ಗುರುವಿನ ಘನತೆ ಕುಸಿಯಲು ಕೇವಲ ಶಿಷ್ಯ ಅಥವಾ ಸಮಾಜ ಮಾತ್ರ ಕಾರಣವಲ್ಲ, ಮುಖ್ಯವಾಗಿ ಸ್ವತಃ ಗುರು ಅಥವಾ ನಾವಿಂದು ಕರೆಯುವ ಶಿಕ್ಷಕ ಕೂಡ ಹೆಚ್ಚು ಕಾರಣ. ಇದಕ್ಕೆ ನಿತ್ಯ ನಿದರ್ಶನಗಳು ನಮ್ಮ ಸುತ್ತ ದೊರೆಯುತ್ತವೆ. ಇಂದು ಶಿಕ್ಷಕರು ಮಾಡದ ಅನಾಚಾರವಿಲ್ಲ, ಶಿಕ್ಷಕನಿಗೇ ಇಲ್ಲಸ ಆಚಾರ ಬೇರೆಯವರಿಗೆ ಹೇಳಲು ಇನ್ನೆಲ್ಲಿ? ಆದರೆ ಕೆಲವು ಗುರುಗಳು ಇರುತ್ತಾರೆ ಅವರು ಹೇಳುವಂತೆ 'ನಾನು ಹೇಳಿದ್ದನ್ನು ಮಾಡು, ಮಾಡಿದ್ದನ್ನಲ್ಲ', ಎಂಬಂತೆ ಇರುತ್ತದೆ. ಅವರು ಮಾಡುವುದೇ ಬೇರೆ, ಹೇಳುವುದೇ ಬೇರೆ, ಎರಡಕ್ಕೂ ಸಂಬಂಧ ಇರಬೇಕಿಲ್ಲ ಎಂಬುದು ಅಂಥವರ ತರ್ಕ. ಆದರೆ ಕಲಿಕೆ ಕೇಳಿದ್ದು, ನೋಡಿದ್ದು ಮಾಡಿದ್ದರಿಂದ ಬರುತ್ತದೆ ಅಂದಾಗ, ಇವುಗಳ ಮಧ್ಯೆ ನೇರ ಸಂಬಂಧವಿದೆ ಎಂದು ತಿಳಿಯುತ್ತದೆ. ಎಂತೆಂಥ ಶಿಕ್ಷಕರಿದ್ದಾರೆ, ಅಸಹ್ಯವಾಗಬೇಕು, ತಮ್ಮ ಬಳಿ ಕಲಿಯಲು ಬಂದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು, ಮೋಸ ಮಾಡುವುದು, ವಂಚಿಸುವುದು ಇತ್ಯಾದಿ. ಇವರೆಲ್ಲ ಅಕಸ್ಮಾತ್ ಶಿಕ್ಷಕ ಹುದ್ದೆಗೆ ಬಂದವರು, ಅದು ಅವರ ಮೊದಲ ಹಾಗೂ ಅಂತಿಮ ಆಯ್ಕೆ ಆಗಬೇಕಿಲ್ಲ. ಆರಾಮವಾಗಿ ಇರಬಹುದೆಂಬ ಕಾರಣಕ್ಕೆ ಬಹುತೇಕರು ಶಿಕ್ಷಕ ಹುದ್ದೆಗೆ ಬಂದು ಕೂರುತ್ತಾರೆ. ನನ್ನ ಪರಿಚಯಸ್ಥರೊಬ್ಬರಿದ್ದರು, ಅವರು ಬಸ್ ಚಾಲಕ, ಲಿಡ್ಕರ್ ಚಪ್ಪಲಿ ಅಂಗಡಿಯಿಂದ ಹಿಡಿದು ಸಿಕ್ಕಸಿಕ್ಕ ಹುದ್ದೆಗಳಿಗೆ ಯತ್ನಿಸಿ ಕೊನೆಗೆ ಶಿಕ್ಷಕ ಹುದ್ದೆಗೆ ಅರ್ಜಿಸಲ್ಲಿಸಿ ಆಯ್ಕೆ ಆಗಿ ಸುಖವಾಗಿದ್ದಾರೆ. ಒಟ್ಟಿನಲ್ಲಿ ಯಾವುದಾದರೂ ಸರಿ. ಸರ್ಕಾರದ ಕಾಯಂ ವೇತನ ಸುಖವಾಗಿ ಬರುವ ಯಾವುದಾದರೂ ವೃತ್ತಿ ಸರಿ ಅನ್ನುವವರು ಶಿಕ್ಷಕರಾದರೆ ಅಂಥವರಿಂದ ಸಮಾಜ ಏನು ನಿರೀಕ್ಷಿಸಬಹುದು? ದುರಂತಕ್ಕೆ ನಮ್ಮ ಇಂದಿನ ಸಮಾಜದಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದ ಹಂತದವರೆಗೆ ಇಂಥವರೇ ಹೆಚ್ಚಿದ್ದಾರೆ. ಶಿಕ್ಷಕರು ಮಾದರಿಯಾಗಿರಬೇಕು ಎಂಬುದು ಮಾದರಿ ಅಥವಾ ಆದರ್ಶದ ಮಾತೇ ಆಗುತ್ತಿದೆ.
