ಭಾರತೀಯ ಅಧ್ಯಾತ್ಮ ಧಾರೆಯಲ್ಲಿ ಅತ್ಯಂತ ಪ್ರಮುಖವಾದುದು ಸಿದ್ಧ ಪರಂಪರೆ. ವೇದಗಳ ಕಾಲದಿಂದಲೂ ಇದು ಭಾರತದಲ್ಲಿ ಅಸ್ತಿತ್ವದಲ್ಲಿ ಇದ್ದುದಾಗಿ ತಿಳಿದುಬರುತ್ತದೆ. ಸಿದ್ಧ ಎಂದರೆ ಪರಿಪೂರ್ಣ ವ್ಯಕ್ತಿತ್ವ ಹೊಂದಿದವನು, ಮಾನಸಿಕ ಮತ್ತು ದೈಹಿಕ ಪರಿಪೂರ್ಣತೆ ಸಾಧಿಸಿದವನು ಎಂಬ ಅರ್ಥದಲ್ಲಿ ಬಳಕೆಯಾಗುತ್ತದೆ. ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟುವಿನ ಪ್ರಕಾರ ಸಿದ್ಧ ಎಂದರೆ ಸಾಧಿಸಿದವನು, ಅಲೌಕಿಕ ಸಾಮಥ್ರ್ಯವುಳ್ಳವನು ಎಂದರ್ಥವಿದೆ. ಜೊತೆಗೆ ಪಕ್ವವಾದ ಎಂಬ ಅರ್ಥವೂ ಇದೆ. ಇದು ನಿಜವಾಗಿ ಸಿದ್ಧರಿಗೆ ಅನ್ವಯಿಸುವ ಮಾತು. ಅನುಭವ ಮತ್ತು ಅನುಭಾವಗಳಿಂದ ಪಕ್ವವಾದವರು ಸಿದ್ಧರು.
ಶ್ವೇತಾಶ್ವರ ಉಪನಿಷತ್ತಿನಲ್ಲಿ ಸಿದ್ಧರು ಅತಿಮಾನುಷ ಶಕ್ತಿ ಸಾಧಕರು, ಲೌಕಿಕ ಮತ್ತು ಅಲೌಕಿಕಗಳಲ್ಲಿ ಏಕತ್ವ ಸಾಧಿಸಿದವರು ಎಂದು ಹೇಳಿದೆ (ಅಧ್ಯಾಯ 1, 3, 5 ಮತ್ತು 7ನೆಯ ಮಂತ್ರಗಳು). ವಾಯು ಪುರಾಣದಲ್ಲಿ (ಭಾಗ, 41, 66-73 ನೇ ಶ್ಲೋಕಗಳು) ಸಿದ್ಧರನ್ನು ದೇವರ್ಷಿಗಳು ಎಂದಿದೆ. ದೇವ, ದೇವತೆ, ಕಿನ್ನರ, ಯಕ್ಷ, ಪನ್ನಗ, ಗಂಧರ್ವ ಎಂದೂ ಅವರನ್ನು ಹೇಳಿದೆ. ಜಂಬೂದ್ವೀಪದ ಗುಹೆಗಳಲ್ಲಿ ಇವರಿದ್ದಾರೆಂದು ಹೇಳಿದೆ.
ಅಥರ್ವಣವೇದ, ಮಹಾಯಾನ ಸೂತ್ರಗಳಿಂದಲೇ ಪ್ರಾರಂಭವಾಗುವ ಸಿದ್ಧರ ಇತಿಹಾಸ ಹಲವು ಪಂಥದ ಸಿದ್ಧರ ಪರಿಚಯ ಮಾಡಿಕೊಡುತ್ತದೆ. ಆರ್ಯರು ಭಾರತಕ್ಕೆ ಬಂದ ಹೊಸತರಲ್ಲಿ ಇಲ್ಲಿಯ ಆರ್ಯೇತರರ ಮೇಲೆ ಪ್ರಭಾವ ಬೀರಿದರೂ 6ನೆಯ ಶತಮಾನದ ಹೊತ್ತಿಗೆ ಇವರ ತಂತ್ರ, ಶಕ್ತಿ, ಪೂಜೆ, ಯೋಗ, ವಿಲಾಸವಾದದ ಪ್ರಭುತ್ವಕ್ಕೆ ಮಣಿದರು. 8-12ನೆಯ ಶತಮಾನದ ಅವಧಿಯ ಅರಬರ ದಾಳಿಯಿಂದಾಗಿ ಭಾರತದಲ್ಲಿ ಆದ ರಾಜಕೀಯ, ಧಾರ್ಮಿಕ, ಸಾಮಾಜಿಕ ಸ್ಥಿತ್ಯಂತರಗಳ ಹಿನ್ನೆಲೆಯಲ್ಲಿ ಭೇದಭಾವವಿಲ್ಲದೆ ಈ ನೆಲದ ಎಲ್ಲ ಧರ್ಮಪಂಥಗಳೂ ತಾಂತ್ರಿಕ ಸಾಧನೆಗೆ ಅವಕಾಶ ನೀಡಿದುವು. ತಂತ್ರಸಾಹಿತ್ಯ ಮೂರು ವಿಧವಾದುದು :
ವೈಷ್ಣವ-ಶಕ್ತಿ ಲಕ್ಷ್ಮೀ ಪೂಜಾ ವಿಧಾನಗಳನ್ನು ತಿಳಿಸುವ ತಂತ್ರಗಳು, ಸಂಹಿತೆಗಳು: ಇವುಗಳಲ್ಲಿ ಅತಿ ಪ್ರಾಚೀನವಾದ ವೈಖಾನಸ ಸಂಹಿತೆಗಳು ಕ್ರಿಸ್ತಪೂರ್ವದವು. ಇದನ್ನು ವಿರೋಧಿಸಿ ಪಾಂಚರಾತ್ರ ಸಂಹಿತೆಗಳನ್ನು ಜಾರಿಗೆ ತಂದವರು ರಾಮಾನುಜಾಚಾರ್ಯರು. ಇಲ್ಲಿ ಯಂತ್ರ, ಮಂತ್ರದ ಅವಿಭಾಜ್ಯ ಅಂಗ. 2. ಶೈವತಂತ್ರಗಳು, ಆಗಮಗಳು: ಈ ಆಗಮಗಳ ಆಧಾರದ ಮೇಲೆ ಶಿವನನ್ನು ಪಾಶುಪತ, ಶುದ್ಧಶೈವ, ಕಪಾಲ-ಈ ಮೂರು ಪ್ರಮುಖ ಸಂಪ್ರದಾಯಗಳ ಪ್ರವರ್ತಕ ಎಂದು ಹೇಳಿದೆ. ಲಕುಲೀಶ (ನಕುಲೀಶ) 2ನೆಯ ಶತಮಾನದ ಉತ್ತರಾರ್ಧದಲ್ಲಿ ಪಾಶುಪತವನ್ನು ಸ್ಥಾಪಿಸಿದ. ಇದರ ಬಾಹ್ಯಾಚಾರದ ಮೇಲೆ ತಂತ್ರದ ಪ್ರಭಾವವಿದೆ. ಶುದ್ಧಶೈವದಲ್ಲಿ ಎರಡು ಭೇದಗಳಿವೆ. ಒಂದು ಅದ್ವೈತ ಮೂಲದ ಕಾಶ್ಮೀರ ಶೈವ (ಸ್ಪಂದ ಶಾಸ್ತ್ರ), ತ್ರಿಕದರ್ಶನ, (ಪ್ರತ್ಯಭಿe್ಞÁನ). ಇನ್ನೊಂದು ಶಕ್ತಿವಿಶಿಷ್ಟಾದ್ವೈತ ಎನಿಸಿದ ವೀರಶೈವ. ಇವರಿಬ್ಬರಿಗಿಂತ ಹಳಬರು ಕಾಳಾಮುಖರು. ಗುಹ್ಯಸಾಧನೆಗಳು ವಿಕರಾಳದ ಚರಮಾವಸ್ಥೆ ಯನ್ನು ಮುಟ್ಟಿದ್ದು ಕಾಪಾಲಿಕರಲ್ಲಿ. ರಸೇಶ್ವರ ಸಂಪ್ರದಾಯವೂ ಶೈವವೇ. ನಾಥಪಂಥ ಕೂಡ ಶೈವಮೂಲದ್ದು. ಯೋಗ, ಇದರ ಪಥ. ತಮಿಳುನಾಡಿನ ಅಷ್ಟಾದಶ ಸಿದ್ಧರನ್ನು ಶೈವ ಸಿದ್ಧರೆನ್ನಬಹುದು. ಇವರದು ಶುದ್ಧಮಾರ್ಗ. ಜ್ಞಾನಸಿದ್ಧರೆಂದೂ ಇವರಿಗೆ ಹೆಸರು. ಕಂದಾಚಾರವಿರೋಧ, ತರತಮ್ಯ ವಿರೋಧದ ಇವರ ಸಾಹಿತ್ಯ ಇಂದ್ರಿಯಾಸಕ್ತಿಯ ಬಗೆಗೆ ಜುಗುಪ್ಸೆ ತಾಳುತ್ತದೆ. 3. ಶಕ್ತಿತಂತ್ರಗಳು : ಇದರಲ್ಲಿ ದಕ್ಷಿಣಾಚಾರ (ಸಾತ್ತ್ವಿಕ) ವಾಮಾಚಾರ (ತಾಮಸ) ಎಂಬ ಎರಡು ಭೇದಗಳಿವೆ. ಜೈನರಲ್ಲೂ ಶಾಕ್ತದರ್ಶನ ಮತ್ತು ತಾಂತ್ರಿಕ ಸಾಧನೆಗಳು ವಿಕಾಸಗೊಂಡಿದ್ದವು. ಜೈನರ ಒಂದು ಶಾಖೆಯಾದ ನಿಗ್ರ್ರಂಥ ಎಂಬುದು ತಾಂತ್ರಿಕ ಸಂಪ್ರದಾಯವಿದ್ದಿರಬೇಕು. ಆದರೆ ಈ ಸಾಹಿತ್ಯದ ಮೇಲೆ ಇನ್ನೂ ಬೆಳಕು ಬೀಳಬೇಕಾಗಿದೆ. ಯೋಗಮಾರ್ಗದಿಂದ ಪ್ರಭಾವಿತರಾದ ಜೈನ ಸಿದ್ಧರಲ್ಲಿ ಜೋಯಿಂದು (ಯೋಗೀಂದ್ರ ಸು.100) ಮತ್ತು ಮುನಿರಾಮ ಸಿಂಹ (ಸು. 1000) ಮುಖ್ಯರು. ಜೋಯಿಂದುವಿನ ಪರಮತಪ್ಪುಯಸು (ಪರಮಾತ್ಮ ಪ್ರಕಾಶ) ಮತ್ತು ಯೋಗಾಸಾರದ ಆಧ್ಯಾತ್ಮಿಕ ವಿಚಾರಗಳು ವೇದಾಂತಿಗಳಿಗೆ ಹತ್ತಿರ ಇವೆ. ಮುನಿಯ ಸಿಂಹನ ಪಾಹುಡ ದೋಹಾ ಶೈವ ಹಾಗೂ ತಾಂತ್ರಿಕ ಶಬ್ದಗಳನ್ನು ಯಥೇಚ್ಛವಾಗಿ ಸ್ವೀಕರಿಸಿದೆ. ಈ ಮಾರ್ಗದ ಮತ್ತೊಂದು ಸರಣಿ ಬೌದ್ಧಸಿದ್ಧರದು.
ತಂತ್ರ ಮತ್ತು ಯೋಗ ಪ್ರವೇಶಿಸದ ಭಾರತೀಯ ಧರ್ಮಪಂಥವಾಗಲೀ ಸಾಹಿತ್ಯವಾಗಲೀ ಇಲ್ಲ. ತಂತ್ರದ ಬೆಳೆವಣಿಗೆಯನ್ನು ಗಮನಿಸುವಾಗ ಬೌದ್ಧಸಿದ್ಧರನ್ನು ಹೇಗೆ ಬಿಡುವುದಕ್ಕಾಗುವುದಿಲ್ಲವೋ ಹಾಗೆಯೇ ಯೋಗಮಾರ್ಗದ ನೆಲೆ-ಬೆಲೆಯನ್ನು ಗುರುತಿಸುವಾಗ ನಾಥಪಂಥವನ್ನೂ ಬಿಡುವ ಹಾಗಿಲ್ಲ. ಇವರಿಬ್ಬರೂ ಭಾರತದಾದ್ಯಂತ ಹರಡಿ ಸಹಜೀವನಕ್ಕೆ ಒತ್ತುಕೊಟ್ಟು ಧರ್ಮಕ್ಕೆ ಒಂದು ಕಾಯಕಲ್ಪ ನೀಡಿದರು. ಇವರ ಪ್ರಭಾವದಿಂದಲೇ ಅನುಭಾವ ಸಾಹಿತ್ಯ, ರಹಸ್ಯ ಪರಂಪರೆ ಜನತೆಯಲ್ಲಿ ಹರಡಿತು. ಸಂಸ್ಕøತ ಸಾಹಿತ್ಯದಲ್ಲಿ ಈ ಎರಡು ಪರಂಪರೆಯವರಿಗೂ ಸಿದ್ಧರು ಎಂದೇ ಹೆಸರಿದೆ.
ನಾಥಪಂಥ ತಾಂತ್ರಿಕ ಬೌದ್ಧಧರ್ಮಕ್ಕೆ ಶೈವರೂಪಕೊಟ್ಟು ಬ್ರಹ್ಮಚರ್ಯ, ಸದಾಚಾರ, ಯೋಗ ಮತ್ತು ಸ್ವಾನುಭೂತಿಗೆ ಎಲ್ಲಿಲ್ಲದ ಮಹತ್ತ್ವ ನೀಡಿ ಹಿಂದೂಧರ್ಮಕ್ಕೆ ಒಂದು ಹೊಸ ಕಾಯಕಲ್ಪ ನೀಡಿತು. ಈ ಸಂಪ್ರದಾಯ ಹಠಯೋಗದ ತಳಹದಿಯಮೇಲೆ ನಿಂತಿದೆ. ಪತಂಜಲಿಗಿಂತಲೂ ಹಿಂದೆ ಮಾರ್ಕಂಡೇಯನಿಂದ ಪ್ರಾರಂಭವಾದ ಹಠಯೋಗಮಾರ್ಗದ ಪ್ರವರ್ತಕ ಗೋರಖನಾಥ. ಸೂಕ್ಷ್ಮ ವೇದವಾದ ವೇದದೊಡನೆ ಮಾತ್ರ ಈ ಯೋಗಿಗಳ ಸಂಬಂಧವಿದ್ದು ಪುಸ್ತಕೀಯ ವಿದ್ಯೆಯನ್ನು ಗೇಲಿಮಾಡುತ್ತಾರೆ. ಮುಕ್ತಿ ಎಂದರೆ ನಾಥಸ್ವರೂಪದಲ್ಲಿ ನಿಲ್ಲುವುದು. ಇದು ಅದ್ವೈತ ಭಾವನೆಗೂ ಮೀರಿದ ಸ್ಥಿತಿ. ಗೋರಖ ಹಠಯೋಗ ಮಾಧ್ಯಮದಿಂದ ಬೌದ್ಧ, ಅಬೌದ್ಧ, ಬ್ರಾಹ್ಮಣ, ಶೈವ, ಜೈನ-ಎಲ್ಲರಿಗೂ ಸಮಾನ ಭೂಮಿಕೆಯೊಂದನ್ನು ನಿರ್ಮಿಸಿ ಹಠಯೋಗದ ಮಹಾಸಿದ್ಧನೆಂದು ಗ್ರಹೀತನಾದ. ಶಂಕರರ ಅನಂತರ ಭಾರತದಲ್ಲಿ ಇಷ್ಟು ಪ್ರಭಾವಶಾಲಿಯೂ ಮಹಿಮಾನ್ವಿತನೂ ಆದ ವ್ಯಕ್ತಿ ಇವನೊಬ್ಬನೇ. ಆದರೆ ಇವನ ದೇಶಕಾಲಗಳ ಬಗೆಗೆ ನಿಖರವಾಗಿ ಏನೂ ತಿಳಿಯದು. ಇವನ ಕಾಲ ಸು.11ನೆಯ ಶತಮಾನವೆಂದು ಊಹಿಸಲಾಗಿದೆ. ಗೋರಖನವೆನ್ನಲಾದ 28 ಸಂಸ್ಕøತ ಮತ್ತು 40 ಹಿಂದಿ ಗ್ರಂಥಗಳು ದೊರೆತಿವೆ. ಸದಾಚಾರವನ್ನು ನೆಲೆಗೊಳಿಸಿ ಧರ್ಮವನ್ನು ಅನೈತಿಕತೆಯ ಕೆಸರಿನಿಂದ ಮೇಲೆತ್ತಿದ ಶ್ರೇಯಸ್ಸು ಈ ಪಂಥಕ್ಕೆ ಸಲ್ಲುತ್ತದೆ. ಆದರೆ ಇದರ ಶುಷ್ಕತೆ ಮತ್ತು ಗೃಹಸ್ಥ ಜೀವನದ ಬಗೆಗಿನ ಅನಾದರದಿಂದಾಗಿ ಇದು ನಶಿಸಿತೆನ್ನಬೇಕು.
ನಾಥಸಂಪ್ರದಾಯದಲ್ಲಿ, ಗೋರಖನಾಥನಿಂದ ಪ್ರವರ್ತಿತವಾದ ಬಾರಹಪಂಥೀ ಮಾರ್ಗಗಳಲ್ಲದೆ ವಾಮಾರಗ ಅಥವಾ ಅರ್ಧಪಂಥದಲ್ಲಿ ಶಿವನಿಂದ ಸ್ಥಾಪಿತವಾದ 6 ಮತ್ತು ಗೋರಖನಾಥನ 7 ಸಂಪ್ರದಾಯಗಳು ಸೇರಿವೆ. ಇದರಲ್ಲಿ ವಿಶಿಷ್ಟ ಸಿದ್ಧಿಪಡೆದವರು ನವನಾಥರು ಮತ್ತು 84 ಸಿದ್ಧರು. ನವನಾಥರು ಯಾರು ಮತ್ತು ಎಷ್ಟು ಜನ ಎಂಬ ಬಗ್ಗೆಯೂ ಏಕಾಭಿಪ್ರಾಯವಿಲ್ಲ. ವಿವಿಧ ಗ್ರಂಥಗಳಲ್ಲಿ ದೊರಕುವ ನವನಾಥರ ಪಟ್ಟಿ ಭಿನ್ನವಾಗಿದೆ. ದ್ವಾದಶನಾಥರು ಎಂಬ ಉಲ್ಲೇಖವೂ ಇದೆ. ಒಟ್ಟಿನಲ್ಲಿ ಮತ್ಸೇಂದ್ರನಾಥ, ಜಾಲಂಧರನಾಥ, ಗೋರಕ್ಷನಾಥ ಹಾಗೂ ಕಾನಿಪಾ ಈ ಸಂಪ್ರದಾಯದ ಸರ್ವಮಾನ್ಯ ಆಚಾರ್ಯರೆನ್ನಬಹುದು. ಮಿಥಿಲೆಯ ರಾಜ (1300-1321) ಹರಿಸಿಂಹದೇವನ ಆಸ್ಥಾನ ಕವಿ ಜ್ಯೋತಿರೀಶ್ವರ ಠಾಕೂರ್ ರಚಿಸಿದ ವರ್ಣರತ್ನಾಕರ ಕೃತಿಯಲ್ಲಿ 84 ಸಿದ್ಧರ ಉಲ್ಲೇಖ ಬಂದರೂ ಇಲ್ಲಿರುವುದು 76 ಹೆಸರುಗಳು ಮಾತ್ರ. (ಬಂಗಾಲ ಏಷ್ಯಾಟಿಕ್ ಸೊಸೈಟಿ ಹಸ್ತಪ್ರತಿ ಸಂ-48/34). ಇದರಲ್ಲಿ ಬೌದ್ಧ ಸಿದ್ಧರ ಹೆಸರೂ ಇದೆ.
15ನೇ ಶತಮಾನದ ಹಠಯೋಗಪ್ರದೀಪಿಕಾ ಕೃತಿಯಲ್ಲಿ ವರ್ಣರತ್ನಾಕರದಲ್ಲಿ ಉಲ್ಲೇಖವಾದ ಕೆಲವು ಹೆಸರುಗಳೇ ಇದ್ದರೂ ಇದರಲ್ಲಿರುವುದು 32 ಹೆಸರುಗಳು ಮಾತ್ರ. ವಿಶೇಷ ಎಂದರೆ ಇದರಲ್ಲಿ ಅಲ್ಲಮ ಮ್ತತು ಪ್ರಭುದೇವ ಎಂಬುವವರನ್ನು ಹೆಸರಿಸಿದೆ. ಇವರು ಕರ್ನಾಟಕದವರು ಎಂಬುದರಲ್ಲಿ ಅನುಮಾನವಿಲ್ಲ. ಇವರನ್ನು ಮಹಾಸಿದ್ಧರ ಪಟ್ಟಿಗೆ ಈ ಕೃತಿ ಸೇರಿಸಿದೆ. ನವನಾಥರು, ಕಾಪಾಲಿಕರು, e್ಞÁನನಾಥನ ತನಕದ ಗುರುಸಿದ್ಧರು ಹಾಗೂ ವರ್ಣರತ್ನಾಕರದ ನಾಥಸಿದ್ಧರು ನಾಥ ಪರಂಪರೆಯವರೆಂದು ಒಪ್ಪಿಕೊಂಡರೆ 14 ನೆಯ ಶತಮಾನದ ಆರಂಭದ ಹೊತ್ತಿಗೆ 125 ಸಿದ್ಧರ ಹೆಸರುಗಳು ದೊರೆಯುತ್ತವೆ. ಹಜಾರಿ ಪ್ರಸಾದ ದ್ವಿವೇದಿಯವರು ವಿವಿಧ ಆಕರಗಳಿಂದ ಕ್ರೋಡೀಕರಿಸಿ 137 ಸಿದ್ಧರ ಸೂಚಿಯೊಂದನ್ನು ಕೊಟ್ಟಿದ್ದಾರೆ. ಇವರಲ್ಲಿ ಅನೇಕರು ಅಭಿನ್ನರು. ಮತ್ಸ್ಯೇಂದ್ರನಿಂದ ಪ್ರಾರಂಭಿಸಿ ಇದೇ ಪರಂಪರೆಯಲ್ಲಿ ಬಂದ ಚೌರಂಗೀನಾಥ, ನಾಗಾರ್ಜುನ, ಚರಪಟೀನಾಥ, ಕಾಣೀರೀ ಮೊದಲಾದವರೂ ಸೇರಿ 15 ನೆಯ ಶತಮಾನದ ದತ್ತಜಿಯ ತನಕ ಅನೇಕ ಸಿದ್ಧರು ಸಂಸ್ಕøತದಲ್ಲೂ ದೇಶಭಾಷೆಯಲ್ಲೂ ಕೃತಿ ರಚನೆಮಾಡಿ ಸಂಪ್ರದಾಯವನ್ನು ಬೆಳೆಸಿದರು.
ಚೌರಾಸೀ ಸಿದ್ಧರ ಮತ್ತು ನಾಥಸಿದ್ಧರ ಪೀಠಗಳು ಭಾರತದ ಎಲ್ಲ ಕಡೆ ವ್ಯಾಪಿಸಿದ್ದು ತಂತ್ರಯುಗ ವಿವಿಧ ಸಂಪ್ರದಾಯಗಳ ಗೊಂಡಾರಣ್ಯವಾಗಿತ್ತು. ಆದರೂ ನಿಕಟ ಸಂಪರ್ಕ ಮತ್ತು ಕೊಳುಕೊಡೆಗಳಿಂದಾಗಿ ಇವುಗಳಲ್ಲಿ ಏಕ ಸೂತ್ರತೆಯೂ ಇತ್ತು.
ತಂತ್ರಸಾಹಿತ್ಯದಲ್ಲಿ ರಹಸ್ಯಮಯ ಪ್ರತೀಕಾತ್ಮಕವಾದ ಶೈಲಿಯೊಂದು ರೂಪುಗೊಂಡಿದೆ. ಇದೇ ಸಂಧಾಭಾಷೆ ಅಥವಾ ಸಂಧಾ ವಚನ. ಬೌದ್ಧ ಸಿದ್ಧರೂ ನಾಥ ಸಿದ್ಧರೂ ಇದನ್ನು ಬಳಸಿದ್ದಾರೆ. ಇಲ್ಲಿ ಬಳಸಿರುವ ಪ್ರತೀಕ, ಪ್ರತಿಮೆಗಳು ಲೋಕ ಜೀವನದಿಂದಲೇ, ಪರಂಪರೆಯಿಂದಲೋ ಬೌದ್ಧ ಸಂಹಿತೆಗಳಿಂದಲೋ ಬಂದವು. ಇದರ ನೆರವಿಗೆ ಉಪಮೆ, ಉತ್ಪ್ರೇಕ್ಷೆ, ರೂಪಕ ಮೊದಲಾದ ಅಲಂಕಾರಗಳೂ ಬಳಕೆಯಾಗಿವೆ. ಸಿದ್ಧರು ಇಲ್ಲೆಲ್ಲಾ ಅವರವರ ಕಾಯಕದ ರೂಪಕವನ್ನೇ ಬಳಸಿದ್ದಾರೆ. ಕನ್ನಡದ ಬೆಡಗಿನ ವಚನ, ಹಿಂದೀಸಂತರ ಉಲಂಟವಾಂಸಿ ಇಂಥವು. ಇವುಗಳ ಉದ್ದೇಶವೂ ಜನರನ್ನು ಬೆರಗುಗೊಳಿಸಿ ಆಕರ್ಷಿಸುವುದು. ಇದು ಕೂಡ ಧರ್ಮಪ್ರಚಾರದ ಒಂದು ಶೈಲಿಯಾಗಿತ್ತು.
ಜನವಾಣಿಯಾದ ಅಪಭ್ರಂಶ, ಸಿದ್ಧರ ಅಭಿವ್ಯಕ್ತಿ ಮಾಧ್ಯಮ, ಖಂಡನೆ, ಮಂಡನೆ, ಕ್ರಾಂತಿಯಿಂದಾಗಿ ಸಿದ್ಧಸಾಹಿತ್ಯ ಬಂಡಾಯ ಸಾಹಿತ್ಯ ಎನಿಸಿಕೊಂಡಿತು. ಈ ಬಂಡಾಯ ಸಾಹಿತ್ಯ ಹಿಂದಿ, ಬಂಗಾಲಿ, ಮರಾಠಿ ಮೊದಲಾದ ಆಧುನಿಕ ಭಾಷೆಗಳ ಸಂತಸಾಹಿತ್ಯಕ್ಕೆ ಪ್ರೇರಕ ಶಕ್ತಿಯಾಗಿದೆ. ಕನ್ನಡದ ವೀರಶೈವ ಸಾಹಿತ್ಯದ ಹಿನ್ನೆಲೆ ತಿಳಿಯಲೂ ಸಿದ್ಧಸಾಹಿತ್ಯ ಸಹಕಾರಿಯಾಗಬಲ್ಲುದು. ಕನ್ನಡದಲ್ಲಿ ಇಂಥ ಯತ್ನವನ್ನು ಮ ಸು ಕೃಷ್ಣಮೂರ್ತಿಯವರು ಮಾಡಿಕೊಟ್ಟಿದ್ದಾರೆ. ಹಿಮಾಲಯದ ಮಡಿಲಲ್ಲಿ ಚದರಿಹೋಗಿದ್ದ ಈ ಸಾಹಿತ್ಯವನ್ನು ಈ ಶತಮಾನದ ಆರಂಭದಲ್ಲಿ ಬೆಳಕಿಗೆ ತಂದ ಸಾಹಸದ ಶ್ರೇಯಸ್ಸು ಮ.ಮ.ಹರಪ್ರಸಾದ ಶಾಸ್ತ್ರೀ ಪ್ರಬೋಧಚಂದ್ರ ಜಾಗಟೆ, ಹಜಾರೀ ಪ್ರಸಾದ ದ್ವಿವೇದಿ ಮತ್ತು ಧರ್ಮವೀರ ಭಾರತಿ, ರಾಹುಲ ಸಾಂಕೃತ್ಯಾಯನ ಅವರಿಗೆ ಸಲ್ಲುತ್ತದೆ. ಚೌರಾಸೀ ಸಿದ್ಧರಲ್ಲಿ ಪ್ರಮುಖನಾದ ಕಣ್ಹಪಾ, ನಾಥ ಸಂಪ್ರದಾಯದ ಪ್ರವರ್ತಕ ಗೋರಕ್ಷನಾಥ ಕರ್ನಾಟಕದವರು. ವೀರಶೈವರಲ್ಲಿ ಸಿದ್ಧಪರಂಪರೆ ಇತ್ತು. ಇಲ್ಲಿ ಅನೇಕ ಸಿದ್ಧಪೀಠಗಳೂ ಇದ್ದು ಸಿದ್ಧರಿಗೂ ಕರ್ನಾಟಕಕ್ಕೂ ಸಂಬಂಧವಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ.
ನಾಥಪಂಥಕ್ಕೂ ಕರ್ನಾಟಕಕ್ಕೂ ನೇರ ಸಂಬಂಧವಿದೆ. ಗೋರಖ್‍ನಾಥ ಈ ವಿಶಿಷ್ಟ ಪಂಥದ ಪ್ರವರ್ತಕ. ಆತನ ಗುರು ಹಾಗೂ ಆದಿನಾಥನ ಶಿಷ್ಯ ಮತ್ಸ್ಯೇಂದ್ರನಾಥ ಇದರ ಸ್ಥಾಪಕ ಎನ್ನಲಾಗಿದೆ.
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿಗಳೆಂಬ ಅಷ್ಟಾಂಗಗಳಿಂದ ಕೂಡಿದ ಈ ಯೋಗಪಂಥಕ್ಕೆ ಬಹಳ ಪ್ರಾಚೀನ ಇತಿಹಾಸವಿದೆ. ಯಾವುದೊಂದು ದಾರ್ಶನಿಕ ಒಲವನ್ನೂ ಹೇರಿಕೊಳ್ಳದೆ, ಎಲ್ಲ ವಿಚಾರವೇತ್ತರೂ ಅನುಸರಿಸಬಹುದಾದ ಈ ಯೋಗಮಾರ್ಗದ ಅರಿವು ಗುರುವಿನ ನೆರವಿಲ್ಲದೆ ಸಾಧ್ಯವಿಲ್ಲ; ಗುರುವಿಗೂ ಭಗವಂತನಿಗೂ ಭೇದವಿಲ್ಲ. ಇದೇ ಈ ಮಾರ್ಗದಲ್ಲಿನ ಮುಖ್ಯ ಅಂಶ. ಈ ಪ್ರಕ್ರಿಯೆಯ ಜೊತೆಗೆ ಗುರು ಪರಮಾತ್ಮರ ಐಕ್ಯ. ಶಿಷ್ಯನ ನಡವಳಿಕೆ ಮೊದಲಾದ ಕೆಲವು ತಾಂತ್ರಿಕ ಅನುಷ್ಠಾನಗಳೂ ಸೇರಿ ಇದೊಂದು ವಿಶಿಷ್ಟ ಸಂಪ್ರದಾಯವಾಗಿ ಬೆಳೆದಿದೆ.
ಈ ಪಂಥ ಭಾರತದ ಎಲ್ಲೆಡೆಯಲ್ಲಿಯೂ ಪ್ರಚಾರದಲ್ಲಿರುವುದಕ್ಕೆ ಇದು ಸರ್ವಜನ ಸಾಧಾರಣವಾಗಿರುವುದೇ ಕಾರಣ. ಇದರ ಜನಪ್ರಿಯತೆಗೆ ಗೋರಖ್‍ನಾಥನ ಬಗೆಗೆ ಹೊರಟಿರುವ ವಿವಿಧ ಜನಪದ ಕಥೆಗಳೇ ಸಾಕ್ಷಿ. 15ನೆಯ ಶತಮಾನದಲ್ಲಿ ಪ್ರಸಿದ್ಧನಾಗಿದ್ದ ಈತ ಕಬೀರನ ಸಮಕಾಲೀನ ಹಾಗೂ ವಿರೋಧಿಯಾಗಿದ್ದನೆಂದು ಉತ್ತರಭಾರತದಲ್ಲಿ ಪ್ರಚಲಿತವಾಗಿದೆ. ಜನಪದ ಕಥೆಗಳಲ್ಲಿ ಗೋರಖ್‍ನಾಥನನ್ನು ಶಿವನೆಂದೇ ಪರಿಗಣಿಸಲಾಗಿದೆ.
ಈ ಮಾರ್ಗಾನುಯಾಯಿಗಳನ್ನು ನಾಥಯೋಗಿಗಳು, ಸಿದ್ಧಯೋಗಿಗಳು ಅಥವಾ ಅವಧೂತರು ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಅವಧೂತ ಪರಂಪರೆಯ ಪ್ರಾಚೀನತೆಯ ಬಗ್ಗೆ ಸಾಕಷ್ಟು ಕೆಲಸ ನಡೆದಿದೆ. ದ ರಾ ಬೇಂದ್ರೆಯವರಾದಿಯಾಗಿ ಹಿಂದಿನವರು ಈ ಕೆಲಸ ಮಾಡಿದ್ದಾರಲ್ಲದೇ ಇಂದಿನ ನಟರಾಜ ಬೂದಾಳು, ರಹಮತ್ ತರೀಕರೆ ಮೊದಲಾದ ವಿದ್ವಾಂಸರು ಈ ಬಗ್ಗೆ ಇನ್ನೂ ಶೋಧನೆ ನಡೆಸಿದ್ದಾರೆ. ಜನಸಾಮಾನ್ಯರಲ್ಲಿ ಇವರನ್ನು ಕಾನ್‍ಫಟಿ ಯೋಗಿಗಳು (ಕಿವಿ ಹರಿದವರು) ಎನ್ನಲಾಗುತ್ತದೆ. ಕಾಪಾಲಿಕ ಪಂಥ ಇವರೊಡನೆ ಸೋದರ ಸಂಬಂಧ ಹೊಂದಿದೆ. ಕರ್ನಾಟಕದಲ್ಲಿ ಅವಧೂತ ಪಂಥದ ದತ್ತಾತ್ರಯನ ಆರಾಧನೆ ಇಂದಿಗೂ ಇದೆ. ಈ ಪಂಥದಲ್ಲಿ ಈಚೆಗೆ ಕಂಡುಬರುವ ಹೆಸರು ಶ್ರೀಧರ ಸ್ವಾಮಿಗಳದು.
ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಸಿದ್ಧ ಪರಂಪರೆ ಭವ್ಯವಾಗಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಸಿದ್ಧರು ಯಾರು, ಎಲ್ಲಿಯವರು, ಅವರ ಕಾಲ ಯಾವುದು ಇತ್ಯಾದಿ ಪ್ರಶ್ನೆಗಳಿಗೆ ಖಚಿತವಾದ ಉತ್ತರ ದೊರೆಯುವುದು ಕಷ್ಟ. ಸಿದ್ಧ ಶಾಸನ, ಸಾಹಿತ್ಯ, ಪವಾಡ, ಇತರೆ ಸಾಹಿತ್ಯಾಧಾರಗಳಲ್ಲಿನ ಉಲ್ಲೇಖ ಮೊದಲಾದವುಗಳ ಆಧಾರದಿಂದಲೇ ಇಂಥ ಸಂಗತಿಗಳನ್ನು ಕಟ್ಟಬೇಕು. ಕರ್ನಾಟಕದಲ್ಲಿ ಬೌದ್ಧ, ಜೈನ, ಶೈವ ಮತಗಳು ಅಶೋಕ, ಗಂಗ (ಕ್ರಿ.ಶ 325-1000) ಸಾತವಾಹನ ಅರಸರ ಕಾಲದಿಂದಲೂ ಅಸ್ತಿತ್ವದಲ್ಲಿದ್ದವು ಎಂಬುದು ವಿವಿಧ ಶಾಸನ, ಸಾಹಿತ್ಯ ಆಧಾರಗಳಿಂದ ತಿಳಿದುಬರುತ್ತದೆ. ಶೈವಮತ ಕರ್ನಾಟಕದಲ್ಲಿ ವಿಶೇಷ ಪ್ರಚಾರ ಪಡೆದಿತ್ತು. ಇವರಲ್ಲೂ ಅನೇಕ ಪಂಥಗಳಿವೆ. ಶಂಕರಾಚಾರ್ಯರು (ಕ್ರಿ. ಶ.789-820) ಕಾಳಾಮುಖ, ಲಾಕುಲೀಶರು ಬೇರೆ ಎನ್ನುತ್ತಾರೆ. ಸಿರಾ ಮತ್ತು ಸಕಲೇಶಪುರದ ಶಾಸನಗಳು ಕಾಳಾಮುಖ-ಲಾಕುಲೀಶರು ಒಂದೇ ಪಂಥದವರು ಎಂದು ಹೇಳುತ್ತವೆ. ಶ್ರೀಶೈಲ ಭೈರವನ ಉಪಾಸನೆಗೂ, ಕೊಲ್ಲೂರು ಶಕ್ತಿ ಉಪಾಸನೆಗೂ ಕೇಂದ್ರವಾಗಿತ್ತು. ಸ್ಕಾಂದ ಮತವೂ ಕರ್ನಾಟಕದಲ್ಲಿ ಪ್ರಚುರವಾಗಿತ್ತು. ಕರ್ನಾಟಕದ ಸೊಂಡೂರಿನಲ್ಲಿ ಕುಮಾರಸ್ವಾಮಿಯ ಪ್ರಾಚೀನ ದೇವಾಲಯವಿದೆ. ಕದಂಬ, ಪೂರ್ವ ಚಾಳುಕ್ಯರ ಶಾಸನಗಳಲ್ಲಿ ಕಾರ್ತೀಕನ ಸ್ತುತಿ ಕಂಡುಬರುತ್ತದೆ. ಸ್ವತಃ ಸಿದ್ಧರಾದ ಶಂಕರರು ಈ ಎಲ್ಲ ಪಂಥಗಳಲ್ಲಿನ ಭಿನ್ನತೆಯನ್ನು ಅಳಿಸಿ ಷಣ್ಮತ ಸ್ಥಾಪಿಸಿದರು. ಕ್ರಿ.ಶ 6-9ರ ಅವಧಿಯಲ್ಲಿ ತಮಿಳರ 63 ಪುರಾತನರ ಚರಿತ್ರೆಯ ಸ್ಫೂರ್ತಿಯಿಂದ ಕರ್ನಾಟಕದಲ್ಲಿ ವೀರಶೈವ ಮತ ಬೆಳೆಯಿತು. ಇಂಥ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿದ್ಧರ ಚರಿತ್ರೆ ಅಡಗಿದೆ.
