ಈಚೆಗೆ ಮಾಧ್ಯಮಗಳಲ್ಲಿ ಎರಡು ಸುದ್ದಿಗಳು ಎಂದಿನ ಸಾದಾ ವರದಿಗಳೋ ಎಂಬಂತೆ ಪ್ರಕಟವಾಗಿ ಜನರ ಮನಸ್ಸಿನಿಂದ ಮರೆಯಾದವು. ಒಂದು 2013 ಸೆಪ್ಟೆಂಬರ್ 20 ರಂದು ವರದಿಯಾದ “ಅಂಜಲಿ” ಎಂಬ ಹೆಣ್ಣುಮಗಳ ಹತ್ಯೆಯ ಸುದ್ದಿ. ರಾತ್ರಿ ಪಾಳೆಯದಲ್ಲಿದ್ದ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸರು ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದವರನ್ನು ಹಿಡಿದು ವಿಚಾರಿಸಿದಾಗ ಅವರಲ್ಲಿ ಹಳೆ ರೌಡಿಯೊಬ್ಬನಿದ್ದ. ಅವನನ್ನು ಪೊಲೀಸ್ ರೀತಿಯಲ್ಲಿ ವಿಚಾರಿಸಿದಾಗ ಜೈಲಿನಿಂದ ವರ್ಷದ ಹಿಂದೆ ಹೊರಬಂದಮೇಲೆ ತಾನು ಮಾಡಿದ ಮಹಾಕಾರ್ಯಗಳನ್ನು ಆತ ಹೇಳಿಕೊಂಡಿದ್ದ. ಅದರಲ್ಲಿ ಈ ಹೆಣ್ಣುಮಗಳ ಹತ್ಯೆಯೂ ಒಂದಾಗಿತ್ತು. ಆಕೆಯನ್ನು ಕೊಂದು ಕೃಷ್ಣಗಿರಿ ಬಳಿ ರಸ್ತೆ ಪಕ್ಕ ಆತ ಹೂತುಹಾಕಿ ಬಂದಿದ್ದ. ಮಾಹಿತಿಯನ್ನೆಲ್ಲ ಸಂಗ್ರಹಿಸಿದಾಗ ಪೊಲೀಸರಿಗೆ ಆಕೆ ಬಾಂಗ್ಲಾದಿಂದ ಬಂದಿದ್ದವಳೆಂದು ತಿಳಿದು ಬಂತು. ಯಾರಿಗೂ ಆಕೆಯ ಹಿಂದೆ ಮುಂದೆ ಗೊತ್ತಿರಲಿಲ್ಲ. ಆಕೆ ಬಳಿ ಪಾಸ್‍ಪೋರ್ಟಾಗಲೀ ವಿಸಾವಾಗಲೀ ಇರಲೇ ಇಲ್ಲ. ಆಕೆ ಬಂದಿದ್ದು, ಇಲ್ಲಿನ ವ್ಯಕ್ತಿಯೊಂದಿಗೆ ಮದುವೆಯಾದುದು, ಹೆಸರು ಬದಲಾಯಿಸಿಕೊಂಡದ್ದು, ಸದ್ದಿಲ್ಲದೇ ಶವವಾಗಿ ಹೋದದ್ದು ಮೊದಲಾದವೆಲ್ಲ ಪೊಲೀಸರಿಗೆ ತಿಳಿದುದು ಅಕಸ್ಮಾತ್ತಾಗಿ ರೌಡಿ ಬಾಯಿಬಿಟ್ಟಾಗ ಅಷ್ಟೆ.
ಮೊನ್ನೆ ಮೊನ್ನೆ ನವೆಂಬರ್ 6 ರಂದು ಮತ್ತೊಂದು ಸುದ್ದಿ ಕಾಣಿಸಿಕೊಂಡಿತು. ಮಾನವ ಕಳ್ಳ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟಿನ ಪೊಲೀಸರು ಹಿಡಿದಿದ್ದರು. ಇವರ ಕತೆಯೂ ಅಷ್ಟೆ. ಇವರು ಬಾಂಗ್ಲಾದಿಂದ ಯಾವಾಗ ಬಂದರು, ಹೇಗೆ ಬಂದರು ಇತ್ಯಾದಿ ಸಂಗತಿಗಳು ಅಸ್ಪಷ್ಟ. ಸ್ಥಳೀಯ ಹೆಣ್ಣುಮಕ್ಕಳನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ಇವರು ವಂಚಿಸುತ್ತಿದ್ದರು ಎಂಬುದು ಆರೋಪ. ಸರ್ಕಾರ ನಡೆಸುವವರು ಸಾಮಾನ್ಯ ಸುದ್ದಿಗಳಂತೆ ಇವುಗಳನ್ನು ಪರಿಗಣಿಸಲಾಗದು.
ಸರ್ವೋಚ್ಚ ನ್ಯಾಯಾಲಯ ಇದೀಗ ಯಾವುದೇ ಯೋಜನೆಗೆ ಆಧಾರ್ ಸಂಖ್ಯೆ ಕಡ್ಡಾಯವಾಗಲಾರದು ಎಂದಿರುವುದನ್ನು ಈ ಘಟನೆಗಳ ಹಿನ್ನೆಲೆಯಲ್ಲಿ ಅವಲೋಕಿಸಿದರೆ ಆಧಾರ್ ಹೇಗೆ ದುರುಪಯೋಗವಾಗಬಲ್ಲುದು ಎಂಬುದು ಅರ್ಥವಾಗದೇ ಇರದು. ಮೊದಲ ಪ್ರಕರಣದ “ಅಂಜಲಿ”ಗಾಗಲೀ ಎರಡನೆಯ ಪ್ರಕರಣದಲ್ಲಿ “ವ್ಯವಹಾರ” ನಡೆಸುತ್ತಿದ್ದ ವ್ಯಕ್ತಿಗಳಿಗಾಗಲೀ ಆಧಾರ್ ಪಡೆಯುವುದು ಕಷ್ಟವಿತ್ತೇ? ಖಂಡಿತ ಇಲ್ಲ. ಇಷ್ಟಾದರೆ (ಆಗಿಬಿಟ್ಟಿದೆಯೋ ಏನೋ) ಇವರೆಲ್ಲ ನಮ್ಮ ಪ್ರಜೆಗಳೇ ಆಗಿಬಿಡುತ್ತಾರಲ್ಲ!
ಬಹುಶಃ ಇಷ್ಟು ಸಲೀಸಾಗಿ ಯಾವ ದೇಶದಲ್ಲೂ ನಾಗರಿಕತ್ವ ದೊರಕಲಾರದು. ಭಾರತ ವಿರೋಧಿ ಧೋರಣೆ ಇದ್ದರೆ ಪಾಕಿಸ್ತಾನ ಪ್ರವೇಶ ಸುಲಭವಂತೆ. ಪಾಕಿಸ್ತಾನಕ್ಕೆ ಒಮ್ಮೆ ಪ್ರವೇಶಪಡೆದರೆ ಅಲ್ಲಿಂದ ಸರ್ಕಾರಿ ಪ್ರಾಯೋಜಿತ ಬಾಂಗ್ಲಾ ಪ್ರವಾಸ. ಅಲ್ಲಿಂದ ಮುಕ್ತ ಭಾರತ ಪ್ರವೇಶ! ಹೀಗೆ ಭಾರತಕ್ಕೆ ಬಂದವರ ಸಂಖ್ಯೆ ಕೋಟಿಯನ್ನು ದಾಟಿದೆ ಎನ್ನುತ್ತದೆ ವರ್ಷಗಳ ಹಿಂದಿನ ಒಂದು ಸಮೀಕ್ಷೆ (ದಿ ಹಿಂದೂ, 11 ಡಿಸೆಂಬರ್ 2008). ಇವರೆಲ್ಲ ನಮ್ಮ ದೇಶ ಕಟ್ಟಲು ಬರುತ್ತಿದ್ದಾರೆಯೇ?
ಒಳ್ಳೆಯ ಕೆಲಸ ಮಾಡಲು ಬರುವವರು ಹೀಗೆ ಕದ್ದು ಒಳನುಸುಳುವುದಿಲ್ಲ. ವೇಶ್ಯಾವಾಟಿಕೆ, ಸಾಮಗ್ರಿಗಳ ಕಳ್ಳಸಾಗಣೆ, ಮಾನವ ಕಳ್ಳಸಾಗಣೆ, ಡ್ರಗ್ ಪೆಡ್ಲಿಂಗ್, ಭಯೋತ್ಪಾದನೆ ಇತ್ಯಾದಿ ಸಮಾಜಘಾತುಕ ಚಟುವಟಿಕೆಯಲ್ಲಿ ಇವರು ತೊಡಗಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ 2,429 ಮೈಲುದ್ದದ ಗಡಿ ಪ್ರದೇಶವಿದೆ. ಈ ಪ್ರದೇಶದ ಇಂಚಿಂಚನ್ನೂ ಕಾಯುವುದೇ ಗಡಿ ಭದ್ರತಾ ಪಡೆಯ ದೊಡ್ಡ ಸಮಸ್ಯೆ. ಢಾಕಾ ಮತ್ತು ಕೊಲ್ಕೊತಾ ನಡುವಿನ ಮುಕ್ತ ರೈಲು ಸಂಚಾರ ಆರಂಭವಾಗಿರುವುದಂತೂ ಬಾಂಗ್ಲಾದಿಂದ ಯಾರು ಹೇಗೆ ಬೇಕಾದರೂ ಬರಲು ಅವಕಾಶಮಾಡಿಕೊಟ್ಟಿದೆ. ಎರಡೂ ದೇಶಗಳ ನಡುವೆ ಗಡಿಯುದ್ದಕ್ಕೂ ಮುಳ್ಳಿನ ತಂತಿ ಬೇಲಿ ಹಾಕಿದ್ದಾರೆ. ಇದನ್ನು ದಾಟಿ ನುಸುಳುಕೋರರು ಒಳಬರುವುದು ಕಷ್ಟವಲ್ಲ. ಅಲ್ಲದೆ ಈ ಗಡಿ ಬೇಲಿ ಹಳ್ಳಿಗಳನ್ನು, ಜಮೀನು, ಕಟ್ಟಡಗಳನ್ನು ಹಾದು ಹೋಗಿದೆ. ನಿರಂತರ ಜನರ ಓಡಾಟ ಇರುವ ಸ್ಥಳದ ಮಧ್ಯದಲ್ಲೇ ಗಡಿ ಹಾಕಿರುವುದರಿಂದ ಯಾರು ಎಲ್ಲಿ ಬೇಕಾದರೂ ಓಡಾಡಿಕೊಂಡು ಇರುವಂತಾಗಿರುವುದು ಗಡಿ ಭದ್ರತಾ ಪಡೆಯ ಪ್ರಮುಖ ಸಮಸ್ಯೆಯಲ್ಲಿ ಒಂದು. ಪಾಕಿಸ್ತಾನ ಗಡಿ ಬಹುಪಾಲು ಮಾನವ ರಹಿತ ಸ್ಥಳದಲ್ಲೇ ಇದೆ. ಹೀಗಾಗಿ ಅಕ್ರಮ ಓಡಾಟಗಾರರನ್ನು ಪತ್ತೆಹಚ್ಚುವುದು ಸೇನೆಗೆ ಕಷ್ಟವಲ್ಲ.
ಪಾಕಿಸ್ತಾನದಿಂದಾಗಲಿ, ಬಾಂಗ್ಲಾದಿಂದಾಗಲಿ ಒಳಬರುವವರನ್ನು ಪತ್ತೆ ಹಚ್ಚಲು ನಮ್ಮ ಜನಸಾಮಾನ್ಯರಿಗೆ ಇರಲಿ, ಸೇನೆಗೆ ಹಾಗೂ ನಮ್ಮ ಪೊಲೀಸರಿಗೆ ಕೂಡ ಬಹಳ ಕಷ್ಟ. ಏಕೆಂದರೆ ಇವರೆಲ್ಲರ ಜಾನಾಂಗಿಕ ಕಾರಣ. ಭಾರತ, ಶ್ರೀಲಂಕ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಜನರು ಕಾಕಸಾಯ್ಡ್ ಜನಾಂಗಕ್ಕೆ ಸೇರಿದವರು. ಇವರೆಲ್ಲ ಒಂದೇ ರೀತಿ ಕಾಣುತ್ತಾರೆ. ಇವರ ದೇಹದ ಬಣ್ಣ ಮತ್ತು ಆಕೃತಿ, ಎತ್ತರ ಮೊದಲಾದ ಜಾನಾಂಗಿಕ ಸಂಗತಿಗಳು ಒಂದೇ ಬಗೆಯವು. ಇವರೆಲ್ಲ ಆಡುವ ಭಾಷೆ ಕೂಡ ಹೆಚ್ಚು ಕಡಿಮೆ ಇವರೆಲ್ಲರಿಗೂ ಸಮಾನವಾಗಿ ಪರಿಚಿತ. ಹೀಗಾಗಿ ಭಾರತೀಯರು ಯಾರು, ಬಾಂಗ್ಲಾ-ಪಾಕಿಗಳು ಯಾರು, ಶ್ರೀಲಂಕನ್ನರು ಯಾರು ಎಂದು ಮೇಲ್ನೋಟಕ್ಕೆ ಗೊತ್ತೇ ಆಗುವುದಿಲ್ಲ. ಅನುಮಾನ ಬಂದು ವಿಚಾರಿಸುವುದು ಕೂಡ ಕಷ್ಟವೇ.
ಇಂಥ ಪರಿಸ್ಥಿತಿಯಲ್ಲಿ ಅಂಜಲಿಯಾಗಲಿ, ಉದ್ಯೋಗದ ಹೆಸರಲ್ಲಿ ವಂಚಿಸುವವರಾಗಲೀ ನಮ್ಮ ನಡುವೆ ಎಷ್ಟು ದಿನವಿದ್ದರೂ, ಎಲ್ಲಿ ಯಾವಾಗ ಹೇಗೇ ಸತ್ತರೂ ಯಾರಿಗೂ ತಿಳಿಯದಿರುವುದರಲ್ಲಿ ಅಚ್ಚರಿಯೇನಿಲ್ಲ. ಆದರೆ ದೇಶದ ಆಂತರಿಕ ಭದ್ರತೆಗೆ ತೀವ್ರವಾಗಿ ಅಪಾಯ ಒದಗುತ್ತಿರುವ ಇಂದಿನ ದಿನಗಳಲ್ಲಿ ಇಂಥ ಪ್ರಕರಣಗಳನ್ನು ನಾವು ಸರಳವಾಗಿ ಪರಿಗಣಿಸಬಹುದೇ ಎಂಬ ಪ್ರಶ್ನೆಗೆ ಎಲ್ಲೂ ಉತ್ತರ ಕಾಣುತ್ತಿಲ್ಲ.
No comments:
Post a Comment