ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ಕಾಲ ಅಭಿವೃದ್ಧಿಯ ದೇಖರೇಕೆಯನ್ನು ನೋಡಿಕೊಳ್ಳುತ್ತಿದ್ದ ಯೋಜನಾ ಆಯೋಗವನ್ನು ಮುಚ್ಚುವ ಬಗ್ಗೆ ಪ್ರಧಾನಿಯವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಉಲ್ಲೇಖಿಸಿರುವುದು ಸದ್ಯ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ವಾಸ್ತವವಾಗಿ ಯೋಜನಾ ಆಯೋಗವನ್ನು ಮುಚ್ಚಲಾಗುತ್ತಿಲ್ಲ, ಬದಲಿಗೆ ಅದರ ಸ್ವರೂಪವನ್ನು ಬದಲಿಸಲಾಗುತ್ತಿದೆ. ಇದು ಇಂದಿನ ಅಗತ್ಯ ಕೂಡ ಹೌದು. ಇಷ್ಟು ದೊಡ್ಡ ದೇಶಕ್ಕೆ ಸ್ಪಷ್ಟ ಯೋಜನೆ ರೂಪಿಸುವ ಹಾಗೂ ಯೋಜನೆಗಳು ಜಾರಿಯಾಗುವುದನ್ನು ಖಾತ್ರಿಪಡಿಸುವ ಅಧಿಕೃತ ಸಂಸ್ಥೆಯೊಂದು ಇಲ್ಲದಿದ್ದಲ್ಲಿ ಪರಿಸ್ಥಿತಿ ಏನಾಗಬಹುದೆಂದು ಊಹಿಸುವುದು ಕಷ್ಟವಲ್ಲ.
ಭಾರತದಂಥ ವೈವಿಧ್ಯಮಯವಾದ ಬೃಹತ್ ದೇಶಕ್ಕೆ ಅಭಿವೃದ್ಧಿಯ ಹಾದಿ ತೋರಿಸುವ ಸಂಸ್ಥೆಯೊಂದರ ಅಗತ್ಯವಿದೆ ಎಂಬುದು ಬಹು ಹಿಂದೆಯೇ ನಾಯಕರಿಗೆ ಅರಿವಾಗಿತ್ತು. ಹೀಗಾಗಿ 1938ರಲ್ಲೇ ಅಂದಿನ ಭಾರತ ರಾಷ್ಟ್ರೀಯ ಕಾಂಗ್ರೆಸ್ ತನ್ನ ಪಕ್ಷದ ಅಡಿಯಲ್ಲಿ ರಾಷ್ಟ್ರೀಯ ಯೋಜನಾ ಸಮಿತಿಯನ್ನು ರಚಿಸಿತ್ತು. ಇದೇ ಇಂದಿನ ಯೋಜನಾ ಆಯೋಗದ ಮೂಲ. ಇದಾದ ಮೇಲೆ 1944ರಲ್ಲಿ ಯೋಜನೆ ಮತ್ತು ಅಭಿವೃದ್ಧಿಗಾಗಿ ಪ್ರತ್ಯೇಕ ವಿಭಾಗವೊಂದನ್ನು ಬ್ರಿಟಿಷ್ ಸರ್ಕಾರದಲ್ಲೇ ರೂಪಿಸಲಾಗಿತ್ತು. ತಮ್ಮ ತಮ್ಮ ಪ್ರದೇಶಗಳ ಯೋಜನೆಯ ಜಾರಿಗೆ ಆಯಾ ಪ್ರಾಂತೀಯ ಸರ್ಕಾರಗಳು ಈ ಸಂಸ್ಥೆಗೆ ಪ್ರಸ್ತಾವ ಸಲ್ಲಿಸುತ್ತಿದ್ದವು. ಅನಂತರ 1950ರ ಫೆಬ್ರವರಿ 28ರಂದು ಮಂಡನೆಯಾದ ಕೇಂದ್ರ ಬಜೆಟ್‍ನಲ್ಲಿ ನೆಹರೂ ಸರ್ಕಾರ ಯೋಜನಾ ಆಯೋಗ ಸ್ಥಾಪನೆಯ ಘೋಷಣೆ ಮಾಡಿತು. ತರುವಾಯ ಕೇಂದ್ರ ಮಂತ್ರಿಮಂಡಲ ಸಭೆಯಲ್ಲಿ ಅನುಮೋದನೆಯಾಗಿ ಗೊತ್ತುವಳಿ ಪ್ರಕಟಿಸುವ ಮೂಲಕ ಈ ಆಯೋಗ ಕಾರ್ಯಾರಂಭ ಮಾಡತೊಡಗಿತು. ಆರಂಭದಲ್ಲಿ ಪಂಚವಾರ್ಷಿಕ ಯೋಜನೆ ರೂಪಿಸಿ ಅದನ್ನು ಜಾರಿಗೊಳಿಸುವ ಜವಾಬ್ದಾರಿ ಹೊತ್ತುಕೊಂಡ ಆಯೋಗ ನಿಧಾನವಾಗಿ ಸರ್ಕಾರದ ಎಲ್ಲ ಇಲಾಖೆಗಳ ಮೇಲೂ ಹಿಡಿತ ಸಾಧಿಸಿತು. ವಾರ್ಷಿಕ ಖರ್ಚು ವೆಚ್ಚಗಳಿಗೆ ಬಜೆಟ್‍ನಲ್ಲಿ ಹಣ ನಿಗದಿ ಮಾಡುವ ಗುರುತರ ಜವಾಬ್ದಾರಿ ಇದ್ದುದರಿಂದ ಹಾಗೂ ವಿವಿಧ ಇಲಾಖೆಗಳು ತಮ್ಮ ತಮ್ಮ ಯೋಜನೆಗಳನ್ನು ಈ ಆಯೋಗದಿಂದ ಅನುಮೋದಿಸಿಕೊಳ್ಳುವ ದರ್ದು ಬಂದುದರಿಂದ ಆಯೋಗಕ್ಕೆ ಎಲ್ಲಿಲ್ಲದ ಪ್ರಾಮುಖ್ಯ ಪ್ರಾಪ್ತವಾಗತೊಡಗಿತು. ಒಂದು ದೃಷ್ಟಿಯಲ್ಲಿ ಅತ್ತ ಸಂವೈಧಾನಿಕ ಸಂಸ್ಥೆಯೂ ಅಲ್ಲದ ಇತ್ತ ಶಾಸನಾತ್ಮಕ ಸಂಸ್ಥೆಯೂ ಅಲ್ಲದ ಈ ಆಯೋಗ ಇಡೀ ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಾಶಸ್ತ್ಯ ದೊರೆತ ಕಾರಣದಿಂದ ಇನ್ನಿಲ್ಲದ ಇದೊಂದು ಅತ್ಯಂತ ಬಲಿಷ್ಠ ಸಂಸ್ಥೆಯಾಗಿ ರೂಪುಗೊಂಡಿತು.
ಸ್ವಾತಂತ್ರ್ಯ ದೊರೆತ ಅನಂತರದಲ್ಲಿ ದೇಶ ಮುನ್ನಡೆಸಲು ನಿರ್ದಿಷ್ಟ ಯೋಜನೆಗಳು ಅನಿವಾರ್ಯವಾಗಿದ್ದವು. ಬಂಡವಾಳಶಾಹಿ ಹಾಗೂ ಸಮಾಜವಾದಿ ನೆಲೆಯ ನೆಹರೂ ಮಾದರಿಯ ಯೋಜನೆ ರೂಪಿಸುವುದು ಹಾಗೂ ಅವು ಜಾರಿಯಾಗುವಂತೆ ನೋಡಿಕೊಳ್ಳುವುದು, ಐದು ವರ್ಷಕ್ಕೊಮ್ಮೆ ಪಂಚವಾರ್ಷಿಕ ಯೋಜನೆ ಸಿದ್ಧಗೊಳಿಸುವುದು ಇದರ ಪ್ರಮುಖ ಕಾರ್ಯವಾಗಿತ್ತು. ಕೇಂದ್ರ ಸರ್ಕಾರದ ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರಗಳೂ ತಮ್ಮದೇ ಆದ ಆಯೋಗಗಳನ್ನು ರಚಿಸಿಕೊಂಡವು. ರಾಜ್ಯಮಟ್ಟದಲ್ಲಿ ಈ ಆಯೋಗಗಳು ಪ್ರಬಲವಾದವು. ಒಟ್ಟಿನಲ್ಲಿ ಈ ಆಯೋಗಗಳಿಲ್ಲದೇ ಕೇಂದ್ರ ಸರ್ಕಾರವೂ ಇಲ್ಲ, ರಾಜ್ಯ ಸರ್ಕಾರವೂ ಇಲ್ಲ ಎನ್ನುವ ಪರಿಸ್ಥಿತಿ ಉಂಟಾಯಿತು.
ಬರಬರುತ್ತ ಈ ಆಯೋಗ ವಹಿಸಿಕೊಳ್ಳುತ್ತ ಬಂದ ಜವಾಬ್ದಾರಿಯ ಪಟ್ಟಿ ಸದ್ಯ ಹೇಗಿದೆ ನೋಡಿ: ಕೃಷಿ, ಸಂವಹನ, ತಂತ್ರಜ್ಞಾನ, ಶಿಕ್ಷಣ, ಉದ್ಯೋಗ, ಪರಿಸರ-ಅರಣ್ಯ, ಆರೋಗ್ಯ, ಕೈಗಾರಿಕೆ, ಮೂಲಸೌಕರ್ಯ, ಗಣಿ-ಖನಿಜ, ವಿದ್ಯುತ್, ಗ್ರಾಮೀಣ ಅಭಿವೃದ್ಧಿ, ವಿಜ್ಞಾನ-ತಂತ್ರಜ್ಞಾನ, ಸಾಮಾಜಿಕ ನ್ಯಾಯ, ನಗರಾಭಿವೃದ್ಧಿ, ಮಹಿಳಾ ಸಬಲೀಕರಣ ಹಾಗೂ ಜಲಸಂಪನ್ಮೂಲ!
ಪಿ ಸಿ ಮಹಲನೋಬಿಸ್ ಹಾಗೂ ಪೀತಾಂಬರ್ ಪಂತ್ ಅವರ ನೇತೃತ್ವದಲ್ಲಿ 1951ರಲ್ಲಿ ಮೊದಲ ಪಂಚವಾರ್ಷಿಕ ಯೋಜನೆಯನ್ನು ಜಾರಿ ಮಾಡಿದ ಈ ಆಯೋಗ ಸದ್ಯ (2012-17) ಅವಧಿಗೆ 12ನೆಯ ಪಂಚವಾರ್ಷಿಕ ಯೋಜನೆಯನ್ನು ನೀಡಿದೆ. ಹಾಗೆ ನೋಡಿದರೆ ಆರಂಭಿಕ ವರ್ಷಗಳಲ್ಲಿ ದೇಶವನ್ನು ಮುನ್ನಡೆಸಲು ಅಗತ್ಯವಾದ ಸೀಮಿತ ಕಾರ್ಯವ್ಯಾಪ್ತಿಯ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ ಇದರ ಸಾಧನೆಗಳನ್ನು ಸಣ್ಣವಲ್ಲ. ಉಕ್ಕು ಸ್ಥಾವರಗಳ ಸ್ಥಾಪನೆ, ಬೃಹತ್ ಕೈಗಾರಿಕೆಗಳು, ಐಐಟಿ ಹಾಗೂ ಐಐಎಂಗಳ ಸ್ಥಾಪನೆ, ಅಣುವಿದ್ಯುತ್ ಹಾಗೂ ಬಾಹ್ಯಾಕಾಶ ಸಂಶೋಧನ ಕೇಂದ್ರಗಳ ಸ್ಥಾಪನೆ, ಸಿಎಸ್‍ಐಆರ್ ಪ್ರಯೋಗಾಲಯಗಳ ಸ್ಥಾಪನೆಗಳಿಂದ ದೇಶ ಸ್ವಾವಲಂಬಿಯಾಗುವತ್ತ ಹೆಜ್ಜೆ ಹಾಕುವಂತಾಗಲು ಈ ಆಯೋಗ ಮೂಲ ಕಾರಣವಾಯಿತು. ಹಣಕಾಸಿನ ನಿರ್ವಹಣೆಯ ಪ್ರಧಾನ ಕಾರಣದಿಂದ ಸರ್ಕಾರಗಳ ಮೂಗುದಾರ ಹಿಡಿಯುತ್ತ ಬಂದ ಈ ಆಯೋಗ ಕ್ರಮೇಣ ಸ್ವಾಯತ್ತ ಗುಣವನ್ನು ಕಳೆದುಕೊಂಡು ಬಿಳಿಯಾನೆಯಂತಾಗತೊಡಗಿತು. 2012ರಲ್ಲಿ ತನ್ನ ಡಿ ಎರಡು ಹಳೆಯ ಶೌಚಾಲಯಗಳ ನವೀಕರಣಕ್ಕೆ 35 ಲಕ್ಷ ರೂ.ಗಳನ್ನು ವೆಚ್ಚ ಮಾಡಿ ಇದು ಭಾರೀ ಸುದ್ದಿ ಮಾಡಿತ್ತು!
1960ರ ದಶಕದಲ್ಲಂತೂ ರಾಜ್ಯ ಸರ್ಕಾರಿ ಯೋಜನೆಗಳ ಮೇಲೆ ನೇರ ಹಿಡಿತ ಸಾಧಿಸಿದ ಕೇಂದ್ರ ಯೋಜನಾ ಆಯೋಗ ರಾಜ್ಯ ಸರ್ಕಾರಗಳ ರಾಯಧನದಲ್ಲಿ ಗಣನೀಯ ಪಾಲು ಪಡೆಯತೊಡಗಿತ್ತು. ರಾಜ್ಯಗಳು ತಮ್ಮ ಆದಾಯವನ್ನು ಈ ಆಯೋಗಕ್ಕೆ ಸಲ್ಲಿಸಿ ಅದು ಶಿಫಾರಸು ಮಾಡಿದ ಯೋಜನೆಗಳಿಗೆ ಮಂಜೂರು ಮಾಡಿದಷ್ಟು ಹಣಪಡೆದು ತೃಪ್ತಿಪಡಬೇಕಾದ ಪರಿಸ್ಥಿತಿಯೂ ಸೃಷ್ಟಿಯಾಯಿತು. 1970ರಲ್ಲಿ ಇಂದಿರಾ ಸಾಮ್ರಾಜ್ಯದಲ್ಲಿ ನಡೆದ ಬ್ಯಾಂಕುಗಳ ರಾಷ್ಟ್ರೀಕರಣ, ಆಹಾರ ಧಾನ್ಯಗಳಿಗೆ ಸರ್ಕಾರಿ ಮಳಿಗೆ ಸ್ಥಾಪನೆ ಮೊದಲಾದ ಕಾರಣಗಳಿಂದ ಖಾಸಗಿ ಏಕಸ್ವಾಮ್ಯ ಮುರಿಯುವ ನೆಪದಲ್ಲಿ ಸರ್ಕಾರಿ ಏಕಸ್ವಾಮ್ಯ ಉಂಟಾಗಿ ಈ ಆಯೋಗ ಪ್ರತಿಷ್ಠೆಯ ಪರಾಕಾಷ್ಠೆ ಕಂಡಿತು.