ಆದರೆ ಇದರಿಂದ ನಾವು ನಿರಾಶರಾಗಬೇಕಿಲ್ಲ, ನಮ್ಮ ನಡುವೆ ಇಂದಿನ ಕಾಲದಲ್ಲೂ ಆದರ್ಶ ಬಿತ್ತಿಹೋದ ಬಿತ್ತುತ್ತಿರುವ ಶಿಕ್ಷಕರಿದ್ದಾರೆ. ಹಿರಿಯರ ನಿದರ್ಶನ ನೋಡುವುದಾದರೆ ಟಿ ಎಸ್ ವೆಂಕಣ್ಣಯ್ಯ ಹಾಗೂ ಅವರ ಸಹೋದರ ಟಿ ಎಸ್ ಶ್ಯಾಮರಾವ್ ಅವರ ಬದುಕನ್ನು ನೋಡಬಹುದು. ಅವರು ತಮ್ಮ ಪ್ರಾಮಾಣಿಕ ಸಂಪಾದನೆಯ ಬಹುಪಾಲನ್ನು ವಿದ್ಯಾರ್ಥಿಗಳ ಊಟೋಪಚಾರಕ್ಕೆ ಮೀಸಲಿಡುತ್ತಿದ್ದರು. ಕನ್ನಡದ ಶ್ರೇಷ್ಠ ಸಾಹಿತಿ ಕುವೆಂಪು ಅವರಿಗೆ ಎಲ್ಲ ರೀತಿಯಲ್ಲೂ ಆಸರೆ ಆದವರು ವೆಂಕಣ್ಣಯ್ಯನವರು. ಶ್ಯಾಮರಾಯರು ನವೋದಯ ಕಾಲದ ಹಳೆ ಮೈಸೂರು ಪ್ರದೇಶದ ಎಲ್ಲ ಸಾಹಿತಿಗಳಿಗೂ ಉಪಚರಿಸಿದವರು. ಈಗಲೂ ಇಂಥ ಮಾದರಿಗಳಿವೆ. ಇವರೆಲ್ಲ ನಾಡಿನಾದ್ಯಂತ ಹರಡಿದ್ದಾರೆ. ಆದರೆ ಚಂದಿರ ಎಷ್ಟೇ ಚೆನ್ನಾಗಿ ಹೊಳೆಯಲಿ ಅವನ ಮೇಲೆ ಇರುವ ಸಣ್ಣ ಕಪ್ಪು ಚುಕ್ಕೆ ಎದ್ದು ಕಾಣುವಂತೆ ಶಿಕ್ಷಕ ವೃತ್ತಿಯಲ್ಲಾಗುವ ಸಣ್ಣ ದೋಷವೂ ಬೃಹತ್ತಾಗಿ ಕಾಣುತ್ತದೆ. ಏಕೆಂದರೆ ಅದರ ಪರಿಣಾಮ ಅಂಥದ್ದು. ನಮ್ಮ ಸಮಾಜದಲ್ಲಿ ಸಾವಿರಾರು ವೃತ್ತಿಗಳಿವೆಯಾದರೂ ಅವರನ್ನೆಲ್ಲ ಮೂಲತಃ ರೂಪಿಸುವವರು ಶಿಕ್ಷಕರೇ ಆಗಿದ್ದಾರೆ, ಹಾಗಾಗಿ ಶಿಕ್ಷಕರ ಸ್ಥಾನಕ್ಕೆ ಅಷ್ಟು ಮಹತ್ವ. ಅನ್ಯ ವೃತ್ತಿಗೆ ಜವಾಬ್ದಾರಿ ಇಲ್ಲವೆಂದಲ್ಲ, ಆದರೆ ಅನ್ಯ ವೃತ್ತಿಗಳು ಆಯಾ ನಿರ್ದಿಷ್ಟ ಸಂದರ್ಭಕ್ಕೆ ಸಂಬಂಧಿಸಿವೆ. ಒಬ್ಬ ದರ್ಜಿ ಕೆಟ್ಟದಾಗಿ ಬಟ್ಟೆ ಹೊಲಿದರೆ ಆ ಬಟ್ಟೆ ಮಾತ್ರ ಕೆಡುತ್ತದೆ, ಒಬ್ಬ ವಕೀಲ ತನ್ನ ವಾದದಲ್ಲಿ ಸೋತರೆ ಆ ಪ್ರಕರಣ ಸೋಲುತ್ತದೆ, ವೈದ್ಯನ ಕೆಟ್ಟ ಚಿಕಿತ್ಸೆಯಿಂದ ಆ ರೋಗಿಯೊಬ್ಬನ ಮೇಲೆ ಮಾತ್ರ ಪರಿಣಾಮವಾಗುತ್ತದೆ. ಆದರೆ ಶಿಕ್ಷಕ ಕೆಟ್ಟದಾಗಿ ಪಾಠ ಮಾಡಿದರೆ ಅದು ನೂರಾರು ಮಕ್ಕಳನ್ನು ಜೊತೆಗೆ ತಲೆಮಾರುಗಳನ್ನೂ ಕೆಡಿಸುತ್ತದೆ. ಆದ್ದರಿಂದಲೇ ಶಿಕ್ಷಕರನ್ನು ದೇಶಟ್ಟುವವರು ಎಂದು ಕರೆಯುವುದು. ದೇಶ ಕಟ್ಟಲು ರೈತನಾದಿಯಾಗಿ ಎಲ್ಲರೂ ಅನಿವಾರ್ಯ, ಆದರೆ ಗುರುವಿನ ಸ್ಥಾನ ಇವೆಲ್ಲಕ್ಕಿಂತ ದೊಡ್ಡದೆಂದು ಹಿರಿಯರು ಹೇಳುತ್ತಾರೆ. ತಾಯಿ ನಮ್ಮೆಲ್ಲರಿಗೂ ಮೊದಲ ಗುರು. ಆಕೆ ನಡೆಯುವ, ಉಣ್ಣುವ, ಇತ್ಯಾದಿ ಮನುಷ್ಯನ ಅಗತ್ಯದ ಎಲ್ಲ ಮೊದಲುಗಳನ್ನೂ ಮೊದಲು ಕಲಿಸುತ್ತಾಳೆ. ಹಾಗಾಗಿ ತಾಯಿ ತಾನೆ ಮೊದಲ ಗುರು? ಅನ್ನುವುದು. ಇದರಲ್ಲಿ ಅಪ್ಪನ ಪಾಲೂ ಇದೆ. ಇಲ್ಲಿ ತಾಯಿ ಅಂದರೆ ಪೋಷಕರು. ಒಬ್ಬ ಗುರು ಅನೇಕ ತಲೆಮಾರುಗಳವರೆಗೆ ಇರಬಲ್ಲ, ನಮ್ಮ ಮುತ್ತಜ್ಜ ಹೇಳುತ್ತಿದ್ದ, ಅವನ ಅಜ್ಜನಿಗೆ ಒಬ್ಬರು ಗುರುಗಳಿದ್ದರಂತೆ ಎಂದು ವ್ಯಕ್ತಿಯೊಬ್ಬ ತನ್ನ ಮೊಮ್ಮಕ್ಕಳಿಗೆ ಹೇಳಬಹುದು. ಆ ಮೊಮ್ಮಗು ಇದನ್ನು ತನ್ನ ಮೊಮ್ಮಕ್ಕಳಿಗೆ ದಾಟಿಸಬಹುದು. ಇಂಥ ಸಾಧ್ಯತೆ ಬೇರೆ ವೃತ್ತಿಗಳಲ್ಲಿ ಕಷ್ಟ. ಶಿಕ್ಷಕರಾದವರ ಅನುಭವಗಳು ತಮಾಷೆಯಾಗಿರುತ್ತವೆ. ನನ್ನದೇ ಸಣ್ಣ ಉದಾಹರಣೆ ಕೊಡುತ್ತೇನೆ. ನಾಲ್ಕಾರು ವರ್ಷಗಳ ಹಿಂದೆ ಬೆಂಗಳೂರಿನ ಮೆಟ್ರೋದಲ್ಲಾದ ಘಟನೆ, ಜನರಿಂದ ರೈಲು