ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ಜಾರ್ಜಿಯನ್ ಕ್ಯಾಲೆಂಡರ್ ಪ್ರಕಾರ ಪ್ರತಿ ವರ್ಷ ಜನವರಿ 1 ರಂದು ಹೊಸ ವರ್ಷ ಆಚರಿಸಲಾಗುತ್ತದೆ. ಇಷ್ಟಾಗಿಯೂ ಪ್ರಪಂಚಾದ್ಯಂತ ಇದೇ ಎಲ್ಲರಿಗೂ ಹೊಸ ವರ್ಷದ ದಿನವಲ್ಲ. ಭಿನ್ನ ಸಂಸ್ಕೃತಿಗಳ ಹೊಸ ವರ್ಷ ಭಿನ್ನವಾಗಿದೆ. ಚೀನದಲ್ಲಿ ಹೊಸವರ್ಷ ಜನವರಿ 21 ರಿಂದ ಫೆಬ್ರವರಿ 21 ರೊಳಗೆ ಅವರ ಕ್ಯಾಲೆಂಡರಿನಂತೆ ಚಂದ್ರಮಾಸದ ಮೊದಲ ದಿನ. ಯಹೂದಿಗಳಿಗೆ ಹೀಬ್ರೂ ಕ್ಯಾಲೆಂಡರಿನ ಏಳನೆಯ ತಿಂಗಳ ಮೊದಲ ಎರಡು ದಿನಗಳೇ ಹೊಸ ವರ್ಷ. ಇಸ್ಲಾಂ ಅನುಸರಿಸುವವರು ಹೊಸ ವರ್ಷವನ್ನು ಹಿಜ್ರಿ ಅನ್ನುತ್ತಾರೆ. ಇದು ಇಸ್ಲಾಂ ಕ್ಯಾಲೆಂಡರಿನ ಮೊದಲ ತಿಂಗಳಾದ ಮೊಹರಂನ ಮೊದಲ ದಿನ. ಥೈಲೆಂಡಿನ ಜನರಿಗೆ ಸಾಮಾನ್ಯವಾಗಿ ಏಪ್ರಿಲ್ 13-15ರ ನಡುವೆ ಕಾಣಿಸುವ ಸೊಂಕ್ರಾನ್ ದಿನವೇ ಹೊಸ ವರ್ಷ. ಇಥಿಯೋಪಿಯನ್ನರಿಗೆ ಮಳೆಗಾಲದ ಕೊನೆಯ ದಿನ, ಸಾಮಾನ್ಯವಾಗಿ ಸೆಪ್ಟೆಂಬರ್ 11 ಹೊಸ ವರ್ಷ. ಇದನ್ನು ಎಂಕುಟಾಟಶ್ ಎಂದೂ ಕರೆಯಲಾಗುತ್ತದೆ.
ಭಾರತದಲ್ಲಿ ಯುಗಾದಿಯನ್ನು ಮೂರು ರೀತಿಯಲ್ಲಿ ಆಚರಿಸುತ್ತಾರೆ. ಬಾರ್ಹಸ್ಪತ್ಯಮಾನ, ಚಾಂದ್ರಮಾನ ಮತ್ತು ಸೌರಮಾನ. ಉತ್ತರ ಭಾರತದಲ್ಲಿ ಬಾರ್ಹಸ್ಪತ್ಯಮಾನವನ್ನೂ ಕರ್ನಾಟಕ ಮತ್ತು ಆಂಧ್ರಗಳಲ್ಲಿ ಚಾಂದ್ರಮಾನವನ್ನೂ ತಮಿಳುನಾಡಿನಲ್ಲಿ ಸೌರಮಾನವನ್ನೂ ಆಚರಿಸುವುದು ವಾಡಿಕೆ.
