Saturday, 17 June 2023

1. ಸದಾ ಕಾಡುವ ಅಪ್ಪನ ನೆನಪು - ೧



ಅಪ್ಪ ತೀರಿಕೊಂಡು ಹತ್ತು ವರ್ಷಗಳಾದವು. ಆದರೆ ಹೋದಲ್ಲಿ ಬಂದಲ್ಲಿ ಆತ ನೆನಪಾಗದ ಕ್ಷಣವೇ ಇಲ್ಲ. ಆ ಮಟ್ಟಿಗೆ ಆತ ಆವರಿಸಿಕೊಂಡುಬಿಟ್ಟಿದ್ದಾನೆ. ಆತ ನನ್ನನ್ನು ಈ ಲೋಕಕ್ಕೆ ಕರೆದುತಂದಿದ್ದು ಮಾತ್ರವಲ್ಲ ಈ ಲೋಕದ ಸಕಲ ಚರಾಚರ ವಸ್ತಗಳನ್ನು ಮೊದಲಬಾರಿಗೆ ತೋರಿಸಿ ಪರಿಚಯಿಸಿದ್ದು ಅವುಗಳೊಂದಿಗೆ ನನ್ನನ್ನು ಜೋಡಿಸಿದ್ದು ಇದಕ್ಕೆ ಕಾರಣವೆನ್ನಬಹುದು. ಯಾವುದೇ ಹುಣ್ಣಿಮೆ ಅಮಾವಾಸ್ಯೆಯ ರಾತ್ರಿಗಳು ನನ್ನಪಾಲಿಗೆ ಅಪ್ಪನೊಂದಿಗೆ ಕಲಿಕೆಯ ತರಗತಿಗಳಾಗಿರುತ್ತಿದ್ದವು. ಕತ್ತಲು ಆವರಿಸುತ್ತಿದ್ದಂತೆ ಅಮಾವಾಸ್ಯೆಯ ರಾತ್ರಿ ಮನೆಹೊರಗೆ ಕಾಡಿನ ಬಾಯಿಗೆ ಕರೆದೊಯ್ಯುತ್ತಿದ್ದ. ಅಲ್ಲಿ ಯಾವುದೋ ಮರಕ್ಕೆ ಅಂಟಿಕೊಂಡು ತನ್ನ ಹೊಟ್ಟೆ ಒಡೆದು ಹೋಗುವಂತೆ ಜರ‍್ರ್ ಎಂದು ಕಿರುಚುತ್ತಿದ್ದ ಜೀರುಂಡೆಗಳನ್ನು ಟಾರ್ಚ್ ಬೆಳಕಲ್ಲಿ ತೋರಿಸಿ ಆ ಮರಕ್ಕೆ ಅಂಟಿಕೊಂಡು ಕಿರುಚುತ್ತಲೇ ಸತ್ತುಹೋಗಿದ್ದ ಜೀರುಂಡೆಗಳನ್ನು ತೋರಿಸಿ ಅವುಗಳನ್ನು ಮರದಿಂದ ಬಿಡಿಸಿ ಅವುಗಳ ರೆಕ್ಕೆಯ ಬಣ್ಣಗಳನ್ನು ಅಂದವನ್ನು ಹತ್ತಿರದಿಂದ ನೋಡುವಂತೆ ನಾಳೆ ಬಿಸಿಲಲ್ಲಿ ಮತ್ತೆ ನೋಡುವಂತೆ ಹೇಳುತ್ತಾ ಅವುಗಳ ಬಗ್ಗೆ ತನಗೆ ಗೊತ್ತಿರುವ ಎಲ್ಲ ಸಂಗತಿಯನ್ನು ಒಂದೊಂದಾಗಿ ಹೇಳುತ್ತಿದ್ದ ಅದು ಮಳೆಗಾಲದ ರಾತ್ರಿಯಾದರಂತೂ ನೊರಾರು ಬಗೆಯ ವಿಚಿತ್ರ ಕ್ರಿಮಿಕೀಟಗಳು ಕಾಣಿಸುತ್ತಿದ್ದವು ಹತ್ತಾರು ಬಗೆಯ ಕಪ್ಪೆಗಳು, ಮರಕಪ್ಟೆ, ಮಿಂಚು