ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಜ್ಞಾನ ಮತ್ತು ಜೀವನ ಮಾರ್ಗ ದರ್ಶಿಸಿದ ಅನೇಕಾನೇಕ ಮಹಾತ್ಮರು ಕಾಣಸಿಗುತ್ತಾರೆ. ಗೌತಮ ಬುದ್ಧ (ಪ್ರಸ್ತುತ ಶಕ ಪೂರ್ವ 563-480); ಹಾಗೂ ಪ್ರಸ್ತುತ ಶಕೆ ಸುಮಾರು ಎಂಟನೆಯ ಶತಮಾನದ ಶಂಕರಾಚಾರ್ಯ, ಮಧ್ವರು (ಶಕೆ 1238-1317) ಸಮಾಜಕ್ಕೆ ಕಾಲಿಕ ಮಾರ್ಗದರ್ಶನ ನೀಡಿದ್ದಾರೆ. ಇವರೆಲ್ಲ ತತ್ತ್ವಜ್ಞಾನ, ಸಾಹಿತ್ಯ, ತರ್ಕಶಾಸ್ತ್ರ, ಅಧ್ಯಾತ್ಮ, ಕಲೆ, ಸಂಗೀತ ಮೊದಲಾದ ಅಲೌಕಿಕ ಮತ್ತು ಲೌಕಿಕ ಜ್ಞಾನ ಮೀಮಾಂಸೆಯ ವಿವಿಧ ಕ್ಷೇತ್ರಗಳನ್ನು ಪ್ರಭಾವಿಸಿದ್ದಾರೆ, ಬೆಳೆಸಿದ್ದಾರೆ. ಇವರ ಚಿಂತನೆಗಳು ಎಂದೋ ಆಗಿ ಹೋದವಾಗಿದ್ದರೆ ಅನೇಕ ಶತಮಾನಗಳು ಕಳೆದ ಮೇಲೂ ಇವು ಚರ್ಚೆಯ ವಿಷಯಗಳಾಗುತ್ತಿರಲಿಲ್ಲ. ಮನುಕುಲ ಇರುವವರೆಗೂ ಇವರ ತತ್ತ್ವ-ಸಂದೇಶಗಳು ಅನ್ಯಾನ್ಯ ಬಗೆಗಳಲ್ಲಿ ಅಸ್ತಿತ್ವ ಪಡೆಯುತ್ತಲೇ ಇರುತ್ತವೆ. ಸಾವಿರ ವರ್ಷಗಳು ಕಳೆದ ಮೇಲೂ ಮತ್ತೆ ಮತ್ತೆ ಚರ್ಚೆಗೆ ಒಳಗಾಗುತ್ತಿರುವ ಶ್ರೀ ರಾಮಾನುಜರು (ಶಕೆ 1017-1137) ಇಂಥ ಮಹಾತ್ಮರಲ್ಲಿ ಒಬ್ಬರು. ಅವರು ನೀಡಿದ ತತ್ತ್ವಚಿಂತನೆಗಳು ಅನೇಕ ಕಾರಣಗಳಿಂದ ಮಹತ್ತ್ವಪೂರ್ಣವಾದವು. ಇವರೆಲ್ಲ ಮನುಷ್ಯನ ದೈಹಿಕ, ಆತ್ಮಿಕ, ಮಾನಸಿಕ ಶಕ್ತಿ ಸಾಧ್ಯತೆ-ಮಿತಿಗಳ, ಹಾಗೂ ಇವೆಲ್ಲ ಸೇರಿಕೊಂಡ ಜೀವನದ ಪರಮೋದ್ದೇಶವನ್ನು ತಾತ್ತ್ವಿಕ ರೂಪದಲ್ಲಿ ಹೇಳಿದ್ದಾರೆ. ಇವರ ದೃಷ್ಟಿಕೋನ ಭಿನ್ನಭಿನ್ನವಾದ್ದರಿಂದ ಇವರ ತತ್ತ್ವಗಳು ಭಿನ್ನ ಎಂಬಂತೆ ತೋರುತ್ತದೆ. ಆದರೆ ಇವರ ತಾತ್ತ್ವಿಕ ಚಿಂತನೆಗಳ ಮೂಲ ದ್ರವ್ಯ ಮನುಷ್ಯನ ದೇಹ-ಮನಸ್ಸು ಮತ್ತು ಆತ್ಮ ಹಾಗೂ ಆತ್ಯಂತಿಕ ಆನಂದದ ಶೋಧವೇ ಆಗಿದೆ. ಇದಕ್ಕೆ ಇವರು ನಶ್ವರವಾದ ದೈಹಿಕ ವಾಂಛೆಗಳನ್ನು ಬಿಟ್ಟು; ಶಾಶ್ವತ ಆನಂದ ನೀಡುವ ಆತ್ಮಿಕ ಸಾಧನೆ ನಡೆಸುವುದು ಸೂಕ್ತ ಅನ್ನುತ್ತಾರೆ. ಮನುಷ್ಯನಿಗೆ ಮೊದಲ ಸಹಜ ಬಯಕೆ ದೈಹಿಕ ಆಕಾಂಕ್ಷೆಗಳ ಈಡೇರಿಕೆಯೇ. ಆದರೆ ಅದಕ್ಕೆ ಕೊನೆಯೇ ಇಲ್ಲ, ಮೇಲ್ನೋಟದಲ್ಲಿ ಸುಖ ಎನಿಸುವ ಇದೇ ಶಾಶ್ವತ ದುಃಖವನ್ನು ತರುತ್ತದೆ. ಇದನ್ನು ಅರಿಯುವುದು ಕಷ್ಟವೇನಲ್ಲ; ಆದರೆ ಈ ಸತ್ಯವನ್ನು ಅರಿಯದಂತೆ ನಮ್ಮ ಮನಸ್ಸು ವರ್ತಿಸುವುದು ಮಾಯೆಯಿಂದ, ಅಜ್ಞಾನದಿಂದ ಅಥವಾ ಅವಿದ್ಯೆಯಿಂದ. ಇದು ಸ್ಪಷ್ಟವಾದರೆ ಮನುಷ್ಯ ಆತ್ಯಂತಿಕ ಆನಂದ ಹೊಂದಬಲ್ಲ. ಇದನ್ನು ರಾಮಾನುಜರು ತಿಳಿಸಿದ ರೀತಿ ಮತ್ತು ಅದರ ಸಾಮಾಜಿಕ ಸ್ವರೂಪವನ್ನು ಗ್ರಹಿಸುವುದು ಪ್ರಸ್ತುತ ಲೇಖನದ ಉದ್ದೇಶ.
ಭಾರತೀಯ ತಾತ್ತ್ವಿಕ ಪರಂಪರೆಯಲ್ಲಿ ಬುದ್ಧನ ಸಾಧನ ಮಾರ್ಗ ಮತ್ತು ಶಂಕರರ ನಿರ್ಗುಣ ಬ್ರಹ್ಮದ ಅದ್ವೈತ ಪರಿಕಲ್ಪನೆಗಳ ಅನಂತರ ಕಾಣಿಸುವ ಅತ್ಯಂತ ಮಹತ್ತ್ವದ ಪರಿಕಲ್ಪನೆ ರಾಮಾನುಜರ ವಿಶಿಷ್ಟಾದ್ವೈತ. ಭಕ್ತಿ ಮಾರ್ಗದ ಮೂಲಕ ಎಲ್ಲರೂ ಸಾಕ್ಷಾತ್ಕಾರ ಹೊಂದಬಹುದು ಎಂಬುದು ಇವರ ಮತ್ತೊಂದು ಚಿಂತನೆ. ಬ್ರಹ್ಮವೇ ಸತ್ಯ, ಜಗತ್ತಿನ ಪ್ರತಿಯೊಂದು ಚರಾಚರ ವಸ್ತುವೂ ಈಶ್ವರನ ಅಂಶವೇ ಆಗಿದೆ. ದೇಹ ಮತ್ತು ಆತ್ಮಗಳು ಈಶ್ವರನ ಅಧೀನ. ಹೀಗಾಗಿ ಮನುಷ್ಯನಿಗೆ ಸ್ವಾತಂತ್ರ್ಯ ಎಂಬುದಿಲ್ಲ. ಅಧ್ಯಾತ್ಮ ಸಾಧನೆಗೆ ಮನುಷ್ಯ ತನ್ನ ಪಾಲಿನ ಕರ್ಮಗಳನ್ನು ಮಾಡಲೇಬೇಕು. ಆ ಮೂಲಕ ಆನಂದಹೊಂದಬೇಕು. ಕರ್ಮದ ಪರಿಣಾಮದಿಂದ ಮನುಷ್ಯನ ಜೀವನ ನಿರ್ಧರಿತವಾಗುತ್ತದೆ. ಒಳಿತು ಮತ್ತು ಕೆಡುಕು ಎಂಬವು ವ್ಯಕ್ತಿಯ ಕರ್ಮವನ್ನು ಅವಲಂಬಿಸಿವೆ ಅನ್ನುವ ರಾಮಾನುಜರ ಈ ಚಿಂತನೆಗೆ ಪರಿಣಾಮವಾದ ಎಂದೂ ಹೇಳಲಾಗಿದೆ.
ಸೃಷ್ಟಿ ಶೂನ್ಯದಿಂದ ಆದುದಲ್ಲ; ಪ್ರಕೃತಿಯಲ್ಲಿ ಕಾಣುವ ಪ್ರತಿಯೊಂದು ವಸ್ತುವೂ ಮೂಲ ಶಕ್ತಿಯ ಪರಿವರ್ತನೆಯ ಪರಿಣಾಮಗಳು. ಇವುಗಳಿಗೆ ನಾಮರೂಪವಿದೆ ಅಷ್ಟೆ. ಬಗೆ ಬಗೆಯ ಆಕಾರದ ಚಿನ್ನಾಭರಣಗಳು ಮೂಲತಃ ಚಿನ್ನವನ್ನೇ ಆಧಾರವಾಗಿ ಹೊಂದಿರುವಂತೆ ಸೃಷ್ಟಿಯ ಎಲ್ಲವೂ ಈಶ್ವರನ ರೂಪಗಳೇ. ಇದನ್ನು ಅರಿಯದಿರುವುದನ್ನೇ ರಾಮಾನುಜರು ‘ಅವಿದ್ಯೆ’ ಅನ್ನುತ್ತಾರೆ. ಈ ಮೂಲಕ ಮನುಷ್ಯನ ಅಂತರಂಗ ಮತ್ತು ಬಹಿರಂಗದ ಅಂತರವನ್ನು ಅವರು ವಿವರಿಸುತ್ತಾರೆ.
ಜ್ಞಾನ ಅನ್ನುವುದು ಕರ್ಮಗಳನ್ನು ಬಿಟ್ಟು ಬರೀ ಚಿಂತಿಸುವುದಲ್ಲ. ಅಲೌಕಿಕ ಸಿದ್ಧಿ ಲೌಕಿಕ ಕಾರಣಗಳಿಂದಲೇ ಸಿದ್ಧಿಸುತ್ತದೆ. ಈ ಪ್ರಪಂಚದಲ್ಲಿ ಉತ್ತಮ ಜೀವನ ಹೊಂದುವುದೇ ಎಲ್ಲ ಮನುಷ್ಯನ ಆತ್ಯಂತಿಕ ಗುರಿ. ಆದರೆ ಆತ ಲೌಕಿಕ ಬದುಕಿನ ಅಂಗವಾಗಿದ್ದುಕೊಂಡು ತನ್ನ ನಿಗದಿತ ಜವಾಬ್ದಾರಿಯಿಂದ ನುಣುಚಿಕೊಳ್ಳಲಾರ. ಇದಕ್ಕಾಗಿ ಆತ ತನ್ನ ಸಮಾಜದ ರೀತಿ-ನೀತಿಗಳನ್ನು ಅರಿಯಲೇಬೇಕು. ಸಮಾಜದಲ್ಲಿ ವ್ಯಕ್ತಿ ತನ್ನ ಸ್ಥಾನ ತಿಳಿಯಬೇಕು ಅನ್ನುವ ರಾಮಾನುಜರು ವ್ಯಕ್ತಿ ಮತ್ತು ಆತನ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುತ್ತಾರೆ. ಬಾಹ್ಯದ ಈ ಅರಿವು ಇಲ್ಲದೇ ತನ್ನ ಅಂತರಂಗದ ಅರಿವು ಅಸಾಧ್ಯ. ಮಾನವನ ದೇಹವನ್ನು ಆವರಿಸಿದ ‘ಅವಿದ್ಯೆ’ ಆತ್ಮದ ನೈಜವಾದ ‘ಧರ್ಮಭೂತ ಜ್ಞಾನ’ವನ್ನು ಮರೆಸುತ್ತದೆ. ಅವಿದ್ಯೆ ಮನುಷ್ಯನ ವರ್ತನೆಯನ್ನು ಕೆಡಿಸುತ್ತದೆಯಲ್ಲದೇ ಈಶ್ವರನ ಅಸ್ತಿತ್ವವನ್ನು ಮರೆಯುವಂತೆ ಮಾಡುತ್ತದೆ. ಹೀಗಾಗಿ ಲೌಕಿಕ ಸುಖವೇ ಆತ್ಯಂತಿಕ ಎಂಬ ಭ್ರಮೆಗೆ ಮನುಷ್ಯ ಒಳಗಾಗುತ್ತಾನೆ. ಇದರಿಂದ ಮನುಷ್ಯನ ಆತ್ಮ ಮತ್ತು ಈಶ್ವರನ ನಡುವೆ ಅವಿದ್ಯೆ ಗೋಡೆಯಾಗುತ್ತದೆ. ಇದರಿಂದ ಹೊರಬಂದು ಶಾಶ್ವತ ಆನಂದದ ಈಶ್ವರ ಪ್ರಜ್ಞೆ ಹೊಂದಬೇಕು. ಇದನ್ನೇ ಅವರು ಮುಕ್ತಿ ಅನ್ನುತ್ತಾರೆ. ನಶ್ವರ ದೇಹ ಹಾಗೂ ಅವಿನಾಶಿ ಆತ್ಮದ ಜ್ಞಾನ ಸಾಧಿಸುವ ಸುಲಭ ಮಾರ್ಗ ‘ಭಕ್ತಿ’ ಮತ್ತು ‘ಉಪಾಸನೆ’ಗಳು.
ಭಕ್ತಿ ಅಂದರೆ ತನ್ನ ಭೌತಿಕ ಅಸ್ತಿತ್ವ ಮತ್ತು ಅದರ ಮಿತಿಯನ್ನು ಅರಿತು ಈಶ್ವರನಿಗೆ ಸಂಪೂರ್ಣ ಶರಣಾಗುವುದು. ಈ ಭಾವವೇ ಭಕ್ತಿ. ಇದು ಜ್ಞಾನದಿಂದ ಸಾಧಿತವಾಗುವ ಕಾರಣದಿಂದ ಜ್ಞಾನ ಬೇರೆಯಲ್ಲ, ಭಕ್ತಿ ಬೇರೆ ಅಲ್ಲ. ಭಕ್ತಿಯ ಉದಯ ನಿತ್ಯ ನೈಮಿತ್ತಿಕ ಕರ್ಮದ ಶ್ರದ್ಧೆಯ ಆಚರಣೆಯಿಂದ ಬರುತ್ತದೆ. ಕರ್ಮ ಫಲಾಪೇಕ್ಷೆಯಿಂದ ಹೊರತಾದಾಗ ಭಕ್ತಿಗೆ ಅರ್ಥ ಮತ್ತು ಶಕ್ತಿ. ಹೀಗಾಗಿ ಭಕ್ತಿಗೆ ಜ್ಞಾನ ಮತ್ತು ಕರ್ಮಗಳೆರಡೂ ಬಹಳ ಮುಖ್ಯ. ರಾಮಾನುಜರು ವ್ಯಕ್ತಿ ತನ್ನ ಕಾರ್ಯದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು, ಇದು ವಿದ್ಯೆಗೂ ಭಕ್ತಿಗೂ ಕಾರಣವಾಗುತ್ತದೆ ಎಂದು ಈಶ್ವರ ಸಾಕ್ಷಾತ್ಕರದ ಸುಲಭ ಮಾರ್ಗ ತೋರಿಸುತ್ತಾರೆ. ವೈದಿಕ ಕ್ರಿಯಾ ಕರ್ಮಗಳಿಂದ, ಧ್ಯಾನ ತಪಸ್ಸುಗಳಿಂದಲೇ ಮುಕ್ತಿ ಎಂದು ಭಾವಿಸಲಾಗಿದ್ದ ಸಂದರ್ಭದಲ್ಲಿ ರಾಮಾನುಜರು ಜನಸಾಮಾನ್ಯರೆಲ್ಲ ವೈದಿಕ ಕ್ರಿಯಾ ಕರ್ಮಗಳಲ್ಲಿ, ಧ್ಯಾನ ತಪಸ್ಸುಗಳಲ್ಲಿ ತೊಡಗಿ, ನಿತ್ಯ ಕರ್ಮಗಳನ್ನು ಕೈಬಿಡಲಾಗದು-ಇವುಗಳ ಜೊತೆಗೆ ಎಲ್ಲರೂ ದೈವ ಸಾಕ್ಷಾತ್ಕಾರ ಕಾಣುವ ಮತ್ತು ಆನಂದ ಹೊಂದುವ ಮಾರ್ಗ ಯಾವುದು ಅನ್ನುವುದನ್ನು ಮನಗಾಣಿಸುತ್ತಾರೆ. ಫಲಾಪೇಕ್ಷೆ ಇಲ್ಲದ ಕರ್ಮಾಚರಣೆ ವ್ಯಕ್ತಿಯ ಅಹಂಕಾರ ನಾಶಮಾಡುತ್ತದೆ. ನಿಜವಾಗಿ ಭಕ್ತಿ ಅಂದರೆ ಲೌಕಿಕ ಆಸ್ಥೆಯ ನಾಶ. ಅದು ಬರೀ ಭಾವನೆ ಅಲ್ಲ, ಅದು ಜ್ಞಾನ. ತಾನು ಬಯಸಿದ ವಸ್ತುವಿನ ಸ್ವರೂಪ ಅರಿಯದೇ ವ್ಯಕ್ತಿಗೆ ಆ ವಸ್ತುವಿನಲ್ಲಿ ಪ್ರೀತಿ ಉಂಟಾಗುವುದಿಲ್ಲ. ಈಶ್ವರನ ಸ್ವರೂಪ ಅರಿಯುವುದೇ ಭಕ್ತಿ. ಇದನ್ನು ರಾಮಾನುಜರು ‘ಪ್ರಪತ್ತಿ’ -ಸಂಪೂರ್ಣ ಶರಣಾಗತಿ ಎಂದು ಕರೆಯುತ್ತಾರೆ. ಈ ಅರಿವು ಉಂಟಾದಾಗ ವ್ಯಕ್ತಿ ಇಡೀ ಜಗತ್ತನ್ನೇ ಪ್ರೀತಿಸುತ್ತಾನೆ, ಗೌರವಿಸುತ್ತಾನೆ. ಇದಕ್ಕೆ ಯಾವುದೇ ಜಾತಿ, ವಯಸ್ಸು ಅಡ್ಡ ಬರುವುದಿಲ್ಲ. ಯಾವುದೇ ವ್ಯಕ್ತಿ ಭಕ್ತಿಯನ್ನು ಸಾಧಿಸಬಹುದು. ಇದರ ಸಾಧನೆಗೆ ವೈದಿಕ ಜ್ಞಾನವಾಗಲೀ ಕರ್ಮವಾಗಲೀ ಬೇಕಿಲ್ಲ ಅನ್ನುವ ರಾಮಾನುಜರು ಭಕ್ತಿಯ ಮೂಲಕ ಎಲ್ಲರಿಗೂ ಮೋಕ್ಷ ಸಾಧ್ಯ ಎಂದು ಪ್ರತಿಪಾದಿಸಿ ಅಧ್ಯಾತ್ಮ ಸಾಧನೆಯ ಬಾಗಿಲನ್ನು ಎಲ್ಲ ಜನವರ್ಗಕ್ಕೂ ತೆರೆಯುತ್ತಾರೆ. ನಿಜವಾಗಿ ಭಾರತೀಯ ಪರಂಪರೆಯಲ್ಲಿ ಮಹತ್ತ್ವದ ಸ್ಥಾನ ಪಡೆದ ಭಕ್ತಿ ಮಾರ್ಗಕ್ಕೆ ಒಂದು ನಿರ್ದಿಷ್ಟ ಚೌಕಟ್ಟು ಒದಗಿಸಿ ಅದಕ್ಕೆ ವ್ಯಾಪಕವೂ ಭದ್ರವೂ ಆದ ಅಡಿಪಾಯ ಹಾಕಿದವರು ರಾಮಾನುಜರು. ಇವರಿಂದ ಭಕ್ತಿಯೋಗ ಎಲ್ಲರಿಗೂ ಲಭಿಸುವಂತಾಗಿ ಅದೊಂದು ಚಳವಳಿಯ ರೂಪ ಪಡೆದು ಸಾಹಿತ್ಯ ಮತ್ತು ಸಂಗೀತದ ದೊಡ್ಡ ಪರಂಪರೆಯನ್ನೇ ಸೃಷ್ಟಿಸಿತು. ಭಕ್ತಿಯ ಸರಳ ಮಾರ್ಗದ ಮೂಲಕ ಎಲ್ಲರಿಗೂ ಅವರವರು ಇರುವ ಸ್ಥಿತಿಯಲ್ಲೇ ಆತ್ಯಂತಿಕ ನೆಮ್ಮದಿ ಮತ್ತು ಆನಂದದ ದರ್ಶನ ಮಾಡಿಸಿದರು.
ರಾಮಾನುಜರು ವ್ಯಕ್ತಿಯ ಸಾಮಾಜಿಕ ಹೊಣೆಗಾರಿಕೆ ಮತ್ತು ಆತನ ಸ್ವಾತಂತ್ರ್ಯದ ಬಗ್ಗೆಯೂ ಹೇಳುತ್ತಾರೆ. ವ್ಯಕ್ತಿ ಬಯಸಿದ್ದು ಆತನಿಗೆ ಲಭಿಸುತ್ತದೆ. ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂಬ ವಿವೇಚನೆಯನ್ನು ಆತ ಮಾಡಬೇಕು. ಇದು ಆತನ ಇಚ್ಛೆಯನ್ನು ಅವಲಂಬಿಸಿದೆ. ಒಳ್ಳೆಯ ಇಚ್ಛೆಗೆ ದೈವಾನುಕೂಲ ಲಭಿಸಿದರೆ ಕೆಟ್ಟ ಇಚ್ಛೆ ಆ ವ್ಯಕ್ತಿಗೂ ಅವನ ಸುತತಲಿನ ಸಮಾಜಕ್ಕೂ ಕಂಟಕಪ್ರಾಯವಾಗುತ್ತದೆ. ಅದು ಆತನ ಜನ್ಮಾಂತರದ ನಂಟು ಪಡೆಯುತ್ತದೆ. ಇದನ್ನು ಅವರು ಪ್ರಾರಬ್ಧ ಕರ್ಮ ಅನ್ನುತ್ತಾರೆ. ಇದಕ್ಕೆ ವ್ಯಕ್ತಿ ಗುಲಾಮನಾಗುತ್ತಾನೆ. ಆದರೆ ಸದಿಚ್ಛೆಗೆ ದೈವಾನುಕೂಲ ಲಭಿಸಿ, ದೈವ ನಿಯಂತ್ರಿತವಾದ ಅದೃಷ್ಟದ ಮೂಲಕ ಫಲ ಪಡೆಯುವ ವ್ಯಕ್ತಿ ತನಗೆ ಸದಿಚ್ಛೆ ಬೇಕೋ ದುಷ್ಟ ಇಚ್ಛೆ ಬೇಕೋ ಎಂಬುದನ್ನು ನಿರ್ಧರಿಸುವ ವಿವೇಕದ ಸ್ವಾತಂತ್ರ್ಯವನ್ನೂ ಪಡೆದಿದ್ದಾನೆ. ಹೀಗಾಗಿ ವ್ಯಕ್ತಿ ತನ್ನ ಕ್ರಿಯೆಗೆ ತಾನೇ ಪ್ರಭು, ಅದರ ಪರಿಣಾಮಕ್ಕೆ ತಾನೇ ಗುಲಾಮ! ಪಾಪ ಕರ್ಮಗಳು ಅಥವಾ ವ್ಯಕ್ತಿ ಅನುಭವಿಸುವ ಕಷ್ಟಗಳೆಲ್ಲ ಆತನ ಪ್ರಾರಬ್ಧ ಕರ್ಮದ ಫಲ. ಹೀಗಾಗಿ ಜೀವ ದೈವಕ್ಕೆ ಅಧೀನವೂ ಅದೇ ವೇಳೆಗೆ ಸ್ವತಂತ್ರವೂ ಆಗಿದೆ.
ರಾಮಾನುಜರ ಈ ಚಿಂತನೆಯಲ್ಲಿ ವ್ಯಕ್ತಿಯ ಸಾಮಾಜಿಕ ಹೊಣೆಗಾರಿಕೆಯ ಪ್ರತಿಪಾದನೆ ಇದೆ. ತಾನು ಮಾಡುವ ಕೆಲಸ ತನಗೊಬ್ಬನಿಗೇ ಸಂಬಂಧಿಸಿದೆ ಎಂದು ಆತ ಭಾವಿಸುವ ಹಾಗಿಲ್ಲ. ಒಬ್ಬ ವ್ಯಕ್ತಿ ಮಾಡುವ ದುಷ್ಟ ಕೆಲಸದಿಂದ ಸಮಾಜದ ಅನೇಕ ಜೀವಗಳು ಬಲಿಯಾಗಬಹುದು, ಸಂಕಟಪಡಬಹುದು. ಅದು ಆತನ ಪ್ರಾರಬ್ಧ ಕರ್ಮವಾಗಿ ಕಾಡುತ್ತದೆ. ಈ ಎಚ್ಚರ ವ್ಯಕ್ತಿಯಲ್ಲಿ ಜವಾಬ್ದಾರಿಯನ್ನು ಉಂಟುಮಾಡುತ್ತದೆ. ರಾಮಾನುಜರ ತತ್ತ್ವ ಪ್ರತಿಪಾದಿಸುವಂತೆ ಸಮಾಜದಲ್ಲಿ ಪ್ರತಿಯೊಬ್ಬರೂ ಪರಸ್ಪರ ಸಂಬಂಧ ಪಡೆದಿದ್ದಾರೆ, ಪರಸ್ಪರ ಅವಲಂಬಿಸಿದ್ದಾರೆ. ಹೀಗಾಗಿ ವ್ಯಕ್ತಿಯ ಒಳ್ಳೆಯ ಅಥವಾ ಕೆಟ್ಟ ಕಾರ್ಯಗಳು ಸಾಮಾಜಿಕ ಸ್ವರೂಪ ಪಡೆಯುತ್ತವೆ. ವ್ಯಕ್ತಿಯ ಸುಖ ಮತ್ತು ದುಃಖಗಳಿಗೆ ಆತನ ಕರ್ಮಗಳು ಎಷ್ಟು ಕಾರಣವೋ ಇತರರ ಕರ್ಮಗಳೂ ಅಷ್ಟೇ ಕಾರಣ. ಆದ್ದರಿಂದ ನಮ್ಮ ಕರ್ಮಗಳಿಗೆ ಸಾಮಾಜಿಕ ಜವಾಬ್ದಾರಿ ಇದ್ದೇ ಇದೆ. ವ್ಯಕ್ತಿ ಯಾವುದೇ ಸ್ಥಾನದಲ್ಲಿರಲಿ, ಆತ ಪರಿಶ್ರಮದಿಂದ ಮಾತ್ರ ಉತ್ತಮ ಜೀವನವನ್ನೂ ಆನಂದವನ್ನೂ ಪಡೆಯಲು ಸಾಧ್ಯ. ಆದರೆ ಈ ಉತ್ತಮ ಜೀವನ ಮತ್ತು ಆನಂದ ವೈಯಕ್ತಿಕ ಮಾತ್ರವಲ್ಲ-ಅದು ಸಾಮೂಹಿಕ ಕ್ರಿಯೆಯ ಫಲ ಎಂಬುದು ಗಮನಾರ್ಹ. ಈ ದೃಷ್ಟಿಯಿಂದ ಸಮಾಜದಲ್ಲಿ ಯಾವುದೇ ಕೆಲಸ ಮಾಡುವವನಿಗೂ ಸಮಾನ ಗೌರವ ಮತ್ತು ಅವಕಾಶಗಳಿವೆ. ವ್ಯಕ್ತಿ ತನ್ನ ಪಾಲಿನ ಕರ್ತವ್ಯ ಮಾಡುವುದರ ಜೊತೆಗೆ ಇತರರ ಕಾರ್ಯವನ್ನು ಗೌರವಿಸುವ ಹಾಗೂ ಅದಕ್ಕೆ ಸೂಕ್ತ ಅವಕಾಶ ಕಲ್ಪಿಸಬೇಕಾಗುತ್ತದೆ. ಇದು ವ್ಯಕ್ತಿ ಗೌರವ ಮತ್ತು ಆತನ ಸಾಮಾಜಿಕ ಜವಾಬ್ದಾರಿಯನ್ನು ರಾಮಾನುಜರು ದರ್ಶಿಸಿದ ಪರಿ. ಇದು ನಿಜಕ್ಕೂ ಆದರ್ಶದ ಸಮಾಜ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆಯಲ್ಲದೇ ಸರ್ವರ ಸುಖ-ಸಂತೋಷದ ಬಾಗಿಲನ್ನು ತೆರೆಯುತ್ತದೆ.
