Monday, 24 January 2022

ಕುವೆಂಪು ಮತ್ತು ಅಧ್ಯಾತ್ಮ

 ಕುವೆಂಪು ಮೂಲತಃ ಒಬ್ಬ ಕವಿ, ಶ್ರೇಷ್ಠ ಕವಿ. “ನಾನೃಷಿಃ ಕುರುತೇ ಕಾವ್ಯಂ” ಎಂಬ ಮಾತಿದೆ. ಋಷಿ ಎಂಬುದಕ್ಕೆ ದ್ರಷ್ಟಾರ ಎಂಬ ಅರ್ಥವಿದೆ. ಅಧ್ಯಾತ್ಮದ ಒಂದು ಮಜಲನ್ನು ದಾಟದಿದ್ದರೆ ದ್ರಷ್ಟಾರನಾಗುವುದು ಸಾಧ್ಯವಿಲ್ಲ. ಅಧ್ಯಾತ್ಮ ಎಂದರೆ ‘Immediate feeling of unity of the self with God’ ಎಂಬ ವ್ಯಾಖ್ಯೆಯನ್ನು ನೀಡಲಾಗಿದೆ. ದೇವರದೊಂದಿಗಿನ ಆತ್ಮದ ಐಕ್ಯವೇ ಅಧ್ಯಾತ್ಮ. ಕಾಯಕ, ನಿಸರ್ಗ, ಅಣುಜೀವ ಪ್ರೇಮ, ಹೀಗೆ ಯಾವುದೇ ಶಾಶ್ವತ ಮೌಲ್ಯವೂ ದೇವರಾಗಬಹುದು. ಇವು ವ್ಯಕ್ತಿಯಲ್ಲಿ ಲೀನವಾಗುವ ಬಗ್ಗೆ ಅಧ್ಯಾತ್ಮದ ಹಂತಕ್ಕೆ ಒಯ್ಯುತ್ತದೆ.

ತೀವ್ರ ವಿಚಾರವಾದಿ, ಅಧ್ಯಾತ್ಮವಾದಿ, ಅಧ್ಯಾತ್ಮ ಜೀವಿಯಾದ ಕುವೆಂಪು ಸುಲಭಗ್ರಾಹ್ಯರಲ್ಲ. ಅವರು ವಿಚಾರವಾದಿ ನಿಜ, ಆದರೆ ಕೇವಲ ಭೌತವಾದಿಯಲ್ಲ. ಅಧ್ಯಾತ್ಮವಾದಿ ನಿಜ, ಆದರೆ ಕರ್ಮಠರಲ್ಲ. ಅಧ್ಯಾತ್ಮ ಜೀವಿ ನಿಜ, ಆದರೆ ಸಂನ್ಯಾಸಿಯಲ್ಲ. ನಿರಂಕುಶಮತಿಗಾಗಿ ಅವರು ನೀಡುವ ಕರೆ, ಆತ್ಮಶ್ರೀಗಾಗಿಯೇ ವಿನಾ ಭೌತಿಕ ರುಚಿಗಳ ಆರೈಕೆ, ಪೂರೈಕೆಗಳಿಗಾಗಿ ಅಲ್ಲ.

ಯಾವುದೇ ಅಧ್ಯಾತ್ಮ ತತ್ತ್ವದ ಅಂತಿಮ ಬಿಂದು ವ್ಯಕ್ತಿ ನಿಷ್ಠತೆ, ವ್ಯಕ್ತಿ ಉದ್ಧಾರ. ಸಮೂಹವನ್ನು ಇಡಿಯಾಗಿ ಉದ್ಧರಿಸುವ ಆಧ್ಯಾತ್ಮಿಕ ಸೂತ್ರ ಇಲ್ಲವೇ ಇಲ್ಲ. ಭಗವದ್ಗೀತೆಯಲ್ಲಿ ಹೇಳುವ “ಉದ್ಧರೇದಾತ್ಮನಾತ್ಮನಂ” ಎಂಬ ಮಾತು ಅಕ್ಷರಶಃ ನಿಜ. ವ್ಯಕ್ತಿ ಸ್ವತಃ ಉದ್ಧಾರವಾಗಬೇಕು. ವ್ಯಕ್ತಿ ವ್ಯಕ್ತಿಗಳು ಕೂಡಿ ಒಂದು ಸಮಾಜ. ವ್ಯಕ್ತಿಗಳ ಉದ್ಧಾರವೇ ಸಮಾಜದ ಉದ್ಧಾರ. ಕುವೆಂಪು ಅವರ ಕಾವ್ಯ, ಸಾಹಿತ್ಯ ಸೃಷ್ಟಿಯ ಮುಖ್ಯ ಸೂತ್ರವೂ ವ್ಯಕ್ತಿಯ ಆತ್ಮ ಸ್ವಾತಂತ್ರ್ಯಕ್ಕಾಗಿ ತುಡಿಯುವುದೇ ಆಗಿದೆ. ನಮ್ಮ ಉದ್ಧಾರಕ್ಕಾಗಿ ಯಾರೋ ಒಬ್ಬರು ದುಡಿಯುತ್ತಾರೆ ಎಂದು ಬಯಸುವಂತಿಲ್ಲ. ಎಲ್ಲರೂ ದುಡಿಯುತ್ತಲೇ ಅವರವರ ಹಾದಿಯಲ್ಲಿ ನಡೆದು, ಉದ್ಧಾರ ಕಂಡುಕೊಳ್ಳಬೇಕೆಂಬುದು ಅವರ ಕಾಣ್ಕೆ. ಹಾಗಾಗಿಯೇ ಅವರ ಸಾಹಿತ್ಯ ಸರ್ವಸ್ವದ ಸಾರವೇ ಆಗಿರುವ ಸಪ್ತ ಸೂತ್ರಗಳಲ್ಲಿ, “ಮತ ತೊಲಗಿ ಅಧ್ಯಾತ್ಮ ಮಾತ್ರ ವೈಜ್ಞಾನಿಕ ತತ್ತ್ವವಾಗಿ ಮಾನ್ಯತೆ ಪಡೆಯಬೇಕು ಹಾಗೂ ಯಾವ ಒಂದು ಗ್ರಂಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾಗುವ ಎಲ್ಲವನ್ನೂ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ಪಡೆಯಬೇಕು” ಎಂದಿದ್ದಾರೆ.