ಈ ಎಲ್ಲ ಮಾಹಿತಿಗಳೂ ಕರ್ನಾಟಕದಲ್ಲಿ ಸಿದ್ಧರು ಬಹು ಪ್ರಾಚೀನರು ಎಂಬುದನ್ನು ಸಿದ್ಧಮಾಡುತ್ತವೆ. ಭಾರತೀಯ ಜೀವನ ಧರ್ಮ ಅಥವಾ ಇಂದು ನಾವು ಕರೆಯುವ ಹಿಂದೂಧರ್ಮವನ್ನು ಸ್ಥಾಪಿಸಿದವರೇ ಸಿದ್ಧರು. ಇವರು ಈ ಧರ್ಮದಷ್ಟೇ ಪ್ರಾಚೀನರು. ಕರ್ನಾಟಕದಲ್ಲೂ ಇವರ ಪರಂಪರೆಯ ಪ್ರಾಚೀನತೆ ಸಿಗುವುದು ಹೀಗೆಯೇ. ಕರ್ನಾಟಕದಲ್ಲಿ ಶಾಸನ, ಸಾಹಿತ್ಯಗಳಲ್ಲಿ ಸಿದ್ಧರ ನೇರ ಉಲ್ಲೇಖ ಕಾಣುವುದು ಹತ್ತನೆಯ ಶತಮಾನದಿಂದ ಈಚೆಗೆ. ಕ್ರಿ.ಶ. 1030ರ ನೆಲಮಂಗಲದ ಸಿದ್ಧೇಶ್ವರ ದೇವಾಲಯದ ಶಾಸನ ಆದಿನಾಥ ಸಿದ್ಧನ ಉಲ್ಲೇಖ ಮಾಡುತ್ತದೆ. ದಿ ಆಲ್‍ಕೆಮಿಕಲ್ ಬಾಡಿ-ಸಿದ್ಧ ಟ್ರೆಡಿಶನ್ ಇನ್ ಮಿಡೀವಲ್ ಇಂಡಿಯಾ ಕೃತಿಯಲ್ಲಿ ಡೇವಿಡ್ ಗೋರ್ಡನ್ ವೈಟ್ (ಚಿಕಾಗೋ ವಿವಿ, 1996, ಪುಟ-92-95) ಎಂಬಾತ ಮಂಗಳೂರಿನ ಕದ್ರಿ ಬಳಿಯ ಜೋಗಿಗುಡ್ಡ ನಾಥ ಪಂಥದ ಕೇಂದ್ರವಾಗಿತ್ತು ಎಂದು ಪ್ರತಿಪಾದಿಸುತ್ತಾನೆ. ಕ್ರಿಶ 1279ರ ಜಗಳೂರಿನ ಶಾಸನ ಯಾದವ ರಾಜ ರಾಮಚಂದ್ರನು ಹಳ್ಳಿಯೊಂದನ್ನು ಯೋಗಿ ಚಕ್ರವರ್ತಿ ಎನಿಸಿದ ಪ್ರಸಾದ ದೇವನಿಗೆ ದಾನವಾಗಿ ನೀಡಿದ ಎಂದಿದ್ದಲ್ಲದೇ ನಾಥ ಪಂಥದ ಶಾಖೆಗಳನ್ನೂ ಉಲ್ಲೇಖಿಸಿದೆ ಎಂದು ಅವರು ಹೇಳುತ್ತಾರೆ. ಈ ಬಗ್ಗೆ ವಿಸ್ತøತ ಅಧ್ಯಯನ ಮಾಡಿರುವ ಅವರು ಕರ್ನಾಟಕದಲ್ಲಿ ಸಿದ್ಧರ ಅನೇಕ ಸಂಪ್ರದಾಯಗಳು ದಟ್ಟವಾಗಿದ್ದರೂ ಅಲ್ಲಿ ಯಾವುದೂ ನೆಲೆ ಹೊಂದಿರಲಿಲ್ಲ. ಆದರೆ ಕದ್ರಿ ನಾಥ ಪಂಥದ ಕೇಂದ್ರವಾಗಿತ್ತು ಎಂದು ಅವರು ಹೇಳುತ್ತಾರೆ. ಮಾರ್ಕೊಪೋಲೋ (1295) ಮತ್ತು ಪಿಯತ್ರೊ ಡಲ್ಲಾವಲ್ಲೆ (1624) ಎಂಬ ವಿದೇಶೀ ಯಾತ್ರಿಕರು ಇಲ್ಲಿ ಸಿದ್ಧರನ್ನು ಭೇಟಿ ಮಾಡಿದ ಅನುಭವವನ್ನು ಅವರು ದಾಖಲಿಸುತ್ತಾರೆ.
ಕನ್ನಡ ಜನಪದರು ಆರಾಧಿಸುವ ಮಂಟೇಸ್ವಾಮಿ ಮಲೆ ಮಹದೇಶ್ವರರೂ ಸಿದ್ಧರೇ ಇರಬೇಕು. ಕ್ರಿ ಶ 12ನೆಯ ಶತಮಾನದ ಆಸುಪಾಸಿನ ಕಾಲವನ್ನು ಹೇಳಲಾಗುವ ಮಂಟೇಸ್ವಾಮಿಯನ್ನು ಪ್ರಭುದೇವರು, ಧರೆಗೆ ದೊಡ್ಡವರು ಎಂದು ಕರೆಯಲಾಗುತ್ತದೆ. ಅಲ್ಲಮರನ್ನೂ ಇವರನ್ನೂ ಒಂದೇ ಎಂದು ಕೆಲವರು ಭಾವಿಸಿ ಇಬ್ಬರಿಗೂ ಯಾವುದೇ ಸಂಬಂಧ ಕಾಣದ ಬಗ್ಗೂ ಅಧ್ಯಯನಗಳಿವೆ. ಆದರೆ ಈಗಾಗಲೇ ಪ್ರಸ್ತಾಪಿಸಿದ 15ನೇ ಶತ.ದ ಹಠಯೋಗ ಪ್ರದೀಪಿಕಾದಲ್ಲಿ ಇಬ್ಬರನ್ನೂ ಬೇರೆ ಬೇರೆ ಸಿದ್ಧರಾಗಿ ಹೆಸರಿಸಿದ್ದು ನೋಡಿದರೆ ಇಬ್ಬರೂ ಬೇರೆ ಎನಿಸುತ್ತದೆ. ಈ ಪ್ರಭುದೇವರು ಮಂಟೇಸ್ವಾಮಿಯೇ ಇರಬೇಕು. ಮಂಟೇಸ್ವಾಮಿ ಕಾವ್ಯದಲ್ಲಿ ಬರುವ ಕತ್ತಲನಾಡಿನಿಂದ ಬಂದವರು, ಘನನೀಲಿ ಇತ್ಯಾದಿ ಪದಗಳನ್ನು ಇಟ್ಟುಕೊಂಡು ಇನ್ನೂ ಹೆಚ್ಚಿನ ಅಧ್ಯಯನ ಆಗಬೇಕಿದೆ.
ಕರ್ನಾಟಕದಲ್ಲಿ ಸಿದ್ಧಯ್ಯ, ಸಿದ್ಧಪ್ಪ, ಸಿದ್ಧರಾಜು ಇತ್ಯಾದಿ ವ್ಯಕ್ತಿ ನಾಮಗಳು, ಸಿದ್ಧಾಶ್ರಮ, ಸಿದ್ಧ ಎಂಬ ಕುಲನಾಮಗಳು ಇನ್ನೂ ಜನಪ್ರಿಯ. ಅಂತೆಯೇ ಉತ್ತರ ಕನ್ನಡದ ಸಿದ್ಧರ ಬೆಟ್ಟ, ಸಿದ್ಧರ ಗುಡ್ಡ, ಸಿದ್ಧಾಪುರ, ತುಮಕೂರಿನ ಸಿದ್ಧರ ಬೆಟ್ಟ, ಸಿದ್ಧಗಂಗೆ ಮುಂತಾದ ಸಿದ್ಧ ಪ್ರತ್ಯಯ ಹತ್ತುವ ಸ್ಥಳನಾಮಗಳ ಅಧ್ಯಯನ ಕೂಡ ವ್ಯವಸ್ಥಿತವಾಗಿ ನಡೆಯಬೇಕಿದೆ. ಇದಕ್ಕಾಗಿ ನಾಥ ಪಂಥದ ಕೇಂದ್ರವಾದ ಗಾಣಗಾಪುರ- ಸಹ್ಯಾದ್ರಿ-ದಕ್ಷಿಣ ಕನ್ನಡದ ಶಕ್ತಿ ಕೇಂದ್ರಗಳು-ಉತ್ತರ ಕನ್ನಡದ ಸಿದ್ಧರ ನೆಲೆಗಳು-ತುಮಕೂರಿನ ಬೆಟ್ಟಗಳು-ಬಾಬಾ ಬುಡನ್‍ಗಿರಿ-ನಂಜನಗೂಡು-ಕೊಳ್ಳೇಗಾಲ-ಕಪ್ಪಡಿ ಇತ್ಯಾದಿ ಸ್ಥಳಗಳ ಸಿದ್ಧ ಅಧ್ಯಯನದ ವ್ಯವಸ್ಥಿತ ಭೌಗೋಳಿಕ ನಕ್ಷೆಯನ್ನು ಸಿದ್ಧಪಡಿಸುವ ಅಗತ್ಯವಿದೆ. ಕರ್ನಾಟಕದಲ್ಲಿ ವ್ಯಕ್ತಿ ನೆಲೆಯಲ್ಲಿ ಸಿದ್ಧರ ಅಧ್ಯಯನಗಳು ನಡೆಯುತ್ತಿವೆ. ತಮಿಳುನಾಡಿಗೆ ಹೋಲಿಸಿದರೆ ಈ ವಿಷಯದಲ್ಲಿ ನಾವಿನ್ನೂ ಹಿಂದೆ ಉಳಿದಿದ್ದೇವೆ.
ತಮಿಳಿನಲ್ಲಿ ಎಲ್ಲವನ್ನೂ ಸಂಗಂ ಕಾಲದಲ್ಲೇ ಹುಡುಕುವಂತೆ ಸಿದ್ಧರನ್ನೂ ಅಲ್ಲೇ ಹುಡುಕಿದ್ದಾರೆ (ಕ್ರಿ.ಪೂ 500-ಕ್ರಿಶ 300). ಇದೇನಾದರೂ ಸಾಬೀತಾದರೆ ಕರ್ನಾಟಕದ ಸಿದ್ಧರೂ ಅಷ್ಟೇ ಹಳಬರು ಎಂದಾಗುತ್ತದೆ. ಆದರೆ ಅದೇನೂ ಸಿದ್ಧವಾಗಿಲ್ಲ. ಕೆ ಕೆ ಪಿಳ್ಳೈ, ಆರ್ ವಿ ಸಾಂಬಶಿವ ಪಿಳ್ಳೈ, ಎಂ ಪಿ ಸೋಮು ಮೊದಲಾದ ವಿದ್ವಾಂಸರು ತಮಿಳುನಾಡಿನ ಸಿದ್ಧರ ಪ್ರಾಚೀನತೆಯ ಅಧ್ಯಯನ ಮಾಡಿ ಅವರ ಕಾಲವನ್ನು ಸ್ಪಷ್ಟವಾಗಿ ಹೇಳಲಾಗದು ಎಂದಿದ್ದಾರೆ. ಅರುಣಾಚಲಂ ಎಂಬವರು ತಮಿಳು ಸಿದ್ಧರ ಕಾಲ ಕ್ರಿ ಶ. 5-6 ಎಂದರೆ, ಕ್ಲಾಡ್‍ವೆಲ್ ಇವರ ಕಾಲ 17ನೆಯ ಶತಮಾನ ಎಂದಿದ್ದಾರೆ.
ಸಿದ್ಧರಲ್ಲಿ ಪ್ರಮುಖರಾದ, ತಮಿಳರು ಮೂಲ ಸಿದ್ಧರೆಂದು ಬಗೆಯುವ ಅಗಸ್ತ್ಯರು, ತಿರುಮೂಲರ್, ಭೋಗರ್ ಉತ್ತರದಿಂದ ಬಂದವರು ಎಂದು ತಮಿಳರೇ ಹೇಳುತ್ತಾರೆ. ಇವರ ಪ್ರಭಾವದಿಂದ ತಮಿಳು ನೆಲದಲ್ಲೇ ಸಿದ್ಧ ಪರಂಪರೆ ಬೆಳೆಯಿತು. ಅಗಪ್ಪೆ, ಪಂಪತಿ ಸಿದ್ಧರು ತಮಿಳು ಮೂಲದವರು ಎಂದು ಪಿ ವಿ ನಮಃಶಿವಾಯ ಮೊದಲಿಯಾರ್ ಅವರು ಕೊರೊನೇಶನ್ ತಮಿಳ್ ಡಿಕ್ಶ್‍ನರಿಯಲ್ಲಿ (1911, ಮದ್ರಾಸ್, ಪುಟ-629) ಹೇಳುತ್ತಾರೆ.
ತಮಿಳಿನಲ್ಲಿ ಸಿದ್ಧರನ್ನು ಸಿದ್ಧರ್, ಚಿತ್ತರ್, ಸಿತ್ತರ್ ಇತ್ಯಾದಿ ಕರೆಯಲಾಗುತ್ತದೆ. ಸಿದ್ಧರಲ್ಲಿ ಪವಾಡ ಮತ್ತು ರಸವಿದ್ಯೆ ಒಂದು ಭಾಗವಾಗಿತ್ತು. ಪ್ರಾಚೀನ ಭಾರತದಲ್ಲಿ ಗುರುತಿಸಲಾಗಿದ್ದ 64 ಕಲೆಗಳಲ್ಲಿ ರಸವಿದ್ಯೆಯೂ ಒಂದಾಗಿತ್ತು. ಸಿದ್ಧ ಸಾಹಿತ್ಯದಲ್ಲಿ ಇದರ ಪ್ರಸ್ತಾಪವಿದೆ. ಕೆಲವು ಗಿಡಮೂಲಿಕೆ ಮತ್ತು ಪಾದರಸವನ್ನು ಬೆರೆಸಿ ಸೀಸವನ್ನು ಬೆಳ್ಳಿಯಾಗಿ, ಬೆಳ್ಳಿಯನ್ನು ಹಿತ್ತಾಳೆಯಾಗಿ, ಹಿತ್ತಾಳೆಯನ್ನು ಬಂಗಾರವಾಗಿ ಪರಿವರ್ತಿಸುವ ಕಲೆ ಇದಾಗಿತ್ತು.
ಪಾದರಸ ಮತ್ತು ಗಿಡಮೂಲಿಕೆ ಬಳಸಿ ಕಾಹಿಲೆಯಿಂದ ದೂರವಾಗುವುದು, ಮುಪ್ಪು ಇಲ್ಲದಂತೆ ಮಾಡಿಕೊಳ್ಳುವ ಕಾಯಕಲ್ಪ ಕೂಡ ತಮಿಳು ಸಿದ್ಧ ಪರಂಪರೆಯ ಭಾಗವಾಗಿ ಕಂಡುಬರುತ್ತದೆ. ರಸವಿದ್ಯೆ ಮತ್ತು ಕಾಯಕಲ್ಪಗಳಿಗೆ ಬೇಕಾದ ಪಾದರಸವನ್ನು ಚೀನದಿಂದ ಪಡೆಯಲಾಗುತ್ತಿತ್ತು. ಬಂಗಾರ ಮತ್ತು ಕಾಯಕಲ್ಪದ ಬಗ್ಗೆ ಕುತೂಹಲ ತಾಳಿದ ಇತರೆ ದೇಶದ ಜನ ಸಿದ್ಧರ ಈ ತಂತ್ರಗಳನ್ನು ಕರಗತಮಾಡಿಕೊಳ್ಳಲು ಬಯಸಿದರು. ಈ ಹಿನ್ನೆಲೆಯಲ್ಲಿ ಪ್ರಾಚೀನ ಭಾರತದ ತಾಂತ್ರಿಕ ಆಚರಣೆ ಬೇರೆಡೆ ಹರಡಿತು ಎಂದು ರಾಧಾಕಮಲ್ ಮುಖರ್ಜಿ ಹೇಳುತ್ತಾರೆ (ದಿ ಮಾರ್ಚ್ ಆಫ್ ತಾಂತ್ರಿಕ್ ಆರ್ಟ್ ಓವರ್ ದಿ ಫೆಸಿಫಿಕ್, ಪುಟ 289-296). ತಮಿಳುನಾಡಿನಲ್ಲಿ ಸಿದ್ಧ ವೈದ್ಯ ಇಂದಿಗೂ ಜೀವಂತವಿದೆ. ಅವರು ಅದರಲ್ಲೇ ಸ್ವಂತಿಕೆಯನ್ನೂ ಕಂಡುಕೊಂಡಿದ್ದಾರೆ. ಹೀಗಾಗಿ ಸಿದ್ಧರ ಬಗ್ಗೆ ಅಲ್ಲಿ ವ್ಯವಸ್ಥಿತ ಅಧ್ಯಯನಗಳೂ ನಡೆಯುತ್ತಿವೆ. ವಿವಿಗಳಲ್ಲಿ ಮಾತ್ರವಲ್ಲದೇ ಹತ್ತಾರು ಕಡೆ ತಮಿಳು ಸಂಸ್ಥೆಗಳು, ವ್ಯಕ್ತಿಗಳು ಇಂಥ ಅಧ್ಯಯನ ನಡೆಸಿದ್ದಾರೆ.
ಧರ್ಮ, ಮತಗಳ ಕಾರಣಕ್ಕೆ ಸಮಾಜದಲ್ಲಿ ಅಶಾಂತಿ ಹುಟ್ಟಿದಾಗ ಅದನ್ನು ತಮಣೆಗೊಳಿಸಿದವರು ಸಿದ್ಧರು. ಶಂಕರಾಚಾರ್ಯರ ಕಾಲದಿಂದಲೂ ಇದನ್ನು ನೋಡಬಹುದು. ಕ್ರಿ.ಶ. 15ನೆಯ ಶತಮಾನದ ವೇಳೆಗೆ ಹರಿ-ಹರರಲ್ಲಿ ಭೇದವೆಣಿಸಿ ಶೈವರು, ವೈಷ್ಣವರು ಕಚ್ಚಾಡುತ್ತಿದ್ದಾಗ ಸಿದ್ಧರಾದ ಕ್ರೋಢ ಮುನಿಗಳು ಇಬ್ಬರಲ್ಲೂ ಅಭೇದ ದರ್ಶನ ಮಾಡಿಸಿದರು. ಇದರ ಫಲವಾಗಿ ಕುಂದಾಪುರದ ಬಳಿ ಶಂಕರನಾರಾಯಣ ಊರು ಮತ್ತು ದೇವಾಲಯ ಸ್ಥಾಪನೆಯಾದವು ಎಂದು ಶಾಸನಗಳು ಹೇಳುತ್ತವೆ. ಹೀಗೆ ಧಾರ್ಮಿಕ ಸಾಮರಸ್ಯವನ್ನು ಕಾಪಾಡುವ ಕೆಲಸವನ್ನು ಸಿದ್ಧರು ಎಲ್ಲ ಕಡೆಯೂ ಮಾಡಿದ್ದಾರೆ. ತಮಿಳುನಾಡೂ ಇದಕ್ಕೆ ಹೊರತಲ್ಲ.