ಸಾಮಾಜಿಕ ಗುಂಪುಗಳು ಭಿನ್ನವಾಗುವುದು ತಮ್ಮದೇ ಆಚಾರ-ವಿಚಾರ ಮತ್ತು ಸಂಪ್ರದಾಯಗಳ ಕಾರಣದಿಂದ. ಆಯಾ ಸಮಾಜದ ವ್ಯಕ್ತಿ ಅಂಥ ಆಚಾರಗಳ ಅರ್ಥ ಮತ್ತು ವ್ಯಾಪ್ತಿಯನ್ನು ಅರಿತಾಗ ಮಾತ್ರ ಅದರ ಸಾಮಾಜಿಕ ಮೌಲ್ಯ ಅರ್ಥವಾಗುತ್ತದೆ. ವ್ಯಕ್ತಿಗಳ ದೃಷ್ಟಿ, ಜೀವನ ಶೈಲಿ ಭೇದದಿಂದ ಇಂಥ ಸಾಮಾಜಿಕ ಆಚಾರ ವಿಚಾರ ಭೇದ ಕಾಣಿಸುತ್ತದೆ. ಸಮಾಜದ ಉಳಿವಿಗೆ ಇಂಥ ವೈವಿಧ್ಯವನ್ನು ಕಾಪಾಡಬೇಕಾದುದು ಅಗತ್ಯ ಎಂಬುದು ರಾಮಾನುಜರ ಅಭಿಮತ. ಹೀಗೆ ಅವರು ಸಾಂಸ್ಕತಿಕ ಮತ್ತು ಸಾಮಾಜಿಕ ಬಹುತ್ವವನ್ನು ಎತ್ತಿಹಿಡಿಯುತ್ತಾರೆ.
ಒಟ್ಟೂ ಸಮಾಜದ ಉಳಿವಿಗೆ ವ್ಯಕ್ತಿಯ ಕುಲಕಸುಬುಗಳು ಹಾಗೂ ಆಯಾ ಸಾಮಾಜಿಕ ಗುಂಪುಗಳ ಜೀವನ ದೃಷ್ಟಿ ಅಗತ್ಯವಾದುದರಿಂದ ಅವುಗಳನ್ನು ಆಯಾ ಸಮಾಜದ ವ್ಯಕ್ತಿಗಳು ಕಾಪಾಡಿಕೊಳ್ಳಬೇಕು ಅನ್ನುವ ರಾಮಾನುಜರ ಆಶಯದಲ್ಲಿ ವರ್ಣಾಶ್ರಮ ಪದ್ಧತಿಯನ್ನು ಉಳಿಸುವ ಕಾಳಜಿಯನ್ನು ಮಾತ್ರವೇ ಸಾಮಾನ್ಯವಾಗಿ ಗಮನಿಸಲಾಗುತ್ತದೆ. ಆದರೆ ಅದರ ಇನ್ನೊಂದು ಮಗ್ಗುಲಾದ ಸಾಮಾಜಿಕ ಬಹುಳತೆಯ ಉಳಿವನ್ನು ಮತ್ತು ಆಯಾ ವರ್ಣ ವೃತ್ತಿಗಳ ಸಾಮಾಜಿಕ ಅನಿವಾರ್ಯತೆಯನ್ನು ಅಷ್ಟಾಗಿ ಗಮನಿಸಲಾಗಿಲ್ಲ. ರಾಮಾನುಜರ ಕಾಳಜಿ ಇಂಥ ಬಹುಳತೆಯ ಉಳಿವೇ ವಿನಾ ಬೇರೇನೂ ಅಲ್ಲ. ಇವನ್ನು ಉಳಿಸಿಕೊಂಡು, ಅವುಗಳಲ್ಲೇ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತ, ಸರಳವಾದ ಭಕ್ತಿ ಮಾರ್ಗವನ್ನು ಅಳವಡಿಸಿಕೊಳ್ಳುವುದರಿಂದ ವ್ಯಕ್ತಿ ಶಾಶ್ವತ ಆನಂದವಾದ ಮುಕ್ತಿ ಪಡೆಯಬಹುದು ಅನ್ನುವುದು ಅವರ ಚಿಂತನೆಯ ಮೂಲ ದ್ರವ್ಯ.
