ಈಚೆಗೆ ಪ್ರತೀ ವರ್ಷ ಮೈಸೂರಿನಲ್ಲಿ ನಾಡಿನ ಹೆಮ್ಮೆಯ ದಸರಾ ಶುರುವಾಗುವಾಗ ಪ್ರತಿಯಾಗಿ ಮಹಿಷ ಮಂಡಲೋತ್ಸವ ಹೆಸರಲ್ಲಿ ಸಾಂಪ್ರದಾಯಿಕ ಉತ್ಸವದ ವಿರುದ್ಧ ಕೂಗು ಕೇಳುತ್ತಿದೆ. ಆದರೆ ಈ ಬಾರಿ ಅದು ತೀವ್ರ ಸ್ವರೂಪ ಪಡೆಯುವ ನಿರೀಕ್ಷೆಗಳು ಮಹಿಷ ಮಂಡಲೋತ್ಸವ ಆಯೋಜಕರಿಂದ ಇದೀಗ ದೊರೆತಿದೆ. ಹಿಂದೆ ನಡೆದ ಪುರಾಣೋಕ್ತ ಸಮರ ಮತ್ತು ಘರ್ಷಣೆ ಮೈಸೂರಲ್ಲಿ ಮತ್ತೆ ನಡೆಯುವ ಸೂಚನೆಗಳು ಸಿಗುತ್ತಿವೆ. ನಿಜ. ಪುರಾಣಗಳಲ್ಲಿ ಅಸುರ ಶಕ್ತಿ ಸದಾ ಇರುತ್ತದೆ, ಅದು ಆಗಾಗ ಜಾಗೃತವಾಗುತ್ತದೆ ಎಂದು ಹೇಳಲಾಗಿದೆ. ಇವೆರಡೂ ಶಕ್ತಿಗಳಿಗೆ ಅಂತ್ಯವಿಲ್ಲ. ಅವುಗಳ ಅಂತ್ಯವೆAದರೆ ಅದು ಸೃಷ್ಟಿಯ ಅಂತ್ಯ. ಹಾಗಾಗಿ ಜೀವನ ಮುನ್ನಡೆಯಲು ಇಂಥ ಘರ್ಷಣೆ ನಡೆಯುತ್ತಿರುತ್ತದೆ. ಇದನ್ನು ಶಿಷ್ಟ- ದುಷ್ಟ ಶಕ್ತಿಗಳ ಯುದ್ಧವೆಂದೂ ಕೊನೆಯಲ್ಲಿ ಗೆಲ್ಲುವುದು ಶಿಷ್ಟವೆಂದೂ ಪ್ರತಿಯಾಗಿ ಇವೆಲ್ಲ ಆರ್ಯ-ದ್ರಾವಿಡರ ಹೋರಾಟದ ಅಥವಾ ಪುರೋಹಿತಶಾಹಿಯ ಸೃಷ್ಟಿ ಎಂದೂ ಬೇರೆ ಬೇರೆ ರೀತಿಯ ವಾಗ್ವಾದಗಳಿವೆ. ಅದಿರಲಿ. ಆದರೆ ಇಂಥ ಚರ್ಚೆಗಳು ಹುಟ್ಟಿದ್ದು ನಮ್ಮ ದೇಶಕ್ಕೆ ವಸಾಹತುಶಾಹಿಗಳು ಕಾಲಿಟ್ಟ ಮೇಲೆ ಎಂಬುದನ್ನು ಗಮನಿಸಬೇಕು. ವಸಾಹತುಶಾಹಿಗಳು ಇಂಥ ಮಾತನ್ನು ನಮಗೆ ಕಲಿಸುವವರೆಗೆ ನಮ್ಮಲ್ಲಿ ಎಲ್ಲವೂ ಸರಿಯಾಗಿತ್ತಾ ಎಂಬುದಕ್ಕೂ ಇಂಥ ಮಾತು ಕಲಿತ ಮೇಲೆ ಎಲ್ಲ ಸರಿ ಆಯ್ತಾ ಎಂಬುದಕ್ಕೂ ಅಸಮಾಧಾನಕರ ಉತ್ತರವೇ ಸಿಗುತ್ತದೆ.
