ಅದ್ಯಾವುದೋ ವಸಾಹತು ಕಾಲದ ವಿಲಾಯತಿ ಆಕರ್ಷಣೆ ಇನ್ನೂ ಹೋಗಿಲ್ಲ. ಅದು ತಲೆಮಾರುಗಳಿಗೆ ಹರಿಯುತ್ತಿದೆ. ಅದು ಇನ್ನೂ ಅಪಾಯಕಾರಿ. ಇದನ್ನು ಬಾಲ್ಯದಲ್ಲೇ ಮಕ್ಕಳಲ್ಲಿ ಬದಲಾಗುವಂತೆ ಮಾಡಬೇಕು. ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರ ಪ್ರೌಢಶಾಲೆ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಯೋಜನೆ ಜಾರಿಗೆ ತಂದಿದೆ.ಆದ ಸಂತೋಷ. ಆದರೆ ನಮ್ಮ ಬೆಂಗಳೂರಲ್ಲಿ ಕೆಲವು ಖಾಸಗಿ ಶಾಲೆಗಳನ್ನು ಗಮನಿಸಿದ್ದೇನೆ. ಅವು ಒಂದನೆಯತ್ತೆಮಕ್ಕಳಿಗೆ ಏಷ್ಯಾ, ಪ್ರೌಢಶಾಲೆಗೆ ಯೂರೋಪ್ , ಮೇಲಿನ ಹಂತಕ್ಕೆ ವಿವಿಧ ಖಂಡಗಳ ಪ್ರವಾಸ ಎಂದು ಆಸೆ ಹುಟ್ಟಿಸಿ ಪೋಷಕರಿಂದ ಲಕ್ಷಾಂತರ ಹಣ ಪೀಕುತ್ತವೆ. ನಮ್ಮವರೂ ಮಂಗ್ಯಾಗಳು ಸಾಲಸೋಲ ಮಾಡಿ ಕೊಡುತ್ತಾರೆ.ತಮ್ಮ ಮಕ್ಕಳು ಪಾರಿನ್ನಿಗೆ ಟೂರ್ ಹೋಯ್ತವೆ ಎಂದು ಹೇಳಿ ಹೆಚ್ಚುಗಾರಿಕೆ ತೋರಿಸಿಕೊಳ್ಳುತ್ತ, ಅವರ, ಮಕ್ಕಳ ಹೊಟ್ಟೆ ಉರಿಸುತ್ತಾರೆ, ಇಂಥ ಮನಸ್ಥಿತಿ ಎಲ್ಲೆಡೆ ಹರಡಿ ಸಮಾಜ ಕೀಳರಿಮೆಗೆ ಜಾರುತ್ತದೆ. ಇಂಥವರಿಗೆ ನನ್ನ ಒಂದು ಪ್ರಶ್ನೆ ಎಂದರೆ ನಮ್ಮಲ್ಲಿ ಇಲ್ಲದ್ದು ವಿದೇಶದಲ್ಲಿ ಏನಿದೆ? ಅಲ್ಲಿ ನಯಾಗರ, ಇಲ್ಲಿ ಜೋಗ ಸಷ್ಟೇ. ಎರಡೂ ಕಡೆ ನೀರೇ ಬೀಳುವುದು. ಇದನ್ನು ಏಕೆ ಅಲ್ಲೇ ಹೋಗಿ ನೋಡಿ ಬೀಗಬೇಕು? ಅಕಸ್ಮಾತ್ ಅಲ್ಲಿ ಹೋದಿರಿ, ಕಂಡಿರಿ, ಸಂತೋಷ. ಇದು ಹಂಗಲ್ಲ. ನೀರು ಬೀಳುವುದನ್ನು ಶಿಂಷಾ, ಗಗನಚುಕ್ಕಿ ಭರಚುಕ್ಕಿಯಲ್ಲಿ ಅಲ್ಲ, ನಯಾಗರದಲ್ಲೇ ನೋಡಬೇಕು ಎಂಬಂತೆ ಅವರ ವರಸೆ ಇರುತ್ತದೆ. ಅವರ ಮಾತಿನ ಭರ ಹೇಗಿರುತ್ತದೆ ಅಂದ್ರೆ ಸಾಲ ಸೋಲ ಮಾಡಿ ಅವನ್ನೆಲ್ಲ ನೋಡದಿದ್ರೆ ಈ ಜಗತ್ತಲ್ಲಿ ಹುಟ್ಟಿದ್ದೇ ವ್ಯರ್ಥ. ಈಗಲೇ ಎಲ್ಲಾದರೂ ಹೋಗಿ ನೇಣುಹಾಕಿಕೊಳ್ಳಬೇಕು ಅನಿಸುವಂತೆ ಇರುತ್ತದೆ. ಕೆಲವರು ಹೀಗೆ ಮಾಡಿಕೊಂಡಿದ್ದೂ ಇದೆ. ಅದಿರಲಿ. ಅವರು ಅದಕ್ಕೇ ಅರ್ಹರು. ನಮ್ಮ ಮಕ್ಕಳ ಕತೆ ಹೇಳಿ. ನಮ್ಮ ಮಕ್ಕಳು ಕನಿಷ್ಠ ಪದವಿ ಹಂತಕ್ಕೆ ಬರುವ ವೇಳೆಗೆ ತಮ್ಮ ಊರ ಸುತ್ತಲಿನ ನಾಲ್ಕಾದರೂ ಸ್ಥಳ ದರ್ಶನ ಮಾಡಿರಬೇಕು. ಹಾಗೆ ಅವರನ್ನು ಸಜ್ಜುಗೊಳಿಸಬೇಕು.
ಇನ್ನು ಶಾಲಾಪ್ರವಾಸದ ಬಗ್ಗೆ ಹೇಳುವುದಾದರೆ ಶಾಲಾ ಮಾಸ್ತರುಗಳು ತಮಗೆ ಬೇಕಾದ ಸ್ಥಳ ಗುರುತಿಸಿ ಪ್ರವಾಸ ಏರ್ಪಡಿಸುತ್ತಾರೆ. ಆದರೆ ಅಕ್ಕಪಕ್ಕದ ಜಿಲ್ಲೆ ಅಥವಾ ಸಮೀಪದ ಸ್ಥಳಗಳನ್ನು ಸಂಸ್ಕೃತಿ, ಕಲೆ ಅಥವಾ ಆಹಾರ ವಿಶೇಷದ ಆಧಾರದಲ್ಲಿ ಅವನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ಪ್ರವಾಸ ಏರ್ಪಡಿಸುವುದು ಸೂಕ್ತ. ಸರ್ಕಾರ ಶಾಲೆಗಳಿಗೆ ಅಂಥ ನಿರ್ದೇಶನ ನೀಡಬೇಕು. ಆಗ ಕನಿಷ್ಠ ಮಕ್ಕಳಿಗೆ ಕನಿಷ್ಠ ಸಂಸ್ಕೃತಿಯ ಒಂದು ಅಂಶವಾದರೂ ತಿಳಿಯುತ್ತದೆ. ಒಂದು ಪ್ರವಾಸದಿಂದ ಒಂದು ಆಹಾರ ವಿಶೇಷ, ಒಂದುಬಗೆಯ ತಳಿ, ಕಲೆ ಇತ್ಯಾದಿ ಏನಾದರೂ ತಿಳಿಯಬೇಕು. ಆಗ ಅಂಥಪ್ರವಾಸ ಸಾರ್ಥಕ. ಅದರಿಂದ ಉದ್ದೇಶವೂ ಸಾಧಿತವಾಗುತ್ತದೆ. ಒಂದಿಷ್ಟು ನಾಡಪ್ರೇಮ ಬೆಳೆಯುತ್ತದೆ. ನಮ್ಮ ಮಕ್ಕಳಲ್ಲಿ ಇಷ್ಟಾದರೂ ಸದ್ಯ ಮಾಡುತ್ತಿದ್ದೇವೆಯೇ?

No comments:
Post a Comment