ಇದನ್ನು ಗಮನಿಸಿಯೇ ನಮ್ಮ ಹಿರಿಯರು ನೀರಿಗೆ ಮಹತ್ವ ಕೊಟ್ಟಿದ್ದಾರೆ, ಇದಕ್ಕೆ ಸಾಕ್ಷಿಕೂಡ ಸಿಗುತ್ತದೆ ಕರ್ನಾಟಕವನ್ನೇ ನೋಡುವುದಾದರೆ ಕ್ರಿ.ಶ. 1411 ರ ಹಂಪಿಯ ಶಾಸನವೊಂದರಲ್ಲಿ ವಿಜಯನಗರದ ಮಂತ್ರಿ ಲಕ್ಷ್ಮೀಧರ ಮಗುವಾಗಿದ್ದಾಗ ಅವನ ತಾಯಿ ಹಾಲೂಡುತ್ತ “ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ| ಜೆರೆಯೊಳ್ ಸಿಲ್ಕಿದನಾಥರಂ ಬಿಡಿಸು....’’ ಎಂದು ಅವನ ಕಿವಿಯಲ್ಲಿ ಉಸುರಿದಳೆಂಬ ಉಲ್ಲೇಖವಿದೆ. ಆತ ತಾಯಿ ಮಾತನ್ನು ಸಾರ್ಥಕಗೊಳಿಸಿದ. ಇಂಥ ತಾಯಿ, ಮಕ್ಕಳಿಗೆ ಕನ್ನಡದ ಸಂಸ್ಕøತಿಯಲ್ಲಿ ಕೊರತೆ ಇರಲಿಲ್ಲ. ನಮ್ಮ ನಾಡು, ನುಡಿ ಮತ್ತು ಸಂಸ್ಕøತಿ ಬೆಳೆದುದೇ ಇಂಥ ತಾಯಂದಿರ ಮಡಿಲಲ್ಲಿ. ಮಾನವ ನಾಗರಿಕತೆ ಹುಟ್ಟಿದ್ದೇ ನದಿ-ನೀರಿನ ಪ್ರದೇಶದಲ್ಲಿ. ನದಿ-ನೀರಿನ ನಾಶದಿಂದಲೇ ಅದು ನಾಶವಾಗಬೇಕು. ಜಲಮೂಲ ನಾಶದಿಂದಲೇ ಇಂದಿನ ನಾಗರಿಕತೆ ನಾಶವಾಗಲಿದೆ ಎಂದೂ ವಿಜ್ಞಾನಿಗಳು ಭವಿಷ್ಯ ಹೇಳುತ್ತಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ಮೂರನೇ ಮಹಾನಗರ ಎನಿಸಿದ ಬೆಂಗಳೂರಿನ ನಾಗರಿಕತೆಯನ್ನೇ ಇದಕ್ಕೆ ನಿದರ್ಶನವಾಗಿ ನೋಡಬಹುದು.
ಬೆಂಗಳೂರು ನಗರಕ್ಕೇನೂ ಭಾರೀ ಪ್ರಾಚೀನ ಇತಿಹಾಸವಿಲ್ಲ. 468 ವರ್ಷಗಳ ಹಿಂದೆ ಕೆಂಪೇಗೌಡ ಕಟ್ಟಿಸಿದ ಊರು ಇದು. ನಂತರ ಹೈದರ್, ಟಿಪ್ಪು ಅವರ ವಶಕ್ಕೆ ಬಂದು ತರುವಾಯ ದೇಶದ ಎಲ್ಲ ಊರುಗಳಂತೆಯೇ ಬ್ರಿಟಿಷರ ಕೈ ಸೇರಿತ್ತು. ಆಗ ಬೆಂಗಳೂರು ಒಳ ಹೊರಗೆ ಇದ್ದ ಕೆರೆಗಳು ಸುಮಾರು ನಾಲ್ಕುನೂರಕ್ಕೂ ಹೆಚ್ಚು ಎಂದು ಲಿಖಿತ ದಾಖಲೆಗಳೇ ಹೇಳುತ್ತವೆ. 1960ರವರೆಗೂ ಬೆಂಗಳೂರಿನಲ್ಲೇ ಹುಟ್ಟಿ ಹರಿಯುತ್ತಿದ್ದ ವೃಷಭಾವತಿ ನದಿ ಇತ್ತು. ಈಗ ಇದು ನಾಗರಿಕತೆಯ ಪಾಪಕೂಪವಾಗಿದೆ.
