Wednesday, 30 October 2024

ಸಹ್ಯಾದ್ರಿ ಒಡಲಿನ ಇನ್ನೊಂದು ವಿಚಿತ್ರ - ಮರಹಾವು

ಈಚೆಗೆ ಇಲ್ಲಿ ಸಹ್ಯಾದ್ರಿ ಒಡಲಿನ ದಾಟು ಬಳ್ಳಿಯ ಬಗ್ಗೆ ಓದಿದ್ದೆವು. ಈಗ ಅಲ್ಲಿನ ಅಂಥದ್ದೇ ಇನ್ನೊಂದು ವಿಚಿತ್ರದ ಬಗ್ಗೆ ಓದುವಾ. ಇದರ ಹೆಸರು ಮರಹಾವು. ಇದನ್ನು ಕಂಡವರಿಲ್ಲ. ಆದರೆ ಇದರ ಅನುಭವ ಆ ಭಾಗದ ದನಗಾಹಿಗಳಿಗೆ, ಕಾಡಿನ ಪರಿಚಯ ಇರುವವರಿಗೆ ಸಹಜವಾಗಿರುತ್ತದೆ. ಇದು ಕಲ್ಪನೆಯೂ ಇರಬಹುದು. ಆದರೆ ಸಹ್ಯಾದ್ರಿ ತಪ್ಪಲಿನಲ್ಲಿ ಹೆಚ್ಚಾಗಿ ಕಾಣುವ ಮಲೆನಾಡು ಗಿಡ್ಡ ತಳಿಯ ಜಾನುವಾರುಗಳ ಮೋಟು ಬಾಲದ ಹಿಂದೆ ಇದರ ಕತೆ ಅಂಟಿಕೊಂಡಿರುತ್ತದೆ. ಜಾನುವಾರುಗಳುಮುಕ್ತವಾಗಿ ಬಾಲ ಆಡಿಸುತ್ತಾ ಮೇಯುತ್ತಿದ್ದರೆ ಅಪರೂಪಕ್ಕೆ ಒಮ್ಮೊಮ್ಮೆ ಅವು ಯಾವುದಾದರೂ ಒಂದು ಮರದ ಬಳಿ ಅಂಟಿಕೊಂಡ ಬಾಲ ಬಿಡಿಸಿಕೊಳ್ಳಲು ಒದ್ದಾಡುತಿರುತ್ತವೆ. ಬಾಲವನ್ನು ಮರವೂ ಬಿಡುವುದಿಲ್ಲ, ಬಿಡಿಸಿಕೊಳ್ಳಲು ಒದ್ದಾಡುವುದನ್ನು ಜಾನುವಾರವೂ ನಿಲ್ಲಿಸುವುದಿಲ್ಲ. ಕೊನೆಗೆ ಜಾನುವಾರು ತುಂಡಾದ ಬಾಲ ಹೊತ್ತು ಹೊರಬರುತ್ತದೆ. ಹೀಗಾಗಿ ಸಹ್ಯಾದ್ರಿ ತಪ್ಪಲಲ್ಲಿ ಅಲ್ಲಲ್ಲಿ ತುಂಡು ಬಾಲದ ದನಗಳು ಕಂಡರೆ ಅದನ್ನು ಹಿಂಬಾಲಿಸಿ ಹೋಗಿ ಅದರ ಯಜಮಾನನನ್ನು ಮಾತಾಡಿಸಿದರೆ ಮರಹಾವಿನ ಕತೆ ಸಿಗುತ್ತದೆ. 


