Friday, 3 March 2023

ಅಪ್ಪಿಕೊಳ್ಳುವ ಕೃತಿ


ಈ ಸಂಕಲನದಲ್ಲಿ ಒಟ್ಟು ಎಂಟು ಕಥೆಗಳಿವೆ. ಈ ಕಥೆಗಳಲ್ಲಿ ನವೀನ್ ಅವರು ಒಂದು ಪ್ರಯೋಗ ಮಾಡಿದ್ದಾರೆ. ಇಲ್ಲಿನ ಯಾವುದೇ ಕಥೆಗೆ ಪೂರ್ವ ನಿರ್ಧರಿತವಾದ ಯಾವುದೇ ಕೇಂದ್ರವಿಲ್ಲ, ಇವುಗಳಲ್ಲಿ ಎದ್ದು ಕಾಣುವುದು ವರ್ಣನೆಗಳು. ಅದು ಕಾಡು, ಮರ, ಬಯಲು ಹೀಗೆ ಪ್ರಕೃತಿಯ ಯಾವುದೇ ವಿಷಯವಾಗಿರಬಹುದು. ಮೂಲತಃ ಮಲೆನಾಡಿನವರಾದ ನವೀನ್ ಅವರಿಗೆ ಪ್ರಕೃತಿಯ ಪ್ರೀತಿ ಸಹಜವಾಗಿದೆ, ಅವರ ಬಹುತೇಕ ಕಥೆಗಳ ಮೂಲ ಬಂಡವಾಳವೇ ನಿಸರ್ಗ.ಇದು ಅವರ ಕಥೆಗಳ ಶಕ್ತಿ. ಇಲ್ಲಿರುವ ಇನ್ನೊಂದು ಸಂಗತಿ ಅಂದರೆ ಪರಂಪರಾಗತವಾದ ದಂತಕಥೆಗಳನ್ನು ಇತಿಹಾಸವೆಂದು(ಇವು ಎಂದೋ ಆಗಿ ಹೋದ ಸಂಗತಿಗಳಲ್ಲ. ಇಂದಿಗೂ ಜೀವಂತವಾಗಿರುವ ಪರಂಪರಾಗತ ಕಲಿಕೆಯ ವಿಷಯಗಳು) ಬಗೆದು ಅವುಗಳನ್ನು ಇಂದಿನ ಐತಿಹಾಸಿಕ ದೃಷ್ಟಿಕೋನದಿಂದ ಪರಿಶೀಲನೆಗೆ ಒಡ್ಡುವುದು. ಹೀಗಾಗಿ ಇಲ್ಲಿ ಕಥೆಗಳಲ್ಲಿ ಶಾಸನ, ಪುರಾತತ್ತ್ವ, ಮಾನವಶಾಸ್ತ್ರ ಏನೆಲ್ಲ ಬರುತ್ತವಾದರೂ  ಗತವನ್ನು ನೋಡುವ ನಮ್ಮ ಕ್ರಮವನ್ನು ಅದರ ಕಲಿಕಾ ಕ್ರಮವನ್ನು ತೋರಿಸುವ ಯತ್ನವನ್ನು ಇವು ಮಾಡುತ್ತವೆ.. ಒಂದು ತಾರ್ಕಿಕ ಚರ್ಚೆಯನ್ನು ಲೇಖಕರು ಶುರುಮಾಡಿದರೂ ಒಂದು ಅಂತಿಮ ಹೇಳಿಕೆಯನ್ನು ಅವರು ಕೊಡುವುದಿಲ್ಲ,ಪರಂರಾಗತ ವಿಚಾರವನ್ನು ವಿಶ್ಲೇಷಣೆಗೆ ಇಲ್ಲಿ ಒಡ್ಡಿರುವುದು ಎಲ್ಲ ಕಥೆಗಳ ಏಕಸೂತ್ರತೆ, ಲೇಖಕರು ಎಲ್ಲ ಕಥೆಯಲ್ಲೂ ನಿರೂಪಕರಂತೆ ಅನ್ಯರಾಗಿ ನಿಲ್ಲು ತ್ತಾರೆ. ಎಲ್ಲಿಯೂ ಕಥೆಗೆ ನಾಯಕ-ನಾಯಕಿಯರ ಅನಿವಾರ್ಯತೆ ಕಾಣಿಸುವುದಿಲ್ಲ, ಅದು ಅನಿವಾರ್ಯವೂ ಅಲ್ಲ ಎಂದು ಇವು ಹೇಳುತ್ತವೆ. 

