Saturday, 12 October 2024

ಜಂಬೂಸವಾರಿ ಹಿಂದೆ- ಮುಂದೆ


ಈಗ ಮೈಸೂರಲ್ಲಿ ದಸರಾ ಸಂಭ್ರಮ ಮಡುಗಟ್ಟಿದೆ. ಜಂಬೂ ಸವಾರಿಗೆ ಜನತೆ ಕಾಯುತ್ತಿದ್ದಾರೆ. ಇದಕ್ಕೆ ಇದರದೇ ಇತಿಹಾಸವಿದೆ. ಈ ನೆಪದಲ್ಲಿ ಅದನ್ನು ಅವಲೋಕಿಸೋಣ.

ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ನಡೆಯುತ್ತಿದ್ದ ದಸರಾ ಆಚರಣೆಯನ್ನು ಅಂದು ನಾಡ ಹಬ್ಬವಾಗಿ ವಿಜಯನಗರ ಅರಸರು ನಡೆಸುತ್ತಿದ್ದರು. ರಾಜ ಒಡೆಯರ್ ೧೬೧೦ರಲ್ಲಿ ಶ್ರೀರಂಗಪಟ್ಟಣದಲ್ಲಿ ಮೊದಲ ಬಾರಿ ದಸರಾ ನಡೆಸಿದರು. ೧೯೨೧ರಲ್ಲಿ ರಾಜ್ಯ ಸರ್ಕಾರ ಅರಸರ ಅಧಿಕಾರವನ್ನು ಹಿಂಪಡೆದ ಮೇಲೆ ರಾಜ್ಯ ಸರ್ಕಾರ ಸ್ವತಃ ಇದನ್ನು ನಡೆಸಿಕೊಂಡು ಬರುತ್ತಿದೆ.ವಿಜಯನಗರ ಕಾಲದಲ್ಲಿ ಮಹಾನವಮಿ ಎಂದು ಹೆಸರಾಗಿದ್ದ ಈ ಉತ್ಸವವನ್ನು ಮೈಸೂರು ಅರಸರು ಮೈಸೂರು ದಸರಾ ಎಂದು ಬದಲಿಸಿ ಆಚರಣೆಗೆ ತಂದರು. ಆ ಕಾಲದಲ್ಲಿ ನಡೆಯುತ್ತಿದ್ದ ಪ್ರಾರಂಭಿಕ ಪೂಜಾ ವಿಧಾನ ಇತ್ಯಾದಿಗಳು ಇಂದಿಗೂ ಹಾಗೆಯೇ ಇವೆ. ಆದರೆ ಮೆರವಣಿಗೆಯಲ್ಲಿನ ಜನಪದ ನೃತ್ಯ ಕುಣಿತ ಹಾಗೂ ಸ್ತಬ್ದ ಚಿತ್ರಗಳ ಪ್ರದರ್ಶನಗಳು ಶುರುವಾದುದು ೧೯೭೦ರಿಂದ ಈಚೆಗೆ. ಇದನ್ನು ಚಾಲ್ತಿಗೆ ತಂದು ನಮ್ಮ ಜನಪದ ಕ್ಷೇತ್ರಕ್ಕೆ ವೇದಿಕೆ ಕಲ್ಪಿಸಿದವರು ಜೀಶಂಪ ಅವರು. ಇದು ಎಷ್ಟು ಪ್ರಚಲಿತವೆಂದರೆ ಈಗ ಯಾವುದೇ ಊರಿನಲ್ಲಿ ಏನೇ ಹಬ್ಬದ ಮೆರವಣಿಗೆ ನಡೆದರೂ ಅಲ್ಲಿ ಇಂಥ ಪ್ರದರ್ಶನ ಸಾಮಾನ್ಯವಾಗಿದೆ.

ಮೈಸೂರು ದಸರಾ ಸಂಭ್ರಮವನ್ನು ಅಲ್ಲಿದ್ದೇ ಅನುಭವಿಸಬೇಕು. ಅಂಥ ಅವಕಾಶ ಕೆಲವು ವರ್ಷ ನನಗೆ ಲಭಿಸಿತ್ತು. ಅಲ್ಲಿ ಓದುವ ಕಾಲದಲ್ಲಿ ದಸರಾ ಬಂದಿತೆಂದರೆ ಎರಡು ದಿನ ಮುಂಚಿನಿಂದಲೇ ಏನೋ ಘನಕಾರ್ಯ ಇರುವವರಂತೆ ಅರಮನೆ ಸುತ್ತ ಹೋಗುವುದು, ಸುತ್ತಲಿನ ಚಟುವಟಿಕೆಗಳನ್ನು ಗಮನಿಸುವುದು ಮಾಡುತ್ತಿದ್ದೆವು. ಹಾಗೆಯೇ ಇದ್ದಬಿದ್ದ ದಿನಪತ್ರಿಕೆಗಳನ್ನು ತಿರುವಿಹಾಕಿ ದಸರಾ ಕಾರ್ಯಕ್ರಮಗಳ ಲಿಸ್ಟ ನೋಡುವುದು, ಯಾವುದಕ್ಕೆಲ್ಲ ಯಾವಾಗ ಹೋಗುವುದೆಂದು ಪ್ಲಾನ್ ಮಾಡುವುದು ನಡೆಯುತ್ತಿತ್ತು. ಜೊತೆಗೆ ಯಾರೂ ಇಲ್ಲದಿದ್ದರೂ ಅಲ್ಲಿ ಹೋಗುವುದೇ. ಅನಂತರ ಕಡ್ಡಾಯವಾಗಿ ಹೋಗುವುದು ಮೆರವಣಿಗೆ ನೋಡಲು. ಇದಕ್ಕಂತೂ ಎರಡು ಮೂರು ದಿನಗಳ ತಯಾರಿ ಮೆರವಣಿಗೆ ಸಾಗುವ ಕೆ ಆರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಬನ್ನಿ ಮಂಟಪತನಕ ಎಲ್ಲಿ ನಿಲ್ಲುವುದು ಅಥವಾ ಕೂರುವುದು ಎಂಬ ಭಾರೀ ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ಆ ಮಾರ್ಗದ ಯಾವುದಾದರೂ ಅಂಗಡಿಯವರನ್ನೋ ಮನೆಯವರನ್ನೋ ಕಾಡಿಬೇಡಿ ಜಾಗ ಕಾದಿರಿಸುವ ಯತ್ನಗಳೂ ನಡೆಯುತ್ತಿದ್ದವು. ಮೆರವಣಿಗೆ ದಿನ ದಸರಾ ಆನೆಗಳಿಗಿಂತ ಮೊದಲೇ ತಯಾರಾಗಿ ನಿಗದಿತ ಜಾಗ ತಲುಪಿದರೆ ಅಷ್ಟರಲ್ಲೇ ಅಲ್ಲಿ ಮತ್ಯಾರೋ ಚಾಪೆ ಹಾಕಿರುತ್ತಿದ್ದರು. ಬೆಳಿಗ್ಗೆ ಹೊತ್ತಾರೆ ಎದ್ದು ಇದೇ ಕೆಲಸ ಆ ದಿನ. ಬಹುತೇಕ ಬಾರಿ ನಮ್ಮ ನಿಗದಿತ ಜಾಗ ಸಿಗುತ್ತಿರಲಿಲ್ಲ. ಸಿಕ್ಕ ಜಾಗದಲ್ಲಿ ಬೆಳಗ್ಗಿನಿಂದ ಕಾಯ್ದು ಅಂಬಾರಿ ಹೋಗುವ ತನಕ ಇದ್ದು ಅದಕ್ಕೊಂದು ನಮಸ್ಕಾರ ಹಾಕುವತನಕ ಈ ವಿಧಿಗೆ ಮುಕ್ತಾಯ ಇರುತ್ತಿರಲಿಲ್ಲ. ಕೆಲವೊಮ್ಮೆ ಅಂಬಾರಿಯನ್ನು ಬೆನ್ನಟ್ಟಿ ಬನ್ನಿ ಮಂಟಪತನಕ ಹೋಗುವುದು ಅಲ್ಲಿ ಕವಾಯತು ನೋಡಲಾಗದೆ ಸಪ್ಪೆ ಮೋರೆ ಹೊತ್ತು ಬರುವುದು ಅನೇಕ ಬಾರಿ ಆಗಿದೆ. ಪರವಾಗಿಲ್ಲ. ಮತ್ತೆ ಮುಂದಿನ ವರ್ಷ ನೋಡುವಾ ಅಂದುಕೊಂಡು ಅಷ್ಟಕ್ಕೇ ಸಮಾಧಾನ ಪಟ್ಟಿದ್ದಕ್ಕೆ ಎಲ್ಲ ೨೦ ವರ್ಷಗಳ ದಾಖಲೆ ಇದೆ. ಒಮ್ಮೆ ಹಾಗೂ ಹೀಗೂ ಪಂಜಿನ ಕವಾಯತು ನೋಡಲು ಪಾಸ್ ಸಿಕ್ಕಿತ್ತು. ಅಂಬಾರಿ ಜೊತೆಗೆ ಕೆ ಆರ್ ವೃತ್ತದಿಂದ ಬನ್ನಿ ಮಂಟಪದ ತನಕ ಓಡಿದರೆ ಇನ್ನೇನು ಕವಾಯತು ಶುರುವಾಗಬೇಕು. ಜೋರಾಗಿ ಮಳೆ. ಅಂಬಾರಿ ಹಿಂದೆ ಓಡಿ, ಒಳಗೆ ನುಗ್ಗಿ ತಾಸುಗಟ್ಟಲೆ ನಿಂತಿದ್ದ ನಮಗೆ ಮಳೆ ನೋಡಿ ನೆಲ ಕುಸಿದ ಅನುಭವ. ಆ ಮಳೆಯನ್ನೇ ಅಷ್ಟು ಹೊತ್ತು ಸಂಭ್ರಮಿಸಿ ಮಳೆ ನಿಂತ ಮೇಲೆ ಕವಾಯತ್ತಿನ ಕೆಲ ಕಸರತ್ತು ನೋಡಿ ಧನ್ಯತೆ ಅನುಭವಿಸಿ ಬಂದಿದ್ದೇ ಸದ್ಯ ಕೊನೆಯ ನೆನಪು. ಅದು ಶಾಶ್ವತ. ಅನಂತರ ದಸರಾದಲ್ಲಿ ನಮ್ಮ ಕಾಯಂ ಭೇಟಿ ವಸ್ತು ಪ್ರದರ್ಶನಕ್ಕೆ. ಅಲ್ಲಲ್ಲಿ ನಡೆಯುತ್ತಿದ್ದ ಸಂಗೀತ ನೃತ್ಯಗಳಿಗೆ. ಯಾವುದು ತಪ್ಪಿದರೂ ಇವು ತಪ್ಪುತ್ತಿರಲಿಲ್ಲ. ಇದು ನಿತ್ಯದ ಕಾಯಕ. ಏನೋ ಕಾಣೆ ಇಷ್ಟೆಲ್ಲ ವೈಫಲ್ಯಗಳ ನಡುವೆ ದಸರಾ ಕೊನೆಗಾಣುತ್ತಿತ್ತು. ನಾವು ಕೂಡ ಏನೋ ಭಾರೀ ಸಾಧಿಸಿದ ಹೆಮ್ಮೆಯಲ್ಲಿ ಮುಖ ಬೀಗಿಸಿ ಬೀದಿಯಲ್ಲಿ ಹೋಗುತ್ತಿದ್ದೆವು.

ಒಟ್ಟಿನಲ್ಲಿ ಮೈಸೂರು ದಸರಾ ಅಂದರೆ ಆ ಊರಿನ ಜನರ ಸಂಭ್ರಮಕ್ಕೆ ಪಾರವಿಲ್ಲ. ಯಾವುದೇ ಕಾರ್ಯಕ್ರಮದಲ್ಲಿ ಪ್ರೇಕ್ಷಕರಾಗಲು ಅವಕಾಶ ಸಿಗಲಿ ಬಿಡಲಿ, ಅದು ಅವರ ಸ್ವಂತ ಎಂಬ ಭಾವನೆ. ಇದು ನಿಜವಾದ ಪಾಲ್ಗೊಳ್ಳುವಿಕೆ. ಅಂಥ ಸಂಭ್ರಮ ಜೀವನದಲ್ಲಿ ಮತ್ತೆ ಬರುತ್ತದಾ ಗೊತ್ತಿಲ್ಲ. ವಿಜಯನಗರ ಕಾಲದ ಆಚರಣೆಯನ್ನು ಮೈಸೂರು ಅರಸರು ಮತ್ತಷ್ಟು ಬೆಳೆಸಿದರು. ಇಂದು ಅದರಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆಹಾರ ಮೇಳ, ಫಲ ಪುಷ್ಪ ಪ್ರದರ್ಶನ ಇತ್ಯಾದಿ. ಜೊತೆಗೆ ವಸ್ತು ಪ್ರದರ್ಶನವಂತೂ ಇನ್ನು ಹತ್ತು ವರ್ಷಗಳ ಮುಂದೆ ಸಮಾಜ ಎಲ್ಲಿರುತ್ತದೆಂಬುದನ್ನು ತೋರಿಸುವ ಸಂದರ್ಭ. ಜೊತೆಗೆ ಈಗ ಬನ್ನಿ ಮಂಟಪದಲ್ಲಿ ಲೇಸರ್ ಶೋ, ಎಲ್ಲ ಕಾರ್ಯಕ್ರಮಗಳ ಲೈವ್ ಮ್ಯಾರಥಾನ್, ಸೈಕ್ಲಿಂಗ್, ಆಹಾರ ಮೇಳ ಮೊದಲಾದವು ಇಡೀ ಜಗತ್ತನ್ನು ನಮ್ಮ ಮುಂದೆ ತರುತ್ತವೆ. ಏನೇ ಆದರೂ ಮುಂದೆ ಒಂದು ದಿನ ಅಂಬಾರಿ ಹೊತ್ತು ಸಾಗುವ ಆನೆ ರೊಬಟ್ ಆನೆ ಆಗದೇ ಈಗಿನಂತೆ ನೈಜ ಆನೆಯೇ ಆಗಿರಲಿ. ಅದು ಇರುವವರೆಗೂ ಎಷ್ಟೇ ಬದಲಾವಣೆಗಳು ಬಂದರೂ ಇದು ನೈಜ ದಸರಾ ಆಗಿಯೇ ಇರುತ್ತದೆ. ಹೀಗೇ ಮುಂದುವರೆಯಲಿ ಎಂದು ಆಶಿಸೋಣ.

No comments:

Post a Comment