲಿ ಮದ್ಯ ಸೇವನೆಯಿಂದ ಹಿಡಿದು ಇಲ್ಲಸಲ್ಲದ ಮಾಹಿತಿಗಳು ಶವಪರೀಕ್ಷೆಯಲ್ಲಿ ಸೇರುತ್ತವೆ!
ಇವೆಲ್ಲ ನಮ್ಮ ಜನರಿಗೆ ನಿತ್ಯ ಅರಿವಾಗುವ ಸಂಗತಿಗಳೇ. ಆದರೂ ಯಾರೂ ಇದನ್ನು ಪ್ರತಿಭಟಿಸುವುದಿಲ್ಲ, ಪ್ರಶ್ನಿಸುವುದೂ ಇಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಲಭಿಸಿದ ಭ್ರಷ್ಟಾಚಾರದ ರ್ಯಾಂಕು ನಮ್ಮ ಅಧಿಕಾರಿಗಳು ಹಾಗೂ ನೇತಾಗಳಿಗಿಂತ ಹೆಚ್ಚಾಗಿ ಮಹಾನ್ ಪ್ರಜೆಗಳಿಗೇ ಸಲ್ಲಬೇಕು! ಏಕೆಂದರೆ ಪರವಾನಿಗೆ ಇಲ್ಲದೆ ವಾಹನ ಓಡಿಸುವುದರಿಂದ ಹಿಡಿದು ಅಕ್ರಮ ಕಟ್ಟಡ ಕಟ್ಟುವವರೆಗೆ ಎಲ್ಲಕಡೆಯೂ ಕಾನೂನಿನಿಂದ ಜಾರಿಕೊಳ್ಳಲು ಯತ್ನಿಸುವ ಖದೀಮರೇ ತಮ್ಮ ಮೇಲೆ ಕ್ರಮ ಜರುಗಿಸದಂತೆ ಅಧಿಕಾರಿಗಳನ್ನು ಆಮಿಷದ ಮೂಲಕ, ಪ್ರಭಾವದ ಮೂಲಕ ಸುಮ್ಮನಾಗಿಸುತ್ತಾರೆ. ನೈತಿಕ ಹೊಣೆಗಾರಿಕೆ ಸಮಾಜದ ಬಹುವರ್ಗಕ್ಕೇ ಇಲ್ಲದಿದ್ದ ಮೇಲೆ ಸಮಾಜದ ಒಂದು ಭಾಗವಾದ ಆಡಳಿತ ಯಂತ್ರ, ಸರ್ಕಾರಕ್ಕೆ ಎಲ್ಲಿಂದ ಬರಬೇಕು?
ಪ್ರಧಾನಿಯಾಗಿ ಸ್ವತಃ ರಾಜೀವ್ ಗಾಂಧಿಯವರೇ ಯೋಜನೆಯೊಂದಕ್ಕೆ ಬಿಡುಗಡೆಮಾಡಿದ ಹಣದ ಒಂದು ರೂನಲ್ಲಿ 15 ಪೈಸೆ ಮಾತ್ರ ಫಲಾನುಭವಿಗೆ ದಕ್ಕುತ್ತದೆ ಎಂದು ಅಲವತ್ತುಕೊಂಡಿದ್ದರು. ದಶಕದ ನಂತರ ಈ ಪರಿಸ್ಥಿತಿ ಸುಧಾರಿಸುವ ಬದಲು ಅವರ ಮಗ ರಾಹುಲ್ ಗಾಂಧಿ ಒಂದು ರೂನಲ್ಲಿ ಎಂಟು ಪೈಸೆ ಮಾತ್ರ ಫಲಾನುಭವಿಗೆ ದಕ್ಕುತ್ತದೆ ಎಂದು ಪರಿಷ್ಕರಿಸುವಂತಾಯಿತು! ಏನೇ ಆಗಲಿ, ಈ ಪರಿಸ್ಥಿತಿ ಎಲ್ಲರಿಗೂ ಅರ್ಥವಾಗುತ್ತಿರುವುದು ಗುಣಾತ್ಮಕ ಲಕ್ಷಣ.