ಸಾಂಪ್ರದಾಯಿಕ ದಸರಾ ಉತ್ಸವವನ್ನೇ ನೋಡಿ. ಅದಕ್ಕೆ ಪುರಾಣ ಮತ್ತು ಸಾವಿರಾರು ವರ್ಷಗಳ ಅಸಂಖ್ಯ ತಲೆಮಾರುಗಳ ನಂಬಿಕೆಯ ಬಲವಿದೆ. ಆದರೆ ಇದಕ್ಕೆ ಪ್ರತಿಯಾಗಿ ಸಾಧಿಸುತ್ತಿರುವ ಮಹಿಷ ಮಂಡಲೋತ್ಸವ ಎನ್ನಲಾದ ಪ್ರತಿಭಟನೆಗೆ ವಸಾಹತುಗಳು ಬಿಟ್ಟುಹೋದ ಮನಸ್ಸುಗಳನ್ನು ಛಿದ್ರಮಾಡುವ ಒಣ ತರ್ಕದ ಬಲವಷ್ಟೇ ಇದೆ. ಮುಖ್ಯವಾಗಿ ಈ ತರ್ಕ ಎಲ್ಲದಕ್ಕೂ ಇಂದ್ರಿಯ ಲಭ್ಯವಾದ ಸಾಕ್ಷಿಗಳನ್ನು ಕೇಳುತ್ತದೆ. ಮೂಲತಃ ನಂಬಿಕೆಗಳಿಗೆ ಇಂಥ ಸಾಕ್ಷಿ ಕೊಡಲು ಸಾಧ್ಯವಿಲ್ಲ ಎಂಬ ಕನಿಷ್ಠ ಜ್ಞಾನ ಇದಕ್ಕೆ ಇನ್ನೂ ದಕ್ಕಿಲ್ಲ. ಅಷ್ಟಕ್ಕೂ ನಂಬುವುದಿಲ್ಲ ಅನ್ನುವುದು ಕೂಡ ಒಂದು ನಂಬಿಕೆ ಎಂಬ ಅರಿವು ಕೂಡ ಈ ತರ್ಕಕ್ಕಿಲ್ಲ. ಇದನ್ನು ಇಲ್ಲಿ ಅವಲೋಕಿಸುವ ಯತ್ನವಿದೆ.
ನಮ್ಮ ಜಗತ್ತಿನಲ್ಲಿ ಸಮೃದ್ಧ ನಾಗರಿಕತೆಯ ಹಿನ್ನೆಲೆಯುಳ್ಳ ಎಲ್ಲ ಸಮುದಾಯಗಳಲ್ಲೂ ಪುರಾಣ ಕಥೆಗಳಿವೆ. ಅವು ನಮ್ಮ ಬದುಕನ್ನು ಹಸನುಗೊಳಿಸುತ್ತವೆ. ಜೊತೆಗೆ ಮಾನವ ಬದುಕಿನ ಅನೇಕ ಮಗ್ಗಲುಗಳ ಮೇಲೆ ಅಪಾರ ಪ್ರಭಾವ ಬೀರುತ್ತವೆ. ಮನುಷ್ಯ ಜೀವನ ಕೇವಲ ಉಂಡು ತಿಂದು ಮಲಗುವುದಕ್ಕಿರುವುದಲ್ಲ. ಆತನ ಸೃಜನ ಶೀಲತೆ ಅನೂಹ್ಯ. ಕಲೆ, ನೃತ್ಯ, ಸಂಗೀತ ಸಾಹಿತ್ಯ ಏನೆಲ್ಲ ರೂಪದಲ್ಲಿ ಅದು ಕಾಣಿಸಿಕೊಳ್ಳುತ್ತದೆ. ಮತ್ತೆ ಇವೆಲ್ಲ ಅಸಂಖ್ಯ ಉಪವಿಭಾಗ ಹೊಂದುತ್ತವೆ. ಮನುಷ್ಯನ ಜೀವನ ಇದರಲ್ಲಿ ಸಂಪೂರ್ಣ ತೊಡಗಿಸಿಕೊಂಡು ಸಾರ್ಥಕತೆ ಪಡೆಯುತ್ತದೆ.
