Monday, 24 January 2022

ಸಾಹಿತ್ಯ ಕ್ಷೇತ್ರದ ಒಳಹೊರಗು-1

ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ವರ್ಷಗಟ್ಟಲೆ ಸೂತ್ರಧಾರರಿರಲಿಲ್ಲ. ಇದೀಗ ಪ್ರೊ. ಮಾಲತಿ ಪಟ್ಟಣಶೆಟ್ಟಿಯವರನ್ನು ಸರ್ಕಾರ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಇವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪತ್ರಕರ್ತನೊಬ್ಬ ಅವರನ್ನು ಸಂದರ್ಶನ ಮಾಡಿದ. ಚಾನೆಲ್ಲೊಂದರಲ್ಲಿ ಅದು ಪ್ರಸಾರವಾಯಿತು. ಆತ ಅವರ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳಿದ. ಯುವ ಜನತೆಯನ್ನು, ಹೊಸಬರನ್ನು ಕನ್ನಡ ಭಾಷೆ, ಸಾಹಿತ್ಯದತ್ತ ಸೆಳೆಯುವ ತಮ್ಮ ಪ್ರಾಮಾಣಿಕ ಅನಿಸಿಕೆಯನ್ನು ಪ್ರೊ. ಮಾಲತಿಯವರು ಹೇಳಿದರು. ನೀವು ಸಾಹಿತ್ಯದಲ್ಲಿ ಎಡಪಂಥದ ಸಾಹಿತಿಗಳಿಗೆ ಮನ್ನಣೆ ನೀಡುವಿರೋ ಬಲಪಂಥದವರಿಗೋ ಎಂದು ಆತ ಕೇಳಿದ. ನನಗೆ ಕನ್ನಡಕ್ಕೆ ಯಾರು ಏನು ಕೊಡುಗೆ ನೀಡಿದ್ದಾರೆ ಎಂಬುದು ಮುಖ್ಯವೇ ವಿನಾ ಎಡ, ಬಲ ಪಂಥಗಳಲ್ಲ ಎಂದು ಒಬ್ಬ ನಿಜವಾದ ಸಾಹಿತ್ಯಪ್ರೇಮಿ ಹೇಳುವ ಮಾತನ್ನು ಮಾಲತಿಯವರು ಉತ್ತರವಾಗಿ ನೀಡಿದರು. ಇಂಥ ಸಮ ದೃಷ್ಟಿಕೋನ ಎಷ್ಟು ಜನರಿಗೆ ಇರಬಹುದು? ಹೇಳುವುದು ಕಷ್ಟ.

ಕನ್ನಡ ಸಾಹಿತ್ಯದ ಇಂದಿನ ಪರಿಸ್ಥಿತಿಯನ್ನು ಪತ್ರಕರ್ತನ ಪ್ರಶ್ನೆ ಪ್ರತಿನಿಧಿಸುತ್ತದೆ. ಇದು ನಿಜಕ್ಕೂ ಸಾಹಿತ್ಯಕ ದುರಂತ. ಸಾಹಿತ್ಯ ರಚಿಸುವವರು, ಸಾಹಿತ್ಯ ಓದುವವರು ಇಬ್ಬರೂ ತಾವು ಎಡಪಂಥದವರೋ, ಬಲಪಂಥದವರೋ ಎಂದು ಮೊದಲೇ ನಿರ್ಧರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಈಗಾಗಲೇ ಆಯಾ ಪಂಥೀಯರು ಅಥವಾ ಮಾಧ್ಯಮದವರು ಅಥವಾ ಕೊನೆಗೆ ವಿಮರ್ಶಕರು ನಿಮಗೆ ಹಣೆಪಟ್ಟಿ ಹಚ್ಚಿಯೇಬಿಡುತ್ತಾರೆ! ಹೀಗೆ ಹಣೆಪಟ್ಟಿ ಅಂಟಿಸಿಕೊಳ್ಳದವ ಸಾಹಿತಿಯೂ ಆಗಲಾರ ಓದುಗನೂ ಆಗಲಾರ! 