ಇದೀಗ ಲೋಕಾಯುಕ್ತರು ಬರೀ ಐದೇ ಜನರಿಂದ ಹದಿನೈದು ಸಾವಿರ ಪೀಕಿಸಿದ್ದಾರೆ. ಇಂಥ 14248 ಪ್ರಕರಣಗಳು ಇನ್ನೂ ಇತ್ಯರ್ಥವಾಗದೇ ಲೋಕಾಯುಕ್ತದಲ್ಲಿ ಬಾಕಿಬಿದ್ದಿವೆ. ಲೋಕಾಯುಕ್ತರು ದಾಳಿ ಮಾಡಿದಾಗ ವಶಪಡಿಸಿಕೊಂಡ ಸಾವಿರಾರು ಕೋಟಿ ರೂ. ನೋಟುಗಳು, ಕ್ವಿಂಟಾಲುಗಟ್ಟಲೆ ಒಡವೆಗಳು, ಜಮೀನು ದಾಖಲೆ ಪತ್ರಗಳನ್ನು ಕಾದಿಡುವುದೇ ಲೋಕಾಯುಕ್ತದ ಸಮಸ್ಯೆಗಳಲ್ಲಿ ಒಂದು ಎಂದು ಹಿಂದಿನ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆಯವರು ಹೇಳಿದ್ದರು. ವಿಶೇಷ ನ್ಯಾಯಾಲಯದಲ್ಲಿ ಕೂಡ ವರ್ಷದೊಪ್ಪತ್ತಿನಲ್ಲಿ ಕೇಸು ಬಗೆಹರಿಯುವುದಿಲ್ಲ. ಅದಾದ ಮೇಲೆ ಅಪೀಲುಗಳ ಮೇಲೆ ಅಪೀಲುಗಳು-ಹೀಗಾಗಿ ಒಮ್ಮೆ ದಾಖಲಾದ ಪ್ರಕರಣ ಭ್ರಷ್ಟ ವ್ಯಕ್ತಿಯ ಜೀವಮಾನವನ್ನೆಲ್ಲ ಕಬಳಿಸುತ್ತದೆ. ಆದರೆ ಮುಟ್ಟುಗೋಲು ಹಾಕಿಕೊಂಡ ಹಣ ಸಮಾಜಕ್ಕೇನೂ ಲಭ್ಯವಾಗುವುದಿಲ್ಲ! ಪ್ರಕರಣ ಇತ್ಯರ್ಥವಾಗುವವರೆಗೂ ಅದನ್ನು ಇದ್ದಂತೆಯೇ ಕಾದಿಡಬೇಕು! ಅದು ಮುರಿಯದಂತೆ, ಕೆಡದಂತೆ, ವಸ್ತುಗಳು ಕದ್ದುಹೋಗದಂತೆ ಲೋಕಾಯುಕ್ತ ಕಾದಿಡಬೇಕಲ್ಲ, ಇದು ನಿಜವಾದ ಸಮಸ್ಯೆ. ಆ ಹಣವನ್ನು ಬ್ಯಾಂಕಿನಲ್ಲೂ ಇಡುವಂತಿಲ್ಲವಾದ ಕಾರಣ ಅದಕ್ಕೆ ಬಡ್ಡಿಯೂ ಇಲ್ಲ. ಅಕ್ರಮ ಹಣ ಎಂದಿದ್ದರೂ ಭ್ರಷ್ಟನಿಗೆ ಸಿಗುವ ಸಂಭವವೇ ಇಲ್ಲವಾದಾಗಲೂ ಸರ್ಕಾರ ಅದನ್ನು ಪಡೆದು ಆ ಮೊತ್ತವನ್ನು ಬ್ಯಾಂಕಿನಲ್ಲಿರಿಸಿ ರಸ್ತೆ, ನೀರು ಇತ್ಯಾದಿ ಸಾಮಾಜಿಕ ಕೆಲಸಕ್ಕೆ ಬಳಸಬಹುದಲ್ಲ? ಇದಕ್ಕೆ ಪೂರಕವಾದ ಕಾನೂನು ಇನ್ನೂ ಇಲ್ಲ. ಹೀಗಾಗಿ ಲೋಕಾಯುಕ್ತರು ಭ್ರಷ್ಟರನ್ನು ಹಿಡಿದಷ್ಟೂ ಪಂಚನಾಮೆಯಾದ ಸಾಮಗ್ರಿಗಳನ್ನು ಪ್ರಕರಣ ಇತ್ಯರ್ಥವಾಗುವವರೆಗೆ ಕಾದಿಟ್ಟು ಕೋರ್ಟು ಕೇಳಿದಾಗ ಅದದೇ ನೋಟುಗಳನ್ನು, ಒಡವೆ ಇತ್ಯಾದಿಗಳನ್ನು ಹಾಜರುಪಡಿಸುವ ಸಮಸ್ಯೆ ಬೆಳೆಯುತ್ತದೆ.
ಹೀಗಾಗಿ ಲೋಕಾಯುಕ್ತರು ಭ್ರಷ್ಟರನ್ನು ಹಿಡಿದರು, ಎಷ್ಟೊಂದು ಅಕ್ರಮ ಸಂಪತ್ತು ಸಿಕ್ಕಿತೆಂದುಕೊಳ್ಳುವಂತಿಲ್ಲ. ಅದು ಕನ್ನಡಿಯೊಳಗಿನ ಗಂಟಾಗಿಬಿಡುತ್ತದೆ. ಹೀಗಾಗದೇ ಈ ಹಣ ಸಮಾಜದ ಒಳಿತಿಗೆ ಉಪಯುಕ್ತವಾಗುವಂತೆ ಸರ್ಕಾರ ಬಳಸಿಕೊಳ್ಳುವ ಮಾರ್ಗ ಹುಡುಕಬೇಕಿದೆ.
No comments:
Post a Comment