ಹಬ್ಬಗಳೆಲ್ಲ ಸಂಭ್ರಮದ ಸಂಕೇತಗಳು. ಮನುಷ್ಯನ ಮೂಲ ಆಶಯವೂ ಸಂತೋಷ, ಸಂಭ್ರಮದಿಂದ ಇರಬೇಕು ಎನ್ನುವುದೇ ಆಗಿದೆ. ಇಂಥ ಸಂಭ್ರಮದ ವಾರ್ಷಿಕ ಆರಂಭದ ದಿನ ಯುಗಾದಿ. ನಿಸರ್ಗದ ಮಡಿಲಲ್ಲಿ ವಾಸವಾದ ಮಾನವ ಸಮುದಾಯ ಸುತ್ತಲ ಗಿಡ ಮರಗಳನ್ನು ಕಂಡು, ಅವುಗಳಲ್ಲಿನ ವ್ಯತ್ಯಾಸವನ್ನು, ಬೆಳವಣಿಗೆಯನ್ನು ಮತ್ತು ಸಂತೋಷವನ್ನು ಕಣ್ಣಾರೆ ಕಂಡು ತಾನೂ ಅದರಲ್ಲಿ ಪಾಲ್ಗೊಳ್ಳತೊಡಗಿತು. ವರ್ಷಕ್ಕೊಮ್ಮೆ ಗಿಡ ಮರಗಳು ಎಲೆ ಉದುರಿಸಿ, ಹೊಸದಾಗಿ ಚಿಗುರಿ ನಳನಳಿಸುತ್ತ ನಿಲ್ಲುತ್ತವೆ. ಬಗೆಬಗೆಯ ಹೂವು ಹಣ್ಣುಗಳು, ಹಕ್ಕಿಗಳ ಕಲರವ. ಪ್ರಕೃತಿಯ ಮಡಿಲಲ್ಲಿ ಆನಂದೋತ್ಸಾಹ ಉಂಟಾಗುತ್ತದೆ. ಅದು ವಸಂತಾಗಮನದ ಸಂದರ್ಭ. ಪ್ರಕೃತಿಯ ಒಡಲಿನ ಈ ಉತ್ಸವದಲ್ಲಿ ತಾವೂ ಒಂದಾಗಿ ತಮ್ಮ ಜೀವನದಲ್ಲಿಯೂ ಸಂತಸ ಕಾಣುವ ಸಮಯ ಯುಗಾದಿ. ಸಂಸ್ಕೃತ ಶಬ್ದ ಯುಗ (ವರ್ಷ) ಮತ್ತು ಆದಿ (ಆರಂಭ) ಎಂಬುದರಿಂದ ಯುಗಾದಿ ಉಂಟಾಗಿದೆ. ನಿಜವಾಗಿ ಕಲಿಯುಗ ಎಂಬುದರ ಆರಂಭವನ್ನೂ ಇದು ಸೂಚಿಸುತ್ತದೆ ಅನ್ನುವರು. ಶ್ರೀಕೃಷ್ಣ ಭೂಲೋಕ ತ್ಯಜಿಸಿದ ದಿನ. ಇದನ್ನು ವ್ಯಾಸರು “ಯಸ್ಮಿನ್ ಕೃಷ್ಣೋ ದಿವಮ್ಯಾತಃ ತಸ್ಮಾತ್ ಪ್ರತಿಪನ್ನಂ ಕಲಿಯುಗಮ್” ಎಂದಿದ್ದಾರೆ. ಇಂದಿನವರ ಲೆಕ್ಕಾಚಾರದಂತೆ ಕಲಿಯುಗ ಕ್ರಿ.ಪೂ 3102 ಫೆಬ್ರವರಿ 17 ಅಥವಾ 18ರ ಮಧ್ಯರಾತ್ರಿ ಆರಂಭವಾಯಿತು.
ಪ್ರಕೃತಿಯಲ್ಲಿನ ಬದಲಾವಣೆಗೆ ಅನುಸಾರವಾಗಿ ಋತುಗಳನ್ನು ಗುರುತಿಸಲಾಗಿದೆ. ಆಯಾ ಋತುಗಳಲ್ಲಿ ಕಾಣಿಸಿಕೊಳ್ಳುವ ಹಬ್ಬಗಳಿವೆ. ಎಲ್ಲ ಹಬ್ಬಗಳಿಗೂ ಮೊದಲು ಬರುವುದು ಯುಗಾದಿ ಹಬ್ಬ. ವಸಂತ ಋತುವಿನಲ್ಲಿ ಕಾಣಿಸಿಕೊಳ್ಳುವ ಹಬ್ಬಗಳಲ್ಲಿ ಯುಗಾದಿ, ರಾಮನವಮಿ ಮತ್ತು ಚೈತ್ರಾ ಪೂರ್ಣಿಮೆ ಬಹಳ ಮುಖ್ಯವಾದವು.
