ಜಗತ್ತಿನ ಸಮಸ್ತ ಜೀವ ರಾಶಿಗಳ ಅಳಿವು-ಉಳಿವು ಆಹಾರದ ಮೇಲೆ ನಿಂತಿದೆ. ಮಾನವ ಕುಲವಂತೂ ಸಸ್ಯ ಮತ್ತು ಪ್ರಾಣಿ ಪರಿಸರವನ್ನೇ ತನ್ನ ಆಹಾರಕ್ಕಾಗಿ ನೆಚ್ಚಿಕೊಂಡಿದೆ. ಹೀಗಾಗಿಯೇ ವರಾಹ ಪುರಾಣದಲ್ಲಿ “ಯಾವದ್ ಭೂಮಂಡಲಂ ಧತ್ತೆ ಸಶೈಲ ವನಕಾನನಂ; ತಾವತ್ ತಿಷ್ಠತಿ ಮೇದಿನ್ಯಾಂ ಸಂತತಿ ಪುತ್ರ ಪೌತ್ರಕೀ” (ಭೂಮಿಯಲ್ಲಿ ಕಾಡು ಮೇಡುಗಳು ಇರುವವರೆಗೆ ಮಾತ್ರ ಮಾನವ ಕುಲ ಇರುತ್ತದೆ) ಎಂದು ಹೇಳಿರುವುದು. ಆಹಾರ ಮನುಷ್ಯನ ಜೀವಧಾತುವಿನ ಉತ್ಪತ್ತಿಗೂ ದೈಹಿಕ ಪೋಷಣೆ, ಬೆಳವಣಿಗೆಗೆ ಅನಿವಾರ್ಯ. ಮೂಲತಃ ಸಸ್ಯಗಳಿಂದ ತಯಾರಾಗುವ ಆಹಾರವನ್ನೇ ಮನುಷ್ಯ, ಪಶುಪಕ್ಷಿಗಳು ಬಳಸುವುದು. ಇಂದಿನ ಸಂದರ್ಭದಲ್ಲಿ ಎಲ್ಲ ಜೀವಿಗಳ ಆಹಾರದ ಮೂಲವಾದ ಸಸ್ಯಗಳಿಗೇ ಅಪಾಯ ಒದಗಿದೆ. ಈ ಕಾರಣದಿಂದಲೇ ಪ್ರಪಂಚಾದ್ಯಂತ 36 ದೇಶಗಳಲ್ಲಿ ಆಹಾರ ಭದ್ರತೆ ಅಪಾಯದಲ್ಲಿದೆ, 860 ದಶಲಕ್ಷ ಜನ ಹಸಿವಿನಿಂದ ಬಳಲುತ್ತಿದ್ದಾರೆ, ಮುಂದೆ ಕೆಲವೇ ವರ್ಷಗಳಲ್ಲಿ ಆಹಾರವಿಲ್ಲದೇ ಬಳಲುವವರ ಸಂಖ್ಯೆಗೆ ಮತ್ತೆ 100 ದಶಲಕ್ಷ ಸೇರಲಿದೆ ಎಂದು ವಿಶ್ವಸಂಸ್ಥೆ 2008ರ ಜುಲೈನಲ್ಲಿ ಎಚ್ಚರಿಕೆ ನೀಡಿದೆ.
ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವಾದ್ಯಂತ 2008ರಲ್ಲಿ ಆಹಾರ ಬೆಲೆ ಗಗನಕ್ಕೇರಿತು. ಕಳೆದ 30 ವರ್ಷಗಳಲ್ಲಿ ಈ ಬೆಲೆ ಅತಿ ಹೆಚ್ಚಿನದು ಎಂದು ಸ್ವತಃ ವಿಶ್ವಬ್ಯಾಂಕ್ ಹೇಳಿದೆ. ಸದ್ಯ ಪ್ರಪಂಚಾದ್ಯಂತ ಮನುಕುಲ ಎದುರಿಸುತ್ತಿರುವ ಆಹಾರ ಸಮಸ್ಯೆಗೆ ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾದುವನ್ನು ಹೀಗೆ ಪಟ್ಟಿ ಮಾಡಬಹುದು:
1. ಹವಾಮಾನ ವೈಪರೀತ್ಯದಿಂದ ಕೃಷಿ ಉತ್ಪನ್ನದ ಕುಸಿತ
2. ತೈಲ ಬೆಲೆ ಏರಿಕೆ
3. ಜೈವಿಕ ಇಂಧನ ತಯಾರಿಕೆಗೆ ಕಾಳುಗಳ ಬಳಕೆಯಲ್ಲಿ ಏರಿಕೆ ಹಾಗೂ
4. ಕಳೆದ ಮೂರು ದಶಕಗಳಲ್ಲಿ ಕೃಷಿ ವಲಯದಲ್ಲಿ ಮಾಡುವ ವೆಚ್ಚದಲ್ಲಿ ಶೇ. 50ಕ್ಕೂ ಹೆಚ್ಚು ಪ್ರಮಾಣದಲ್ಲಿ ಉಂಟಾದ ಕುಸಿತ
ಇದಕ್ಕೆಲ್ಲ ನಿಸರ್ಗವನ್ನು ಅಥವಾ ಪ್ರಕೃತಿಯನ್ನು ತೆಗಳಿ ಪ್ರಯೋಜನವಿಲ್ಲ. ಇಂದಿನ ಮಾನವನ ಅಡ್ಡಾದಿಡ್ಡಿ ಚಟುವಟಿಕೆ, ದೂರದಷ್ಟಿ ಹೀನತೆಯೇ ಇಷ್ಟೆಲ್ಲ ಅಧ್ವಾನಕ್ಕೆ ಕಾರಣ ಎನ್ನದೇ ವಿಧಿ ಇಲ್ಲ. ಶುದ್ಧ ಕುಡಿಯುವ ನೀರು, ಪೌಷ್ಟಿಕ ಆಹಾರ ಕೊರತೆ, ಹಸಿವಿನಿಂದ ಉಂಟಾಗುತ್ತಿರುವ ಸಾವಿನ ಪ್ರಮಾಣ ಹೆಚ್ಚಳಗಳಿಂದ ಜಗತ್ತಿನ ಎಲ್ಲ ಸರ್ಕಾರಗಳೂ ಎಚ್ಚೆತ್ತುಕೊಳ್ಳತೊಡಗಿವೆ. ವಿಶ್ವಸಂಸ್ಥೆ ಎಲ್ಲ ದೇಶಗಳಿಗೂ ಆಹಾರ ಭದ್ರತೆ ಮತ್ತು ಕುಡಿಯುವ ನೀರಿನ ವಿಷಯದಲ್ಲಿ ಜಾಗ್ರತೆ ವಹಿಸುವಂತೆ ಎಚ್ಚರಿಕೆ ನೀಡಿದೆ.
ಸುಸ್ಥಿರ ಆಹಾರ ಅಥವಾ ಆಹಾರ ಭದ್ರತೆ ಎಂದರೆ ಪ್ರತಿಯೊಬ್ಬರಿಗೂ ಇಂದು ಮತ್ತು ಮುಂದೆ ಸಾಕಷ್ಟು ಆಹಾರ ಲಭಿಸುವಂತೆ ಮಾಡುವುದು. ಇದಕ್ಕೆ ಭೂಮಿ, ನೆಲ, ಜಲ, ಪಶು, ಪಕ್ಷಿಗಳ, ಅರಣ್ಯದ, ಜೀವ ವೈವಿಧ್ಯದ ರಕ್ಷಣೆ ಮತ್ತು ಪರಿಸರ ಸಮತೋಲನವನ್ನು ಕಾಪಾಡುವುದು ಬಹಳ ಮುಖ್ಯವಾಗುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆಯ ಒತ್ತಡ, ಆಧುನಿಕ ಅಭಿವೃದ್ಧಿಯ ಕೆಲಸ ಕಾರ್ಯಗಳಿಂದ ಕೃಷಿ ಭೂಮಿಯ ಪ್ರಮಾಣದಲ್ಲಿ ಕಾಣುತ್ತಿರುವ ಕುಸಿತ ಮೊದಲಾದವು ಸುಸ್ಥಿರ ಆಹಾರ ಕ್ರಮ ರೂಢಿಸಿಕೊಳ್ಳಲು ಸವಾಲಾಗಿ ಪರಿಣಮಿಸಿವೆ. ಈ ದೃಷ್ಟಿಯಿಂದ ಅನೇಕ ಬುಡಕಟ್ಟುಗಳು, ಪ್ರಾಚೀನ ಆಹಾರ ಕ್ರಮಗಳತ್ತ ದೃಷ್ಟಿ ಹಾಯಿಸಿದರೆ ಈ ಸವಾಲಿಗೆ ತಕ್ಕ ಮಟ್ಟಿಗಿನ ಉತ್ತರ ದೊರೆಯುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಆದಿಯ, ಬರ್ದಾ, ಬಾಮ್ಚಾ, ಬಿಲ್ಲ, ಚೆಂಚು, ಚೋದರ, ದುಬ್ಲ, ಗಾಮಿತ್, ಗೊಂಡ, ಗೌಡಾಲು, ಹಕ್ಕಿಪಿಕ್ಕಿ, ಹಸಲರು, ಇರುಳರು, ಇರುಳಿಗ, ಜೇನು ಕುರುಬ, ಕಾಡು ಕುರುಬ, ಕಮ್ಮಾರ, ಕಣಿಯಾ, ಕಾಥೋಡಿ, ಕಟ್ಟುನಾಯಕ, ಕುಕ್ನ, ಕೋಲಿ ದೋರ, ಕೊಂಡಕಾಪು, ಕೊರಗ, ಕೋಟ, ಕೋಯಾ, ಕುಡಿಯಾ, ಕುರುಂಬ, ಮಹಾಮಲಸರ್, ಮಲೈಕುಡಿ, ಮಾಲಸರ್, ಮಲೆಯಕಾಂಡಿ, ಮಲೇರು, ಮರಾಠಾ, ಮರಾಟಿ, ಮೇದ, ವಾಲ್ಮೀಕಿ ನಾಯಕ, ಪಲ್ಲಿಯನ್, ಪಣಿಯಾ, ಪರ್ದಿ, ಪಟೇಲಿಯಾ, ರಾಥ್ವಾ, ಸೊಲಗ, ಸೋಲಿಗರು, ತೋಡ, ವರ್ಲಿ, ವಿಟೋಲಿಯಾ, ಯರವ, ಸಿದ್ದಿ ಹೀಗೆ ಸುಮಾರು ಐವತ್ತು ಆದಿವಾಸಿ ಸಮೂಹಗಳನ್ನು ಗುರುತಿಸಲಾಗಿದೆ.
ಈ ಎಲ್ಲ ಸಮುದಾಯಗಳಲ್ಲೂ ಸಸ್ಯಾಹಾರ ಮತ್ತು ಮಾಂಸಾಹಾರ ಬಳಕೆ ಇದೆ. ಸಸ್ಯಾಹಾರದಲ್ಲಿ ಶಿಲೀಂಧ್ರ, ಅಣಬೆಗಳಿಂದ ಹಿಡಿದು ಕಬ್ಬು, ಬಾಳೆಯವರೆಗೆ, ಮಾಂಸಾಹಾರದಲ್ಲಿ ಹಕ್ಕಿ ಮೀನುಗಳಿಂದ ಹಿಡಿದು ಕಾಡುಹಂದಿವರೆಗೆ ಬಳಕೆಯಾಗುತ್ತವೆ. ಯಾವುದೇ ಸಮುದಾಯ ಮಾಂಸಾಹಾರ ಸೇವಿಸಿದರೂ ಅದಕ್ಕೆ ಪ್ರಧಾನ ಆಹಾರವಾಗಿ ಅಕ್ಕಿ, ಜೋಳ ಅಥವಾ ರಾಗಿಯಂಥ ಸಸ್ಯಮೂಲ ಆಹಾರ ಇದ್ದೇ ಇರುತ್ತದೆ. ಆದಿವಾಸಿ ಅಥವಾ ಬುಡಕಟ್ಟುಗಳು ವಾಸಿಸುವುದು ವಿಶೇಷವಾಗಿ ಕಾಡಿನಲ್ಲಾದ್ದರಿಂದ ಅವರ ಆಹಾರಕ್ಕೆ ಮಾತ್ರವಲ್ಲದೇ ಇಡೀ ಜೀವನಕ್ಕೂ ಕಾಡೇ ಮೂಲಾಧಾರ. ಹೀಗಾಗಿ ಅವರು ಕಾಡನ್ನು ಬಹಳ ಎಚ್ಚರಿಕೆಯಿಂದ ಕಾಪಾಡಿಕೊಳ್ಳುತ್ತಾರೆ. ಸಸ್ಯಾಹಾರವನ್ನಾಗಲೀ ಮಾಂಸಾಹಾರವನ್ನಾಗಲೀ ಈ ಸಮುದಾಯಗಳು ಬೇಕಾಬಿಟ್ಟಿ ಬಳಸುವುದಿಲ್ಲ. ಇವುಗಳನ್ನು ಜೀವನಕ್ಕೆ ಅಗತ್ಯವಾಗುಷ್ಟೇ ಬಳಸುವಂತೆ ಅವರಲ್ಲಿ ಅನೇಕ ವಿಧಿ ನಿಷೇಧಗಳು ಕೆಲಸಮಾಡುತ್ತವೆ. ಋತುಮಾನಕ್ಕೆ ತಕ್ಕಂತೆ ತಮ್ಮ ಆಹಾರ ಕ್ರಮಗಳನ್ನು ರೂಪಿಸಿಕೊಂಡಿದ್ದರಿಂದ ಆಹಾರದ ಜೊತೆಗೆ ಆರೋಗ್ಯದ ಭದ್ರತೆಯನ್ನೂ ಈ ಸಮುದಾಯಗಳು ಸಾಧಿಸಲು ಸಾಧ್ಯವಾಗಿದೆ.
ಕರ್ನಾಟಕದ ಆದಿವಾಸಿ, ಬುಡಕಟ್ಟುಗಳಲ್ಲಿ ಸಾಮಾನ್ಯವಾಗಿ ರಾಗಿ, ಜೋಳ ಮತ್ತು ಅಕ್ಕಿ ಪ್ರಧಾನ ಸಸ್ಯಾಹಾರಗಳಾಗಿ ಕಂಡುಬರುತ್ತವೆ. ಕೋಳಿ, ಮೀನು, ಕುರಿ, ಮೊಲ, ದನ, ಹಂದಿಗಳನ್ನು ಮಾಂಸಾಹಾರದಲ್ಲಿ ಸೇವಿಸುವುದಿದೆ. ಸಾಮಾನ್ಯವಾಗಿ ತಾವು ಸೇವಿಸುವ ಆಹಾರ ಮತ್ತು ತರಕಾರಿಗಳನ್ನು ತಾವೇ ಬೆಳೆದುಕೊಳ್ಳುವುದು ಈ ಸಮುದಾಯಗಳ ಪದ್ಧತಿ. ಒಂದೆರಡು ಸಮುದಾಯಗಳ ಆಹಾರ ಪದ್ಧತಿಯನ್ನು ಇಲ್ಲಿ ಪ್ರಾತಿನಿಧಿಕವಾಗಿ ಗಮನಿಸಬಹುದು. ಹೆಚ್ಚೂ ಕಡಿಮೆ ಇದೇ ಮಾದರಿ ಇತರೆ ಸಮುದಾಯಗಳಲ್ಲೂ ಕಂಡುಬರುವುದರಿಂದ ಆಹಾರ ಬಳಕೆಯ ವಿಧಾನ ಮತ್ತು ಆ ಮೂಲಕ ಅವರು ಕಂಡುಕೊಂಡ ಆಹಾರ ಭದ್ರತೆ ನಮಗೆ ಸ್ಪಷ್ಟವಾಗುತ್ತದೆ.
