Monday, 24 January 2022

ಸಾಹಿತ್ಯಕ್ಷೇತ್ರದ ಒಳಹೊರಗು-2

ಕವಿಕಾಣದ್ದನ್ನು ವಿಮರ್ಶಕ ಕಂಡ! ಕಾವ್ಯದಲ್ಲಿ ಕವಿ ಊಹಿಸದೇ ಇರುವ ಸಂಗತಿಯನ್ನು ಕೂಡ ವಿಮರ್ಶಕ ಖಚಿತವಾಗಿ ಹೇಳಬಲ್ಲ ಎಂಬ ಕಾರಣಕ್ಕೆ ಈ ಮಾತು. ಕುವೆಂಪು ಅವರು ಹೇಳಿದ್ದು: ರವಿ ಕಾಣದ್ದನ್ನು ಕವಿ ಕಂಡ. ಇದನ್ನು ಮುಂದುವರೆಸಿದ ಹಿರಣ್ಣಯ್ಯ ಕವಿ ಕಾಣದ್ದನ್ನು ಕುಡುಕ ಕಂಡ ಎಂದಿದ್ದರು. ಕನ್ನಡ ವಿಮರ್ಶೆಗಳನ್ನು ಅವಲೋಕಿಸಿದವರು ಆರಂಭದ ನನ್ನ ಮಾತನ್ನು ಒಪ್ಪಬಹುದು. ಇದಕ್ಕೆ ನಿದರ್ಶನವೊಂದಿದೆ. ಮೈಸೂರಿನಲ್ಲಿ ಕೆಎಸ್ ನರಸಿಂಹಸ್ವಾಮಿಯವರ ಕಾವ್ಯ ಕುರಿತ ವಿಚಾರಗೋಷ್ಠಿ ನಡೆದಿತ್ತು. ಖ್ಯಾತರಾದ ಸ್ಥಾಪಿತ ವಿಮರ್ಶಕರೊಬ್ಬರು ಕೆಎಸ್‍ನ ಕಾವ್ಯದ ಜನಪ್ರಿಯ ಗೀತೆಯ ಪದುಮಳು ಒಳಗಿಲ್ಲ ಎಂಬ ಸಾಲನ್ನು ವಿಮರ್ಶಿಸುತ್ತ ಪದುಮ ಹೆಣ್ಣು ಕುಲದ ಪ್ರತೀಕ. ಗಂಡಸರು ಹೆಣ್ಣನ್ನು ಎಂದೂ ಒಳಗೆ ಬಿಟ್ಟುಕೊಂಡೇ ಇಲ್ಲ. ಆದ್ದರಿಂದ ಪದುಮಳು ಒಳಗಿಲ್ಲ ಎಂದರೆ ಹೆಣ್ಣನ್ನು ಗಂಡಸರು ತಮ್ಮ ವ್ಯಾವಹಾರಿಕ ಪ್ರಪಂಚದಿಂದ ಯಾವಾಗಲೂ ಹೊರಗೇ ಇಟ್ಟಿದ್ದಾರೆ ಎಂದರ್ಥ! ಎನ್ನುತ್ತ ವಿಶೇಷ ವ್ಯಾಖ್ಯಾನ ಮಾಡಿದರು. ಕೆಎಸ್‍ನ ಅವರನ್ನು ಒಮ್ಮೆ ಭೇಟಿಯಾದಾಗ ಪದ್ಯದ ಅರ್ಥ ಹಿಂಗಂತಲ್ಲಾ ಸಾರ್? ಅಂದೆ. ಅದೇನೋಪ್ಪ, ನಾನಂತೂ ಪದ್ಯ ಬರೆಯುವಾಗ ಅದನ್ನೆಲ್ಲ ಖಂಡಿತ ಯೋಚಿಸಿರಲಿಲ್ಲ. ಅದೇನಿದ್ದರೂ ಮುಟ್ಟು-ಮೈಲಿಗೆ ಅರ್ಥದಲ್ಲಿ ಹೊಳೆದ ಸಹಜ ಸಾಲು ಎಂದಿದ್ದರು. ಹೀಗಾಗಿಯೇ ಹೇಳಿದ್ದು: ಕವಿ ಕಾಣದ್ದನ್ನು ವಿಮರ್ಶಕ ಕಂಡ ಎಂದು. ಇರಬಹುದು. ಅನೇಕಾರ್ಥಗಳನ್ನು ಹೊಳೆಸಿದಾಗಲೇ ನಿಜವಾದ ಕಾವ್ಯವಾಗುವುದು. ಅಲ್ಲವೇ?