ನಮ್ಮ ಅಪ್ಪ ಹಲವಾರು ವರ್ಷಗಳ ಹಿಂದೆ ತಮ್ಮ ಜಾನುವಾರುಗಳನ್ನು ಮೇಯಿಸಲು ಕಾಡಿಗೆ ಒಯ್ದಾಗ ಒಂದು ಹಸು ಮರವೊಂದರ ಬಳಿ ಮರಕ್ಕೆ ಬಾಲ ತಗುಲಿಸಿಕೊಂಡು ಒದ್ದಾಡುತ್ತ ನಿಂತಿತ್ತಂತೆ. ಅಂತಿಮವಾಗಿ ಹಸು ತುಂಡು ಬಾಲ ಹೊತ್ತು ಓಡಿ ಬಂತು ಎಂದು ಹೇಳುತ್ತಿದ್ದರು. ಆ ತುಂಡು ಬಾಲದ ಹಸು ಬಹಳ ಕಾಲ ನಮ್ಮ ಮನೆಯಲ್ಲಿತ್ತು. ಅದನ್ನು ಕಂಡಾಗಲೆಲ್ಲ ಅದ್ಯಾವ ಮರಹಾವು ನೋಡಬೇಕು ಅನಿಸುತ್ತಿತ್ತು. ಅಪ್ಪನನ್ನು ಬಹಳ ಬಾರಿ ಕಾಡಿದ ಮೇಲೆ ಆ ಮರದ ಬಳಿ ಕರೆದೊಯ್ದಿದ್ದ. ಆಗ ಆ ಮರ  ಗೆದ್ದಲು ತಿಂದು ಅರ್ಧ ಬಿದ್ದು ಹೋಗಿತ್ತು. ಈಗ ಅದರ ಅವಶೇಷವೂ ಉಳಿದಿಲ್ಲ. ಆದರೆ ಊರಲ್ಲಿ ಅಲ್ಲಲ್ಲಿ ಮರಹಾವಿನ ಕತೆ ಕೇಳಿಸುತ್ತದೆ.

ಮೋಟು ಬಾಲದ ಎಮ್ಮೆ ಅಥವಾ ದನ ಈ ಕತೆ ಇದ್ದೇ ಇರುತ್ತದೆ. ದನ ಅಂತಲ್ಲ, ಕಂಬಳಿ ಹೊದ್ದು ರಾತ್ರಿ ವೇಳೆ ಜೇನು ಬೇಟೆಗೆ ಹೋಗುವ ಜನರಿಗೂ ತಮ್ಮನ್ನು ಏನೋ ಹಿಡಿದುಕೊಂಡ ಅನುಭವ ಆಗುತ್ತದೆಯಂತೆ. ಆಗ ಕಂಬಳಿಯನ್ನು ಅಲ್ಲೇ ಬಿಟ್ಟು ಅವರು ಬರುವುದಿದೆ. ಒಟ್ಟಿನಲ್ಲಿ ಕೂದಲಿನಂಥ ವಸ್ತು ತಗುಲಿದರೆ ಈ ಮರಹಾವು ಅದನ್ನು ಹಿಡಿದುಕೊಳ್ಳುತ್ತದೆ ಅನ್ನಲಾಗುತ್ತದೆ. ಇಂಥ ಸಂಗತಿ ಜಗತ್ತಿನಲ್ಲಿ ಬೇರೆ ಕಡೆ ಎಲ್ಲಾದರೂ ಇದೆಯಾ ಇದ್ದರೆ ಅದನ್ನು ಏನೆಂದು ಕರೆಯುತ್ತಾರೆ ಇತ್ಯಾದಿ ಮಾಹಿತಿಗಳು ಅಲಭ್ಯ. ಅಷ್ಟಕ್ಕೂ ಇದೆಂಥ ವಿದ್ಯಮಾನ ಅನ್ನುವುದೂ ತಿಳಿದುಬರುವುದಿಲ್ಲ. 

Saturday, 12 October 2024

ಜಂಬೂಸವಾರಿ ಹಿಂದೆ- ಮುಂದೆ


ಈಗ ಮೈಸೂರಲ್ಲಿ ದಸರಾ ಸಂಭ್ರಮ ಮಡುಗಟ್ಟಿದೆ. ಜಂಬೂ ಸವಾರಿಗೆ ಜನತೆ ಕಾಯುತ್ತಿದ್ದಾರೆ. ಇದಕ್ಕೆ ಇದರದೇ ಇತಿಹಾಸವಿದೆ. ಈ ನೆಪದಲ್ಲಿ ಅದನ್ನು ಅವಲೋಕಿಸೋಣ.

ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ನಡೆಯುತ್ತಿದ್ದ ದಸರಾ ಆಚರಣೆಯನ್ನು ಅಂದು ನಾಡ ಹಬ್ಬವಾಗಿ ವಿಜಯನಗರ ಅರಸರು ನಡೆಸುತ್ತಿದ್ದರು. ರಾಜ ಒಡೆಯರ್ ೧೬೧೦ರಲ್ಲಿ ಶ್ರೀರಂಗಪಟ್ಟಣದಲ್ಲಿ ಮೊದಲ ಬಾರಿ ದಸರಾ ನಡೆಸಿದರು. ೧೯೨೧ರಲ್ಲಿ ರಾಜ್ಯ ಸರ್ಕಾರ ಅರಸರ ಅಧಿಕಾರವನ್ನು ಹಿಂಪಡೆದ ಮೇಲೆ ರಾಜ್ಯ ಸರ್ಕಾರ ಸ್ವತಃ ಇದನ್ನು ನಡೆಸಿಕೊಂಡು ಬರುತ್ತಿದೆ.ವಿಜಯನಗರ ಕಾಲದಲ್ಲಿ ಮಹಾನವಮಿ ಎಂದು ಹೆಸರಾಗಿದ್ದ ಈ ಉತ್ಸವವನ್ನು ಮೈಸೂರು ಅರಸರು ಮೈಸೂರು ದಸರಾ ಎಂದು ಬದಲಿಸಿ ಆಚರಣೆಗೆ ತಂದರು. ಆ ಕಾಲದಲ್ಲಿ ನಡೆಯುತ್ತಿದ್ದ ಪ್ರಾರಂಭಿಕ ಪೂಜಾ ವಿಧಾನ ಇತ್ಯಾದಿಗಳು ಇಂದಿಗೂ ಹಾಗೆಯೇ ಇವೆ. ಆದರೆ ಮೆರವಣಿಗೆಯಲ್ಲಿನ ಜನಪದ ನೃತ್ಯ ಕುಣಿತ ಹಾಗೂ ಸ್ತಬ್ದ ಚಿತ್ರಗಳ ಪ್ರದರ್ಶನಗಳು ಶುರುವಾದುದು ೧೯೭೦ರಿಂದ ಈಚೆಗೆ. ಇದನ್ನು ಚಾಲ್ತಿಗೆ ತಂದು ನಮ್ಮ ಜನಪದ ಕ್ಷೇತ್ರಕ್ಕೆ ವೇದಿಕೆ ಕಲ್ಪಿಸಿದವರು ಜೀಶಂಪ ಅವರು. ಇದು ಎಷ್ಟು ಪ್ರಚಲಿತವೆಂದರೆ ಈಗ ಯಾವುದೇ ಊರಿನಲ್ಲಿ ಏನೇ ಹಬ್ಬದ ಮೆರವಣಿಗೆ ನಡೆದರೂ ಅಲ್ಲಿ ಇಂಥ ಪ್ರದರ್ಶನ ಸಾಮಾನ್ಯವಾಗಿದೆ.

ಮೈಸೂರು ದಸರಾ ಸಂಭ್ರಮವನ್ನು ಅಲ್ಲಿದ್ದೇ ಅನುಭವಿಸಬೇಕು. ಅಂಥ ಅವಕಾಶ ಕೆಲವು ವರ್ಷ ನನಗೆ ಲಭಿಸಿತ್ತು. ಅಲ್ಲಿ ಓದುವ ಕಾಲದಲ್ಲಿ ದಸರಾ ಬಂದಿತೆಂದರೆ ಎರಡು ದಿನ ಮುಂಚಿನಿಂದಲೇ ಏನೋ ಘನಕಾರ್ಯ ಇರುವವರಂತೆ ಅರಮನೆ ಸುತ್ತ ಹೋಗುವುದು, ಸುತ್ತಲಿನ ಚಟುವಟಿಕೆಗಳನ್ನು ಗಮನಿಸುವುದು ಮಾಡುತ್ತಿದ್ದೆವು. ಹಾಗೆಯೇ ಇದ್ದಬಿದ್ದ ದಿನಪತ್ರಿಕೆಗಳನ್ನು ತಿರುವಿಹಾಕಿ ದಸರಾ ಕಾರ್ಯಕ್ರಮಗಳ ಲಿಸ್ಟ ನೋಡುವುದು, ಯಾವುದಕ್ಕೆಲ್ಲ ಯಾವಾಗ ಹೋಗುವುದೆಂದು ಪ್ಲಾನ್ ಮಾಡುವುದು ನಡೆಯುತ್ತಿತ್ತು. ಜೊತೆಗೆ ಯಾರೂ ಇಲ್ಲದಿದ್ದರೂ ಅಲ್ಲಿ ಹೋಗುವುದೇ. ಅನಂತರ ಕಡ್ಡಾಯವಾಗಿ ಹೋಗುವುದು ಮೆರವಣಿಗೆ ನೋಡಲು. ಇದಕ್ಕಂತೂ ಎರಡು ಮೂರು ದಿನಗಳ ತಯಾರಿ ಮೆರವಣಿಗೆ ಸಾಗುವ ಕೆ ಆರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಬನ್ನಿ ಮಂಟಪತನಕ ಎಲ್ಲಿ ನಿಲ್ಲುವುದು ಅಥವಾ ಕೂರುವುದು ಎಂಬ ಭಾರೀ ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ಆ ಮಾರ್ಗದ ಯಾವುದಾದರೂ ಅಂಗಡಿಯವರನ್ನೋ ಮನೆಯವರನ್ನೋ ಕಾಡಿಬೇಡಿ ಜಾಗ ಕಾದಿರಿಸುವ ಯತ್ನಗಳೂ ನಡೆಯುತ್ತಿದ್ದವು. ಮೆರವಣಿಗೆ ದಿನ ದಸರಾ ಆನೆಗಳಿಗಿಂತ ಮೊದಲೇ ತಯಾರಾಗಿ ನಿಗದಿತ ಜಾಗ ತಲುಪಿದರೆ ಅಷ್ಟರಲ್ಲೇ ಅಲ್ಲಿ ಮತ್ಯಾರೋ ಚಾಪೆ ಹಾಕಿರುತ್ತಿದ್ದರು. ಬೆಳಿಗ್ಗೆ ಹೊತ್ತಾರೆ ಎದ್ದು ಇದೇ ಕೆಲಸ ಆ ದಿನ. ಬಹುತೇಕ ಬಾರಿ ನಮ್ಮ ನಿಗದಿತ ಜಾಗ ಸಿಗುತ್ತಿರಲಿಲ್ಲ. ಸಿಕ್ಕ ಜಾಗದಲ್ಲಿ ಬೆಳಗ್ಗಿನಿಂದ ಕಾಯ್ದು ಅಂಬಾರಿ ಹೋಗುವ ತನಕ ಇದ್ದು ಅದಕ್ಕೊಂದು ನಮಸ್ಕಾರ ಹಾಕುವತನಕ ಈ ವಿಧಿಗೆ ಮುಕ್ತಾಯ ಇರುತ್ತಿರಲಿಲ್ಲ. ಕೆಲವೊಮ್ಮೆ ಅಂಬಾರಿಯನ್ನು ಬೆನ್ನಟ್ಟಿ ಬನ್ನಿ ಮಂಟಪತನಕ ಹೋಗುವುದು ಅಲ್ಲಿ ಕವಾಯತು ನೋಡಲಾಗದೆ ಸಪ್ಪೆ ಮೋರೆ ಹೊತ್ತು ಬರುವುದು ಅನೇಕ ಬಾರಿ ಆಗಿದೆ. ಪರವಾಗಿಲ್ಲ. ಮತ್ತೆ ಮುಂದಿನ ವರ್ಷ ನೋಡುವಾ ಅಂದುಕೊಂಡು ಅಷ್ಟಕ್ಕೇ ಸಮಾಧಾನ ಪಟ್ಟಿದ್ದಕ್ಕೆ ಎಲ್ಲ ೨೦ ವರ್ಷಗಳ ದಾಖಲೆ ಇದೆ. ಒಮ್ಮೆ ಹಾಗೂ ಹೀಗೂ ಪಂಜಿನ ಕವಾಯತು ನೋಡಲು ಪಾಸ್ ಸಿಕ್ಕಿತ್ತು. ಅಂಬಾರಿ ಜೊತೆಗೆ ಕೆ ಆರ್ ವೃತ್ತದಿಂದ ಬನ್ನಿ ಮಂಟಪದ ತನಕ ಓಡಿದರೆ ಇನ್ನೇನು ಕವಾಯತು ಶುರುವಾಗಬೇಕು. ಜೋರಾಗಿ ಮಳೆ. ಅಂಬಾರಿ ಹಿಂದೆ ಓಡಿ, ಒಳಗೆ ನುಗ್ಗಿ ತಾಸುಗಟ್ಟಲೆ ನಿಂತಿದ್ದ ನಮಗೆ ಮಳೆ ನೋಡಿ ನೆಲ ಕುಸಿದ ಅನುಭವ. ಆ ಮಳೆಯನ್ನೇ ಅಷ್ಟು ಹೊತ್ತು ಸಂಭ್ರಮಿಸಿ ಮಳೆ ನಿಂತ ಮೇಲೆ ಕವಾಯತ್ತಿನ ಕೆಲ ಕಸರತ್ತು ನೋಡಿ ಧನ್ಯತೆ ಅನುಭವಿಸಿ ಬಂದಿದ್ದೇ ಸದ್ಯ ಕೊನೆಯ ನೆನಪು. ಅದು ಶಾಶ್ವತ. ಅನಂತರ ದಸರಾದಲ್ಲಿ ನಮ್ಮ ಕಾಯಂ ಭೇಟಿ ವಸ್ತು ಪ್ರದರ್ಶನಕ್ಕೆ. ಅಲ್ಲಲ್ಲಿ ನಡೆಯುತ್ತಿದ್ದ ಸಂಗೀತ ನೃತ್ಯಗಳಿಗೆ. ಯಾವುದು ತಪ್ಪಿದರೂ ಇವು ತಪ್ಪುತ್ತಿರಲಿಲ್ಲ. ಇದು ನಿತ್ಯದ ಕಾಯಕ. ಏನೋ ಕಾಣೆ ಇಷ್ಟೆಲ್ಲ ವೈಫಲ್ಯಗಳ ನಡುವೆ ದಸರಾ ಕೊನೆಗಾಣುತ್ತಿತ್ತು. ನಾವು ಕೂಡ ಏನೋ ಭಾರೀ ಸಾಧಿಸಿದ ಹೆಮ್ಮೆಯಲ್ಲಿ ಮುಖ ಬೀಗಿಸಿ ಬೀದಿಯಲ್ಲಿ ಹೋಗುತ್ತಿದ್ದೆವು.