ಪ್ರಕೃತಿಯಲ್ಲಿನ ಹೊಸತನವನ್ನು ಕಂಡು ಅದು ನಿಸರ್ಗದ ಭಾಗವಾದ ತಮ್ಮ ಜೀವನದಲ್ಲೂ ಸಹಜವಾಗಿಯೇ ಬರುತ್ತದೆ ಎಂದು ಭಾವಿಸಿದ ಜನ ಸಮುದಾಯ ಪ್ರಕೃತಿಯ ಸಂಭ್ರಮದಲ್ಲಿ ತಾವೂ ಭಾಗವಹಿಸತೊಡಗಿದರು. ಹೊಸ ಬಟ್ಟೆ ತೊಟ್ಟು, ಸಿಹಿಯುಂಡು, ಆಟ, ವಿನೋದಗಳಿಂದ ಸಂತೋಷಪಟ್ಟರು. ಮಾನವ ತನ್ನ ಬದುಕಿನ ಏಕತಾನತೆಯನ್ನು ಹೋಗಲಾಡಿಸಿಕೊಳ್ಳಲು, ಆತ್ಮೀಯರೊಂದಿಗೆ ಕೋಡಿಕೊಳ್ಳಲು, ಸುಖ ಸಂತೋಷ ಕಂಡುಕೊಳ್ಳಲು ಕೆಲವು ದಿನಗಳನ್ನು ಗೊತ್ತು ಮಾಡಿಕೊಂಡು ಅದನೇ ಹಬ್ಬ-ಹರಿದಿನ ಎಂದು ಕರೆದುಕೊಂಡಿದ್ದಾನೆ ಎನಿಸುತ್ತದೆ.
ಹಬ್ಬಗಳ ಸ್ವರೂಪ ಮತ್ತು ಲಕ್ಷಣಗಳನ್ನು ಗಮನಿಸಿ ಹೇಳುವುದಾದರೆ ಸಾರ್ವತ್ರಿಕ ಹಬ್ಬಗಳು, ಸಾಂಘಿಕ ಹಬ್ಬಗಳು ಮತ್ತು ಸಾಂದರ್ಭಿಕ ಹಬ್ಬಗಳು ಎಂದು ವಿಂಗಡಿಸಬಹುದು. ಏಕಕಾಲದಲ್ಲಿ ಏಕರೀತಿಯಲ್ಲಿ ಜನರು ತಮ್ಮ ತಮ್ಮ ಮನೆಗಳಲ್ಲೇ ಆಚರಿಸುವ ಹಬ್ಬಗಳು ಸಾರ್ವತ್ರಿಕ ರೂಪದವು. ಯುಗಾದಿ, ದೀಪಾವಳಿ, ಶಿವರಾತ್ರಿ ಮೊದಲಾದ ಹಬ್ಬಗಳು ಈ ಬಗೆಯವು. ಮನೆಯ ಒಳ-ಹೊರಗೆ ಏಕಕಾಲದಲ್ಲಿ ನಡೆಯುವ ಆಚರಣೆ ಸಾಂಘಿಕ ಸ್ವರೂಪದವು. ಸುಗ್ಗಿ, ಹೋಳಿ ಇತ್ಯಾದಿ ಈ ಬಗೆಯವು. ನಿರ್ದಿಷ್ಟ ಕುಟುಂಬದ ಬಂಧು ಮಿತ್ರರು ಮಾತ್ರವೇ ನಿಗದಿತ ಕಾಲವನ್ನು ಗೊತ್ತುಮಾಡಿಕೊಂಡು ಆಚರಿಸುವ ಕುಲದೇವತೆಯ ಹಬ್ಬ ಅಥವಾ ದೇವತಾ ಕಾರ್ಯ ಮೊದಲಾದವು ಸಾಂದರ್ಭಿಕ ಹಬ್ಬಗಳು. ಸಾರ್ವತ್ರಿಕ ಹಬ್ಬ ಎನಿಸಿದರೂ ಯುಗಾದಿ ಎಲ್ಲ ಕಡೆಗೂ ಒಂದೇ ರೀತಿ ಜರುಗುವುದಿಲ್ಲ. ಆಯಾ ಪ್ರಾಂತ್ಯಗಳ ಅನುಕೂಲಕ್ಕೆ ತಕ್ಕಂತೆ ಆಚರಣೆ ಮಾಡಿಕೊಳ್ಳುವ ನಮ್ಯತೆ ಸಂಪ್ರದಾಯಗಳಲ್ಲಿ ಇರುವುದೇ ಇಂಥ ವೈವಿಧ್ಯಕ್ಕೆ ಕಾರಣ. ಕರ್ನಾಟಕದ ಮಲೆನಾಡಿನ ಭಾಗದಲ್ಲಿ ಆಚರಿಸುವ ಯುಗಾದಿಯನ್ನು ಈ ಲೇಖನದಲ್ಲಿ ಪ್ರಧಾನವಾಗಿ ಗಮನಿಸಲಾಗಿದೆ. ಮಲೆನಾಡು ಹೆಸರೇ ಹೇಳುವಂತೆ ಬೆಟ್ಟಗುಡ್ಡಗಳಿಂದ ಆವೃತವಾದ ಕನ್ನಡದ ಪ್ರದೇಶ. ಪಶ್ಚಿಮ ಘಟ್ಟ ಪರ್ವತ ಮತ್ತು ಕಾಡಿನ ಪರಿಸರ ಇರುವ ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ದಕ್ಷಿಣ ಕನ್ನಡ ಮತ್ತು ಕೊಡಗಿನ ಭಾಗಗಳನ್ನು ಸಾಮಾನ್ಯವಾಗಿ ಮಲೆನಾಡು ಎಂದು ಕರೆಯುವುದು ರೂಢಿ. ಕಾಡಿನ ಈ ಪ್ರದೇಶದಲ್ಲಿ ಗೊಂಡರು, ಖಾರ್ವಿಯರು, ಗಾಪ್ತಿಯರು, ಹರಕಂತ್ರರು, ನವಾಯತರು, ಸಿದ್ದಿಗಳು, ಕುಣಬಿಗಳು, ಗೌಳಿಗರು, ಹಾಲಕ್ಕಿ ಒಕ್ಕಲಿಗರು, ಗೌಡ ಸಾರಸ್ವತರು, ಹವ್ಯಕರು, ದೀವ ನಾಯಕರು, ನಾಮಧಾರಿಗಳು, ಕೊರಗರು, ಕೊಡವರು, ಕುರುಬರು, ಇತ್ಯಾದಿ ಐವತ್ತಕ್ಕೂ ಹೆಚ್ಚು ಜನ ಸಮುದಾಯಗಳು ಒಂದೇ ಅರಣ್ಯದಲ್ಲಿ ಬಗೆಬಗೆಯ ಮರಗಿಡಗಳು ಒಟ್ಟಾಗಿ ಇದ್ದು ಕಾಡಿಗೆ ಕಳೆ ತರುವಂತೆ ಸಾಮರಸ್ಯದಿಂದ ವಾಸವಾಗಿವೆ.
ಮಲೆನಾಡಿನ ಜನ ವರ್ಷದ ಆರಂಭದಿಂದ ಹಿಡಿದು ಕೊನೆಯವರೆಗೂ ಹತ್ತಾರು ಹಬ್ಬಗಳನ್ನು ಆಚರಿಸುತ್ತಾರೆ. ಮೇಲೆ ಉಲ್ಲೇಖಿಸಿದ ಎಲ್ಲ ರೀತಿಯ ಹಬ್ಬಗಳೂ ಅವರಲ್ಲಿ ಉಳಿದು ಬಂದಿವೆ. ಕರ್ನಾಟಕದ ಉಳಿದೆಡೆಗಳಲ್ಲಿನಂತೆಯೇ ಇಲ್ಲಿಯೂ ಸಾರ್ವತ್ರಿಕ ಅಥವಾ ಸಾಮೂಹಿಕ ಸ್ವರೂಪದ ಹಬ್ಬಗಳನ್ನು ಅತ್ಯಂತ ಸಡಗರದಿಂದ ಆಚರಿಸಿದರೂ ಸ್ಥಳೀಯ ವಿಶೇಷಗಳನ್ನು ಬಿಟ್ಟರೆ ಹಬ್ಬಗಳ ಕಾರ್ಯಕಲಾಪ, ಆಚರಣೆಯ ವಿಧಾನಗಳಲ್ಲಿ ಹೆಚ್ಚಿನ ವೈಶಿಷ್ಟ್ಯವೇನೂ ಕಾಣಿಸುವುದಿಲ್ಲ.
ಹಬ್ಬಕ್ಕೆ ಮೊದಲು ಗೋಡೆಗಳಿಗೆ ಸುಣ್ಣ-ಬಣ್ಣ ಹಚ್ಚುವುದು, ಮನೆಯ ಮುಂಭಾಗದಲ್ಲಿ ಸೆಗಣಿಯಿಂದ ಸಾರಣೆ ಮಾಡುವುದು, ರಂಗೋಲಿ ಹಾಕುವುದು, ಹಬ್ಬದ ದಿನ ಮನೆ ಮಂದಿಯೆಲ್ಲಾ ಸ್ನಾನ ಮಾಡಿ ಮಡಿಯಲ್ಲಿರುವುದು, ಮನೆಯ ಮುಂಬಾಗಿಲಿಗೆ ತಳಿರು ತೋರಣ ಕಟ್ಟುವುದು, ಉಪವಾಸದಿಂದ ಇದ್ದು, ಪೂಜೆ, ನೈವೇದ್ಯ ಅರ್ಪಿಸಿ ಕೊನೆಯಲ್ಲಿ ವಿಶೇಷ ಊಟ ಮಾಡುವುದು- ಇವು ಎಲ್ಲ ಕಡೆಯೂ ಕಂಡು ಬರುವ ಕ್ರಮ. “ಉಂಡಿದ್ದೇ ಉಗಾದಿ ಮಿಂದದ್ದೇ ದೀಪಾವಳಿ, ಉಪವಾಸವೇ ಏಕಾದಶಿ” ಅನ್ನುವ ಗಾದೆಮಾತು ಯಾವ ಹಬ್ಬದಲ್ಲಿ ಯಾವುದು ಮುಖ್ಯ ಎಂಬುದನ್ನು ಸೂತ್ರೀಕರಿಸಿದೆ. ಬಡವರು ಇದನ್ನು ತಮ್ಮ ಜೀವನ ಸೂತ್ರವನ್ನಾಗಿಯೂ ಬಳಸುವುದಿದೆ.
ಆದರೆ ಯುಗಾದಿಯ ದಿನ ಬೇವಿನ ಎಲೆ ಬೆರೆಸಿದ ನೀರಿನಿಂದ ಅಭ್ಯಂಜನ ಸ್ನಾನ ಮಾಡುವರು. ನಂತರ ಹೊಸ ಬಟ್ಟೆ ತೊಟ್ಟು, ಹಿರಿಯರಿಗೆ ನಮಸ್ಕಾರ ಮಾಡಿ ಬೇವು-ಬೆಲ್ಲ ಸೇವಿಸುವರು. ಊಟವಾದ ಮೇಲೆ ದೇವಸ್ಥಾನಗಳಿಗೆ ಹೋಗುವುದು, ಪುರೋಹಿತರಿಂದ ಪಂಚಾಂಗ ಶ್ರವಣ ಮಾಡಿಸುವುದು ನಡೆಯುತ್ತದೆ. ವರ್ಷಫಲ ಕೇಳುವುದು ಒಂದು ಪದ್ಧತಿ. ಮಳೆ, ಬೆಳೆ, ಆರೋಗ್ಯ, ಊರಿನ ಕ್ಷೇಮ, ಏನಾದರೂ ಕೆಡುಕು ಸಂಭವಿಸುತ್ತದೆ ಎಂದರೆ ಅದಕ್ಕೆ ಮಾಡಬೇಕಾದ ಪರಿಹಾರೋಪಾಯ, ವೈಯಕ್ತಿಕ ಗ್ರಹಗತಿ, ಫಲಾಫಲಗಳನ್ನು ಅರಿತು ಈ ವರ್ಷ ತಮ್ಮ ಪಾಲಿಗೆ ಒಳ್ಳೆಯದೋ ಕೆಟ್ಟದ್ದೋ ಎಂಬ ಕುತೂಹಲ ತಣಿಸಿಕೊಳ್ಳುತ್ತಾರೆ.
ಈ ದೃಷ್ಟಿಯಲ್ಲಿ ಅಂದು ಸೇವಿಸುವ ಬೇವು-ಬೆಲ್ಲ ಸಾಂಕೇತಿಕವಾಗಿ ಕಾಣಿಸುತ್ತದೆ. ನಿಸರ್ಗ ಈಗ ಮೈತುಂಬಿಕೊಂಡು ನಿಂತಿದ್ದರೂ ಅದು ವರ್ಷವಿಡೀ ಹಾಗೆಯೇ ಇರುವುದಿಲ್ಲ. ಅದರಲ್ಲೂ ವ್ಯತ್ಯಾಸ ಉಂಟಾಗುತ್ತದೆ, ಅದು ನಿಯಮ. ಸಂತೋಷ ಮತ್ತು ದುಃಖ-ಇವೆರಡೇ ಮಾನವ ಜೀವನದ ನಿಯಂತ್ರಕಗಳು. ಬೆಲ್ಲ ಸಂತೋಷಕ್ಕೂ, ಬೇವು ಕಷ್ಟಕ್ಕೂ ಸಂಕೇತ. ಎರಡರ ಮಿಶ್ರಣವೇ ಜೀವನ. ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥೈರ್ಯ ಹೊಂದಲು ಬೇವು-ಬೆಲ್ಲದ ವಿನಿಯೋಗ ನಡೆಯುತ್ತದೆ.
ಹಬ್ಬಗಳಿಗೆ ಸಂಬಂಧಿಸಿದಂತೆ ಮಲೆನಾಡಿನ ಭಾಗದಲ್ಲಿ ಕೆಲವು ನಂಬಿಕೆಗಳೂ ಕಾಣಿಸುತ್ತವೆ. ಹಬ್ಬದ ದಿನ ಬೆಳಿಗ್ಗೆ ಮನೆ ಮುಂದೆ ಸೆಗಣಿ ಸಾರಿಸಿ, ರಂಗೋಲಿ ಇಡದಿದ್ದರೆ ಪಿತೃಗಳಿಗೆ ಕೋಪ ಬರುತ್ತದೆ ಎನ್ನಲಾಗುತ್ತದೆ. ಹಬ್ಬದ ವೇಳೆ ಮನೆಯ ಸದಸ್ಯರು ಯಾರಾದರೂ ಮೃತರಾಗಿದ್ದರೆ ಮೂರು ವರ್ಷಗಳ ಕಾಲ ಹಬ್ಬ ಆಚರಿಸುವುದಿಲ್ಲ.
ಹಬ್ಬಗಳ ಸಂದರ್ಭದಲ್ಲಿ ಕಾಣಿಸುವ ಮತ್ತೊಂದು ಮುಖ ವಿನೋದ. ವಿನೋದ, ಆಟಗಳಿಂದ ಬದುಕಿಗೆ ಭರವಸೆ ಬರುತ್ತದೆ. ಮಲೆನಾಡಿನ ಕೆಲವು ಭಾಗಗಳಲ್ಲಿ ಯುಗಾದಿಯ ದಿನ ಕೋಳಿ ಅಂಕ ಆಡಿಸಲಾಗುತ್ತದೆ. ಇನ್ನು ಕೆಲವರು ಮನೆಗಳಲ್ಲಿ ಇಸ್ಪೀಟು ಆಡುವುದೂ ಉಂಟು.
ಮನರಂಜನೆ ಮತ್ತು ಬಂಧು-ಬಾಂಧವರ ಒಡನಾಟದಿಂದ ಬಾಳಿನ ಬೇಸರ ದೂರವಾಗಿ ವರ್ಷವಿಡೀ ಇದೇ ಸಂತೋಷ ಇರಲಿ ಎಂಬ ಆಶಯ ಈ ಹಬ್ಬದಲ್ಲಿ ಕಾಣಿಸುತ್ತದೆ.
No comments:
Post a Comment