ವರ್ಷಗಳ ಹಿಂದೆ ಭಾರತದ ಖಗೋಳ ವಿಜ್ಞಾನಿಗಳ ತಂಡ ಮಂಗಳನ ಕಕ್ಷೆಗೆ ಉಪಗ್ರಹವನ್ನು ಯಶಸ್ವಿಯಾಗಿ ಸೇರಿಸಿತು. ಈ ಸಂದರ್ಭದಲ್ಲಿ ಬಹುತೇಕ ಕನ್ನಡ ವಾಹಿನಿಗಳು ಚರ್ಚೆಯನ್ನು ಏರ್ಪಡಿಸಿದ್ದವು. ಖಗೋಳ ಅನ್ನುತ್ತಿದ್ದಂತೆ ಈ ಕುರಿತ ಭಾರತದ ಪ್ರಾಚೀನ ಜ್ಞಾನವೇತ್ತರನ್ನು ಹಾಗೂ ಇಂದಿನ ವಿಜ್ಞಾನಿಗಳನ್ನು ಅಥವಾ ಅವರ ಪ್ರತಿನಿಧಿಗಳು ಅಂದುಕೊಂಡವರನ್ನು ಚರ್ಚೆಗೆ ಆಹ್ವಾನಿಸಬೇಕಲ್ಲ? ವಾಹಿನಿಗಳೂ ಹಾಗೆಯೇ ಮಾಡಿದವು. ಎರಡೂ ಕ್ಷೇತ್ರದವರನ್ನು ಜೊತೆಗೆ ನಡುವೆ ವಿಚಾರವಾದಿಗಳನ್ನು ಕರೆತಂದು ಕೂರಿಸಲಾಗಿದ್ದ ಚರ್ಚೆಯೊಂದನ್ನು ನೋಡುತ್ತಿದ್ದೆ. ಜ್ಯೋತಿಷಶಾಸ್ತ್ರದಲ್ಲಿ ಮಂಗಳನ ಬಗ್ಗೆ ಹೀಗೆ ಹೇಳಿದೆ, ಹಾಗೆ ಹೇಳಿದೆ. ಅದೇ ಸತ್ಯ; ಭಾರತೀಯ ಋಷಿ ಮುನಿಗಳು ಅಣುವಿನ ಬಗ್ಗೂ ಪ್ರಸ್ತಾಪಿಸಿದ್ದಾರೆ, ಅವರಿಗೆಲ್ಲ ತಿಳಿದಿತ್ತು ಎಂಬಂತೆ ಆ ಶಾಸ್ತ್ರದವರು ಅನ್ನುತ್ತಿದ್ದರೆ ಮತ್ತೊಂದೆಡೆ ಹಾಗಾದ್ರೆ ಅವರಿಗೆ ಅಣುಬಾಂಬ್ ತಿಳಿದಿತ್ತಾ? ಇದೆಲ್ಲ ನಾನ್ಸೆನ್ಸ್ ಎಂದು ಆಧುನಿಕ ಜ್ಞಾನ ಪ್ರತಿಪಾದಕರು ಬಿಸಿಬಿಸಿ ಚರ್ಚೆ ಮಾಡುತ್ತಿದ್ದರು. ತಮ್ಮ ತಮ್ಮ ಪ್ರತಿಪಾದನೆಗೆ ಎರಡೂ ಗುಂಪಿನವರೂ ಬಲವಾಗಿ ಅಂಟಿಕೊಂಡೇ ಇದ್ದರು. ಸಮಯವಾಯ್ತು, ಚರ್ಚೆ ನಿಂತಿತು. ಇಂಥ ಚರ್ಚೆಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ.
ಕಾರಣ ಇಷ್ಟೇ. ಭಾರತದ ಪ್ರಾಚೀನ ಜ್ಞಾನ ಅಂದರೆ ಇಲ್ಲಿ ಚಂದ್ರ, ಸೂರ್ಯ, ಮಂಗಳ ಮೊದಲಾದವುಗಳ ಬಗ್ಗೆ ಜ್ಯೋತಿಷಶಾಸ್ತ್ರದಲ್ಲಿ ಹೇಳಿರುವ ಮಾತುಗಳು ಅಥವಾ ಪಾರಂಪರಿಕ ಜ್ಞಾನ. ಇವುಗಳ ವಿವರ ಭಾಸ್ಕರಾಚಾರ್ಯ, ವರಾಹಮಿಹಿರ ಮೊದಲಾದವರ ಕೃತಿಗಳಲ್ಲಿ ತಕ್ಕಮಟ್ಟಿಗೆ ದೊರೆಯುತ್ತದೆ. ಇದನ್ನು ಇಂದಿನ ಜ್ಯೋತಿಷ್ಕರು ತುಸು ತಿಳಿದಿರುತ್ತಾರೆ. ಇನ್ನು ಆಧುನಿಕ ವಿಜ್ಞಾನ ಕುರಿತು ಮಾತನಾಡುವವರು ವಿಜ್ಞಾನಿಗಳ ಸಾಧನೆಯನ್ನು ಪತ್ರಿಕೆಗಳಲ್ಲಿ ಓದಿದವರೋ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಪಾಠ ಮಾಡುವವರೋ ಆಗಿದ್ದವರು. ಇವರಲ್ಲಿ ಎರಡೂ ವರ್ಗದವರೂ ಈ ಎರಡೂ ಕ್ಷೇತ್ರದ ಜ್ಞಾನ ಸೃಷ್ಟಿಗೆ ಕಾರಣರಾದವರಲ್ಲ, ಬದಲಿಗೆ ಯಾರೋ ಮಾಡಿದ ಪ್ರಯೋಗ-ಅದರ ಫಲಿತಗಳ ಅಂತಿಮ ಫಲಾನುಭವಿಗಳು. ಜ್ಯೋತಿಷವನ್ನು ಕುರಿತು ಅದರಲ್ಲಿ ಹೇಳಿದ್ದೇ ಪರಮ ಸತ್ಯ ಎನ್ನುವವರು ಭಾಸ್ಕರಾಚಾರ್ಯರೂ ಅಲ್ಲ, ವರಾಹಮಿಹಿರರೂ ಅಲ್ಲ. ಹಾಗೆಯೇ ಮಾನವ ಅಂದರೇನು? ಅವನ ಸಾಧನೆಯೇನು? ಚಂದ್ರನಿಗೆ ಹೋಗಿದ್ದಾನೆ, ಮಂಗಳನ ಅಂಗಳಕ್ಕೆ ಏಣಿ ಹಾಕಿದ್ದಾನೆ, ಇದು ಕಂಪ್ಯೂಟರ್ ಯುಗ. ಇಸ್ರೋ ವಿಜ್ಞಾನಿಗಳು ರಾಕೆಟ್ ಉಡಾಯಿಸುವ ಮುಂಚೆ ಧರ್ಮಸ್ಥಳಕ್ಕೆ ಹೋಗ್ತಾರೆ, ತಿರುಪತಿಗೆ ಹೋಗಿ ಪೂಜೆ ಮಾಡ್ತಾರೆ. ಎಂಥ ವ್ಯಂಗ್ಯ, ಮೌಢ್ಯ ನೋಡಿ ಎಂದು ವಿಜ್ಞಾನದ ಪ್ರತಿನಿಧಿಗಳು ಅಂದುಕೊಂಡವರು ತೀವ್ರ ವೈಚಾರಿಕ ಅಂದುಕೊಂಡ ಭ್ರಮೆಯಲ್ಲಿ ವಾದಕ್ಕಿಳಿಯುತ್ತಾರೆ. ಹಾಗಂತ ಇವರ್ಯಾರೂ ಆಕಾಶಕ್ಕೆ ಒಂದೇ ಒಂದು ರಾಕೆಟ್ ಉಡಾಯಿಸಿದವರಲ್ಲ, (ಉಡಾಯಿಸಿದ್ದರೆ ಮಕ್ಕಳ ಪಟಾಕಿ-ರಾಕೆಟ್ ಉಡಾಯಿಸಿರಬಹುದಷ್ಟೇ!). ಜೊತೆಗೆ ನ್ಯೂಟನ್, ಐನ್‍ಸ್ಟೈನ್, ವಿಕ್ರಂ ಸಾರಾಭಾಯ್ ಅಥವಾ ರಾಮಾನುಜಂ ಅವರೂ ಅಲ್ಲ, ಅವರ ಸಂತತಿಯವರೂ ಅಲ್ಲ. ಆದರೂ ವಿಜ್ಞಾನ-ತಂತ್ರಜ್ಞಾನದ ಸಾಧನೆಗಳನ್ನು ತಾವೇ ಸಿದ್ಧಮಾಡಿ ತೋರಿಸಿದ ಹುಮ್ಮಸ್ಸಿನಲ್ಲಿ ವಿಜ್ಞಾನದ ಮುಂದೆ ಮತ್ತೇನೂ ಇಲ್ಲ ಎಂಬಂತೆ ತರ್ಕ ಹೂಡುತ್ತಾರೆ. ಇವರ ದೌರ್ಭಾಗ್ಯ ನೋಡಿ-ವಿಜ್ಞಾನದ ಮಹಾನ್ ಸಾಧಕರಾದವರು ಯಾರೂ ವಿಜ್ಞಾನವೇ ಅಂತಿಮ ಎಂದು ಹೇಳಿಲ್ಲ! ಅದು ಕೂಡ ಜ್ಞಾನ ಸಾಧನೆಯ ಒಂದು ಮಾರ್ಗವಷ್ಟೇ. ಇಲ್ಲಿರುವುದು ಋಷಿಮುನಿಗಳ ಹಾಗೂ ನೈಜ ವಿಜ್ಞಾನಿಗಳ ಮಾತನ್ನು ನಾವು ಅರ್ಥಮಾಡಿಕೊಳ್ಳುವಲ್ಲಿ ಆಗಿರುವ ಸಂವಹನದ ಸಮಸ್ಯೆ. ಇವೆರಡೂ ಜ್ಞಾನ ಮಾರ್ಗಗಳನ್ನು ಅರಿಯಲು ಅನುಸರಿಸಬೇಕಾದ ವಿಧಾನಗಳು ಬೇರೆ ಬೇರೆ. ಜ್ಯೋತಿಷ ಅರಿಯುವ ದೃಷ್ಟಿಯಿಂದ ವಿಜ್ಞಾನದ ಇಂದಿನ ಕ್ರಮವನ್ನೂ ವಿಜ್ಞಾನದ ಇಂದಿನ ಅರಿವಿನ ಕ್ರಮದಿಂದ ಜ್ಯೋತಿಷವನ್ನೂ ಅರಿಯಲು ಮುಂದಾದರೆ ಆಗುವುದೇ ಹೀಗೆ. ಎರಡರ ಭಾಷೆ ಹಾಗೂ ಅರಿಯುವ ಕ್ರಮಗಳೇ ಭಿನ್ನ.
ವೇದವಾಕ್ಯಗಳಿಗೂ ಆಗಿರುವುದು ಇದೇ ದುರ್ಗತಿ. ಬ್ರಾಹ್ಮಣೋಸ್ಯ ಮುಖಮಾಸೀತ್ ಅಂದರೆ ಬ್ರಾಹ್ಮಣರು ಮುಖದಿಂದ ಜನಿಸಿದರು ಎಂದೂ ಪದ್ಭ್ಯಾಂಗು ಶೂದ್ರೋ ಅಜಾಯತ ಅಂದರೆ ಪಾದಗಳಿಂದ ಶೂದ್ರರು ಹುಟ್ಟಿದರು ಎಂದೂ ಅರ್ಥ ಕಲ್ಪಿಸಿ ಪ್ರಚಾರ ಮಾಡಿಯೇ ಮಾಡುತ್ತೇವೆ! ಈ ಮೂಲ ವಾಕ್ಯಗಳನ್ನು ಮೊದಲು ಯಾರು ಹೀಗೆ ಅರ್ಥೈಸಿದರೋ ಅದನ್ನು ಯಾವ ಮಹಾಶಯ ಹೀಗೆ ಅನುವಾದಿಸಿದನೋ ಅಂತೂ ಭಾರೀ ಜನಪ್ರಿಯವಂತೂ ಆಗಿ ಇದೇ ಅರ್ಥ ಕೂತುಬಿಟ್ಟಿದೆ. ಇಂಥ ಅನಾಹುತಗಳು ನಿತ್ಯ ಜೀವನದಲ್ಲೂ ಆಗುತ್ತವೆ. ಇದೇ ನೋಡಿ ಭಾಷೆಯ ಸಮಸ್ಯೆ.
ಈಚೆಗೆ ಒಬ್ಬ ಭೇಟಿಯಾದ. ಅಣ್ಣಾ ಚೆನ್ನಾಗಿದ್ದೀರಾ? ಅಂದ. ಹೌದಪ್ಪಾ ಅಂದೆ. ಅಕ್ಕ ಹೆಂಗಿದ್ದಾರಣ್ಣಾ? ಅಂದ. ಯಾವ ಅಕ್ಕ ಅಂದ್ರೆ, ಏನಣ್ಣಾ ಹಿಂಗತೀರಿ? ನಿಮ್ಮ ಮನೆಯವರು ಅಂದ. ಎಲಾ ಇವನ ಅಂದುಕೊಂಡು ಅಲ್ಲಾ ಮಾರಾಯ, ನಾನು ಅಣ್ಣ ಆದ್ಮೇಲೆ ನನ್ನ ಹೆಂಡ್ತಿ ನಿನಗೆ ಅತ್ತಿಗೆ ಆಗ್ಬೇಕಲ್ವಾ? ಅದು ಹೆಂಗೆ ಅಕ್ಕ ಆಗ್ತಾಳೆ ಎಂದು ಕೇಳಿದೆ. ಅದು ಹಂಗೆ ಸರ್ ಅಂದ. ಇವನ ಮಾತಿನಂತೆಯೇ ಹೋದರೆ ಅಣ್ಣನ ಹೆಂಡತಿ ಅತ್ತಿಗೆಯಲ್ಲ, ಅಕ್ಕ. ಅಂದರೆ ಅಣ್ಣನಿಗೂ ಅಕ್ಕನಿಗೂ ಇವರು ಮದುವೆ ಮಾಡಿಸಿಬಿಡ್ತಾರೆ ಎಂದು ತಿಳಿಯುವಂತಿಲ್ಲ. ಯಾಕೆಂದರೆ ಅದು ಹಂಗೇ!
ಕರ್ನಾಟಕದಲ್ಲೇ ಕೆಲವೆಡೆ ಅಪ್ಪನನ್ನು ಅಣ್ಣ ಎಂದೂ ತಾಯಿಯನ್ನು ಅಕ್ಕ ಎಂದೂ ಮತ್ತೆ ಕೆಲವೆಡೆ ಅಪ್ಪನನ್ನು ಭಾವ ಎಂದೂ ತಾಯಿಯನ್ನು ಅಕ್ಕ ಎಂದೂ ಸಂಬೋಧಿಸುವುದು ಇದೆ. ಹಳೆಗನ್ನಡದ ಅನೇಕಾನೇಕ ಪದಗಳು ಇನ್ನೂ ಆಡುಭಾಷೆಯಲ್ಲಿರುವ ಹವ್ಯಕರಲ್ಲಿ ತಾಯಿಯನ್ನು ಅಬ್ಬೆ ಎಂದೂ ಆಯಿ ಎಂದೂ ಸಂಬೋಧಿಸುವುದು ಇದೆ. ಆಯಿ ಮರಾಠಿಯಲ್ಲಿ ಹೆಚ್ಚು ಪ್ರಚಲಿತ. ಯಾವ ಹೆಣ್ಣು ಮಗಳಿಗಾದರೂ ಈ ಪದ ಅಲ್ಲಿ ಸಲ್ಲುತ್ತದೆ.
ಕೆಲವೊಮ್ಮೆ ಅನ್ಯ ಭಾಷಿಕ ಸಂಪರ್ಕದಿಂದ ಅಗತ್ಯಕ್ಕೆ ಅನುಗುಣವಾಗಿ ಹೊಸ ಪದಗಳು ಬಂದು ಸೇರುತ್ತವೆ. ಕನ್ನಡಕ್ಕೆ ಸಂಸ್ಕøತದಿಂದ ಅನೇಕಾನೇಕ ಪದಗಳು ಬಂದಂತೆ ಇಂದು ಇಂಗ್ಲಿಷಿನಿಂದ ಬರುತ್ತಿವೆ. ಅಷ್ಟೇ ಅಲ್ಲ, ಅವು ಇಲ್ಲಿಯವೇ ಆಗಿಬಿಟ್ಟಿವೆ. ಎಷ್ಟರಮಟ್ಟಿಗೆ ಎಂದರೆ ಇಲ್ಲಿಗೆ ಅತಿಥಿಗಳಾಗಿ ಬಂದು ಶಾಶ್ವತ ಠಿಕಾಣಿ ಹೂಡಿದ ಈ ಪದಗಳನ್ನು ಆ ಭಾಷೆಯ ಮೂಲ ಜನರೇ ಬಂದರೂ ಗುರುತಿಸಲಾರರು. ಉದಾಹರಣೆಗೆ ನೋಡಿ: ಕಾಂಟ್ರ್ಯಾಕ್ಟ್ ಎಂಬ ಪದ ಕನ್ನಡಕ್ಕೆ ಕಂಟ್ರಾಕ್ಟು ಎಂದೂ ಕಂತ್ರಾಟು ಎಂದೂ ಬಂದಿದೆಯಷ್ಟೇ ಅಲ್ಲ ಅದರ ಮೂಲ ಅರ್ಥವೇ ಬಿದ್ದು ಹೋಗಿ ಭಾನಗಡಿ ಕಿಡಿಗೇಡಿ ಎಂಬ ಅರ್ಥ ಪ್ರಾಪ್ತವಾಗಿದೆ. ಅವನೊಬ್ಬ ಫಿರ್ಕೀಸು ಎಂಬ ಪದ ಈಚೆಗೆ ಕಿವಿಗೆ ಬಿತ್ತು. ಈ ಫಿರ್ಕೀಸು ಅಂದರೇನು ಎಂದು ತಿಳಿಯಲು ಅದರ ಬೆನ್ನು ಬಿದ್ದೆ. ನೋಡಿದರೆ ಅದು ಇಂಗಿಷಿನ ಫ್ರೀಕ್ (ತಿಕ್ಕಲ) ಪದದ ಅಪಭ್ರಂಶ! ಲೈನು ಎಂಬುದು ಗೆರೆ ಎಂಬರ್ಥದಿಂದ ದೂರವಾಗಿ ಹುಡುಗ ಹುಡುಗಿಗೆ ಲೈನು ಹೊಡೆದ ಎಂಬರ್ಥದಲ್ಲಿ ಬಳಕೆಯಾಗುತ್ತ ಆಸಕ್ತಿ ತೋರಿದ ಎನ್ನುವಂತಾಗಿದೆ. ಹಾಗೆಯೇ ಬಂಡಲ್=ಬಡಾಯಿ; ಬಕೇಟು ಹಿಡಿ= ಚೇಲಾಗಿರಿ ಇತ್ಯಾದಿ. ಹುಡುಕಿದಷ್ಟೂ ಇವು ದೊರೆಯುತ್ತವೆ. ಅದಿರಲಿ. ಪಿಎಂ, ಸಿಎಂ, ಹೀರೋ, ವಿಲನ್ ಇವನ್ನೆಲ್ಲ ನಾವೆಂದೂ ಆಡುಮಾತಿನಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ, ನಾಯಕ, ಖಳನಾಯಕ ಎನ್ನುವುದಿಲ್ಲ!
ಕನ್ನಡೀಕರಣಗೊಂಡ ಆಂಗ್ಲ ಪದಗಳಿಗೆ ಮೂಲ ಅರ್ಥ ಎಷ್ಟೋ ಮೈಲು ದೂರದಲ್ಲಿದೆ. ನಿದರ್ಶನಕ್ಕೆ ನೋಡಿ: ಜನಸಾಮಾನ್ಯರಿರಲಿ, ಪ್ರೊಫೆಸರುಗಳೂ ಕಾರ್ಯಕ್ರಮವೊಂದು ನಿಗದಿತ ದಿನ ಅಥವಾ ಸಮಯಕ್ಕೆ ಮುಂಚೆ ಘಟಿಸುವಾಗ ಅದನ್ನು ಪ್ರೀಫೋನ್ ಅನ್ನುತ್ತಾರೆ. ಈ ಪದವೇ ಇಂಗ್ಲಿಷಿನಲ್ಲಿ ಇಲ್ಲ! ಪೋಸ್ಟ್‍ಫೋನ್ ಎಂಬುದಕ್ಕೆ ಇವರೇ ಹುಟ್ಟಿಸಿಕೊಂಡ ಸಹಜ ವಿರುದ್ಧಾರ್ಥಕ ಪದ ಇದು. ಹೀಗೆಯೇ ಇವರು ನನ್ನ ಕಸಿನ್ ಸಿಸ್ಟರು, ಕಸಿನ್ ಬ್ರದರು ಎನ್ನುವುದಿದೆ. ಈ ಪದಗಳೂ ಇಂಗ್ಲಿಷಿನಲ್ಲಿಲ್ಲ. ಆತ ಬ್ರದರ್ ಅಥವಾ ಸಿಸ್ಟರ್ ಅಲ್ಲದ ಕಾರಣದಿಂದಲೇ ಕಸಿನ್ ಆಗಿರುವುದು. ಅಂದ ಮೇಲೆ ಈ ಕಸಿನ್ ಬ್ರದರ್, ಸಿಸ್ಟರ್ ಅಂದರೆ ಯಾರು-ಏನರ್ಥ? ಇಂಗ್ಲಿಷಲ್ಲಿ ಇಲ್ಲದಿರಬಹುದು-ನಮ್ಮಲ್ಲಿದೆ! ಇನ್ನು ಆಂಟಿ ಅಂಕಲ್ ಪದಗಳ ಬಳಕೆ ಬಗ್ಗೆ ಬೇರೆಯೇ ಲೇಖನ ಬರೆಯಬಹುದು!
ಪುಸ್ತಕ:
No comments:
Post a Comment