ಸುಮ್ಮನೆ ಓದುವ, ಬರೆಯುವ ಪ್ರೀತಿಗಾಗಿ ಸಾಹಿತ್ಯ ಲಭ್ಯವಿಲ್ಲವೇ? ಒಬ್ಬ ನಿಜವಾದ ಸಾಹಿತ್ಯಪ್ರೇಮಿಗೆ ಯಾವ ಪಂಥಗಳೂ ಮುಖ್ಯವಾಗದು. ಆತ ಆ ವಿಷಯ, ಈ ವಿಷಯ, ಆ ಸಿದ್ಧಾಂತ, ಈ ಸಿದ್ಧಾಂತ ಎಂದೆಲ್ಲ ನೋಡಲಾರ. ತನಗೆ ಯಾವುದು ಇಷ್ಟವೋ, ಆಸಕ್ತಿಯೋ ಅದನ್ನೆಲ್ಲ ಆತ ಓದಿ ಅರಗಿಸಿಕೊಳ್ಳುತ್ತಾನೆ, ತನ್ನದೇ ಒಂದು ನಿಲುವಿಗೆ ಆತ ಬರಬಹುದು, ಬರದೆಯೂ ಇರಬಹುದು. ಹೀಗೆ ಯಾವ ಪಂಥ, ಸಿದ್ಧಾಂತಕ್ಕೂ ತನ್ನನ್ನು ಅಡವಿಟ್ಟುಕೊಳ್ಳದ ಸಾಹಿತಿ ಅಥವಾ ಓದುಗನೇ ನಿಜವಾದ ಸಾಹಿತಿ ಅಥವಾ ಓದುಗನಾಗಬಲ್ಲ. ಜನಪ್ರೀತಿಯ ಕವಿ ಜಿಎಸ್‍ಎಸ್ ಅವರ ಕಾವ್ಯವನ್ನು ನವೋದಯ, ನವ್ಯ, ದಲಿತ-ಬಂಡಾಯ ಹೀಗೆ ಯಾವುದಕ್ಕಾದರೂ ತಗುಲಿಸಲೇಬೇಕು ಎಂಬ ವಿಮರ್ಶಕರ, ಮಾಧ್ಯಮದವರ ಹಠ ಕೊನೆಗೂ ಈಡೇರಲೇ ಇಲ್ಲ. ಯಾವುದೂ ದಾರಿ ಕಾಣದೇ ಅವರಿಗೆ ಕೊನೆಗೆ ಸಮನ್ವಯ ಕವಿ ಎಂಬ ಹಣೆಪಟ್ಟಿ ಕಟ್ಟಿದರು. ಜಿಎಸ್‍ಎಸ್ ಅವರಿಗೇ ಸ್ವತಃ ಇದು ಇರಿಸುಮುರಿಸು ತಂದರೂ ನಾವು ಅವರನ್ನು ಹಾಗೆ ಕರೆಯುವುದನ್ನು ಬಿಡಲಿಲ್ಲ! ಜನರನ್ನು ಪ್ರೀತಿಯಿಂದ ಆವರಿಸಿದ ಕೆಎಸ್‍ನ ಅವರನ್ನು, ಅವರದು ಪುಷ್ಪಕಾವ್ಯ, ಅವರು ಕವಿಯೇ ಅಲ್ಲ, ಅವರು ಪುಷ್ಪಕವಿ ಎಂದೆಲ್ಲ ಗೇಲಿ ಮಾಡಲಾಯಿತು. ಕನ್ನಡ ಪ್ರಾಧ್ಯಾಪಕರಾಗಿರದೇ, ಯಾವ ಸಿದ್ಧಾಂತಕ್ಕೂ ಕಟ್ಟುಬೀಳದೇ ಒಬ್ಬ ಸಾಹಿತ್ಯ ಪ್ರೀತಿಯ ಸರ್ಕಾರಿ ನೌಕಕರಾಗಿ ಅವರು ರಚಿಸಿದ ಕಾವ್ಯ ಪಡೆದ ಜನಮನ್ನಣೆ ಸಾಹಿತ್ಯದ ಅಧಿಕೃತ ಗುತ್ತಿಗೆ ಪಡೆದವರ ಹೊಟ್ಟೆಯುರಿಗೆ ಕಾರಣವಾಯಿತೋ ಅಥವಾ ಯಾವುದೇ ಪಂಥಗಳ ಲಕ್ಷಣ ಕಾಣಿಸದೇ ಎರಡೂ ಪಂಥದವರು ಅವರನ್ನು ವ್ಯವಸ್ಥಿತವಾಗಿ ನಿರಾಕರಿಸಲು ಹವಣಿಸಿದರೋ-ಎರಡೂ ಇರಬಹುದು. ಆದರೆ ಇಂದಿಗೂ ಜನ ಮಾತ್ರ ಅವರ ಪುಷ್ಪಕಾವ್ಯ ಪ್ರೀತಿಸುವಷ್ಟು ಸಿಡಿಲ ಕಾವ್ಯವನ್ನು ಪ್ರೀತಿಸುತ್ತಿಲ್ಲ. ಇವೆಲ್ಲ ಸಾಹಿತ್ಯದಲ್ಲಿ ರಾಜಕೀಯ, ಸಾಮಾಜಿಕ ಸಿದ್ಧಾಂತಗಳು ಸೇರಿ ಸಾಹಿತ್ಯವನ್ನು ಕೇವಲ ಸಾಹಿತ್ಯವಾಗಿ ಇರಲು ಬಿಡದಂತೆ ಮಾಡಿದುದರ ಲಕ್ಷಣಗಳು.

ಹಾಗೆ ನೋಡಿದರೆ ನಮ್ಮ ಸಾಹಿತ್ಯಕ್ಕೂ ರಾಜಕಾರಣಕ್ಕೂ ಪಂಪನ ಕಾಲದಿಂದಲೂ ಬಿಟ್ಟೂಬಿಡದ ನಂಟು. ಪ್ರಾಚೀನ ಕಾಲದ ಸಾಹಿತ್ಯದಲ್ಲಿ ಇವುಗಳ ನಡುವೆ ಗೆರೆ ಎಳೆಯಬಹುದಾದ ಸಾಧ್ಯತೆಯಾದರೂ ಇದೆ. ಆದರೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಇದರ ಆಯಾಮ ಬಹುಮುಖ. ಜನತಂತ್ರ ವ್ಯವಸ್ಥೆ ಬಂದ ಮೇಲೆ ಸಾಹಿತ್ಯದ ಮೂಲಕ ಸುಲಭವಾಗಿ ಜನಮನ್ನಣೆ ಪಡೆಯಬಹುದು ಎಂಬುದನ್ನು ವ್ಯವಸ್ಥೆಯಲ್ಲಿರುವವರು ಬಹುಬೇಗ ಅರ್ಥಮಾಡಿಕೊಂಡರು. ಕೆಲವರ ಓಲೈಕೆಯಲ್ಲಿ ಅಥವಾ ಕೃಪಾಕಟಾಕ್ಷದಲ್ಲಿ ಹೊಸಗನ್ನಡ ಸಾಹಿತ್ಯ ಬೆಳೆಯುತ್ತಬಂತು. ಉತ್ತರ ಕರ್ನಾಟಕ ಅಂದ ಕೂಡಲೇ ಬೇಂದ್ರೆ ಎನ್ನುವುದು, ದಕ್ಷಿಣ ಕರ್ನಾಟಕ ಅಂದರೆ ಕುವೆಂಪು ಅನ್ನುವುದು, ಕರಾವಳಿ ಅಂದರೆ ಕಾರಂತ ಅನ್ನುವುದು ಹೀಗೆ ಸಾಹಿತ್ಯದ ಬ್ರಾಂಡುಗಳು ತಯಾರಾದವು. ಇಂಥ ಮೇಲೈಕೆ, ಓಲೈಕೆಗಳಿಂದ ಕನ್ನಡ ಸಾಹಿತ್ಯಕ್ಕೆ ನಿಜಕ್ಕೂ ನಷ್ಟವಾಗಿದೆ. ಇಲ್ಲೊಂದು ನಿದರ್ಶನ. ಬೆಳ್ಳೆ ರಾಮಚಂದ್ರರಾಯರು ಕಾರಂತರ ಸಮಕಾಲೀನರು, ಅದೇ ಪರಿಸರದಲ್ಲಿದ್ದ ಅವರ ಆಪ್ತರು. ಹಿಂದೊಮ್ಮೆ ಪ್ರಕಟವಾಗಿ ಮೂಲೆಗುಂಪಾಗಿದ್ದ ಅವರ ಕೃತಿಗಳನ್ನು ಶಿವಮೊಗ್ಗ ಕರ್ನಾಟಕ ಸಂಘ ಬೆಳ್ಳೆ ರಾಮಚಂದ್ರರಾಯರ ಎರಡು ಕಾದಂಬರಿಗಳು ಎಂದು ಮರು ಮುದ್ರಣ ಮಾಡಿ ಉಪಕರಿಸಿದೆ. ಇದರಲ್ಲಿ ಒಂದು ಚಿರವಿರಹಿ ಎಂಬ ಕಾದಂಬರಿ. 1950ರಲ್ಲಿ ಪ್ರಕಟವಾದ ಇದರ ವಸ್ತು, ತಂತ್ರ, ಭಾಷೆ, ಸಂವಿಧಾನಗಳು ಇಂದಿಗೂ ಅನೂಹ್ಯ. ಆ ಕಾದಂಬರಿಯ ಗೋಪಿ, ಮಾಲತಿ, ಸುಮಿತ್ರ ಪಾತ್ರಗಳು ಅವು ಆಧುನಿಕತೆಯೊಂದಿಗೆ ಮುಖಾಮುಖಿಯಾಗುತ್ತ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಹೆಣಗುವ ಪರಿ, ಸಂಪ್ರದಾಯ ಮತ್ತು ಆಧುನಿಕತೆ ಸಂಘರ್ಷ ಮೊದಲಾದವುಗಳನ್ನು ಆ ಕಾದಂಬರಿ ಓದಿಯೇ ಅರಿಯಬೇಕು. ಕಾರಂತರ ಮೈಮನಗಳ ಸುಳಿಯಲ್ಲಿ ಕಾದಂಬರಿಯ ಜೊತೆಯಲ್ಲೇ ಪ್ರಕಟವಾದರೂ ಈ ಕಾದಂಬರಿಗೆ ಸಿಗಬೇಕಾದ ನ್ಯಾಯ ಆಗಲೂ ಸಿಗಲಿಲ್ಲ, ಈಗಲೂ ಸಿಕ್ಕಿಲ್ಲ. ಅನಕೃ ಅವರಂತೂ ಇದು ಅನ್‍ಕಾಮನ್ ನಾವೆಲ್ ಎಂದು ಅಂದೇ ಕರೆದಿದ್ದರು. ಆದರೂ ವಿಮರ್ಶಕರಿಗೆ ಇದು ಕಾಣಲೇ ಇಲ್ಲ. ಯಾಕೆಂದರೆ ಬೆಳ್ಳೆ ರಾಮಚಂದ್ರರಾಯರು ಎಂದರೆ ಯಾರು? ಎಂಬುದೇ ಅವರಿಗೆ ಈಗಲೂ ಇರುವ ಪ್ರಶ್ನೆ!

ಸ್ವತಃ ಕಾರಂತರನ್ನೇ ನೋಡಿ. ಅವರ ಯಕ್ಷಗಾನ ಬಯಲಾಟ ಪ್ರಕಟವಾಗಿ ವರ್ಷಗಳೇ ಕಳೆದಿದ್ದರೂ ನಮ್ಮಲ್ಲಿ ಯಾರಿಗೂ ಅದು ಮಹತ್ವದ್ದು ಎನಿಸಲೇ ಇಲ್ಲ. 1958ರಲ್ಲಿ ಸ್ವೀಡಿಷ್ ಅಕಾಡೆಮಿ ಅದಕ್ಕೆ ಪ್ರಶಸ್ತಿ ನೀಡಿದಾಗ ನಾವೂ ಅದಕ್ಕೆ ಅಕಾಡೆಮಿ ಅವಾರ್ಡ್ ನೀಡಿದೆವು! ಇದೇ ಪರಿಸ್ಥಿತಿ ಈಗಲೂ ಇದೆ. ಕನ್ನಡದಲ್ಲಿ ಈಗ ವಿಮರ್ಶೆ ಸತ್ತೇ ಹೋಗಿದೆ ಎಂದರೆ ತಪ್ಪೇನೂ ಇಲ್ಲ. ಇದ್ದರೂ ಅದು ತಥಾಕಥಿತ ಮಾದರಿಗೆ ಒಳಪಟ್ಟಿದೆ. ಆಯಾ ವಿಮರ್ಶಕರ ಕಣ್ಣಿಗೆ ಬಿದ್ದರೆ, ಅವರ ವಿಮರ್ಶಾ ಧಾಟಿಗೆ ಕೃತಿ ಸರಿ ಬರುತ್ತದೆ ಎನಿಸಿದರಷ್ಟೇ ವಿಮರ್ಶೆ ನಡೆಯಬಹುದು. ಈಚೆಗೆ ಕನ್ನಡದಲ್ಲಿ ಹೊಸಬಗೆಯ ಕಾದಂಬರಿಗಳು, ಕಥೆಗಳು ಬರುತ್ತಿವೆ. ಬೇರೆ ಬೇರೆ ಕ್ಷೇತ್ರಗಳಲ್ಲಿದ್ದು ಕನ್ನಡ ಸಾಹಿತ್ಯವನ್ನು ರಚಿಸುತ್ತಿರುವುದರಿಂದ ಇಂದಿನ ಕನ್ನಡ ಸಾಹಿತ್ಯ ರಚಿಸುತ್ತಿರುವವರಿಗೆ ಯಾವ ಸಿದ್ಧಾಂತ, ಪಂಥಗಳ ಹಂಗಿಲ್ಲ. ಹೀಗಾಗಿ ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಕೃತಿಗಳನ್ನು ವಿವರಿಸಲು ಸ್ಥಾಪಿತ ವಿಮರ್ಶಕರಿಗೆ ಸಾಧ್ಯವಾಗುತ್ತಿಲ್ಲ. ಗೋಪಾಲಕೃಷ್ಣ ಪೈ ಅವರ ಸ್ವಪ್ನಸಾರಸ್ವತ, ಶ್ರೀನಿವಾಸ ವೈದ್ಯರ ಹಳ್ಳ ಬಂತು ಹಳ್ಳ ಕೃತಿಗಳು ಪ್ರಕಟವಾಗಿ ಬಹುಕಾಲವಾದರೂ ಪ್ರಶಸ್ತಿ ಬಂದಮೇಲೆಯೇ ಅವುಗಳತ್ತ ಒಂದಿಷ್ಟು ವಿಮರ್ಶಕರು ಕಣ್ಣಾಡಿಸಿದ್ದು. ಇವುಗಳಿಂದ ಭಿನ್ನವಾದ ವಿ ತಿ ಶೀಗೇಹಳ್ಳಿಯವರ ತಲೆಗಳಿ ಎಂಬ ಕಾದಂಬರಿ ಪ್ರಕಟವಾಗಿ ಕೆಲವು ವರ್ಷಗಳೇ ಕಳೆದಿವೆ. ಕೃತಿಯಲ್ಲಿ ಹವ್ಯಕ ಕನ್ನಡವಿದೆ. ಈ ಕಾದಂಬರಿಯ ವಸ್ತು, ಪಾತ್ರ ನಿರ್ವಹಣೆ, ಸಂವಿಧಾನ, ತಂತ್ರಗಳು ವಿಮರ್ಶಕರಿಗೆ ಇನ್ನೂ ದಕ್ಕಿಲ್ಲ. ಏಕೆಂದರೆ ಈ ಕೃತಿಗೆ ಇನ್ನೂ ಎಲ್ಲಿಂದಲೂ ಪ್ರಶಸ್ತಿ ಬಂದಿಲ್ಲ!

