Tuesday, 16 April 2024

ಒಂದಿಷ್ಟು ಹಳಹಳಿಕೆ


ಜನ್ನನ ಪ್ರಸಿದ್ಧ ಕೃತಿ ಯಶೋಧರ ಚರಿತೆಯಲ್ಲಿ ಎಲ್ಲ ಅನಾಹುತಗಳನ್ನು ಕುರಿತು ಬರುವ ಒಂದು ಮಾತು- 'ಮನ್ಮಥನ ಮಾಯೆ ವಿಧಿ ವಿಳಸನದ ನೆರಂಬಡೆಯೆ ಕೊಂದು ಕೂಗದೆ ನರರಂ' ಇದನ್ನು ತುಸು ಬದಲಿಸಿ 'ಜನ್ಮಾಂತರದ ಕರ್ಮ ವಿಧಿವಿಳಸನದ ನೆರಂಬಡೆಯೆ ಹಿಂಡಿ ಹಿಸುಕದೆ ನರರಂ' ಎಂದು  ಪಾರ್ಶ್ವ ತೊಂದರೆಯಿಂದ ನರಳುವವರ ವಿಷಯದಲ್ಲಿ ಹೇಳಬಹುದು. ಈ ಪಾರ್ಶ್ವಪೀಡಿತರ ಸಮಸ್ಯೆ ವಿಚಿತ್ರ. ಹಾಗೆ ನೋಡಿದರೆ ಅವರ ಕೈ ಕಾಲುಗಳು ನೋಡಲು ಸರಿಯಾಗಿರುತ್ತವೆ. ಆದರೆ ಅತ್ತೀ ಹಣ್ಣು. ನೋಡಲು ಚೆಂದ. ಒಳಗೆ ಹುಳ. ಇವರ ಕಥೆಯೂ ಅಷ್ಟೇ. ನೋಡಲು ಸರಿ. ಆದರೆ ಕೆಲಸಕ್ಕೆ ಬಾರದು. ಅಂಗವಿಕಲರಿಗೆ ಮೇಲ್ನೋಟಕ್ಕಾದರೂ ಇವರಿಗೆ ದೈಹಿಕ ಊನವಿದೆ ಎಂದು ಅನ್ಯರಿಗೆ ತಿಳಿಯುತ್ತದೆ. ಆದರೆ ಪಾರ್ಶ್ವ ಪೀಡಿತರಿಗೆ ಹಾಗಲ್ಲ. ಕೈಕಾಲುಗಳಿದ್ದರೂ ಅವು ಸರಿಯಾಗಿ ಕೆಲಸ ಮಾಡುವುದಿಲ್ಲ. ಬೆರಳುಗಳು ಮುರುಟಿಕೊಳ್ಳುತ್ತವೆ, ಮಂಡಿ, ಕೀಲುಗಳು ಸರಿಯಾಗಿ ಮಡಚಿ-ಬಿಡಿಸಿಕೊಳ್ಳುವುದಿಲ್ಲ. ಕಷ್ಟಪಟ್ಟು ಇವನ್ನು ಮಾಡಬೇಕಾಗುತ್ತದೆ. ಅಥವಾ ಬಾಹ್ಯ ನೆರವು ಬೇಕಾಗುತ್ತದೆ. ಇಷ್ಟಾದರೂ ಅವು ಸರಿಯಾದ ಅಗತ್ಯ ಕೆಲಸವನ್ನು ಸ್ವತಂತ್ರವಾಗಿ ನಡೆಸಲಾರವು.ಆದರೆ ನೋಡುವವರಿಗೆ ಇಷ್ಟು ಸಾಕು. ಅದನ್ನೇ ಇಟ್ಟುಕೊಂಡು ನೋಡಿ ಅವುಗಳ ಬಳಕೆಯನ್ನು ನೀವೇ ಮಾಡ್ತಿಲ್ಲ ಎಂಬಲ್ಲಿಂದ ಟೀಕೆ ಶುರುವಾಗುತ್ತದೆ. ಒಂದು ಪಾರ್ಶ್ವ ಇಡೀ ದೇಹವಿಜ್ಞಾನವನ್ನು ಮನೋ ದೈಹಿಕ ಸಂಬಂಧಗಳನ್ನು ಬಗೆದು ನೋಡುವಂತೆ ಮಾಡುತ್ತದೆ. ನಮ್ಮ ಸುತ್ತಲಿನ ಜನರನ್ನೂ ಅರ್ಥ ಮಾಡಿಸುತ್ತದೆ, ಸಾಮಾಜಿಕ ಮನೋಧರ್ಮವನ್ನು ತಿಳಿಸುತ್ತದೆ. ಈ ಪಾರ್ಶ್ವ ಎಂಬುದು ನಿರ್ದಿಷ್ಟವಾಗಿ ಒಂದು ನ್ಯೂನತೆಯೇ ವಿನಾ ಕಾಯಂ ರೋಗವಲ್ಲ. ಗುಣವಾಗಬಲ್ಲ ನ್ಯೂನತೆ ಇದು. ಆದರೆ ಇದರ ಅವಧಿಯನ್ನು ಯಾರೂ ಖಚಿತವಾಗಿ ಹೇಳಲಾಗದು. ನ್ಯೂನತೆಯುಳ್ಳ ವ್ಯಕ್ತಿ, ಅವನಿಗೆ ದೊರೆಯುವ ವೈದ್ಯರ ಮಾರ್ಗದರ್ಶನ, ಅವನ ಪ್ರಯತ್ನ ಮೊದಲಾದವೆಲ್ಲ ಕೂಡಿ ನಿರ್ಧಾರವಾಗುತ್ತದೆ. ಆದರೆ ಈ ಅವಧಿಯಲ್ಲಿ ಪಾರ್ಶ್ವ ಪೀಡಿತರು ಅನುಭವಿಸುವ ಮನೋದೈಹಿಕ ಯಾತನೆ ಹೇಳುವುದಲ್ಲ. ನಾನು ಕಂಡಂತೆ ಒಬ್ಬ ಪಾರ್ಶ್ವಪೀಡಿತನ ಸುತ್ತ ಇರುವಷ್ಟು ತಜ್ಞರು ಬೇರೆ ಯಾವ ರೋಗಿಯ ಸುತ್ತ ಇರಲಾರರು. ಏಕೆಂದರೆ ಪಾರ್ಶ್ವ ಪೀಡಿತರಿಗೆ ಸಲಹೆ ಕೊಡುವುದು ಬಹಳ ಸುಲಭ. ಏಕೆಂದರೆ ಕೈಕಾಲುಗಳು ಕಾಣುತ್ತವಲ್ಲ. ಅವರ ಬಳಿ ಬಂದವರು ಸುಮ್ಮನೇ ಹೋಗುವುದು ವಿರಳ. ಒಂದೋ ತಾವು ಕೇಳಿದ ಔಷಧ ದೊರೆಯುವ- ಅದು ನಾಟಿಯೋ ಮತ್ತೊಂದೋ ಜಾಗ, ಯಾವುದೋ ದೇವರು ದಿಂಡರ ವ್ರತ, ತಮಗೆ ತಿಳಿದ ಪಥ್ಯ, ಏನೂ ಇಲ್ಲವೆಂದರೆ-ನೋಡಿ ನೀವು ಸುಮ್ಮನೇ ಕೂರಬೇಡಿ ಆಗಾಗ ಕೈಕಾಲು ಹೀಗೆ ಆಡಿಸುತ್ತಿರಿ ಎಂದು ಸರಿಯಾಗಿರುವ ತಮ್ಮ ಕೈಕಾಲು ಆಡಿಸಿ ತೋರಿಸುತ್ತಾರೆ. ಹೀಗೆ ನೋಡಿದರೆ ಪಾರ್ಶ್ವದ ವಿಷಯದಲ್ಲಿ ಎಲ್ಲರೂ ಪಂಡಿತರೇ. ಆದರೆ ಒಳಗಿನ ಸಮಸ್ಯೆ ಅರಿತವರು ಕಡಿಮೆ ಅಂಥವರು ಹೀಗೆಹುಚ್ಚು ಸಲಹೆ ಕೊಡುವುದಿಲ್ಲ. ಆದರೆ ಪಾರ್ಶ್ವ ತೊಂದರೆಗೆ ಚಿಕಿತ್ಸೆ ತರಬೇತಿಪಡೆದ ಫಿಸಿಯೋತೆರಪಿ ತಜ್ಞರು ಇರುತ್ತಾರೆ. ಇವರ ಸಮಸ್ಯೆ ಬೇರೆ. ಸದ್ಯ ಪ್ರಪಂಚದಲ್ಲಿ ಪಾರ್ಶ್ವ ತೊಂದರೆ ಸರಿಪಡಿಸಲು ಇರುವ ಏಕೈಕ ಕ್ರಮ ಇದೊಂದೇ. ಅಕಸ್ಮಾತ್ ಈ ಸಮಸ್ಯೆಗೆ ಒಳಗಾದ ನಾನು ಸುಮಾರು ೨೫ಕ್ಕೂ ಹೆಚ್ಚು ಫಿಸಿಯೋತೆರಪಿ ತಜ್ಞರನ್ನು ಸಂಪರ್ಕಿಸಿ ಅವರಿಂದ ಸಲಹೆ-ಚಿಕಿತ್ಸೆ ಪಡೆದಿದ್ದೇನೆ, ಪಡೆಯುತ್ತಿದ್ದೇನೆ, ಇಂದಲ್ಲ ನಾಳೆ ಇದರಿಂದಲೇ ನಾನು ಸರಿಯಾಗುತ್ತೇನೆಂಬ ನಂಬಿಕೆಯನ್ನೂ ಅದು ತಂದಿದೆ.

ವಿಷಯ ಏನೆಂದರೆ ಇವರೊಂದಿಗಿನ ನನ್ನ ಒಡನಾಟದ ಸಂಗತಿ ನನಗೆ ಒಂದಿಷ್ಟು ಕಲಿಸಿದೆ. ಮೊದಲನೆಯದಾಗಿ ಅದೊಂದು ಅನುಭವ ಮತ್ತು ಆಧುನಿಕ ವಿಜ್ಞಾನದ ಭಾಗ. ಯಾವುದೇ ಆಧುನಿಕ ವಿಜ್ಞಾನದ ಮೊದಲ ಸಾಲು ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು- ಅದಕ್ಕೆ ಮಿತಿ ಇಲ್ಲ ಎಂಬುದು. ಇದುಕೂಡ ಈ ಸಾಲನ್ನು ಫಿಸಿಯೋತೆರಪಿ ಯಜ್ಞರಿಗೆ ತಿಳಿದಿರುತ್ತದೆ. ತಮ್ಮ ತರಬೇತಿಯಲ್ಲಿ ಅವರ ತರಬೇತಿಯಿಂದ ಸರಿಯಾದ ಅನೇಕರನ್ನು ಅವರು ಕಂಡಿರುತ್ತಾರೆ. ಆದರೆ ಪಾರ್ಶ್ವದಲ್ಲಿ ಎಲ್ಲರ ಸಮಸ್ಯೆಗಳು ಒಂದೇ ಆಗಿರುವುದಿಲ್ಲ, ಬರೀ ಪಾರ್ಶ್ವ, ಹಾಗೂ ಅದರ ತೀವ್ರತೆ, ಮೆದುಳಿನ ನರಸಿಡಿತದಿಂದ ಉಂಟಾದ ಪಾರ್ಶ್ವ ಮತ್ತು ಅದರ ತೀವ್ರತೆ ಮೊದಲಾದ ಸಂಗತಿಗಳಿರುತ್ತವೆ, ಇದರಲ್ಲಿ ಯಾವುದನ್ನೂ ಮತ್ತೊಂದು ಅಂಥ ಪ್ರಕರಣದೊಂದಿಗೆ ಹೋಲಿಕೆ ಮಾಡಲಾಗದು. ಆದರೆ ಜನ ಸಾಮಾನ್ಯರು ಸಾಮಾನ್ಯವಾಗಿ ಹೀಗೆ ಮಾಡುತ್ತಾರೆ ನಮ್ಮೂರಲ್ಲಿ ಒಬ್ಬರಿಗೆ ಹೀಗೆ ಆಗಿತ್ತು ಒಂದು ವರ್ಷದಲ್ಲಿ ಸರಿಹೋದರು, ನಿಮಗೇಕೆ ಆಗುವುದಿಲ್ಲ? ಸರಿಯಾಗಿ ಪ್ರಯತ್ನಪಡಿ ಇತ್ಯಾದಿ. ಇವರು ಸಾಮಾನ್ಯರು. ಬಿಡಿ. ಆದರೆ ತಜ್ಞರು ಕೂಡ ಹೀಗೆ ಮಾತಾಡುವುದಿದೆ. ಕೆಲವೊಮ್ಮೆ ತಮ್ಮ ಬಳಿಗೆ ಬಂದ ರೋಗಿ ಗುಲಾಮ ಎಂಬಂತೆ ಹೀಗೆ ಮಾಡಿ ಹಾಗೆ ಮಾಡಿ ಎಂದು ಕೆಟ್ಟದಾಗಿ ಗದರಿಸುವುದಿದೆ. ಯಾಕೆ ಆಗಲ್ಲ? ನಾನು ಡಾಕ್ಟರ್ ನನಗೆ ಗೊತ್ತಾಗಲ್ವಾ ಎಂದು ಕೇಳುವುದೂ ಇದೆ. ಇದನ್ನು ಕೇಳಿಸಿಕೊಂಡ ಇತರರು ನೋಡಿ ಡಾಕ್ಟ್ರೇ ಹೇಳ್ತಾರೆ ಇವರಿಗೆ ಎಲ್ಲ ಆಗುತ್ತಂತೆ, ಆದ್ರೂ ಮಾಡಲ್ಲ ನೋಡಿ ಎಷ್ಟು ಸೋಮಾರಿ. ನಾವು ಬಿಡಿ ಗೊತ್ತಾಗಲ್ಲ, ಡಾಕ್ಟ್ರು ಹೇಳಿಲ್ವಾ? ಇತ್ಯಾದಿ. ಇನ್ನು ಕೆಲವು ಫಿಸಿಯೋಗಳಿರುತ್ತಾರೆ. ಅವರಿಗೆ ರೋಗಿಗಳು ಹೀಗೆಯೇ ಇರುತ್ತಾರೆ ಎಂಬ ನಿಲುವು. ಬೇರೆ ಇರಲು ಸಾಧ್ಯವೇ ಇಲ್ಲ ಎಂದೂ ಅವರು ಭಾವಿಸುತ್ತಾರೆ. ಅವರ ಪ್ರಕಾರ ರೋಗಿಗಳು ಸುಸ್ತು ಇತ್ಯಾದಿ ಕಾರಣ ಕೊಡುವುದು ' ಲೇಮ್ ಎಕ್ಯೂಸ್. ಇರುವ ಎಲ್ಲ ಶಕ್ತಿ ಒಗ್ಗೂಡಿಸಿ ಅವರು ಹೇಳಿದ ವ್ಯಾಯಾಮದಲ್ಲಿ ಅರ್ಧ ಮಾಡಿದರೆ ಮಾಡಿ ಮಾಡಿ ಇನ್ನೂ ಮಾಡಿ ಅನ್ನುತ್ತಾರೆ. ಯಾಕೆ ಸುಳ್ಳು ಹೇಳ್ತೀರಾ ಅರ್ಧ ಮಾಡಿದ್ದೀರಲ್ಲಾ, ಇನ್ಬರ್ಧ ಮಾಡಕಾಗಲ್ವಾ ಎಂಬುದು ಅವರ ಪ್ರಶ್ನೆ. ತಾರ್ಕಿಕವಾಗಿ ಅವರ ಪ್ರಶ್ನೆ ಸರಿ. ಆದರೆ ತರ್ಕಕ್ಕೆ ಅಂತ್ಯ ಇಲ್ಲ. ರೋಗಿ ಹೇಳುವ ಯಾವ ಮಾತಿಗೂ ಬೆಲೆ ಇರುವುದಿಲ್ಲ. ಏಕೆಂದರೆ ಅವರು ಮೊದಲೇ ವೈದ್ಯರು, ಮೇಲಿಂದ ರೋಗಿ ಅರ್ಧ ಕೆಲಸ ಮಾಡಿಬಿಟ್ಟಿದ್ದಾನೆ. ಇಂಥ ಅಸಹಾಯಕಪರಿಸ್ಥಿತಿಯಲ್ಲಿ ರೋಗಿ ಏನು ಮಾಡಬೇಕು?

ಒಟ್ಟಿನಲ್ಲಿ ಮೊದಲೇ ದೈಹಿಕವಾಗಿ ಅಸಹಾಯಕನಾದ ರೋಗಿ ಈಗ ಮಾನಸಿಕವಾಗಿಯೂ ಕುಸಿದುಹೋಗುತ್ತಾನೆ ಮತ್ತೆ ಪ್ರದರ್ಶನ ಮಾಡುವ ತಾಕತ್ತೇ ಅವನಲ್ಲಿ ಉಳಿದಿರುವುದಿಲ್ಲ. ಏನೂ ಮಾಡಲಾಗದ ರೋಗಿಗೆ ಎಲ್ಲರಿಂದ ಉಗಿಸಿಕೊಳ್ಳುವುದು ಬಿಟ್ಟರೆ ಅನ್ಯ ಮಾರ್ಗ ಇರುವುದಿಲ್ಲ. ಏಕೆಂದರೆ ಆತ ತನ್ನ ಮಾರ್ಗವನ್ನು ತಾನೇ ಕಟ್ಟಿಕೊಂಡಿದ್ದಾಗಿದೆ. ಹೀಗೆ ಏಕ ಕಾಲಕ್ಕೆ  ವಿಚಿತ್ರವಾದ ಮನೋದೈಹಿಕ ಹಿಂಸೆಯನ್ನು ಪಾರ್ಶ್ವ ಕೊಡುತ್ತದೆ. ಇದಕ್ಕೆಲ್ಲ ಅಂತ್ಯಕೊಡುವುದು ಕಾಲ ಮಾತ್ರ. ಅದುವರೆಗೆ ಬೇಕಿರುವುದು ರೋಗಿಯ ಯಥಾಶಕ್ತಿ ಪ್ರಯತ್ನ ಮತ್ತು ತಾಳ್ಮೆ ಬೇರೆಯದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು.

ಪಾರ್ಶ್ವದವರ ಕಷ್ಟ ಕಂಡು ಸಮಾಧಾನ ಮಾಡುವ ಇನ್ನೊಂದು ಬಗೆ ಇದೆ. ಅದೇ ಅಯ್ಯೋ ಸುಮ್ನಿರಿಯಪ್ಪಾ. ದೇವರಿಗೂ ಕಷ್ಟ ತಪ್ಪಿಲ್ಲ. ಶ್ರೀರಾಮನೇ ಹದಿನಾಲ್ಕು ವರ್ಷ ಎಷ್ಟು ಕಷ್ಟ ಪಟ್ಟಿಲ್ಲ ಅಲ್ವಾ? ಪಾಪ ರಾಮ ಹೆಂಡ್ತಿ ಹುಡುಕಿಕೊಂಡು ಅಷ್ಟು ವರ್ಷ ಓಡಾಡಿದ. ಅದು ಕಷ್ಟವಾದರೆ ನಿತ್ಯ ನೂರಾರು ಡಿವೋಸ ಪ್ರಕರಣಗಳು ದಾಖಲಾಗುತ್ತಿರಲಿಲ್ಲ ಅನಿಸುತ್ತದೆ. ಪಾರ್ಶ್ವದ ಮುಂದೆ ಅದು ಲೆಕ್ಕಕ್ಕೇ ಇಲ್ಲ. ಇಲ್ಲಿ ಅನುಕ್ಷಣವೂ ಮನೋದೈಹಿಕ ನರಕ. ರಾಮನಿಗೆ ಅಂಥ ಹಿಂಸೆ ಆಗಿದ್ದರೆ ಅದು ಸುಳ್ಳು ಎಂದಷ್ಟೇ ಹೇಳಬಹುದು. ಪಾರ್ಶ್ವ ಮಿದುಳಿಗೆ ಸಂಬಂಧಿಸಿದ್ದ ಕಾಹಿಲೆ. ಅಷ್ಟಕ್ಕೂ ಮಿದುಳಿಗೆ ಸಂಬಂಧಿಸಿ ಪ್ರಪಂಚಾದ್ಯಂತ ಇದುವರೆಗೆ ನಡೆದ ಸಂಶೋಧನೆಯೇ ಶೇ. ಹತ್ತರಷ್ಟು. ಈಗೀಗ ಏನೇನೋ ಅಧ್ಯಯನಗಳು ಶುರುವಾಗಿವೆ.ನಮ್ಮ ಪ್ರಧಾನಿ ಬೆಂಗಳೂರಲ್ಲಿ ಮಿದುಳಿನ ಅಧ್ಯಯನಕ್ಕೆ ಮೀಸಲಾದ ಕೇಂದ್ರ ಶುರುಮಾಡಿದ್ದಾರೆ. ಕೆಲವು ಖಾಸಗಿ ಸಂಶೋಧಕರು, ಆಸಕ್ತರು ಬಗೆಬಗೆಯ ಅಧ್ಯಯನ ಮಾಡುತ್ತಿದ್ದಾರೆ. ಎಲಾನ್ ಮಸ್ಕ್ ಮಿದುಳಿನಲ್ಲಿ ಮೈಕ್ರೋ ಚಿಪ್ ಅಳವಡಿಸಿ ಮಿದುಳಿನ ಸಂದೇಶಗಳು ಅಂಗಾಂಗಗಳಿಗೆ ತಲುಪುವಂತೆ ಮಾಡುವ ನವೀನ ಸಂಶೋಧನೆಗೆ ಕೈ ಹಾಕಿದ್ದಾನೆ. ಇದು ಸಾಧ್ಯವಾದರೆ ಪಾರ್ಶ್ವ ಪೀಡಿತರಿಗೆ ವರವಾಗಲಿದೆ. ಆದರೆ ಇದು ಇನ್ನೂ ಕೆಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅದುವರೆಗೆ ಲಭ್ಯ ಮಾರ್ಗವನ್ನೇ ಸವೆಸುತ್ತಿರಬೇಕು. ಇನ್ನೊಂದು ಮರೆತ ಸಂಗತಿ. ಸಂಶೋಧನೆಗಳ ಪ್ರಕಾರ ಮಿದುಳಿನ ನರ ಸಿಡಿತ (ಬ್ರೇನ್ ಹ್ಯಾಮರೇಜ್) ಉಂಟಾಗಲು ನೂರಾರು ಕಾರಣಗಳಿವೆ. ಕೆಲವುಮ್ಮೆ ಈ ಪಟ್ಟಿಗೆ ಸೇರದೆ ಸಿಡಿತಾಗುವುದೂ ಇದೆ.  ಆಗ ಸಮಾಧಾನಕ್ಕಿರುವ ದಾರಿ ಎಂದರೆ ಹಣೆಬರೆಹ. ಆಗಿದ್ದಾಯಿತು. ಮುಂದೆ ನೋಡುವ ಎಂಬ ಮನೋಧರ್ಮ. ರೋಗಿಗೆ ಧೈರ್ಯ ತುಂಬುವ ವಿಷಯ ಇದೇ. ರೋಗಿಗೆ ವ್ಯವಸ್ಥೆ ಏನಾದರೂ ಇರಲಿ. ಆದರೆ ಇಷ್ಟಬಂದಲ್ಲಿ ಸ್ವತಂತ್ರವಾಗಿ ಓಡಾಡುವ ಶಕ್ತ ಇಲ್ಲದಿದ್ದರೆ ಅಂಥ ಜೀವನಕ್ಕೆ ಅರ್ಥವಿಲ್ಲ. ಎಂದಾದರೂ ಒಂದು ದಿನ ದಡಸಿಗುತ್ತದೆ ಎಂದು ಪ್ರಯತ್ನ ಮಾಡುತ್ತಿರುವುದು ಮಾತ್ರ ನಮ್ಮ ಕೆಲಸ ಅಂದುಕೊಳ್ಳಬೇಕು. ಇನ್ನೇನೂ ಇಲ್ಲ. ರೋಗಿಗೆ ವ್ಯವಸ್ಥೆ ಏನಾದರೂ ಇರಲಿ. ಆದರೆ ಇಷ್ಟಬಂದಲ್ಲಿ ಸ್ವತಂತ್ರವಾಗಿ ಓಡಾಡುವ ಶಕ್ತ ಇಲ್ಲದಿದ್ದರೆ ಅಂಥ ಜೀವನಕ್ಕೆ ಅರ್ಥವಿಲ್ಲ. ಎಂದಾದರೂ ಒಂದು ದಿನ ದಡಸಿಗುತ್ತದೆ ಎಂದು ಪ್ರಯತ್ನ ಮಾಡುತ್ತಿರುವುದು ಮಾತ್ರ ನಮ್ಮ ಕೆಲಸ ಅಂದುಕೊಳ್ಳಬೇಕು. ಇನ್ನೇನೂ ಇಲ್ಲ.

Sunday, 7 April 2024

ಯುಗಾದಿ


ಹಿಂದೂ ಸಂಪ್ರದಾಯದ ಪ್ರಮುಖ ಹಬ್ಬಗಳಲ್ಲಿ ಒಂದಾದ ಯುಗಾದಿ, ಹಿಂದೂಗಳ ನಂಬಿಕೆಯಂತೆ ವರ್ಷದ ಮೊದಲ ದಿನ ಅಥವಾ ವರ್ಷಾರಂಭ. ವರ್ಷದ ಆರಂಭದ ಆಚರಣೆ ಪ್ರಪಂಚದ ಎಲ್ಲ ಸಮುದಾಯಗಳಿಗೂ ಇದೆ. ಆದರೆ ಅದು ಭಿನ್ನ ಭಿನ್ನ ಸ್ವರೂಪದಲ್ಲಿ ಕಾಣಿಸುತ್ತದೆ.

ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ಜಾರ್ಜಿಯನ್ ಕ್ಯಾಲೆಂಡರ್ ಪ್ರಕಾರ ಪ್ರತಿ ವರ್ಷ ಜನವರಿ 1 ರಂದು ಹೊಸ ವರ್ಷ ಆಚರಿಸಲಾಗುತ್ತದೆ. ಇಷ್ಟಾಗಿಯೂ ಪ್ರಪಂಚಾದ್ಯಂತ ಇದೇ ಎಲ್ಲರಿಗೂ ಹೊಸ ವರ್ಷದ ದಿನವಲ್ಲ. ಭಿನ್ನ ಸಂಸ್ಕೃತಿಗಳ ಹೊಸ ವರ್ಷ ಭಿನ್ನವಾಗಿದೆ. ಚೀನದಲ್ಲಿ ಹೊಸವರ್ಷ ಜನವರಿ 21 ರಿಂದ ಫೆಬ್ರವರಿ 21 ರೊಳಗೆ ಅವರ ಕ್ಯಾಲೆಂಡರಿನಂತೆ ಚಂದ್ರಮಾಸದ ಮೊದಲ ದಿನ. ಯಹೂದಿಗಳಿಗೆ ಹೀಬ್ರೂ ಕ್ಯಾಲೆಂಡರಿನ ಏಳನೆಯ ತಿಂಗಳ ಮೊದಲ ಎರಡು ದಿನಗಳೇ ಹೊಸ ವರ್ಷ. ಇಸ್ಲಾಂ ಅನುಸರಿಸುವವರು ಹೊಸ ವರ್ಷವನ್ನು ಹಿಜ್ರಿ ಅನ್ನುತ್ತಾರೆ. ಇದು ಇಸ್ಲಾಂ ಕ್ಯಾಲೆಂಡರಿನ ಮೊದಲ ತಿಂಗಳಾದ ಮೊಹರಂನ ಮೊದಲ ದಿನ. ಥೈಲೆಂಡಿನ ಜನರಿಗೆ ಸಾಮಾನ್ಯವಾಗಿ ಏಪ್ರಿಲ್ 13-15ರ ನಡುವೆ ಕಾಣಿಸುವ ಸೊಂಕ್ರಾನ್ ದಿನವೇ ಹೊಸ ವರ್ಷ. ಇಥಿಯೋಪಿಯನ್ನರಿಗೆ ಮಳೆಗಾಲದ ಕೊನೆಯ ದಿನ, ಸಾಮಾನ್ಯವಾಗಿ ಸೆಪ್ಟೆಂಬರ್ 11 ಹೊಸ ವರ್ಷ. ಇದನ್ನು ಎಂಕುಟಾಟಶ್ ಎಂದೂ ಕರೆಯಲಾಗುತ್ತದೆ.

ಭಾರತದಲ್ಲಿ ಯುಗಾದಿಯನ್ನು ಮೂರು ರೀತಿಯಲ್ಲಿ ಆಚರಿಸುತ್ತಾರೆ. ಬಾರ್ಹಸ್ಪತ್ಯಮಾನ, ಚಾಂದ್ರಮಾನ ಮತ್ತು ಸೌರಮಾನ. ಉತ್ತರ ಭಾರತದಲ್ಲಿ ಬಾರ್ಹಸ್ಪತ್ಯಮಾನವನ್ನೂ ಕರ್ನಾಟಕ ಮತ್ತು ಆಂಧ್ರಗಳಲ್ಲಿ ಚಾಂದ್ರಮಾನವನ್ನೂ ತಮಿಳುನಾಡಿನಲ್ಲಿ ಸೌರಮಾನವನ್ನೂ ಆಚರಿಸುವುದು ವಾಡಿಕೆ. 

ಹಬ್ಬಗಳೆಲ್ಲ ಸಂಭ್ರಮದ ಸಂಕೇತಗಳು. ಮನುಷ್ಯನ ಮೂಲ ಆಶಯವೂ ಸಂತೋಷ, ಸಂಭ್ರಮದಿಂದ ಇರಬೇಕು ಎನ್ನುವುದೇ ಆಗಿದೆ. ಇಂಥ ಸಂಭ್ರಮದ ವಾರ್ಷಿಕ ಆರಂಭದ ದಿನ ಯುಗಾದಿ. ನಿಸರ್ಗದ ಮಡಿಲಲ್ಲಿ ವಾಸವಾದ ಮಾನವ ಸಮುದಾಯ ಸುತ್ತಲ ಗಿಡ ಮರಗಳನ್ನು ಕಂಡು, ಅವುಗಳಲ್ಲಿನ ವ್ಯತ್ಯಾಸವನ್ನು, ಬೆಳವಣಿಗೆಯನ್ನು ಮತ್ತು ಸಂತೋಷವನ್ನು ಕಣ್ಣಾರೆ ಕಂಡು ತಾನೂ ಅದರಲ್ಲಿ ಪಾಲ್ಗೊಳ್ಳತೊಡಗಿತು. ವರ್ಷಕ್ಕೊಮ್ಮೆ ಗಿಡ ಮರಗಳು ಎಲೆ ಉದುರಿಸಿ, ಹೊಸದಾಗಿ ಚಿಗುರಿ ನಳನಳಿಸುತ್ತ ನಿಲ್ಲುತ್ತವೆ. ಬಗೆಬಗೆಯ ಹೂವು ಹಣ್ಣುಗಳು, ಹಕ್ಕಿಗಳ ಕಲರವ. ಪ್ರಕೃತಿಯ ಮಡಿಲಲ್ಲಿ ಆನಂದೋತ್ಸಾಹ ಉಂಟಾಗುತ್ತದೆ. ಅದು ವಸಂತಾಗಮನದ ಸಂದರ್ಭ. ಪ್ರಕೃತಿಯ ಒಡಲಿನ ಈ ಉತ್ಸವದಲ್ಲಿ ತಾವೂ ಒಂದಾಗಿ ತಮ್ಮ ಜೀವನದಲ್ಲಿಯೂ ಸಂತಸ ಕಾಣುವ ಸಮಯ ಯುಗಾದಿ. ಸಂಸ್ಕೃತ ಶಬ್ದ ಯುಗ (ವರ್ಷ) ಮತ್ತು ಆದಿ (ಆರಂಭ) ಎಂಬುದರಿಂದ ಯುಗಾದಿ ಉಂಟಾಗಿದೆ. ನಿಜವಾಗಿ ಕಲಿಯುಗ ಎಂಬುದರ ಆರಂಭವನ್ನೂ ಇದು ಸೂಚಿಸುತ್ತದೆ ಅನ್ನುವರು. ಶ್ರೀಕೃಷ್ಣ ಭೂಲೋಕ ತ್ಯಜಿಸಿದ ದಿನ. ಇದನ್ನು ವ್ಯಾಸರು “ಯಸ್ಮಿನ್ ಕೃಷ್ಣೋ ದಿವಮ್ಯಾತಃ ತಸ್ಮಾತ್ ಪ್ರತಿಪನ್ನಂ ಕಲಿಯುಗಮ್” ಎಂದಿದ್ದಾರೆ. ಇಂದಿನವರ ಲೆಕ್ಕಾಚಾರದಂತೆ ಕಲಿಯುಗ ಕ್ರಿ.ಪೂ 3102 ಫೆಬ್ರವರಿ 17 ಅಥವಾ 18ರ ಮಧ್ಯರಾತ್ರಿ ಆರಂಭವಾಯಿತು.

ಪ್ರಕೃತಿಯಲ್ಲಿನ ಬದಲಾವಣೆಗೆ ಅನುಸಾರವಾಗಿ ಋತುಗಳನ್ನು ಗುರುತಿಸಲಾಗಿದೆ. ಆಯಾ ಋತುಗಳಲ್ಲಿ ಕಾಣಿಸಿಕೊಳ್ಳುವ ಹಬ್ಬಗಳಿವೆ. ಎಲ್ಲ ಹಬ್ಬಗಳಿಗೂ ಮೊದಲು ಬರುವುದು ಯುಗಾದಿ ಹಬ್ಬ. ವಸಂತ ಋತುವಿನಲ್ಲಿ ಕಾಣಿಸಿಕೊಳ್ಳುವ ಹಬ್ಬಗಳಲ್ಲಿ ಯುಗಾದಿ, ರಾಮನವಮಿ ಮತ್ತು ಚೈತ್ರಾ ಪೂರ್ಣಿಮೆ ಬಹಳ ಮುಖ್ಯವಾದವು. 

ಪ್ರಕೃತಿಯಲ್ಲಿನ ಹೊಸತನವನ್ನು ಕಂಡು ಅದು ನಿಸರ್ಗದ ಭಾಗವಾದ ತಮ್ಮ ಜೀವನದಲ್ಲೂ ಸಹಜವಾಗಿಯೇ ಬರುತ್ತದೆ ಎಂದು ಭಾವಿಸಿದ ಜನ ಸಮುದಾಯ ಪ್ರಕೃತಿಯ ಸಂಭ್ರಮದಲ್ಲಿ ತಾವೂ ಭಾಗವಹಿಸತೊಡಗಿದರು. ಹೊಸ ಬಟ್ಟೆ ತೊಟ್ಟು, ಸಿಹಿಯುಂಡು, ಆಟ, ವಿನೋದಗಳಿಂದ ಸಂತೋಷಪಟ್ಟರು. ಮಾನವ ತನ್ನ ಬದುಕಿನ ಏಕತಾನತೆಯನ್ನು ಹೋಗಲಾಡಿಸಿಕೊಳ್ಳಲು, ಆತ್ಮೀಯರೊಂದಿಗೆ ಕೋಡಿಕೊಳ್ಳಲು, ಸುಖ ಸಂತೋಷ ಕಂಡುಕೊಳ್ಳಲು ಕೆಲವು ದಿನಗಳನ್ನು ಗೊತ್ತು ಮಾಡಿಕೊಂಡು ಅದನೇ ಹಬ್ಬ-ಹರಿದಿನ ಎಂದು ಕರೆದುಕೊಂಡಿದ್ದಾನೆ ಎನಿಸುತ್ತದೆ. 

ಹಬ್ಬಗಳ ಸ್ವರೂಪ ಮತ್ತು ಲಕ್ಷಣಗಳನ್ನು ಗಮನಿಸಿ ಹೇಳುವುದಾದರೆ ಸಾರ್ವತ್ರಿಕ ಹಬ್ಬಗಳು, ಸಾಂಘಿಕ ಹಬ್ಬಗಳು ಮತ್ತು ಸಾಂದರ್ಭಿಕ ಹಬ್ಬಗಳು ಎಂದು ವಿಂಗಡಿಸಬಹುದು. ಏಕಕಾಲದಲ್ಲಿ ಏಕರೀತಿಯಲ್ಲಿ ಜನರು ತಮ್ಮ ತಮ್ಮ ಮನೆಗಳಲ್ಲೇ ಆಚರಿಸುವ ಹಬ್ಬಗಳು ಸಾರ್ವತ್ರಿಕ ರೂಪದವು. ಯುಗಾದಿ, ದೀಪಾವಳಿ, ಶಿವರಾತ್ರಿ ಮೊದಲಾದ ಹಬ್ಬಗಳು ಈ ಬಗೆಯವು. ಮನೆಯ ಒಳ-ಹೊರಗೆ ಏಕಕಾಲದಲ್ಲಿ ನಡೆಯುವ ಆಚರಣೆ ಸಾಂಘಿಕ ಸ್ವರೂಪದವು. ಸುಗ್ಗಿ, ಹೋಳಿ ಇತ್ಯಾದಿ ಈ ಬಗೆಯವು. ನಿರ್ದಿಷ್ಟ ಕುಟುಂಬದ ಬಂಧು ಮಿತ್ರರು ಮಾತ್ರವೇ ನಿಗದಿತ ಕಾಲವನ್ನು ಗೊತ್ತುಮಾಡಿಕೊಂಡು ಆಚರಿಸುವ ಕುಲದೇವತೆಯ ಹಬ್ಬ ಅಥವಾ ದೇವತಾ ಕಾರ್ಯ ಮೊದಲಾದವು ಸಾಂದರ್ಭಿಕ ಹಬ್ಬಗಳು. ಸಾರ್ವತ್ರಿಕ ಹಬ್ಬ ಎನಿಸಿದರೂ ಯುಗಾದಿ ಎಲ್ಲ ಕಡೆಗೂ ಒಂದೇ ರೀತಿ ಜರುಗುವುದಿಲ್ಲ. ಆಯಾ ಪ್ರಾಂತ್ಯಗಳ ಅನುಕೂಲಕ್ಕೆ ತಕ್ಕಂತೆ ಆಚರಣೆ ಮಾಡಿಕೊಳ್ಳುವ ನಮ್ಯತೆ ಸಂಪ್ರದಾಯಗಳಲ್ಲಿ ಇರುವುದೇ ಇಂಥ ವೈವಿಧ್ಯಕ್ಕೆ ಕಾರಣ. ಕರ್ನಾಟಕದ ಮಲೆನಾಡಿನ ಭಾಗದಲ್ಲಿ ಆಚರಿಸುವ ಯುಗಾದಿಯನ್ನು ಈ ಲೇಖನದಲ್ಲಿ ಪ್ರಧಾನವಾಗಿ ಗಮನಿಸಲಾಗಿದೆ. ಮಲೆನಾಡು ಹೆಸರೇ ಹೇಳುವಂತೆ ಬೆಟ್ಟಗುಡ್ಡಗಳಿಂದ ಆವೃತವಾದ ಕನ್ನಡದ ಪ್ರದೇಶ. ಪಶ್ಚಿಮ ಘಟ್ಟ ಪರ್ವತ ಮತ್ತು ಕಾಡಿನ ಪರಿಸರ ಇರುವ ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ದಕ್ಷಿಣ ಕನ್ನಡ ಮತ್ತು ಕೊಡಗಿನ ಭಾಗಗಳನ್ನು ಸಾಮಾನ್ಯವಾಗಿ ಮಲೆನಾಡು ಎಂದು ಕರೆಯುವುದು ರೂಢಿ. ಕಾಡಿನ ಈ ಪ್ರದೇಶದಲ್ಲಿ ಗೊಂಡರು, ಖಾರ್ವಿಯರು, ಗಾಪ್ತಿಯರು, ಹರಕಂತ್ರರು, ನವಾಯತರು, ಸಿದ್ದಿಗಳು, ಕುಣಬಿಗಳು, ಗೌಳಿಗರು, ಹಾಲಕ್ಕಿ ಒಕ್ಕಲಿಗರು, ಗೌಡ ಸಾರಸ್ವತರು, ಹವ್ಯಕರು, ದೀವ ನಾಯಕರು, ನಾಮಧಾರಿಗಳು, ಕೊರಗರು, ಕೊಡವರು, ಕುರುಬರು, ಇತ್ಯಾದಿ ಐವತ್ತಕ್ಕೂ ಹೆಚ್ಚು ಜನ ಸಮುದಾಯಗಳು ಒಂದೇ ಅರಣ್ಯದಲ್ಲಿ ಬಗೆಬಗೆಯ ಮರಗಿಡಗಳು ಒಟ್ಟಾಗಿ ಇದ್ದು ಕಾಡಿಗೆ ಕಳೆ ತರುವಂತೆ ಸಾಮರಸ್ಯದಿಂದ ವಾಸವಾಗಿವೆ. 

ಮಲೆನಾಡಿನ ಜನ ವರ್ಷದ ಆರಂಭದಿಂದ ಹಿಡಿದು ಕೊನೆಯವರೆಗೂ ಹತ್ತಾರು ಹಬ್ಬಗಳನ್ನು ಆಚರಿಸುತ್ತಾರೆ. ಮೇಲೆ ಉಲ್ಲೇಖಿಸಿದ ಎಲ್ಲ ರೀತಿಯ ಹಬ್ಬಗಳೂ ಅವರಲ್ಲಿ ಉಳಿದು ಬಂದಿವೆ. ಕರ್ನಾಟಕದ ಉಳಿದೆಡೆಗಳಲ್ಲಿನಂತೆಯೇ ಇಲ್ಲಿಯೂ ಸಾರ್ವತ್ರಿಕ ಅಥವಾ ಸಾಮೂಹಿಕ ಸ್ವರೂಪದ ಹಬ್ಬಗಳನ್ನು ಅತ್ಯಂತ ಸಡಗರದಿಂದ ಆಚರಿಸಿದರೂ ಸ್ಥಳೀಯ ವಿಶೇಷಗಳನ್ನು ಬಿಟ್ಟರೆ ಹಬ್ಬಗಳ ಕಾರ್ಯಕಲಾಪ, ಆಚರಣೆಯ ವಿಧಾನಗಳಲ್ಲಿ ಹೆಚ್ಚಿನ ವೈಶಿಷ್ಟ್ಯವೇನೂ ಕಾಣಿಸುವುದಿಲ್ಲ. 

ಹಬ್ಬಕ್ಕೆ ಮೊದಲು ಗೋಡೆಗಳಿಗೆ ಸುಣ್ಣ-ಬಣ್ಣ ಹಚ್ಚುವುದು, ಮನೆಯ ಮುಂಭಾಗದಲ್ಲಿ ಸೆಗಣಿಯಿಂದ ಸಾರಣೆ ಮಾಡುವುದು, ರಂಗೋಲಿ ಹಾಕುವುದು, ಹಬ್ಬದ ದಿನ ಮನೆ ಮಂದಿಯೆಲ್ಲಾ ಸ್ನಾನ ಮಾಡಿ ಮಡಿಯಲ್ಲಿರುವುದು, ಮನೆಯ ಮುಂಬಾಗಿಲಿಗೆ ತಳಿರು ತೋರಣ ಕಟ್ಟುವುದು, ಉಪವಾಸದಿಂದ ಇದ್ದು, ಪೂಜೆ, ನೈವೇದ್ಯ ಅರ್ಪಿಸಿ ಕೊನೆಯಲ್ಲಿ ವಿಶೇಷ ಊಟ ಮಾಡುವುದು- ಇವು ಎಲ್ಲ ಕಡೆಯೂ ಕಂಡು ಬರುವ ಕ್ರಮ. “ಉಂಡಿದ್ದೇ ಉಗಾದಿ ಮಿಂದದ್ದೇ ದೀಪಾವಳಿ, ಉಪವಾಸವೇ ಏಕಾದಶಿ” ಅನ್ನುವ ಗಾದೆಮಾತು ಯಾವ ಹಬ್ಬದಲ್ಲಿ ಯಾವುದು ಮುಖ್ಯ ಎಂಬುದನ್ನು ಸೂತ್ರೀಕರಿಸಿದೆ. ಬಡವರು ಇದನ್ನು ತಮ್ಮ ಜೀವನ ಸೂತ್ರವನ್ನಾಗಿಯೂ ಬಳಸುವುದಿದೆ.