ಹಾಲಕ್ಕಿ ಒಕ್ಕಲಿಗ ಸಮುದಾಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬರುತ್ತದೆ. ಕೃಷಿ ಇವರ ಪ್ರಧಾನ ವೃತ್ತಿ. ಕೋಳಿ, ಕೊಟ್ಟಿಗೆ ಗೊಬ್ಬರ ಬಳಸಿ ತರಕಾರಿ ಬೆಳೆಯುವುದರಲ್ಲಿ ಇವರು ಪ್ರವೀಣರು. ನಿತ್ಯ ಬಳಕೆಗೆ ಬೇಕಾದ ಸೌತೆಕಾಯಿ, ಮಂಗಳೂರು ಸೌತೆ, ಬೆಂಡೆಕಾಯಿ, ಬದನೆ, ಬೀನ್ಸ್ ಮೊದಲಾದವನ್ನು ಮನೆಯ ಹಿತ್ತಿಲಲ್ಲೇ ಬೆಳೆಯುತ್ತಾರೆ. ಬೆಳಗಿನ ವೇಳೆ ಅಕ್ಕಿ ಅಥವಾ ರಾಗಿ ಅಂಬಲಿ ಇವರ ಆಹಾರ. ಮಧ್ಯಾಹ್ನ ಮತ್ತು ಸಂಜೆಯ ಊಟಕ್ಕೆ ಮೀನು ಅಥವಾ ತರಕಾರಿ ಸಾರು, ಕರಿದ ಮೀನು ಸಾಮಾನ್ಯವಾಗಿರುತ್ತದೆ. ಅಪರೂಪಕ್ಕೆ ಅಕ್ಕಿ ರೊಟ್ಟಿ, ಚಪಾತಿ ಅಥವಾ ದೋಸೆ ಸೇವಿಸುವರು. ಶುಭ ಸಮಾರಂಭಗಳಲ್ಲಿ ಮಾಂಸಾಹಾರ ನಿಷಿದ್ಧ. ಮಾಂಸಾಹಾರದಲ್ಲಿ ಕೋಳಿ, ಕುರಿ ಬಳಕೆಯಾಗುತ್ತದೆ.
ಹರಿಕಾಂತರು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬರುವ ಮತ್ತೊಂದು ಸಮುದಾಯ. ಇವರ ಪ್ರಧಾನ ವೃತ್ತಿ ಮೀನುಗಾರಿಕೆ. ಮಾಂಸಾಹಾರ ಸೇವಿಸುವ, ಕೃಷಿ ಭೂಮಿ ಉಳ್ಳ ಇತರ ಸಮುದಾಯಗಳಾದ ನಾಮಧಾರಿಗಳು, ಹಾಲಕ್ಕಿಗಳು, ಕೊಂಕಣಿ ಪಟಗಾರರು ಮೊದಲಾದವರಿಗೆ ಕಾಲ ಕಾಲಕ್ಕೆ ಮೀನು ನೀಡಿ ಅದಕ್ಕೆ ಪರ್ಯಾಯವಾಗಿ ಬತ್ತ, ಅಕ್ಕಿ, ಬೆಲ್ಲ, ತೆಂಗಿನಕಾಯಿ ಮೊದಲಾದವನ್ನು ಪಡೆಯುತ್ತಾರೆ.
ಬಗೆಗಳು ಹೆಚ್ಚಿದಷ್ಟೂ ಆಹಾರ ಭದ್ರತೆಗೆ ಅಪಾಯ
ಮದುವೆ ಮನೆಗಳಲ್ಲಿ ನಾಲ್ಕಾರು ಬಗೆಯ ಪಲ್ಯ, ಹಪ್ಪಳ, ಸಂಡಿಗೆ, ಅನ್ನ, ವಿವಿಧ ಬಾತ್‍ಗಳು, ಮೂರ್ನಾಲ್ಕು ಬಗೆಯ ಸಿಹಿ ಖಾದ್ಯಗಳು, ದೋಸೆ, ಬೇಲ್‍ಪುರಿ, ಐಸ್‍ಕ್ರೀಮ್ ಇತ್ಯಾದಿ ಇತ್ಯಾದಿಗಳನ್ನು ಎಷ್ಟು ಜನ ಬಂದರೂ ಕೇಳಿದಷ್ಟು ಸಿಗುವಂತೆ ತಯಾರಿಸಲಾಗುತ್ತದೆ. ಅಂದಾಜಿನಷ್ಟೇ ಜನ ಬಂದರೂ ಇಂಥ ಸಂದರ್ಭಗಳಲ್ಲಿ ಆಹಾರ ಮಿಕ್ಕಿ ಹಾಳಾಗುವ ಸಂಭವವೇ ಹೆಚ್ಚು. ಯಾವುದೇ ಮದುವೆ ಮನೆಯಲ್ಲಿ ಬಂದವರೆಲ್ಲ ಹೊಟ್ಟೆ ತುಂಬ ಊಟ ಮಾಡಬೇಕು, ಶುಭ ಸಮಾರಂಭದಲ್ಲಿ ಮಿಕ್ಕವೆಲ್ಲ ನಗಣ್ಯ ಎಂಬ ಧೋರಣೆ ಸಾಮಾನ್ಯ. ಆದರೆ ನಮ್ಮ ಸಮಾಜ ಆಹಾರವನ್ನು ಒಂದೆಡೆ ದೇವರೆಂದು ಬಗೆಯುತ್ತದೆ; ಇನ್ನೊಂದೆಡೆ ಅದನ್ನು ವಿವೇಚನೆಯೊಂದಿಗೆ ಬಳಸುವುದನ್ನು ಮರೆಯುತ್ತದೆ.
ಸಣ್ಣಪುಟ್ಟ ಹೋಟೆಲ್‍ಗಳಲ್ಲಿ ಕೂಡ ಕೆಲವೊಮ್ಮೆ ಇಪ್ಪತ್ತಕ್ಕೂ ಹೆಚ್ಚು ಬಗೆಯ ಆಹಾರವನ್ನು ನಿತ್ಯ ತಯಾರಿಸಲಾಗುತ್ತದೆ. ಆ ಹೋಟೆಲ್‍ಗೆ ಬರುವ ಗಿರಾಕಿಗಳ ಸಂಖ್ಯೆಯ ಅಂದಾಜು ಬಹಳಷ್ಟು ಬಾರಿ ಮಾಲೀಕರಿಗೆ ಇರುವುದಿಲ್ಲ. ಜೊತೆಗೆ ತಮ್ಮ ಹೋಟೆಲ್‍ನಲ್ಲಿ ಎಲ್ಲ ಬಗೆಯ ಖಾದ್ಯಗಳೂ ದೊರೆಯುವಂತೆ ಮಾಡುವುದು ಹೋಟೆಲ್ ಉದ್ಯಮದ ಗುರಿ ಎಂಬಂತೆ ಅವರ ನಿತ್ಯದ ಸಿದ್ಧತೆ ಇರುತ್ತದೆ. ಗೊತ್ತಾದ ಪ್ರಮಾಣದಲ್ಲಿ ನಿರ್ದಿಷ್ಟ ಬಗೆಯ ಆಹಾರವನ್ನು ಮಾತ್ರ ನೀಡುವ ಹೋಟೆಲ್‍ಗಳು