ಇನ್ನು ಕಾರ್ಮಿಕರ ವಿಷಯ- ಕಾರ್ಮಿಕರೆಂದರೆ ಯಾರು? ಅವರ ವ್ಯಾಪ್ತಿ ಎಷ್ಟು? ಅವರಿಗೆ ಯಾವ ಕೆಲಸ ಮಾಡಬೇಕು? ಅವರು ಸದ್ಯದ ಸ್ಥಿತಿಯಿಂದ ಹೊರಬಂದು ಸ್ವತಂತ್ರವಾಗಿ ಯಜಮಾನರಾಗಿ ಜೀವಿಸುವುದು ಯಾವಾಗ ? ಎಂಬ ಪ್ರಶ್ನೆಗಳಿಗೂ ಉತ್ತರ ಶಾಶ್ವತವಾಗಿ ಸಿಗದು, ಅಲ್ಲದೇ ಕಾರ್ಮಿಕರಿಂದ ಯಜಮಾನ ಹುಟ್ಟುತ್ತಾನೋ ಯಜಮಾನ ಇರುವುದರಿಂದ ಕಾರ್ಮಿಕರ ಸೃಷ್ಟಿಯಾಗುತ್ತದೋ ಎಂಬುದೂ ಅಸ್ಪಷ್ಟ. ಇನ್ನು ಮಹಿಳೆ ಕೇಳುವ ಸ್ವಾತಂತ್ರ್ಯ ಕೊಟ್ಟರೆ ಪುರುಷ ಸ್ವಾತಂತ್ರ್ಯದ ಪ್ರಶ್ನೆ ಅಡ್ಡ ಬರುತ್ತದೆ. ಒಟ್ಟಿನಲ್ಲಿ ವೇದಗಳ ಕಾಲದ ಎಲ್ಲದರಿಂದ ಮುಕ್ತಿ ಪಡೆಯುವ ಆಶಯವೇ ಶಾಶ್ವತ ಅನಿಸುತ್ತದೆ. ಲೌಕಿಕ ಅರ್ಥದಲ್ಲಿ ನಾವು ಬಯಸುವ ಸ್ವಾತಂತ್ರ್ಯ ಎಲ್ಲಿಯೂ ಎಂದಿಗೂ ದೊರೆಯುವುದಿಲ್ಲ, ಯಾವುದೇ ಬಗೆಯ ಸ್ವಾತಂತ್ರ್ಯ ದೊರೆತರೂ ಕೊನೆಯಲ್ಲಿ ಮುಂದೇನು ಎಂಬ ಪ್ರಶ್ನೆಯೇ ಉಳಿಯುತ್ತದೆ. ಉದಾಹರಣೆಗೆ ಮಕ್ಕಳಿಗೆ ಒಂದು ವಯಸ್ಸು ದಾಟುವವರೆಗೂ ಮೊಬೈಲ್ ಕೊಡಬಾರದುಅನ್ನುವುದು ಸ್ವಾತಂತ್ರ್ಯದ ಹರಣವಾಗುತ್ತದೆ ಎಂದು ಅವರಿಗೆ ಜನಿಸಿದ ಕೂಡಲೇ ಮೊಬೈಲ್ ಕೊಟ್ಟೆವು, ಅದರಿಂದ ಮಗು ಏನೇನೂ ಅನಾಹುತ ಮಾಡಿಕೊಂಡಿತು ಅಂದುಕೊಳ್ಳಿ- ಅಯಯಯ್ಯೋ ಹಿಂಗಾಯ್ತಾ ಮತ್ತೆ ಏನು ಮಾಡುವುದು ಈಗ ಅನ್ನುತ್ತೇವೆ, ಈ ಲೌಕಿಕ ಬದುಕಿನಿಂದ ಮುಕ್ತಿ ಪಡೆಯುವುದೇ ನೈಜ ಸ್ವಾತಂತ್ರ್ಯ ಏಕೆಂದರೆ, ಇಂದಿನ ಸಮಾಜದಲ್ಲಿ ಎಲ್ಲರೂ ತಮಗೆ ಬೇಕಾದಂತೆ ಬದುಕಲು ಸಾಧ್ಯವಿಲ್ಲ,ಹಾಗಾದರೆ ಅದು