Monday, 24 January 2022

ಭಾಷೆಯ ವಿಸ್ಮಯ ಜಗತ್ತು-1

ನಮ್ಮ ಸುತ್ತ ಮಳೆ, ಬೀಜ ಮೊಳಕೆಯೊಡೆಯುವುದು, ಹೂವು ಅರಳುವಿಕೆಯಂಥ ನೈಸರ್ಗಿಕ ವಿಸ್ಮಯಗಳಿರುವಂತೆಯೇ ನಮ್ಮೊಳಗೂ ಅನೇಕ ವಿಸ್ಮಯಗಳಿವೆ. ಧ್ವನಿಶಕ್ತಿ ಇಂಥ ಒಂದು ವಿಸ್ಮಯ. ಇದರ ಆಧಾರದಲ್ಲಿ ಸೃಷ್ಟಿಯಾದ ಭಾಷೆ ಕೂಡ ಬಹುದೊಡ್ಡ ವಿಸ್ಮಯವೇ. ಅಸಾಧಾರಣ ಶಕ್ತಿ ಇದಕ್ಕಿದೆ. ಯಾವುದೇ ಸಂಗತಿ ತೀರಾ ಸಹಜ ಎಂಬಂತಾದರೆ ಅಥವಾ ತೀರಾ ಸಾಮಾನ್ಯವಾಗಿಬಿಟ್ಟರೆ ಅದೇನು ಮಹಾ ಎನಿಸಿಬಿಡುತ್ತದೆ. ಭಾಷೆ ಸದ್ಯ ಈ ವರ್ಗಕ್ಕೆ ಸೇರಿ ಬಿಟ್ಟಿದ್ದರೂ ಅದರ ಶಕ್ತಿಯೇನೂ ಕುಂದಿಲ್ಲ, ಕುಂದುವುದೂ ಇಲ್ಲ. ಆದರೆ ಭಾಷೆಯನ್ನು ನಾವು ವಿಶೇಷ ಎಂಬಂತೆ ಗುರುತಿಸದೇ ಇರುವುದಕ್ಕೆ ಕಾರಣಗಳಿವೆ. ಇದರಲ್ಲಿ ಮುಖ್ಯವಾದವು ಆಧುನಿಕ ಆವಿಷ್ಕಾರಗಳು ಎಂಬುದು ಸತ್ಯವೂ ಹೌದು, ವ್ಯಂಗ್ಯವೂ ಹೌದು.

ಸತ್ಯ ಏಕೆಂದರೆ... ಕನ್ನಡವನ್ನೇ ನೋಡೋಣ. ಸಮಕಾಲೀನ ಸವಾಲುಗಳನ್ನು ಎದುರಿಸದ ಹಾಗೂ ಬದಲಾವಣೆಗಳನ್ನು ಅಳವಡಿಸಿಕೊಳ್ಳದ ಭಾಷೆ ಮುಂದರಿಯಲಾರದು. ಸಾವಿರಾರು ವರ್ಷಗಳ ಹರವಿನಲ್ಲಿ ಕನ್ನಡ ಕೂಡ ಆಯಾ ಕಾಲದ ಸವಾಲು ಎದುರಿಸಿ ಬದಲಾವಣೆಗಳನ್ನು ತನ್ನೊಡಲಲ್ಲಿ ಸೇರಿಸಿ, ಅರಗಿಸಿಕೊಂಡು ಬಂದಿದೆ. ಹಾಗಾಗಿ ಇಂದಿಗೂ ಜೀವಂತವಾಗಿ ಉಳಿದಿದೆ. ಲಿಖಿತ ಸಾಕ್ಷಿ-ಪುರಾವೆಗಳ ಆಧಾರದಲ್ಲಿ ಕನ್ನಡದ ಭಾಷಿಕ ಬದಲಾವಣೆಯನ್ನು ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂದು ವಿಭಾಗಿಸಿಕೊಳ್ಳುತ್ತೇವೆ. ಭಾಷೆಯ ಎರಡು ರೂಪಗಳಲ್ಲಿ ಒಂದಾದ ಶ್ರಾವಣ ಎಷ್ಟು ಪ್ರಾಚೀನ ಎಂದು ಹೇಳಲಾಗದು. ಆದರೆ ದಾಖಲೆಯಾಗಿ ಉಳಿಯುವ ಚಾಕ್ಷುಷ ರೂಪ ಇಷ್ಟೇ ಹಳೆಯದು ಎಂಬ ಸಂಗತಿಯನ್ನು ಬಿಟ್ಟುಕೊಡುತ್ತದೆ. ಏನೇ ಆದರೂ ಮಾತು ಮೊದಲು, ಬರಹ ಅನಂತರ ಎಂಬ ಕಾರಣದಿಂದ ಚಾಕ್ಷುಷ ರೂಪ ಎಷ್ಟು ಹಳೆಯದೋ ಶ್ರಾವಣ ರೂಪ ಅದಕ್ಕಿಂತ ಹಳೆಯದು ಎಂಬುದು ನಿರ್ವಿವಾದ. ಹೀಗಾಗಿ ಇಂದಿಗೂ ಎಂದೆಂದಿಗೂ ಮೌಖಿಕ ರೂಪದಲ್ಲೇ ಇರುವ ಜನಪದ ಭಾಷೆ ಮತ್ತು ಸಾಹಿತ್ಯಗಳು ಶಿಷ್ಟ ಅಥವಾ ಲಿಖಿತ ಭಾಷೆ-ಸಾಹಿತ್ಯಕ್ಕಿಂತ ಹಿಂದಿನವು ಎಂಬುದೂ ವಿವಾದಾತೀತ. ಇದೇನೇ ಇದ್ದರೂ ಜನಪದ ಹಾಗೂ ಶಿಷ್ಟ ಭಾಷೆಗಳಲ್ಲಿ ತೀರಾ ಈಚಿನವರೆಗೂ ಗಟ್ಟಿತನ ಇದ್ದುದನ್ನು ಸ್ಪಷ್ಟವಾಗಿ ಗುರುತಿಸಬಹುದು. ಯಂತ್ರಗಳ ಪ್ರವೇಶ ಹೆಚ್ಚಾದಷ್ಟೂ ಭಾಷೆಯಲ್ಲಿ ಪೊಳ್ಳುತನ ಢಾಳಾಗಿ ಕಾಣಿಸತೊಡಗುತ್ತದೆ. ಭಾಷೆ ಮನುಷ್ಯನಿಂದ ಮನುಷ್ಯನಿಗಾಗಿದೆ. ದೇಹ ಮತ್ತು ಮನಸ್ಸುಗಳ ಸ್ಪರ್ಶ ಇಲ್ಲದ ಭಾಷೆ ನಿರ್ಜೀವ ಎನಿಸುತ್ತದೆ. ಆಧುನಿಕ ಕನ್ನಡ ಭಾಷೆಯಲ್ಲಾದ ಬದಲಾವಣೆಯನ್ನು ಸುಮ್ಮನೇ ಗಮನಿಸೋಣ. 1843ರಲ್ಲಿ ಕನ್ನಡದಲ್ಲಿ ಮಂಗಳೂರು ಸಮಾಚಾರ ಎಂಬ ಮೊದಲ ಪತ್ರಿಕೆ ಆರಂಭವಾಯಿತು. ಅದು ಇದ್ದುದು ಕಲ್ಲಚ್ಚಿನಲ್ಲಿ. ವರ್ಷದೊಪ್ಪತ್ತಿನಲ್ಲಿ ಅದು ಮರದ ಮೊಳೆಗಳ ಮುದ್ರಣ ರೂಪಕ್ಕೆ ತಿರುಗಿತು. 1950ರ ವೇಳೆಗೆ ಇಂಗ್ಲಿಷ್ ಟೈಪ್ ರೈಟರ್ ಯಂತ್ರ ಬರುತ್ತಿದ್ದಂತೆ ಕನ್ನಡದಲ್ಲೂ ರಾಳ್ಳಪಳ್ಳಿ ಅನಂತ ಕೃಷ್ಣ ಶರ್ಮರು ಕನ್ನಡದ ಟೈಪ್‍ರೈಟರ್ ಸಿದ್ಧಪಡಿಸಿದರು. 1970ರ ವೇಳೆಗೆ ಫೋಟೋ ಟೈಪ್ ಸೆಟ್ಟಿಂಗ್ ಬಂದಾಗ ಕೆ ಪಿ ರಾವ್ ಇದೇ ಮಾದರಿಯಲ್ಲಿ ಕನ್ನಡದ ಕೀಬೋರ್ಡ್ ತಯಾರಿಸಿದರು. ನಿಧಾನವಾಗಿ ಕನ್ನಡ ಪತ್ರಿಕೆಗಳು ಅಕ್ಷರ ಜೋಡಿಸಲು ಲೈನೋಟೈಪ್ ಹಾಗೂ ಮೋನೋಟೈಪ್ ಯಂತ್ರಗಳನ್ನು ಕನ್ನಡಕ್ಕೆ ಬರುವಂತೆ ಮಾಡಿಕೊಂಡವು. 1990ರಿಂದ ಈಚೆಗೆ ಕಂಪ್ಯೂಟರ್ ತಂತ್ರಜ್ಞಾನ ಬೆಳೆದಂತೆ ಕನ್ನಡ ಭಾಷೆಯಲ್ಲಿ ಆಧುನಿಕ ತಂತ್ರಜ್ಞಾನದ ಒಳಸೇರುವಿಕೆ ಕುಂಠಿತವಾಗತೊಡಗಿತು. ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಗಳಲ್ಲಿ ಲಭ್ಯವಿರುವ ಧ್ವನಿ ಗುರುತಿಸುವ ಸಾಫ್ಟ್‍ವೇರ್, ಕೈಬರಹ, ಹಸ್ತಪ್ರತಿ ಗುರುತಿಸುವ ಸಾಫ್ಟ್‍ವೇರ್, ಮಲ್ಟಿಮೀಡಿಯಾ ಸಾಫ್ಟ್‍ವೇರ್ ಮೊದಲಾದವು ಇನ್ನು ಯಾವ ಕಾಲಕ್ಕೆ ಕನ್ನಡಕ್ಕೆ ದಕ್ಕುತ್ತವೆಯೋ ಗೊತ್ತಿಲ್ಲ. ಆ ವೇಳೆಗೆ ಈ ಕಾಲದ ಸವಾಲು ಹಾಗೂ ಅಗತ್ಯವಾದ ತಂತ್ರಜ್ಞಾನ ಅಳವಡಿಸಿಕೊಂಡ ಉಳಿದ ಭಾಷೆಗಳು ಎಷ್ಟು ಮುಂದೆ ಹೋಗಿರುತ್ತವೋ ಗೊತ್ತಿಲ್ಲ. ಆದರೆ ಇಂದಿನ ಕಾಲಘಟ್ಟದ ಹಾಗೂ ಮುಂದಿನ ಪೀಳಿಗೆ ಭಾಷೆಯಲ್ಲಿ ಬಯಸುವ ತಂತ್ರಜ್ಞಾನದ ಅನುಕೂಲತೆ ಕನ್ನಡದಲ್ಲಿ ದೊರೆಯದಿದ್ದರೆ ಸಾವಿರಾರು ವರ್ಷ ಹರಿದು ಬಂದಂತೆ ಮುಂದೆಯೂ ಸಾವಿರಾರು ವರ್ಷ ಹರಿಯಲಿದೆ ಎಂದೇನೂ ಅನಿಸದು. ಸಾಲದ್ದಕ್ಕೆ ಮುಂದಿನ ನೂರು ವರ್ಷಗಳಲ್ಲಿ ಕಣ್ಮರೆಯಾಗುತ್ತವೆಂದು ಹೇಳಲಾದ ಕೆಲವು ಭಾಷೆಗಳ ಪಟ್ಟಿಯಲ್ಲಿ ಕನ್ನಡವೂ ಸೇರಿದೆ. ಇದು ನಿಜವಾಗದಿರಲಿ ಎಂದು ಆಶಿಸಿದರೂ ಪರಿಸ್ಥಿತಿ ಯಾಕೆ ಹೀಗಾಗಿದೆ, ಆಗುತ್ತಿದೆ ಎಂಬುದಕ್ಕೆ ಉತ್ತರ ಹುಡುಕುವುದು ಕಷ್ಟವಲ್ಲ. 

ಕನ್ನಡದ ಬಗ್ಗೆ ಕನ್ನಡಿಗರಿಗೇ ಇರುವ ಅಸಡ್ಡೆ, ಸರ್ಕಾರದ ಕನ್ನಡ ವಿರೋಧಿ ನೀತಿ, ಅನ್ಯರ ಆಕ್ರಮಣ ಇತ್ಯಾದಿ ಏನೇ ನೂರು ಕಾರಣ ಹೇಳಿದರೂ ಇವೆಲ್ಲ ಒಂದು ಭಾಷೆ ಉಳಿಯಲು ಅಥವಾ ಅಳಿಯಲು ನೇರ ಕಾರಣಗಳಾಗುವುದಿಲ್ಲ. ಯಾವುದೇ ಭಾಷೆಯನ್ನು ಯಾರೇ ಒಬ್ಬರು, ಇಬ್ಬರು ಅಥವಾ ಸರ್ಕಾರ ಉಳಿಸಲಾಗದು. ಆಯಾ ಕಾಲಘಟ್ಟದ ಜನರ ಆಶೋತ್ತರಗಳನ್ನು, ಅಗತ್ಯಗಳನ್ನು ಪೂರೈಸುವುದಾದರೆ ಅಂಥ ಭಾಷೆ ತಾನಾಗಿಯೇ ಉಳಿಯುತ್ತದೆ. ಕಾಲದ ಬೇಡಿಕೆಗೆ ಉತ್ತರಿಸದ ಭಾಷೆ, ಅದು ಕನ್ನಡವಾಗಿದ್ದರೂ ಉಳಿಯಲಾರದು. 

ತಮಾಷೆ ನೋಡಿ. ತಂತ್ರಜ್ಞಾನದ ಬಳಕೆ ಕನ್ನಡದಲ್ಲಿ ಹೆಚ್ಚಾಗುವವರೆಗೂ ಇದ್ದ ಭಾಷಾ ಸ್ವರೂಪವೇ ಬೇರೆಯಾಗಿತ್ತು. ಮುದ್ರಣ ಅದರಲ್ಲೂ ಆಫ್‍ಸೆಟ್ ಮುದ್ರಣ ಕಾಣಿಸಿಕೊಂಡ 90ರ ದಶಕದವರೆಗೆ ಅಥವಾ ಕಂಪ್ಯೂಟರ್ ಕೀಬೋರ್ಡ್ ಬಳಸುವ ಮೂಲಕ ಕನ್ನಡ ಅಕ್ಷರ ಮೂಡಿಸುವ ವ್ಯವಸ್ಥೆ ಜನಪ್ರಿಯವಾಗುವವರೆಗೆ ಅಂದರೆ ಅಚ್ಚುಮೊಳೆಯ ಮೂಲಕ ಮುದ್ರಣ ಕಂಡ ಕನ್ನಡ ಪುಸ್ತಕಗಳಲ್ಲಿ ಅಚ್ಚಿನ ಅಥವಾ ವ್ಯಾಕರಣ ದೋಷವೇ ಇಲ್ಲ ಇದ್ದರೂ ನೂರಾರು ಪುಟಗಳಲ್ಲಿ ಬೆರಳೆಣಿಕೆಯವು ಎಂಬುದನ್ನು ಗಮನಿಸಬೇಕು. ಕೈಯಲ್ಲಿ ಬರೆಯುವಾಗಿನ ಹಾಗೂ ಅಚ್ಚುಮೊಳೆ ಜೋಡಿಸುವಾಗಿನ ವ್ಯವಧಾನ ಅಥವಾ ಎಚ್ಚರ ಕಂಪ್ಯೂಟರ್ ಟೈಪಿಂಗ್‍ನಲ್ಲಿ ಕಳೆದೇ ಹೋಗಿದೆ. ಕಂಪ್ಯೂಟರ್ ಕೀಬೋರ್ಡಿನಲ್ಲಿ ಅಕ್ಷರ ಮುದ್ರಿಸುವವರು ಅಭ್ಯಾಸಬಲದಿಂದಲೇ ಟೈಪು ಮಾಡುತ್ತಹೋಗುತ್ತಾರೆ. ಅವರ ಮನಸ್ಸು, ಮಾತು ಎಲ್ಲೇ ಇದ್ದರೂ ಕೈಬೆರಳುಗಳು ಮಾತ್ರ ಅಕ್ಷರ ಮುದ್ರಿಸುತ್ತವೆ! ಯಂತ್ರದಲ್ಲಿ ಕೆಲಸಮಾಡುತ್ತ ಅವರ ಕೆಲಸವೂ ಯಾಂತ್ರಿಕವಾಗಿಬಿಡುತ್ತದೆ. ಹಾಗಾಗಿ ತಾವು ಹೊಸದೇನೂ ಕಲಿಯುವುದು ಇಲ್ಲ ಎನ್ನುವ ಸ್ಥಿತಿ ತಲುಪಿ, ಅಭ್ಯಾಸ ಬಲದಿಂದ ಬೆರಳುಗಳು ಕುಟ್ಟುತ್ತ ಬಂದ ಪದಗಳೇ ಸರಿಯಾದವು ಎಂಬ ಭ್ರಮೆಗೂ ಹೋಗಿಬಿಟ್ಟರುತ್ತಾರೆ. ಹಾಗಾಗಿ ಉಪಹಾರ, ಚಳುವಳಿ, ಜಾತ್ಯಾತೀತ, ಕೋಟ್ಯಾಧಿಪತಿ, ಸುತ್ತಮುತ್ತ, ದೂಮಪಾನ, ಸೃಷ್ಠಿ ಹೀಗೆ ಅನೇಕಾನೇಕ ಪದ ರೂಪಗಳೇ ಸರಿ ಎಂಬ ತೀರ್ಮಾನಕ್ಕೂ ಬಂದುಬಿಟ್ಟಿರುತ್ತಾರೆ. ನೀವು ಸರಿಯಾಗಿ ಬರೆದಿದ್ದರೂ ಅವರು ತಮ್ಮದೇ ಶೈಲಿಯಲ್ಲಿ ನೀವೇ ತಪ್ಪಾಗಿ ಬರೆದಿದ್ದೀರೆಂಬಂತೆ ತಿದ್ದಿಬಿಡುತ್ತಾರೆ. ಹೀಗಾಗಿ ಭಾಷೆಯ ಸ್ವರೂಪ ನಿರ್ಧರಿಸುವವರು ಈಗ ಕಂಪೋಸರ್‍ಗಳು ಎಂಬಂತಾಗಿದೆ. ಈ ಕಾರಣದಿಂದ ಈಗೀಗ ಅಚ್ಚಾಗುವ ಯಾವುದೇ ಕನ್ನಡ ಕೃತಿ, ಪತ್ರಿಕೆಗಳನ್ನು ಗಮನಿಸಿದರೂ ಅನೇಕಾನೇಕ ಭಾಷಿಕ ದೋಷಗಳು ಸಹಜವಾಗಿಯೇ ಕಣ್ಣಿಗೆ ರಾಚುತ್ತವೆ. ಇದು ಒಂದು ಕಾರಣವಾದರೆ, ಇಂಗ್ಲಿಷ್‍ನಲ್ಲಿ ಕಂಪೋಸ್ ಮಾಡುತ್ತಿದ್ದಂತೆಯೇ ಅದರ ಪದರೂಪ ಅಥವಾ ಸ್ಪೆಲಿಂಗ್ ಸರಿಯೋ ತಪ್ಪೋ ಎಂಬುದನ್ನು, ವಾಕ್ಯ ದೋಷಪೂರ್ಣ ಎಂಬುದನ್ನು ತೋರಿಸುವ ಹಾಗೂ ಅವುಗಳ ಸರಿ ರೂಪವನ್ನೂ ಕೊಡುವ ಸಾಫ್ಟ್‍ವೇರ್‍ಗಳಿವೆ. ಕನ್ನಡದಲ್ಲಿ ಇದಿನ್ನೂ ಇಲ್ಲ. ಹೀಗಾಗಿ ಕಂಪೋಸರ್‍ಗಳು ಕುಟ್ಟಿದ್ದೇ ಭಾಷೆ, ಕೊಟ್ಟಿದ್ದೇ ವ್ಯಾಕರಣ! ಹೀಗಾಗಿ ಹೇಳಿದ್ದು ಹೊಸ ತಂತ್ರಜ್ಞಾನದಿಂದ ಕನ್ನಡಕ್ಕೆ ಇಂಥ ಗತಿ ಬಂದಿರುವುದು ಸತ್ಯ ಎಂದು.

ಇನ್ನು ವ್ಯಂಗ್ಯ ಏಕೆಂದರೆ, ಯಾವುದೇ ತಂತ್ರಜ್ಞಾನ ಭಾಷೆಗೆ ಬರುವುದು ಹೊಸತನ ತರುವುದಕ್ಕಾಗಿಯೇ ವಿನಾ ಹಾಳುಮಾಡುವುದಕ್ಕಾಗಿ ಅಲ್ಲ. ಆದರೆ ಕನ್ನಡಕ್ಕೆ ಬಂದ ತಂತ್ರಜ್ಞಾನವೇ ದೋಷಪೂರ್ಣ ಕನ್ನಡದ ಬೆಳವಣಿಗೆಗೆ ಕಾರಣವಾಗುತ್ತಿರುವುದಕ್ಕೆ. 