ಒಟ್ಟಿನಲ್ಲಿ ಮೈಸೂರು ದಸರಾ ಅಂದರೆ ಆ ಊರಿನ ಜನರ ಸಂಭ್ರಮಕ್ಕೆ ಪಾರವಿಲ್ಲ. ಯಾವುದೇ ಕಾರ್ಯಕ್ರಮದಲ್ಲಿ ಪ್ರೇಕ್ಷಕರಾಗಲು ಅವಕಾಶ ಸಿಗಲಿ ಬಿಡಲಿ, ಅದು ಅವರ ಸ್ವಂತ ಎಂಬ ಭಾವನೆ. ಇದು ನಿಜವಾದ ಪಾಲ್ಗೊಳ್ಳುವಿಕೆ. ಅಂಥ ಸಂಭ್ರಮ ಜೀವನದಲ್ಲಿ ಮತ್ತೆ ಬರುತ್ತದಾ ಗೊತ್ತಿಲ್ಲ. ವಿಜಯನಗರ ಕಾಲದ ಆಚರಣೆಯನ್ನು ಮೈಸೂರು ಅರಸರು ಮತ್ತಷ್ಟು ಬೆಳೆಸಿದರು. ಇಂದು ಅದರಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆಹಾರ ಮೇಳ, ಫಲ ಪುಷ್ಪ ಪ್ರದರ್ಶನ ಇತ್ಯಾದಿ. ಜೊತೆಗೆ ವಸ್ತು ಪ್ರದರ್ಶನವಂತೂ ಇನ್ನು ಹತ್ತು ವರ್ಷಗಳ ಮುಂದೆ ಸಮಾಜ ಎಲ್ಲಿರುತ್ತದೆಂಬುದನ್ನು ತೋರಿಸುವ ಸಂದರ್ಭ. ಜೊತೆಗೆ ಈಗ ಬನ್ನಿ ಮಂಟಪದಲ್ಲಿ ಲೇಸರ್ ಶೋ, ಎಲ್ಲ ಕಾರ್ಯಕ್ರಮಗಳ ಲೈವ್ ಮ್ಯಾರಥಾನ್, ಸೈಕ್ಲಿಂಗ್, ಆಹಾರ ಮೇಳ ಮೊದಲಾದವು ಇಡೀ ಜಗತ್ತನ್ನು ನಮ್ಮ ಮುಂದೆ ತರುತ್ತವೆ. ಏನೇ ಆದರೂ ಮುಂದೆ ಒಂದು ದಿನ ಅಂಬಾರಿ ಹೊತ್ತು ಸಾಗುವ ಆನೆ ರೊಬಟ್ ಆನೆ ಆಗದೇ ಈಗಿನಂತೆ ನೈಜ ಆನೆಯೇ ಆಗಿರಲಿ. ಅದು ಇರುವವರೆಗೂ ಎಷ್ಟೇ ಬದಲಾವಣೆಗಳು ಬಂದರೂ ಇದು ನೈಜ ದಸರಾ ಆಗಿಯೇ ಇರುತ್ತದೆ. ಹೀಗೇ ಮುಂದುವರೆಯಲಿ ಎಂದು ಆಶಿಸೋಣ.