1990ರ ದಶಕದಲ್ಲಿ ದೇಶದ ಆರ್ಥಿಕ ನೀತಿ ಬದಲಾಯಿತು. ಎಂಟನೇ ಯೋಜನೆ (1992-97) ವೇಳೆಗೆ ಉದಾರೀಕರಣ, ಜಾಗತೀಕರಣಗಳ ಅಲೆ ಕಾಣಿಸಿಕೊಂಡು ಖಾಸಗಿ ವಲಯ ಮತ್ತೆ ಪ್ರಾಧಾನ್ಯ ಪಡೆಯತೊಡಗಿತು. ಇದರಿಂದ ಸರ್ಕಾರಿ ಏಕಸ್ವಾಮ್ಯ ಪ್ರಶ್ನೆಗೆ ಒಳಗಾಗತೊಡಗಿತಲ್ಲದೇ ಮುಕ್ತ ಅಭಿವೃದ್ಧಿ ಸಾಧಿಸುವ ನೀತಿಗೆ ಸರ್ಕಾರಿ ಕೃಪಾಪೋಷಿತ ಯೋಜನಾ ಆಯೋಗ ಅಸ್ತಿತ್ವ ಕಳೆದುಕೊಳ್ಳತೊಡಗಿತು. ಜಾಗತಿಕ ಹೂಡಿಕೆದಾರರು ಪ್ರಪಂಚದ ಯಾವ ಭಾಗದಿಂದಾದರೂ ಉತ್ಪನ್ನ ತಂದು ಮಾರಾಟಮಾಡುವ ಪರಿಸ್ಥಿತಿ ಕಾಣಿಸಿಕೊಂಡಿತು. ಇದರ ಫಲವಾಗಿ ದೇಶೀ ಉತ್ಪಾದನಾ ಸಾಮಥ್ರ್ಯ (ಕ್ವಾಂಟಿಟೇಟಿವ್ ಡೊಮೆಸ್ಟಿಕ್ ಪ್ರೊಡಕ್ಷನ್) ಅಪ್ರಸ್ತುತವಾಯಿತು. ದೇಶಕ್ಕೆ ಅಗತ್ಯವಾದ ಸಾಮಗ್ರಿ-ಸರಕುಗಳನ್ನು, ಆಹಾರ ಪದಾರ್ಥಗಳನ್ನು ಕೂಡ ದೇಶದಲ್ಲೇ ಉತ್ಪಾದಿಸಿಕೊಳ್ಳಬೇಕೆಂಬ ದೃಷ್ಟಿಕೋನ ಸಂಪೂರ್ಣ ಬದಲಾಗಿ, ದೇಶೀ ಉತ್ಪಾದನೆ ಹಾಗೂ ದೇಶೀ ವ್ಯಾಪಾರ ಕುಸಿತ ಕಂಡಿತು. ಸರ್ಕಾರಿ ಬಂಡವಾಳ ಹೂಡಿಕೆ ಸಂಪೂರ್ಣ ಸಮಸ್ಯಾತ್ಮಕವಾಗಿಬಿಟ್ಟಿತು. ಸರ್ಕಾರಿ ಕೃಪೆಯಲ್ಲಿದ್ದ ಉತ್ಪಾದನಾ ಘಟಕಗಳು ಜಾಗತಿಕ ಸ್ಪರ್ಧೆ ಎದುರಿಸಲಾರದೇ ಹಳ್ಳಹಿಡಿದವು. ಬದಲಾದ ಮಾರುಕಟ್ಟೆ ವ್ಯವಸ್ಥೆಗೆ ಸರ್ಕಾರಿ ಉತ್ಪಾದನಾ ಘಟಕ-ಯಂತ್ರಗಳು ಹಾಗೂ ಅಧಿಕಾರಿಗಳು ಹೊಂದಿಕೊಳ್ಳಲಾಗದೇ ಪರಿತಪಿಸುವಂತಾಯಿತು. ಈ ಎಲ್ಲ ಕಾರಣಗಳಿಂದ ಸರ್ಕಾರಿ ಉತ್ಪಾದನಾ ಆರ್ಥಿಕತೆಯ ನಿಲುವು ಬದಲಾಗಿ ಸಮಾಜ ಕಲ್ಯಾಣ ಯೋಜನೆಗಳಿಗೆ ಯೋಜನಾ ಆಯೋಗ ಮಹತ್ವ ನೀಡತೊಡಗಿತು! ಇದರ ಜೊತೆಗೆ ನಮ್ಮ ಒಕ್ಕಕೂಟ ವ್ಯವಸ್ಥೆಗೆ ವಿರುದ್ಧವಾದ ರೀತಿಯಲ್ಲಿ ರಾಜ್ಯ ಯೋಜನೆಗಳಲ್ಲಿ ಕೇಂದ್ರ ಯೋಜನಾ ಆಯೋಗ ಮೂಗು ತೂರಿಸುವುದನ್ನು ರಾಜ್ಯ ಸರ್ಕಾರಗಳು ಪ್ರಶ್ನಿಸತೊಡಗಿದವು. ಇವೆಲ್ಲ ಬೆಳವಣಿಗೆಗಳಿಂದ ಯೋಜನಾ ಆಯೋಗದ ಅಸ್ತಿತ್ವಕ್ಕೇ ಸಂಚಕಾರ ಬರತೊಡಗಿತು.
ಹಾಗೆ ನೋಡಿದರೆ, ನೆಹರೂ ತರುವಾಯ ಯಾವ ಪ್ರಧಾನಿಯೂ ಯೋಜನಾ ಆಯೋಗಕ್ಕೆ ನೀಡಿದ ಮಹತ್ವ ಅಷ್ಟರದ್ದೇ. ಇದೀಗ ಬಟಾಬಯಲಾಗಿದೆ. ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಸದ್ಯ ಆಯೋಗ ಕಾರ್ಯ ನಿರ್ವಹಿಸಬೇಕಿದೆ. ಈಗಿನ ಸವಾಲುಗಳು ಸರ್ಕಾರದಿಂದ ಹಣ ಹೂಡಿಕೆ ಮಾಡಿಸುವುದು, ಅದರ ಜಾರಿ ಅವಲೋಕಿಸುವುದಲ್ಲ. ಖಾಸಗಿ ಸರ್ಕಾರಿ ಪಾಲುದಾರಿಕೆಗೆ ಒತ್ತು ನೀಡುವ ಅಗತ್ಯ ಇಂದು ಹೆಚ್ಚಾಗಿದೆ. ಯೋಜನಾ ಆಯೋಗ ಇಂಥ ಪ್ರಯತ್ನಕ್ಕೆ ಮಹತ್ವ ನೀಡಿದ್ದು ಕಡಿಮೆ. ತೀರಾ ಈಚೆಗೆ ಯೋಗೇಂದ್ರ ಅಲಘ್ ಕೃಷಿ-ಪರಿಸರ ವಲಯ ಹಾಗೂ ಖಾಸಗಿ-ಸರ್ಕಾರಿ ಪಾಲುದಾರಿಕೆಗೆ ಒತ್ತು ನೀಡಿ ಯೋಜನಾ ಆಯೋಗದ ಅಸ್ತಿತ್ವ ಉಳಿಸುವ ಯತ್ನ ಮಾಡಿದ್ದೂ ಇದೆ.
ಯೋಜನಾ ಆಯೋಗವನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದು ಕೂಡ ಇಂದಿನ ಪರಿಸ್ಥಿತಿಯಲ್ಲಿ ಸರಿಯಾಗದು. ಸಾವಿರಾರು ಕೋಟಿ ರೂ.ಗಳ ಹಣ ಅಪವ್ಯಯವಾಗುವುದನ್ನು ತಡೆಯುವ, ಹೊಸ ಸವಾಲುಗಳಿಗೆ ಉತ್ತರ ಹುಡುಕಿ, ಭವಿಷ್ಯ ರೂಪಿಸುವ ಕೆಲಸಕ್ಕೆ ಹೊಂದುವಂತೆ ಆಯೋಗ ಬದಲಾಗಬೇಕಿದೆ. ಕಾರ್ಪೋರೆಟ್ ಕಂಪನಿಗಳು ಇಂದು ಲಾಭ ಮಾಡಿಕೊಳ್ಳುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿ (ಸಿಎಸ್‍ಆರ್) ನಿಭಾಯಿಸಬೇಕಿದೆ. ಕಳೆದ ಮೂರು ವರ್ಷಗಳ ಅವಧಿಯ ಸರಾಸರಿ ಲಾಭದಲ್ಲಿ ಕನಿಷ್ಠ ಶೇ. 2ರಷ್ಟನ್ನು ಇವು ಸಮಾಜ ಕಲ್ಯಾಣ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂಬ ನಿಯಮವಿದೆ. ನಮ್ಮ ದೇಶದಲ್ಲಿ ಸದ್ಯ ಸುಮಾರು 8,000 ಕಾರ್ಪೊರೆಟ್ ಕಂಪನಿಗಳು ಇಂಥ ಕೆಲಸದಲ್ಲಿ ತೊಡಗಿವೆ. ಈ ಪ್ರಕಾರ ಈ ಕಂನಿಗಳು ವಾರ್ಷಿಕ ತೊಡಗಿಸುವ ಹಣ ಸುಮಾರು 150 ಶತಕೋಟಿ ರೂ. ಎಂಬ ಅಂದಾಜಿದೆ. ಈ ಹಣ ಎಲ್ಲಿ ಹೇಗೆ ವ್ಯವಯಾಗಬೇಕು ಎಂಬುದಕ್ಕೆ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳಿಲ್ಲ. ಜೊತೆಗೆ ಬಹುರಾಷ್ಟ್ರೀಯ ಕಂಪನಿಗಳು ಗ್ರಾಹಕರನ್ನು ಇಷ್ಟಬಂದಂತೆ ಸುಲಿದು ಹಿಂಡಿ ಹಿಪ್ಪೆ ಮಾಡುತ್ತಿವೆ. ಇವುಗಳ ನಿಯಂತ್ರಣವೂ ಸರಿಯಾಗಿಲ್ಲ. ಇವೆಲ್ಲ ಹೊಸ ಸವಾಲುಗಳಿಗೆ ಉತ್ತರ ದೊರೆಯುವಂತೆ ಯೋಜನಾ ಆಯೋಗ ಹೊಸ ರೂಪ ಪಡೆಯಬೇಕಿದೆ.
ಇದಕ್ಕೆ ಪೂರಕವಾಗಿ ಯೋಜನಾ ಆಯೋಗ ಐದು ಬದಲಾವಣೆ ತಂದು ಹೊಸ ರೂಪ ಪಡೆಯಲು ಮುಂದಾಗಿದೆ. ಆಯೋಗಕ್ಕೆ ಹೊಸ ಹೆಸರು, ಉದ್ಯೋಗಿಗಳ ಸಂಖ್ಯೆ ಕಡಿತ (ಸದ್ಯ ಆಯೋಗದಲ್ಲಿ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ), ಮೂಲಸೌಕರ್ಯ, ಗಣಿಗಾರಿಕೆ ಹಾಗೂ ಸರ್ಕಾರದ ಆಯ್ದ ಯೋಜನೆಗಳ ಕಾರ್ಯವ್ಯಾಪ್ತಿಗೆ ಮಾತ್ರ ಸೀಮಿತವಗುವುದು, ಸರ್ಕಾರಿ-ಖಾಸಗಿ ಯೋಜನೆಗೆ ಒತ್ತು ನೀಡುವುದು ಹಾಗೂ ಪ್ರತಿ ಯೋಜನೆಗೂ ಸಾಮಾಜಿಕ ವಲಯದ ತಜ್ಞರ ಸಮಿತಿಯ ಸಲಹೆ ಪಡೆಯುವುದು ಇದರ ಬದಲಾವಣೆಯಲ್ಲಿ ಸೇರಿವೆ.
ಈ ಬದಲಾವಣೆಗಳಿಂದ ಯೋಜನಾ ಆಯೋಗಕ್ಕೆ ಹೊಸ ಸವಾಲು ಎದುರಿಸುವ ಶಕ್ತಿ ಬರುತ್ತದೆಯೇ ಎಂಬ ಬಗ್ಗೆಯೂ ಅನುಮಾನಗಳಿವೆ. ಏನೇ ಆದರೂ ಅಭಿವೃದ್ಧಿಯ ವಿಷಯದಲ್ಲಿ ವಿಳಂಬ ನೀತಿಗೆ ಕಾರಣವಾಗುತ್ತಿದ್ದ ಪ್ರಬಲ ಸಂಸ್ಥೆಯೊಂದು ತಡವಾಗಿಯಾದರೂ ಬದಲಾವಣೆಗೆ ತೆರೆದುಕೊಳ್ಳುತ್ತಿದೆಯಲ್ಲಾ ಎಂಬುದೇ ಸಮಾಧಾನ.
No comments:
Post a Comment