ಹುಳ ಮುಂತಾದವುಗಳ ದರ್ಶನಮಾಡಿಸಿ ಅವುಗಳ ಬಗ್ಗೆ ತಿಳಿದ ಮಾಹಿತಿಯನ್ನು ಹೇಳುತ್ತಿದ್ದ. ಹೀಗೆ ಪರಿಸರದ ಕತೆ ತಲೆಯೊಳಗೆ ಇಳಿಯತೊಡಗಿತು. ಹೇಳಿ ಕೇಳಿ ಅದು ಮಲೆನಾಡು, ಧೋ ಎಂದು ವಾರಗಟ್ಟಲೆ ಒಂದೇ ಸಮನೆ ಮೂರ್ನಾಲ್ಕು ತಿಂಗಳು ಸುರಿಯುವ ಮಳೆ. ಮರದ ತೊಗಟೆಗಳ ಮೇಲೆ ಮಳೆ ನೀರು ಇಳಿದು ಪಾಚಿಕಟ್ಟಿರುತ್ತಿತ್ತು. ಅದನ್ನು ತೋರಿಸುತ್ತಾ ‘ನೋಡು ಮಳೆ ಅಂದರೆ ಹಿಂಗೆ ಬರಬೇಕು’ ಅನ್ನುತ್ತಿದ್ದ ಸುತ್ತ-ಮುತ್ತಲೆಲ್ಲ ಸಣ್ಣ-ಪುಟ್ಟ ತೊರೆಗಳು, ಜಲಪಾತಗಳು ಗುಡ್ಡದಿಂದ ಸುರಿಯುತ್ತಿದ್ದವು ಮಣ್ಣು ಮೆತ್ತಿದ್ದ ಕಾಲುಗಳನ್ನು ಆ ತೊರೆಗಳಿಗೆ ಹಿಡಿದು ಕಾಲು ತೊಳೆಸುತ್ತಿದ್ದ. ಎಲ್ಲಾದಾರೂ ಕಾಲುಬೆರಳುಗಳ ಸಂದಿಯಲ್ಲಿ ಅಂಟಿಕೊಂಡು ರಕ್ತ ಹೀರುತ್ತಿದ್ದ ಉಂಬಳ(ಇಂಬಳ) ತೋರಿಸಿ ಅದನ್ನು ಕಿತ್ತು ಇದು ನೋಡು ಎಷ್ಟು ರಕ್ತವನ್ನು ಬೇಕಾದರೂ ಹೀರುತ್ತದೆ. ನೋಡಲು ಇಷ್ಟು ಚಿಕ್ಕದು. ಆದರೆ ರಕ್ತ ಹೀರಿದಷ್ಟೂ ದೊಡ್ಡದಾಗುತ್ತದೆ. ಇದರ ಮಜ ಗೊತ್ತಾ ಎನ್ನುತ್ತಾ ಅದರ ಹೊಟ್ಟೆಯನ್ನು ಅಮುಕಿ ಕುಡಿದ ರಕ್ತವೆನ್ನೆಲ್ಲಾ ಕಕ್ಕಿಸಿ ಜೊತೆಯಲ್ಲಿದ್ದ ಕತ್ತಿಯಿಂದ ಅದನ್ನು ಕತ್ತರಿಸುತ್ತಿದ್ದ. ಈಗ ನೋಡು ಎಂದು ಅದನ್ನು ನೋಡುವಂತೆ ಹೇಳುತ್ತಿದ್ದ. ಕತ್ತರಿಸಿದ ಎರಡೂ ಭಾಗಗಳು ಅತ್ತಿತ್ತ ಚಲಿಸುತ್ತಿದ್ದವು. ಇವು ಸಾಯುವುದಿಲ್ಲ. ಮಳೆಗಾಲ ಮುಗಿಯುತ್ತಿದ್ದಂತೆ ಒಣಗಿದ ಕಡ್ಡಿಯಂತೆ ತರಗೆಲೆಗಳ ಜೊತೆ ಬಿದ್ದಿರುತ್ತವೆ. ಒಂದು ಮಳೆ ಬಿತ್ತೋ ಮತ್ತೆ ಚಿಗಿತುಕೊಳ್ಳುತ್ತವೆ. ಮನುಷ್ಯ, ದನ ಹೀಗೆ ರಕ್ತವಿರುವ ಯಾವುದೇ ಪ್ರಾಣಿ ಅತ್ತಿತ್ತ ಓಡಾಡಿದರೆ ಅವುಗಳ ವಾಸನೆ ಹಿಡಿದು ಅಂಟಿಕೊಳ್ಳುತ್ತವೆ. ಮತ್ತೆ ಜೀವತಾಳುತ್ತವೆ. ಸುಟ್ಟಾಗಲೇ ಇವು ಸಾಯುವುದು ಎಂದು ಅವುಗಳ ವೃತ್ತಾಂತ ಹೇಳುತ್ತಿದ್ದ ಇವು ಅಂಟದಂತೆ ಮಾಡಿಕೊಳ್ಳಲು ಒಂದು ಉಪಾಯವಿದೆ ಎನ್ನುತ್ತಾ ತನ್ನ ಸಂಚಿ(ಎಲೆ-ಅಡಿಕೆ ಇಟ್ಟುಕೊಳ್ಳುವ ಸಣ್ಣ ಚೀಲ)ಯೋಳಗಿಂದ ತಂಬಾಕು ತೆಗೆದು ಅದನ್ನು ನೀರಿಗೆ ಹಾಕಿ ಕಾಲಿಗೆ ಉಜ್ಜಿಕೊಳ್ಳುತ್ತಿದ್ದ. ಇಷ್ಟಾದರೆ ಇವು ಕಚ್ಚುವುದಿಲ್ಲ ನೋಡು ಎನ್ನುತ್ತಿದ್ದ. ನಂತರ ಆಕಾಶದ ಕಡೆಗೆ ಕೈ ತೋರಿಸಿ ಅಲ್ಲಿ ನೋಡು ಅನ್ನತ್ತಾ ಅಲ್ಲಿ ಮೀನಿನ ಆಕಾರದಲ್ಲಿ ಇರುವ ನಕ್ಷತ್ರಗಳ ಗುಂಪು ಕಾಣುತ್ತಿದೆಯೆಲ್ಲಾ ಅದೇ ಮೀನರಾಶಿ ಎಂದು ಹೇಳಿ ಉಳಿದ ರಾಶಿಗಳ ಗುರುತನ್ನು ಪತ್ತೆಹಚ್ಚುವಂತೆ ಪರೀಕ್ಷೆಗೆ ಒಡ್ಡುತ್ತಿದ್ದ. ಸಪ್ತರ್ಷಿ ಮಂಡಲವನ್ನು ಮೊದಲು ತೋರಿಸಿದ್ದ. ಹೀಗೆ ತನಗೆ ಗೊತ್ತಿದ್ದ ಖಗೋಳಜ್ಞಾನವನ್ನು ನನಗೆ ತಲುಪಿಸಿದ್ದ. ಹಾಗೆಯೇ ಮುಸ್ಸಂಜೆಯ ವೇಳೆ ಆಕಾಶ ತೋರಿಸಿ ಆ ಕೆಂಪು ಬಣ್ಣದ ಮೋಡ ಪಶ್ಚಿಮದಿಂದ ಪೂರ್ವಕ್ಕೆ ಹೋಗುತ್ತಿದೆ. ಮಳೆ ನಿಲ್ಲುವ ಸೂಚನೆ ಎಂದು ಹೇಳುತ್ತಿದ್ದ. ಕೆಲ ದಿನಗಳ ಬಳಿಕ ನೆಲದೊಳಗಿನಿಂದ ನೆಲಹಾತೆ(ಈಚಲು ಹುಳ ಅಥವಾ ರೆಕ್ಕೆ ಹುಳ)ಗಳು ಎದ್ದು  ಹಾರುತ್ತಿದ್ದವು. ಅವುಗಳನ್ನು ತೋರಿಸಿ ಇದು ಮತ್ತೆ ಮಳೆಬರುವ ಸೂಚನೆ ಅನ್ನುತ್ತಿದ್ದ. ಬೇಸಗೆ ಕಾಲದ ಮಾವು ಮತ್ತು ಗೋಡಂಬಿ ಮರಗಳ ಹೂವು ತೋರಿಸುತ್ತಾ ಅವುಗಳ ಪ್ರಮಾಣದಂತೆ ಮುಂದೆ ಮಳೆಬರುತ್ತದೆ ನೋಡು ಎಂದು ಅದನ್ನು ಸೂಕ್ಷö್ಮವಾಗಿ ಗಮನಿಸಿ ತಿಳಿವಳಿಕೆ ಕೊಡುತ್ತಿದ್ದ. ಅಲ್ಲೆಲ್ಲೋ ಗಿಡದ ಮೇಲೆ ಸರಿದು ಹೋಗುತ್ತಿದ್ದ ಹಸಿರು ಹಾವನ್ನು ಹಿಡಿದು ಅದರ ಕಣ್ಣು, ಬಾಯಿಯ ಕೆಂಪು, ಮೈಬಣ್ಣ, ಅದರ ಮೇಲಿನ ಬಿಳಿ ಚುಕ್ಕೆ ಎಲ್ಲವನ್ನು ವಿವರಿಸುತ್ತಿದ್ದ. ಹಾಗೆಯೇ ಕೆರೆಹಾವು, ನಾಗರ, ಕಾಳಿಂಗ ಮೊದಲಾದವುಗಳ ಪರಿಚಯ ಮತ್ತು ಅವುಗಳಿಂದ ಮಾಡಿಕೊಳ್ಳಬೇಕಾದ ರಕ್ಷಣೆಯ ಪಾಠವನ್ನು ಹೇಳುತ್ತಿದ್ದ.

ಮಾವಿನಕಾಯಿ ಸುರಿಯುತ್ತಿದ್ದ ಕಾಲದಲ್ಲಿ ಮುಸ್ಸಂಜೆ ಕರೆದುಕೊಂಡು ಹೋಗಿ ಆ ಮರಕ್ಕೆ ಟಾರ್ಚ್ ಬಿಟ್ಟು ಕಾಯಿ ಕೆರೆಯುತ್ತಿದ್ದ ಪ್ರಾಣಿಯೊಂದನ್ನು ತೋರಿಸಿ ಇದು ಕಾಡುಬೆಕ್ಕು ಇದನ್ನು ಆರುಬೆಕ್ಕು ಎಂದು ಕರೆಯುತ್ತಾರೆ. ಈಗ ನೋಡು ಅನ್ನುತ್ತಾ ಒಂದು ಕಲ್ಲನ್ನು ಅದರತ್ತ ಎಸೆಯುತ್ತಿದ್ದ ಅದು ಹಕ್ಕಿಯಂತೆ ಹಾರಿ ಪಕ್ಕದ ಮರಕ್ಕೆ ಹೋಗಿ ಕೂರುತ್ತಿತ್ತು. ಒಂದು ಕಾಯನ್ನೂ ಇದು ಉಳಿಸುವುದಿಲ್ಲ ಹಾಳಾದುದು ಎಂದು ಗೊಣಗುತ್ತಿದ್ದ. ಸುಗ್ಗಿಯ ಕಾಲದಲ್ಲಿ ಬತ್ತದ ಕೊಯ್ಲು ನಡೆಯುತ್ತಿತ್ತು. ತೆನೆಯಿಂದ ಕಾಳುಗಳು ಅಲ್ಲಲ್ಲಿ ಚಲ್ಲುತ್ತಿದ್ದವು ಅವುಗಳನ್ನು ಹಕ್ಕಿಯ ಹಿಂಡು ಆಯ್ದುಕೊಳ್ಳಲು ಬರುತ್ತಿತ್ತು. ಅವುಗಳನ್ನು ಅಪ್ಪ ಎಂದೂ ಚದುರಿಸುತ್ತಿರಲಿಲ್ಲ. ನೋಡು ನಾವು ಬೆಳೆದ ಆಹಾರ ಧಾನ್ಯದ ಮೇಲೆ ಅವುಗಳಿಗೂ ಹಕ್ಕಿದೆ. ತಿಂದುಕೊಳ್ಳಲಿ ಬಿಡು ಎನ್ನುತ್ತಿದ್ದ. ಆದರೆ ಇಲಿಗಳು ಬರದಂತೆ ತಡೆಯುವುದು ಹೇಗೆಮದು ತೋರಿಸುತ್ತಿದ್ದ ಪಪ್ಪಾಯಿ ಕಾಯಿಯನ್ನು ತಂದು ಅದರ ಚೂರುಗಳನ್ನು ಇಲಿಯ ಬಿಲದ ಬಳಿ ಚೆಲ್ಲುತ್ತಿದ್ದ. ಇನ್ನು ಇಲಿ ಬರಲ್ಲ ಅನ್ನುತ್ತಿದ್ದ ಹಾಗೆಯೇ ಆಗುತ್ತಿತ್ತು. ಪಪ್ಪಾಯಿಗೂ ಇಲಿಗೂ ಆಗಿಬರಲ್ಲ ಅನ್ನುತ್ತಿದ್ದ. ಹೀಗೆ ಹತ್ತಾರು ಪರಿಸರ ಸ್ನೇಹಿ ರಕ್ಷಣಾ ತಂತ್ರಗಳು ಅವನಿಗೆ ತಿಳಿದಿದ್ದವು ಸಂದರ್ಭ ಬಂದಾಗಲೆಲ್ಲಾ ಅವುಗಳನ್ನು ಹೇಳುತ್ತಿದ್ದ ಆತ ಜೇನು ಬೇಟೆಯಲ್ಲಿ ನಿಸ್ಸೀಮನಾಗಿದ್ದ ಜೇನು ಹುಳಗಳನ್ನು ನೋಡಿ ಅವು ಹಾರುವ ದಿಕ್ಕನ್ನು ನೋಡುತ್ತಾ ಅವುಗಳ ಹುಟ್ಟು ಎಲ್ಲಿರಬಹುದೆಂದು ಲೆಕ್ಕಹಾಕುತ್ತಿದ್ದ ಆ ಸಂಜೆ ಅವುಗಳ ಹುಟ್ಟು ಹಿಂಡುತ್ತಿದ್ದ. ಅದೇ ರೀತಿ ಮಲೆನಾಡಿನಲ್ಲಿ ಕಾಣುವ ಮತ್ತೊಂದು ಜೇನು ವಿಧ ತುಡವಿ. ಇದು ಮರದ ಪೊಟರೆಗಳಲ್ಲಿ ಹುಟ್ಟು ಕಟ್ಟುತ್ತದೆ. ತುಂಬಾ ರುಚಿ ಅಪ್ಪ ಕಾಡಿಗೆ ಹೋದಾಗಲೆಲ್ಲಾ ಪೊಟರೆಗಳನ್ನು ಸುಮ್ಮನೆ ನೋಡುತ್ತಾ ನಿಲ್ಲತ್ತಿದ್ದ ಅಲ್ಲಿ ಹುಳಗಳ ಓಡಾಟ ಕಂಡರೆ ಆ ರಾತ್ರಿಯೇ ಅವುಗಳ ಹುಟ್ಟಿನ ಕತೆ ಮುಗಿಯಿತೆಂದು ಅರ್ಥ. ಅದೇ ರೀತಿ ಕಾಡಿನ ಅನೇಕ ಹಣ್ಣುಗಳ ಪರಿಚಯ ಮತ್ತು ರುಚಿಯನ್ನು ಹತ್ತಿಸಿದ್ದ ಬೇಸಿಗೆ ಬಂತೆಂದರೆ ಅಪ್ಪನ ಜೊತೆ ಕಾಡು ಸುತ್ತುವುದು ಮುರುಗಲ, ವಾಟೆ, ರಾಮ ಪತ್ರೆ, ಕಾಡು ಲವಂಗ ಮುಂತಾದ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಣೆಗೆ ಹೋಗುವುದು ಒಂದು ಕ್ರಮವಾಗಿತ್ತು. ಆಗ ಬಾಯಾರಿಕೆಯಾದರೆ ಏನು ಮಾಡಬೇಕೆಂದು ತೋರಿಸುತ್ತಿದ್ದ. ದೊಡ್ಡದಾಗಿ ಮರತಬ್ಬಿಕೊಂಡು