ಬೆರಳೆಣಿಕೆಯವು. ಇಂಥ ಕಡೆ ಆಹಾರ ಹಾಳಾಗುವ ಸಂಭವವೂ ಕಡಿಮೆ. ಇಂಥ ಕಾರಣದಿಂದ ಪ್ರತಿ ವರ್ಷ ನೂರು ಮಿಲಿಯ ಮೆಟ್ರಿಕ್ ಟನ್‍ನಷ್ಟು ಆಹಾರ ಅಪವ್ಯಯವಾಗುತ್ತದೆ ಎಂದು ಅಂದಾಜಿಸಲಾಗಿದೆ. ಒಂದೆಡೆ ನಿತ್ಯ ಆಹಾರ ಇಲ್ಲದೇ ಮಲಗುವವರ ಸಂಖ್ಯೆ ಏರುತ್ತಿದ್ದರೆ, ಮತ್ತೊಂದೆಡೆ ಹಾಳಾಗುವ ಆಹಾರದ ಪ್ರಮಾಣವೂ ಏರುತ್ತಿದೆ. ಇದು ನಮ್ಮ ಆಹಾರ ನಿರ್ವಹಣೆಯ ಅಜ್ಞಾನವನ್ನೇ ತೋರಿಸುತ್ತದೆ. ಒಂದು ರೀತಿಯಲ್ಲಿ ಆಹಾರದಲ್ಲಿ ಹೆಚ್ಚು ಹೆಚ್ಚು ಬಗೆಗಳನ್ನು ಸಿದ್ಧಪಡಿಸಿದಷ್ಟೂ ಆಹಾರ ಹಾಳಾಗುವ ಪ್ರಮಾಣ ಹೆಚ್ಚು ಎಂದು ಕಾಣುತ್ತದೆ. ಉದಾಹರಣೆಗೆ ಏನೋ ಸಂತೋಷದ ಸಂದರ್ಭ. ತಂದೆ-ತಾಯಿ ಇಬ್ಬರು ಚಿಕ್ಕ ಮಕ್ಕಳು ಮಾತ್ರ ಮನೆಯಲ್ಲಿ ಊಟ ಮಾಡುವವರು ಎಂದು ಇಟ್ಟುಕೊಳ್ಳೋಣ. ಇಷ್ಟಕ್ಕಾಗಿ ನಾಲ್ಕಾರು ಬಗೆಯ ಪಲ್ಯ, ಪೂರಿ, ಬಿರಿಯಾನಿಯಂಥ ಒಂದೆರಡು ಘನ ಆಹಾರ ಬಗೆ, ಸಿಹಿ ಮೊದಲಾದವನ್ನು ಸಿದ್ಧಪಡಿಸಿದರೆ ಈ ಎಲ್ಲ ಬಗೆಗಳ ರುಚಿ ನೋಡುವಷ್ಟರಲ್ಲೇ ಹೊಟ್ಟೆ ತುಂಬಿರುತ್ತದೆ. ಸಂತೋಷ ಸಂದರ್ಭದಲ್ಲಿ ಸ್ವಲ್ಪ ಹೆಚ್ಚೇ ಆಹಾರ ತಯಾರಿಸುವುದು ರೂಢಿ. ಹೀಗಾದಾಗ ಸಿದ್ಧಪಡಿಸಿದ ಆಹಾರ ಮಿಗುವ ಸಂಭವವೇ ಹೆಚ್ಚು. ಆ ಮೂಲಕ ಅದು ತ್ಯಾಜ್ಯವಾಗುತ್ತದೆ. ಇದನ್ನು ತಡೆಯಬೇಕೆಂದರೆ ಆಹಾರ ಬಳಕೆಯ ಅರಿವನ್ನು ಶಿಕ್ಷಣದ ಭಾಗವಾಗಿ ನಮ್ಮ ಪೀಳಿಗೆಯಲ್ಲಿ ತುಂಬಬೇಕಿದೆ.
ಪುಸ್ತಕ:
No comments:
Post a Comment