ಆದರೆ ಕ್ರಿ. ಶ 13ನೆಯ ಶತಮಾನದ ನಂತರ ದಕ್ಷಿಣ ಭಾರತದಲ್ಲಿ ಹೆಚ್ಚು ಪಸರಿಸಿದ ಇಸ್ಲಾಂ ಮತ್ತು 16ನೆಯ ಶತಮಾನದಿಂದ ಈಚೆಗೆ ಪೋರ್ಚುಗೀಸರು, ಡಚ್ಚರಿಂದ ಪ್ರಚುರವಾದ ಕ್ರಿಶ್ಚಿಯನ್ ಮತಪ್ರಸಾರಕರು ಸಿದ್ಧರ ವೇಷ ಮತ್ತು ಪವಾಡಗಳನ್ನು ತಮ್ಮ ಧರ್ಮ ಪ್ರಸಾರಕ್ಕೆ ಬಳಸಿಕೊಳ್ಳಲು ಆರಂಭಿಸಿದರು. ಈ ಬಗ್ಗೆ ಪೂರಕ ದಾಖಲೆಗಳು ದೊರೆಯುತ್ತವೆ. ತಮಿಳಿನಲ್ಲಿ ಈ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಉದಾ: ಕೆ ವಿ ರಾಮಕೃಷ್ಣರಾವ್, ಕ್ರಿಟಿಕಲ್ ಸ್ಟಡಿ ಆಫ್ ದಿ ಕ್ರೊನೊಲಜಿ ಆಫ್ ಸಿದ್ಧಾಸ್) ಈ ಕೃತಿಯಲ್ಲಿ ಲೇಖಕರು ಮತಾಂತರಕ್ಕೆ ಸಿದ್ಧ ಪರಂಪರೆಯನ್ನು ಬಳಸಿಕೊಂಡ ಬಗೆ ಮತ್ತು ವೇಷಾಂತರ, ರೂಪಾಂತರಗಳ ಹೇರಳ ನಿದರ್ಶನ ನೀಡುತ್ತಾರೆ. ಕಾಲಿನ್ ಮೆಕಂಜೆ ನಿರ್ದೇಶನದಂತೆ ಕ್ರಿಶ್ಚಿಯನ್ ಆಗಿ ಮತಾಂತರನಾದ ವೇದನಾಯಕಂ ಪಿಳ್ಳೈ ವಿಶ್ವಪುರಾಣ ಬರೆದುದು ಇದರಲ್ಲಿ ಒಂದು. ಈ ಕೃತಿಯ ಮುನ್ನುಡಿಯಲ್ಲಿ ದೇವಾಲಯಗಳ ಸ್ಥಳ ಪುರಾಣ ಇರುವಂತೆ ಪ್ರತಿ ಜಾತಿಯ ಪುರಾಣವನ್ನು ಬರೆಯಬೇಕೆಂದು ಮೆಕಂಜೆ ಹೇಳಿದ ಕಾರಣ ದೇಶದ ಜಾತಿ ಪ್ರತ್ಯೇಕತೆಯನ್ನು, ಅವರ ಜಾತಿ ಪುರಾಣವನ್ನು ಬರೆದುದಾಗಿ ಹೇಳಿದ್ದಾರೆಂದು ಲೇಖಕರು ಪ್ರಸ್ತಾಪಿಸಿದ್ದಾರೆ. ಅಲ್ಲದೇ ಕೆ ಎ ನೀಲಕಂಠ ಶಾಸ್ತ್ರೀ, ಡಾ. ಆರ್ ವೆಂಕಟರಾಮನ್, ಜೆ ಎನ್ ಫರ್‍ಕ್ವಾರರ್, ಒ ಪಿ ಜಗ್ಗಿ, ಟಿ ಪಿ ಮೀನಾಕ್ಷಿ ಸುಂದರಂ ಹಾಗೂ ಎಸ್ ಪಿ ಅಣ್ಣಾಮಲೈ ಅವರು ಪ್ರತಿಪಾದಿಸುವ ಸಿದ್ಧ ಸಾಹಿತ್ಯದ ಮೇಲೆ ಸೂಫಿಗಳ ಪ್ರಭಾವವನ್ನು ಕಾಲಾನುಕ್ರಮದ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ಇದೇ ರೀತಿ ಕ್ರಿಶ್ಚಿಯನ್ ಮಿಶನರಿಗಳು ಅದರಲ್ಲೂ ವೇದನಾಯಕಂ ಪಿಳ್ಳೈ ಯಜುರ್ವೇದವನ್ನು ಯೇಸುರ್ ವೇದವಾಗಿ ತಿರುಚಿದ್ದನ್ನು, ನೋಬಿಲಿ( 1577-1656)ಯಂಥ ಇಟಲಿಯ ಜೆಸ್ಯೂಟ್ ಮತಪ್ರಚಾರಕ ಸಿದ್ಧರಂತೆ ವೇಷ ಧರಿಸಿ ಮತಾಂತರಕ್ಕೆ ಯತ್ನಿಸಿ, ಪ್ರೊಟೆಸ್ಟಂಟ್ ಕ್ರಿಶ್ಚಿಯನ್ನರಿಂದಲೇ ಬಹಿರಂಗವಾದುದನ್ನು ಅವರು ಪ್ರಸ್ತಾಪಿಸುತ್ತಾರೆ. ಕರ್ನಾಟಕದಲ್ಲಿ ಇಂಥ ಅಧ್ಯಯನ ಇನ್ನೂ ನಡೆಯಬೇಕಿದೆ.
ತಮಿಳುನಾಡಿನಲ್ಲಿ ಸಿದ್ಧವೈದ್ಯದ ಕಾರಣ ಸಿದ್ಧರ ಬಗ್ಗೆ ಅಪಾರ ಅಧ್ಯಯನಗಳು ನಡೆಯುತ್ತಿವೆ. ಸಿಟಿಎಂಆರ್‍ನಂತ ಸಂಸ್ಥೆಗಳು ಕೇಂದ್ರದ ಅನುದಾನದಿಂದ ಕೆಲಸಮಾಡುತ್ತಿವೆ. ತಂಜಾವೂರು ವಿವಿಯಲ್ಲಿಯೂ ಸಿದ್ಧರ ಬಗ್ಗೆ ಅಪೂರ್ವ ಕೆಲಸಗಳು ನಡಡೆದಿವೆ, ನಡೆಯುತ್ತಿವೆ. ಬೆಂಗಳೂರಿನ ಅಲಸೂರಿನಲ್ಲಿ ಸಿದ್ಧರ ಬಗ್ಗೆ ಸಂಶೋಧನೆ ನಡೆಯುತ್ತಿದೆಯಾದರೂ ಇದನ್ನು ನಡೆಸುತ್ತಿರುವವರು ತಮಿಳು ವಿದ್ವಾಂಸರು.
ಒಟ್ಟಿನಲ್ಲಿ ಕರ್ನಾಟಕದಲ್ಲಿ ಸಿದ್ಧರ ಪರಂಪರೆ ಸಮೃದ್ಧವಾಗಿದ್ದರೂ ತಮಿಳುನಾಡಿನಷ್ಟು ವ್ಯವಸ್ಥಿತ ಅಧ್ಯಯನ ನಡೆಯುತ್ತಿಲ್ಲ. ಸಿದ್ಧರ ಅಧ್ಯಯನಕ್ಕೆ ಕರ್ನಾಟಕ ಇನ್ನೂ ಕನ್ನೆ ನೆಲವಾಗಿಯೇ ಇದೆ.
ಪುಸ್ತಕ:
No comments:
Post a Comment