ಆದರೆ ಯುಗಾದಿಯ ದಿನ ಬೇವಿನ ಎಲೆ ಬೆರೆಸಿದ ನೀರಿನಿಂದ ಅಭ್ಯಂಜನ ಸ್ನಾನ ಮಾಡುವರು. ನಂತರ ಹೊಸ ಬಟ್ಟೆ ತೊಟ್ಟು, ಹಿರಿಯರಿಗೆ ನಮಸ್ಕಾರ ಮಾಡಿ ಬೇವು-ಬೆಲ್ಲ ಸೇವಿಸುವರು. ಊಟವಾದ ಮೇಲೆ ದೇವಸ್ಥಾನಗಳಿಗೆ ಹೋಗುವುದು, ಪುರೋಹಿತರಿಂದ ಪಂಚಾಂಗ ಶ್ರವಣ ಮಾಡಿಸುವುದು ನಡೆಯುತ್ತದೆ. ವರ್ಷಫಲ ಕೇಳುವುದು ಒಂದು ಪದ್ಧತಿ. ಮಳೆ, ಬೆಳೆ, ಆರೋಗ್ಯ, ಊರಿನ ಕ್ಷೇಮ, ಏನಾದರೂ ಕೆಡುಕು ಸಂಭವಿಸುತ್ತದೆ ಎಂದರೆ ಅದಕ್ಕೆ ಮಾಡಬೇಕಾದ ಪರಿಹಾರೋಪಾಯ, ವೈಯಕ್ತಿಕ ಗ್ರಹಗತಿ, ಫಲಾಫಲಗಳನ್ನು ಅರಿತು ಈ ವರ್ಷ ತಮ್ಮ ಪಾಲಿಗೆ ಒಳ್ಳೆಯದೋ ಕೆಟ್ಟದ್ದೋ ಎಂಬ ಕುತೂಹಲ ತಣಿಸಿಕೊಳ್ಳುತ್ತಾರೆ. 

ಈ ದೃಷ್ಟಿಯಲ್ಲಿ ಅಂದು ಸೇವಿಸುವ ಬೇವು-ಬೆಲ್ಲ ಸಾಂಕೇತಿಕವಾಗಿ ಕಾಣಿಸುತ್ತದೆ. ನಿಸರ್ಗ ಈಗ ಮೈತುಂಬಿಕೊಂಡು ನಿಂತಿದ್ದರೂ ಅದು ವರ್ಷವಿಡೀ ಹಾಗೆಯೇ ಇರುವುದಿಲ್ಲ. ಅದರಲ್ಲೂ ವ್ಯತ್ಯಾಸ ಉಂಟಾಗುತ್ತದೆ, ಅದು ನಿಯಮ. ಸಂತೋಷ ಮತ್ತು ದುಃಖ-ಇವೆರಡೇ ಮಾನವ ಜೀವನದ ನಿಯಂತ್ರಕಗಳು. ಬೆಲ್ಲ ಸಂತೋಷಕ್ಕೂ, ಬೇವು ಕಷ್ಟಕ್ಕೂ ಸಂಕೇತ. ಎರಡರ ಮಿಶ್ರಣವೇ ಜೀವನ. ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥೈರ್ಯ ಹೊಂದಲು ಬೇವು-ಬೆಲ್ಲದ ವಿನಿಯೋಗ ನಡೆಯುತ್ತದೆ. 

ಹಬ್ಬಗಳಿಗೆ ಸಂಬಂಧಿಸಿದಂತೆ ಮಲೆನಾಡಿನ ಭಾಗದಲ್ಲಿ ಕೆಲವು ನಂಬಿಕೆಗಳೂ ಕಾಣಿಸುತ್ತವೆ. ಹಬ್ಬದ ದಿನ ಬೆಳಿಗ್ಗೆ ಮನೆ ಮುಂದೆ ಸೆಗಣಿ ಸಾರಿಸಿ, ರಂಗೋಲಿ ಇಡದಿದ್ದರೆ ಪಿತೃಗಳಿಗೆ ಕೋಪ ಬರುತ್ತದೆ ಎನ್ನಲಾಗುತ್ತದೆ. ಹಬ್ಬದ ವೇಳೆ ಮನೆಯ ಸದಸ್ಯರು ಯಾರಾದರೂ ಮೃತರಾಗಿದ್ದರೆ ಮೂರು ವರ್ಷಗಳ ಕಾಲ ಹಬ್ಬ ಆಚರಿಸುವುದಿಲ್ಲ. 

ಹಬ್ಬಗಳ ಸಂದರ್ಭದಲ್ಲಿ ಕಾಣಿಸುವ ಮತ್ತೊಂದು ಮುಖ ವಿನೋದ. ವಿನೋದ, ಆಟಗಳಿಂದ ಬದುಕಿಗೆ ಭರವಸೆ ಬರುತ್ತದೆ. ಮಲೆನಾಡಿನ ಕೆಲವು ಭಾಗಗಳಲ್ಲಿ ಯುಗಾದಿಯ ದಿನ ಕೋಳಿ ಅಂಕ ಆಡಿಸಲಾಗುತ್ತದೆ. ಇನ್ನು ಕೆಲವರು ಮನೆಗಳಲ್ಲಿ ಇಸ್ಪೀಟು ಆಡುವುದೂ ಉಂಟು. 

ಮನರಂಜನೆ ಮತ್ತು ಬಂಧು-ಬಾಂಧವರ ಒಡನಾಟದಿಂದ ಬಾಳಿನ ಬೇಸರ ದೂರವಾಗಿ ವರ್ಷವಿಡೀ ಇದೇ ಸಂತೋಷ ಇರಲಿ ಎಂಬ ಆಶಯ ಈ ಹಬ್ಬದಲ್ಲಿ ಕಾಣಿಸುತ್ತದೆ.