ಎಲ್ಲೆಂದರಲ್ಲಿ ಸದ್ಯ ಕಿರಿಕಿರಿ ಉಂಟುಮಾಡುತ್ತಿರುವ ಮೊಬೈಲ್ ಸಾಧನವನ್ನೇ ನೋಡಿ. ನಮ್ಮ ದೇಶಕ್ಕೆ ಇದು ಮುಕ್ತ ಪ್ರವೇಶ ಪಡೆದುದು 1995ರಲ್ಲಿ. ಅದಕ್ಕಿಂತ ಹಿಂದೆ ಇದ್ದ ಸ್ಥಿರ ದೂರವಾಣಿ ಕೇವಲ ಪ್ರತಿಷ್ಠಿತರ ಸ್ವತ್ತಾಗಿ ಜನಸಾಮಾನ್ಯರ ಕೈಗೆ ಎಟುಕದ ಕಾರಣದಿಂದ ಸಹಜವಾಗಿ ಅದು ಕೂಡ ಪ್ರತಿಷ್ಠೆಯ ಸ್ಥಾನವನ್ನೇ ಪಡೆದಿತ್ತು. ಈ ಕಾರಣದಿಂದ ಸಾಮಾನ್ಯಜನ ಒಂದು ದೃಷ್ಟಿಯಿಂದ ಸುಖವಾಗಿಯೇ ಇದ್ದರು. ಯಾವಾಗ ಮೊಬೈಲ್‍ನ ಮುಕ್ತ ಪ್ರವೇಶವನ್ನು ಕ್ರಾಂತಿ ಎಂದು ಪರಿಗಣಿಸಲಾಯಿತೋ ಆಗಿನಿಂದ ಅದು ಹಾವಳಿ ಎಬ್ಬಿಸತೊಡಗಿತಲ್ಲದೇ ಈಗೀಗ ಉಪದ್ರವಕಾರಿಯಂತೆಯೇ ಕಾಣುತ್ತಿದೆ. ಇದರ ಪ್ರವೇಶ ಆಗುವುದಕ್ಕೆ ಮುಂಚೆ ಜನ ಭೂಮಿಯಲ್ಲಿ ಬದುಕಿಯೇ ಇರಲಿಲ್ಲವೇ, ಸಂವಹನವನ್ನೇ ಮಾಡುತ್ತಿರಲಿಲ್ಲವೇ ಎಂಬ ಅನುಮಾನವೂ ಆಗಾಗ ಉಂಟಾಗುವುದಿದೆ. ಮೊಬೈಲ್ ಸಂಪರ್ಕ ಸೇವೆ ನೀಡುವ ಅನೇಕಾನೇಕ ಕಂಪನಿಗಳ ನಡುವೆ ಫ್ರೀ ಟಾಕ್ ಟೈಂ, ಹೆಚ್ಚು ಮಾತಾಡುವವರಿಗೆ ವಿಶೇಷ ಪ್ಯಾಕೇಜಿನಂಥ ಅಗ್ಗದ ಪೈಪೋಟಿ ಹುಟ್ಟಿದ ಕಾರಣದಿಂದ ಮಾತಿಗೆ ಬೆಲೆಯೇ ಇಲ್ಲದಂತಾಗಿ ಹೋಗಿದೆ. ಯಾವುದಕ್ಕೆ ಮೌಲ್ಯ ಇದೆ ಎಂದು ತಿಳಿಯುತ್ತೇವೋ ಅದನ್ನು ಬಳಸುವಾಗ ಹೆಚ್ಚು ಎಚ್ಚರಿಕೆ ವಹಿಸುತ್ತೇವೆ, ಜಿಪುಣರಾಗುತ್ತೇವೆ. ಆದರೆ ಈಗ? ಮಾತಿಗೆ ಬೆಲೆಯೇ ಇಲ್ಲ. ನಿಜವಾಗಿ ಭಾಷೆಯನ್ನು ಮಿತವಾಗಿ ಬಳಸಬೇಕು, ಅದರ ಶಕ್ತಿ ಸಂಚಯವಾಗಲು ಬಿಡಬೇಕು. ಹಾಗಾದಾಗಲೇ ಮಾತು ಮಂತ್ರವಾಗುವುದು. ಮೌನಕ್ಕೆ ಅಪಾರ ಶಕ್ತಿ ಇದೆ ಎನ್ನುವುದು ಇದೇ ಕಾರಣಕ್ಕೆ.

ಭಾಷೆಯ ಜಗತ್ತು ಅದ್ಭುತವಾದುದು. ಅದರ ವಿಸ್ಮಯಗಳು ಜನಪದದಲ್ಲಿ, ಶಿಷ್ಟ ಸಾಹಿತ್ಯದಲ್ಲಿ, ಮಡುಗಟ್ಟಿವೆ.






ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment