Saturday, 4 November 2023

ಒಂದು ಕವನ ಸಂಕಲನದ ಸುತ್ತ


ಇದೀಗ ನನ್ನಮುಂದೆ ಕವಿ ಸಂತೋಷ್ ಚೊಕ್ಕಾಡಿಯವರ ಹೊಸ ಕವನಸಂಕಲನ ಅರ್ಥವಿದೆಯೆ ವಿದಾಯಕ್ಕೆ ಅನ್ನುವ ಕೃತಿ ಮಲಗಿದೆ. ಆದರೆ ನನ್ನನ್ನು ಎದ್ದೇಳಿಸಿದೆ, ಎಚ್ಚರಿಸಿದೆ. ಮತ್ತೆ ಮತ್ತೆ ಕೈಗೆತ್ತಿಕೊಳ್ಳುವಂತೆ ಮಾಡುತ್ತಿರುವುದರಿಂದ ಏಳಿಸಿದೆ ಅಂದೆ. ಕವನ ಮತ್ತು ಭಾವಗೀತೆಗಳ ಅಂತರ ತಿಳಿಸಿದ್ದಕ್ಕೆ ಎಚ್ಚರಿಸಿದೆ ಅಂದದ್ದು. ಹೌದು. ಕನ್ನಡದಲ್ಲಿ ಸಾಹಿತ್ಯ ವಲಯ ಕೆಲವು ಪದಗಳನ್ನು ಅಪ್ಪಿಕೊಂಡಿದೆ. ತವಕ, ತಲ್ಲಣ, ಅನುಸಂಧಾನ ಮೊದಲಾದ ಪದಗಳು ಇದರಲ್ಲಿ ಸೇರಿವೆ. ಇವುಗಳ ಬಳಕೆ ಕೆಲವೊಮ್ಮೆ ಅಲ್ಲ, ಬಹಳಷ್ಟುಬಾರಿ ಅರ್ಥವೇ ಆಗುವುದಿಲ್ಲ. ವಾರಾಂತ್ಯದಲ್ಲಿ ವಿಶ್ವಾಸಾರ್ಹ ಪತ್ರಿಕೆಯಲ್ಲಿ ಬರುವ ಸಾಹಿತ್ಯ ವಿಮರ್ಶೆ ಓದಿದರೆ(ಓದಲು ಸಾಧ್ಯವಾದರೆ) ಅಥವಾ ಇಂಥ ಯತ್ನವನ್ನು ಯಾರಾದರೂ ಮಾಡಿದ್ದರೆ ಅಂಥವರಿಗೆ ನನ್ನ ಮಾತು ಅರ್ಥವಾಗುತ್ತದೆ. ಇಲ್ಲವಾದಲ್ಲಿ ಒಂದೆರಡು ವಾರಗಳ ಹಿಂದಿನ ವಿಮರ್ಶೆಗಳನ್ನು ಅಥವಾ ಸಾಗಿತ್ಯ ಚರ್ಚೆಗಳನ್ನು ಓದಿ.

ಇಲ್ಲಿ ಈ ಮಾತು ಏಕೆಂದರೆ, ಪ್ರಿಯ ಸಂತೋಷ್  ಈ ಸಂಕಲನದಕ ವಿನುಡಿಯಲ್ಲಿ ನಾನು ಕವಿತೆ ಬರೆಯುವುದನ್ನು ನಿಲ್ಲಿಸಿ ಇನ್ನು ಆಗದೆಂದು ಸುಮ್ಮನಿದ್ದು ಆಗಾಗ ಗೀಚಿದ ಕವಿತೆಗಳು ಇಲ್ಲಿ ಒಗ್ಗೂಡಿವೆ, ಆದರೆ ಭಾವಗೀತ ಸಂಕಲನಗಳು ಹೊರಬಂದಿವೆ ಅಂದಿದ್ದಾರೆ, ಇದು ನನ್ನ ತಲೆ ತಿಂದ ವಾಕ್ಯ. ಹಾಗಾದರೆ ಕವಿತೆಗಳಿಗೂ ಭಾವಗೀತೆಗಳಿಗೂ ಅಷ್ಟೆಲ್ಲ ಅಂತರವಿದೆಯಾ ಅನ್ನುವುದು ಪ್ರಶ್ನೆ, ಹಿಂದೆ ಲಂಕೇಶ್ ಇತ್ಯಾದಿ ನವ್ಯ ಕವಿಗಳು ಪ್ರಸಿದ್ಧ ಕವಿ ಕೆ ಎಸ್ ನರಸಿಂಹ ಸ್ವಾಮಿ ಅವರನ್ನು ಮಲ್ಲಿಗೆ ಕವಿ ಎಂದು ಗೇಲಿ ಮಾಡುತ್ತಿದ್ದರು. ಅವರದು ಕವಿತೆ ಅಲ್ಲ ಅನ್ನುವುದು ನವ್ಯರ ವಾದವಾಗಿತ್ತು. ಕಾವ್ಯ ಎಂದರೆ ನವ್ಯರ ಪ್ರಕಾರ ಹೊರಗಿನ ಪದ ಸುಲಭಕ್ಕೆ ಏನನ್ನೂ ಬಿಟ್ಟುಕೊಡಬಾರದು. ಒಳಗಿನ ಅರ್ಥ ಬೇರೇನೋ ಹೇಳಬೇಕು, ಓದಿದಷ್ಟೂ ಅರ್ಥ ಬಿಡಬೇಕು. ಮುಖ್ಯವಾಗಿ ಅದರಲ್ಲಿ ಗೇಯತೆ ಇರಬಾರದು. ಒಂಥರಾ ತಲೆ ತಿನ್ನುವ ಗದ್ಯ ಅಲ್ಲಿರಬೇಕು, ಸಾಲುಗಳು ಮೇಲಿಂದ ಕೆಳಗಿರಬೇಕು.ಇದು ಸರಳ ವ್ಯಾಖ್ಯೆ. ಸಾಲುಗಳು ಅಡ್ಡಡ್ಡ ಇದ್ದರೆ ಗದ್ಯ ಮೇಲಿಂದ ಕೆಳಗಿದ್ದರೆ ಪದ್ಯ ಅಂದುಕೊಳ್ಳಬಹುದು ಅನ್ನುವುದು ಒಂದು ತರಲೆ. ಅದಿರಲಿ. ಮೈಸೂರು ಮಲ್ಲಿಗೆ ಕವಿ ನಾಡಿನ ಜನರಕೇಶರಂಥ ಕವಿಗಳು ಬರೆದ ಕವಿತೆಗಳು ಎಷ್ಟು ಜನರನ್ನು ತಲುಪಿವೆಯೋ ದೇವರು ಬಲ್ಲ.

ಕೆ ಎಸ್ ನ ಅವರ ಪದ್ಯ ಎಷ್ಟು ಜನರ ಎದೆ ಮುಟ್ಟಿದೆ ಅನ್ನುವುದನ್ನೂ ದೇವರೇ ಬಲ್ಲಬಿಡಿ ಅದು ಅವರ ಮಾತು ಆದರೆ ಒಮ್ಮೆ ಕೆಎಸ್ ನ ಶಿವಮೊಗ್ಗ ಬಸ್ ಸ್ಟ್ಯಾಂಡಿನಲ್ಲಿ ಬಸ್ ಒಳಗೆಕೂತಿದ್ದಾಗ ಒಬ್ಬ ಅವರು ಬರೆದ ಮೈಸೂರು ಮಲ್ಲಿಗೆ ಪದ್ಯ ಹಾಡಿ ಅವರಲ್ಲೇ ಭಿಕ್ಷೆ ಕೇಳಿದ್ದನಂತೆ. ಇದು ಕವಿಯೊಬ್ಬನ ಹೆಚ್ಚುಗಾರಿಕೆ. ಆದರೇನು ವಿಮರ್ಶಕರಿಗೆ ಇವೆಲ್ಲ ಪದ್ಯಗಳಲ್ಲ, ಆದರೆ ರೈಲ್ವೆ ಹಳಿಯಿದ್ದಂತೆ, ಅಕ್ಕಪಕ್ಕ ಇದ್ದರೂ ಎಂದೂ ಸೇರುವುದಿಲ್ಲ. ಈ ಮಾತು ನವ್ಯ ವಿಮರ್ಶಕರಿಗೆ ಒಪ್ಪುವ ಮಾತು. ಮನುಷ್ಯ ಸಂಬಂಧ ಹಾಲು ಜೇನಿನಂತೆ ಬೆರೆಯಬೇಕು ಅನ್ನುವುದು ಕೆ ಎಸ್ ನ ಪದ್ಯದ ರೀತಿ. ಕನ್ನಡವನ್ನು ಹತ್ತಾರು ವರ್ಷಗಳಿಂದ ಪ್ರೀತಿಯಿಂದ ಓದುತ್ತ ಅದನ್ನೇ ಮಾಧ್ಯಮ ಮಾಡಿಕೊಂಡು ಓದಿ ಬರೆಯುತ್ತ ಬಂದ ನನಗೆ ವಿಮರ್ಶಕರು ಹೇಳುವ ಮಾತಿಗೆ ಕವಿತೆಯ ಮಾಧ್ಯಮವೇ ಬೇಕಾ ಅನ್ನುವ ಪ್ರಶ್ನೆ ಕಾಡುತ್ತದೆ. ಕನ್ನಡದಲ್ಲಿ ಗದ್ಯ ಪದ್ಯ ನಾಟಕ ಇತ್ಯಾದಿ ಪ್ರಕಾರಗಳಿವೆ. ಒಂದೊಂದು ಪ್ರಕಾರ ಒಂದೊಂದು ಬಗೆಯ ಅಭಿವ್ಯಕ್ತಿಗೆ ಸೂಕ್ತ. ಪದ್ಯದಲ್ಲೇ ಗದ್ಯ ಭಾವ ತರುವುದಾದರೆ ಗದ್ಯ ಪ್ರಕಾರ ಏಕಿದೆ ಅಲ್ವಾ? ನನ್ನ ವೈಯಕ್ತಕ ಅನಿಸಿಕೆಯಂತೆ ಯಾವುದೇ ಕವಿತೆ ಓದಿದಾಗ ಅಥವಾ ಕೇಳಿದಾಗ ಮನಸ್ಸು ಮುಟ್ಟಬೇಕು, ತಟ್ಟಬೇಕು ಅಕಾಲದಲ್ಲಿ ಮತ್ತೆ ಮತ್ತೆ ಬಾಯಲ್ಲಿ ಜಿನುಗಬೇಕು. ಈ ಅರ್ಥದಲ್ಲಿ ಕೆಎಸ್ ನ  ಅದ್ಭುತ ಕವಿ. ಅವರು ಗಡಿಯಾರದಂಗಡಿಯ ಮುಂದೆ ಎಂಬಂಥ ಪದ್ಯಗಳನ್ನೂ ಬರೆದಿದ್ದಾರೆ. ಅಡಿಗರ ಯಾವ ಮೋಹನಮುರಳಿ ಕರೆಯಿತು ಕವಿತೆ  ಕಾಡುವ ಪದ್ಯವಾದರೆ ಭೂಮಿಗೀತ ನವ್ಯ ವಿಮರ್ಶಕರು ಬಯಸುವ ಪದ್ಯ. ಸಂತೋಷ್ ಅವರಲ್ಲಿ ಕೂಡ ಇವೆರಡೂ ಶಕ್ತಿ ಇದೆ. ಜನ ಯಾವುದನ್ನು ಬಯಸುತ್ತಾರೆ ಎಂಬುದನ್ನೂ ಅವರು ಬಲ್ಲರು. ಹಾಗಾಗಿಯೇ ಅವರ ಭಾವಗೀತೆಗಳು ಸಿಡಿ ರೂಪದಲ್ಲಿ ಸಾಕಷ್ಟು ಹೊರಬಂದಿವೆ.ನೇ ಆಗಲಿ ಸಂತೋಷ್ ತಮ್ಮ ಕಾವ್ಯ ಶಕ್ತಿಗೆ ಹೊಸ ರೂಪ ಆಕಾರ ಕೊಡುತ್ತ ಪ್ರಯೋಗ ಮಾಡುತ್ತ ಸಾರಸ್ವತ ಲೋಕವನ್ನು ಬೆಳಗಲಿ ಎಂಬುದಷ್ಟೇ ಭಟ್ಟರ ಬ್ಲಾಗಿನ ಆಸೆ. 

No comments:

Post a Comment