Friday, 21 January 2022

ಸ್ವಾಮಿ, ಸ್ವಲ್ಪ ನಮ್ಮತ್ತ ನೋಡಿ

ಇದೀಗ ನಮ್ಮ ರಾಜ್ಯದ ತುಮಕೂರು ಆಸುಪಾಸು, ಎಚ್ ಡಿ ಕೋಟೆ, ಮುಂಡಗೋಡು, ಮೈಸೂರು ಪ್ರಾಂತ್ಯಗಳಲ್ಲಿ ಹುಲಿ, ಕರಡಿಯಂಥ ಕಾಡುಪ್ರಾಣಿಗಳು ಅದರಲ್ಲೂ ಕಾಡಾನೆಗಳು ಊರಿಗೆ ನುಗ್ಗುತ್ತಿರುವ ಕುರಿತು ಸುದ್ದಿಗಳು ಮೇಲಿಂದ ಮೇಲೆ ಬರುತ್ತಿವೆ. ಚಳಿಗಾಲದ ಸಮಯದಲ್ಲಿ ಇವು ಹೆಚ್ಚು ಸುದ್ದಿಗೆ ಬರುತ್ತವೆ. ಮಳೆಗಾಲ ಮುಗಿದು ಬಹಳ ದಿನವೇನೂ ಆಗಿಲ್ಲ; ಕಾಡಿನಲ್ಲಿ ಇವುಗಳಿಗೆ ಆಹಾರ ನೀರಿನ ಕೊರತೆ ಖಂಡಿತ ಈ ಸಂದರ್ಭದಲ್ಲಿ ಕಾಣಿಸಬಾರದಲ್ಲಾ? ಆದರೆ ಮಾಧ್ಯಮಗಳು, ಜನ, ಅರಣ್ಯಾಧಿಕಾರಿಗಳೂ ಇವೆಲ್ಲ ಆಹಾರ, ನೀರು ಹುಡುಕಿಕೊಂಡೇ ಊರಿನತ್ತ ಬರುತ್ತಿವೆ ಎಂದು ಸಾಧಾರಣ ಹೇಳಿಕೆ ನೀಡುವುದುಂಟು. ಬೇಸಿಗೆ ಕಾಲವಾಗಿದ್ದರೆ ಈ ಮಾತು ನಂಬಬಹುದಾಗಿತ್ತು. ಆದರೆ...ನಿಜ ಕಾರಣ ಇದಲ್ಲ ಎಂಬುದು ಅರಣ್ಯಾಧಿಕಾರಿಗಳಿಗೂ ಚೆನ್ನಾಗಿ ತಿಳಿದಿದೆ. ಆದರೇನು ಮಾಡುವುದು? ಅವರೂ ಇಂದಿನ ಪರಿಸ್ಥಿತಿಯಲ್ಲಿ ಪ್ರಾಣಿಗಳಿಗೆ ನೆರವಾಗಲು ಆಗುತ್ತಿಲ್ಲ. ಅವರಲ್ಲ, ಯಾರಿಂದಲೂ ಇವುಗಳ ಸಮಸ್ಯೆ ಬಗೆಹರಿಯದಂತಾಗಿಹೋಗಿದೆ.

ಮನುಷ್ಯನನ್ನು ಬಿಟ್ಟರೆ ವಾರ್ಷಿಕಾವರ್ತನದಂತೆ ಜೀವನ ನಡೆಸುವ ಪ್ರಾಣಿ ಆನೆ. ಅದರ ದೇಹ ಮಜಬೂತಾಗಿರಬಹುದು; ಆದರೆ ಸ್ವಭಾವ ತುಂಬ ಸೂಕ್ಷ್ಮ. ಸದಾ ಹೆಣ್ಣಾನೆಯ ಮುಂದಾಳತ್ವದಲ್ಲಿರುವ ಆನೆ ಹಿಂಡು ತನ್ನ ಸದಸ್ಯರನ್ನು ಚೆನ್ನಾಗಿ ತಿಳಿದಿರುತ್ತದೆ. ಒಂದೆಡೆ ಬೀಡು ಬಿಟ್ಟಾಗ ಸದಸ್ಯ ಆನೆಯೊಂದು ವಯಸ್ಸಿನಿಂದಲೋ ಬೇರೆ ಕಾರಣದಿಂದಲೋ ಸತ್ತರೆ, ಅವು ಆ ಜಾಗದಲ್ಲಿ ಗಂಟೆಗಟ್ಟಲೆ ನಿಂತು ಶೋಕಿಸುತ್ತವೆ! ಮರು ವರ್ಷ ಅದೇ ವೇಳೆಗೆ ಅದೇ ಜಾಗಕ್ಕೆ ಬಂದು ಆ ಆನೆಯ ಅವಶೇಷಗಳನ್ನು ಸೊಂಡಿಲಿನಿಂದ ಎತ್ತಿ, ಪರಸ್ಪರ ಸ್ಪರ್ಶಿಸಿ, ಒಂದಿಷ್ಟು ಹೊತ್ತು ಮೌನ ಆಚರಿಸಿ ಅದೇ ಜಾಗದಲ್ಲಿಟ್ಟು ತೆರಳುತ್ತವೆ! ಇದಕ್ಕೆ ಕಾರಣ ಇನ್ನೂ ತಿಳಿದಿಲ್ಲವಂತೆ. ಸತ್ತವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೌಢ್ಯ ಆನೆಗಳಲ್ಲೂ ಇದೆ ನೋಡಿ(!?). ಡಿಸ್ಕವರಿ ಚಾನೆಲ್‍ನಲ್ಲಿ ಈಚೆಗೆ ಈ ಡಾಕ್ಯುಮೆಂಟರಿ ಮೂಡಿ ಬಂದಿತ್ತು. 

ಭಾರತದ ಆನೆಗಳು ಆಕಾರದಲ್ಲಿ ಆಫ್ರಿಕದ ಆನೆಗಳಿಗಿಂತ ಸ್ವಲ್ಪ ಭಿನ್ನವಾಗಿದ್ದರೂ ಸ್ವಭಾವದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ವಾರ್ಷಿಕಾವರ್ತನ ಪ್ರಯಾಣ ಇವುಗಳಲ್ಲೂ ಇದೆ. ಒರಿಸ್ಸಾ-ಕಳಿಂಗದಿಂದ ಹೊರಟರೆ, ಕಾಳಹಸ್ತಿ ಕಡೆಯಿಂದ ಆಗಾಗ ಕನ್ಯಾಕುಮಾರಿ ತನಕ ಪ್ರಯಾಣಿಸಿ, ಕೇರಳ-ಕರ್ನಾಟಕ ಗಡಿಗುಂಟ ಹಾದು ಕಾಳಿನದಿ ಪಾತ್ರದ ದಾಂಡೇಲಿ ಮೂಲಕ ಮಹಾರಾಷ್ಟ್ರದ ನಾಸಿಕ್ ತಲುಪಿ ಅನಂತರ ಮತ್ತೆ ಕಳಿಂಗದ ಕಡೆ ತೆರಳುವ ಆನೆ ಮಾರ್ಗ ಬಹು ಹಿಂದಿನಿಂದಲೂ ಇದ್ದ ಬಗ್ಗೆ ತಜ್ಞರು ಹೇಳುತ್ತಾರೆ. ಇದು ನಿಜವಾಗಿ ನಮ್ಮೂರು-ನಿಮ್ಮೂರುಗಳಲ್ಲಿ ಹಾವಳಿ ಮಾಡುತ್ತಿರುವ ಆನೆಗಳು ಓಡಾಡಿಕೊಂಡಿದ್ದ ಮಾರ್ಗ! ಇಂಥ ಹಲವು ಮಾರ್ಗಗಳಿವೆ. ಆದರೆ ರಸ್ತೆ, ಊರು, ನೀರಾವರಿ ಮತ್ತು ಜಲವಿದ್ಯುತ್ ಯೋಜನೆಗಳು ಆನೆಗಳ ಪ್ರವೇಶಕ್ಕೆ ಅಡ್ಡಿಯಾಗಿವೆ ಎನ್ನುತ್ತಾರೆ ಈ ಮಾರ್ಗದ ಉದ್ದಗಲ ಸಮಗ್ರ ಅರಣ್ಯ ಪರಿಸರದ ಪರಿಚಯ ಇರುವ ಪರಿಸರ ವಿಜ್ಞಾನಿಗಳಾದ ಮಿತ್ರ ಎಂ ಎಸ್ ಚೈತ್ರ ಮತ್ತು ಅವರ ಪತ್ನಿ ತಮಿಳುನಾಡಿನ ಖಡಕ್ ಐಎಫ್‍ಎಸ್ ಅಧಿಕಾರಿ ಪದ್ಮಾ. ಸಮಸ್ಯೆ ಇಷ್ಟೇ ಅಲ್ಲ. ಹೀಗೆ ಆವರ್ತನ ಸಮಯದಲ್ಲಿ ಹಿಂಡು ಹಿಂಡಾಗಿ ಹೋಗುವಾಗ ಬಂಡಿಪುರ-ನಾಗರಹೊಳೆ ಆಸುಪಾಸು, ತೇಕಡಿ, ಕಾಳಿನದಿ ಮೊದಲಾದ ಕಡೆ ಬೀಡು ಬಿಟ್ಟಿದ್ದ ಆನೆಗಳು ಅಲ್ಲಲ್ಲಿನ ಯೋಜನೆಗಳಿಂದ ಆ ವ್ಯಾಪ್ತಿಯಿಂದ ಹೊರಬರಲಾರದೇ ಅಲ್ಲಲ್ಲೇ ಉಳಿಯಬೇಕಾಯಿತು. ಈಗ ಮೂರು ದಶಕಗಳಿಂದ ಹೀಗೆ ಉಳಿದ ಹಿಂಡುಗಳು ಅಂತಸ್ಸಂಬಂಧದಿಂದ ವಿನಾಶದ ಅಂಚಿಗೆ ಬರುತ್ತಿವೆ. ಈ ಸಮಸ್ಯೆಯಿಂದ ಹೊರ ಬಂದು ಪೀಳಿಗೆ ಉಳಿಸುವ ಸಂತಾನೋತ್ಪತ್ತಿಗೆ ಅನುಕೂಲವಾಗಲು ಹೊಸ ಗುಂಪಿನ ಸದಸ್ಯರ ಶೋಧಕ್ಕಾಗಿ ಅವು ತಮ್ಮ ವಾರ್ಷಿಕಾವರ್ತನದ ಮಾರ್ಗ ಹಿಡಿಯಲು ಹವಣಿಸುತ್ತವೆ. ಆದರೆ ಯಾವ ಮಾರ್ಗದಲ್ಲಿ ಹೋದರೂ ಅಡ್ಡಿ! ಅವೆಲ್ಲ ಆಯಾ ಜಾಗದಲ್ಲಿ ದ್ವೀಪದಂತಾಗಿಹೋಗಿವೆ. ಇನ್ನು ಕೆಲವು ತಲೆಮಾರು ಆದ ಮೇಲೆ ಇವೆಲ್ಲ ಇನ್‍ಬ್ರೀಡಿಂಗ್ ಡಿಪ್ರೆಶನ್ ಅಥವಾ ಹೊಸ ಸಂಬಂಧವಿಲ್ಲದೇ ನಾಶವನ್ನೇ ಕಾಣಬಹುದು ಎಂಬುದು ಇವರ ಅಭಿಪ್ರಾಯ. ಮರಿಗಳಿದ್ದಾಗ ತೊಂದರೆಯಾಗದಿದ್ದರೆ ಸಾಮಾನ್ಯವಾಗಿ ಇವು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಆದರೆ ಬಿಳಿ ಬಣ್ಣ ಕಂಡರೆ ರೊಚ್ಚಿಗೇಳುವ ಕಾಡಾನೆಗಳು ಅಂಥ ಬಟ್ಟೆ ತೊಟ್ಟವರ ಮೇಲೆ ಹಾಯಬಹುದು ಎಂದೂ ಇವರು ಹೇಳುತ್ತಾರೆ. ಈಗ ಹೇಳಿ ಆನೆಗಳು ನಮಗೆ ಅಡ್ಡಿಯಾಗಿವೆಯೋ ಅಥವಾ ನಾವೇ ಅವುಗಳಿಗೆ ಅಡ್ಡಿಯಾಗಿದ್ದೇವೋ?

ಈ ದೊಡ್ಡ ಗಾತ್ರದ ಆನೆಗಳನ್ನು ಬಿಡಿ. ಮಧುಗಿರಿ ಬಳಿ ಹಿಂದೂಪುರ ರಸ್ತೆಯಲ್ಲಿ ಮೈದನಹಳ್ಳಿಯಲ್ಲಿ ಅಪರೂಪದ ಕೃಷ್ಣಮೃಗಧಾಮವಿದೆ. ಇವುಗಳ ಕತೆಯೂ ಇದೇ. 2006ರಲ್ಲಿ ರಾಜಸ್ತಾನದಲ್ಲಿ ಸಲ್ಮಾನ್‍ಖಾನ್ ಇವುಗಳನ್ನು ಬೇಟೆಯಾಡಿ ಸಿಕ್ಕಿಬಿದ್ದ ಮೇಲೆ ಈ ಮೃಗಗಳು ಹೆಚ್ಚು ಖ್ಯಾತಿಗೆ ಬಂದವು. ಇವುಗಳ ಮಹತ್ವವೂ ತಿಳಿಯಿತು. ಖಾನ್ ಮೇಲೆ ರಾಜಸ್ತಾನ್ ಹೈಕೋರ್ಟಿನಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. 

ಮೈದನಹಳ್ಳಿ ಬಿಟ್ಟರೆ ಇವು ರಾಣಿಬೆನ್ನೂರಿನ ಧಾಮದಲ್ಲಿವೆ. ಕಡೂರು, ಚಿತ್ರದುರ್ಗ, ಕೋಲಾರ, ಕೆಜಿಎಫ್, ಹಿಂದೂಪುರ, ರೋಲಪಾಡು ಆಸುಪಾಸಿನ ಬಯಲಿನಲ್ಲಿ ಆಗಾಗ ಕಾಣಿಸುತ್ತವೆಯಾದರೂ ಎರಡು ಧಾಮಗಳಲ್ಲಿರುವಷ್ಟಿಲ್ಲ. ಭಾರತದಲ್ಲಿ ಇವು ಪುರಾಣ ಪ್ರಸ್ತಾಪ ಪಡೆದ ಪ್ರಾಣಿಗಳು. ಹಿಮಾಲಯದಿಂದ ಕೇಪ್‍ಕಾಮೋರಿನ್‍ವರೆಗೆ ಪಂಜಾಬ್, ಅಸ್ಸಾಂ, ಒರಿಸ್ಸಾ, ಬಂಗಾಲಗಳಲ್ಲಿ ನೇರ ಒಂದು ಪಟ್ಟಿಕೆಯಲ್ಲಿ ಇವು ಹೇರಳವಾಗಿವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಂತೆ ಇವು ಸಂರಕ್ಷಿತ ಪ್ರಾಣಿಗಳು. ಇವುಗಳ ಹತ್ಯೆಗೆ ಕಠಿಣ ಶಿಕ್ಷೆ ಗ್ಯಾರಂಟಿ. ಜಾಮೀನು ಇಲ್ಲದ ಕೇಸು ಇದು. ಈ ಭಯಕ್ಕೆ ನಮ್ಮ ಜನ ಇದನ್ನು ಕೊಂದು ತಿನ್ನುವ ಸಾಹಸಕ್ಕೆ ಹೋಗುವುದಿಲ್ಲ. 1987ರಲ್ಲಿ ಮೈದನಹಳ್ಳಿಯಲ್ಲಿ ಇವು ಇರುವುದು ತಿಳಿದ ಮೇಲೆ ತುಮಕೂರು ಅರಣ್ಯ ಇಲಾಖೆ ಜಯಮಂಗಲಿ ಕೃಷ್ಣಮೃಗಧಾಮ ರೂಪಿಸಿ ಇವುಗಳ ಸಂರಕ್ಷಣೆಗೆ ಮುಂದಾಯಿತು. ತುಮಕೂರು ಅರಣ್ಯ ಇಲಾಖೆ ಸಾಕಷ್ಟು ಉತ್ತಮ ಕೆಲಸ ಮಾಡಿದೆ. ಆದರೆ ಈ ಇಲಾಖೆ ಅಸಹಾಯಕ. ಏಕೆಂದರೆ ಧಾಮದ ಸುಮಾರು 798 ಎಕರೆ ಒಡೆತನ ಕಂದಾಯ ಇಲಾಖೆಯ ಬಳಿಯೇ ಇದೆ. ಇದರಿಂದ ಕೃಷ್ಣಮೃಗಗಳ ರಕ್ಷಣೆಗೆ ಇಲಾಖೆ ಒತ್ತು ನೀಡಲಾಗುತ್ತಿಲ್ಲ. ಕಾರಣ ಕುರಿ ಸಾಕಣೆ ಮಾಡುವವರು ಕೃಷ್ಣಮೃಗಕ್ಕೆ ಮೀಸಲಾದ ಹುಲ್ಲನ್ನು ಕುರಿ ಮೇಯಿಸಿ ಇಲ್ಲವಾಗಿಸುತ್ತಿದ್ದಾರೆ. ಭೂ ಒಡೆತನ ಕಂದಾಯ ಇಲಾಖೆಯದಾದ್ದರಿಂದ ಅರಣ್ಯ ಇಲಾಖೆ ಹಕ್ಕು ಚಲಾಯಿಸುವಂತಿಲ್ಲ. ಹೀಗಾಗಿ ಕೃಷ್ಣ ಮೃಗಗಳು ಆಹಾರ ಸಾಲದೇ ಅಕ್ಕಪಕ್ಕದ ಜಮೀನಿಗೆ ನುಗ್ಗುತ್ತಿವೆ. ಇಲ್ಲಿ 20 ವರ್ಷದಿಂದ ಈಚೆಗೆ ತೋಳಗಳೂ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು. 1997ರಲ್ಲಿ ಇಲ್ಲಿನ ಕೃಷ್ಣಮೃಗ ಗಣತಿ ನಡೆದಾಗ 600 ರಷ್ಟಿದ್ದವು 2002ರಲ್ಲಿ ಗಣತಿ ನಡೆದಾಗ ಸುಮಾರು 400ಕ್ಕೆ ಇಳಿದಿದ್ದವು. ಈಗ ಸುಮಾರು ಇನ್ನೂರೈವತ್ತರಷ್ಟು ಕಾಣಿಸುತ್ತವೆ. ಇವುಗಳ ಸಂತತಿ ಇಳಿಯಲೂ ಅಂತಸ್ಸಂಬಂಧವೇ ಕಾರಣವಾಗುತ್ತಿರಬಹುದು. ಮೈದನಹಳ್ಳಿ-ತಿಪಟೂರು(ಕೊನೇಹಳ್ಳಿ)-ಕಡೂರು(ಬಾಸೂರು)-ಚಿತ್ರದುರ್ಗದ ಮೂಲಕ ರಾಣೆಬೆನ್ನೂರಿನ ಹಾಗೂ ಮೈದನಹಳ್ಳಿ-ಕೆಜಿಎಫ್-ಹಿಂದೂಪುರ ಮೂಲಕ ರೋಲಪಾಡು ಕೃಷ್ಣಮೃಗಗಳ ಜೊತೆ ಇವು ಬೆರೆತು ಹೊಸ ಸಂತತಿ ವೃದ್ಧಿಸುವಂತೆ ಮಾಡದಿದ್ದರೆ ಇವುಗಳ ನಾಶವೂ ಸದ್ಯದ ದಶಕಗಳಲ್ಲೇ ಖಚಿತ. ಅವುಗಳಿಗೇನು ಬೇಕೋ ಅದನ್ನು ಅರಿತು ಕೆಲಸಮಾಡಬೇಕೇ ವಿನಾ ನಮಗೆ ಬೇಕಾದಂತೆ ಮಾಡುವುದಲ್ಲ ಎಂಬುದು ಚೈತ್ರ ಅವರ ಅಭಿಪ್ರಾಯ.

ಅವರ ಮಾತಲ್ಲಿ ಸುಳ್ಳಿಲ್ಲ. ನೇಪಾಳದಲ್ಲಿ ಕೃಷ್ಣಮೃಗ ವೃದ್ಧಿಗೆ ಅಲ್ಲಿನ ಸರ್ಕಾರ ಸಾವಿರಾರು ಕೋಟಿ ಡಾಲರ್ ಹಣ ಸುರಿಯುತ್ತಿದೆ. ವರ್ಷದಿಂದ ವರ್ಷಕ್ಕೆ ಅವುಗಳ ಸಂಖ್ಯೆ ಇಳಿಯುತ್ತಿದೆ. 90ರ ದಶಕದಲ್ಲಿ 300ರಷ್ಟಿದ್ದ ಇವು 2008ರಲ್ಲಿ 184 ಆಗಿದ್ದವು. ಹಿಂದೆ ಭಾರತ-ನೇಪಾಳಗಳಲ್ಲಿ ಓಡಾಡಿಕೊಂಡು ಸಮೃದ್ಧವಾಗಿದ್ದ ಇವು ಈಗ ನಾವು ಹಾಕಿದ ಅಂತಾರಾಷ್ಟ್ರೀಯ ಗಡಿ ದಾಟಲಾಗದೇ ನಾಶವಾಗುತ್ತಿವೆ. 2020ರ ವೇಳೆಗೆ ನೇಪಾಳದಲ್ಲಿ ಇವು ಸರ್ವನಾಶ ಆಗಲಿವೆಯಂತೆ. ಇವುಗಳ ಮಾಂಸ ಬಹಳ ರುಚಿಯಂತೆ. ನೆರೆಯ ಬಾಂಗ್ಲಾದಲ್ಲಿ ಇವು ನಾಮಾವಶೇಷವಾಗಿವೆ. ಪಾಕಿಸ್ತಾನಕ್ಕೆ ಭಾರತದ ಗಡಿ ದಾಟಿ ಹೋಗುತ್ತವೆಯಾದರೂ ಅಲ್ಲೇ ಜೀರ್ಣವಾಗುತ್ತವೆ, ಮರಳಿ ಬರುವುದಿಲ್ಲ!

ಬಯಲುಸೀಮೆ ಹುಲ್ಲುಗಾವಲಲ್ಲೇ ಕೃಷ್ಣಮೃಗ ಇರುವುದು. ಇದು ಇರುವಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಎಂಬ ವಿಶಿಷ್ಟ ಹಕ್ಕಿಯೂ ಇರುತ್ತದೆ. ಕಾಡಿದ್ದರಷ್ಟೇ ಪರಿಸರ ಎಂಬ ಭ್ರಮೆ ನಮಗಿದೆ. ರಾಣೆಬೆನ್ನೂರು ಧಾಮದ ಬಯಲಿನಲ್ಲಿ ಇದೇ ಭ್ರಮೆಯಲ್ಲಿ ದಶಕದ ಹಿಂದೆ ಕಾಡು ಬೆಳೆಸಲು ಆರಂಭಿಸಲಾಯಿತು. 2002ರಿಂದ ಈ ಹಕ್ಕಿ ಅಲ್ಲಿ ನಾಪತ್ತೆಯಾಯಿತು. ಕಾಡು ಬೆಳೆದಂತೆ ಕೃಷ್ಣಮೃಗವೂ ಬಯಲಿಗೆ ಹೋಗತೊಡಗಿದೆ! ನಮ್ಮ ಒತ್ತಡದ ಜೀವನದ ನಡುವೆ ಪರಿಸರದೊಳಗಿನ ಇಂಥ ಸೂಕ್ಷ್ಮಗಳು ನಮಗೆ ಅರಿವಾಗುವುದಾದರೂ ಹೇಗೆ?




ಪುಸ್ತಕ:
ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment