ಎಲ್ಲ ಊರಿಗೂ ಇರುವಂತೆ ತುಮಕೂರಿಗೂ ಕೆಲವು ವೈಶಿಷ್ಟ್ಯಗಳಿವೆ. ಇದನ್ನು ತಿಳಿಯಲು ಇಲ್ಲಿ ಬಂದಾಗಿನಿಂದಲೂ ಯತ್ನಿಸುತ್ತಿದ್ದೇನೆ. ಓದಿದ್ದೇನೆ, ತಿರುಗಿದ್ದೇನೆ. ಕೆಲವರನ್ನು ಮಾತಾಡಿಸಿದ್ದೇನೆ. ಇವರಲ್ಲಿ 1970ರ ದಶಕದಲ್ಲಿ ತುಮಕೂರಿಗೆ ಬಂದು ಅಂದಿನಿಂದ ಊರು ನೋಡುತ್ತ ಬಂದವರೂ ಸೇರಿದ್ದಾರೆ. ತುಮಕೂರಿನ ಬಗ್ಗೆ ಹೇಳುವಾಗ ತಟ್ಟೆ ಇಡ್ಲಿಯನ್ನು ಮರೆಯಲಾದೀತೆ? ಹೌದು. ‘ತಟ್ಟೆ ಇಡ್ಲಿ’ ಅಂದಾಗ ಆಹಾರ ಮತ್ತು ಅಭಿವೃದ್ಧಿಯ ನಂಟು ತಲೆಯಲ್ಲಿ ಅನೇಕ ವಿಚಾರಗಳನ್ನು ಗಂಟುಹಾಕತೊಡಗಿತು.
ಮೈಸೂರಿನಲ್ಲಿದ್ದಾಗ ಮಾಮೂಲಿ ಇಡ್ಲಿ ತಿಂದು ಬೇಜಾರಾದಾಗ ತಟ್ಟೆ ಇಡ್ಲಿ ತಿಂದು ಖುಷಿ ಪಡುತ್ತಿದ್ದುದುಂಟು. ಕೆಲ ವರ್ಷಗಳ ನಂತರ ಅದು ತುಮಕೂರು ಮೂಲದ್ದು ಎಂದು ತಿಳಿಯಿತು. ಇಂದಿನ ವ್ಯಾಪಾರೀ ಯುಗದಲ್ಲಿ ಎಲ್ಲವೂ ಎಲ್ಲ ಕಡೆಯೂ ಬಿಕರಿಗೆ ಸಿಗುತ್ತವೆ. ಬಂಗಾಳಿ ತಿಂಡಿಗಳು ನಿಜವಾಗಿ ಕೊಲ್ಕೊತಾದಲ್ಲೂ ಇಷ್ಟು ಚೆನ್ನಾಗಿ ದೊರೆಯುವುದಿಲ್ಲ ಎಂದು ಬಂಗಾಳದ ಮಿತ್ರನೊಬ್ಬ ಬೆಂಗಳೂರು ಆಹಾರ ಸೇವೆ ಕುರಿತು ಹೇಳಿದ್ದು ನೆನಪಿದೆ.