ಸಾಂಪ್ರದಾಯಿಕ ದಸರಾ ನಮ್ಮ ದೇಶಾದ್ಯಂತ ಬೇರೆ ಬೇರೆ ರಾಜ್ಯಗಳಲ್ಲಿ ಸಮುದಾಯಗಳಲ್ಲಿ ಕಲೆ ಸಂಸ್ಕೃತಿಯನ್ನು ಇನ್ನಿಲ್ಲದಂತೆ ಬೆಳೆಸಿದೆ, ಇದನ್ನು ಕುರಿತ ಅಸಂಖ್ಯ ಕತೆ ಪುರಾಣಗಳಿವೆ. ನೂರಾರು ರೀತಿಯ ರಮಾಯಣ ಇರುವಂತೆಯೇ ಅಸಂಖ್ಯ ವಿಧದಲ್ಲಿ ದೇವೀ ಕತೆಯೂ ಇದೆ. ಆದರೆ ಸಾಮಾನ್ಯವಾಗಿ ನಮಗೆ ಪರಿಚಿತವಾದುದು ವಾಲ್ಮೀಕಿ ರಾಮಾಯಣ ಹಾಗೂ ವೇದವ್ಯಾಸರು ಸಂಕಲಿಸಿದರೆಂದು ಹೇಳಲಾದ ದೇವೀಭಾಗವತ. ಇವಲ್ಲದೇ ಇವುಗಳ ಪಠ್ಯ ಉಪ ಪಠ್ಯಗಳು ಎಷ್ಟಿವೆ ಎಂಬ ಲೆಕ್ಕಾಚರವಿಲ್ಲ. ಆದರೆ ಇವೆಲ್ಲ ಸೇರಿ ನಮ್ಮ ದೇಶದಲ್ಲಿ ಸಮೃದ್ಧ ಸಂಪ್ರದಾಯ, ಆಚರಣೆ, ಕಲೆ ಸಂಗೀತಗಳನ್ನು ಸೃಷ್ಟಿಸಿವೆ ಎಂಬುದು ಸುಳ್ಳಲ್ಲ. ಇವೆಲ್ಲವುಗಳನ್ನು ನೆನಪಿಸಿಕೊಳ್ಳುವ ಸಂದರ್ಭ ಮೈಸೂರಿನ ಉತ್ಸವ. ಬಿಟ್ಟರೆ ಎಂದೋ ಬಿದ್ದುಹೋದ ಆರ್ಯ, ದ್ರಾವಿಡ ಸಿದ್ಧಾಂತ ಸ್ಥಾಪಿಸುವುದಲ್ಲ.
ಪಾಶ್ಚಾತ್ಯ ಸಂಪ್ರದಾಯ ವಿರೋಧಿ ಧೋರಣೆಯೇ ವೈಚಾರಿಕತೆ ಎಂದು ಭ್ರಮಿಸುವ ಚಿಂತಕರು ಒಂದು ವಿಷಯವನ್ನು ಗಮನಿಸುವುದಿಲ್ಲ. ಕೇವಲ ವಿರೋಧ ದಿಂದ ಪ್ರತಿ ಸೃಷ್ಟಿ ಆಗುವುದಿಲ್ಲ. ಅವರೆಲ್ಲ ತಮ್ಮ ವಿರೋಧದ ನಿಲುವಿಗೆ ಇದು ಮುರಿದು ಕಟ್ಟುವ ಕೆಲಸ ಎಂದು ಕರೆದುಕೊಳ್ಳುತ್ತಾರೆ. ಆದರೆ ಸದ್ಯ ಅವರು ಮಾಡುತ್ತಿರುವುದು ಕೇವಲ ಮುರಿಯುವ ಕೆಲಸವೇ ವಿನಾ ಕಟ್ಟುವುದು ಅಲ್ಲೇನೂ ಕಾಣುವುದಿಲ್ಲ. ಕಟ್ಟುವುದೆಂದರೆ ಅದು ಸೃಜನಶೀಲ ಕೆಲಸವಾಗಬೇಕು. ದೇವನೂರರ ಸಾಹಿತ್ಯವನ್ನು ನೋಡಿ. ಅವರು ಕೇವಲ ಸ್ಥಾಪಿತ ಪುರಾಣ ಪಠ್ಯಗಳನ್ನು ವಿರೋಧಿಸುವ ಬದಲಾಗಿ ದಲಿತ ಪುರಾಣಗಳನ್ನು ಕುಸುಮಬಾಲೆ ಹಾಗೂ ಒಡಲಾಳಗಳ ಮೂಲಕ ನೀಡಿದರು. ಅಂತೆಯೇ ಕೆ. ಬಿ. ಸಿದ್ದಯ್ಯನವರು ಗಲ್ಲೆಬಾನಿ, ಬಕಾಲ, ದಕ್ಕಲ ಕಥೆ ಮತ್ತಿತರ ಸಾಹಿತ್ಯಗಳ ಮೂಲಕ ಕಟ್ಟುವ ಕೆಲಸ ಮಾಡಿದರು. ಕಟ್ಟುವುದೆಂದರೆ ಇಂಥ ಸೃಜನಶೀಲ ಕೆಲಸ. ಚಿಂತನೆಯ ಹೆಸರಲ್ಲಿ ಎಲ್ಲ ಸ್ಥಾಪಿತ ಕ್ರಮಗಳನ್ನು ಮುರಿಯುವ ಕಡೆ ಹೀಗೆ ಕಟ್ಟುವ ಕೆಲಸ ನಡೆಯುತ್ತದೆಯಾ ಇಲ್ಲ. ಅಲ್ಲಿ ನಡೆಯುವುದು ಕೇವಲ ಮುರಿಯುವ ಇದ್ದುದನ್ನು ಹಾಳುಮಾಡುವ ಕೆಲಸ. ನಮ್ಮಿಂದಾದುದು ಇಷ್ಟು. ಉಳಿದುದನ್ನು ಮುಂದಿನವರು ಮಾಡಬೇಕು ಅನ್ನುವುದು ಅಂಥವರ ಸಹಜ ಉತ್ತರ. ಸಮಾಜಕ್ಕೆ, ಸಂಸ್ಕೃತಿಗೆ ಇಷ್ಟು ಸಾಕಾಗುವುದಿಲ್ಲ.

ಈಗ ಈ ಮಹಿಷ ಮಂಡಲೋತ್ಸವದ ಕತೆ ನೋಡಿ. ಇಲ್ಲಿರುವುದು ಬರೀ ವಿರೋಧ, ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ಏನಾದರೂ ಅವರ ಬಳಿ ಇದೆಯಾ? ಇರುವುದೆಲ್ಲ. ಪಾಶ್ಚಾತ್ಯರ ತರ್ಕ ಸರಣಿ. ಸಂಪ್ರದಾಯ ವಿರೋಧಕ್ಕೆ ಬೇಕಾದ ಒಂದಿಷ್ಟು ಸಂಗತಿಗಳು. ಸಾಂಪ್ರದಾಯಿಕ ದಸರಾ ನೋಡಿ. ಅದರ ಆಚರಣೆ, ಕಲೆ ಸಂಗೀತಗಳ ವ್ಯಾಪ್ತಿ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್ ಹೀಗೆ ಎಲ್ಲ ಕಡೆಯಲ್ಲೂ ಭಿನ್ನ ಭಿನ್ನ ವೈಭವೋಪೇತ, ಅಲ್ಲಿನ ಜನ ಇವಕ್ಕೆ ಸಾವಿರಾರು ವರ್ಷಗಳ ಸಂಪ್ರದಾಯ ತೋರಿಸುತ್ತಾರೆ. ಆದರೆ ಇವನ್ನು ವಿರೋಧಿಸುವವರ ದೃಷ್ಟಿಯಲ್ಲಿ ಇವೆಲ್ಲ ಕೇವಲ ಮೌಢ್ಯ. ಆಗಲಿ ನೀವು ಕೂಡ ಇಂಥ ಮೌಢ್ಯಗಳನ್ನೇ ಜನ ಪರಿಪಾಲಿಸುವಂತೆ ರೂಪಿಸಿಕೊಡಿ ಅಂದರೆ ಇಲ್ಲ. ಸಮಸ್ಯೆ ಇರುವುದೇ ಇಲ್ಲಿ. ನಂಬಿಕೆ ಮತ್ತು ಮೌಢ್ಯಗಳನ್ನು ನಾವು ನಮ್ಮ ಬುದ್ಧಿಯ ನೇರಕ್ಕೆ ಹೇಳಿಕೊಳ್ಳಬಹುದು. ಒಬ್ಬನ ನಂಬಿಕೆ ಮತ್ತೊಬ್ಬನಿಗೆ ಮೌಢ್ಯವಾಗಬಹುದು. ಇದಕ್ಕೆ ಸಾರ್ವತ್ರಿಕ ನಿಯಮವಿಲ್ಲ. ಸಮಾಜ-ಸಂಸ್ಕೃತಿಯ ವಿಷಯದಲ್ಲಿ ವೈವಿಧ್ಯ ಬರುವುದೇ ಇಲ್ಲಿ. ಅದೇ ಸಾಂಸ್ಕೃತಿಕ ಸಮೃದ್ಧಿ. ಅದರ ಕೊರತೆ ವಿರೋಧಿಗಳಲ್ಲಿದೆ. ಇಂಥ ಬಲಿಷ್ಠ ಸಿದ್ಧತೆ ಮಾಡಿಕೊಂಡು ಸಂಪ್ರದಾಯವನ್ನು ಮುರಿಯಲು ಮುಂದಾಗಬೇಕು ಆಗ ಅದಕ್ಕೆ ಅರ್ಥ ಬರುತ್ತದೆ. ಸುಮ್ಮನೇ ವಿರೋಧ ಅಂದರೆ ಸಮಾಜ ಅದಕ್ಕೆ ಪರ್ಯಾಯ ಕೇಳುತ್ತದೆ. ಅದನ್ನು ಕೊಡುವವರು ಯಾರು? ಮೈಸೂರು ಗಸರಾದಲ್ಲಿ ನಡೆಯುವ ಸಾಂಸ್ಕೃತಿಕ ವೈವಿಧ್ಯವನ್ನು ಗಮನಿಸಿ. ಅಂಥ ಪರ್ಯಾಯವನ್ನು ವಿರೋಧಿಗಳು ಕೊಡಬಲ್ಲರಾ? ಆಗ ಮತ್ತೆ ಅವರು ನಮ್ಮ ಸಂಪ್ರದಾಯಕ್ಕೆ ಹಿಂದಿರುಗಬೇಕಾಗುತ್ತದೆ. ಸಾಂಪ್ರದಾಯಿಕ ದಸರಾ ಹಿಂದುಳಿದವರ, ಶೋಷಿತರ ಮೇಲಿನ ದೌರ್ಜನ್ಯದ ವೈಭವೀಕರಣ ಅನ್ನುತ್ತಾ ಆರ್ಯ ದ್ರಾವಿಡ ವಾದ ಮುಂದೆ ಮಾಡುವವರು ಆ ವಾದ ಈ ಪ್ರಪಂಚದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡು ಬಹಳ ಕಾಲವಾಯ್ತು ಎಂಬುದರ ಅರಿವಿಲ್ಲ, ಸದ್ಯ ನಾವೆಲ್ಲ ವೈಜ್ಞಾನಿಕ ದಾಖಲೆಗಳ ಆಧಾರದಲ್ಲಿ ಬದುಕುತ್ತಿದ್ದೇವೆ. ಅದೇ ವಿಜ್ಞಾನ ಆರ್ಯ-ದ್ರಾವಿಡ ವಾದಕ್ಕೆ ಅರ್ಥವಿಲ್ಲ ಎಂದು ಸಾಧಿಸಿದೆ. ಬಹಳ ಕಾಲವಾಯ್ತು. ಆದರೂ ಆರ್ಯ-ದ್ರಾವಿಡ ವಾದದ ಮೂಲಕ ತಮ್ಮ ಅಸ್ತಿತ್ವ ಕಂಡುಕೊಂಡವರು ಇವನ್ನೆಲ್ಲ ಕೇಳಿಸಿಕೊಳ್ಳಲು ತಯಾರಿಲ್ಲ.ವ್ಯಂಗ್ಯ ನೋಡಿ- ಸಂಸ್ಕೃತ ಆರ್ಯ ಭಾಷೆ. ಅದು ದ್ರಾವಿಡ ಭಾಷೆಗಳ ಮೇಲೆ ದಬ್ಬಾಳಿಕೆ ಮಾಡಿದೆ ಅನ್ನುವ ಈ ಚಿಂತಕರು ತಮ್ಮ ಪರ್ಯಾಯ ಅನ್ನಲಾದ ಉತ್ಸವಕ್ಕೆ ಮಹಿಷ ಮಂಡಲೋತ್ಸವ ಎಂಬ ಪಕ್ಕ ಸಂಸ್ಕೃತ ಹೆಸರು ಕೊಟ್ಟುಕೊಂಡಿದ್ದರೆ, ಸಂಪ್ರದಾಯಕ್ಕೆ ವಿರುದ್ಧ ದಸರಾ ಮಾಡುತ್ತೇವೆ ಅನ್ನುವ ಇವರಿಗೆ ಕಳೆದ ನಾಲ್ಕಾರು ವರ್ಷಗಳಿಂದ ವಿರೋಧಿಸುವ ಉತ್ಸಾಹ ಮಾತ್ರವಿದೆಯೇ ವಿನಾ ಸಾಂಪ್ರದಾಯಿಕ ದಸರಾ ಕೊಡುವಂತೆ ಅದಕ್ಕೆ ಪರ್ಯಾಯವಾದ ಕಲೆ ಸಂಸ್ಕೃತಿಗಳ ವೈಭವ ಕೊಡಲು ಸಾಧ್ಯವಾಗಿಲ್ಲ. ತಮಗೆ ಸಮಾಜ- ಜನತೆ ಬೆಂಬಲ ಕೊಡುತ್ತಿಲ್ಲವೆಂದರೆ ಅದಕ್ಕೆಲ್ಲ ಪುರೋಹಿತಶಾಹಿ ಕಾರಣ ಎಂಬುದಷ್ಟೇ ಗೊತ್ತಿದೆಯೇ ವಿನಾ ಉಪಯುಕ್ತ ಪರ್ಯಾಯವೆನಿಸಿದರೆ ಸಮಾಜ ಯಾವಾಗಲೂ ತನ್ನ ತೋಳು ಬಿಚ್ಚಿ ಆ ವಿಷಯವನ್ನು ಸ್ವಾಗತಿಸುತ್ತದೆ ಎಂಬುದು ತಿಳಿದಿಲ್ಲ. ಉದಾಹರಣೆಗೆ ಹೆಚ್ಚು ಸಂಕೀರ್ಣ ವಿಷಯ ಬೇಡ. ನಮ್ಮ ಬಟ್ಟೆ ಬರೆಯನ್ನೇ ನೋಡಿ. ಶತಮಾನಗಳ ಕಾಲ ಸೀರೆ ಪಂಚೆ ತೊಡುತ್ತಿದ್ದ ಸಮಾಜದ ಜನ ಅಗತ್ಯಕ್ಕೆ ತಕ್ಕಂತೆ ಪ್ಯಾಂಟು-ಶರಟು, ಚೂಡಿದಾರ್ ಗಳನ್ನು ಧರಿಸುತ್ತಿದೆ. ಸಾಂಪ್ರದಾಯಿಕ ದಸರಾ ಉತ್ಸವಕ್ಕೆ ಭವ್ಯವಾದ ಇತಿಹಾಸ ಇರುವಂತೆ ಭವ್ಯ ಆಧುನಿಕತೆಯೂ ಸೇರಿಕೊಂಡಿದೆ. ಒಮ್ಮೆ ದಸರಾ ಉತ್ಸವ ಕಂಡು ಅನುಭವಿಸಿದವರು ಕೇಳುವ ಮಾತು ಇಷ್ಟೇ-ಇಲ್ಲಿ ಏನುಂಟು ಏನಿಲ್ಲ ಎಂದು. ಈ ಕಾರಣಕ್ಕಾಗಿ ಯಾರು ಏನೇ ಹೇಳಿದರೂ ಸಮಾಜ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಈ ಪರ್ಯಾಯ ಉತ್ಸವದಲ್ಲಿ ಅಸೂಯೆ ಬಿಟ್ಟರೆ ಅದಕ್ಕೆ ಬೇರೇನೂ ಕಾಣುತ್ತಿಲ್ಲ. ಸಾಂಪ್ರದಾಯಿಕ ದಸರಾಕ್ಕೆ ಪರ್ಯಾಯವಾಗಿ ಅದಲ್ಕೆ ಸಮಾನ ಅನಿಸುವ ಅಥವಾ ಪುಆðಯ ಭವ್ಯ ಸಂಸ್ಕೃತಿ ಕಲೆಗಳನ್ನು ಇತ್ಯಾದಿಗಳನ್ನು ತೆರೆದು ತೋರಿಸಲಿ. ಆಗ ಸಮಾಜ ಸಹಜವಾಗಿ ಯಾವ ಕಡೆ ಹೋಗುತ್ತದೆ ನೋಡೋಣ.
No comments:
Post a Comment