ಭಾರತೀಯ ಸಂಪ್ರದಾಯದಲ್ಲಿ ಇತಿಹಾಸ ಎಂದೋ ಆಗಿಹೋದ ಘಟನೆಗಳ ವಿವರವಲ್ಲ. ರಾಮಾಯಣ ಮತ್ತು ಮಹಾಭಾರತಗಳು ಇತಿಹಾಸ ಅಂದರೆ ಹೌದು, ಅಲ್ಲವೆಂದರೆ ಅಲ್ಲ. ನಮ್ಮ ಪರಂಪರೆ ಇರುವುದೇ ಹೀಗೆ. ಮಹದೇಶ್ವರ, ಮಂಟೇಸ್ವಾಮಿ, ಜುಂಜಪ್ಪ ಕೂಡ ಹೀಗೆಯೇ. ಅವರು ಹುಟ್ಟಿದ್ದು ನಿಜವೇ ಎಲ್ಲಿ ಯಾವ ದಿನದಂದು ಎಂಬುದಕ್ಕೆ ಪುರಾವೆ ಇದೆಯೇ ಎಂದೆಲ್ಲ ಪ್ರಶ್ನೆಗಳು ನಮ್ಮ ಕಥನ ಪರಂಪರೆಯಲ್ಲಿ ಹುಟ್ಟುವುದಿಲ್ಲ, ಇಂಥ ಪ್ರಶ್ನೆಗಳು ವಸಾಹತು ಕಲಿಸಿದ ಹಿಸ್ಟರಿಯ ಪಾಠಗಳಿಂದ ಹುಟ್ಟುತ್ತವೆ. ಇಂಥ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರ ಹುಡುಕಲಾರೆವು, ಇಂಥ ಪ್ರಶ್ನೆಗಳಿಗೆ ಅಂತ್ಯವೂ ಇಲ್ಲ. ಕಥನವನ್ನು ಜೀವಿಸುವುದು ನಮ್ಮ ಬದುಕಿನ ವಿಧಾನ, ಭೀಮ, ಬಕಾಸುರ ಕಥೆಗಳು ನಮ್ಮ ನಿತ್ಯ ಜೀವನದಲ್ಲಿ ಹಾದುಹೋಗುತ್ತಿರುತ್ತವೆ. ಜಾಸ್ತಿ ತಿನ್ನುವವರನ್ನು ಕಂಡಾಗ ಬಕಾಸುರನೂ ಶಕ್ತವಂತ ಕಂಡಾಗ ಭೀಮನೂ ಎದುರಾಗುತ್ತಾರೆ. ಹೀಗೆ ಇವು ಎಂದೋ ಆಗಿ ಹೋದ ಸಂಗತಿಗಳಾಗಿದ್ದರೆ ನಿತ್ಯಜೀವನದಲ್ಲಿ ಇವು ಪ್ರಸ್ತುತವಾಗುತ್ತಿದ್ದವೇ ಎಂಬುದು ಒಂದು ಪ್ರಶ್ನೆ. ನವೀನರ ಕಥಾಗತದಲ್ಲಿ ನಮ್ಮ ಗತದಲ್ಲಿನ ಈ ಗಬೆಯ ವಿಷಯಗಳನ್ನು ಹೆಕ್ಕಿ ತೆಗೆದು  ಇಂದಿನ ಸಂದರ್ಭದಲ್ಲಿ ಇಟ್ಟು ಪರಿಶೀಲಿಸುವ ಪ್ರಯತ್ನವಿದೆ.ಕಥೆಗಳಲ್ಲಿನ ಸಂಗತಿ ನಿಜವೋ ಸುಳ್ಳೋ ಎಂದು ಇಂದಿನ ಚರಿತ್ರೆಯ ದೃಷ್ಟಿಯಲ್ಲಿ ಇದಮಿತ್ಥಂ ಎಂದು ತೀರ್ಪುಕೊಡುವ ಕೆಲಸವನ್ನು ಇವು ಮಾಡುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಆದರೆ ನಮ್ಮ ಸುತ್ತಲಿನ ಸ್ಥಳಗಳ ಬಗ್ಗೆ, ಸುತ್ತಲಿನ ಐತಿಹ್ಯಗಳ ಬಗ್ಗೆ ಒಂದುಬಗೆಯ ಹೊಸ ನೋಟವನ್ನು ತಾಳುವಂತೆ, ಇತಿಹಾಸಕಾರರಾದ ಲಕ್ಷ್ಮೀಶ ಸೋಂದಾ ಅವರು ಹೇಳುವಂತೆ ಇತಿಹಾಸದ ಬಗ್ಗೆ ಆಸಕ್ತಿ ತಾಳುವಂತೆ ಇವು ಮಾಡುತ್ತವೆ, ನವೀನರ ಕಥೆಗಳು ಯಶಸ್ವಿಯಾಗುವುದು ಇಲ್ಲಿ.

ನಮ್ಮ ದೇಶದ ಯಾವುದೇ ಊರಿನ ಯಾವುದೇ ಭಾಗದಲ್ಲಿ ದಂತಕಥೆ ಇಲ್ಲದ ಸ್ಥಳ ಸಿಗಲಾರದು. ನವೀನರ ಕಥೆಗಳನ್ನು ಓದಿದವರು ಇಂಥ ದಂತಕಥೆಗಳ ಬೆನ್ನು ಬಿದ್ದು ಅವರಂತೆಯೇ ಕಥೆಹಣೆಯುವ ಸಾಹಸಕ್ಕೂ ಕೈ ಹಾಕಬಹುದು. ಇದು ಕೂಡ ಈ ಕೃತಿಯ ಯಶಸ್ಸೇ ಹೌದು. ಈ ದೃಷ್ಟಿಯಿಂದ ನವೀನರು ಕನ್ನಡ ಸಾಹಿತ್ಯಕ್ಕೆ ಹೊಸಬಗೆಯ ಓದನ್ನು ಕೊಟ್ಟಿದ್ದಾರೆ. ಇತಿಹಾಸ ಹಾಗೂ ಸಾಹಿತ್ಯಗಳ ಆಸಕ್ತರಿಗೆ ಇದು ಆಪ್ಯಾಯಮಾನವಾಗಬಲ್ಲುದು, ಒಮ್ಮೆ ಈ ಕೃತಿಯನ್ನು ಕೈಗೆತ್ತಿಕೊಂಡರೆ ಹಾಗೆಯೇ ಪುಟ ತಿರುವುತ್ತ ಕೃತಿ ಮುಗಿದೇ ಹೋಯ್ತಲ್ಲ ಅನಿಸುತ್ತದೆ. ಕೇವಲ ನೂರಾರು ಪುಟಗಳ ಇದು ಬೀರುವ ಪರಿಣಾಮ ಮಾತ್ರ ಗಾಢವಾದುದು. ಇದನ್ನು ಪ್ರಕಟಿಸಿದ ಉತ್ತರ ಕನ್ನಡ ಕುಮಟಾದ ಸ್ವಸ್ತಿ ಪ್ರಕಾಶನ ಅಭಿನಂದನೀಯ ಕಾರ್ಯ ಮಾಡಿದೆ. ಈ ಕೃತಿ ಕೊಂಡು ಓದುವವರ ಮನಸ್ಸು ಹಗುರವೂ ಉಲ್ಲಸಿತವೂ ಆಗುತ್ತದೆ ಜೊತೆಗೆ ಕೊಂಡು ಓದಿದ್ದು ಸಾರ್ಥಕ ಅನಿಸುತ್ತದೆ, ಕಿಸೆಗೆ ಭಾರವೂ ಅಲ್ಲದ  ದರ ಹೊಂದಿದ, ಓದಿದ ಮೇಲೆ ಬಹಳಷ್ಟು ಕೃತಿಗಳನ್ನು ಇರುವ ಶಕ್ತಯನ್ನೆಲ್ಲ ಬಳಸಿ ಸಾಧ್ಯವಾದಷ್ಟು ದೂರ ಎಸೆಯೋಣ ಅನಿಸುವ ಬದಲು ಅಪ್ಪಿಕೊಳ್ಳೋಣ ಅನಿಸುವ ಕಥಾನಕ ಇದು ಕನ್ನಡದಲ್ಲಿ ಸೃಜನಶೀಲತೆ ನಿತ್ಯ ಹೊಸ ರೂಪದಲ್ಲಿ ಹೊರ ಬರುತ್ತಿದೆ, ಇದು ಕನ್ನಡದ ಶಕ್ತಿ ಅನ್ನುವುದು ಇಲ್ಲಿ ಮತ್ತೆ ಸಾಬೀತಾಗಿದೆ. ನವೀನರಿಗೆ ಅಭಿನಂದನೆಗಳು.

No comments:

Post a Comment