Monday, 7 October 2024

ಸಹ್ಯಾದ್ರಿಯ ವಿಚಿತ್ರ ಜೀವಿ


ಮಳೆಗಾಲದ ಆರಂಭದಲ್ಲೇ ಇದನ್ನು ಬರೆಯಬೇಕೆಂದಿದ್ದೆ. ಈಗ ಆಗುತ್ತಿದೆ. ಸಹ್ಯಾದ್ರಿ ಕಾಡುಗಳಲ್ಲಿ ಕಾಣಸಿಗುವ ಅನೇಕ ವಿಚಿತ್ರ ಜಂತುಗಳಲ್ಲಿ ದಾಟು ಬಳ್ಳಿ ಅಥವಾ ದಿಕ್ಕುಬಳ್ಳಿ ಎಂದು ಸ್ಥಳೀಯರು ಕರೆಯುವ, ಇಂಗ್ಲಿಷ್ ನಲ್ಲಿ ಹಾರ್ಸ ಹೇರ್ ಅನ್ನಲಾಗುವ ಜಂತುವೂ ಒಂದು. ಜೀವ ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿದ್ದರೂ ಸಹ್ಯಾದ್ರಿ ಕಾಡುಗಳಲ್ಲಿ ಇದರ ಬಗ್ಗೆ ಚಾಲ್ತಿಯಲ್ಲಿರುವ ಕತೆಗಳಿಗೆ ಅಲ್ಲಿ ಜಾಗವಿಲ್ಲ, ಈ ಬಗ್ಗೆ ಆಧುನಿಕ ಆಧುನಿಕ ವಿಜ್ಞಾನ ಏನೂ ಹೇಳುವುದಿಲ್ಲ. ಸಾಮಾನ್ಯವಾಗಿ ಸಿಹಿ ನೀರಿನ ಜೌಗು ಜಾಗಗಳಲ್ಲಿ ಕಂಡುಬರುವ ದಾಟುಬಳ್ಳಿ ಅಥವಾ ದಿಕ್ಕು ಬಳ್ಳಿಯ  ಬಗ್ಗೆ ಸಹ್ಯಾದ್ರಿ ಒಡಲಿನ ಜನರಲ್ಲಿ ಬಂಡಿಗಟ್ಟಲೆ ಅನುಭವ ಕಥನಗಳು ಸಿಗುತ್ತವೆ. ನಾನೇ ಕಂಡ ಅನುಭವದಂತೆ ನಮ್ಮ ಊರಿನ ಮನೆಯ ಸಮೀಪದಲ್ಲಿದ್ದ ವ್ಯಕ್ತಿಯೊಬ್ಬ ಒಮ್ಮೆ ನಮ್ಮ ಮನೆಯ ದಿಬ್ಬದ ಬಳಿ ನಾಲ್ಕಾರು ತಾಸುಗಳಿಂದ ಒಮ್ಮೆ ಗರ ಬಡಿದವರಂತೆ ಮೂಕನಂತೆ ಕುಳಿತಿದ್ದ. ಅಷ್ಟರಲ್ಲಿ ಅವನ ಮನೆಯವರು ನೆಂಟರು ಊರೆಲ್ಲ ಹುಡುಕಿ ಸುಸ್ತಾಗಿದ್ದರು. ನಮ್ಮ ಅಪ್ಪ ಅವನ ವರ್ತನೆ, ಮಾತು ಕೇಳಿ ಇವನು ಅದೆಲ್ಲೋ ದಿಕ್ಕು ಬಳ್ಳಿ ದಾಟಿರಬೇಕೆಂದು ಅವನನ್ನು ಕೇಳಿದರು. ಇಲ್ಲೇ ಬಂದಿದ್ದೆ, ಮನೆಗೆ ಹೋಗುತ್ತಿದ್ದೇನೆ ಅಂದು ಮತ್ತೆ ಕುಳಿತಿದ್ದ. ಅಲ್ಲಾ ಮಾರಾಯ ಅಷ್ಟು ಹೊತ್ತಿನಿಂದ ಸುಮ್ಮನೇ ಕುಕುಳಿತಿದ್ದೀಯಾ ಏನು ದಿಕ್ಕು ಬಳ್ಳಿ ದಾಟಿದ್ಯಾ ಎಂದು ಕೇಳಿದ್ದೇ ತಡ, ಹೌದಾ, ಹೊರಟೆ ಅಂದವನೇ ಜಾಗ ಖಾಲಿ ಮಾಡಿದ್ದ. ಇಂಥ ನೂರಾರು ಕತೆಗಳು ನಿಮಗೆ ಸಹ್ಯಾದ್ರಿ ತಪ್ಪಲಿನಲ್ಲಿ ಎಲ್ಲೇ ಹೋಗಿ ಕೇಳಿ, ಸಹಜವಾಗಿ ಸಿಗುತ್ತದೆ, ಮಾತ್ರವಲ್ಲ ಜೊತೆಗೆ ಹೌದು ಒಮ್ಮೆ ಏನಾಯ್ತು ಗೊತ್ತ ಎಂಬ ಕತೆಯೂ ಹೊರಬರುತ್ತದೆ. 