ಇಂದು ನಮ್ಮದು ಅವಸರದ ಜೀವನಶೈಲಿ. ಯಾವುದಕ್ಕೂ ನಮಗೆ ಟೈಮಿಲ್ಲ. ಓದುವ ಆಸಕ್ತಿಯವರಿಗೂ ಪತ್ರಿಕೆಯನ್ನು ಕೂಡ ಓದುವಷ್ಟು ವ್ಯವಧಾನವಿಲ್ಲ, ಹೆಚ್ಚೆಂದರೆ ನೋಡಬಹುದು ಅಷ್ಟೆ. ಹೀಗಿರುವಾಗ ಗಂಭೀರ ಸಾಹಿತ್ಯಾಸಕ್ತರನ್ನು ಹುಡುಕುವುದೆಲ್ಲಿ? ಸಾಹಿತ್ಯದ ವಿದ್ಯಾರ್ಥಿಗಳಿಗೆ ಇರಲಿ, ಮೇಷ್ಟ್ರುಗಳಿಗೂ ಪಠ್ಯೇತರ ಚಟುವಟಿಕೆಗಳೇ ಬಹಳವಾಗಿರುತ್ತವೆ. ಆದರೆ ಅವರು ಓದದಿದ್ದರೂ ಒಂದಿಷ್ಟು ಕಣ್ಣಾಡಿಸಿಕೊಂಡಿರಬೇಕಲ್ಲ? ಇವರು ಮೊರೆಹೊಗುವುದು ಸಿದ್ಧ ಪಠ್ಯಗಳಿಗೆ. ಇವರಿಗೆ ನೆರವಾಗುವವವನು ವಿಮರ್ಶಕ. ಈ ದೃಷ್ಟಿಯಲ್ಲಿ ವಿಮರ್ಶಕ ರೆಡಿ ಟು ಈಟ್ ಆಹಾರ ನೀಡುವ ವ್ಯವಹಾರಿ. ಓದಲೇ ಬೇಕಾದ ಕಷ್ಟಕ್ಕೆ ಮೂಲ ಪಠ್ಯಗಳ ಬದಲು ಅವುಗಳ ಸಾರ ಹೇಳುವ ಗೈಡುಗಳನ್ನೇ ಕಲಿಕೆಯ ಎಲ್ಲ ಹಂತದಲ್ಲೂ ರೂಢಿಮಾಡಿಕೊಂಡ ನಮಗೆ ಮೂಲಚೂಲದ ಬಗ್ಗೆ ಅನುಮಾನ ಹುಟ್ಟುವ ಪ್ರಶ್ನೆಯೇ ಇಲ್ಲ. ಹೇಳಿಕೇಳಿ ನಮ್ಮದು ತೋಂಡಿ ಪರಂಪರೆ. ಯಾರಾದರೂ ಹೇಳಿದ್ದನ್ನು ಕೇಳುವವರು ನಾವು. ಓದಿ ಬರೆಯುವ ಸಂಪ್ರದಾಯ ನಮಗಿನ್ನೂ ಒಗ್ಗಿಲ್ಲ. ಹೀಗಾಗಿ ವಿಮರ್ಶಕರೋ ಚಿಂತಕರೋ ಹೇಳಿದ್ದನ್ನು ನಂಬುತ್ತೇವೆ. ಮೂಲವನ್ನು ನೋಡುವ ಅಥವಾ ಓದುವ ಗೋಜಿಗೇ ಹೋಗದೇ ವಿಮರ್ಶಕನ ಅಭಿಪ್ರಾಯವನ್ನೇ ನಮ್ಮದನ್ನಾಗಿ ಮಾಡಿಕೊಂಡುಬಿಡುತ್ತೇವೆ.  