ನಮ್ಮ ದೇಶದಲ್ಲಿ ಭಾಷೆ ಮತ್ತು ಆಹಾರಗಳ ವೈವಿಧ್ಯ ಬಲ್ಲವರೇ ಬಲ್ಲರು. ಪ್ರತಿ 20 ಕಿ.ಮೀಗೆ ಭಾಷೆಯ ಸ್ವರೂಪ ಬದಲಾಗುತ್ತದೆಯಂತೆ. ಆಹಾರವೇನು ಕಡಿಮೆ? ಒಂದೊಂದು ಊರಿಗೆ ಒಂದೊಂದು ಆಹಾರ ವಿಶೇಷಗಳು ಅಂಟಿಕೊಂಡಿವೆ. ಧಾರವಾಡ ಪೇಡ, ಗೋಕಾಕದ ಕರದಂಟು, ಮಲೆನಾಡಿನ ಕೊಟ್ಟೆ ಇಡ್ಲಿ, ನೀರು ದೋಸೆ, ಕರಾವಳಿಯ ಸಮುದ್ರ ಮೂಲ ಆಹಾರ ಬಗೆ, ಮಂಡ್ಯದ ಮುದ್ದೆ, ಹಾಸನದ ನಾಟಿ ಕೋಳಿ ಸಾರು ಹೀಗೆ ಪ್ರಸಿದ್ಧ ಆಹಾರ ಬಗೆ ಬೆಳೆಯುತ್ತದೆ. ಆಯಾ ಊರಿನೊಂದಿಗೇ ಇವು ಬೆರೆತಿವೆ. ಎಲ್ಲ ಊರುಗಳಿಂದಲೂ ಕೇವಲ ತಮ್ಮೂರಿನ ನೆನಪನ್ನು ಕಟ್ಟಿಕೊಂಡು ಮಹಾನಗರಕ್ಕೆ ಬರುವ ಜನ ಎಷ್ಟಾದರೂ ಹಣ ತೆತ್ತು ನೆನಪನ್ನು ನವೀಕರಿಸಿಕೊಳ್ಳಲು ಸಿದ್ಧವಿರುತ್ತಾರೆ. ಮಹಾನಗರಗಳು ಜನರ ಈ ದೌರ್ಬಲ್ಯವನ್ನು ಹಣವನ್ನಾಗಿ ಪರಿವರ್ತಿಸಿಕೊಳ್ಳುತ್ತವೆ. ಹೀಗಾಗಿ ಬೆಂಗಳೂರಿನಲ್ಲಿ ಎಲ್ಲ ಊರುಗಳ ನೆನಪುಗಳೂ ದೊರೆಯುತ್ತವೆ. ಹಾಗೆಯೇ ತುಮಕೂರಿನ ತಟ್ಟೆ ಇಡ್ಲಿಯೂ.
ಇದೀಗ ತುಮಕೂರಿನ ತಟ್ಟೆ ಇಡ್ಲಿಗೆ ಸ್ಪರ್ಧಿಗಳು ಹುಟ್ಟಿಕೊಂಡಿವೆ. ಬೆಂಗಳೂರು ಮೂಲಕ ಮೈಸೂರಿಗೆ ಹೊರಟರೆ ಬಿಡದಿ ಬರುವ ಹತ್ತಿಪ್ಪತ್ತು ಕಿ.ಮೀ ಆಚೆ ಈಚೆ “ಬಿಡದಿ ತಟ್ಟೆ ಇಡ್ಲಿ” ಸೇವಿಸಿ ಆನಂದಿಸಿ ಎಂಬ ಜಾಹೀರಾತು ಫಲಕಗಳು ರಾಚುತ್ತವೆ. ಏನಪ್ಪಾ ತಟ್ಟೆ ಇಡ್ಲಿ ತುಮಕೂರಿನದು. ಅದು ಹೇಗೆ ಬಿಡದಿ ಎಂದು ಹೇಳ್ತೀಯಾ? ಅಂದರೆ ಬಿಡದಿಯ ಹೊಟೇಲಿನವನೊಬ್ಬ ಇಲ್ಲಾ ಸಾರ್ ತಟ್ಟೆ ಇಡ್ಲಿ ನಮ್ಮದೇ ಅನ್ನುವುದೇ? ಬೇಜಾರಾದರೂ ಅವನ ಬಳಿ ಏನು ವಾದ ಎಂದು ಕೊಂಡು ವಾಪಸಾದೆ. ಬೆಂಗಳೂರಿನ ಗಾಂಧಿ ಬಜಾರಿನ ಆರ್ಯ ಭವನದವರು ಪಡ್ಡು ತಮ್ಮ ವಿಶೇಷ ಎನ್ನುತ್ತ ಅದಕ್ಕೆ ತಮಿಳಿನ ಮೂಲವನ್ನೂ ಜೋಡಿಸಿ ಕರ್ನಾಟಕಕ್ಕೆ ಇದನ್ನು ಪರಿಚಯಿಸುತ್ತಿದ್ದೇವೆ ಎಂಬಂತೆ ಮಾರುತ್ತಾರೆ. ನಾನೂ ಅಲ್ಲಿ ಪಡ್ಡಿನ ಸ್ವಾದ ನೋಡಿ ಕೌಂಟರಿನವನಿಗೆ ಇದೇನು ನಮಗೆ ಹೊಸದಲ್ಲಪ್ಪ, ಉತ್ತರ ಕರ್ನಾಟಕದಲ್ಲಿ ಶತಮಾನಗಳಿಂದ ಗುಂಡುಪಂಗ್ಲ ಎಂದು ಬೇಯಿಸುತ್ತ ಬಂದಿದ್ದಾರೆ. ಕರ್ನಾಟಕದಲ್ಲಿ ಎಲ್ಲೇ ಹೋದರೂ ಇದು ಅಪರೂಪವಲ್ಲ ಎಂದೆ. ಆತ ಉತ್ತರಿಸಲಿಲ್ಲ. ಬೆಳಗಾಂವಿಯ ಮಾರುಕಟ್ಟೆ ಬಳಿ ಗಲ್ಲಿಯೊಂದರಲ್ಲಿ “ಇಲ್ಲಿ ತುಮಕೂರಿನ ತಟ್ಟೆ ಇಡ್ಲಿ ಸಿಗುತ್ತದೆ” ಎಂಬ ಬೋರ್ಡು ನೋಡಿ ಒಮ್ಮೆ ಸಮಾಧಾನಪಟ್ಟಿದ್ದೆ.
ಜಾಗತೀಕರಣ, ಆಹಾರ ವೈವಿಧ್ಯ ಎಲ್ಲ ಕಡೆಯೂ ಹಣಕ್ಕೆ ದೊರೆಯುವಂತೆ ಮಾಡಿ, ಊರೂರುಗಳ ವಿಶೇಷ ಎಲ್ಲೆಡೆ ಹರಡುವಂತೇನೋ ಮಾಡುತ್ತಿದೆ. ಆದರೆ ಅದಕ್ಕೆ ಮತ್ತೊಂದು ಅಪಾಯದ ಮುಖವೂ ಇದೆ. ಸಾಮಾನ್ಯವಾಗಿ ವೇಷಭೂಷಣವನ್ನು ಬದಲಾಯಿಸಿದಷ್ಟು ಬೇಗ ನಮ್ಮ ಆಹಾರ ಪದ್ಧತಿಯನ್ನು ನಾವು ಬದಲಾಯಿಸುವುದಿಲ್ಲ. ನಿಮ್ಮ ಆಹಾರ ಕ್ರಮ ಬದಲಾಯಿತೆಂದರೆ ನೀವು ಬದಲಾಗಲು ಇನ್ನೇನೂ ಉಳಿದಿಲ್ಲ ಎಂದೇ ಅರ್ಥ. ಜಾಗತೀಕರಣದ ಹೊಡೆತಕ್ಕೆ ಸಿಕ್ಕು ನಮ್ಮ ಆಹಾರ ಕ್ರಮ ದಿವಾಳಿಯಾಗುತ್ತಿದೆ. ಹಣಕೊಟ್ಟರೆ ಯಾವ ಆಹಾರವಾದರೂ ಸಿಗುತ್ತದೆ ಎಂಬ ಕಾರಣಕ್ಕೆ ಮನೆ ಮನೆಯಲ್ಲಿ ಅಡುಗೆ ವೈವಿಧ್ಯವೇ ಇಲ್ಲದಂತಾಗುತ್ತಿದೆ. ಯಾರನ್ನೇ ಯಾವಾಗ ಬೇಕಾದರೂ ನಿಮ್ಮ ಮನೆಯಲ್ಲಿ ತಿಂಡಿ ಏನೆಂದು ಕೇಳಿ. ಅವರ ಉತ್ತರ ಒಂದೋ ಇಡ್ಲಿ, ಇಲ್ಲವೇ ದೋಸೆ, ಹೆಚ್ಚೆಂದರೆ ರೈಸ್‍ಭಾತ್, ಚಿತ್ರಾನ್ನ ಇಷ್ಟರಲ್ಲಿ ಒಂದಾಗಿರುತ್ತದೆ. ಎಲ್ಲೇ ಹೋದರೂ ಇದೇ ಕತೆ. ಹಾಗಂತ ಆಹಾರ ವಿಶೇಷಗಳು ಮನೆ ಮನೆಯಲ್ಲಿ ಇಲ್ಲದಿರಬಹುದು, ಆದರೆ ಹೊಟೇಲುಗಳಲ್ಲಿ ದೊರೆಯುತ್ತವೆ! ರೆಡಿ ಟು ಈಟ್ ಪ್ಯಾಕೆಟ್‍ಗಳಲ್ಲಿ ಸಿಗುತ್ತವೆ!
ವೀಸೀಯವರ ಪಂಪಾಯಾತ್ರೆ ಹೊಸಗನ್ನಡದ ಮೊದಲ ಪ್ರವಾಸಿ ಕಥನ. ಅದರಲ್ಲಿ ಅವರು ಸ್ವಯಂಪಾಕ ಮಾಡುವ ಕಷ್ಟಕ್ಕೊಳಗಾಗಿ ಶತಮಾನಗಳಿಂದ ಅಡುಗೆ ಮಾಡುತ್ತ ಬಂದ ಮಹಿಳಾ ಲೋಕವನ್ನು ಅಡುಗೆಯ ಅಆ ಗೊತ್ತಿರದ ಪುರುಷ ಪುಂಗವರು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ವ್ಯಥೆ ವ್ಯಕ್ತಪಡಿಸುತ್ತಾರೆ. ನಾನೊಮ್ಮೆ ‘ಅಡುಗೆ ನಿಷ್ಣಾತರು ಪುರುಷರೇ. ನಳಪಾಕ, ಭೀಮಪಾಕ ಎನ್ನುತ್ತಾರೆಯೇ ವಿನಾ ದಮಯಂತಿಪಾಕ, ದ್ರೌಪದಿಪಾಕ ಎನ್ನುವುದಿಲ್ಲ’ ಎಂದು ಆಯಿ ಬಳಿ ಹೇಳಿದ್ದೆ. ಮೆಲು ದನಿಯಲ್ಲಿ “ಒಬ್ಬರಿಬ್ಬರಾದರೆ ಹೇಳುತ್ತಿದ್ದರಪ್ಪಾ ಎಲ್ಲ ಹೆಂಗಸರೂ ಅಡುಗೆ ಬಲ್ಲವರೇ. ಹಾಗಾಗಿ ಇತಿಹಾಸದಲ್ಲಿ ಹೇಳಿಲ್ಲ ಅಷ್ಟೆ” ಎಂದು ತಣ್ಣಗೆ ಉತ್ತರಿಸಿದಾಗ ಬಾಯಿಮುಚ್ಚಿದ್ದೆ.
ವಸಾಹತುಶಾಹಿ ಪ್ರಭಾವದಿಂದ ಆಹಾರ ಮಾರಾಟದ ವಸ್ತು ಆದಾಗಿನಿಂದ ನಮ್ಮ ಜೀವನ ಶೈಲಿಯೇ ಬದಲಾಗಿಹೋಗಿದೆ. ಹಾಲುಮೊಸರು, ಅನ್ನ ಅಷ್ಟೇಕೆ, ತಿನ್ನುವ ಯಾವ ಪದಾರ್ಥವನ್ನೂ ಮಾರುವ ಪ್ರಶ್ನೆಯೇ ನಮ್ಮಲ್ಲಿರಲಿಲ್ಲ. ಹಸಿದು ಬಂದವರಿಗೆ ಅನ್ನದಾನ ಮಾಡುವುದು ಮನೆಮನೆಯಲ್ಲಿ ನಡೆಯುತ್ತಿತ್ತು. ಹಾಲು ಮೊಸರಿಗೆ ಮಾರುಕಟ್ಟೆ ಬಂದಮೇಲೆ ಮನೆಗೆ ಬಂದ ಅತಿಥಿಗಳಿಗೂ ಲೆಕ್ಕಾಚಾರದಲ್ಲಿ ಆತಿಥ್ಯ ಮಾಡುತ್ತಿದ್ದೇವೆ. ಶ್ರಮವಹಿಸಿ ದುಡಿಯುವ ಸ್ವತಃ ಪಶುಪಾಲಕರೂ ತೃಪ್ತಿಯಾಗುವಷ್ಟು ತಾವೂ ಹಾಲು ಮೊಸರು ಸೇವಿಸದೇ ಹಣಕ್ಕೆ ಮಾರುತ್ತ ಒಣಗುತ್ತಿದ್ದಾರೆ. ಕುಳಿತು ಕೆಲಸ ಮಾಡುವ ಹಣವಂತ ನಗರದ ಜನ ಅನಗತ್ಯ ಹೇರಳ ಹಾಲು ಮೊಸರು ತಿಂದು ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಹಳ್ಳೀ ಜನರಿಗೂ ಆರೋಗ್ಯವಿಲ್ಲ, ನಗರದವರಿಗಂತೂ ಇಲ್ಲವೇ ಇಲ್ಲ ಎಂಬ ವಿಚಿತ್ರ ಪರಿಸ್ಥಿತಿ ಸಮಾಜಕ್ಕೆ ಒದಗಿದೆ. ಬ್ರಿಟಿಷರು ಭಾರತಕ್ಕೆ ಬರುವ ಮೊದಲು ಭಾರತದ ಇತಿಹಾಸದಲ್ಲಿ ಒಬ್ಬನೇ ಒಬ್ಬ ಹಸಿವಿನಿಂದ ಸತ್ತ ದಾಖಲೆ ಇಲ್ಲ ಎಂದು ಖ್ಯಾತ ಇತಿಹಾಸಜ್ಞ ವಿಲ್‍ಡುರಾಂಟ್ ದಾಖಲಿಸುತ್ತಾರೆ.
ಇಂದಿನ ಪರಿಸ್ಥಿತಿಯಲ್ಲಿ ಹುಡುಗರಿಗೆ ಬಿಡಿ, ಬಹತೇಕ ಹುಡುಗಿಯರಿಗೂ ವಿಶೇಷ ಖಾದ್ಯಗಳ ಜ್ಞಾನವಿರಲಿ, ಕನಿಷ್ಠ ಅನ್ನ ಬೇಯಿಸಲೂ ಬರುವುದಿಲ್ಲ. ಅಡುಗೆ ಮಾಡಲು ಬರುವುದಿಲ್ಲ ಎಂಬುದೂ ಒಂದು ಫ್ಯಾಶನ್ ಆಗಿಬಿಟ್ಟಿದೆ. ಇದನ್ನೂ ಜಾಗತೀಕರಣ ಬಂಡವಾಳ ಮಾಡಿಕೊಂಡಿದೆ. ಕೆಲಸಕ್ಕಾಗಿ ವಿದೇಶಕ್ಕೆ ಹೋಗುವವರಿಗೆ ಬೆಂಗಳೂರಲ್ಲಿ ಅನ್ನ ಬೇಯಿಸಿ, ಈರುಳ್ಳಿ ಸಾರು ಅಥವಾ ತಿಳಿ ಸಾರು ಮಾಡುವ ವಿಧಾನ ಕಲಿಸುವ ವಾರದ ಶಾಲೆಗಳಿವೆ. ಇವಿಷ್ಟು ಕಲಿಯಲು ಹತ್ತಿಪ್ಪತ್ತು ಸಾವಿರ ತೆರುತ್ತಾರೆ ನಮ್ಮ ಹುಡುಗರು. ಮನೆಯಲ್ಲಿ ಅಡುಗೆ ಬಗ್ಗೆ ಅಮ್ಮ ಹೇಳುವಾಗ “ಹೋಗಮ್ಮ” ಎನ್ನುವವರು ಇವರು!
ಯಾರೋ ಮಾಡಿಹಾಕಿದ ಆಹಾರವನ್ನು ಅಥವಾ ಹಣ ಕೊಟ್ಟು ಕೊಂಡದ್ದನ್ನು ಜೀವಮಾನ ಪರ್ಯಂತ ಬೇಸರವಿಲ್ಲದೇ ಸ್ವೀಕರಿಸುತ್ತೇವೆ. ನಮ್ಮ ನಮ್ಮ ಹೊಟ್ಟೆ ತುಂಬಿಸುವ ಏನಾದರೊಂದು ಆಹಾರ ಬೇಯಿಸಿಕೊಳ್ಳುವ ಕಲೆಯೇ ತಿಳಿಯದೇ ಜೀವನ ಮುಗಿಸುತ್ತೇವೆ. ಇಂಥ ಸ್ಥಿತಿ ನಮ್ಮದು. ಇದು ಸಾಮಾಜಿಕ ದುರಂತವಲ್ಲವೇ?
No comments:
Post a Comment