ಇದು ದಿಕ್ಕು ಬಳ್ಳಿಯ ಪೀಠಿಕೆ.

ನೆಮಾಟೋಮಾರ್ಫಾ ವರ್ಗಕ್ಕೆ ವೈಜ್ಞಾನಿಕವಾಗಿ ಸೇರುವ ಇದರ ಫೈಲಂ ಎಂಬ ನೆಂಟರ ಗುಂಪಲ್ಲಿ ಸುಮಾರು ೧೫೦ ಬಗೆಯನ್ನು ಗುರುತಿಸಲಾಗಿದ್ದು ಇನ್ನೂ ಸುಮಾರು ೨೦೦೦ಬಗೆಗಳು ಪ್ರಪಂಚದಲ್ಲಿರಬಹುದೆಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಮೊಟ್ಟೆ ಇಟ್ಟು ಮರಿ ಮಾಡುವ ಇದು ೫೦ರಿಂದ ಸುಮಾರಿ ೧೦೦ ಮಿಲಿಮೀಟರ್ ಉದ್ದ ಬೆಳೆಯುತ್ತದೆ. ೨ ರಿಂದ ೩ ಮಿಮೀ ಡಯಾಮೀಟರ್ ದಪ್ಪವಿದ್ದು ಒಮ್ಮೆಲೇ ಒತ್ತು ಶ್ಯಾವಿಗೆಯ ಒಂದು ಎಳೆಯಂತೆ ಕಾಣುತ್ತದೆ.

ರಸ್ತೆ ಅಥವಾ ಮಣ್ಣಿನ ಕಾಲುದಾರಿಯಲ್ಲಿ ಎಲೆಯೊಳಗೆ ಸುಮ್ಮನೇ ಸುತ್ತಿಕೊಂಡು ಬಿದ್ದಿರುತ್ತದೆ. ಯಾವುದಾದರೂ ಜೀವಿ ಅಕ್ಕ ಪಕ್ಕ ಓಡಾಡಿದರೆ ಅಥವಾ ಅದನ್ನು ದಾಟಿದರೆ ಸ್ವಲ್ಪ ತಲೆ ಎತ್ತಿ ಅತ್ತಿತ್ತ ನೋಡಿ ಮತ್ತೆ ಬಿದ್ದುಕೊಳ್ಳುತ್ತದೆ. ಹೀಗೆ ಅದನ್ನು ದಾಟಿದ ಯಾವುದೇ ಜೀವಿಗೆ ಇದ್ದಕ್ಕಿದ್ದಂತೆ ಮರೆವು ಆವರಿಸುತ್ತದೆ. ಮನುಷ್ಯನಿಗೆ ಮಾತ್ರವಲ್ಲ, ಎಷ್ಟೋ ಬಾರಿ ಕಾಡಿಗೆ ಮೇಯಲು ಹೋದ ಜಾನುವಾರುಗಳು ಕೂಡ ಒಂದೆರಡು ದಿನ ಕೊಟ್ಟಿಗೆಯತ್ತ ಸುಳಿಯದಿದ್ದರೆ ಅವೆಲ್ಲೋ ದಾಟುಬಳ್ಳಿ ದಾಟಿವೆ ಎಂದೇ ಮೊದಲು ತಿಳಿಯಲಾಗುತ್ತದೆ, ಅನಂತರ ಹುಲಿ, ಚಿರತೆಗಳ ವಿಷಯ. ಅನಂತರ ಹುಡುಕಾಟ. ಹೀಗೆ ಗುಂಪು ತಪ್ಪಿಸಿಕೊಂಡ ಜಾನುವಾರುಗಳು ಒಂದೇ ಜಾಗದಲ್ಲಿ ಇರುತ್ತವೆ ಅಥವಾ ಸ್ವಲ್ಪ ಆಚೀಚೆ ಅಡ್ಡಾಡುತ್ತವೆ ಅಷ್ಟೇ. ತಮ್ಮ ಗುಂಪಿನ ಇತರ ಸದಸ್ಯರು ಬಂದರೆ ಅಥವಾ ಮನೆಯ ಯಜಮಾನರು ಬಂದು ಕರೆದರೆ ಬರುತ್ತವೆ. ಈ ದಾಟು ಬಳ್ಳಿ ಕುರಿತು ಇಷ್ಟೆಲ್ಲ ವಿಚಿತ್ರ ಸಂಗತಿಗಳು ಬೇಕಾದಷ್ಟಿದ್ದರೂ ಆಧುನಿಕ ವಿಜ್ಞಾನ ಈ ಬಗ್ಗೆ ಗಮನಹರಿಸದೇ ಇದೆಲ್ಲ ಸುಳ್ಳು ಎಂದು ಭಾವಿಸಿ ಕುಳಿತಿದೆ. ವಿದೇಶಗಳಲ್ಲೂ ಈ ವರ್ಗದ ಜೀವಿಗಳಿದ್ದರೂ ಅವುಗಳ ಸುತ್ತ ನಮ್ಮಲ್ಲಿರುವಂತೆ ದಂತ ಕತೆಗಳು ಕಂಡುಬರುವುದಿಲ್ಲ, ಹಾಗೇನಾದರೂ ಇದ್ದಿದ್ದರೆ ಆಧುನಿಕ ವಿಜ್ಞಾನದಲ್ಲಿ ಇದರ ಬಗ್ಗೆ ಒಂದಿಷ್ಟಾದರೂ ವಿವರ ಸಿಗುತ್ತಿತ್ತು. ನಮ್ಮ ದೇಶದ ಜೀವ ವಿಜ್ಞಾನಿಗಳು ಸೂಕ್ಷ್ಮ ಜೀವ ವಿಜ್ಞಾನಿಗಳು ಇನ್ನಾದರೂ ಈ ಬಗ್ಗೆ ಗಮನಹರಿಸುವುದೊಳಿತು.

ಜೊತೆಗೆ ಈ ವರ್ಗದಲ್ಲಿ ಕಾಣುವ ಪ್ರಭೇದಗಳನ್ನು ಕೂಡ ನಮ್ಮವರು ಗುರುತಿಸಬೇಕು. ಕೇವಲ ಪಾಶ್ಚಾತ್ಯರ ನುಕರಣೆ ಮಾಡುವುದಲ್ಲ.ಹೀಗೆ ನಮ್ಮಲ್ಲಿನ ಅಧ್ಯಯನ ಭಿನ್ನವಾಗಿ ನಡೆದರೆ ಅದರಿಂದ ನಮ್ಮ ಜನಸಾಮಾನ್ಯರಿಗೂ ಸಮಾಜಕ್ಕೂ ತುಂಬ ಉಪಯೋಗವಾಗುತ್ತದೆ. ಆ ಜಂತುವನ್ನು ದಾಟುವುದಕ್ಕೂ ಮರೆವಿಗೂ ಏನು ಸಂಬಂಧ ಎಂಬ ಸಣ್ಣ ಪ್ರಶ್ನೆಯೇ ಅಧ್ಯಯನಕ್ಕೆ ದೊಡ್ಡ ಆಧಾರವಾಗಬಲ್ಲುದು. ಜೀವಿ ಅದನ್ನು ದಾಟಿದಾಗ ಆ ಜೀವಿ ಯಾವುದಾದರೂ ರಾಸಾಯನಿಕವನ್ನು ವಿಸರ್ಜಿಸಿ ತಾತ್ಕಾಲಿಕ ಮರೆವು ಬರುವಂತೆ ಮಾಡುತ್ತದಾ ಎಂಬ ಅಧ್ಯಯನ ನಿಜಕ್ಕೂ ಯಾವ ಬಾಂಡ್ ಸಿನಿಮಾಗಿಂತ ಕಡಿಮೆ ಆಗುವುದಿಲ್ಲ. ನಮ್ಮಲ್ಲಿ ಅಸಂಖ್ಯ ಹೆಸರಾಂತ ಜೀವ ವಿಜ್ಞಾನಿಗಳೂ ಸಂಶೋಧಕರೂ ಇದ್ದಾರೆ ಅಚರೆಲ್ಲ ಇಂಥದ್ದೊಂದು ಅಧ್ಯಯನ ಕೈಗೊಂಡು ಹೆಚ್ಚಿನದನ್ನು ಸಾಧಿಸಲಿ.