ವಿಮರ್ಶಕರು ಏನಿದ್ದರೂ ಉಪಸೃಷ್ಟಿ. ಕವಿ ಕೆಟ್ಟು ವಿಮರ್ಶಕನಾಗುತ್ತಾನೆ ಎಂಬ ಮಾತಿದೆ. ಮೊದಲು ಕೃತಿ. ಆಮೇಲೆ ಅದನ್ನು ಕುರಿತ ವಿಮರ್ಶೆ. ಆದರೆ ವಿಮರ್ಶಕರು ಕವಿ ಹೀಗೇ ಬರೆಯಬೇಕಿತ್ತು, ಹಾಗೆ ಬರೆಯಬಾರದಿತ್ತು ಇತ್ಯಾದಿ ಹೇಳುವುದೂ ಇದೆ. ಹಾಗೆ ನೋಡಿದರೆ ವಿಮರ್ಶಕ ಕವಿ ಮತ್ತು ಓದುಗನ ನಡುವೆ ಬಂದು ಕೂರುವ ಉಪದ್ರವಿ. ಇಬ್ಬರ ನಡುವೆ ಸ್ವಲ್ಪ ಜಾಗ ಮಾಡಿಕೊಂಡು ಒತ್ತರಿಸಿಕೊಂಡು ಆತ ಕೂತೇ ಬಿಡುತ್ತಾನೆ. ದೇವರು ಮತ್ತು ಭಕ್ತರ ನಡುವೆ ಪೂಜಾರಿ ಇದ್ದ ಹಾಗೆ. ಒಂದು ಕೃತಿ ಇದೆ, ಅದನ್ನೋದುವ ಓದುಗನಿದ್ದಾನೆ. ಕವಿ, ಕೃತಿಕಾರನಿಗೆ ಇಷ್ಟು ಸಾಕು. ವಿಮರ್ಶಕನ ಹಂಗೇಕೆ? ಹೀಗಾಗಿಯೇ ಇರಬೇಕು ಕುವೆಂಪು ಅವರು ವಿಮರ್ಶಕರ ತಲೆಹರಟೆ ನೋಡಿ ನಾನೇರುವ ಎತ್ತರಕ್ಕೆ ನೀನೇರಬಲ್ಲೆಯಾ ಎಂದಿದ್ದು. ಭೈರಪ್ಪನವರಂಥ ಕಾದಂಬರಿಕಾರರು, ವಿಮರ್ಶಕರು ಏನಾದರೂ ಹೇಳಿಕೊಳ್ಳಲಿ, ತಮ್ಮ ಓದುಗರು ತಮಗಿದ್ದಾರೆ ಎಂದು ವಿಮರ್ಶಕರನ್ನು ಉದಾಸೀನ ಮಾಡುವುದು ಕೂಡ ಇದೇ ಕಾರಣಕ್ಕೆ ಇರಬೇಕು. 

ಕೆಎಸ್‍ನ ಕವಿಯೇ ಅಲ್ಲ, ಭೈರಪ್ಪ ಲೇಖಕರೇ ಅಲ್ಲ ಎಂದೆಲ್ಲ ವಿಮರ್ಶಕರು ಹೇಳಿದ್ದಿದೆ. ಇದನ್ನೆಲ್ಲ ಓದುಗರು ಕಿವಿ ಮೇಲೆ ಹಾಕಿಕೊಂಡೇ ಇಲ್ಲ. ಯಾಕೆಂದರೆ ಓದುಗರಿಗೆ ಪಂಥವಿಲ್ಲ, ಆದರೆ ವಿಮರ್ಶಕರು ಪಂಥ ಬಿಡಲು ಸಿದ್ಧವಿಲ್ಲ. ಕನ್ನಡದಲ್ಲಿ ಇರುವಷ್ಟೇ ವಿಮರ್ಶೆಯನ್ನು ಹೆಕ್ಕಿ ತೆಗೆದರೆ ಎದ್ದು ಕಾಣುವುದು ಒಂದೋ ಹೊಗಳು ವಿಮರ್ಶೆ ಅಥವಾ ತೆಗಳು ವಿಮರ್ಶೆ. ಈ ಹೊಗಳಿಕೆ ಅಥವಾ ತೆಗಳಿಕೆ ಯಥಾಪ್ರಕಾರ ಪಂಥ ನಿಷ್ಠ ಅಥವಾ ವ್ಯಕ್ತಿನಿಷ್ಠ. ವಸ್ತುನಿಷ್ಠ ವಿಮರ್ಶೆಗೆ ಜಾಗವೇ ಇಲ್ಲ. ನಿಷ್ಠುರ ವಿಮರ್ಶೆ ಮಾಡುವ ಕೆ ಜಿ ನಾಗರಾಜಪ್ಪನವರಂಥ ವಿಮರ್ಶಕರನ್ನು ಸಾಹಿತ್ಯ ಕ್ಷೇತ್ರ ಆದಷ್ಟೂ ದೂರವೇ ಇಡುತ್ತದೆ. ಇದು ಒಂದು ರೀತಿ ಒಂದಿಷ್ಟು ಲೇಖಕರು ಮತ್ತು ಸ್ಥಾಪಿತ ವಿಮರ್ಶಕರ ನಡುವಿನ ಒಳ ಒಪ್ಪಂದ. ಹೀಗಾಗಿಯೇ ಕನ್ನಡ ಸಾಹಿತ್ಯಕ್ಕೆ ಭಿನ್ನ ವಸ್ತು ವಿಷಯಗಳಿಂದ ಸತ್ವ ತುಂಬಿದ ಮಧುರಚೆನ್ನರಂಥ ಸಂತ ಮನದ ಕವಿಗಳು, ಸತ್ಯಕಾಮರಂಥ ಅಪರೂಪದ ಭಾಷೆ, ಶೈಲಿಯ ಲೇಖಕರು ವಿಮರ್ಶಕರ ವಾರೆನೋಟಕ್ಕೂ ಬಿದ್ದಿಲ್ಲ. ಇಂಥ ಕಾರಣದಿಂದಲೇ ಕನ್ನಡದಲ್ಲಿ ವಿಮರ್ಶೆಗೆ ಒಳಗಾದ ಕೃತಿ, ಲೇಖಕರಿಗಿಂತ ವಿಮರ್ಶೆಗೇ ಎತ್ತಿಕೊಳ್ಳದ ಕೃತಿ, ಲೇಖಕರೇ ಹೆಚ್ಚು. ಬೊಳುವಾರರ ಕಥೆಯನ್ನು ಸಾಹಿತ್ಯ ಪ್ರೀತಿಯುಳ್ಳ ಓದುಗ ಸುಮ್ಮನೇ ಓದಿ ಅರಿಯುತ್ತಾನೆಯೇ ವಿನಾ ಓದುವ ಮುನ್ನ ಅವರು ಮುಸ್ಲಿಂ ಲೇಖಕರೇ ಎಂಬುದು ಅವನಿಗೆ ಖಂಡಿತ ಮುಖ್ಯವಾಗುವುದಿಲ್ಲ. ದೇವನೂರರನ್ನು ಸಾಹಿತ್ಯ ಪ್ರೀತಿಗಾಗಿ ಓದುತ್ತಾರೆಯೇ ವಿನಾ ದಲಿತ ಲೇಖಕ ಎಂದು ಓದುವುದಿಲ್ಲ. ವೈದೇಹಿ ಅಥವಾ ಗೀತಾ ನಾಗಭೂಷಣರ ಸಾಹಿತ್ಯವನ್ನು ಓದುಗ ಕೇವಲ ಸಾಹಿತ್ಯವಾಗಿ ಮಾತ್ರ ಓದುತ್ತಾನೆ. ಅವರು ಮಹಿಳೆ ಎಂಬುದು ಗೌಣ. ಸಾಹಿತಿ ದೊಡ್ಡರಂಗೇಗೌಡರು ಉತ್ತಮ ಸಾಹಿತ್ಯ ರಚಿಸಿದ್ದರೂ ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದೇ ತಪ್ಪಾಯಿತು ಎನ್ನುವಂತೆ ಅವರನ್ನು ಸಿನಿಮಾ ಸಾಹಿತಿ ಎಂದು ಗುರುತಿಸಿ ಅವರ ಸಾಹಿತ್ಯ ಸೃಷ್ಟಿಗೆ ಸೂಕ್ತ ವಿಮರ್ಶೆಯೇ ಆಗದಂತೆ ಬದಿಗೆ ತಳ್ಳಲಾಯಿತು. ಹೀಗೆಲ್ಲ ಮುಸ್ಲಿಂ ಲೇಖಕ, ಮಹಿಳಾ ಸಾಹಿತಿ, ದಲಿತ ಕವಿ, ದಲಿತ ನಾಟಕಕಾರ, ಸಿನಿಮಾ ಸಾಹಿತಿ ಎಂದೆಲ್ಲ ಕರೆದು ಬ್ರಾಂಡ್ ಮಾಡಿದವರು ಯಾರು? ವಿಮರ್ಶಕರು, ಓದುಗರಲ್ಲ. ಆಯಿತು. ಇವರು ಮುಸ್ಲಿಂ ಸಾಹಿತಿ, ಅವರು ಮಹಿಳಾ ಸಾಹಿತಿ. ಒಪ್ಪಿದೆವು. ಮುಂದೇನು? ಇವನ್ನೆಲ್ಲ ಸೇರಿಸಿಯೇ ತಾನೆ ನಾವು ಕನ್ನಡ ಸಾಹಿತ್ಯವನ್ನು ನೋಡಬೇಕಿರುವುದು. ಅಧ್ಯಯನದಲ್ಲಿ ಹೀಗಾಗುತ್ತಿಲ್ಲ ಅಂದರೆ ಅದಕ್ಕೆ ಹೊಣೆ ಯಾರು? ನಷ್ಟ ಯಾರಿಗೆ?

ಸಾಹಿತ್ಯವನ್ನು ಗಂಭೀರ ಅಧ್ಯಯನಕ್ಕೆ ಒಳಪಡಿಸುವ ವಿಶ್ವವಿದ್ಯಾನಿಲಯಗಳಲ್ಲಿ ತೀರ ಈಚಿನವರೆಗೂ ಸಾಹಿತ್ಯ ಎಂದರೆ ಮೇಷ್ಟ್ರುಗಳು, ಪ್ರಾಧ್ಯಾಪಕರು, ಬುದ್ಧಿಜೀವಿಗಳು ಅಥವಾ ವಿಚಾರವಾದಿಗಳು ಬರೆದಿದ್ದು ಅಥವಾ ಹೇಳಿದ್ದು ಎಂಬ ಧೋರಣೆಯೇ ಮನೆ ಮಾಡಿತ್ತು. ಇದು ಇಂದಿಗೂ ಪೂರ್ತಿಯಾಗಿ ಹೋಗಿಲ್ಲ. ಯಾಕೆಂದರೆ ಅನೇಕ ದಶಕಗಳಿಂದ ಬೆಳೆದುಬಂದ ಈ ದೃಷ್ಟಿಯ ಬೇರುಗಳು ಆಳವಾಗಿವೆ. ಈ ಕಾರಣದಿಂದಲೇ ಕೃಷಿ, ವಿಜ್ಞಾನ-ತಂತ್ರಜ್ಞಾನ, ಸಂವಹನ ಇತ್ಯಾದಿ ಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿದ ಕನ್ನಡ ಸಾಹಿತ್ಯ ಕನ್ನಡ ಸಾಹಿತ್ಯ ಅಧ್ಯಯನದಲ್ಲಿ ಅಷ್ಟಾಗಿ ಸ್ಥಾನ ಪಡೆದಿಲ್ಲ. ಇಂದಿಗೂ ಜಾನಪದವನ್ನು ಒಪ್ಪಿಕೊಳ್ಳದ ಮನಸ್ಸುಗಳೂ ಉನ್ನತ ಶಿಕ್ಷಣದಲ್ಲಿ ಬೇಕಾದಷ್ಟಿವೆ. ಇಂಥ ಕ್ಷೇತ್ರಗಳಲ್ಲಿ ಸಾಹಿತ್ಯ ರಚಿಸಿದವರು ಬುದ್ಧಿಜೀವಿಗಳೂ ಅಲ್ಲ, ವಿಚಾರವಾದಿಗಳೂ ಅಲ್ಲ, ಮೇಷ್ಟ್ರುಗಳಂತೂ ಮೊದಲೇ ಅಲ್ಲ. ಹೀಗಾಗಿ ಒಟ್ಟಾರೆ ಅವು ಸಾಹಿತ್ಯವೇ ಅಲ್ಲ ಎಂಬ ದೃಷ್ಟಿ ಮೊಳಕೆಯೊಡೆದು ಹೆಮ್ಮರವಾಯಿತು. ಮುಕ್ತವಾಗಿ ಸಾಹಿತ್ಯವನ್ನು ನೋಡಬೇಕಿದ್ದ ವಿಮರ್ಶಕರು ಕೂಡ ಒಂದೋ ಮೇಷ್ಟ್ರುಗಳೋ ಬುದ್ಧಿಜೀವಿಗಳೋ ಆಗಿಬಿಟ್ಟಿದ್ದರಿಂದ (ಸಾಮಾನ್ಯವಾಗಿ ಮೇಷ್ಟ್ರುಗಳೇ ಬುದ್ಧಿಜೀವಿಗಳಾಗುವುದು, ಬೇರೆ ಕ್ಷೇತ್ರದವರಿಗೆ ಈ ಬ್ರಾಂಡ್ ಇಲ್ಲ) ಅವರೂ ಇತ್ತ ಸಹಜವಾಗಿಯೇ ಗಮನಹರಿಸಲಿಲ್ಲ. ನಷ್ಟವಾದುದು ಕನ್ನಡಕ್ಕೆ.

ಹೊಸಗನ್ನಡ ಕಾಣುವವರೆಗೂ ಪರಿಸ್ಥಿತಿ ಭಿನ್ನವಾಗಿತ್ತು. ಕಾವ್ಯ ಕೃತಿಗಳಂತೆ ಪ್ರಾಚೀನ ಕನ್ನಡದಲ್ಲಿ ಶಾಸ್ತ್ರ, ವಿಜ್ಞಾನ, ವ್ಯಾಕರಣ, ವೈದ್ಯ ಮೊದಲಾದ ಭಿನ್ನ ಕ್ಷೇತ್ರಗಳಲ್ಲಿನ ಸಾಹಿತ್ಯ ಸೃಷ್ಟಿಯನ್ನು ಸಾಹಿತ್ಯವಾಗಿಯೇ ಗುರುತಿಸಲಾಗಿತ್ತು. ಆಧುನಿಕ ಶಿಕ್ಷಣ ವ್ಯವಸ್ಥೆ ಕಲಿಸಿದ ಒಡೆದು ನೋಡುವ ವಿಧಾನದಿಂದ ಸಾಹಿತ್ಯದಲ್ಲಿರಬೇಕಿದ್ದ ಸಮಷ್ಟಿ ದೃಷ್ಟಿಯೇ ನಾಪತ್ತೆಯಾಯಿತು. ಸಾಹಿತ್ಯವನ್ನು ಗಂಭೀರವಾಗಿ ಓದುವ ವಿದ್ಯಾರ್ಥಿಗಳು ಕೂಡ ಬಹು ಹಿಂದಿನಿಂದ ಗುರುತಿಸುತ್ತ ಬಂದಿರುವುದನ್ನಷ್ಟೇ ಸಾಹಿತ್ಯ ಎಂದು ಓದಿಕೊಳ್ಳುತ್ತಾರೆ. ಅಲ್ಲಿಗೆ ಅವರ ದೃಷ್ಟಿಯೂ ಫಿಕ್ಸ್ ಆದಂತೆ. ಈಗೀಗ ಅಂತರ್‍ಶಿಸ್ತೀಯ ಅಧ್ಯಯನ ಕ್ರಮ ಸಾಹಿತ್ಯದಲ್ಲಿ ಕಾಣಿಸುತ್ತಿರುವುದರಿಂದ ಮೇಷ್ಟ್ರುಗಳ ಹಾಗೂ ವಿದ್ಯಾರ್ಥಿಗಳ ನೋಟ ಸ್ವಲ್ಪ ವಿಶಾಲವಾಗುತ್ತಿದೆ. ಪಂಥ, ಸಿದ್ಧಾಂತಗಳ ಕಟ್ಟುಪಾಡಿಗೆ ಬಿದ್ದ ಸಾಹಿತಿಗಳು ಮತ್ತು ವಿಮರ್ಶಕರು ಕನ್ನಡ ಸಾಹಿತ್ಯದಲ್ಲಿ ರೂಪಿಸಿದ್ದ ತಥಾಕಥಿತ ಮಾದರಿ ಕನ್ನಡಕ್ಕೆ ಎಷ್ಟು ನಷ್ಟ ಉಂಟುಮಾಡಿತೆಂಬುದೇ ಪ್ರತ್ಯೇಕ ಅಧ್ಯಯನದ ವಿಷಯವಾಗಬಹುದು. ಹೀಗಾಗಿ ಇಂದು ತುರ್ತಾಗಿ ಕನ್ನಡದಲ್ಲಿ ನಡೆಯಬೇಕಾದುದು ವಿಮರ್ಶೆಯ ಪೂರ್ವ-ಪಶ್ಚಿಮಗಳ ಅಧ್ಯಯನವಲ್ಲ; ಬದಲಿಗೆ ವಿಮರ್ಶೆಯ ವಿಮರ್ಶೆ! 





ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment