ನಮ್ಮ ದೇಶದಲ್ಲಿ ಶಾಸನಗಳು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದರೂ ಅವುಗಳನ್ನು ಕುರಿತ ಶಾಸ್ತ್ರೀಯ ಅಧ್ಯಯನ ಶುರುವಾದುದು ಎರಡು ಶತಮಾನಗಳಿಂದ ಈಚೆಗೆ. ೧೭೮೪ರಲ್ಲಿ ವಿಲಿಯಂ ಜೋನ್ಸ್ ಎಂಬ ಬ್ರಿಟಿಷ್ ವಿದ್ವಾಂಸ ಶಾಸನಗಳನ್ನು ಮೊದಲ ಬಾರಿ ಅಧ್ಯಯನಕ್ಕೆ ಒಳಪಡಿಸಿದ. ಅನಂತರ ಪ್ರಿನ್ಸೆಪ್ ಎಂಬಾತ ೧೮೩೬ರಲ್ಲಿ ಅಶೋಕನ ಶಿಲಾಶಾಸನಗಳನ್ನು ಶಾಸ್ತ್ರೀಯ ಅಧ್ಯಯನಕ್ಕೆ ಒಳಪಡಿಸಿದ. ಅನಂತರ ೧೮೭೨ರಲ್ಲಿ ಇಂಡಿಯನ್ ಆಂಟಿಕ್ವೆರಿ ಎಂಬ ವಿದ್ವತ್ ಪತ್ರಿಕೆ ಭಾರತೀಯ ಜ್ಞಾನ ಪರಂಪರೆ ಕುರಿತ ಅಧ್ಯಯನಕ್ಕೆ ಮಹತ್ವ ಕೊಟ್ಟ ಮೇಲೆ ಶಾಸನಗಳ ಅಧ್ಯಯನಕ್ಕೆ ವೇಗ ದೊರೆಯಿತು. ಇದರ ಪರಿಣಾಮವಾಗಿ ಶಾಸನಗಳ ಅಧ್ಯಯನಕ್ಕೆಂದೇ ವಿಶೇಷವಾಗಿ ಎಪಿಗ್ರಾಪಿಯಾ ಇಂಡಿಕಾ ಸಂಪುಟಗಳು ಹೊರಬರುವಂತಾಯಿತು. ಅನಂತರ ೧೯೨೦ರ ಅನಂತರ ಈ ಸಂಪುಟಗಳು ಇಂಡಿಯನ್ ಆಂಟಿಕ್ವೆರಿಯ ಹಿಡಿತದಿಂದ ಹೊರಬಂದು ಸ್ವತಂತ್ರವಾಗಿ ಪ್ರಕಟವಾಗುವಂತಾಯಿತರೀ ಸಂಪುಟಗಳು ಪ್ರಾದೇಶಿಕ ಮಟ್ಟದಲ್ಲಿ ಇಂಥ ಸಂಪುಟಗಳ ಸಂಪಾದನೆ ಶುರುವಾಯಿತು. ಇವೆಲ್ಲ ಬೆಳವಣಿಗೆಯಿಂದ ಶಾಸನಗಳ ಮಹತ್ವ ಎಲ್ಲ ಕಡೆ ವೇಗವಾಗಿ ಹರಡಿತಲ್ಲದೇ ಜನರಲ್ಲೂ ಜಾಗೃತಿ ಮೂಡುವಂತಾಯಿತು. ಆದರೆ ಇವೆಲ್ಲ ಆರಂಭಿಕ ಶಾಸನ ಅಧ್ಯಯನಗಳಲ್ಲಿ ಮೂಲ ಶಾಸನಗಳ ಪಠ್ಯ ಸಂಗ್ರಹಣೆ, ಸಂಪಾದನೆ, ಅವುಗಳ ಇಂಗ್ಲಿಷ್ ಅನುವಾದ, ಅರ್ಥ, ಐತಿಗಾಸಿಕ ಮಾಹಿತಿಗಳನ್ನು ಆಧರಿಸಿ ಇತಿಹಾಸ ರಚಿಸುವತ್ತ ಗಮನ ಕೊಡಲಾಯಿತು. ಇದೇ ಬೆಳವಣಿಗೆ ಈಚಿನವರೆಗೂ ಮುಂದುವರೆದುಕೊಂಡು ಬಂದಿದೆ. ಆದರೆ ಈ ಅಧ್ಯಯನವನ್ನು ಆಧುನಿಕ ಸಮಾಜದ ದೃಷ್ಟಿಕೋನಕ್ಕೆ ಅಳವಡಿಸುವ ಯತ್ನ ನಡೆಯತೊಡಗಿದೆ. ಕನ್ನಡ ಶಾಸನಗಳಂತೂ ಈ ವಿಷಯದಲ್ಲಿ ಸಾಕಷ್ಟು ಮುಂದೆ ಹೋಗಿವೆ, ಕನ್ನಡ ಶಾಸನಗಳ ಸಂಗ್ರಹಣೆ ಮತ್ತು ಅಧ್ಯಯನ ಇದೇ ಸಮಯದಲ್ಲಿ ಬ್ರಿಟಿಷ್ ಅಧ್ಯಯನಕಾರರಿಂದ ಶುರುವಾಯಿತು, ಇವರಲ್ಲಿ ೧೮೦೦ರ ಅವಧಿಯಲ್ಲಿ ಇಂಥ ಕೆಲಸ ಆರಂಭಿಸಿದ ಕರ್ನಲ್ ಮೆಕಂಜೆ, ಫ್ಲೀಟ್, ರೈಸ್ಮೊದಲಾದವರು ದುಡಿದರು, ಇವರ ಅಧ್ಯಯನ ವಿಶ್ವವಿದ್ಯಾನಿಲಯಗಳ ಮೂಲಕ ಗಂಭೀರ ಅಧ್ಯಯನಕ್ಕೆ ಒಳಪಟ್ಟವು. ಕರ್ನಾಟಕ ಇತಿಹಾಸ ಅಕಾಡೆಮಿಇದಕ್ಕೆ ಪೂರಕವಾಗಿ ದುಡಿಯಿತು. ಪಾಶ್ಚಾತ್ಯ ವಿದ್ವಾಂಸರ ಜೊತೆಗೆ ಸ್ಥಳೀಯ ವಿದ್ವಂಸರಾದ ಶ್ರೀಕಂಠಶಾಸ್ತ್ರಿ, ಎಂ.ಎಚ್. ಕೃಷ್ಣ, ಆರ್. ನರಸಿಂಹಾಚಾರ್ ಮೊದಲಾದವರಿಂದ ಶಾಸನ ಅಧ್ಯಯನ ವೇಗ ಪಡೆಯಿತು. ಪರಿಣಾಮವಾಗಿ ಕನ್ನಡದ ಮೊದಲ ಶಾಸನವೆಂದು ತಿಳಿಯಲಾಗಿದ್ದ ಹಲ್ಮಿಡಿ ಶಾಸನವನ್ನು ಸ್ಥಳೀಯ ವಿದ್ವಂಸರೇ ಪತ್ತೆ ಹಚ್ಚುವಂತಾಯಿತು. ೧೯ನೆಯ ಶತಮಾನದ ಮೊದಲಾರ್ಧವನ್ನು ಕನ್ನಡ ಶಾಸನಗಳ ಅಧ್ಯಯನದ ಸುವರ್ಣಕಾಲ ಎಂದು ಕರೆಯಬಹುದಾದ ಸಮಯವಾಯಿತು. ಅಲ್ಲಿಂದ ಇಲ್ಲಿಯವರೆಗೂ ಕನ್ನಡ ಶಾಸನಗಳು ಬಗೆಬಗೆಯ ಅಧ್ಯಯನಕ್ಕೆ ಒಳಗಾಗುತ್ತ ಬಂದಿವೆ. ಇಂಥ ಅಧ್ಯಯನ ಹೇಗೆ ಹೊಸ ರೂಪ ಪಡೆಯುತ್ತಿದೆ ಎಂಬುದಕ್ಕೆ ಇದೀಗ ಪ್ರಕಟವಾಗಿರುವ ಸಂದೀಪ್ ಬಾಲಕೃಷ್ಣನ್ ಅವರ ಈ ಕೃತಿ ಉತ್ತಮ ಉದಾಹರಣೆಯಾಗಿದೆ.
ಸದ್ಯ ನನ್ನ ಮುಂದೆ "ಸ್ಟೋರೀಸ್ ಫ಼್ರಂ ಇನ್ಸಕ್ರಿಪ್ಷನ್ಸ್" ಎಂಬ ಕರ್ನಾಟಕದ ಶಾಸನ ಕುರಿತ ಕೃತಿಯೊಂದು ಹೊಸ ರೀತಿಯಲ್ಲಿ ನಮ್ಮ ಶ್ರೀಮಂತ ಶಾಸನಗಳ ಶ್ರೀಮಂತ ಸಂಸಕೃತಿಯ ತೆಗಳನ್ನು ಬಿಚ್ಚಿಡುತ್ತಿದೆ. ಇದು ಹೊಸದಾಗಿ ಏನು ಹೇಳುತ್ತಿದೆ? ಇಲ್ಲಿರುವ ಶಾಸನಗಳೆಲ್ಲ ಎಪಿಗ್ರಾಪಿಯಾ ಇಂಡಿಕದಲ್ಲಿ ಪ್ರಕಟವಾದವೇ, ಅನೇಕ ಕಡೆ ರ್ಚೆಗೆ ಬಂದವೇ ಅನ್ನುವುದು ನಿಜವಾದರೂ ಇಲ್ಲಿನ ಶಾಸನಗಳ ಸಂಗತಿಯನ್ನು ಇದು ನಮ್ಮ ಮುಂದೆ ಚಿಂತನೆಗೆ ತಂದಿರುವ ರೀತಿ ಹೊಸದು. ಹೊಸ ದೃಷ್ಟಿಯಿಂದ ಇಂದಿನ ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಶತಮಾನಗಳ ಹಿಂದಿನ ಶಾಸನಗಳ ಕಾಲದಲ್ಲಿ ಯಾವ ರೀತಿಯಲ್ಲಿ ಬಿತ್ತರವಾಗಿದೆ. ಅದರ ಮೂಲಕ ಭಾರತೀಯ ಸಾಂಸ್ಕೃತಿಕ ಮನಸ್ಸು ಹೇಗೆ ಬೆಳೆದಿದೆ. ಇದನ್ನು ಪಾಶ್ಚಾತ್ಯರು ಕಂಡ ಬಗೆ ಹೇಗೆ ಎಂಬುದನ್ನು ನಮಗೆ ತಿಳಿಸುತ್ತದೆ. ನಮ್ಮ ಮುಂದೆ ಇಂದು ಕಾಣಿಸುತ್ತಿರುವ ಸಹಬಾಳ್ವೆಯ ವಿಚಾರ ಶಾಸನಗಳನ್ನು ಅವಲೋಕಿಸಿದರೆ ಖಂಡಿತ ಹೊಸದಲ್ಲವೆನಿಸುತ್ತದೆ. ನಮ್ಮ ಸಂಪ್ರದಾಯದಲ್ಲಿ ಒಂದೇ ಕುಟುಂಬದ ಸದಸ್ಯರು ವಿವಿಧ ಸಂಪ್ರದಾಯವನ್ನು ಅನುಸರಿಸಿದ್ದು, ಒಬ್ಬನೇ ವ್ಯಕ್ತಿ ವಿವಿಧ ಸನ್ನಿವೇಶದಲ್ಲಿ ವಿವಿಧ ಮತ ಧರ್ಮ ಅನುಸರಿಸಿದ್ದು ಹಾಗೂ ಸ್ವತಃ ಒಂದು ಸಂಪ್ರದಾಯವನ್ನು ಅನುಸರಿಸುತ್ತ ಮತ್ತೊಂದು ಸಂಪ್ರದಾಯಕ್ಕೆ ಸಾಕಷ್ಟು ಉತ್ತೇಜನ ಕೊಟ್ಟಿದ್ದು, ಅದರಿಂದ ಯಾವುದೇ ರೀತಿಯ ಸಂಘರ್ಷ ಉಂಟಾಗದಿದ್ದುದು ನಮ್ಮ ಗಮನ ಸೆಳೆಯುತ್ತದೆ. ಜೊತೆಗೆ ಈ ಕೃತಿ ಇಂಥ ಸಂಗತಿಗಳನ್ನು ಉಲ್ಲೇಖಿಸುವಾಗ ಸಾಂದರ್ಬಿಕವಾಗಿ ನಾವು ಇಂಥ ವಿಷಯವನ್ನು ಈಗ ಯಾವ ರೀತಿ ಕಾಣುತ್ತಿದ್ದೇವೆಂದು ಉಲ್ಲೇಖಿಸಿ ಓದುಗರು ಚಿಂತಿಸುವಂತೆ ಮಾಡಿ ಕೈಬಿಡುತ್ತಾರೆ. ಇದಕ್ಕೆ ಯಾವುದೇ ರೀತಿಯ ತೀರ್ಪು ಕೊಡುವುದಿಲ್ಲ, ತಮ್ಮ ಅಭಿಪ್ರಾಯವನ್ನು ಎಲ್ಲಿಯೂ ಹೇರುವುದಿಲ್ಲ ಎಂಬ ಕಾರಣಕ್ಕೆ ಇದು ಮುಖ್ಯವಾಗುತ್ತದೆ.
ಇತಿಹಾಸ, ಶಾಸನಗಳಲ್ಲಿ ವಿಶೇಷ ಆಸಕ್ತಿ ಇರುವ ಇವರು ಟಿಪ್ಪೂ ಸುಲ್ತಾನ್, ಭಾರತವರ್ಷ, ಆಕ್ರಮಣಕಾರರ ಇತಿಹಾಸಗಳ ಕುರಿತು ಹತ್ತಾರು ಕೃತಿಗಳನ್ನು ರಚಿಸಿ ಹೆಸರಾಗಿದ್ದಾರೆ, ಇತಿಹಾಸವೆಂದರೆ ಎಂದೋ ಆಗಿ ಹೋದ ವಿಷಯ ವಿವರವಲ್ಲ, ಅದು ಸದಾ ಪ್ರಸ್ತುತ ಎಂಬುದನ್ನು ತಮ್ಮ ಬರೆಹಗಳ ಮೂಲಕ ಚರಿತ್ರೆ ಜೀವಂತ ಎಂಬುದನ್ನು ತೋರಿಸಿಕೊಡುವುದು ಇವರ ವಿಶೇಷ. ಪ್ರಸ್ತುತ "ಸ್ಟೋರೀಸ್ ಫ್ರಂ ಇನ್ಸಕ್ರಿಪ್ಷನ್ಸ್" ಕೃತಿಯಲ್ಲಿ ಅವರು ವಿಶೇಷವಾಗಿ ಕನ್ನಡದ ಪ್ರಮುಖ ಶಾಸನಗಳ ಹಿನ್ನೆಲೆಯಲ್ಲಿ ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ಒಳನೋಟಗಳನ್ನು ತೆರೆದಿಟ್ಟಿದ್ದಾರೆ. ಇದರ ಅವಲೋಕನ ಇಲ್ಲಿದೆ. ಪ್ರಸ್ತುತ ಕೃತಿ ಶಾಸನಗಳ ಅಧ್ಯಯನ ಇತಿಹಾಸದ ವಿವರಗಳ ಜೊತೆಜೊತೆಗೆ ಜನಸಾಮಾನ್ಯರಲ್ಲಿ ಬಳಕೆಯಲ್ಲಿರುವ ಭಾಷಾ ಪ್ರಯೋಗ, ಆಚಾರ ವಿಚಾರಗಳ ಮಾಹಿತಿಗಳ ಉಲ್ಲೇಖಗಳ ಬಗ್ಗೆಯೂ ಮಾಹಿತಿ ಮತ್ತು ವಿಶ್ಲೇಷಣೆ ಕೊಡುತ್ತ ಪ್ರಾಚೀನ ಶಾಸನಗಳ ಸಮಕಾಲೀನತೆಯನ್ನು ಓದುಗರ ಮುಂದಿಡುತ್ತದೆ. ಇಂಥ ಪ್ರಯತ್ನವನ್ನು ಹಿಂದೆಯೂ ಪರಮಶಿವ ಮೂರ್ತಿ, ಪಿ.ವಿ. ಕೃಷ್ಣ ಮೂರ್ತಿ, ಕೃಷ್ಣರಂಥ ಕೆಲವು ಶಾಸನ ತಜ್ಞರು ನಮ್ಮಲ್ಲಿ ಮಾಡಿದ್ದಾರೆ. ನಿದರ್ಶನಕ್ಕೆ ನೋಡುವುದಾದರೆ ಇಲ್ಲಿ ಕನ್ನಡ ಮತ್ತು ತಮಿಳುನಾಡುಗಳಲ್ಲಿ ಬಳಕೆಯಲ್ಲಿರುವ 'ಮೂದೇವಿ' ಬೈಗುಳ ಪದ ಸಭ್ಯದ್ದಾದರೂ ಅದರ ಅರ್ಥ ದಡ್ಡ, ಹೆಡ್ಡ, ಮಾತು ಬಾರದವಳು, ಮಂದಮತಿ, ಕುರೂಪಿ ಇತ್ಯಾದಿ ಅರ್ಥ ಬರುವಂತೆ ಬಳಸಲಾಗುತ್ತದೆ, ಇದು ಹೆಣ್ಣುಮಕ್ಕಳನ್ನು ಕುರಿತು ಬಯ್ಯುವಾಗ ವಿಶೇಷವಾಗಿ ಬಳಕೆಯಾಗುತ್ತದೆ. ವಾಸ್ತವವಾಗಿ ಈ ಪದದ ಬಗ್ಗೆಬಹಳಷ್ಟು ಜನರಿಗೆ ತಿಳಿದೇ ಇಲ್ಲ, ಆದರೂ ಬಳಕೆ ಅವ್ಯಾಹತವಾಗಿ ಮಾಡುತ್ತಲೇ ಇರುತ್ತಾರೆ, ಈ ಪದ ಪದ್ಮಪುರಾಣದಲ್ಲಿ ಮೊದಲಬಾರಿಗೆ ದೊರೆಯುತ್ತದೆ. ಈ ಮೂದೇವಿ ಮೂಲತಃ ದುರ್ಗಾದೇವಿಯ ಮೂಲ ರೂಪ, ಆಕೆ ಸಮುದ್ರಮಂಥನ ಕಾಲದಲ್ಲಿ ಮೊದಲು ಉದ್ಭವಿಸಿದವಳು, ಈ ದೃಷ್ಟಿಯಿಂದ ಈಕೆ ಲಕ್ಷ್ಮಿಗಿಂತ ಹಿರಿಯಳು, ಆಕೆ ದಡ್ಡಿ, ಕುರೂಪಿ ಆಗಿದ್ದವಳೆಂಬ ಮಾಹಿತಿ ದೊರೆಯುತ್ತದೆ. ಜೊತೆಗೆ ಈ ಮೂದೇವಿಯೇ ಜ್ಯೇಷ್ಠಾ ದೇವಿ, ಇವಳ ಪ್ರಾಚೀನ ಉಲ್ಲೇಖ ತಮಿಳುನಾಡಿನ ಮಧುರೈಯಲ್ಲಿ ಪ್ರಸ್ತುತ ಶಕೆ ೭೭೩-೭೪ರ ಅವಧಿಯ ಸತ್ತನ ಗಣಪತಿ ಎಂಬ ಸೇನಾಧಿಪತಿಯ ಹೆಂಡತಿ ನಕ್ಕನ್ ಕೋರಿ ಕಟ್ಟಿಸಿದ ದೇವಸ್ಥಾನದ ಗೋಡೆಯ ನೇಲೆ ದೊರೆಯುತ್ತದೆಂದೂ ಈ ಜ್ಯೇಷ್ಠಾ ದೇವಿ ತಮಿಳುನಾಡಿನ ಜನಪ್ರಿಯ ದೇವತೆ ಆಗಿದ್ದಳೆಂದು ತಿಳಿದುಬರುತ್ತದೆ. ಇಂಥ ಕುತೂಹಲಕಾರಿ ವಿಷಯಗಳು ಇದರಲ್ಲಿನ ಎಲ್ಲ ೧೬ ಲೇಖನಗಳಲ್ಲೂ ದೊರೆಯುತ್ತದೆ. ಇದರ ವಿಶೇಷವೆಂದರೆ ಕರ್ನಾಟಕ ಮತ್ತು ತಮಿಳುನಾಡುಗಳ ನಡುವಿನ ಸಾಂಸ್ಕೃತಿಕ ಕೊಳುಕೊಡುವಿಕೆಯನ್ನು ಕಣ್ಣಿಗೆ ಕಟ್ಟುವಂತೆ ದಾಖಲೆ ಸಮೇತ ಮನಗಾಣಿಸುವುದು, ಇದರಿಂದ ಪರಸ್ಪರ ಬಾಂಧವ್ಯ ವೃದ್ಧಿಯ ಜೊತೆಗೆ ನಮ್ಮ ಪರಂಪರೆಯ ಹಿರಿಮೆ ಕೂಡ ಅರಿವಾಗುತ್ತದೆ. ಶಾಸನಗಳು ಎಂದೋ ಆಗಿ ಹೋದ ಘಟನೆಗೆ ಸಂಬಂಧಿಸಿದ್ದಲ್ಲ, ಅವು ಇಂದಿಗೂ ಹೇಗೆ ಪ್ರಸ್ತುತ ಎಂಬುದು ಕೂಡ ಅರಿವಾಗುವ ಜೊತೆಗೆ ನಮ್ಮ ಗಮನಕ್ಕೆ ಬಂದ ಶಾಸನಗಳನ್ನು ಇದೇ ದೃಷ್ಟಿಯಲ್ಲಿ ಗಮನಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ.
ಶಾಂತಿ, ಸಹಬಾಳ್ವೆಯ ಬಗ್ಗೆ ಹೆಬ್ಬಾಳೆಯ ಶಾಸನ ಕೊಡುವ ವಿವರ ಕುರಿತ ಲೇಖನ, ಗುಜರಾತಿನ ಸಂಜನ ಮತ್ತು ಭಿಲ್ಲಮ ದೇವನ ದೇವಾಲಯಗಳ ಹಾಗೂ ಕರ್ನಾಟಕದ ಸಂಬಂಧ ಕುರಿತ ಆಸಕ್ತಿಕರ ವಿವರಗಳು ನಮ್ಮ ಗಮನ ಸೆಳೆಯುತ್ತವೆ, ಈ ಕಾರಣದಿಂದ ಪ್ರಸ್ತುತ ಕೃತಿ ಪ್ರಾಚೀನ ಶಾಸನಗಳನ್ನು ಇಂದಿನ ಸಂದರ್ಭದಲ್ಲಿ ನಾವು ಅರಿತು ಅವಡಿಸಿಕೊಳ್ಳಬೇಕಾದ ಕ್ರಮದ ಬಗ್ಗೆ ಸರಳವಾಗಿ ತಿಳಿಸಿಕೊಡುವ ಕಾರಣಕ್ಕೆ ಬಹಳ ಮಹತ್ವದ್ದು ಹಾಗೂ ಇದುವರೆಗೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಪತ್ತೆಯಾದ ಶಾಸನಗಳ ಸಂಖ್ಯೆಯೇ ೪೦ ಸಾವಿರ ದಾಟುತ್ತವೆ, ಇವುಗಳನ್ನು ಇಂಥ ಹೊಸ ದೃಷ್ಟಿಯಲ್ಲಿ ಮತ್ತೆ ಅಧ್ಯಯನಕ್ಕೊಳಪಡಿಸುವ ಅಗತ್ಯವಿದೆ ಎಂಬುದನ್ನು ತೋರಿಸುತ್ತದೆ. ಇಷ್ಟೆಲ್ಲ ಆಸಕ್ತಿದಾಯಕ ಶಾಸನಗಳ ಬಗ್ಗೆ ಈಚೆಗೆ ಜನರಲ್ಲಿ ಆಸಕ್ತಿ ಮತ್ತೆ ಕಡಿಮೆಯಾಗುತ್ತಿದ್ದು, ಇಂಥ ಸಕಾಲಿಕ ಎನಿಸುವ ಮಾಹಿತಿ ಕೊಡುವ ಮತ್ತಷ್ಟು ಕೃತಿಗಳು ಎಲ್ಲ ಕಡೆಯಿಂದ ಹೊರಬರುವಂತಾದರೆ ಶಾಸನಗಳ ಅಧ್ಯಯನಕ್ಕೆ ಮತ್ತೆ ಸುವರ್ಣಯುಗ ಪ್ರಾಪ್ತವಾಗಬಹುದೆನಿಸುತ್ತದೆ.
ಇಂಥ ಕೃತಿಯನ್ನು ಪ್ರಕಟಿಸಿದ ಹುಬ್ಬಳ್ಳಿಯ ಸುಬ್ಬು ಪ್ರಕಾಶನದ ಮಲೀಕರಿಗೂ ಲೇಖಕರಿಗೂ ಕನ್ನಡ ಸಾಹಿತ್ಯ ಸಂಸ್ಕೃತಿ ಪ್ರಿಯರು ಸದಾ ಋಣಿಗಳು.
ಪುಸ್ತಕ ವಿವರ -
ಸ್ಟೋರೀಸ್ ಫ್ರಂ ಇನ್ಸ್ ಕ್ರಿಪ್ಷನ್ಸ್,
ಲೇ- ಸಂದೀಪ್ ಬಾಲಕೃಷ್ಣನ್
ಸುಬ್ಬು ಪಬ್ಲಿ ಕೇಶನ್ಸ್, ಹುಬ್ಬಳ್ಳಿ, ಮೊದಲ ಮುದ್ರಣ- ೨೦೨೩,
ಪುಟಗಳು- ೧೫೬+೨೦ ವರ್ಣರಂಜಿತ ಪುಟಗಳು, ಬೆಲೆ-ರೂ೩೯೯

No comments:
Post a Comment