ತುಂಬಿತ್ತು. ನಿಲ್ಲಲೂ ಜಾಗವಿಲ್ಲ. ಅಂಥಾದ್ರಲ್ಲಿ ಅಲ್ಲೆಲ್ಲೋ ಮೂಲೆಯಲ್ಲಿದ್ದ ವ್ಯಕ್ತಿಯೊಬ್ಬ ಎದ್ದು ತಾನು ಕುಳಿತಿದ್ದ ಸ್ಥಳವನ್ನು ಕರೆದು ಕೊಟ್ಟ ಮುಜುಗರದಿಂದ ಪಡೆದು ಯಾಕಪ್ಪಾ ಎಂದು ಕೇಳಿದೆ. ಸಾರ್ ನೀವು ೧೯೯೦ರಲ್ಲಿ ನನಗೆ ಮೈಸೂರಲ್ಲಿ ಮೇಷ್ಟ್ರಾಗಿದ್ದೀರಿ, ನಾನು ಈಗ ಇಂಥ ವೃತ್ತಿ ಮಾಡುತ್ತಿದ್ದೇನೆ ಎಂದೆಲ್ಲ ಹೇಳಿಕೊಂಡ. ಸಾರ್ಥಕ ಅನಿಸಿತು. ಮತ್ತೊಮ್ಮೆ ಹುಡುಗನೊಬ್ಬ ಹುಡುಗಿಯೊಂದಿಗೆ ಮಾಲ್ ಒಂದರಲ್ಲಿ ಅಲ್ಲಿ ಇಲ್ಲಿ ನುಸುಳುತ್ತ ಕರೆದೊಯ್ಯುತ್ತಿದ್ದ. ಅಕಸ್ಮಾತ್ ಎದುರು ಬಂದ. ನಾಚಿ ನೀರಾದ. ಏನಪ್ಪ ಅಂದೆ. ಸರ್ ನೀವು ನನ್ನ ಮೇಷ್ಟಾçಗಿದ್ದಿರಿ ಎಲ್ಲಿ ಯಾವಾಗ ಅಂತೆಲ್ಲ ಒಂದೇ ಉಸುರಿಗೆ ಒದರಿದ. ಸರ್ ಅದು ಇವರು ನನ್ನ ಕಸಿನ್ ಅಂದ. ಆಯ್ತು ಏನೀಗ ಅಂದೆ. ಅವರಿಬ್ಬರು ಪ್ರೇಮಿಗಳು ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿತ್ತು. ಆದರೆ ಆತ ನನ್ನ ಮುಂದೆ ಹೀಗೇಕೆ ಮಾಡಿದ? ನನ್ನ ಬದಲು ಒಬ್ಬ ದರ್ಜಿ ಅಥವಾ ವೈದ್ಯ ಇದ್ದಿದ್ದರೆ ಆತ ಹೀಗೆ ಮಾಡುತ್ತಿದ್ದನೇ ? ಇಂಥ ¸ವೇಶಗಳು ಗುರು ಎಲ್ಲೆಲ್ಲಿ ಹೇಗೆಲ್ಲ ಜಾಗ ಪಡೆಯುತ್ತಾನೆ ಎಂದು ಹೇಳುತ್ತವೆ. ಒಬ್ಬೊಬ್ಬ ಶಿಕ್ಷಕನಲ್ಲೂ ಇಂಥ ಸಾವಿರ ನಿದರ್ಶನಗಳಿರಲು ಸಾಕು. ಇಂಥ ಗುರುಸ್ಥಾನ ಪಡೆದವರು ಒಂದರ್ಥದಲ್ಲಿ ಧನ್ಯರು. ಅವರಿಗೆಲ್ಲ ಸಾವಿರ ಸಾವಿರ ನಮನಗಳು.

No comments:
Post a Comment