Monday, 24 January 2022

ಸಾಹಿತ್ಯಕ್ಷೇತ್ರದ ಒಳಹೊರಗು-6

ನಾವಿಂದು ಬಹುಶಿಸ್ತು, ಬಹುಜ್ಞಾನದ ಯುಗದಲ್ಲಿದ್ದೇವೆ. ಅದರಲ್ಲೂ ಇದು ವಿಶೇಷಜ್ಞತೆಯ ಕಾಲ. ಎಲ್ಲದಕ್ಕೂ ಸ್ಪೆಶಲೈಸೇಶನ್ ಇರಬೇಕೆಂದು ಬಯಸುತ್ತೇವೆ. ಉಳಿದೆಲ್ಲ ಕ್ಷೇತ್ರಗಳಂತೆ ಸಾಹಿತ್ಯವನ್ನೂ ಇದು ಆವರಿಸಿದೆ. ಇಂಥ ವಿಶೇಷಜ್ಞತೆಯಲ್ಲಿ ಲಾಭವೂ ಇದೆ, ನಷ್ಟವೂ ಇದೆ. ಆಧುನಿಕ ಶಿಕ್ಷಣ ವ್ಯವಸ್ಥೆ ಬ್ರಿಟಿಷರ ಬಳುವಳಿಯಾಗಿ ನಮಗೆ ಬರುವವರೆಗೂ ಎಲ್ಲ ಜ್ಞಾನವನ್ನೂ ತತ್ತ್ವಶಾಸ್ತ್ರದ ಅಡಿಯಲ್ಲೇ ಅಧ್ಯಯನ ಮಾಡಲಾಗುತ್ತಿತ್ತು. ಆಗ ಗಣಿತ, ಸಾಹಿತ್ಯ, ಇತಿಹಾಸ, ಭಾಷೆ ಎಂದು ಬೇರ್ಪಡಿಸಿ ನೋಡುವ ಕ್ರಮ ಇರಲಿಲ್ಲ. ಇದರಿಂದ ಭಿನ್ನ ಜ್ಞಾನಗಳು ಒಂದೇ ಮರದ ವಿವಿಧ ಶಾಖೆಗಳಂತೆ ಪರಸ್ಪರ ಸಂಬಂಧವಿಟ್ಟುಕೊಳ್ಳಲು ಹಾಗೂ ಆ ಮೂಲಕ ಎಲ್ಲ ವಿಷಯಗಳಲ್ಲೂ ಮಾಹಿತಿ ಸಮವಾಗಿಯೂ ಸಮಗ್ರವಾಗಿಯೂ ಇರಲು ಅನುಕೂಲವಾಗುತ್ತಿತ್ತು. ಉದಾಹರಣೆಗೆ ಸಾಹಿತ್ಯ ಅಧ್ಯಯನದಲ್ಲಿ ಪ್ರಾಚೀನ ಕವಿಯೊಬ್ಬನ ಇತಿವೃತ್ತ ಹೇಳುವಾಗ ಅದಕ್ಕೆ ಇತಿಹಾಸ, ಹಸ್ತಪ್ರತಿಶಾಸ್ತ್ರ ಹಾಗೂ ಶಾಸನಶಾಸ್ತ್ರಗಳ ನೆರವು ಬೇಕೇ ಬೇಕು. ಸಾಹಿತ್ಯದ ವಿದ್ಯಾರ್ಥಿಗೆ ಈಗ ಬೇರೆಯಾಗಿರುವ ಈ ಎಲ್ಲ ಶಾಸ್ತ್ರಗಳ ಅರಿವೂ ಅಪೇಕ್ಷಣೀಯ. ಈಗೀಗ ಏನಾಗುತ್ತಿದೆ ನೋಡೋಣ. ವಿಶ್ವವಿದ್ಯಾನಿಲಯವೊಂದರಲ್ಲಿ ಇತಿಹಾಸ ವಿಭಾಗದ ಸಮ್ಮೇಳನವೋ ವಿಚಾರ ಸಂಕಿರಣವೋ ಅಥವಾ ಗೋಷ್ಠಿಯೋ ನಡೆಯುತ್ತದೆ. ಅದರಲ್ಲಿ ಇತಿಹಾಸ ವಿಭಾಗದವರದ್ದೇ ಮಾತು-ಚರ್ಚೆ. ಸಾಹಿತ್ಯ, ಶಾಸನಶಾಸ್ತ್ರ ವಿಭಾಗದವರು ಬೇಕಿದ್ದರೆ ತಾವೇ ಅಂಥದ್ದೊಂದು ಸಮ್ಮೇಳನ ಆಯೋಜಿಸಿಕೊಳ್ಳಬೇಕು. ತಮ್ಮ ಸಮ್ಮೇಳನಕ್ಕೆ ಬರಬೇಡಿ ಎಂದು ಇತಿಹಾಸದವರೇನೂ ಹೇಳುವುದಿಲ್ಲ. ಹಾಗಾಗಿ ಆ ಸಮ್ಮೇಳನದಲ್ಲಿ ಪ್ರೇಕ್ಷಕರಾಗಿ ಕುಳಿತೆದ್ದುಬರಬಹುದು. ವಿಜಯನಗರ ಅರಸರ ಕುರಿತ ಸಮ್ಮೇಳನವನ್ನು ಇತಿಹಾಸ ವಿಭಾಗ ಆಯೋಜಿಸಿದರೆ ಅಲ್ಲಿ ಶಾಸನತಜ್ಞರು, ಸಾಹಿತಿಗಳು ಇರಬೇಕಾದುದು ಅಗತ್ಯ. ಇಲ್ಲವಾದಲ್ಲಿ ಶಾಸನದವರು ತಮ್ಮ ಪಾಡಿಗೆ ಶಾಸನ ಓದಿ ಪಠ್ಯ ಬರೆದಿಡುವುದು, ಸಾಹಿತ್ಯದವರು ವಿಜಯನಗರ ಕಾಲದ ಸಾಹಿತ್ಯವನ್ನು ಸುಮ್ಮನೇ ಓದಿ ಇಡುವುದು, ಇತಿಹಾಸದವರು ಲಭ್ಯ ಐತಿಹಾಸಿಕ ದಾಖಲೆಗಳ ಪ್ರಕಾರ ತಮ್ಮ ಪಾಡಿಗೆ ತಾವು ಆ ಕಾಲದ ವಿಷಯವನ್ನು ದಾಖಲಿಸುವುದು ನಡೆದರೆ ಒಂದೊಂದು ವಿಷಯದಲ್ಲಿ ಒಂದೊಂದು ಮಾಹಿತಿಯ ಜೊತೆಗೆ ಅಸಮಗ್ರತೆಗೆ ದಾರಿಯಾಗಬಹುದು. 

ಒಂದು ನಿದರ್ಶನ. ಗಣಿತವನ್ನು ಪ್ರಾಥಮಿಕ ಶಾಲೆಯ ಹಂತದಿಂದ ಹಿಡಿದು ಸ್ನಾತಕೋತ್ತರ ಗಂಭೀರ ಅಧ್ಯಯನ ಹಂತದವರೆಗೆ ಎಲ್ಲೆಡೆಯೂ ಕಲಿಸಲಾಗುತ್ತದೆ. ಜಾನಪದ ಅಧ್ಯಯನ ಪದವಿ ಮಟ್ಟದಿಂದ ಕೆಲವೆಡೆ ಇದೆಯಾದರೂ ಜಾನಪದದ ಬಗ್ಗೆ ಎಲ್ಲರಿಗೂ ಅರಿವಿದೆ. ಜಾನಪದ ಸಂಗ್ರಹಕಾರರು ಜನಪದರಲ್ಲಿರುವ ಗಣಿತ ಜ್ಞಾನವನ್ನು ದಾಖಲಿಸಿದ್ದಾರೆ. ಗಣಿತ ಅಧ್ಯಯನ ಮಾಡುವ ಶಿಷ್ಟರು ಜನಪದ ಗಣಿತವನ್ನು ಕೀಳುಗಣ್ಣಿನಿಂದ ಕಾಣುತ್ತಾರೆ. ಇನ್ನೂ ತಮಾಷೆಯ ಸಂಗತಿ ಎಂದರೆ ಜಾನಪದದಲ್ಲಿ ಗಣಿತವಿದೆ ಎಂಬುದೇ ಬಹುತೇಕ ಶಿಷ್ಟ ಗಣಿತ ಪ್ರಾಧ್ಯಾಪಕರಿಗೆ ಗೊತ್ತೇ ಇಲ್ಲ! ಪರಿಸ್ಥಿತಿ ಹೀಗಿರುವಾಗ ವಿಶ್ವವಿದ್ಯಾನಿಲಯಗಳು ಕಲಿಸುವ ಗಣಿತಕ್ಕೂ ಜನಪದ ಗಣಿತ ಭಂಡಾರಕ್ಕೂ ಎಂದಾದರೂ ಒಂದು ದಿನ ಪರಸ್ಪರ ಭೇಟಿ ಸಾಧ್ಯವೇ? ಇವುಗಳನ್ನು ತೌಲನಿಕ ದೃಷ್ಟಿಯಿಂದ ನೋಡಿದರೆ ಗಣಿತ ಕ್ಷೇತ್ರಕ್ಕೆ ಹೊಸ ಸಂಗತಿ ಲಭಿಸುವ ಸಾಧ್ಯತೆ ಇಲ್ಲವೇ? ಸ್ಪೆಶಲೈಸೇಶನ್ ಇಂಥ ಸಾಧ್ಯತೆಯನ್ನು ಕಡಿಮೆಗೊಳಿಸಿದೆ.    

ಇದನ್ನು ತಪ್ಪಿಸಲು ಆಯಾ ವಿಷಯದವರು ಪೂರಕ ವಿಷಯಗಳಲ್ಲಿ ಇದುವರೆಗೆ ಏನೇನು ಬೆಳವಣಿಗೆಯಾಗಿದೆ ಎಂಬುದನ್ನು ಸ್ವತಃ ಶೋಧಿಸಿ ಮಾಹಿತಿ ಕಲೆಹಾಕಿಕೊಳ್ಳಬೇಕು. ಹೀಗೆ ಆಯಾ ವಿಷಯಗಳಲ್ಲಿ ಅಪ್‍ಡೇಟ್ ಆಗಲು ಯಾರನ್ನು ಕಾಣಬೇಕು, ಎಲ್ಲಿ ಮಾಹಿತಿ ದೊರೆಯುತ್ತದೆ ಎಂಬುದನ್ನು ಅರಿಯುವುದೇ ಪ್ರತ್ಯೇಕ ಅಧ್ಯಯನವಾಗುತ್ತದೆ! ಇದೇನೇ ಇರಲಿ, ಇಂಥ ಅಪಾಯದಿಂದ ಪಾರಾಗಲು ಈಗೀಗ ಅಂತರ್‍ಶಿಸ್ತೀಯ ಹಾಗೂ ಬಹುಶಿಸ್ತೀಯ ಅಧ್ಯಯನಗಳಿಗೆ ಮಹತ್ವ ನೀಡಲಾಗುತ್ತಿದೆ. ಈ ಮೂಲಕ ಆಸ್ತಿಪಾಸ್ತಿ ಹಿಸೆಯ ಕಾರಣಕ್ಕೆ ಬೇರೆ ಬೇರೆಯಾದ ಒಂದೇ ಕುಟುಂಬದ ಸದಸ್ಯರು ಒಗ್ಗೂಡಲು ಹಬ್ಬ-ಆಚರಣೆಗಳು ಸಂದರ್ಭ ಒದಗಿಸಿದಂತೆ ಸಂಶೋಧನೆಗಳು ಬೇರೆ ಬೇರೆ ವಿಷಯಗಳು ಒಂದಾಗಿ ಹೊಸ ಸಂಗತಿ ಹೊರಬರಲು ಕಾರಣವಾಗುತ್ತಿವೆ. ಇದೊಂದು ಗುಣಾತ್ಮಕ ಬೆಳವಣಿಗೆ. 

ಈ ಬಗೆಯ ಅಧ್ಯಯನ ಆ ಕುರಿತು ಮಾತನಾಡುವವರ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಇಂಥ ಅಧ್ಯಯನಗಳ ಫಲವಾಗಿಯೇ ಮಾನವಿಕಗಳು ಹಾಗೂ ಸಮಾಜವಿಜ್ಞಾನಗಳಲ್ಲಿನ ವಿಭಿನ್ನ ಶಿಸ್ತುಗಳು ಒಂದಲ್ಲ ಒಂದು ರೀತಿ ಸಂಬಂಧವನ್ನು ಹೊಂದಿವೆ ಎಂಬುದು ಸ್ಥಾಪಿತವಾಗಿದೆ. ಸಾಹಿತ್ಯ, ಸಮಾಜವಿಜ್ಞಾನ, ಸಮಾಜಕಾರ್ಯ, ರಾಜಕೀಯ, ಇತಿಹಾಸ, ಜಾನಪದ ಹಾಗೂ ಮಾನವಶಾಸ್ತ್ರ ಅಧ್ಯಯನಗಳಲ್ಲಿ ಸಮಾನವಾಗಿ ಕಾಣುವ ಒಂದು ಸಂಗತಿ ಜಾತಿ. ಕನ್ನಡ ಸಾಹಿತ್ಯವನ್ನು ಪಾಠ ಮಾಡುವವರು ಅನೇಕ ಸಂದರ್ಭಗಳಲ್ಲಿ ಜಾತಿ ಪರಿಕಲ್ಪನೆ ಕುರಿತು ಹೇಳಿಯೇ ಹೇಳುತ್ತಾರೆ. ಉಳಿದ ವಿಷಯದವರೂ ಮತ್ತೆ ಮತ್ತೆ ಈ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಆದರೆ ಇಂದಿನ ಬಹುತೇಕ ಶಿಕ್ಷಕರು 1911ರಲ್ಲಿ ರಿಸ್ಲೆ ಹೇಳಿದ ಜಾತಿ ವರ್ಗೀಕರಣ ಅಥವಾ 1931ರಲ್ಲಿ ಬ್ಯೂಗಲ್ ಹೇಳಿದ ಮೇಲ್ಜಾತಿ-ಕೆಳಜಾತಿ ಪರಿಕಲ್ಪನೆಯನ್ನೇ ಉರು ಹೊಡೆದು ಹೇಳುತ್ತಾರೆ. ಹೆಚ್ಚೆಂದರೆ 1960ರ ದಶಕದಲ್ಲಿ ಎಂ ಎನ್ ಶ್ರೀನಿವಾಸ್ ಹೇಳಿದ ಸಂಸ್ಕøತೀಕರಣ ಪರಿಕಲ್ಪನೆಯವರೆಗೆ ಬರಬಹುದು. ಅಲ್ಲಿಂದ ಮುಂದಿನ ಬೆಳವಣಿಗೆಯನ್ನು ಇಂದಿನ ಪಾಠದಲ್ಲಿ ಕಾಣುವುದು ಕಷ್ಟ. ಇಂದಿನ ಮೇಷ್ಟ್ರುಗಳಿಗೆ ಅಂದಿನ ಮೇಷ್ಟ್ರುಗಳು ಆ ಕಾಲಕ್ಕೆ ಅಪ್‍ಡೇಟ್ ಆಗಿ ಹೇಳಿದ್ದ ನೋಟ್ಸುಗಳ ಭಾಗಗಳು ಅವು. ಇಂದಿನ ಮೇಷ್ಟ್ರುಗಳು ಇಂದಿಗೆ ಅಪ್‍ಡೇಟ್ ಆಗಬೇಕಲ್ಲ? ಸಾಹಿತ್ಯದಲ್ಲಿ ಜಾತಿ ಬಗ್ಗೆ ಮಾತನಾಡುವ ಮೇಷ್ಟ್ರು ಸಮಾಜವಿಜ್ಞಾನದಲ್ಲಿ ಜಾತಿ ಪರಿಕಲ್ಪನೆ ಇಂದು ಹೇಗೆ ಅಧ್ಯಯನವಾಗುತ್ತಿದೆ ನೋಡಬೇಕಲ್ಲ? ಇಲ್ಲ. ಇಂದಿಗೂ ಜಾತಿ ಎನ್ನುತ್ತಿದ್ದಂತೆ ಮೇಲ್ಜಾತಿ-ಕೆಳಜಾತಿ ಎಂದೇ ಮಾತನಾಡಲಾಗುತ್ತದೆ, ವಿದ್ಯಾರ್ಥಿಗಳಿಗೂ ಅದನ್ನೇ ಕಲಿಸಲಾಗುತ್ತದೆ. ಭಾರತೀಯ ಸಂಕೀರ್ಣ ಸಮಾಜವನ್ನು ತಾವು ಅರ್ಥಮಾಡಿಕೊಂಡಷ್ಟು ಹಿನ್ನೆಲೆಯಲ್ಲಿ ವಿದೇಶಿ ಅಧಿಕಾರಿಗಳು ಅರ್ಥೈಸಿದ ಮಾದರಿಯಿಂದ ಈ ಪರಿಕಲ್ಪನೆ ಹುಟ್ಟಿದ್ದು. ಇಂಗ್ಲಿಷ್ ಬಲ್ಲ ಕೆಲವರು ಅನುವಾದಿಸಿದ್ದರಿಂದ ವಿದೇಶಿ ಪರಿಕಲ್ಪನೆಗಳು ಹಾಗೆಯೇ ಇಲ್ಲಿನ ಶಿಕ್ಷಣದಲ್ಲಿ ಭಟ್ಟಿ ಇಳಿದವು. ತಲೆಮಾರುಗಳ ಕಾಲ ವಿವಿಗಳು ಅದನ್ನೇ ಬೋಧಿಸಿದವು, ಅದನ್ನು ಕಲಿತವರು ಅದನ್ನೇ ತಮ್ಮ ವಿದ್ಯಾರ್ಥಿಗಳಿಗೆ ಹೇಳುತ್ತ ಬಂದರು. ಇಂದಿಗೂ ಇದೇ ನಡೆಯುತ್ತಿದೆ! ಜಾತಿಗಳನ್ನು ಮೇಲು ಕೀಳು ಎಂದು ವಿಂಗಡಿಸಿದವರು, ವರ್ಣ, ವರ್ಗಗಳನ್ನು ಕಲಸುಮೇಲೋಗರ ಮಾಡಿ ಗೊಂದಲ ಹುಟ್ಟಿಸಿದವರು ವಿದೇಶಿಗರೇ. ಅದೇ ಆಧುನಿಕ ಶಿಕ್ಷಣ ಎಂದು ಶ್ರದ್ಧೆಯಿಂದ ಕಲಿತು ನಂಬಿದವರು ನಾವು. ಜಾತಿಯೂ ಸೇರಿದಂತೆ ಅನೇಕ ವಿಷಯಗಳಲ್ಲಿ ಇಂದಿಗೂ ಪಂಥ-ಸಿದ್ಧಾಂತ ನಿಷ್ಠ ಶೈಕ್ಷಣಿಕ ಸತ್ಯಗಳೇ ಬೇರೆ, ವಾಸ್ತವಗಳೇ ಬೇರೆ ಎನಿಸುವುದು ಇದೇ ಕಾರಣಕ್ಕೆ. ಜಾತಿಯನ್ನೇ ನೋಡುವುದಾದರೆ ವಾಸ್ತವ ಎಂದಾದರೂ ಹೀಗಿತ್ತೇ? ಯಾವುದೇ ಜಾತಿ ತಾನು ಇನ್ನೊಂದು ಜಾತಿಗಿಂತ ಕೀಳು ಎಂದು ಹೇಳಿಕೊಂಡಿದೆಯೇ? ಎಂದೂ ಇಲ್ಲ. ಮತ್ಯಾಕೆ ರಾಜಕೀಯ ಮತ್ತು ಶೈಕ್ಷಣಿಕ ವಲಯದಲ್ಲಿ ಈ ಮಾತು ಚಾಲ್ತಿಯಲ್ಲಿದೆ? ಯಾಕೆಂದರೆ ಪೂರಕ ಶಿಸ್ತುಗಳಲ್ಲಿನ ಸಮಕಾಲೀನ ಅಧ್ಯಯನಗಳನ್ನು ಗಮನಿಸಿ ಯಾರೂ ಅಪ್‍ಡೇಟ್ ಆಗುತ್ತಿಲ್ಲ. 2000ದಿಂದ ಈಚೆಗೆ ಭಾರತೀಯ ಸಮಾಜವನ್ನು ಅಧ್ಯಯನ ಮಾಡಿದ ವಿದ್ವಾಂಸರಾದ ದೀಪಂಕರ್ ಗುಪ್ತಾ, ಡಕ್ರ್ಸ್ ಮೊದಲಾದವರ ಕ್ಷೇತ್ರಕಾರ್ಯ ಆಧರಿತ ಸಮಾಜಶಾಸ್ತ್ರೀಯ ಸಂಶೋಧನೆಗಳನ್ನು ಸಾಹಿತ್ಯದವರು ಗಮನಿಸಿದ್ದರೆ ಜಾತಿ ಕುರಿತು ಮಾತನಾಡುವಾಗ ತಥಾಕಥಿತ ಮಾತನಾಡುವ ಬದಲು ಎಚ್ಚರ ವಹಿಸುತ್ತಿದ್ದರು. ಆದರೆ ಹಾಗಾಗುತ್ತಿಲ್ಲ.

ಸಾಹಿತ್ಯ ಓದುವವರಿಗೆ ಹತ್ತಾರು ಶಿಸ್ತುಗಳ ಪರಿಚಯವಿರಬೇಕು ಎಂಬುದೇನೋ ಸರಿ. ಹಾಗೆಂದು ಅವುಗಳೆಲ್ಲದರ ಬಗ್ಗೆಯೂ ಅಧಿಕೃತ ವಕ್ತಾರರಂತೆ ಮಾತನಾಡಬೇಕೆಂದೇನೂ ಇಲ್ಲ. ಆದರೆ ಈಗೀಗ ಸಾಹಿತಿ ಎಂದು ದೊಡ್ಡ ಹೆಸರು ಮಾಡಿದವರಂತೆಯೇ ಈ ಕ್ಷೇತ್ರಕ್ಕೆ ಈಗೀಗ ಹೆಜ್ಜೆ ಇಡುತ್ತಿರುವವರೂ ಪರಿಸರದಿಂದ ಹಿಡಿದು ಮಂಗಳಯಾನದ ರಾಕೆಟ್‍ವರೆಗೆ, ಗಲ್ಲಿ ಕ್ರಿಕೆಟ್‍ನಿಂದ ಹಿಡಿದು ಪರಬ್ರಹ್ಮನವರೆಗೆ ಎಲ್ಲದರ ಬಗ್ಗೂ ಅದು ನೋಡಿ, ಅದರಿಂದ ಹೀಗಾಗುತ್ತೆ ಹಾಗಾಗುತ್ತೆ ಎಂದೆಲ್ಲ ಭಾಷಣ ಬಿಗಿಯುತ್ತಾರೆ. ಸಾಹಿತಿ ಅದರಲ್ಲೂ ಬುದ್ಧಿಜೀವಿ, ಚಿಂತಕ ಎಂದು ಕರೆದುಕೊಳ್ಳುವವರಿಗೆ ಸೂರ್ಯನ ಸುತ್ತ, ಮೇಲೆ-ಕೆಳಗಿನ ಯಾವ ವಿಷಯದ ಬಗ್ಗೆಯಾದರೂ ಸುಮ್ಮನೇ ಕೇಳಿನೋಡಿ. ಪ್ರಾಮಾಣಿಕವಾಗಿ ಆತ ನನಗೆ ಅದು ತಿಳಿದಿಲ್ಲ ಅಂದರೆ ಆತ ಚಿಂತಕನೇ ಅಲ್ಲ! 

ಸಾಹಿತ್ಯ ಕ್ಷೇತ್ರ ಹೀಗೆ ಎಲ್ಲವನ್ನೂ ಎಲ್ಲರನ್ನೂ ಒಳಗೊಳ್ಳುವ ಕಾರಣ ಇಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ. ಹಾಗಾಗಿಯೇ ಯಾರು ಬೇಕಾದರೂ ಸಾಹಿತ್ಯದ ಬಗ್ಗೆ ಮಾತನಾಡಬಹುದು. ಅದೇ ರೀತಿ ಸಾಹಿತ್ಯ ವಿದ್ಯಾರ್ಥಿಯೂ ಅಷ್ಟೇ. ಯಾವ ವಿಷಯವನ್ನು ಬೇಕಾದರೂ ಓದಿ ತಿಳಿಯಬಹುದು. ಆದರೆ ಇವರಿಬ್ಬರೂ ಮಾತನಾಡುವಾಗ ಬಹುಶಿಸ್ತಿನ ಬಹು ಆಯಾಮದ ಬಗ್ಗೆ ಕೊಂಚ ಎಚ್ಚರ ವಹಿಸುವುದು ಅತ್ಯಗತ್ಯ. ಆಯಾ ವಿಷಯಗಳಲ್ಲಿ ಅಪ್‍ಡೇಟ್ ಆಗದೇ ತಾವು ಶಾಲೆ, ಕಾಲೇಜುಗಳಲ್ಲಿ ಕಲಿತದ್ದು ಅಥವಾ ಯಾರೋ ಹೇಳಿದ್ದು ಶಾಶ್ವತ ಸತ್ಯ ಎಂಬಂತೆ ನಂಬಿಕೊಂಡುಬಿಟ್ಟರೆ ಅದು ಆಯಾ ವಿಷಯಕ್ಕೆ ಎಸಗುವ ಅಪಚಾರ. ಸಾಹಿತಿಯೂ ಸೇರಿದಂತೆ ಎಲ್ಲವೂ ನಿತ್ಯ ಬದಲಾಗುತ್ತಲೇ ಇರುತ್ತದೆಯಲ್ಲವೇ? ಅದನ್ನು ಗಮನಿಸದಿದ್ದರೆ ಅಂಥ ಜ್ಞಾನಕ್ಕೆ ಅರ್ಥವಿಲ್ಲ.     






ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment