ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಸಿದ್ಧಗೊಳಿಸುವುದೇ ಉನ್ನತ ಶಿಕ್ಷಣದ ಕೆಲಸ ಎಂದು ಕೆಲವರು ನಂಬಿದ್ದಾರೆ. ಅಲ್ಲಾ ಸಾರ್ ಅಷ್ಟು ಓದಿ ಕೆಲಸ ಸಿಕ್ಕಿಲ್ಲ ಅಂದರೆ ಯಾಕೆ ಸಾರ್ ಓದಬೇಕು ಎಂಬುದು ಬಹುತೇಕರ ಪ್ರಶ್ನೆ. ಹೌದಲ್ಲವೇ? ಮೇಲ್ನೋಟಕ್ಕೆ ಇವರ ವಾದ ಸರಿಯಾಗಿಯೇ ಕಾಣುತ್ತದೆ. ಅಷ್ಟೊಂದು ಓದಿದ ಮೇಲೆ ಕೆಲಸ ಪಡೆದುಕೊಳ್ಳುವ ಯೋಗ್ಯತೆ ವಿದ್ಯಾರ್ಥಿಗಳಲ್ಲಿ ಬರಬೇಕು ಎಂಬುದು ಇದರ ಆಶಯವೇ ವಿನಾ ತಮ್ಮಲ್ಲಿ ಪದವಿ ಪಡೆದವರಿಗೆಲ್ಲ ವಿಶ್ವವಿದ್ಯಾನಿಲಯಗಳೇ ಕೆಲಸ ಕೊಡಿಸಿಕೊಡಬೇಕು ಎಂದೇನೂ ಅಲ್ಲ. ಇದು ಎಂದೂ ಆಗದ ಮಾತು.
ಕರ್ನಾಟಕದಲ್ಲಿರುವ ವಿಶ್ವವಿದ್ಯಾಲಯಗಳ ಮೇಲೆ ಸುಮ್ಮನೇ ಕಣ್ಣಾಡಿಸೋಣ. ಕೃಷಿ ವಿವಿ, ಬೆಂಗಳೂರು, ಕೃಷಿ ವಿವಿ ಧಾರವಾಡ, ಬೆಂಗಳೂರು ವಿವಿ, ಗುಲ್ಬರ್ಗಾ ವಿವಿ, ಐಐಎಸ್‍ಸಿ, ಬೆಂಗಳೂರು, ಕನ್ನಡ ವಿವಿ ಹಂಪಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಕರ್ನಾಟಕ ವಿವಿ ಧಾರವಾಡ, ಕುವೆಂಪು ವಿವಿ, ಮಣಿಪಾಲ ವಿವಿ, ಮೈಸೂರು ವಿವಿ, ಮಂಗಳೂರು ವಿವಿ, ನಿಮ್ಹಾನ್ಸ್ ಬೆಂಗಳೂರು, ರಾಷ್ಟ್ರೀಯ ಕಾನೂನು ವಿವಿ, ರಾಜೀವ್ ಗಾಂಧಿ ಆರೋಗ್ಯ ವಿವಿ, ವಿಟಿಯು, ಕರ್ನಾಟಕ ವೆಟರ್ನರಿ, ಆನಿಮಲ್ ಆಂಡ್ ಫಿಶರೀಸ್ ಸೈನ್ಸ್ ಯೂನಿವರ್ಸಿಟಿ ಬೀದರ್, ತುಮಕೂರು ವಿವಿ, ಕ್ರೈಸ್ಟ್ ವಿವಿ ಬೆಂಗಳೂರು, ಎನ್‍ಐಟಿಕೆ ಸುರತ್ಕಲ್, ಕರ್ನಾಟಕ ಮಹಿಳಾ ವಿವಿ ವಿಜಾಪುರ, ಬಿಎಲ್‍ಡಿಇ ವಿಜಾಪುರ, ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಬೆಂಗಳೂರು, ಮತ್ತು ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಡ್ಸ್ ಸೈಂಟಿಫಿಕ್ ರೀಸರ್ಚ್, ಗುಲ್ಬರ್ಗ ಸೆಂಟ್ರಲ್ ವಿವಿ, ಜಾನಪದ, ಸಂಸ್ಕøತ, ಸಂಗೀತ ಹೀಗೆ 28 ವಿಶ್ವವಿದ್ಯಾಲಯಗಳು ಇಲ್ಲಿ ಕಾರ್ಯನಿರತವಾಗಿವೆ. ಜೊತೆಗೆ ಲಲಿತಕಲಾ ವಿಶ್ವವಿದ್ಯಾನಿಲಯ ಆರಂಭವಾಗುವ ಹಂತದಲ್ಲಿದೆ. ಈ ಒಂದೊಂದು ವಿವಿಗಳಲ್ಲೂ ಪ್ರತಿ ವರ್ಷ ಕನಿಷ್ಠ ನಾಲ್ಕಾರು ಸಾವಿರ ವಿದ್ಯಾರ್ಥಿಗಳು ಪದವಿ ಪಡೆದು ಹೊರಬರುತ್ತಾರೆ.
ವೃತ್ತಿಪರ ಶಿಕ್ಷಣವೊಂದನ್ನು ಬಿಟ್ಟರೆ ಉಳಿದ ಪದವಿ ಪಡೆದವರು ಅಧ್ಯಾಪಕರಾಗುವುದಕ್ಕೆ ಆದ್ಯತೆ ಕೊಟ್ಟುಕೊಳ್ಳುತ್ತಾರೆ. ಹೀಗಾಗಿ ಅಧ್ಯಾಪಕ ಅರ್ಹತಾ ಪರೀಕ್ಷೆ ತೆಗೆದುಕೊಳ್ಳುವ ತಯಾರಿ ನಡೆಸುತ್ತಾರೆ. ಇದರಲ್ಲಿ ಒಂದೇ ಪ್ರಯತ್ನದಲ್ಲಿ ಪಾಸಾಗುವವರು ಕಡಿಮೆ. ವರ್ಷಕ್ಕೆ ಎರಡು ಅವಕಾಶದಂತೆ ಅನೇಕ ಯತ್ನಗಳನ್ನು ನಡೆಸಿಯೂ ವಿಫಲವಾದವರಿದ್ದಾರೆ. ಇದೇ ಕನಸಿನಲ್ಲಿ ಉಳಿದ ಕೆಲಸ ಪಡೆಯುವ ವಯೋಮಿತಿಯನ್ನೂ ಮೀರಿಸಿಕೊಂಡು ಅಲ್ಲಿ ಇಲ್ಲಿ ಅರೆಕಾಲಿಕ ಕೆಲಸಮಾಡಿಕೊಂಡೇ ಕಾಲದೂಡುವವರಿದ್ದಾರೆ. ಅರ್ಹತಾ ಪರೀಕ್ಷೆಯಲ್ಲಿ ಫೇಲ್ ಆದುದಕ್ಕೂ ತಾವು ಓದಿದ ವಿವಿಯೇ ಕಾರಣ ಎಂದು ಆರೋಪಿಸುವವರೂ ಕಡಿಮೆಯಲ್ಲ. ಏಕೆಂದರೆ ಮೂರು ಪತ್ರಿಕೆಗಳಲ್ಲಿ ಅವರು ಓದಿದ ಪಠ್ಯಕ್ರಮಕ್ಕೆ ಅನುಗುಣವಾಗಿ ಎರಡು ಪತ್ರಿಕೆಗಳಿದ್ದರೂ ಅವುಗಳಿಗೆ ಉತ್ತರಿಸಬೇಕಾದ ಕ್ರಮ ಬೇರೆ. ಕಡ್ಡಾಯವಾದ ಮೊದಲ ಒಂದು ಪತ್ರಿಕೆ ಎಲ್ಲರಿಗೂ ಸಾಮಾನ್ಯವಾದುದು. ಇದಕ್ಕೆ ಸಾಮಾನ್ಯ ಜ್ಞಾನವೇ ಮುಖ್ಯ. ಇದರಲ್ಲಿ ಪಾಸಾಗದೇ ಅನಂತರದ ಅವರ ಆಯ್ಕೆ ವಿಷಯದ ಪತ್ರಿಕೆ ಮೌಲ್ಯಮಾಪನಕ್ಕೊಳಗಾಗದು. ಇದರಲ್ಲೇ ಬಹುತೇಕ ವಿದ್ಯಾರ್ಥಿಗಳು ವಿಫಲವಾಗುತ್ತಾರೆ. ನಮ್ಮ ದೇಶದ ಹಾಲಿ ಉಪರಾಷ್ಟ್ರಪತಿ ಯಾರು ಅಥವಾ ಸಂಸತ್ತಿನ ಸಭಾಧ್ಯಕ್ಷರು ಯಾರು ಎಂಬ ಸರಳ ಪ್ರಶ್ನೆಗೂ ಇವರಲ್ಲಿ ಸರಿ ಉತ್ತರ ಇರುವುದು ಕಷ್ಟ. ಇನ್ನು ಕಳೆದ ಬಾರಿ ಫುಟ್ಬಾಲ್ ವಿಶ್ವಕಪ್ ಗೆದ್ದ ದೇಶ ಯಾವುದು ಎಂದು ಕೇಳಿದರಂತೂ ಮುಗಿದೇ ಹೋಯಿತು. ಇದನ್ನೆಲ್ಲ ನಮಗೆ ಪದವಿ ಪಠ್ಯದಲ್ಲಿ ಕಲಿಸಲೇ ಇಲ್ಲ ಎಂದು ಗೊಣಗುತ್ತ, ವಿವಿಗಳನ್ನು ಕಾಲೇಜುಗಳನ್ನು, ಮೇಷ್ಟ್ರುಗಳನ್ನು ಬೈದುಕೊಂಡು ಓಡಾಡುವವರಿಗೂ ಕೊರತೆ ಇಲ್ಲ. ಒಟ್ಟಿನಲ್ಲಿ ಉನ್ನತ ಶಿಕ್ಷಣ ಪಡೆಯುವವರಿಗೆ ಪಠ್ಯ ಓದುವುದರ ಜೊತೆಗೆ ಸುತ್ತಲ ಸಮಾಜವನ್ನೂ ಸ್ವತಃ ಓದುತ್ತಿರಬೇಕು ಎಂಬ ಕನಿಷ್ಠ ಜ್ಞಾನ ಮೊದಲು ಇರಬೇಕು. ಎಲ್ಲವನ್ನೂ ವಿವಿ, ಕಾಲೇಜುಗಳೇ ಕಲಿಸುವುದಿಲ್ಲ, ಅವು ಕೈದೀವಿಗೆಗಳಿದ್ದಂತೆ. ಸರಿ ಮಾರ್ಗ ತೋರಿಸುತ್ತವೆ, ನೀವು ಅದರಲ್ಲಿ ಶ್ರಮಪಟ್ಟು ಸಾಗಬೇಕು.
ಆಹಾರ, ಬಟ್ಟೆಬರೆ ಕೊನೆಗೆ ಪರೀಕ್ಷೆಗೆ ಸಿದ್ಧಪಠ್ಯ ಹೀಗೆ ಎಲ್ಲ ಕಡೆಯೂ ಸಿದ್ಧ ಸಾಮಗ್ರಿಗಳನ್ನೇ ಕಾಣುತ್ತಿರುವ, ಅನುಭವಿಸುತ್ತಿರುವ ನಮ್ಮ ವಿದ್ಯಾರ್ಥಿಗಳು ತಮಗೆ ಬೇಕಾದ ಉದ್ಯೋಗವೂ ಸಿದ್ಧವಾಗಿಯೇ ತಮ್ಮತ್ತ ಬರಲಿ ಎಂಬ ಮನೋಭಾವ ತಾಳುತ್ತಿದ್ದಾರೆ. ಹೀಗಾಗುವುದಿಲ್ಲ. ಉದ್ಯೋಗಕ್ಕೆ ಸ್ವತಃ ಸಿದ್ಧವಾಗಬೇಕು.
ಹೇಗೆ ಸಿದ್ಧವಾಗಬೇಕು ಎಂಬುದು ಬಹುದೊಡ್ಡ ಪ್ರಶ್ನೆ. ತಾವಿರುವ, ಕಲಿತ ರೀತಿಯೇ ಸಿದ್ಧತೆ ಎಂದು ಬಹುತೇಕ ವಿದ್ಯಾರ್ಥಿಗಳು ಭಾವಿಸಿರುತ್ತಾರೆ. ಇದಕ್ಕೆ ನಮ್ಮ ವ್ಯವಸ್ಥೆಯೂ ಕಾರಣ. ನೋಡಿ: ಕನ್ನಡವನ್ನು ಪದವಿವರೆಗೂ ಕಲಿತು ಬರುವ ವಿದ್ಯಾರ್ಥಿಗಳಿಗೆ ಪ್ರತಿ ಬಾರಿ ತರಗತಿ ಆರಂಭದಲ್ಲಿ ಸಣ್ಣ ಪರೀಕ್ಷೆಯನ್ನು ಮಾಡುತ್ತೇನೆ. ಒಂದಿಷ್ಟು ಒತ್ತಕ್ಷರ, ದೀರ್ಘ, ಅಲ್ಪಪ್ರಾಣ, ಮಹಾಪ್ರಾಣ ಅಕ್ಷರಗಳಿರುವ ಹತ್ತು ಪದಗಳನ್ನು ಉಚ್ಚರಿಸಿ ಅವುಗಳನ್ನು ಬರೆದು ತೋರಿಸುವಂತೆ ಕೇಳುವ ಪರೀಕ್ಷೆ ಇದು. ನಾನು ಅಧ್ಯಾಪಕನಾದ ಹತ್ತು ವರ್ಷದ ಅವಧಿಯಲ್ಲಿ ಒಂದೇ ಒಂದು ಬ್ಯಾಚಿನ ಯಾವ ವಿದ್ಯಾರ್ಥಿಯೂ ಎಲ್ಲ ಹತ್ತೂ ಪದಗಳನ್ನು ಸರಿಯಾಗಿ ಬರೆದದ್ದಿಲ್ಲ. ಈ ಪದಗಳೇನೂ ಬಾಣ, ಪಾಣಿನಿಯರ ಮಹಾಕ್ಲಿಷ್ಟ ಪದಗಳಾಗಿರುವುದಿಲ್ಲ. ಧೂಮಪಾನ, ನಿಷೇಧ, ಭೇದಿ, ಸೃಷ್ಟಿ, ಪ್ರಭೃತಿ ಇತ್ಯಾದಿ ಪದಗಳೇ ಆಗಿರುತ್ತವೆ. ದು(ದೂ)ಮಪಾನ, ನಿಶೇದ, ಬೇ(ಬೆ)ಧಿ, ಸೃಷ್ಠಿ, ಹೀಗೆ ಅವರ ಉತ್ತರವಿರುತ್ತದೆ. ಇನ್ನು ಉಕ್ತ ವಾಕ್ಯಗಳನ್ನು ಹೇಳಿದರೆ ಮುಗಿದೇ ಹೋಯಿತು. ಅವರ ಬರಹದಲ್ಲಿ ತಿದ್ದಬೇಕಾದ ಭಾಗ ಯಾವುದು? ಅಕ್ಷರವೋ ಪದವೋ ವಾಕ್ಯವೋ? ಕೆಲವೊಮ್ಮೆ ಎಲ್ಲವೂ!
ಕಳೆದ ಬಾರಿ ಹೀಗಾಯಿತು: ಸೃಷ್ಠಿ ಎಂದು ಬರೆದ ವಿದ್ಯಾರ್ಥಿಗಳಿಗೆ ಅದರ ಸ್ವರೂಪ ಹಾಗಲ್ಲ, ಸೃಷ್ಟಿ ಎಂದೆ. ಏನ್ ಸಾರ್ ನಾವು ಇಲ್ಲಿವರೆಗೂ ಹಿಂಗೇ ಬರ್ಕೊಂಡು ಬಂದಿರೋದು. ಎಲ್ಲೂ ಯಾರೂ ಕೇಳಿಲ್ಲ, ನೀವೇನ್ ಸಾರ್?! ಅಂದರು. ಯಾರೂ ಕೇಳಿಲ್ಲ ಅಂದಮಾತ್ರಕ್ಕೆ ನೀವು ಮಾಡಿದ್ದು ಸರಿ ಅಂತಲ್ಲ. ನೀವು ಕಲಿತ ಎಷ್ಟು ಪದಗಳನ್ನು ಬಳಸುವ ಮುಂಚೆ ಶಬ್ದಕೋಶ ನೋಡಿ ಬಳಸಲು ಕಲಿತಿದ್ದೀರಿ ಹೇಳಿ ಅಂದರೆ ಉತ್ತರವಿಲ್ಲ. ಯಾಕೆಂದರೆ ಯಾರೂ ಶಬ್ದಕೋಶ ನೋಡಿ ಪದಪರೀಕ್ಷೆ ಮಾಡಿಯೇ ಇಲ್ಲ. ಇದು ಈ ವಿದ್ಯಾರ್ಥಿಗಳ ಹಣೆಬರಹವಷ್ಟೇ ಅಲ್ಲ, ಎಲ್ಲರದೂ ಇದೇ ಕತೆ. ಇವರನ್ನು ಸರಿಪಡಿಸುವುದು ಹೇಗೆ, ಎಲ್ಲಿಂದ ಸರಿಪಡಿಸಬೇಕು? ಕಲಿಕೆಯ ಅಂತಿಮ ಹಂತವಾದ ಸ್ನಾತಕೋತ್ತರ ಘಟ್ಟದಲ್ಲಿ ವಿದ್ಯಾರ್ಥಿಗಳ ಅಕ್ಷರ, ಪದ, ವಾಕ್ಯದೋಷಗಳನ್ನು ಖಂಡಿತ ತಿದ್ದುತ್ತ ಕೂರಲಾಗುವುದಿಲ್ಲ. ಮಾಡಬಾರದು ಅಂತಲ್ಲ, ಆ ಕೆಲಸಕ್ಕೆ ಇಲ್ಲಿ ಅವಕಾಶವೂ ಇಲ್ಲ, ಸಮಯವೂ ಇಲ್ಲ, ಇದಕ್ಕೆ ಈ ಹಂತ ವೇದಿಕೆಯೂ ಅಲ್ಲ. ಕನ್ನಡ ಎಂದಲ್ಲ, ಯಾವುದೇ ಉನ್ನತ ಶಿಕ್ಷಣ ವಿಷಯಕ್ಕೆ ಯಾವುದೇ ವಿವಿಗೆ ಸೇರಿದ ಶೇ.90 ವಿದ್ಯಾರ್ಥಿಗಳ ಕನಿಷ್ಠ ವಿಷಯ ಜ್ಞಾನ ಇದೇ ಮಟ್ಟದ್ದು ಎಂದರೆ ಇದು ವಾಸ್ತವ.
ನಾಲ್ಕು ವರ್ಷದ ಹಿಂದೆ ಸ್ನಾತಕೋತ್ತರ ಪದವಿ ಪಡೆದು ಹೋದ ಐದಾರು ವಿದ್ಯಾರ್ಥಿಗಳು ಈಚೆಗೆ ಭೇಟಿಯಾಗಿದ್ದರು. ಏನು ಮಾಡ್ತಿದ್ದೀರಿ ಎಂದೆ. ಎಲ್ಲೂ ಕೆಲಸ ಸಿಕ್ಕಿಲ್ಲ ಸಾರ್ ಎಂದು ಮುಖ ಒಣಗಿಸಿಕೊಂಡು ಉತ್ತರಿಸಿದರು. ಕೆಲವರಿಗೆ ಜಮೀನಿದೆ, ಕೆಲಸ ಮಾಡಲು ಮನಸ್ಸಿಲ್ಲ. (ಯಾಕೆಂದರೆ ಇವರು ಓದಿದವರು ನೋಡಿ!). ಶಾಲೆ, ಸರ್ಕಾರಿ, ಖಾಸಗಿ ಕಾಲೇಜುಗಳಿಗೆ ಅಪ್ಲೈ ಮಾಡಿದ್ರೂ ಎಲ್ಲೂ ಕೆಲಸ ಸಿಕ್ಕಿಲ್ಲ ಅಂತ ಅಲವತ್ತುಕೊಂಡರು. ನೋಡಿ. ನಿಮ್ಮಲ್ಲಿ ಓದಿದ್ದಕ್ಕೆ ನಿರುದ್ಯೋಗಿಗಳಾಗಿದ್ದೇವೆ ಎಂಬ ಸಣ್ಣ ಆಕ್ಷೇಪ, ಅಯ್ಯೋ ನಮ್ಮ ವಿದ್ಯಾರ್ಥಿಗಳಿಗೆ ಹೀಗಾಯ್ತಲ್ಲಾ ಎಂಬ ಪಾಪಪ್ರಜ್ಞೆ ನಮ್ಮಲ್ಲಿ ಹುಟ್ಟಿಸುವಂತೆ ಮಾಡುವ ದನಿ ಎಲ್ಲ ಅವರಲ್ಲಿತ್ತು. ಅಲ್ರಯ್ಯಾ ಪೇಪರು, ಟಿವಿ ಮಾಧ್ಯಮಗಳಿಗಾದ್ರೂ ಹೋಗಿ ಕೆಲಸ ಕೇಳಬಹುದಿತ್ತಲ್ಲಾ ಅಂದೆ. ಹೋಗಿದ್ವಿ ಸಾ, ಕಂಪ್ಯೂಟರು ಗೊತ್ತಿಲ್ಲಾ ಸಾ, ಅದೇನೋ ಸುದ್ದಿ ಬರಕೊಡಕೆ ಹೇಳಿದ್ರು ಸಾ, ಆಮೇಲೆ ಹೇಳ್ತೀವಿ ಅಂದ್ರು ಸಾ, ಇನ್ನೂ ಕೆಲಸ ಕೊಟ್ಟಿಲ್ಲ ಸಾ ಅಂದ್ರು. ಅರ್ಥವಾಯಿತು. ಇಂಥವರಲ್ಲಿ ಬದುಕುವ ಆತ್ಮಸ್ಥೈರ್ಯ ಹುಟ್ಟುವಂತೆ, ಸ್ವಂತ ಬಲದ ಮೇಲೆ ನಿಲ್ಲುವಂತೆ ಮಾಡುವ ಸವಾಲು ಇಂದು ಉನ್ನತ ಶಿಕ್ಷಣ ಸಂಸ್ಥೆಗಳ ಮೇಲಿದೆ. ಈ ಸಂಗತಿಗೂ ಇವರ ಭಾಷಾ ಬಳಕೆಗೂ ಇರುವ ಸಂಬಂಧ ನಿಮಗೆ ಈಗ ಸ್ಪಷ್ಟವಾಗಿರಬೇಕು. ಉನ್ನತ ಶಿಕ್ಷಣ ಅಂದರೆ ಅದು ಪ್ರಾಥಮಿಕ ಹಂತದಿಂದ ಮಾಧ್ಯಮಿಕ, ಪ್ರೌಢ ಶಿಕ್ಷಣಗಳ ಜೊತೆ ಕೊಂಡಿಯೋಪಾದಿ ಸಂಬಂಧವುಳ್ಳದ್ದು. ಈ ಕೊಂಡಿಗಳಲ್ಲಿ ಎಲ್ಲೇ ದೋಷವಿದ್ದರೂ ಸರಣಿಯಲ್ಲಿ ಲೋಪವಾಗುತ್ತದೆ.
ಇದಕ್ಕೆ ಶಿಕ್ಷಣ ನೀಡುವ ರೀತಿ, ಶಿಕ್ಷಕರ ನೇಮಕಾತಿ, ಬೋಧನ ವ್ಯವಸ್ಥೆಯೂ ಸೇರಿ ಅನೇಕ ಸಂಗತಿಗಳು ಕಾರಣವಾಗಿವೆ. ಈ ಸಂಗತಿಗಳು ಪ್ರಪಂಚಕ್ಕೆ ಗೊತ್ತಾದುದು ಇದೇ ಮೊದಲಲ್ಲ. ಅರುವತ್ತರ ದಶಕದಲ್ಲಿ ರಾಧಾಕೃಷ್ಣನ್ ಸಮಿತಿ ರಚನೆಯಾದಾಗಿನಿಂದ ಹಿಡಿದು ದೇಶ ಹಾಗೂ ರಾಜ್ಯಗಳ ಮಟ್ಟದಲ್ಲಿ ಉನ್ನತ ಶಿಕ್ಷಣದ ರಿಪೇರಿ ಹೇಗೆಂಬ ಬಗ್ಗೆ ನವನೀತರಾವ್ ಸಮಿತಿ ವರದಿ (1994), ಇನ್ನೂ ಸಮಗ್ರವಾದ ಶ್ರೀನಿವಾಸನ್ ಸಮಿತಿ ವರದಿ (2004) ಮತ್ತು ಸೆಸ್ ಸಂಸ್ಥೆಯ ವರದಿ (2008) ಹಾಗೂ ಯಶಪಾಲ್ ವರದಿ (2009)ಗಳಲ್ಲದೇ ಜಸ್ಟಿಸ್ ವರ್ಮಾ ಸಮಿತಿ, ಅನಿಲ್ ಕಾಕೋಡ್ಕರ್ ಸಮಿತಿ, ಭಾರ್ಗವ ಸಮಿತಿ ಇತ್ಯಾದಿ ಇತ್ಯಾದಿ ಸಮಿತಿಗಳು ವರದಿ ನೀಡಿವೆ. ಮತ್ತೆ ಮತ್ತೆ ಸಮಿತಿಗಳಾಗುತ್ತವೆ, ವರದಿ ತಯಾರಾಗುತ್ತವೆ, ಸರ್ಕಾರಗಳು ಅವುಗಳ ಜಾರಿಗೆ ಮುಂದಾಗದೇ ಪರಿಶೀಲನೆ ನಡೆಸುತ್ತಲೇ ಇರುತ್ತವೆ. ಇದ್ದುದರಲ್ಲಿ ಸಮಗ್ರ ಎನ್ನಬಹುದಾದ ಯಶಪಾಲ್ ಸಮಿತಿ ವರದಿಯ ಕೆಲವು ಶಿಫಾರಸುಗಳನ್ನು ಕೇಂದ್ರ ಸರ್ಕಾರ ತಕ್ಕಮಟ್ಟಿಗೆ ಜಾರಿಗೆ ತರುವ ಯತ್ನ ಮಾಡಿದೆ. ಇಲ್ಲ, ಆದರೂ ಉನ್ನತ ಶಿಕ್ಷಣ ವ್ಯವಸ್ಥೆ ಸರಿಯಾಗುತ್ತಿಲ್ಲ. ಯಾಕೆ?
ಪುಸ್ತಕ:
No comments:
Post a Comment