ಈಗೀಗ ಕನ್ನಡದಲ್ಲಿ ಕಥೆ ಬರೆಯುತ್ತಿರುವವರಲ್ಲಿ ಹೆಸರಾದವರಲ್ಲಿ ಬಹುತೇಕರು ಸಾಹಿತ್ಯದ ಅಧ್ಯಾಪಕರಲ್ಲ. ಅವರ ಜೀವನ, ವೃತ್ತಿ ಕ್ಷೇತ್ರಗಳೆಲ್ಲ ಬಹುರಾಷ್ಟ್ರೀಯ ಕಂಪನಿಗಳು, ಇನ್ನಿತರ ಸೇವಾ ವಲಯಗಳು. ಅವರ ಜೀವನದ ಅನುಭವಗಳನ್ನು ಅವರು ಪ್ರಾಮಾಣಿಕವಾಗಿ ಕಥೆಯಾಗಿಸುತ್ತಿದ್ದಾರೆ. ಹೊಸ ಕಸುವು ಕನ್ನಡ ಸಾಹಿತ್ಯಕ್ಕೆ ಹರಿದುಬರುತ್ತಿದೆ. ಇದನ್ನು ಇಂದಿಗೂ ನಮ್ಮ ಸ್ಥಾಪಿತ ವಿಮರ್ಶಕರು ಸರಿಯಾಗಿ ಗುರುತಿಸಿಲ್ಲ. ವಸುಧೇಂದ್ರ ಅವರ ಈಚಿನ ಕಥೆ ಪೂರ್ಣಾಹುತಿ. ಸಂಪ್ರದಾಯ, ಆಧುನಿಕ ತಂತ್ರಜ್ಞಾನ ಹಾಗೂ ವ್ಯಕ್ತಿ ಸ್ವಾತಂತ್ರ್ಯ, ಕಟ್ಟುಪಾಡುಗಳ ಸಂಘರ್ಷವನ್ನು, ಹಳೆಯದು-ಹೊಸದರ ಸಮನ್ವಯತೆಯನ್ನು ಸೂಕ್ಷ್ಮವಾಗಿ ಆಧುನಿಕ ಜೀವನ ಶೈಲಿಯ ಆಧಾರದಲ್ಲೇ ಕಟ್ಟಿಕೊಡುವ ಮೂಲಕ ಓದುಗರನ್ನು ಕಾಡುವ ಹೊಸತನದ ವಸ್ತು-ವಿನ್ಯಾಸದ ಕಥೆ ಅದು. ಅಂತೆಯೇ ಸುಮಂಗಲಾ, ಕಾಗಿನೆಲೆ ಮುಂತಾದ ಹೊಸ ಕತೆಗಾರರ ಕಥೆಗಳ ಶೋಧವನ್ನು ಯಾವ ವಿಮರ್ಶಕರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಯಾಕೆಂದರೆ ಇವರೆಲ್ಲ ಯಾವ ಪಂಥಕ್ಕೂ ಸೇರಿಲ್ಲ! ಆದರೆ ಓದುಗರನ್ನು ಇವರೆಲ್ಲ ತಲುಪಿಬಿಟ್ಟಿದ್ದಾರೆ. ಸದ್ಯ ನಮ್ಮೆದುರಿನ ಸಾಹಿತ್ಯ ಹೇಗಿದೆ ಎಂಬುದನ್ನು ಪ್ರಾಮಾಣಿಕವಾಗಿ ನೋಡದೇ ಪಂಥ, ಸಿದ್ಧಾಂತಗಳ ಒಣ ಹಠದಲ್ಲಿ ಸಾಹಿತ್ಯ ವಿಮರ್ಶೆ, ಪ್ರಚಾರ ನಡೆದರೆ ನಷ್ಟ ಸಾಹಿತ್ಯ ಕ್ಷೇತ್ರಕ್ಕೇ ತಾನೇ? ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಕನ್ನಡ ಭಾಷೆ ಮತ್ತು ಸಾಹಿತ್ಯ ಸದ್ಯ ಕಾಣುತ್ತಿರುವ ನಿರಾಶಾದಾಯಕ ಪರಿಸ್ಥಿತಿಯನ್ನು ಅನೇಕ ಅಂಕಣಗಳಲ್ಲೇ ಹೇಳಬೇಕು.






ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment