ಹುಟ್ಟಿದ್ದು ಮಲೆನಾಡು. ಬೆಳೆದುದು, ಓದಿದ್ದು ಮೈಸೂರು. ಕೆಲವರ್ಷ ಅಲ್ಲೇ ಅಧ್ಯಾಪನ, ವಿಶ್ವಕೋಶ ಸಂಪಾದನೆಯ ನಂತರ ಕೇರಳ, ತಮಿಳುನಾಡು, ಅಂಡಮಾನ್‍ಗಳಲ್ಲಿ ಬುಡಕಟ್ಟುಗಳನ್ನು ಕುರಿತು ಸಂಶೋಧನೆ; ತರುವಾಯ ಬೆಂಗಳೂರಿನಲ್ಲಿ ಪತ್ರಿಕೋದ್ಯಮ ಪ್ರವೇಶ. ಇದೀಗ ಶೈಕ್ಷಣಿಕ ಕೆಲಸಕ್ಕಾಗಿ ತುಮಕೂರಿನಲ್ಲಿ ಮೂರು ವರ್ಷದಿಂದ ವಾಸ ಮಾಡುತ್ತಿದ್ದೇನೆ. ಹೆಚ್ಚೂ ಕಡಿಮೆ ರಾಜ್ಯದ ಎಲ್ಲ ಭಾಗಗಳಲ್ಲಿ ಸಂಚರಿಸಿದ್ದೇನೆ; ದೇಶದ ಹಲವು ಪ್ರದೇಶಗಳಲ್ಲಿ ಓಡಾಡಿದ್ದೇನೆ. ಇವೆಲ್ಲದರ ಹಿನ್ನೆಲೆಯಲ್ಲಿ ಸದ್ಯದ ನಮ್ಮೂರು “ತುಮಕೂರು” ಬಹು ದಿನಗಳಿಂದ ಕೆಲವು ವಿಷಯಗಳಿಗಾಗಿ ತಲೆ ಕೊರೆಯುತ್ತಿದೆ. ಇದೀಗ ಸರ್ಕಾರ ತುಮಕೂರು, ಶಿವಮೊಗ್ಗ ಮತ್ತು ವಿಜಾಪುರಗಳನ್ನು ಮಹಾನಗರದ ವ್ಯಾಪ್ತಿಗೆ ತರಲು ನಿರ್ಧರಿಸಿದೆ. ನಗರ ಆದಾಯ, ಅಭಿವೃದ್ಧಿ ದೃಷ್ಟಿಯಿಂದ ಇದು ಸ್ವಾಗತಾರ್ಹ. ಈ ಸಂದರ್ಭದಲ್ಲಿ ತುಮಕೂರಿಗೆ ಇರುವ ಶಕ್ತಿ ಮತ್ತು ಮುಂದಿರುವ ಸವಾಲುಗಳನ್ನು ಕುರಿತು ಕಂಡಷ್ಟು, ಅರ್ಥವಾದಷ್ಟು ಹಂಚಿಕೊಳ್ಳುವುದು ಪ್ರಸ್ತುತ ಎನಿಸುತ್ತಿದೆ.
ಎಲ್ಲ ಊರುಗಳಂತೆಯೇ ತುಮಕೂರಿಗೂ “ಇದೆ” ಮತ್ತು “ಇಲ್ಲ”ಗಳಿವೆ. ಪ್ರಾಗೈತಿಹಾಸಿಕ ಸ್ಥಳದಿಂದ ಹಿಡಿದು ದೇವರಾಯನದುರ್ಗ, ನಾಮದ ಚಿಲುಮೆ, ಕೈದಾಳ, ಸಿದ್ಧಗಂಗೆ, ಗೊರವನಹಳ್ಳಿ, ಮಧುಗಿರಿ ಬೆಟ್ಟ, ಸಿದ್ಧರಬೆಟ್ಟ ಇತ್ಯಾದಿ ಇತ್ಯಾದಿ ಪ್ರಸಿದ್ಧ ಸ್ಥಳಗಳಿವೆ. ಅಮರಶಿಲ್ಪಿ ಜಕಣಾಚಾರಿ, ನಟ ಸಾರ್ವಭೌಮ ಗುಬ್ಬಿ ವೀರಣ್ಣ, ತೀನಂಶ್ರೀ, ಖ್ಯಾತ ವಿಜ್ಞಾನಿ ರಾಜಾರಾಮಣ್ಣ, ಕೃಷಿ ಪಂಡಿತ ಸಿ ಪಿ ಸದಾಶಿವಯ್ಯ, ಸಿದ್ಧಪುರುಷರಾದ ಸಿದ್ಧಗಂಗೆಯ ಸ್ವಾಮೀಜಿ, ಮಾನವತಾವಾದಿ ನಜೀರ್ ಅಹ್ಮದ್, ಜಿ ಎಸ್ ಪರಮಶಿವಯ್ಯ ಮೊದಲಾದ ಹತ್ತಾರು ಸಾಧಕರೆಲ್ಲ ಇಲ್ಲಿಯವರು.
ಶೈಕ್ಷಣಿಕ, ಕೈಗಾರಿಕೆಗಳ ಊರು ಎಂದೇ ಇದು ಗುರುತಿಸಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ 4 ಮತ್ತು 206 ಇಲ್ಲೇ ಹಾದುಹೋಗುತ್ತವೆ. ಬ್ರಿಟಿಷರ ಕಾಲದಲ್ಲಿ ಮೊದಲು ರೈಲ್ವೆ ಹಳಿ ಸಂಪರ್ಕ ಪಡೆದ ಊರುಗಳಲ್ಲಿ ಇದೂ ಒಂದು. ಈಗ ಬ್ರಾಡ್‍ಗೇಜಿನ ಎರಡು ಸಮಾಂತರ ಹಳಿಗಳಿವೆ. ರಾಜ್ಯ ರಾಜಧಾನಿಯಿಂದ ಕೇವಲ 70 ಕಿ ಮೀ ದೂರದಲ್ಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ದೂರವೇನಿಲ್ಲ. ರಾಜ್ಯದ ಬೇರೆ ಯಾವ ಜಿಲ್ಲಾ ಕೇಂದ್ರವೂ ರಾಜಧಾನಿಗೆ ಇಷ್ಟು ಹತ್ತಿರವಿಲ್ಲ. ರಾಜ್ಯದ ಶೇ.80ರಷ್ಟು ಪ್ರದೇಶಗಳು ರಾಜಧಾನಿಯೊಂದಿಗೆ ಸಂಪರ್ಕ ಪಡೆಯುವುದು ತುಮಕೂರು ಮೂಲಕವೇ! ಹೀಗಾಗಿ ಇದೊಂದು ರೀತಿಯ ಹೆಬ್ಬಾಗಿಲು.
ಸಿದ್ಧಗಂಗೆ, ಸಿದ್ಧಾರ್ಥ, ವಿದ್ಯಾವಾಹಿನಿ, ಶ್ರೀದೇವಿ, ಎಚ್‍ಎಂಎಸ್, ಸೇಕ್ರೆಡ್‍ಹಾರ್ಟ್, ಮಹೇಶ್, ಬಿಷಪ್ ಸಾರ್ಜಂಟ್, ಕೇಂದ್ರೀಯ ವಿದ್ಯಾಲಯ, ಟಿವಿಎಸ್, ಚಿನ್ಮಯ, ಸರ್ವೋದಯ, ಸ್ವರ್ಣಮಂದಿರ್, ಅಕ್ಷಯ, ಮಾರುತಿ, ಜೈನ್, ಎಸ್‍ಆರ್‍ಎಸ್, ಕೌಟಿಲ್ಯ, ಸುಫಾ, ಚೆನ್ನಬಸವೇಶ್ವರ ಹೀಗೆ ಹತ್ತಾರು ಪ್ರಮುಖ ಶಿಕ್ಷಣ ಸಂಸ್ಥೆಗಳ ಜೊತೆಗೆ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಕಿರೀಟವಿಟ್ಟಂತೆ ತುಮಕೂರು ವಿಶ್ವವಿದ್ಯಾನಿಲಯಗಳೆಲ್ಲ ಶಿಕ್ಷಣ ಸೇವೆಯಲ್ಲಿ ನಿರತವಾಗಿವೆ. ವೈದ್ಯ, ತಂತ್ರಜ್ಞಾನ, ಕಲೆ, ವಾಣಿಜ್ಯ ಹೀಗೆ ಎಲ್ಲ ಬಗೆಯ ಶಿಕ್ಷಣ, ತರಬೇತಿ ಇಲ್ಲ ಲಭ್ಯ.
ಹೈನುಗಾರಿಕೆ, ಎಣ್ಣೆಕಾಳು, ತೋಟಗಾರಿಕೆಗಳಿಗೆ ರಾಜ್ಯದಲ್ಲೇ ಮುಂಚೂಣಿ ಸ್ಥಾನ ತುಮಕೂರಿಗೆ ಇದೆ. ತುಮಕೂರಿನ ಕಬ್ಬೆ ಮಣ್ಣು ಬಹು ಫಲವತ್ತಾದ, ತೇವಾಂಶವನ್ನು ಹಿಡಿದಿಟ್ಟುಕೊಳ್ಳಬಲ್ಲ ವಿಶಿಷ್ಟ ಗುಣವುಳ್ಳದ್ದು. ಈ ಜಿಲ್ಲೆಗೆ ತೆಂಗಿನ ಬೆಳೆ ಮತ್ತು ಉತ್ಪನ್ನಗಳಿಗೆ ಕೇರಳಕ್ಕೂ ಸೆಡ್ಡು ಹೊಡೆಯುವ ಸಾಮಥ್ರ್ಯವಿದೆ.
2011ರ ಗಣತಿಯಂತೆ ಜಿಲ್ಲೆಯ ಜನಸಂಖ್ಯೆ 26, 78, 980. ರಾಜ್ಯದಲ್ಲಿ ನಾಲ್ಕನೆಯ ಸ್ಥಾನ. ಶೇ.19 ಜನ ನಗರದಲ್ಲಿಯೂ ಉಳಿದವರು ಗ್ರಾಮೀಣ ಭಾಗದಲ್ಲೂ ಇದ್ದಾರೆ. ರಾಜ್ಯದಲ್ಲೇ ಅತಿ ಹೆಚ್ಚು ಹಿಂದುಳಿದ, ಬುಡಕಟ್ಟು ವರ್ಗದ ಜನ ಸಂಖ್ಯೆ ಇರುವುದು ತುಮಕೂರಿನಲ್ಲಿ (ಶೇ.18). ಜಿಲ್ಲೆಯ ಜನಸಂಖ್ಯೆ ಕುವೈತ್, ಅಮೆರಿಕದ ನೇವಡ ಜನಸಂಖ್ಯೆಗೆ ಸರಿಸಮ. ಈ ದೃಷ್ಟಿಯಿಂದ ದೇಶದಲ್ಲಿ ಇದಕ್ಕೆ 150ನೆಯ ಸ್ಥಾನ. ಸಾಕ್ಷರತೆ ಶೇ.75.14. ಲಿಂಗಾನುಪಾತ 1000 ಪುರುಷರಿಗೆ 984 ಮಹಿಳೆಯರು.
ಇನ್ನು ಜಿಲ್ಲೆಯ ಇಲ್ಲಗಳನ್ನು ಗಮನಿಸೋಣ. ಡಾ. ಡಿ ಎಂ ನಂಜುಂಡಪ್ಪ ವರದಿಯಂತೆ ಇದು ಹಿಂದುಳಿದ ಜಿಲ್ಲೆ. ಮಧುಗಿರಿ, ಪಾವಗಡಗಳಂತೂ ಸದಾ ಬರಗಾಲ ಎದುರಿಸುತ್ತವೆ. ಇಡೀ ಜಿಲ್ಲೆಯಲ್ಲಿ ಒಂದೂ ಜೀವಂತ ನದಿ ಇಲ್ಲ. ಸದಾ ಬರಗಾಲ ಇದ್ದರೂ ಅಬಕಾರಿ ಪ್ರಮಾಣ ಶೇ.3.28 ನಷ್ಟು ಏರುತ್ತಿದೆ. ಇವರಲ್ಲಿ 30 ರಿಂದ 40 ವರ್ಷದ ಯುವಕರ ಪ್ರಮಾಣ ಏರುತ್ತಿದೆ. ಸಿರಾ ಪಟ್ಟಣದ ಮೇಲೆ ಏಡ್ಸ್ ನಿಯಂತ್ರಣ ಮಂಡಳಿ ವಿಶೇಷ ನಿಗಾ ಇಟ್ಟಿದೆ. ಉಳಿದೆಡೆ ಇರಲಿ, ಜಿಲ್ಲಾ ಕೇಂದ್ರದಲ್ಲಿ ಕೂಡ ಹೆದ್ದಾರಿ ಬಿಟ್ಟರೆ ಸುಮಾರು 12 ಕಿ.ಮೀ ವ್ಯಾಸವುಳ್ಳ ಊರಿನ ಉದ್ದಗಲ ಉತ್ತಮ ಕಚ್ಚಾ ರಸ್ತೆಯೂ ಇಲ್ಲ. ಗಟಾರಗಳಿಲ್ಲ. ಅಗ್ರಹಾರ, ಮಂಡಿಪೇಟೆಗಳ ರಸ್ತೆ, ಸಂಚಾರ ಕುರಿತು ಹೇಳದಿರುವುದು ಒಳಿತು. ಕಸ ವಿಲೇವಾರಿ ಬಗ್ಗೆ ಮಾತನಾಡದಿರುವುದು ಲೇಸು. ನಾಲ್ಕಾರು ಹೊಟೇಲುಗಳನ್ನು ಬಿಟ್ಟರೆ ಶುಚಿ ರುಚಿ ಊಟ ನೀಡುವ ಸ್ಪರ್ಧಾತ್ಮಕ ದರದ ಉತ್ತಮ ಆಹಾರ ಕೇಂದ್ರಗಳಿಲ್ಲ. ಕುಡಿಯುವ ನೀರು ವಾರಕ್ಕೆ ಒಂದೆರಡು ಬಾರಿ ಎಲ್ಲಿಂದಲೋ ಬರಬೇಕು. ಮನೆಮನೆಗೆಲ್ಲ ಕ್ಯಾನ್ ನೀರು. ಬೆಳಿಗ್ಗೆ ಸಂಜೆ ವಾಯುವಿಹಾರ ಮಾಡಲು ವಿಶ್ವವಿದ್ಯಾನಿಲಯ, ಸಿದ್ಧಗಂಗೆ, ಸಿದ್ಧಾರ್ಥ ಸಂಸ್ಥೆಗಳ ಆವರಣ ಬಿಟ್ಟರೆ ಸಾರ್ವಜನಿಕ ಉದ್ಯಾನಗಳಿಗೆ ಗತಿ ಇಲ್ಲ. ಅಮಾನಿ ಕೆರೆಯೂ ಸೇರಿದಂತೆ ಎಲ್ಲ ಕೆರೆಗಳೂ ಒಣಗಿ ನಿಂತಿವೆ, ಕೆಲವು ನಾಮಾವಶೇಷವಾಗಿವೆ, ಬಡಾವಣೆಗಳಾಗಿವೆ. ಅವುಗಳ ನಿರ್ವಹಣೆ ದೇವರಿಗೆ ಬಿಟ್ಟದ್ದು. ಜಿಲ್ಲೆಯಲ್ಲಿ ಕಂಡಕಂಡಲ್ಲಿ ದಶಕಗಳಿಂದ ಕೊಳವೆ ಬಾವಿ ಕೊರೆದು ಸಾವಿರ ಅಡಿ ತೂತು ಕೊರೆದರೂ ನೀರಿಲ್ಲ. ಅಂತರ್ಜಲ ಹೀರಿದ ಪರಿಣಾಮ ಲಭ್ಯ ನೀರಿನಲ್ಲೂ ಅಪಾಯ ಪ್ರಮಾಣ ಮೀರಿ ಫ್ಲೋರೈಡ್ ಮತ್ತು ನೈಟ್ರೇಟ್ ಕಂಡುಬರುತ್ತಿವೆ. ತಾಯಿ ಹಾಲಿನಲ್ಲೂ ಇವು ಸೇರಿವೆ. 11 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿ ಕಂಡುಬರುತ್ತಿದೆ... ಪ್ರವಾಸೀ ತಾಣಗಳಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲ, ಅವುಗಳ ಪ್ರಚಾರಕ್ಕಂತೂ ಯಾರೂ ಮನಸ್ಸು ಮಾಡುತ್ತಿಲ್ಲ... ಹೀಗೆ ಇಲ್ಲಗಳ ಪಟ್ಟಿ ಕೊನೆಯಿಲ್ಲದಂತೆ ಬೆಳೆಯುತ್ತದೆ. ಇವೇನು ತುಮಕೂರಿನಲ್ಲಷ್ಟೇ ಇರುವ ಸಮಸ್ಯೆಗಳಲ್ಲ ಎಂಬುದು ಸರಿ. ಆದರೆ ಪ್ರಶ್ನೆ ಅದಲ್ಲ.
2010ರಲ್ಲಿ ಸರ್ಕಾರ ತುಮಕೂರನ್ನು ಮಹಾನಗರವಾಗಿ ಪರಿವರ್ತಿಸಿದಾಗ ಕೆಲವರು (ಕಂದಾಯ ಹೆಚ್ಚು ಕಟ್ಟಬೇಕಾಗುತ್ತದೆ ಎಂಬ ನಿಜ ಕಾರಣ ಮುಚ್ಚಿಟ್ಟು?) ಅದನ್ನು ತಪ್ಪಿಸಲು ಜನಸಂಖ್ಯೆಯ “ಸಕಾರಣ” ಹುಡುಕಿ ಕೋರ್ಟ್ ಮೆಟ್ಟಿಲು ಹತ್ತಿ ಯಶ ಕಂಡರು. ಇದೀಗ ತುಮಕೂರಿನ ಹೊರವಲಯದ ಜಾಗಗಳನ್ನೂ ಸೇರಿಸಿ ಸರ್ಕಾರ ಸಕಾರಣಕ್ಕೆ ಸದುತ್ತರ ನೀಡಿ ಮತ್ತೆ ಮಹಾನಗರ ಮಾಡಲು ನಿರ್ಧರಿಸಿದೆ. ಇದಕ್ಕೆ ಇನ್ನೇನು ಅಡ್ಡಿ ಬರುತ್ತದೋ ಗೊತ್ತಿಲ್ಲ. ಇವೆಲ್ಲ ಸರಿ. ಆದರೂ ಶಿವಮೊಗ್ಗ, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾಂವಿಯಂಥ ಊರುಗಳಿಗೆ ಹೋಲಿಸಿದರೆ ಬಹಳ ಲಾಭದಾಯಕ ಸ್ಥಾನದಲ್ಲಿರುವ ತುಮಕೂರು ಇಷ್ಟು ವರ್ಷವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ ಯಾಕೆ ಸ್ವಾಮಿ?
ಸಾರಿಗೆ, ಶಿಕ್ಷಣ, ಸಂಪರ್ಕ ಮೊದಲಾದ ಕ್ಷೇತ್ರಗಳಲ್ಲಿ ರಾಜ್ಯದ ಬೇರೆಲ್ಲ ಊರುಗಳಿಗಿಂತ ಲಾಭದಾಯಕ ಸ್ಥಾನದಲ್ಲಿರುವ ಊರು ಹೀಗೇಕಿದೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಈ ಸಮಸ್ಯೆಗಳಿಗೆಲ್ಲ ಗುಂಪುಗಾರಿಕೆ, ಕಾಲೆಳೆಯುವ ರಾಜಕಾರಣ ಕಾರಣವೇ? ರಾಜಧಾನಿ ತುಂಬ ಹತ್ತಿರವಿರುವುದು “ಅನೇಕ ಕಾರಣಗಳಿಂದ” ಶಾಪವಾಗಿದೆಯೇ?
No comments:
Post a Comment