ರಾಮಾನುಜರು ವ್ಯಕ್ತಿ ಮತ್ತು ಸಮಾಜ ಉದ್ಧರಿಸುವ ಸರಳ ಮಾರ್ಗ ತೋರಿದ ಸಂತ ಮಾತ್ರವಲ್ಲದೇ ಅಪೂರ್ವ ಕೃತಿಕಾರರೂ ಆಗಿದ್ದಾರೆ. ಅವರ ಅನೇಕ ಬಿಡಿ ಕೃತಿಗಳ ಹೊರತಾಗಿ ವೇದಾರ್ಥ ಸಂಗ್ರಹ, ಶ್ರೀ ಭಾಷ್ಯ ಹಾಗೂ ಭಗವದ್ಗೀತಾ ಭಾಷ್ಯಗಳು ಮುಖ್ಯವಾದವು. ಇವುಗಳಲ್ಲಿ ರಾಮಾನುಜರ ತಾತ್ತ್ವಿಕ ದೃಷ್ಟಿಗಳು ಮಡುಗಟ್ಟಿವೆ. ಈ ಕೃತಿಗಳು ಅಧ್ಯಯನಶೀಲರಾದ ಪಂಡಿತರಿಗೆ-ಆಮೂಲಕ ಅಂಥವರ ಜೀವನ ಸಂತೋಷಕ್ಕೆ ಮಾರ್ಗ ಕಲ್ಪಿಸಿದ ರಾಮಾನುಜರು ಓದುಬರೆಹ ಬಾರದ ಪಾಮರರೆನಿಸಿದ ಜನಸಾಮಾನ್ಯರಿಗೆ ಸರಳ ಭಕ್ತಿ ಸಾಹಿತ್ಯದ ಮೂಲಕ ಆನಂದದ ಮಾರ್ಗ ತೋರಿಸಿದ್ದಾರೆ. ವ್ಯಕ್ತಿ ಸಾಮಥ್ರ್ಯಕ್ಕೆ ತಕ್ಕ ಸಾಮಗ್ರಿ ಒದಗಿಸುವ ಮೂಲಕ ಆಯಾ ವ್ಯಕ್ತಿಯ ಜೀವನಕ್ಕೆ ಅಗತ್ಯ ಮಾರ್ಗವನ್ನು ಅವರು ದರ್ಶಿಸಿದ್ದಾರೆ. ಆದರೆ ಪಂಡಿತರಿಗೇ ಆಗಲಿ, ಪಾಮರರಿಗೇ ಆಗಲಿ, ಅವರು ಹೇಳುವ ಸಾಮಾಜಿಕ ಜವಾಬ್ದಾರಿ ಮತ್ತು ವ್ಯಕ್ತಿಯ ಹೊಣೆಗಾರಿಕೆಗಳು ಒಂದೇ ಆಗಿವೆ.
ರಾಮಾನುಜರು ಪ್ರತಿಪಾದಿಸಿದ ಭಕ್ತಿಯ ಸರಳ ಮಾರ್ಗ ಗಾಂಧೀಜಿಯವರವರೆಗೂ ಹರಿದುಬಂದಿದೆ. ರಾಮಾನುಜರ ತರುವಾಯ ಸಾವಿರಾರು ವರ್ಷಗಳಲ್ಲಿ ಅದೊಂದು ಸಾಹಿತ್ಯ-ಸಂಗೀತ ಪ್ರವಾಹವಾಗಿ ದೇಶದ ಸಂಸ್ಕøತಿಗೆ ಬಹುದೊಡ್ಡ ಕೊಡುಗೆ ನೀಡಿದೆ. ಆಳ್ವಾರರು ಮತ್ತು ಅವರ ಅನುಯಾಯಿಗಳಾದ ಸಾಮಾಜಿಕ ಸಮುದಾಯಗಳು ಭಕ್ತಿ ಮಾರ್ಗದ ಮೂಲಕ ಅಪಾರ ಸಾಹಿತ್ಯವನ್ನೂ ಗಾಯನ ನರ್ತನದ ಮೂಲಕ ಸಂಗೀತ ಸುಧೆಯನ್ನೂ ಹರಿಸಿ ಸಮಾಜದಲ್ಲಿ ಗುಣಾತ್ಮಕ ಪರಿವರ್ತನೆ ಉಂಟುಮಾಡಿವೆ. ಭಕ್ತಿ ರಸದಲ್ಲಿ ನೂರಾರು ಬಗೆಯ ಆಚರಣೆ, ಸಂಪ್ರದಾಯಗಳು ಕಾಣಿಸಿಕೊಂಡು ಸಾಂಸ್ಕøತಿಕ ವೈವಿಧ್ಯಕ್ಕೆ ಕಾರಣವಾಗಿವೆ.
ಈ ದೃಷ್ಟಿಯಿಂದ ವ್ಯಕ್ತಿಯ ವೈಯಕ್ತಿಕ ಶ್ರೇಯಸ್ಸಿನ ಮಾರ್ಗವನ್ನು ತೋರಿಸುವುದರ ಜೊತೆಗೆ ಒಟ್ಟೂ ಸಮಾಜ ಮತ್ತು ಸಂಸ್ಕøತಿಗಳ ಗುಣಾತ್ಮಕ ಬೆಳವಣಿಗೆಗೆ ರಾಮಾನುಜರು ನೀಡಿದ ಕೊಡುಗೆ ಅನ್ಯಾದೃಶವಾಗಿ ಕಾಣಿಸುತ್ತದೆ.
No comments:
Post a Comment