ಸಮುದ್ರ ಮಟ್ಟದಿಂದ 920 ಮೀಟರ್ ಅಥವಾ 3,018 ಅಡಿ ಮೇಲಿರುವ ಈ ಊರಿನ ಹವಾಮಾನ ಹಿತಕರ. ಸಾಲದ್ದಕ್ಕೆ ಬೇಕಾದಷ್ಟು ಗಿಡಮರಗಳು, ಕೆರೆ, ಕಟ್ಟೆಗಳು. ಅವುಗಳಿಂದ ಗಾಳಿಯಲ್ಲಿ ನೀರಿನಂಶ ಸೇರಿ ತಂಪೆನಿಸುವುದು, ನೀರಿನ ಮೂಲದಿಂದ ಜಲಚರ, ಖಗಚರಗಳ ಸಂಖ್ಯೆ ವೃದ್ಧಿಸಿ ಜೀವವೈವಿಧ್ಯ ರಕ್ಷಣೆಯಾಗುವುದು. ಇದೆಲ್ಲರದ ಕಾರಣ ಜನಜೀವನ ಸುಖಮಯ ಎನಿಸುವುದು. ಒಂದು ಊರಿನಲ್ಲಿ ನಾಗರಿಕತೆ ವೃದ್ಧಿಸಲು ಇನ್ನೇನು ಅನುಕೂಲ ಬೇಕು? ಇವೆಲ್ಲ ಭಾಗ್ಯವಿದ್ದ ಬೆಂಗಳೂರು ಅನೂಹ್ಯವಾಗಿ ಬೆಳೆಯಿತು. ಸುಡುಬಿಸಿಲ ಪ್ರದೇಶಗಳಿಂದ ವ್ಯವಹಾರಕ್ಕಾಗಿ ಬಂದವರು ಇದನ್ನೇ ಊರು ಮಾಡಿಕೊಂಡರು, ತಮ್ಮವರನ್ನು ಕರೆಸಿಕೊಂಡರು, ಅವರ ಗೆಳೆಯರು, ಬಂಧು ಬಾಂಧವರೆಲ್ಲ ಬಂದು ಬೀಡು ಬಿಟ್ಟರು. ಇಂದು ಈ ಊರಿನಲ್ಲಿ ಹೊರಗಿನಿಂದ ಬಂದು ನೆಲೆಸಿದವರೇ ಮುಕ್ಕಾಲು ಪಾಲು ಜನಸಂಖ್ಯೆಯನ್ನು ಆವರಿಸಿದ್ದಾರೆ! ಕೆರೆ ಕಟ್ಟೆಗಳು ನಾಪತ್ತೆಯಾಗಿವೆ, ಜಲಚರ, ಖಗಚರಗಳಿಗೆ ನೆಲೆ ಇಲ್ಲ, ಗಿಡ, ಮರಗಳು ನೆಲಕ್ಕುರುಳುತ್ತಿವೆ. ಕೆಲವೇ ವರ್ಷಗಳ ಹಿಂದೆ ಬೇಸಗೆಯಲ್ಲೂ ಗರಿಷ್ಠ 26 ಡಿಗ್ರಿ ಸೆಲ್ಷಿಯಸ್ ಕಾಣುತ್ತಿದ್ದ ನಗರದ ಉಷ್ಣತೆ ಈಗ ಸದಾಕಾಲ 30 ಡಿಗ್ರಿಯ ಆಸುಪಾಸೇ ಇರುತ್ತದೆ. 1971ರಲ್ಲಿ 16,54,000 ಇದ್ದ ಬೆಂಗಳೂರು ಜನಸಂಖ್ಯೆ ಈಗ 75 ಲಕ್ಷ ದಾಟಿದೆ. ದಿನಕ್ಕೆ ಸಾವಿರಾರು ಹೊಸ ವಾಹನಗಳು ರಸ್ತೆಗೆ ಇಳಿಯುತ್ತವೆ. ಝಗಮಗಿಸುವ ಅಂಗಡಿ, ಮುಂಗಟ್ಟು, ವೈಭವೋಪೇತ ವಸತಿ ಸಂಕೀರ್ಣಗಳು ಏನೆಲ್ಲವೂ ಇವೆ. ಆದರೇನು? ಕುಡಿಯುವ ನೀರೇ ಇಲ್ಲ! ಗುಬ್ಬಚ್ಚಿಗಳಿಲ್ಲ, ಕಾಗೆಗಳೂ ಅಪರೂಪ. ಜನಸಂಖ್ಯೆಯ ಜೊತೆಗೆ ಇಲಿ, ಜಿರಲೆ, ಹೆಗ್ಗಣ, ಬೀದಿ ನಾಯಿಗಳ ಸಂಖ್ಯೆ ಮಾತ್ರ ಏರುತ್ತಿದೆ! ಬೆಂಗಳೂರಲ್ಲಿ ನಿತ್ಯ ನೀರಿನ ಸಮಸ್ಯೆ ಏರುತ್ತಿದೆ. ಊರಿನ ಸುತ್ತಲೂ ನೂರಾರು ಅಡಿ ಆಳಕ್ಕೆ ಕೊಳವೆಬಾವಿ ಕೊರೆಸಿದರೂ ನೀರು ಸಿಗದ ಸ್ಥಿತಿ ಉಂಟಾಗಿದೆ. ಇದ್ದ ಜಲಮೂಲಗಳನ್ನು ಕೆಡಿಸಲಾಗಿದೆ. ಇದಕ್ಕೆ ಈಗ ಅಟ್ಪಾಡಿಯ ವಿಧಾನ ಮಾದರಿಯಾಗಬೇಕಿದೆ.

No comments:
Post a Comment