ಬೆಳೆದು ನಿಂತ ಬಳ್ಳಿಯನ್ನು ತೋರಿಸಿ ನೋಡು ಇದು ‘ಕುಕ್ಕರಸ’ ಬಳ್ಳಿ ಅನ್ನುತ್ತಾ ಕತ್ತಿಯಿಂದ ಬಳ್ಳಿಯನ್ನು ಒಂದಡಿಯಷ್ಟು ಕಡಿದು ಬಾಯಿಗೆ ಇಟ್ಟು ಹೀರುವಂತೆ ಹೇಳುತ್ತಿದ್ದ. ನೀರಿನ ರುಚಿ ಹೆಂಗಿದೆ ಅನ್ನುತ್ತಿದ್ದ. ಅದು ಎಳನೀರಿನಂತೆ ಇರುತ್ತಿತ್ತು. ಸುಮಾರು ಕಾಲು ಲೀಟರ್‌ನಷ್ಟು ನೀರು ಅದರಲ್ಲಿ ಜಿನುಗುತ್ತಿತ್ತು. ಇದನ್ನು ಮತ್ತೆ ನಾನು ನೆನಪಿಸಿಕೊಂಡಿದ್ದು ಬಿ.ಜಿ.ಎಲ್. ಸ್ವಾಮಿಯವರ ‘ಹಸಿರು ಹೊನ್ನು’ ಕೃತಿ ಓದುವಾಗ ಅಲ್ಲಿ ಅವರು ನೀಟಂ ಬಳ್ಳಿಯನ್ನು ಹುಡುಕುವ ಪ್ರಸ್ತಾಪ ಮಾಡುತ್ತಾರೆ ಅದು ನನಗಾಗಲೇ ಅಪ್ಪನಿಂದ ಪರಿಚಯವಾಗಿಬಿಟ್ಟಿತ್ತು. ಅದರ ನೀರಿನ ರುಚಿಯ ಮುಂದೆ ತುಂಗಾ ಪಾನ ಎಂಬ ಜನಪದರ ಮಾತು ಕೂಡ ಸಪ್ಪೆಯಾಗಿಬಿಟ್ಟಿತ್ತು. ಹೀಗೆ ಅಪ್ಪನಿಂದ ಪಡೆದ ನೆನಪು ಮತ್ತು ಅನುಭವಗಳ ಮೂಟೆ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಲೇ ಇರುತ್ತದೆ. ಇವೆಲ್ಲದರಿಂದ ಅಪ್ಪ ಸದಾ ಕಾಲ ನನ್ನ ಸುತ್ತಲೇ ಇದ್ದಾನೆಂಬ ಭಾವ ಕಾಡುತ್ತದೆ. ಕಂಡಲ್ಲಿ, ಹೋದಲ್ಲಿ, ಬಂದಲ್ಲಿ ಅಪ್ಪ ಜೊತೆಗಿರುತ್ತಾನೆ. ಅದು ಬಾಳೆಯ ಗಿಡವಿರಲಿ, ಹಾಡೆ ಬಳ್ಳಿ ಇರಲಿ, ತೆಂಗಿನ ಮರವಿರಲಿ. ಹರಿಯುವ ನೀರು ಇರಲಿ, ಜಾರುವ ಮಣ್ಣಿರಲಿ, ತೆರೆದ ಆಕಾಶವಿರಲಿ, ಎಲ್ಲೆಲ್ಲೂ ಅಪ್ಪನ ಅಸ್ತಿತ್ವ ಕಾಣುತ್ತದೆ. ಈ ಲಹರಿ ಹೀಗೆಯೇ ಬ್ಲಾಗಲ್ಲಿ ಆಗಾಗ ಹರಿಯುತ್ತದೆ. ಇದಕ್ಕೆ ಅಪ್ಪನ ದಿನ ಆಗಲೇಬೇಕೆಂಬ ನಿಯಮವಿಲ್ಲ.

No comments:

Post a Comment