ಇಂಗ್ಲಿಷ್ ಬರುವುದಿಲ್ಲ ಎಂದು ಕೀಳರಿಮೆ ಹೊಂದಿರುವವರು ನಮ್ಮ ನಡುವೆ ಬಹಳಷ್ಟು ಜನರಿದ್ದಾರೆ. ಇಂಗ್ಲಿಷ್ ಆಗಲಿ, ಬೇರೆ ಯಾವುದೇ ಭಾಷೆಯಾಗಲಿ, ಅದು ಕಲಿಕೆ ಮತ್ತು ಮಾತನಾಡುವ ಪರಿಸರದಿಂದ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುತ್ತದೆ. ನಮ್ಮ ಹತ್ತಿರದ ಸಂಬಂಧಿಯೊಬ್ಬರು ಇಪ್ಪತ್ತು ವರ್ಷಗಳ ಹಿಂದೆ ವ್ಯವಹಾರದ ಕಾರಣದಿಂದ ದೇಶದ ಮೂಲೆ, ಮೂಲೆಯನ್ನು ಸುತ್ತುತ್ತಿದ್ದರು. ಆಗ ಅವರಿಗೆ ಗುಜರಾತಿ, ಗೋಗ್ರಿ, ಅಸ್ಸಾಮಿ ಇತ್ಯಾದಿ ಮಾತನಾಡಲು ಬರುತ್ತಿದ್ದ ಭಾಷೆಗಳ ಸಂಖ್ಯೆ ಬರೋಬ್ಬರಿ ಹದಿನಾರು! ಈಗ ಕರ್ನಾಟಕದ ಕರಾವಳಿಯಲ್ಲಿ ನೆಲೆಯಾಗಿ ಇಪ್ಪತ್ತು ವರ್ಷಗಳೇ ಆಗಿವೆ. ಈಗ ಅವರಿಗೆ ಬರುವ ಭಾಷೆಗಳು ಅವರ ಸುತ್ತಲಿನ ಐದು ಭಾಷೆಗಳು ಮಾತ್ರ. ಉಳಿದವು ಹೆಚ್ಚೂ ಕಡಿಮೆ ಮರೆತೇ ಹೋಗಿವೆ. ಬಹುಭಾಷೆಯಲ್ಲಿ ಪಾಂಡಿತ್ಯ ಹೊಂದುವುದನ್ನು ಪಾಲಿಗ್ಲಾಟಿಸಂ ಎನ್ನುತ್ತಾರೆ. ಪ್ರಪಂಚದಲ್ಲಿ ಇಂಥವರು ಬಹಳಷ್ಟು ಜನರಿದ್ದಾರೆ. 18ನೇ ಶತಮಾನದ ಕಾರ್ಡಿನಲ್ ಗಿಸೆಪ್ಪೆ ಎಂಬಾತ 72 ಭಾಷೆಗಳನ್ನು ಮಾತನಾಡುತ್ತಿದ್ದ ಎಂದು ದಾಖಲೆಗಳಿವೆ. ಸದ್ಯ ಜಿಯಾದ್ ಫಜಾ ಎಂಬಾತ 60 ಭಾಷೆಗಳನ್ನೂ ಅಲೆಕ್ಸಾಂಡರ್ ಅರ್ಗೆಲ್ಲೆಸ್ 50 ಭಾಷೆಗಳನ್ನೂ ರಿಚರ್ಡ್ ಡೋನರ್ ಎಂಬಾತ 23 ಭಾಷೆಗಳನ್ನೂ ಮಾತನಾಡಬಲ್ಲರು ಎಂಬ ದಾಖಲೆ ಇದೆ. ನಮ್ಮಲ್ಲಿ ಬಹುತೇಕರಿಗೆ ಬೇರೆ ಭಾಷೆಗಳಿರಲಿ, ಅವರವರ ತಾಯ್ನುಡಿಯೇ ಸರಿಯಾಗಿ ಬರುವುದಿಲ್ಲ ಎಂಬುದು ಬೇರೆ ಮಾತು. ಯಾವುದೇ ಭಾಷೆಯನ್ನು ಸರಿಯಾಗಿ ಕರಗತ ಮಾಡಿಕೊಂಡರೆ ಅನ್ಯಭಾಷೆಗಳನ್ನು ಕಲಿಯುವುದು ಕಷ್ಟವಲ್ಲ ಎಂಬುದು ತಜ್ಞರ ಅಭಿಮತ. ನಿಮಗೆ ಕನ್ನಡ ಕರಗತವಾಗಿದ್ದರೆ ತೆಲುಗನ್ನೋ ತಮಿಳನ್ನೋ ನೀವು ಸುಲಭವಾಗಿ ಕಲಿಯಬಲ್ಲಿರಿ. ತಮಾಷೆ ಎಂದರೆ ಒಂದೇ ಭಾಷೆಯನ್ನು ಕಲಿತು ಅಷ್ಟರಲ್ಲೇ ಬದುಕುವವರಿಗೆ ಒಂದಕ್ಕಿಂತ ಹೆಚ್ಚು ಭಾಷೆ ಕಲಿತವರಿಗಿಂತ ಹೊರ ಪ್ರಪಂಚ ಜ್ಞಾನ (ಎಕ್ಸ್‍ಪೋಷರ್) ಕಡಿಮೆ ಇರುತ್ತದೆ.
ಭಾಷೆ ನಮಗೆ ದಕ್ಕುವುದು ನಾವು ಬದುಕುವ ಪರಿಸರದಿಂದ. ಇಂಗ್ಲಿಷ್ ಬಾರದವರು ಇಂಗ್ಲೆಂಡ್‍ಗೆ ಹೋಗಿ ತಿಂಗಳೊಪ್ಪತ್ತು ಇದ್ದರೆ ಇಂಗ್ಲಿಷನ್ನೂ ತಮಿಳುನಾಡಿಗೆ ಹೋದರೆ ತಮಿಳನ್ನೂ ಸರಾಗವಾಗಿ ಕಲಿತುಬಿಡಬಹುದು. ಅದೇನೂ ದೊಡ್ಡ ಸಂಗತಿಯಲ್ಲ. ಹೀಗಾಗಿ ಯಾವುದೇ ಭಾಷೆ ತನಗೆ ಬರುವುದಿಲ್ಲ ಎಂದು ಕೀಳರಿಮೆ ಹೊಂದುವುದರಲ್ಲಿ ಅರ್ಥವಿಲ್ಲ. ಆದರೆ ಭಾಷೆಯೇ ರೂಪಿಸುವ ಸಾಂಸ್ಕøತಿಕ ಪರಿಸರ ಮಾತ್ರ ಅಷ್ಟು ಸುಲಭವಾಗಿ ದಕ್ಕುವಂಥದ್ದಲ್ಲ.
ನ್ಯೂಗಿನಿಯ ಟ್ರೋಬ್ರಿಯಾಂಡ್ ದ್ವೀಪದ ಜನರಲ್ಲಿ ಸುವರ್ಣಗಡ್ಡೆ ಎಂಬುದನ್ನು ಗುರುತಿಸಲು 100ಕ್ಕೂ ಹೆಚ್ಚು ಪದಗಳಿದ್ದರೆ ನ್ಯೂಜಿಲೆಂಡ್‍ನ ಮಾವೋರಿಸ್ ಜನರಲ್ಲಿ ಸೆಗಣಿಯನ್ನು ಗುರುತಿಸಲು 35 ಶಬ್ದಗಳೂ ಅರಬ್ಬರಲ್ಲಿ ಒಂಟೆ ಹಾಗೂ ಒಂಟೆ ಸಂಬಂಧಿ ಪರಿಕರಗಳನ್ನು ಗುರುತಿಸಲು 6000ಕ್ಕೂ ಹೆಚ್ಚು ಪದಗಳಿವೆಯಂತೆ! ಹಿಮದಲ್ಲೇ ವಾಸಿಸುವ ಎಸ್ಕಿಮೋಗಳಲ್ಲಿ ಗಟ್ಟಿ ಹಿಮ, ಒಣ ಹಿಮ, ಪುಡಿ ಹಿಮ, ಮೆತ್ತಗಿನ ಹಿಮ, ಹಳೆಯ, ಹೊಸ ಹಿಮ ಇತ್ಯಾದಿ ಹಿಮವನ್ನು ಗುರುತಿಸಲು 55 ಶಬ್ದಗಳಿವೆಯಂತೆ. ಇವೆಲ್ಲ ಅವರ ಬದುಕಿನ ಪರಿಸರ ಭಾಷೆಯಲ್ಲಿ ಮೂಡಿಸಿದ ಶ್ರೀಮಂತಿಕೆಯನ್ನು ತೋರಿಸುತ್ತವೆ. ಹಿಮದ ಪರಿಚಯವೇ ಇಲ್ಲದ ನಮಗೆ ಅಷ್ಟು ಪದಗಳ ಅಗತ್ಯವೂ ಇಲ್ಲ, ಅದು ಬೇಕಾಗಿಯೂ ಇಲ್ಲ. ಚೀನೀಯರ ಮ್ಯಾಂಡರಿನ್ ಭಾಷೆ ಸಾವಿರಾರು ವರ್ಷಗಳ ಹಳೆಯದು. ಆದರೆ ಹಾಲು ಮತ್ತು ಅದರ ಉತ್ಪನ್ನದ ಪರಿಚಯವೇ ಇಲ್ಲದ ಆ ಜನರಲ್ಲಿ ಹಾಲು, ಗಿಣ್ಣು, ಮೊಸರು, ಬೆಣ್ಣೆ ಮೊದಲಾದವನ್ನು ಗುರುತಿಸುವ ಪದಗಳೇ ಇಲ್ಲ! ಇವೆಲ್ಲ ಇವರಿಗೆ ಈಗೀಗ ಪರಿಚಯವಾಗುತ್ತಿವೆ, ಆ ಭಾಷೆಗೆ ಎರವಲಾಗಿ ಸೇರುತ್ತಿವೆ, ಯಾಕೆಂದರೆ ಈಗೀಗ ಆ ಜನ ಇವುಗಳ ಪರಿಚಯಮಾಡಿಕೊಳ್ಳುತ್ತಿದ್ದಾರೆ.
ಗದ್ದೆ ಎಂಬುದನ್ನೇ ಗಮನಿಸೋಣ. ಸದ್ಯ ಕನ್ನಡದ ಎಲ್ಲರಿಗೂ ಪರಿಚಿತ ಪದಗಳು ಎಂದರೆ ಖುಷ್ಕಿ ಮತ್ತು ತರಿ ಭೂಮಿ. ಒಣ ಭೂಮಿ ಎಂಬುದಕ್ಕೆ ಬೆದ್ದಲು ಎಂದೂ ನೀರಾವರಿ ಭೂಮಿಗೆ ಗದ್ದೆ ಎಂದೂ ಒಂಬತ್ತನೆಯ ಶತಮಾನದ ಕಾಲದಿಂದಲೂ ಕನ್ನಡ ಶಾಸನಗಳಲ್ಲಿ ಉಲ್ಲೇಖವಿದೆ ಎಂದು ಶಾಸನ ತಜ್ಞ ತುಮಕೂರು ವಿವಿಯ ಪ್ರೊ. ಪರಮಶಿವಮೂರ್ತಿ ಹೇಳುತ್ತಾರೆ. ಈ ಪದಗಳು ಈಗಲೂ ಕರ್ನಾಟಕದ ಕೆಲವೆಡೆ ಚಾಲ್ತಿಯಲ್ಲಿವೆ. ಆದರೆ ಗದ್ದೆಯಲ್ಲೇ ಬದುಕು ಕಟ್ಟಿಕೊಂಡ ಮಲೆನಾಡಿನ ಜನರಲ್ಲಿ ಗದ್ದೆಯ ಸ್ವರೂಪಕ್ಕೆ ಅನುಗುಣವಾಗಿ ಅರ್ಲು/ಕೆಸರು ಗದ್ದೆ, ಮಕ್ಕಿ ಗದ್ದೆ, ತಗ್ಗಿನ ಗದ್ದೆ, ತರುವೆ ಗದ್ದೆ, ಕಾರ ಗದ್ದೆ, ಹೂಡ್ಲು ಗದ್ದೆ, ಹೊಡಿ ಗದ್ದೆ, ನೆಟ್ಟಿ ಗದ್ದೆ, ಜಡ್ಡಿ ಗದ್ದೆ, ಬರ ಗದ್ದೆ, ಹೊಂಡದ ಗದ್ದೆ, ಹಾಳು ಗದ್ದೆ ಇತ್ಯಾದಿ 12ಕ್ಕೂ ಹೆಚ್ಚು ಪದಗಳಿವೆ! ಆದರೆ ಗದ್ದೆಯ ಭೂಮಿ ನಾಪತ್ತೆಯಾದಂತೆಲ್ಲ ಈ ಪದಗಳೂ ನಾಪತ್ತೆಯಾಗುತ್ತವೆ. ಆ ಮಟ್ಟಿಗೆ ನಮ್ಮ ಶಬ್ದಕೋಶ, ಸಂಸ್ಕøತಿ ಇಲ್ಲವಾಗುತ್ತದೆ. ಈಗೀಗ ಕೃಷಿ ಭೂಮಿ ಹಾಳು ಬೀಳುತ್ತ ಬಂದಂತೆಲ್ಲ ಹೆಚ್ಚು ಪರಿಚಿತವಾಗಿರುವ ಪದ ಅಂದರೆ ಹಾಳು ಗದ್ದೆ ಮಾತ್ರ.
ಯಾವುದೇ ಭಾಷೆ ಅಷ್ಟು ಸುಲಭವಾಗಿ ಸಾಯುವುದಿಲ್ಲ. ಭಾಷೆಯ ಸ್ವರೂಪವನ್ನು ಸರಿಯಾಗಿ ಅರ್ಥಮಾಡಿಕೊಳ್ಳದವರು ಸಂಸ್ಕøತವನ್ನು ಸತ್ತ ಭಾಷೆ ಎಂದು ಕರೆಯುತ್ತಾರೆ. ಒಂದು ಭಾಷೆಯನ್ನು ಒಂದಿಷ್ಟು ಜನ ಮಾತನಾಡುವ ಅಥವಾ ಬರೆಯುವ ಪರಂಪರೆ ಹೊಂದಿದ್ದರೆ ಮಾತ್ರ ಜೀವಂತ ಭಾಷೆ ಎಂಬುದು ಇವರ ತರ್ಕದ ನೆಲೆ. ಹೀಗೇ ಇಟ್ಟುಕೊಂಡರೂ ಸಂಸ್ಕøತ ಜೀವಂತವಾಗಿದೆ. ಈ ಭಾಷೆಗೆ ಜ್ಞಾನಪೀಠವೂ ದಕ್ಕಿದೆ. ಅದಿರಲಿ. ಸದ್ಯ ಸಂಸ್ಕøತ ಖಂಡಿತ ಜೀವಂತವಾಗಿಯೇ ಇದೆ. ನೂರಾರು ವರ್ಷಗಳ ಹಳೆಯ ಆಲದ ಮರವೊಂದು ಸುತ್ತ ಬಿಳಿಲುಗಳನ್ನು ಇಳಿಬಿಡುತ್ತ ಹೋಗಿ ಮುಂದೊಂದು ದಿನ ಮೂಲ ಕಾಂಡ ಯಾವುದು ಬಿಳಿಲು ಯಾವುದು ಎಂಬುದೇ ತಿಳಿಯದಂತಾಗುತ್ತದೆ. ಹಾಗಾದಾಗ ಆ ಆಲದ ಮರವೇ ಸತ್ತಿದೆ ಎನ್ನಲಾಗುತ್ತದೆಯೇ? ಸಂಸ್ಕøತದ ಕಥೆಯೂ ಹೀಗೆಯೇ ಆಗಿರುವುದು. ಸುಮ್ಮನೇ ಗಮನಿಸಿದರೂ ಕನ್ನಡವೂ ಸೇರಿದಂತೆ ಭಾರತದ ಬಹುತೇಕ ಭಾಷೆಗಳಲ್ಲಿ ಅಡಕವಾಗಿ ಹೋಗಿರುವ ಸಂಸ್ಕøತ ಪದಗಳನ್ನು ತೆಗೆಯುತ್ತ ಹೋದರೆ ಆಯಾ ಭಾಷೆಗಳ ಅಸ್ತಿತ್ವವೇ ಅಲ್ಲಾಡಿಹೋಗುತ್ತದೆ. ಕನ್ನಡದಲ್ಲಿ ಸಹಜವಾಗಿ ಬಳಸುವ ನಮಸ್ಕಾರ ಸಾರ್ ಎಂಬ ಪದದಲ್ಲಿ ಒಂದು ಸಂಸ್ಕøತವಾದರೆ ಮತ್ತೊಂದು ಇಂಗ್ಲಿಷು. ಆದರೂ ಇದು ಕನ್ನಡ! ಇದನ್ನು ಬಿಟ್ಟರೆ ಗತಿ ಇಲ್ಲ!
ಭಾಷೆ ನಾಶವಾದರೆ ಆ ಜನರ ಸಂಸ್ಕøತಿಯೇ ನಾಶವಾದಂತೆ ಎಂಬುದು ಸಾರ್ವತ್ರಿಕ ನಂಬಿಕೆ. ದುರಾಗ್ರಹದಿಂದ ನಮ್ಮನ್ನು ಆಳುತ್ತಿದ್ದ ಬ್ರಿಟಿಷರಿಗೆ ದೇಶದ ವೈವಿಧ್ಯಮಯ ಭಾಷೆ, ಅದರಿಂದ ಉಂಟಾದ ಸಂಸ್ಕøತಿ ಅರ್ಥವಾಗದೇ ತಮ್ಮ ಆಡಳಿತದ ಅನುಕೂಲಕ್ಕಾಗಿ ತಮ್ಮ ಭಾಷೆ ಹಾಗೂ ರಿಲಿಜನ್ನುಗಳನ್ನು ನಮ್ಮ ಮೇಲೆ ಹೇರಲು ಹವಣಿಸಿ ಏಕಕಾಲಕ್ಕೆ ತಮ್ಮ ಶಿಕ್ಷಣ ಪದ್ಧತಿಯನ್ನೂ ಪಾದ್ರಿಗಳನ್ನೂ ಇಲ್ಲಿ ಕರೆತಂದುಬಿಟ್ಟರು. ಈ ಜನರನ್ನು ನಮ್ಮ ವಶದಲ್ಲಿಟ್ಟುಕೊಳ್ಳಬೇಕೆಂದರೆ ಇವರ ನಂಬಿಕೆ ಮತ್ತು ಭಾಷೆಗಳನ್ನು ನಮ್ಮದನ್ನಾಗಿ ಮಾಡಬೇಕು ಎಂದು ಮೆಕಾಲೆ ಸ್ಪಷ್ಟವಾಗಿ ಹೇಳುತ್ತಾನೆ. ಅದೇ ನಿಟ್ಟಿನಲ್ಲಿ ಬ್ರಿಟಿಷ್ ಆಡಳಿತದ ಪ್ರಯತ್ನ ನಡೆಯುತ್ತದೆ. ಅವರು ಯಶಸ್ಸು ಕಾಣುವುದಿಲ್ಲ. ಆದರೆ ಅವರು ಬಿತ್ತಿದ ಚಿಂತನೆಯ ಬೀಜ ನಮ್ಮಲ್ಲಿ ಬಹಳ ಆಳವಾಗಿ ನೆಲೆಯೂರಿದೆ. ಭಾರತದ ಬಗೆಗಿನ ತಮ್ಮ ಚಿಂತನೆ ಹಾಗೂ ದೃಷ್ಟಿಕೋನಗಳೇ ಪರಮ ಸತ್ಯ ಎಂಬಂತೆ ಅವರು ತಮ್ಮ ಭಾಷೆಯ ಮೂಲಕ ಪ್ರಪಂಚಾದ್ಯಂತ ಬಿಂಬಿಸಿ ಅದನ್ನೇ ದೇಶೀ ಭಾಷೆಗಳಲ್ಲೂ ಅನುವಾದಿಸಿದರು. ವಸಾಹತುಶಾಹಿ ಅವಧಿಯ ಅನುವಾದ ಸಾಹಿತ್ಯ ಇಂದಿಗೂ ತನ್ನ ಪ್ರಭಾವವನ್ನು ಬೀರುತ್ತಿದೆ. ಹೀಗಾಗಿ ಸೆಕ್ಯುಲರಿಸಂ, ಪ್ರೀಸ್ಟ್‍ಹುಡ್, ರಿಲಿಜನ್, ಕಾಸ್ಟ್, ಕ್ಲಾಸ್, ರೇಸ್ ಮುಂತಾದ ಅನೇಕಾನೇಕ ಪದಗಳು ಶೈಕ್ಷಣಿಕ, ಸಾಹಿತ್ಯಕ ಮತ್ತು ಸಾಂಸ್ಕøತಿಕ ವಲಯಗಳಲ್ಲಿ ಅನೇಕ ಗೊಂದಲಗಳನ್ನು ಹುಟ್ಟಿಸುತ್ತಿವೆ. ಈ ಪದಗಳು ಕ್ರಮವಾಗಿ ಜಾತ್ಯತೀತತೆ, ಪುರೋಹಿತಶಾಹಿ, ಧರ್ಮ, ಜಾತಿ, ವರ್ಗ, ಜನಾಂಗ ಎಂದು ಅನುವಾದವಾಗಿವೆ. ಈ ಪದಗಳ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳದೇ ಅನುವಾದ ಮಾಡಿ ಚಾಲ್ತಿಗೆ ಬರುವಂತೆ ಮಾಡಿದ ಕಾರಣ ಜಾತಿ, ವರ್ಗ, ವರ್ಣ, ಜನಾಂಗ ಎಂಬವುಗಳನ್ನು ಹೇಗೆ ಬೇಕೆಂದರೆ ಹಾಗೆ ಬಳಸುತ್ತೇವೆ. ಇವುಗಳ ಮೂಲವನ್ನು ಹುಡುಕಿದ ಸಂಸ್ಕøತಿ ಚಿಂತಕರಾದ ಡಾ. ಬಾಲಗಂಗಾಧರ್ ಅವರು ತಮ್ಮ ಕೃತಿಗಳಲ್ಲಿ ಇಂಥ ಪದಗಳು ಭಾರತೀಯ ಜ್ಞಾನ ವಲಯದಲ್ಲಿ ಉಂಟುಮಾಡಿದ ಹಾನಿಗಳನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಅಂದರೆ ನಿರ್ದಿಷ್ಟ ಭೌಗೋಳಿಕ, ಸಾಮಾಜಿಕ, ಚಾರಿತ್ರಿಕ ಹಿನ್ನೆಲೆಯಲ್ಲಿ ರೂಪುಗೊಳ್ಳುವ ಭಾಷೆ ಹಾಗೂ ಅದು ನಿರ್ಮಿಸುವ ಪರಿಸರ ಮೇಲ್ನೋಟದಲ್ಲಿ ಅರ್ಥವೇ ಆಗುವುದಿಲ್ಲ. ಆದರೂ ನಾವು ಅದರಲ್ಲೇ ಬದುಕುತ್ತಿರುತ್ತೇವೆ!
ಪುಸ್ತಕ:
No comments:
Post a Comment