ಸ್ವಾತಂತ್ರ್ಯವಲ್ಲ, ಸ್ವೇಚ್ಛೆ, ನಾಗರಿಕ ಸಮಾಜ ಅದನ್ನು ಒಪ್ಪುವುದಿಲ್ಲ. ಮಾನವ ಒಬ್ಬ ಪ್ರಾಣಿಯಾದರೂ ಆತನಿಗೆ ಪ್ರಾಣಿಗಳು ಇರುವಂತೆ ಇರಲು ಅಸಾಧ್ಯ. ಒಂದು ಕುಟುಂಬ, ಸಾಮಾಜಿಕ ವ್ಯವಸ್ಥೆ ಅವನಿಗೆ ಅನೇಕ ಕಾರಣಗಳಿಗಾಗಿ ಅಗತ್ಯ, ಇಲ್ಲವಾದಲ್ಲಿ ಒಬ್ಬ ಕಳ್ಳ ಈ ಸಮಾಜದಲ್ಲಿ ತನಗೆ ಬೇಕಾದ ಸ್ವಾತಂತ್ರ್ಯವಿಲ್ಲ ಅನ್ನಬಹುದು, ಹಾಗೆಯೇ ಒಬ್ಬ ಅತ್ಯಾಚಾರಿ ಕೂಡ ಹೇಳಬಹುದು ಇದನ್ನು ನಾಗರಿರ‍್ಯಾರೂ ಒಪ್ಪಲಾಗದು. ಆದ್ದರಿಂದ ಯಾರು ಯಾರಿಗೆ ಏನು ಬೇಕೋ ಅದನ್ನೆಲ್ಲ ಶಿಸ್ತಿನ ಜವಾಬ್ದಾರಿಯ ಗೊಡವೆಯೇ ಇಲ್ಲದೇ ಒದಗಿಸುವುದೇ ಸ್ವಾತಂತ್ರ್ಯವಲ್ಲ, ಅದು ಸಾಧುವೂ ಅಲ್ಲ, ಇಂಥ ಪ್ರಯೋಗಗಳೆಲ್ಲವನ್ನು ನೋಡಿಯೇ ನಮ್ಮ ಸಂವಿಧಾನ ಸೂಕ್ತವಾದ ಜವಾಬ್ದಾರಿಯ ಜೊತೆಗೆ ಅದ್ಭುತ ಸ್ವಾತಂತ್ರ್ಯವನ್ನು ನಮಗೆಲ್ಲ ಕೊಟ್ಟಿದೆ, ಸ್ವಾತಂತ್ರ್ಯ ನಮಗೆ ಬೇಕು ಅನ್ನುವವರು ಅದರ ಜೊತೆಗಿನ ಜವಾಬ್ದಾರಿಯನ್ನು ಪಡೆಯಬೇಕು, ಅದನ್ನು ನಿಭಾಯಿಸಬೇಕು. ಅಂಥ ಜವಾಬ್ದಾರಿ ನಮಗೆಲ್ಲ ಇದೆ. ಎಲ್ಲಿಯೇ ಆಗಲಿ, ಸ್ವೇಚ್ಛೆಯೇ ಸ್ವಾತಂತ್ರ್ಯವಲ್ಲ. ಈಗ ನಾವು ಯಾವುದೋ ಕಚೇರಿಯಲ್ಲಿ ನೌಕರಿಗೆ ಸೇರಿದ್ದೇವೆ ಅಂದುಕೊಳ್ಳಿ, ನಾವು ಆಗ ಅಲ್ಲಿನ ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ, ಅಲ್ಲಿ ಕಚೇರಿ ಆವರಣ ಬಿಟ್ಟು ಸೂಕ್ತ ಅನುಮತಿ ಅಥವಾ ಅತ್ಯಗತ್ಯ ಕಾರ್ಯಗಳಿಗೆ ಅಲ್ಲದೇ ವೃಥಾ ಹೊರಗೆ ಹೋಗಬಾರದು ಎಂಬ ನಿಯಮ ಇದ್ದರೆ ಅದು ಸ್ವಾತಂತ್ರö್ಯ ಹರಣವಲ್ಲ, ಒಂದು ಶಿಸ್ತು, ಇಂಥವೆಲ್ಲ ಶಾಲಾ ಕಾಲೇಜುಗಳಲ್ಲಿ ಸಾಮಾನ್ಯವಾಗಿರುತ್ತವೆ, ಇವೆಲ್ಲ ಸ್ವಾತಂತ್ರ ಹರಣದ ಅಡಿ ಬರುವುದಿಲ್ಲ, ಬರಬಾರದು. ಆದರೆ ಉದ್ಯಾನವನ, ಅರಣ್ಯ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಆಯ್ದ ಕೆಲವರಿಗೆ ಮಾತ್ರ ಪ್ರವೇಶ ಅನ್ನುವುದು ನಿಜಕ್ಕೂ ಸ್ವಾತಂತ್ರ್ಯ ಹರಣವಾಗುತ್ತದೆ, ಇದು ಪ್ರಶ್ನಾರ್ಹ. ಇಂಥ ನಿದರ್ಶನಗಳು ನಮ್ಮ ದೇಶದಲ್ಲಿ ಅನೇಕಬಾರಿ ಸುರಕ್ಷತೆಯ ಹೆಸರಲ್ಲಿ ಆಗುತ್ತದೆ, ಇದನ್ನು ಪ್ರಜಾಪ್ರಭುವದಲ್ಲಿ ಎಲ್ಲರೂ ಸಮಾನರು, ಆದರೆ ಕೆಲವರು ಇನ್ನೂ ಹರಚ್ಚು ಸಮಾನರಾಗಿರುತ್ತರೆಂದು ವ್ಯಂಗ್ಯ ಮಾಡಲಾಗುತ್ತದೆ. ಇದು ನಿಜ ಕೂಡ. ಆದರೆ ನಾವೆಲ್ಲ ಸಮಾನರು ಎಂಬುದು ಸಮಾಜಿಕ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಲು ಅನಿವಾರ್ಯವಾಗುತ್ತದೆ, ಉದಾಹರಣೆಗೆ ಒಂದು ಕಚೇರಿಯಲ್ಲಿ ಹತ್ತು ಹಲವು ಬಗೆಯ ಕೆಲಸಗಳಿಗೆ ಹಲವು ಜನ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಾರೆಮ ಇವುಗಳಲ್ಲಿ ಮುಖ್ಶಸ್ಥನ ಕೆಲಸ ಹಾಗೂ ಜವಾಚ್ದಾರಿ ಬೇರೆ, ಸಾಮಾನ್ಯ ಜವಾನನ ಕೆಲಸ ಬೇರೆ. ಆದರೆ ಎಲ್ಲರ ಕೆಲಸಗಳಿಗೂ ಗೌರವ ವನ್ನು ಸಮಾನವಾಗಿ ಕೊಡಬೇಕಾದುದು, ಸಮಾನತೆಯ ಆದರ್ಶವಾಗುತ್ತದೆ, ಆದರೆ ಒಬ್ಬ ಗುಮಾಸ್ತ ಅಥವಾ ಮಾಲಿಯೊಬ್ಬ ನನಗೂ ಸ್ವಾತಂತ್ರö್ಯವಿದೆ, ನನಗೂ ಮ್ಯಾನೇಜರ್ ಸಮಾನ ಸಂಬಳ ಹಾಗೂ ಸ್ಥಾನಮಾನ ಬೇಕು ಅಂದರೆ ಸರಿಯಾಗುವುದಿಲ್ಲ, ಆಗ ವ್ಯವಸ್ಥೆಯ ಬುಡ ಅಲ್ಲಾಡುತ್ತದೆ, ಕೆಲಸ ಸರಿಯಾಗಿ ನಡೆಯುವುದಿಲ್ಲ, ಆದ್ದರಿಂದ ಎಲ್ಲಿ ಏನು, ಯಾವ ಬಗೆಯ ಸ್ವಾತಂತ್ರ್ಯ ಎಂಬ ಎಚ್ಚರ ಅಗತ್ಯವಾಗುತ್ತದೆ.
ಲಿಖಿತ ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಎಲ್ಲವನ್ನೂ ಅದರಲ್ಲಿ ಬರೆದೇ ತಿಳಿಸಲು ಸಾಧ್ಯವಿಲ್ಲ, ಅದಕ್ಕಾಗಿ ಸಮಾಜದಲ್ಲಿ ನಡವಳಿಕೆ ಇರುತ್ತದೆ, ಇದರಲ್ಲಿ ಗುರು ಹಿರಿಯರಿಗೆ ಗೌರವ ಕೊಡುವುದು, ತಂದೆ ತಾಯಿಯರಿಗೆ ಗೌರವ ಕೊಡುವ ಕ್ರಮ ಮೊದಲಾದವು ಸೇರುತ್ತವೆ, ಇದರಲ್ಲಿ ನಾವೆಲ್ಲ ಸಮಾನರೆಂದು ಬೀಗಲು ಸಾಧ್ಯವಿಲ್ಲ, ತಂದೆ ತಾಯಿಯರ ಎದುರು ಕಾಲು ಚಾಚಿ ಕೂರುವುದು, ಗುರುಗಳು ಎದುರಿಗೆ ಬಂದಾಗ ಎದ್ದು ಗೌರವಿಸುವುದು ಮೊದಲಾದವನ್ನು ಯವ ಸಂವಿಧಾನವೂ ಹೇಳುವುದಿಲ್ಲ, ಇವೆಲ್ಲ ಅಲಿಖಿತ ಸಾಮಾಜಿಕ ಶಿಷ್ಟಾಚಾರದ ನಿಯಮ, ಅಥವಾ ರೀತಿ ನೀತಿಗಳು, ಒಂದು ಅರ್ಥದಲ್ಲಿ ಲಿಖಿತ ನಿಯಮಗಳಿಗಿಂತ ಅಲಿಖಿತ ನಿಯಮಗಳೇ ಹೆಚ್ಚು ಶಕ್ತಿಯುತವಾಗಿರುತ್ತವೆ, ಇಲ್ಲೆಲ್ಲೂ ಸ್ವಾತಂತ್ರ್ಯದ ಪ್ರಶ್ನೆ ಬರುವುದಿಲ್ಲ, ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ಮನುಷ್ಯ ಎನಿಸಿಕೊಳ್ಳಲು ಇಂಥ ನಡವಳಿಕೆಗಳು ಕಾರಣವಾಗುತ್ತವೆ ಅಲ್ಲದೇ ಇವು ಸಂಸ್ಕೃತಿಯನ್ನು ಕಟ್ಟುತ್ತವೆ. ಇದು ಬಹಳ ದೊಡ್ಡದೆನಿಸಿಕೊಳ್ಳುವುದು ಈ ಕಾರಣಕ್ಕೆ. ಇಲ್ಲಿ ಸ್ವಾತಂತ್ರ್ಯಕ್ಕೆ ಮಿತಿ ಇರುತ್ತದೆ. ಅದನ್ನು ಯಾರೂ ಪ್ರಶ್ನಿಸಲಾಗದು. ಆದ್ದರಿಂದ ಎಲ್ಲಿ ಎಷ್ಟು ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂಬ ವಿವೇಕ ಇರಬೇಕಾಗುತ್ತದೆ. ಇದು ಇಲ್ಲದಿದ್ದರೆ¸ ಸ್ವಾತಂತ್ರ್ಯಕ್ಕೆ ಬೆಲೆಯೂ ಇರುವುದಿಲ್ಲ. ಸ್ವಾತಂತ್ರ್ಯ ಕೇಳುವ ಮತ್ತು ಪಡೆಯುವ ಸ್ಥಳಗಳಿಗೂ ಸಂಬಂಧವಿದೆ, ಅದನ್ನು ಮೀರಲಾಗದು. ಸಾಮಾಜಿಕ ಶಿಷ್ಟಾಚಾರಗಳಲ್ಲಿ ಕುಟುಂಬದ ಒಳಗೆ ಮತ್ತು ಹೊರಗೆ ವ್ಯಕ್ತಿ ಹೇಗೆ ವರ್ತಿಸಬೇಕು ಎಂಬುದನ್ನು ಸಮಾಜ ಕಲಿಸುತ್ತದೆ, ಸಮಾಜದ ರೀತಿ ನೀತಿಯಂತೆಯೇ ಗಂಡು ಹೆಣ್ಣು ಗಂಡ ಹೆಂಡತಿಯರಾದ ಮೇಲೆ ಕೂಡ ಅವರು ಅದಾದ ಮೇಲಿನ ರೀತಿ ನೀತಿಗಳನ್ನು ಅನುಸರಿಸಬೇಕಾಗುತ್ತದೆ, ತಾವಿಬ್ಬರೂ ಗಂಡ ಹೆಂಡತಿಯರೆಂದ ಮಾತ್ರಕ್ಕೆ ಅವರು ಎಲ್ಲೆಂದರಲ್ಲಿ ಇಷ್ಟಬಂದಂತೆ ವರ್ತಿಸಲಾಗದು. ಅದಕ್ಕ ಹಿರಿಯ ಸಾಹಿತಿಗಳಾಗಿದ್ದ ಎ ಆರ್ ಕೃಷ್ಣಶಾಸ್ತ್ರಿಗಳು ಎಲ್ಲೇ ಮದುವೆ ಕಾರ್ಯಕ್ರಮಕ್ಕೆ ಹೋದರೂ ನವ ಜೋಡಿಯನ್ನು ಕುರಿತು ನೋಡ್ರಪ್ಪಾ, ನೀವಿಬ್ಬರೂ ಇಂದಿನಿಂದ ಗಂಡ ಹೆಂಡತಿ ಎಂದು ಸಮಾಜ ಒಪ್ಪಿದೆ, ಹಾಗಂತ ಬೆಡ್ ರೂಮಿನ ಹಾಸಿಗೆಯನ್ನು ಬೀದಿಗೆ ತರಬೇಡಿ ಎಂದು ಹಿತವಚನ ಹೇಳುತ್ತಿದ್ದರಂತೆ, ಇದು ಶಿಷ್ಟಾಚಾರ, ಏನೀಗ ಎಂದು ಇದನ್ನು ಕೇಳುವಂತಿಲ್ಲ, ಇಂಥ ವಿಷಯಗಳಲ್ಲಿ ಸೂಕ್ಷ್ಮಗಳಿರುತ್ತವೆ, ಸಾಂಸ್ಕೃತಿಕವಾಗಿ ಮಹತ್ವ ಪಡೆದ ಬಾಹುಬಲಿ ವಿಗ್ರಹ ಬೆತ್ತಲು ನಿಂತಿದೆ, ಪ್ರಪಂಚಾದ್ಯಂತ ಜನ ಬಂದು ಅದನ್ನು ನೋಡಿ ಹೋಗುತ್ತಾರೆಂದು ಹಾದಿ ಬೀದಿಯಲ್ಲಿ ಹೋಗುವವರು ಬೆತ್ತಲೆಯಾಗಿ ನಿಲ್ಲಲಾಗದು, ಇವನ್ನೇ ಶಿಷ್ಟಾಚಾರ ಅನ್ನುವುದು. ಹಾಗೆಯೇ ಊಟ ತನ್ನ ಇಷ್ಟ. ನೋಟ ಪರರ ಇಷ್ಟ ಅನ್ನುವ ಗಾದೆ ಇದೆ, ಹಾಗೆಂದು ಇದನ್ನು ನನ್ನಿಷ್ಟ ಅನ್ನುತ್ತಾ ನನ್ನ ಬಟ್ಟೆ ನನ್ನುಷ್ಟ ಅನ್ನುತ್ತಾ ಎಲ್ಲ ವನ್ನೂ ಬಿಚ್ಚಿ ನಿಲ್ಲಲಾಗದು. ಇಂಥ ಕಡೆ ಸ್ವಾತಂತ್ರ್ಯ ಅಥವಾ ಹಕ್ಕಿನ ಪ್ರಶ್ನೆ ಬರುವ ಪ್ರಶ್ನೆಯೇ ಬರುವುದಿಲ್ಲ, ಹಾಗಾಗಿ ನಮಗಿರುವ ಸ್ವಾತಂತ್ರ್ಯಕ್ಕೆ ಜವಾಬ್ದಾರಿಯ ಕಾರಣಕ್ಕೆ ವ್ಯಾಪ್ತಿಯೂ ಮಿತಿಯೂ ಇದೆ. ಇದರಿಂದಾಗಿಯೇ ಸ್ವಾತಂತ್ರ್ಯಕ್ಕೆ ಮೌಲ್ಯ ಬರುತ್ತದೆ. ಸ್ವಾತಂತ್ರ್ಯದ ಜೊತೆಗೆ ವ್ಯಕ್ತಿಗೆ ಜವಾವ್ದಾರಿಯನ್ನೂ ಕಲಿಸುವ ಸದಾಶಯ ಇದರಲ್ಲಿದೆ. ಇವೆಲ್ಲ ನಾಗರಿಕ ಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತವೆ. ನಾನು ನನ್ನ ಇಷ್ಟದಂತೆ ಇರುತ್ತೇನೆಂದರೆ ಅದು ಆರೋಗ್ಯದ ವ್ಯಾಪ್ತಿಗೆ ಬರುತ್ತದೆಯೇ ವಿನಾಸ್ವಾತಂತ್ರö್ಯದ ವ್ಯಾಪ್ತಿಗೆ ಬರುವುದಿಲ್ಲಒಟ್ಟಿನಲ್ಲಿ ಆದರ್ಶಪ್ರಾಯವಾದ ಸ್ವಾತಂತ್ರ್ಯದ ಅರ್ಥದಲ್ಲಿ ಅನ್ಯ ಸಹಜೀವಿಗೆ ಯಾವುದೇ ಮಾತು ಮತ್ತು ಕೃತಿಯಿಂದ ಯಾವುದೇ ನೋವು ಅಥವಾ ಹಿಂಸೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ, ಆಗಲೇ ಅಂಥ ಸ್ವಾತಂತ್ರö್ಯಕ್ಕೆ ಬೆಲೆ ಅನ್ನಬಹುದು. ಅದನ್ನು ನಾಗರಿಕ ಸಮಾಜದ ಸದಸ್ಯರಾಗಿ ನಾವು ನೆನಪಿನಲ್ಲಿಟ್ಟೊಕೊಳ್ಳಬೇಕು, ಇಷ್ಟನ್ನು ಮಾತ್ರ ಇಲ್ಲಿ ಹೇಳಲು ಸಾಧ್ಯ, ಉಳಿದಂತೆ ಇರುವ ಸಂಗತಿಗಳು ಎಲ್ಲರಿಗೂ ತಿಳಿದಿವೆ.

No comments:
Post a Comment