ನಮ್ಮ ದೇಶದಲ್ಲಿ ಆಧ್ಯಾತ್ಮಿಕ ಸಾಧಕರಿಗೆ ಬಹುದೊಡ್ಡ ಸ್ಥಾನವಿದೆ, ಅವರು ಯಾವಾಗಲೂ ಸಾಧಕರನ್ನು ಪವಾಡಪುರುಷರೆಂದೋ ದೈವೀಪುರುಷರೆಂದೋ ಸಾಮಾನ್ಯವಾಗಿ ಭಾವಿಸುತ್ತಾರೆಸದಾಕಾಲ ಅವರನ್ನು ಪೂಜನೀಯ ಭಾವದಿಂದ ಆರಾಧಿಸುತ್ತಿರುತ್ತಾರೆ ಆದ್ದರಿಂದ ಇಂಥವರನ್ನು ಕುರಿತ ಕೃತಿಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಇಂಥ ಕೃತಿಗಳಲ್ಲಿ ಹೆಸರಿಸಬೇಕಾದ ಹತ್ತು ಹಲವು ಕೃತಿಗಳಿದ್ದರೂ ಹೇಳಲೇ ಬೇಕಾದ ಕೆಲವೆಂದರೆ ಮುಕಂದೂರು ಸ್ವಾಮಿಗಳ ಬಗ್ಗೆ ಬೆಳಗೆರೆ ಕೃಷ್ಣಶಾಸ್ತ್ರಿಗಳು ರಚಿಸಿದ ಯೇಗ್ದಾಗೆಲ್ಲಾ ಐತೆ, ಅನುವಾದವಾಗಿ ಬಂದ ಸ್ವಾಮಿ ರಾಮ ಅವರ ಆಧ್ಯಾತ್ಮ ಸಾಧನೆ ವಿವರಿಸುವ ಜಗತ್‌ಪ್ರಸಿದ್ಧ ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ, ರಮಣ ಮಹರ್ಷಿಗಳ ಸಾಧನೆ ಬೋಧನೆ ವಿವರಿಸುವ ಅವರ ಶಿಷ್ಯ ಕೆ ವಿ ನಾರಾಯಣನ್ ಅವರು ರಚಿಸಿದ ನಾನು ಯಾರು, ಶಿರಡಿ ಸಾಯಿಬಾಬಾ ಅವರನ್ನು ಕುರಿತ ಸಾಯಿಗುರು ಚರಿತೆ, ಶ್ರೀಪಾದ ವಲ್ಲಭರ ಗುರುಚರಿತೆ ಮೊದಲಾದವು. ದೇಶದ ಅನ್ಯಭಾಷೆಗಳಲ್ಲಿ ರಚಿತಗೊಂಡು ಅನುವಾದವಾಗಿ ಕನ್ನಡಕ್ಕೆ ಬಂದ ಇನ್ನೂ ಹಲವು ಕೃತಿಗಳಿವೆ. ಈಗ ಈ ಪಟ್ಟಿಗೆ ಸೇರಿಕೊಂಡ ಇತ್ತೀಚೆಗೆ ಒಂದೆರಡು ದಶಕಗಳ ಹಿಂದೆ ಸಮಾಧಿಸ್ತರಾದ ಭಕ್ತರಿಂದ ಗುರುನಾಥರೆಂದೂ ವೆಂಕಟಾಚಲರೆಂದೂ ಗೌರವದಿಂದ ಕರೆಯಿಸಿಕೊಂಡ ಸಸಖರಾಯಪಟ್ಟಣದಲ್ಲಿ ಆಶ್ರಮ ಹೊಂದಿದ್ದ ಗುರುನಾಥರ ಆಧ್ಯಾತ್ಮಿಕ ಸಾಧನೆ ಸಿದ್ದಿಯನ್ನು ಮನಮುಟ್ಟುವಂತೆ ಚಿತ್ರಿಸುವ ಶ್ರೀಗುರುಗಾಥಾ ಎಂಬ ಕೃತಿ. ೨೦೧೭ರಲ್ಲಿ ಮೊದಲು ಮುದ್ರಣವಾದ ಇದು ೨೦೨೨ರಲ್ಲಿ ಮರು ಮುದ್ರಣ ಕಂಡಿರುವುದು ಭಕ್ತರಿಂದ ಇದು ಪಡೆದ ಗೌರವಾದರವನ್ನು ತೋರಿಸುತ್ತದೆ, ಸಾಮಾನ್ಯವಾಗಿ ಇಂಥ ಆಧ್ಯಾತ್ಮಿಕ ಸಾಧಕರು ಮಾಡುವ ಕೆಲಸಗಳು ಜನತೆಗೆ ವಿಶೇಷವಾಗಿ ಕಾಣಿಸಿ ಅವರನ್ನು ಪವಾಡಪುರುಷರಂತೆ ನೋಡುವಂತೆ ಮಾಡುತ್ತದೆ. ಆದರೆ ಗುರುನಾಥರು ಭಕ್ತರಿಗೆ ಸರಿದಾರಿ ತೋರಿಸಲು ಕೆಲವೊಮ್ಮೆ ಇಂಥ ಪವಾಡಗಳನ್ನು ಮಾಡಿದ್ದಿದೆ, ಅವರ ದೇಹ ಭೌತಿಕವಾಗಿ ನಮ್ಮಿಂದ ದೂರವಾಗಿದ್ದರೂ ಅವರ ಅಮರ ಚೈತನ್ಯ ಭಕ್ತರೊಂದಿಗೆ ಸದಾಕಾಲ ಇರುತ್ತದೆ ಎಂಬ ನಿದರ್ಶನಗಳು ಇಲ್ಲಿವೆ, ಭಕ್ತರು ಹೇಳುವಂತೆ ಗುರುನಾಥರು ಭಕ್ತರ ಮನಸ್ಸಿಗೆ ಸಮಾಧಾನ ಮಾಡಲು ಏಕಕಾಲಕ್ಕೆ ಸಾಕಷ್ಟು ದೂರದಲ್ಲಿರುವ ಊರುಗಳಲ್ಲಿ ಏಕಕಾಲಕ್ಕೆ ಬೇರೆ ಬೇರೆ ರೂಪಗಲ್ಲಿ ದರ್ಶನ ಕೊಟ್ಟಿದ್ದಿದೆ. ಪವಾಡ ಮಾಡಿ ಜನರನ್ನು ಮರಳು ಗೊಳಿಸಲು ಅವರು ಹೀಗೆ ಮಾಡುತ್ತಿರಲಿಲ್ಲ, ಬದಲಾಗಿ ಜನರ ಒಳಗಣ್ಣು ತೆರೆಸಲು ಹಾಗೂ ಗುರು ದೇವ ಭಾವದ ಬಗ್ಗೆ ಜನರಲ್ಲಿ ಸೂಕ್ತ ಅರಿವು ಮೂಡಿಸುವ ಉದ್ದೇಶದಿಂದ ಇಂಥ ದರ್ಶನ ಕೊಡುತ್ತಿದ್ದರೆಂದು ಕೃತಿ ಓದಿದಾಗ ಅರಿವಾಗುತ್ತದೆ. ಇಂಥ ಯಾವುದೇ ಪವಾಡ ಮಾಡದೇ ಜನರಲ್ಲಿ ಮೌನದಿಂದಲೇ ಸಂವಾದ ನಡೆಸಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ ರಮಣ ಮಹರ್ಷಿಗಳಂಥ ಗುರುಗಳೂ ಈ ನೆಲದಲ್ಲಿ ಆಗಿಹೋಗಿದ್ದಾರೆ. ಇಂಥವರನ್ನೂ ನಮ್ಮ ಜನ ಮರೆತಿಲ್ಲ, ಪವಾಡಗಳ ಮೂಲಕ ಜನರನ್ನು ಸೆಳೆಯುವ ಕಾರಣಕ್ಕಾಗಿ ಪವಾಡ ಮಾಡುತ್ತಿದ್ದ ಸಾಧಕರೂ ನಮ್ಮಲ್ಲಿ ಆಗಿಹೋಗಿದ್ದಾರೆ ಇಂಥವರಲ್ಲಿ ಪುಟ್ಟಪರ್ತಿಯ ಸಾಯಿಬಾಬಾ ಒಬ್ಬರು, ಆದರೆ ಆಧ್ಯಾತ್ಮದ ಹೆಸರಲ್ಲಿ ಕೆಲವು ಪವಾಡಗಳನ್ನು ಜಾದೂಗಾರರಂತೆ ಕಲಿತು ಜನಸಾಮಾನ್ಯರನ್ನು ಮರಳು ಮಾಡಿ ಸ್ವಾರ್ಥ ಸಾಧಿಸಿಕೊಳ್ಳುತ್ತಿದ್ದ ಸಾಧಕರೆಂದುಕೊಂಡ ಜನರಿಗೂ ನಮ್ಮ ಸಮಾಜದಲ್ಲಿ ಕೊರತೆ ಇಲ್ಲ, ಇಂಥವರ ನಡುವೆ ಭಿನ್ನವಾಗಿ ನಿಲ್ಲುವವರು ಗುರುನಾಥರು. ಇವರ ಸರಳತೆ, ಮತ ಭೇದವಿಲ್ಲದ, ಸಮಾನತೆಯ ದೃಷ್ಟಿಕೋನ ಮೊದಲಾದವು ಆಧುನಿಕ ಸಮಾಜದಲ್ಲಿದ್ದ ಅನೇಕ ಕುರುಡು ಮನೋಭಾವವನ್ನು ಹೊಡೆದೋಡಿಸಿತು. ಅವರ ಭಕ್ತಗಣ ಕೂಡ ಸಮಾನತೆಯನ್ನು ಅನುಸರಿಸುವಂತೆ ಅವರು ಬೋಧಿಸದೇ ನಡೆದು ತೋರಿಸಿದರು ಎಂಬುದು ವಿಶೇಷ.
ಪ್ರಸ್ತುತ ಕೃತಿಯಲ್ಲಿ ಒಟ್ಟೂ ೫೩ ಅಧ್ಯಾಯಗಳಿದ್ದು, ಇವುಗಳನ್ನು ಮೊದಲ ಅಧ್ಯಾಯದಿಂದ ಕ್ರಮವಾಗಿಯೇ ಓದಬೇಕಾದ ಅಗತ್ಯವಿಲ್ಲ, ವಿಷಯಾನುಕ್ರಮಣಿಕೆಯಲ್ಲಿ ಓದುಗರು ತಮಗೆ ಇಷ್ಟವಾದ ಅಥವಾ ಕುತೂಹಲಕರ ಅನಿಸಿದ ಯಾವುದೇ ಅಧ್ಯಾಯವನ್ನು ಹಿಂದೆ ಮುಂದೆ ಮಾಡಿಕೊಂಡು ಓದಿ ಆನಂದಿಸಬಹುದು, ಏಕೆಂದರೆ ಇಲ್ಲಿನ ಅಧ್ಯಾಯಗಳನ್ನು ವಿಷಯಾನುಸಾರ ವಿಂಗಡಿಸಿಕೊಳ್ಳಲಾಗಿದೆ, ಹಾಗಾಗಿ ಕ್ರಮಾನುಗತ ಬೆಳವಣಿಗೆಯಾಗಲೀ ಅಧ್ಯಾಯಗಳ ಪರಸ್ಪರ ಜೋಡಣೆಯ ಅಗತ್ಯವಾಗಲೀ ಇವುಗಳಿಗೆ ಬೇಕಿಲ್ಲ. ಆದರೆ ಒಂದೊಂದು ಅಧ್ಯಾಯವೂ ಸೊಗಸಾದ ಕಾದಂಬರಿ ಅಥವಾ ಪತ್ತೇದಾರಿ ಶೈಲಿಯಲ್ಲಿ ಇರುವುದರಿಂದ ಯಾವ ಅಧ್ಯಾಯವನ್ನೂ ಯಾರೂ ಕೈಬಿಡದೇ ಓದುತ್ತಾರೆಂದು ಖಚಿತವಾಗಿ ಹೇಳಬಹುದು. ಮೊದಲ ಮೂರು ಅಧ್ಯಾಯಗಳನ್ನು ಲೇಖಕರು ಕೃತಿಯ ಶೈಲಿಯನ್ನು ಸ್ಥಾಪಿಸಲು ಪೀಠಿಕೆಯ ರೂಪದಲ್ಲಿ ಹೇಳಿದ್ದಾರೆ ಮುಂದೆ ಗುರುನಾಥರ ಜೀವನ ಸಾಧನೆಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತವೆ, ಅದರಲ್ಲೂ ಗುರುನಾಥರು ನಂಬಿ ಬಂದ ಭಕ್ತರ ಕಷ್ಟ ಕಾರ್ಪಣ್ಯವನ್ನು ಕೆಲವೊಮ್ಮೆ ಕೇಳಿ ಕೆಲವೊಮ್ಮೆ ಸ್ವತಃ ತಿಳಿದು ಪರಿಹಾರ ಕೊಡುತ್ತಿದ್ದರು, ಇವೆಲ್ಲ ಬಡವರಿಗೆ ಶ್ರೀಮಂತರಿಗೆ ಎಂಬ ಭೇದ ಇರುತ್ತಿರಲಿಲ್ಲ, ಗುರುವಿಗೆ ಎಲ್ಲ ಭಕ್ತರೂ ಒಂದೇ, ಸಮಸ್ಯೆಗಳಿಗೆ ಪರಿಹಾರ ಮಾರ್ಗ ಕೂಡ ಸಮಾನ ಎಂಬುದು ಗುರುಗಳ ಆದರ್ಶ, ಕೃತಿಯ ಅಂತ್ಯದಲ್ಲಿ ಗುರುಗಳ ಉಪದೇಶ ಸಾರದಲ್ಲಿ ಮುಖ್ಯವಾದ ೨೬ ಮಾತುಗಳನ್ನು ಕೊಡಲಾಗಿದೆ. ಪರಿಶಿಷ್ಟ ಭಾಗದಲ್ಲಿ ಇದರ ಜೊತೆಗೆ ಶ್ರೀ ದತ್ ಅವಧೂತರು ಭಕ್ತರಿಗಾಗಿ ರಚಿಸಿಕೊಟ್ಟ ೨೮೯ ಶ್ಲೋಕಗಳಲ್ಲಿ ೨೬ ಶ್ಲೋಕಗಳಿಗೆ ಮಾತ್ರ ಅರ್ಥವತ್ತಾದ ವಿವರ ಪೂರ್ಣ ಅನುವಾದ ಕೊಡಲಾಗಿದೆ, ಇದನ್ನು ಓದಿದರೆ ಸದರಿ ಲೇಖಕರು ಉಳಿದ ಶ್ಲೋಕಗಳಿಗೂ ಇಂಥ ವಿವರ ಕೊಡಬಾರದೇ ಅನಿಸುತ್ತದೆ, ಇವನ್ನು ಬಿಟ್ಟು ಅವತರಣಿಕೆಯಲ್ಲಿ ಗುರುನಾಥರು ಸಾಂಪ್ರದಾಯಿಕ ಮದುವೆಗೆ ಬದಲಾಗಿ ವಧೂವರರಲ್ಲಿ ಪರಸ್ಪರ ನಂಬಿಕೆ ಇದ್ದರೆ ಎರಡೂ ಕಡೆಯ ಪೋಷಕರಿಗೆ ಹೊರೆ ಆಗದಂತೆ ವಿಧಿವತ್ತಾಗಿ ಮದುವೆ ಮಾಡುವುದು ಹೇಗೆ, ಅದನ್ನು ಪ್ರತಿಪಾದಿಸುವ ಅಗತ್ಯ ಏಕಿದೆ ಎಂದು ಹೇಳಿದ ಮಾತುಗಳು ದಾಖಲಾಗಿವೆ, ಗುರೂಪದೇಶವಂತೂ ಆಧುನಿಕ ಪ್ರಪಂಚದಲ್ಲಿ ಈ ಮಾತುಗಳನ್ನು ಅಳವಡಿಸಿಕೊಂಸರೆ ಬೇರೆ ಯಾವ ಭಗವದ್ಗೀತೆಯ ಅಗತ್ಯವಾಗಲೀ ಧರ್ಮಗ್ರಂಥಗಳ ಅಗತ್ಯವಾಗಲೀ ಇರುವುದೇ ಇಲ್ಲ, ಅಷ್ಟೇ ಅಲ್ಲದೇ ಸಮಾಜದ ಎಲ್ಲರೂ ಈ ಮಾತುಗಳಂತೆ ನಡೆದುಕೊಂಡರೆಯಾವುದೇ ಪೊಲೀಸ್ ಠಾಣೆ, ನ್ಯಾಯಾಲಯವಾಗಲೀ ಪಂಚಾಯ್ತಿ ಕಟ್ಟೆಗಳ ಅಗತ್ಯವಾಗಲೀ ಕಾನೂನು ಶಿಕ್ಷೆಗಳ ಪ್ರಶ್ನೆಯಾಗಲೀ ಉದ್ಭವಿಸುವುದೇ ಇಲ್ಲ. ಅಷ್ಟು ಆದರ್ಶಪ್ರಾಯವಾದ ನುಡಿಗಳು ಇವಾಗಿವೆ. ಈ ದೃಷ್ಟಿಯಿಂದ ಈ ಕೃತಿಯನ್ನು ಒಮ್ಮೆ ಓದಿ ಬದಿಗೆ ಇಡುವಂಥದ್ದಲ್ಲ, ಆಗಾಗ ತಿರುವಿಹಾಕಬೇಕಾದ ಗಗ್ರಂಥ ಈ ದೃಷ್ಟಿಯಿಂದ ನಿಜಕ್ಕೂ ಇದು ಪಾರಾಯಣ ಯೋಗ್ಯವಾದ ಪುಸ್ತಕವೇ ಹೌದು. ಕೆಲವು ಸಂದರ್ಭಗಳನ್ಮು ಓದಿ ಮೆಲುಕು ಹಾಕುತ್ತಿದ್ದರೆ ಛೆ ನಾವು ಗುರುಗಳ ಕಾಲದಲ್ಲಿಯೇ ಈ ಪ್ರಪಂಚದಲ್ಲಿದ್ದರೂ ಅವರ ಕೃಪೆಗೆ ಪಾತ್ರವಾಗುವ ಭಾಗ್ಯ ಸಿಗದೇ ಹೋಯಿತಲ್ಲ ಅಂಥ ಪಾಪವನ್ನು ನಾವೇನು ಮಾಡಿದ್ದೆವೋ ಎಂಬ ಅನ್ನುವ ಪಾಪ ಪ್ರಜ್ಞೆ ಕಾಡದೇ ಇರುವುದಿಲ್ಲ, ನನ್ನ ಅದೃಷ್ಟಕ್ಕೆ ಮೈಸೂರಿನಲ್ಲಿ ನಾವು ಬಾಡಿಗೆಗೆ ಮನೆಯ ಜನ ಗುರು ಬಂಧುಗಳಾಗಿದ್ದರು. ಅವರು ಆಗಾಗ ಸಕ್ಕರೆ ಪಣ್ನಕ್ಕೆ ಹೋಗ್ತೇವೆ ಅನ್ನುತ್ತಿದ್ದರು ನಾನು ಅವರ ಬಾಯಲ್ಲಿ ಮೊದಲ ಬಾರಿಗೆ ಗುರುಗಳ ಬಗ್ಗೆ ಕೇಳಿದ್ದೆ, ಒಮ್ಮೆ ಮೈಸೂರಿನ ಖ್ಯಾತ ಅಯ್ಯಂಗಾರ್ ಮೆಸ್ ಬಲ್ಲಿ ಊಟ ಮಾಡುತ್ತಿದ್ದಾಗ ಗುರು ಭಕ್ತರೊಬ್ಬರ ಜೊತೆ ಆ ಮೆಸ್ ನ ಮೂಲುಯೊಂದರಲ್ಲಿ ಸಾಮಾನ್ಯವಾಗಿ ಅವರು ತೊಟ್ಟಿರುತ್ತಿದ್ದ ಕೆಂಪು ಬಣ್ಣದ ಟವೆಲ್ ಸುತ್ತಿಕೊಂಡು ನಿಂತಿದ್ದ ಸಂನ್ಯಾಸಿಯೊಬ್ಬರಿದ್ದರು ಆ ಮೇಲೆ ಆ ಭಕ್ತರನ್ನು ಅವರು ಯಾರೆಂದು ಕೇಳಿ ತಿಳಿದುಕೊಂಡೆ, ಅವರೇ ಗುರುನಾಥರು ಎಂದು ತಿಳಿಯಿತು, ಈಗ ಆ ಚಿತ್ರವನ್ನು ಮತ್ತೆ ಮತ್ತೆ ನೆನೆಯುತ್ತೇನೆ. ಅವರು ನಿಂತ ಭಂಗಿ ನನ್ನ ಕಣ್ಣ ಮುಂದೆ ಇಂದಿಗೂ ಅಚ್ಚೊತ್ತಿದಂತೆ ಇದೆ. ಅಷ್ಟೇ ನನ್ನ ಪಾಲಿನ ಭಾಗ್ಯ ಅಂದುಕೊಂಡು ಕೊರಗುತ್ತೇನೆ ಗುರುಗಳು ಆಗಾಗ ಭಕ್ತರಿಗೆ ಹೇಳುತ್ತಿದ್ದರಂತೆ ನಮ್ಮ ಸಂಬAಧ ಎಪ್ಪತ್ತು ಜನ್ಮದ್ದೆಂದು. ಈ ಪ್ರಕಾರ ನೋಡಿದರೆ ನನ್ನ ಮತ್ತು ಗುರುಗಳ ಸಂಬAಧ ಕ್ಕೆ ಇದೇ ಮೊದಲ ಜನ್ಮದ್ದಿರಬಹುದು, ಇನ್ನು ೫೯ ಜನ್ಮಗಳಲ್ಲಿ ಅದು ಬೆಳೆಯುತ್ತಾ ಮುಕ್ತಿ ಪಡೆಯಲು ಇನ್ನೂ ಅಷ್ಟು ಜನ್ಮ ಕಾಯಬೇಕಿದೆ ಅಂದುಕೊಂಡಾಗ ದುಃಖವಾಗುತ್ತದೆ, ಏನು ಮಾಡುವುದು, ಹೇಳುತ್ತಾರಲ್ಲ, ಯೋಗಿ ಪಡೆದದ್ದು ಯೋಗಿಗೆ, ಜೋಗಿ ಪಡೆದದ್ದು ಜೋಗಿಗೆ ಹಾಗೆ ಇದು, ಯಾರೂ ಏನೂ ಮಾಡಲಾಗದು, ನನಗೆ ಅಂದು ಹಾಗೆ ಕಾಣಿಸಿಕೊಂಡವರೇ ಗುರುನಾಥರೆಂದು ಆಗಲೇ ಗೊತ್ತಾಗಿದ್ದರೆ ಬಹುಶಃ ಹೆಚ್ಚೆಂದರೆ ಅವರ ಪಾದಪದ್ಮಗಳಿಗೆ ಬೀಳುತ್ತಿದ್ದೆ. ಹೆಚ್ಚೆಂದರೆ ಅವರು ಏನಾದರೂ ಆದೇಶ ಮಾಡಿದ್ದರೆ ಅನುಸರಿಸುತ್ತಿದ್ದೆ, ಇನ್ನೇನೂ ಮಾಡುವ ಸ್ಥಿತಿಯಲ್ಲಿ ನಾನಿರಲಿಲ್ಲ, ಬಹುಶಃ ಇದರ ಗುಟ್ಟು ಮುಂದೆ ಏನಿದೆ ಎಂಬುದು ಗುರುಗಳಿಗೆ ತಿಳಿದಿತ್ತು ಅನಿಸುತ್ತದೆ, ಆಗ ನನ್ನ ಕಾಲ ಕೂಡಿಬಂದಿಲ್ಲವೆಂದು ತಿಳಿದು ಅಷ್ಟಕ್ಕೇ ಬಿಟ್ಟು ಸುಮ್ಮನೇ ನನ್ನನ್ನು ನೋಡಿದ್ದರು ಅನಿಸುತ್ತದೆ. ಗೊತ್ತಿಲ್ಲ ಭವಿಷ್ಯದಲ್ಲಿ ಗುರುಗಳು ನನ್ನ ಪಾಲಿಗೆ ಯಾವ ಗಂಟು ಇಟ್ಟಿದ್ದಾರೋ? ಅದರಲ್ಲಿ ಏನಿದೆಯೋ? ನಾನೂ ಕಾಯುತ್ತಿದ್ದೇನೆ, ಇಲ್ಲದಿದ್ದರೆ ನನಗೆ ಆ ಕಾಲದಲ್ಲಿ ಅಷ್ಟೇ ಬಾಂಧವ್ಯ ಕೂಡಿದ್ದೇಕೆ. ಏಕೆ ಅದು ಮುಂದರಿಯಲಿಲ್ಲ? ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ. ಈ ಎಲ್ಲ ದೃಷ್ಟಿಯಿಂದ ಈ ಕೃತಿ ಓದುಗರನ್ನು ಬಿಟ್ಟೂ ಬಿಡದೇ ತನ್ನೊಂದಿಗೆ ಸೆಳೆದುಕೊಂಡು ಹೋಗುತ್ತದೆ.
ಇದಾದ ಅನಂತರ ನೇರ ಸಂಪರ್ಕ ಪಡೆದಿದ್ದ ಗುರುಬಂಧುಗಳಿಂದ ಗುರುನಾಥರ ಅನೇಕ ಮಹಿಮೆಗಳನ್ನು ಕಣ್ಣು ಬಾಯಿ ಬಿಟ್ಟು ಆಲಿಸಿದ್ದೇನೆ, ಇದನ್ನೆಲ್ಲ ಗಮನಿಸಿದರೆ ಗುರುಗಳ ಜೊತೆ ನನ್ನ ಬಂಧುತ್ವ ಆಗುವುದಿದೆ ಅನಿಸುತ್ತದೆ, ಕಾಲ ಕೂಡಿ ಬಂದಿಲ್ಲ, ಕಾಯ ಬೇಕಲ್ಲ, ಇವೆಲ್ಲ ಆಗುವಂಥವಲ್ಲ, ಘಟಿಸುವಂಥವು, ಈ ನಂಬಿಕೆ ನನಗಿದೆ, ಕಾಯುತ್ತಿದ್ದೇನೆ. ಆದರೆ ಅವರ ಈ ಉಪದೇಶ ಕೃತಿಗೆ ಯಾವ ಓದುಗರೂ ಕಾಯುವ ಅಗತ್ಯವಿಲ್ಲ, ೯೪೪೮೦೯೩೮೩೦ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ ಮಾಹಿತಿ ಪಡೆದು ಪುಸ್ತಕ ತರಿಸಿಕೊಳ್ಳಬಹುದು, ಇದಕ್ಕೆ ತಡವಾಗುವುದಿಲ್ಲ.ಭಕ್ತರು ಇಷ್ಟು ಮಾಡಿ ಸಾಕು.
ಕೃತಿಯ ವಿವರ
ಶ್ರೀ ಗುರುಗಾಥಾ
ಲೇಖಕರು - ಅ ನಾಗರಾಜ್, ಪ್ರಕಾಶಕರು-ಪ್ರಕೃತಿ ಪ್ರಕಾಶನ, ವಿದ್ಯುತ್ ನಗರ. ಹಾಸನ. ಮೊಬೈಲ್- ೯೪೪೮೦೯೩೮೩೦/೯೬೬೩೬೩೩೯೬೮
ಮೊದಲ ಮುದ್ರಣ - ೨೦೧೭, ಎರಡನೆಯ ಮುದ್ರಣ- ೨೦೨೨
ಬೆಲೆ-ರೂ-೩೦೦

No comments:
Post a Comment