ಅಧ್ಯಾತ್ಮವೆಂದರೆ ವೈಚಾರಿಕತೆಗೆ ವಿರುದ್ಧವಾದುದೆಂದು ಸಾಮಾನ್ಯವಾಗಿ ತಿಳಿಯಲಾಗುತ್ತದೆ. ಆಧ್ಯಾತ್ಮಿಕತೆಯನ್ನು ವಿರೋಧಿಸುವಿಕೆಯೇ ವಿಚಾರವಾದವೆಂದು ಬಗೆಯಲಾಗುತ್ತದೆ. ಆದರೆ ವಿಚಾರ-ತರ್ಕಗಳಿಗೆ ಮೀರಿದ ನಿತ್ಯ ಸತ್ಯಗಳು ಎದುರಾದಾಗ ಇಂಥ ತಿಳುವಳಿಕೆ ತಬ್ಬಿಬ್ಬಾಗುತ್ತದೆ. ಆದರೆ ಕುವೆಂಪು ಅವರು ವಿಚಾರವಾದಿಗಳು ಹೌದಾದರೂ ಅವರು ಆಧ್ಯಾತ್ಮಿಕ ಶ್ರದ್ಧಾಳು, ಅವರೊಬ್ಬ ಅನುಭಾವಿ. ಆದುದರಿಂದಲೇ ಅವರ ವಿಚಾರಗಳಲ್ಲಿ ಗೊಂದಲವಿಲ್ಲ. ಧರ್ಮ, ಸಂಪ್ರದಾಯ-ವೈಚಾರಿಕತೆಗಳಲ್ಲಿ ಅವರಿಗೆ ಯಾವ ದ್ವಂದ್ವ ನಿಲುವೂ ಗೋಚರಿಸುವುದಿಲ್ಲ. ಪರಂಪರೆಯ ಭವ್ಯತೆ, ಉಜ್ವಲತೆಯನ್ನು ಎತ್ತಿ ಹಿಡಿಯುವ ಅವರು ಅದರ ಮೇಲೆ ಮುಸುಕಿದ ಮೌಢ್ಯದ ಮಂಜನ್ನು ಕರಗಿಸುವ ಪ್ರಭೆಯಾಗಿ ಬೆಳಗುತ್ತಾರೆ. ಕುವೆಂಪು ಅವರು ಭಾರತೀಯ ಸಮಾಜದ ಜಾತಿ ಪದ್ಧತಿ, ವರ್ಣಾಶ್ರಮ ಧರ್ಮವನ್ನು ಉಗ್ರವಾಗಿ ಖಂಡಿಸುವಂತೆ, ಈ ಅರ್ಥಹೀನ ಪೊರೆಗಳ ಆಚೆ ಇರುವ ಶಾಶ್ವತ ಮೌಲ್ಯಗಳನ್ನು ಸ್ವಾನುಭಾವವಾಗಿ ಮಾಡಿಕೊಳ್ಳುತ್ತಾರೆ. ಮತ, ಜಾತಿಗಳಿಂದಲೂ ಧರ್ಮ ಬೇರೆಯಾದುದು. ಅಧ್ಯಾತ್ಮ ಇವೆಲ್ಲವನ್ನು ಮೀರಿದ್ದು ಎಂಬ ಸತ್ಯ ಅವರಿಗೆ ಸ್ಪಷ್ಟವಾಗಿದೆ. ಇದೆಲ್ಲ ಅರ್ಥವಾಗದ ಭೌತ ವಿಚಾರವಾದಿ ಅವರನ್ನು ಅನುಮಾನಿಸಬಹುದು; ಶ್ರದ್ಧಾವಂತ ಅವರನ್ನು ಖಂಡಿಸಬಹುದು; ಇವರಿಬ್ಬರ ನಡುವೆ ಕುವೆಂಪು ಇದ್ದಾರೆ. ಕೆಲವು ಕಾರಣಗಳಿಗಾಗಿ ಕುವೆಂಪು ಅವರಲ್ಲಿ ಕೇವಲ ವಿಚಾರವಾದವನ್ನು ಮಾತ್ರ ಹುಡುಕುವವರು ಅಥವಾ ಅವರಲ್ಲಿ ಕೇವಲ ಸಂಪ್ರದಾಯ ವಿರೋಧಿತ್ವವಿದೆ ಎಂದು ಭಾವುಕ ದೃಷ್ಟಿಯಲ್ಲಿ ನೋಡುವವರು – ಈ ಎರಡು ಬಗೆಯ ಓದುಗರು ಅವರ ಸಾಹಿತ್ಯಕ್ಕೆ ಅಪಾಯಕಾರಿಗಳು. ಇಂಥವರಿಂದ ಅವರ ಸಾಹಿತ್ಯ ಅಸಡ್ಡೆಗೆ ಒಳಗಾದುದೇ ಹೆಚ್ಚು. ಕುವೆಂಪು ಅವರನ್ನು ಯಾವುದೇ ಪೂರ್ವ ನಿಶ್ಚಿತ ಅಪೇಕ್ಷೆ, ಗ್ರಹಿಕೆಗಳಿಲ್ಲದೇ ಓದಿದರೆ ಅವರ ದರ್ಶನ ಅಪೂರ್ವವೆನಿಸುತ್ತದೆ. ಆರಾಧನೆ ಅಥವಾ ನಿರಾಕರಣೆಗಳಿಗೆ ಹೊರತಾದ ಸ್ಥಿತಿಪ್ರಜ್ಞ, ನಿಷ್ಕಲ್ಮಷ ಓದುಗನೊಡನೆ ಅವರ ಸಾಹಿತ್ಯ, ಸಂವಾದ ನಡೆಸುವ ಪರಿಯೇ ಅನನ್ಯ.

ಕುವೆಂಪು ಅವರನ್ನು ಓದುವ ಮುಂಚೆ ಕೆಲವು ಪೂರ್ವ ತಯಾರಿಗಳು, ಅದರಲ್ಲೂ ಸ್ವಲ್ಪ ತತ್ವಜ್ಞಾನದ ಅರಿವು ಅತ್ಯಗತ್ಯ. ಕುವೆಂಪು ಯಾವುದೇ ತತ್ತ್ವ ಸಿದ್ಧಾಂತಗಳನ್ನು ಹುಟ್ಟಿನಿಂದ ಬಳುವಳಿ ಪಡೆದವರಲ್ಲ. ಅಗಾಧವಾದ ಓದು ಹಾಗೂ ಅನುಭವದ ಮೂಸೆಯಲ್ಲಿ ಅದನ್ನು ಹಿಡಿದು ನೋಡಿದ ಕಾರಣ ಅವರಿಗೆ ಅವರದೇ ಆದ ದರ್ಶನ ದ್ವಾರ ತೆರೆದುಕೊಂಡಿತು. ಸ್ವಯಾರ್ಜಿತ ಓದು ಮತ್ತು ಸ್ವಾನುಭವಗಳ ಸಂಗಮ ಅವರಲ್ಲಿದೆ. ರಾಮಕೃಷ್ಣ ಪರಮಹಂಸರ ಸಿದ್ಧಿ, ಸ್ವಾಮಿ ವಿವೇಕಾನಂದರ ಬುದ್ಧಿ, ಶ್ರೀ ಅರವಿಂದರ ಪೂರ್ಣ ದೃಷ್ಟಿ ಹಾಗೂ ಗಾಂಧೀಜಿಯವರ ಸರ್ವೋದಯ ಸೂತ್ರಗಳನ್ನು ಮೇಳೈಸಿಕೊಂಡ ವಿಶಿಷ್ಟ ಪ್ರತಿಭೆ ಅದು. ಹಾಗಾಗಿ ಕುವೆಂಪು ಅವರನ್ನು ರೊಮ್ಯಾಂಟಿಕ್ ಕವಿ, ನಿಸರ್ಗ ಕವಿ, ತೀವ್ರ ವಿಚಾರವಾದಿ, ವಿಚಾರ ಶೀಲ ಸಂಪ್ರದಾಯವಾದಿ, ವಾಸ್ತವವಾದಿ, ಅಧ್ಯಾತ್ಮವಾದಿ ಎಂದು ಮುಂತಾಗಿ ಪ್ರಪ್ರತ್ಯೇಕವಾಗಿ ಕರೆಯುವಂತಿಲ್ಲ.

ಕುವೆಂಪು ಅವರ ಕವಿತೆಗಳಲ್ಲಿ ಆದರ್ಶೀಕೃತ ಮಾನವನಿದ್ದರೆ, ಕಥೆ – ಕಾದಂಬರಿಗಳಲ್ಲಿ ಮಾನವ ಸ್ವಭಾವ – ಅನುಭವಗಳ ನಿಷ್ಠುರ ಚಿತ್ರಣವಿದೆ. ಕುವೆಂಪು ಅವರು ನಿಸರ್ಗದ ಶಿಶು. ಪ್ರಕೃತಿಯ ಮಾಯೆ, ಭವ್ಯತೆ, ರುದ್ರ ರಮಣೀಯತೆ ಅವರನ್ನು ಕಾಡಿದ ಬಗೆ ಹಲವು. ಅವರ ಆಧ್ಯಾತ್ಮಿಕ ನಿಲುವು ನಿಸರ್ಗದಷ್ಟೇ ಸರಳ, ಸಂಕೀರ್ಣ ಮತ್ತು ನಿಚ್ಚಳ, ಸಾಮಾನ್ಯ ತಾತ್ತ್ವಿಕರಿಗೆ ಪ್ರಕರತಿ ಜಡವಾದುದಾಗಿ ಕಂಡರೆ, ಅದು ಕುವೆಂಪು ಅವರಿಗೆ ‘ಜಡವೆಂಬುದಲ್ಲ ಚೇತನದ ನಟನೆಯ ಲೀಲೆ’ಯಾಗಿ ಕಾಣುತ್ತದೆ.

ಭಗವದ್ಗೀತೆಯ ಕರ್ಮಯೋಗದ ಸಾರ ಅವರ ಕೃತಿಗಳಲ್ಲಿ ಕಾಣಿಸುತ್ತದೆ. ಜೀವ ಪ್ರೇಮ, ಜೀವ ಗೌರವ ಅಲ್ಲಿ ಢಾಳಾಗಿ ಕಾಣುತ್ತದೆ. ಆದುದರಿಂದಲೇ ಅವರು ‘ಜೀವ ರಥೋತ್ಸವವಿದನಣಕಿಸದಿರು ಎಲೈ ಸಂನ್ಯಾಸಿ’ ಅನ್ನುತ್ತಾರೆ. ಪ್ರಕೃತಿ - ಪುರುಷರಲ್ಲಿ, ಜೀವ ಜಗತ್ತಿನ ಆಗುಹೋಗುಗಳಲ್ಲಿ ಕರ್ಮ ವ್ಯಾಪಾರವಿದೆ ಎಂಬುದರ ಅವರ ನಂಬಿಕೆ. ಬೆರಳ್‍ಗೆ ಕೊರಳ್ ನಾಟಕದಲ್ಲಿ ‘ಕರ್ಮದ ಪಾಂಗು, ಮರಿಗೆ ಮರಿ, ಮರಿಗೆ ಮರಿ, ಬೆರಳ್‍ಗೆ ಕೊರಳ್’ ಅನ್ನುತ್ತಾರೆ. ಏಕಲವ್ಯನ ಬೆರಳು ಕೇಳಬೇಕಾದ ಧರ್ಮಸಂಕಟ ದ್ರೋಣನನ್ನು ಕಾಡುತ್ತದೆ. ಆತ, ‘ಕೂಳ್ ಮಿಣಿಯ ಪಿಡದಿರ್ಪುದಾ ಬದಿಯ ಕಯ್ | ನೂಂಕುತಿಹುದನಿಬರಂ ತನ್ನ ಲೀಲಾರ್ಥಂ, ಅಂತಲ್ಲದಿರೆ, ನಮ್ಮ ನೆತ್ತಲಿಂದಲೊ ಕರೆದು ಒಯ್ದು ತಂದೀನೃಪಾಲರೂಳಿಗಕೆ ತಳ್ಳು ತಿರ್ದುದೆ ಈಶ್ವರೇಚ್ಛಾರೂಪದೆಮ್ಮ ಕರ್ಮ ಪಾಶಂ” ಎಂದು ಹಳಹಳಿಸುತ್ತಾನೆ. 

ಜನ್ಮಾಂತರ ಪರಿಕಲ್ಪನೆಯನ್ನು ಕುವೆಂಪು ನಿರಾಕರಿಸುವುದಿಲ್ಲ. ಅವರ ‘ಯಾವ ಜನ್ಮದ ಮೈತ್ರಿ’ ಸಾಲುಗಳಲ್ಲಿ, ಬೆರಳ್‍ಗೆ ಕೊರಳ್ ನಾಟಕದಲ್ಲಿ ದ್ರೋಣರು ಅರ್ಜುನನ ಹೆಸರಾಸೆಯನ್ನು ಹೆಕ್ಕುತ್ತ, “ಈ ಜನ್ಮದೊಳ್ ಈ ಪೆಸರ್ : ಮರುವುಟ್ಟೊಳಿನ್ನೊಂದು ಪೆಸರ್, ಭರತ ಖಂಡದೊಳಿಂದು ದ್ರೋಣನ್ ! ಬರ್ಪ ಜನ್ಮದೊಳಾವ ದೇಶದೊಳ್ ಅದಾವ ಪೆಸರೊ” ಎಂದು ಹೇಳಿರುವಲ್ಲಿ, ಶ್ರೀ ರಾಮಾಯಣದರ್ಶನಂ ಕಾವ್ಯದಲ್ಲಿ ರಾವಣ-ಕುಂಭಕರ್ಣರು ಈ ಜನ್ಮದಲ್ಲಿ ಗೆಲ್ಲಲಾಗದ ರಾಮನನ್ನು ಲವ-ಕುಶರಾಗಿ ಮುಂದಿನ ಜನ್ಮದಲ್ಲಿ ಗೆಲ್ಲುವುದು, ಸೀತೆಯ ಪ್ರೇಮವನ್ನು ಶಿಶುಗಳಾಗಿ ಪಡೆಯುವುದು ಚಿತ್ರಿತಗೊಂಡಿರುವಲ್ಲಿ ಕುವೆಂಪು ಅವರ ಜನ್ಮಾಂತರ ಪರಿಕಲ್ಪನೆ ಗೋಚರಿಸುತ್ತದೆ. 

ಶ್ರೀ ಅರವಿಂದರ 'All life is Yoga’ ಎಂಬ ಮಾತು ಕುವೆಂಪು ಅವರಲ್ಲಿ ಅಖಂಡವಾಗಿದೆ. ನಿಷ್ಕಾಮ ಕರ್ಮಗಳೆಲ್ಲವೂ ಯೋಗವೇ ಎಂಬುದು ಅವರ ‘ಉಳುವಾ ಯೋಗಿಯ ನೋಡಲ್ಲಿ’ ಕವಿತೆಯಲ್ಲಿ ಒಡಮೂಡಿರುವುದನ್ನು ಗುರುತಿಸಬಹುದು. ವ್ಯಕ್ತಿಯ ಯೌಗಿಕ ಸ್ಥಿತಿಯ ಬಗ್ಗೆ ‘ವಿಭೂತಿ ಪೂಜೆ’ಯಲ್ಲಿ ಅವರು ವಿವರಿಸಿದ್ದಾರೆ. “ಸಚ್ಚಿದಾನಂದ ಲೀಲಾರ್ಥವಾಗಿ ಮಾಯೆಗವತರಿಸಿದ ಜೀವ, ತನ್ನ ಸ್ವಸ್ಥಾನ ಸಂಸ್ಥಾಪನ ಸಾಧನೆಯಲ್ಲಿ ತೊಡಗುತ್ತದೆ - ಸ್ವಾಭಾವಿಕವಾಗಿ, ಪ್ರಕೃತಿ ಸಿದ್ಧವಾಗಿ. ಆ ಸಾಧನೆ ಬೇರೆ ಬೇರೆಯ ಕೋಶಗಳಲ್ಲಿ ಆಯಾ ಕೋಶಗಳಿಗೆ ಅನುಗುಣವಾದ ರೀತಿಗಳಲ್ಲಿ, ರೂಪಗಳಲ್ಲಿ ಸಾಗುತ್ತದೆ. ಅದು ಅನ್ನಮಯದಲ್ಲಿ ವಿಕಾಸಗೊಳ್ಳುವಾಗ ನಿದ್ರಿತವೆಂಬಂತೆ ಸಾಗುತ್ತದೆ. ಪ್ರಾಣಮಯದಲ್ಲಿ ಸ್ವಪ್ನಮಯವೆಂಬಂತೆ, ಮನೋಮಯದಲ್ಲಿ ಜಾಗೃತವಾಗಿ, ಪ್ರಜ್ಞಾಪೂರ್ವಕವಾಗಿ, ಸ್ವ-ಸ್ವಪ್ರಯತ್ನಶೀಲವಾಗಿ, ತನ್ನರಿವಿಗೆ ತಾನೇ ವಿಷಯವಾಗಿ, ಆರಾಧ್ಯವಾಗಿ, ಆದರ್ಶವಾಗಿ, ಕರೆಯಾಗಿ, ಕೋರಿಕೆಯಾಗಿ, ಪ್ರಿಯವಾಗಿ, ಪೂಜ್ಯವಾಗಿ ಗೋಚರವಾಗುತ್ತದೆ. ಹಾಗೆಯೇ ತಾನಿರುವ ಮಟ್ಟಕ್ಕೆ ಆ ಮೇಲಿರುವ ಮಟ್ಟ ವಿಭೂತಿ ಸ್ಥಾನವಾಗಿ ಪರಿಣಮಿಸುತ್ತದೆ” (ಪುಟ.2). ವ್ಯಕ್ತಿಯು ತನ್ನ ಮುಕ್ತಿಯನ್ನು ತನ್ನ ಜೀವಿತೋದ್ದೇಶದ ಮೂಲಕವೇ ಸಾಧಿಸಿಕೊಳ್ಳಬೇಕೆಂಬ ಕಾಣ್ಕೆಯನ್ನು ತೋರಿಸುವ ಆಂಜನೇಯನ ಪರ್ವತ ಯಾತ್ರೆಯ ಸಂದರ್ಭದಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಈ ಯೌಗಿಕ ದರ್ಶನವನ್ನು ಅವರು ಮಾಡಿಸಿದ್ದಾರೆ.

ಕುವೆಂಪು ಅವರ ದಾಂಪತ್ಯ ಗೀತೆಗಳಲ್ಲಿಯೂ ಸಂಕೀರ್ಣವಾದ ಅಧ್ಯಾತ್ಮದ ಎಳೆಯಿದೆ. ವಾಸ್ತವ ಬದುಕಿನ ಚಿತ್ರಣ ನೀಡುವ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಅತೀಂದ್ರಿಯ ಜಗತ್ತಿನ ಹೊಳಹುಗಳಿವೆ. ಗಡ್ಡದಯ್ಯ ಅದರ ಪ್ರತಿನಿಧಿಯಾಗಿದ್ದಾನೆ. ಇಲ್ಲಿನ ಯಾವ ಪಾತ್ರವೂ ತಾನು ವಿಶೇಷವಾದುದಾಗಬೇಕೆಂದು ತುಡಿಯುವುದಿಲ್ಲ. ಇದ್ದುದನ್ನು ಇರುವ ಹಾಗೆ ನೇರವಾಗಿ ಅವು ಅನುಭವಿಸುತ್ತವೆ. ಕುವೆಂಪು ಅವರ ಕಾವ್ಯಧೋರಣೆ ಆಧ್ಯಾತ್ಮಿಕ ನೆಲೆಯುಳ್ಳದ್ದು. ಅವರ ದೃಷ್ಟಿಯಲ್ಲಿ ಆತ್ಮಸಂಸ್ಕಾರ ಹಾಗೂ ಸಾಕ್ಷಾತ್ಕಾರಗಳಿಗಾಗಿ ಕಾವ್ಯ ಕಲೆ ಇದೆ. ಜೀವನದ ಉನ್ನತಿಗೆ ಅದೊಂದು ಸಾಧನ. ಹಾಗಾಗಿಯೇ ಅವರು –

“ನನ್ನ ಕೃತಿ ಕಲೆಯಲ್ಲ

ನಾನು ಕವಿಯಲ್ಲ

ಕಲೆಗಾಗಿ ಕಲೆಯೆಂಬ

ಹೊಳ್ಳು ನೆಲೆಯಿಲ್ಲ

ಸಾಧನೆಯ ಛಾಯೆ ಕಲೆ

ವಿಶ್ವಾತ್ಮವದಕೆ ನೆಲೆ

ನಿನಗದು ಚಮತ್ಕಾರ

ನನಗೊ ಸಾಕ್ಷಾತ್ಕಾರ!” ಎಂದಿದ್ದಾರೆ. 

ಕುವೆಂಪು ಕಾವ್ಯದ ಬಹುಭಾಗ ಅಧ್ಯಾತ್ಮದ ಹೊಳಹಿನಿಂದ ತುಂಬಿದೆ. ಅವರ ಕಾವ್ಯದಲ್ಲಿ ಭಕ್ತಿ, ಶ್ರದ್ಧೆ, ಸಮರ್ಪಣೆ, ಶರಣಾಗತಿಗಳ ಭಾವಗಳಿವೆ.

‘ತನುವು ನಿನ್ನದು ಮನವು ನಿನ್ನದು

ಎನ್ನ ಜೀವನ ಧನವು ನಿನ್ನದು

ನಾನು ನಿನ್ನವನೆಂಬ ಹೆಮ್ಮೆಯ

ಋಣವು ಮಾತ್ರವೆ ನನ್ನದು ! ಎಂಬ ಸಾಲುಗಳಲ್ಲಿ 

ಅಥವಾ,

‘ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ

ಇನ್ನಾದರೂ ನನ್ನ ಕೈ ಬಿಡದಿರು

ಅಂದಿನಂತೆಯೆ ಇಂದು ನಾನೊಂದು ಶಿಶು ಎಂದು

ಎಂದಿಗೂ ಕೈ ಬಿಡದೆ ಸಲಹೈ ಗುರೂ |’ ಎಂಬ ಮಾತುಗಳಲ್ಲಿನ ಸಮರ್ಪಣೆ,

ಶರಣಾಗತಿಯ ಭಾವಗಳನ್ನು ಸ್ಪಷ್ಟವಾಗಿ ಗುರುತಿಸಬಹುದು.

ವಿಶ್ವ ವ್ಯಾಪಾರದ ಅನಂತತೆಗೆ ಕುವೆಂಪು ಬೆರಗಾಗಿದ್ದಾರೆ. ಜೀವಾತ್ಮ ತನ್ನನ್ನು ಅಳಿಸಿಕೊಂಡು ಪೂರ್ಣವಾಗುವ ಪರಿ ‘ಆಕ್ರಮಿಸು’ ಕವನದಲ್ಲಿದೆ. ‘ಆಕ್ರಮಿಸು ಬಂದೆನ್ನ ಅಲ್ಪತ್ವಮಂ, ಓ ಅನಂತ’ ಎಂದು ಆಹ್ವಾನಿಸುತ್ತಾರೆ. ‘ಕವಿಶೈಲದಲ್ಲಿ ಸಂಧ್ಯೆ’ ಕವಿತೆಯಲ್ಲಿ.

‘ಮನವೇ, ಧ್ಯಾನದಿ ಮುಳುಗು ನಿಧಾನದಿ

ನುಂಗಲಿ ನಿನ್ನನು ತಪಃ ಸುಷುಪ್ತಿ

ಅನಂತ ತೃಪ್ತಿ’ ಎಂದಿದ್ದಾರೆ. ಜೀವಾತ್ಮದ ಮಹತ್ತು ಎಲ್ಲರಲ್ಲೂ ಒಂದೇ. ವ್ಯಕ್ತಿಗೆ ಕೀಳರಿಮೆ ಸಲ್ಲದು. ಅನಂತತೆಯ ಪ್ರಜ್ಞೆ ಅಲ್ಪವನ್ನೂ ಭವ್ಯವನ್ನಾಗಿ ಮಾಡುತ್ತದೆ. ಈ ಆಶಯ ‘ಮಂತ್ರಾಕ್ಷತೆ’ ಕವಿತೆಯಲ್ಲಿದೆ.

‘ಅಲ್ಪ ನಾನು ಎಂದು ಕುಗ್ಗಿ

ಮುದುಗ ಬೇಡವೊ

ಓ ಅಲ್ಲವೆ,

ಅನಂತದಿಂದ ಗುಣಿಸಿಕೊ

ನೀನ್ ಅನಂತವಾಗುವೆ!’ ಎಂಬ ಮಾತನ್ನು ಇಲ್ಲಿ ಲಕ್ಷಿಸಬಹುದು.

‘ಜನ್ಮೋತ್ಸವ’ ಕವಿತೆಯಲ್ಲಿನ – 

ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ

ನಿತ್ಯವೂ ಅವತರಿಪ ಸತ್ಯಾವತಾರ’ ಎಂಬ ಸಾಲುಗಳೂ ಇದೇ ಆಶಯವನ್ನು ಹೊಂದಿವೆ. ಪ್ರಕೃತಿ ಒಂದು ವಿಸ್ಮಯ. “ಪ್ರಕೃತಿಯಾರಾಧನೆಯ ಪರಮನಾರಾಧನೆ. ಪ್ರಕೃತಿಯೊಲ್ಮೆಯೆ ಮುಕ್ತಿಯಾನಂದ ಸಾಧನೆ” ಎಂಬುದು ಅವರ ನಿಲುವು. ಪ್ರಕೃತಿ ಅಭೇದ್ಯವಾದುದಾದರೂ ಅಲ್ಲಿ ಅಭೇದವಿದೆ. ಹಾಗಾಗಿಯೇ “ಶರತ್ಕಾಲದ ಸೂರ್ಯೋದಯದಲಿ” ಎಂಬ ಕವನದಲ್ಲಿ –

‘ಕಲ್ಲಲಿ, ಮಣ್ಣಲಿ, ಹುಲ್ಲಲಿ, ಹುಡಿಯಲಿ

ನೀರಿನ ಹನಿಯಲಿ ಬೆಂಕಿಯ ಕಿಡಿಯಲಿ

ನನ್ನಲಿ - ಎಲ್ಲಿಯೂ ಚೈತನ್ಯ ! ಅನ್ನುತ್ತಾರೆ. ಇಲ್ಲಿರುವ ಸಮೀಕರಣ ದೃಷ್ಟಿಯನ್ನು ಗುರುತಿಸಬೇಕು. ಕುವೆಂಪು ಅವರ ಆಧ್ಯಾತ್ಮಿಕ ದೃಷ್ಟಿ ಸಂಬಂಧವಾದ ಒಂದು ಕವನ ಸಂಕಲನ ‘ಅಗ್ನಿಹಂಸ’. ಇದನ್ನು ಕುರಿತು “ಅಗ್ನಿಹಂಸ’ ಎನ್ನುವುದು ಕುವೆಂಪು ಅವರ ವ್ಯಕ್ತಿತ್ವದ ಆಧ್ಯಾತ್ಮಿಕ, ಅನುಭಾವಿಕ ಮುಖವನ್ನು ಸಂಕೇತಿಸುವ ಮಾತು. ಹಂಸ ಆತ್ಮದ ಪ್ರತೀಕವೆಂದು ಪ್ರಸಿದ್ಧವೇ; ಅದು ಕುವೆಂಪು ಅವರಲ್ಲಿ ಕವಿತೆಯ ಸಂಸರ್ಗವನ್ನು ಪಡೆದು ಅಗ್ನಿಹಂಸವಾಗಿದೆ” ಎಂದು ಸಿ.ಪಿ.ಕೆ.ಯವರು ಸಮಂಜಸವಾಗಿ ಗುರುತಿಸಿದ್ದಾರೆ.

ಅಧ್ಯಾತ್ಮ ಜೀವಿಯಾದ ಕುವೆಂಪು, ವಾಸ್ತವ ಬದುಕಿನ ಕರ್ತವ್ಯ ಪ್ರಜ್ಞೆಯಿಂದ ಪಲಾಯನ ಮಾಡುವ ಸಂನ್ಯಾಸಿಯಾಗುವುದಿಲ್ಲ. ಯಾವ ಯಾವ ಸಂದರ್ಭಗಳಲ್ಲಿ ಆತ್ಮಘಾತುಕ ಪರಿಸ್ಥಿತಿ ಉಂಟಾಗುತ್ತದೆಯೋ ಅಂಥ ಕಡೆ ಧ್ಯಾನ ತಪಸ್ಸುಗಳ ಭಂಗಿ ಭಂಡತನವಾಗುತ್ತದೆ. ಕರ್ತವ್ಯ ಪಾರಾಯಣವೇ ಆ ಕ್ಷಣದ ತಪಸ್ಸು. ಇದಕ್ಕೊಂದು ಸನ್ನಿವೇಶವನ್ನು ಅವರು ‘ಧ್ರಾಂಧ್ರೀಂಧ್ರೂಂ’ ಕವಿತೆಯಲ್ಲಿ ನಿದರ್ಶನವಾಗಿ ನೀಡಿದ್ದಾರೆ. ಪರಕೀಯರ ಆಕ್ರಮಣ, ಸನಾತನ ಪರಂಪರೆಯ ಮೇಲೆ ನಡೆಯುತ್ತಿದ್ದಾಗ ಜಪ ಮಾಡುತ್ತ ನಿಂತವರು ಅಸಂಖ್ಯ ಜನ. ದಾಳಿ ಮಾಡಿದವರು ಬೆರಳಣಿಕೆ ಜನ. ಜಪ ಮಾಡುತ್ತಿದ್ದ ಜನರ ನಿಜವಾದ ತಪಸ್ಸು, ಆಗ ಕರ್ತವ್ಯಕ್ಕಾಗಿ ಹೋರಾಡುವುದು ಆಗಬೇಕಾಗಿತ್ತು. ಹೀಗಾಗಲಿಲ್ಲ. ಜಪ ಮಾಡಿದರೂ ಲೂಟಿ ಆಗಿ ಹೋಯಿತೆಂಬುದು ಮೌಢ್ಯದ ಪರಮಾವಧಿ. ಸ್ವಂತಿಕೆ, ಸ್ವಧರ್ಮ, ಸ್ವಾತಂತ್ರ್ಯಗಳಿಗೆ ಧಕ್ಕೆ ಒದಗಿದಾಗ ಕೈಕಟ್ಟಿ ಕೂತು ಧ್ಯಾನ ಮಾಡಬೇಕೆಂದು ಯಾವ ಧರ್ಮವೂ ಬೋಧಿಸಿಲ್ಲ. ಗೀತೆಯಲ್ಲಿ ಶ್ರೀಕೃಷ್ಣ ಎಷ್ಟೇ ಉಪದೇಶ ಮಾಡಿದರೂ ಯುದ್ಧ ಕ್ರಿಯೆಯಿಂದ ಹಿಂದೆ ಸರಿಯುವಂತೆ ಮಾಡುವುದು ಅದರ ಉದ್ದೇಶವಲ್ಲ ಎಂಬುದನ್ನು ಮನಗಾಣಬೇಕು. ಈ ಸತ್ಯವನ್ನು ಕುವೆಂಪು ದರ್ಶಿಸಿದಾರೆ. ಇಂಥ ಸಂದರ್ಭಗಳಲ್ಲಿ ಅವರು ಸನಾತನ ಮೌಢ್ಯಗಳ ಮೇಲೆ ಗದಾಪ್ರಹಾರ ಮಾಡುತ್ತಾರೆ. ಆದರೆ ಅದೇ ಸಂದರ್ಭದಲ್ಲಿ ಶಾಶ್ವತಾಂಶಗಳನ್ನು ಉಳಿಸುವ ಕಾಳಜಿ, ಕಳಕಳಿ, ಅವರ ವಿನೂತನಗೊಳಿಸುವ ಕಲಾಶಕ್ತಿಯಲ್ಲಿ ಅಡಗಿರುತ್ತದೆ.

ಮೇಲ್ನೋಟದಲ್ಲಿ ಗೊಡ್ಡು ಸಂಪ್ರದಾಯ, ಮೌಢ್ಯಗಳ ಮೇಲೆ ಕುವೆಂಪು ಅವರು ತೀವ್ರವಾಗಿ ಮಾಡುವ ದಾಳಿಯನ್ನು ಮಾತ್ರ ಗಮನಿಸುವ ವಿಚಾರವಾದಿಗಳಿಗೆ ಆಂತರ್ಯದ ಕಾಳಜಿ ಕಾಣಿಸುವುದಿಲ್ಲ. ತಲೆಮಾರುಗಳಿಂದ ಹರಿದು ಬಂದು ಜಾಡ್ಯಗಳನ್ನೂ ‘ಪರಂಪರೆ’ ಎಂದು ತಿಳಿದ ತಿಳಿಗೇಡಿ ಕರ್ಮಠರಿಗೆ ಮತ-ಜಾತಿ-ಧರ್ಮಗಳ ಒಳಗಿರುವ ಸಣ್ಣತನವನ್ನು ಅವರು ಖಂಡಿಸುವ ಪರಿ ಅಪಥ್ಯವಾಗುತ್ತದೆ. ‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂದು ಅವರು ಕೇಳಿದ ಮಾತುಗಳು, ‘ಶಾಸ್ತ್ರವನನೇ ಪ್ರಶ್ನಿಸುತ್ತಾರಲ್ಲ’ ಎಂಬ ಕಾರಣಕ್ಕೆ ಕರ್ಮಠರಿಗೆ ಅಹಿತವಾಗುತ್ತದೆ.

‘ಪಂಚಮರ ಶಿಶು ಕೆರೆಯಲ್ಲಿ ಮುಳುಗುವಾಗ ಬ್ರಹ್ಮತ್ವನಾಶದ ಭೀತಿಯಲ್ಲಿ ಅದನ್ನು ಬದುಕಿಸಿದಿದ್ದರೆ ಯಾವ ಶಾಸ್ತ್ರ ತಾನೆ ಒಪ್ಪುತ್ತದೆ?’ ಎಂಬ ಪ್ರಶ್ನೆಯೂ ನುಂಗಲಾರದ ತುತ್ತಾಗುತ್ತದೆ. ಆದರೆ ಅವರು ಚಿತ್ರಿಸುವ ಕಟುವಾದ, ನಿಷ್ಠುರವಾದ ಸಂಗತಿಗಳ ಹಿಂದಿನ ಆಶಯ, ಕಾಳಜಿಗಳು ಎಂದಿಗೂ ಪ್ರಶ್ನಾತೀತವಾದವು ಹಾಗೂ ನಿಜವಾದ ಅಧ್ಯಾತ್ಮ ತಿಳಿದವರು ನಡೆದುಕೊಳ್ಳಬೇಕಾದ ರೀತಿಯವು ಎಂಬುದನ್ನು ಮನಗಾಣಬೇಕು.

ಅಧ್ಯಾತ್ಮವನ್ನು ಜಾತಿ, ಮತ, ಧರ್ಮಗಳ ಬಂಧನದಲ್ಲಿ ಸಾಮಾನ್ಯವಾಗಿ ಕಾಣಲಾಗುತ್ತದೆ. ಇವುಗಳ ಅನುಸರಣೆಯೇ ಅಧ್ಯಾತ್ಮ ಎಂಬ ಭ್ರಮೆಯೂ ಸಾಮಾನ್ಯವಾಗಿದೆ. ಇನ್ನೊಂದು ಜೀವದಲ್ಲಿ ತನ್ನನ್ನು ಕಾಣುವುದು ಅಧ್ಯಾತ್ಮದ ಒಂದು ಸೂತ್ರ. ಇಂದಿನ ದಿನಗಳಲ್ಲಿ ಇನ್ನೊಬ್ಬರ ಬಗ್ಗೆ ಚಿಂತಿಸಲು ಯಾರಿಗೂ ಪುರುಸೋತ್ತಿಲ್ಲ. ಹಾಗಾದರೆ ಮಾಡುತ್ತಿರುವಾದಾದರೂ ಏನು? ತನ್ನ ಜಾತಿ, ಒಳಜಾತಿ, ಪಂಗಡ, ಉಪಪಂಗಡ, ಮತ, ಧರ್ಮ ಯಾವುದು? ಯಾವುದರಲ್ಲಿ ತನ್ನನ್ನು ತಾನು ಗುರುತಿಸಿಕೊಂಡರೆ ಕ್ಷೇಮ ಎಂಬ ಜಿಜ್ಞಾಸೆ ಇದೀಗ ತೀವ್ರವಾಗಿದೆ. ಸಾಮಾಜಿಕ-ಧಾರ್ಮಿಕ ಕಾರಣಗಳ ಸಮಸ್ಯೆಗಳಾಗಿರುವ ಜಾತಿ, ಲಿಂಗ, ಅಸಮಾನತೆ ಮುಂತಾದವುಗಳಿಗೆ ರಾಜಕೀಯ-ಆರ್ಥಿಕ ಹಿನ್ನಲೆಯಲ್ಲಿ ಉತ್ತರ ಹುಡುಕುತ್ತಿರುವುದು ಪ್ರಾಯಃ ಇಂದಿನ ಗೊಂದಲಗಳಿಗೆ ಕಾರಣವಿರಬಹುದು. ಯಾವ ಸಮಸ್ಯೆ ಎಲ್ಲಿಂದ ಹುಟ್ಟುರುತ್ತದೆಯೋ ಅಲ್ಲಿಂದಲೇ ಪರಿಹಾರವನ್ನು ಆರಂಭಿಸಬೇಕು. ಮತ, ಜಾತಿ, ಅಸ್ಪøಶ್ಯತೆಗಳು ಸಮಾಜ-ಪರಂಪರೆಯಲ್ಲಿವೆ. ಇವುಗಳನ್ನು                 ಆ ಮೂಲಕವೇ ಪರಿಹರಿಸುವ ಯತ್ನ ಕುವೆಂಪು ಅವರ ಬೆರಳ್‍ಗೆ ಕೊರಳ್‍ನಲ್ಲಿ, ಶಂಬೂಕವಧೆಯಂಥ              ಶ್ರೀ ರಾಮಾಯಣ ದರ್ಶನಂ ಕಾವ್ಯದ ಭಾಗಗಳಲ್ಲಿ ಸಮರ್ಥವೂ ಉಚಿತವೂ ಆಗಿ ಮುಡಿದೆ. ‘ಶೂದ್ರ ತಪಸ್ವಿ’ ಇಂಥ ಸಮನ್ವಯಕ್ಕೆ ಒಂದು ಉತ್ತಮ ನಿದರ್ಶನ.

ಅಧ್ಯಾತ್ಮವು ವಾಸ್ತವವಾಗಿ ಧರ್ಮ, ಜಾತಿ, ಮತ ನಿರಪೇಕ್ಷ. ಹಾಗಾಗಿಯೇ ಅಧ್ಯಾತ್ಮವನ್ನು ಪ್ರತಿಪಾದಿಸುವ ಕುವೆಂಪು, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಅಂತ್ಯಜ, ಸುನ್ನಿ, ಷಿಯಾ, ಕ್ಯಾಥೋಲಿಕ್, ಪ್ರಾಟೆಸ್ಟಂಟ್, ಸಿಖ್, ನಿರಂಕಾರಿ ಮುಂತಾದ ವಿಭಜನೆಗಳ ನಿರ್ನಾಮಕ್ಕೆ ಕರೆ ಕೊಡುತ್ತಾರೆ. ಅವರ ದೃಷ್ಟಿಯಲ್ಲಿ ಮತವೆಂದರೆ ಮನುಜ ಮತ, ಪಥವೆಂದರೆ ವಿಶ್ವಪಥ. ‘ಮತ’ ಪ್ರಜ್ಞೆ ಎಂದಿದ್ದರೂ ಗುಂಪು ಕಟ್ಟಿ ಜಗಳವಾಡುವ ಕೆಲಸ ಮಾಡುತ್ತದೆ. ಅದು ಸಾಮಾಜಿಕ ಮತವಿರಲಿ, ರಾಜಕೀಯ ಮತವಿರಲಿ, ಅಲ್ಲಿ ಜಗಳ ಇದ್ದೇ ಇರುತ್ತದೆ. ವ್ಯಕ್ತಿ ತನ್ನ ದರ್ಶನದಿಂದ ತಾನೇ ಸ್ವಯಂ ಪೂರ್ಣನಾಗಲು ಮತ ವ್ಯವಹಾರ ಅನಗತ್ಯ. ಇದನ್ನು ಅವರು ಸೃಷ್ಟಿಸಿದ್ದಾರೆ, ಪುಷ್ಟೀಕರಿಸಿದ್ದಾರೆ. 

ಮೌಢ್ಯ, ಜಾತೀಯತೆ, ಕಂದಾಚಾರಗಳಿಗೆ ಉಗ್ರ ಆಘಾತ ನೀಡಿದ ಸನಾತನ ಪರಂಪರೆಯ ಮಹಾನ್ ಹರಿಕಾರ ವಿವೇಕಾನಂದರ ಅಧ್ಯಾತ್ಮ ಶುದ್ಧಿ, ಪ್ರಖರತೆ, ಓಜಸ್ಸು ಕುವೆಂಪು ಅವರಲ್ಲಿವೆ. ಸರ್ವಸಮಾನ ದೃಷ್ಟಿಯಲ್ಲಿ ಮುಖ್ಯ ಅಮುಖ್ಯಗಳ ಮಾತು ಅಮುಖ್ಯ. ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಒಂದು ದಿಕ್ಸೂಚೀ ಮಾತಿದೆ – “ಯಾರೂ ಮುಖ್ಯರಲ್ಲ ; ಯಾವುದೂ ಅಮುಖ್ಯವಲ್ಲ!” ನಿಸರ್ಗದಲ್ಲಿ ಯಾವುದೇ ವಸ್ತು ವಿಷಯ ಮಾತ್ರ ಮುಖ್ಯವಲ್ಲ. ಅದೇ ಅನಿವಾರ್ಯವಲ್ಲ. ಆದರೆ, ನಿಸರ್ಗ ವ್ಯವಹಾರಕ್ಕೆ ಸಗಣಿ ಹುಳವೂ ಮುಖ್ಯವಾಗುತ್ತದೆ. ಇದೇ ರೀತಿ ‘ಸ್ಮಶಾನ ಕುರುಕ್ಷೇತ್ರಂ’ ಕೃತಿಯಲ್ಲಿ ಬರುವ ‘ಎಲ್ಲಕ್ಕೂ ಇವೆ ಅರ್ಥ : ಯಾವುದೂ ಅಲ್ಲ ವ್ಯರ್ಥ; ನೀರೆಲ್ಲವೂ ತೀರ್ಥ” ಎಂಬ ಮಾತನ್ನೂ ಲಕ್ಷಿಸಬಹುದು.

ಕುವೆಂಪು ಅವರು ತಮ್ಮ ಸಾಹಿತ್ಯ ಸರ್ವಸ್ವದ ಆಧ್ಯಾತ್ಮಿಕ ಸಾರ ಸಂಗ್ರಹವನ್ನು ವಿಶ್ವಮಾನವ ಸಂದೇಶದ ಸಪ್ತ ಸೂತ್ರಗಳಲ್ಲಿ ಹಾಗೂ ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಎಂಬ ಪದ್ಯ ಸಾಲುಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಶ್ರೀ ಸಾಮಾನ್ಯರಿಗೆ ಅವರು ನೀಡಿರುವ ದ್ರಷ್ಟಾರ ಮಂತ್ರ. ಚಿರಂತನ ಸತ್ಯಗಳನ್ನು, ಶಾಶ್ವತ ಮೌಲ್ಯಗಳನ್ನು ಮಾತ್ರ ಪ್ರತಿಪಾದಿಸುವ, ಕಾಲ ದೇಶಾತೀತವಾಗಿ ಮಾನವನ ಅಂತಃಕರಣವನ್ನು ಕಟ್ಟುವ ಆಧ್ಯಾತ್ಮಿಕ ಶಕ್ತಿ ಇರುವುದರಿಂದಲೇ ಕುವೆಂಪು ಅವರ ಸಾಹಿತ್ಯ ಮನುಷ್ಯರಿಗೆ ಅನಿವಾರ್ಯವಾಗುತ್ತದೆ. ಅವಿನಾಶಿಯಾಗುತ್ತದೆ.

ಒಂದು ಜೀವ ಇನ್ನೊಂದು ಜೀವವನ್ನು ವ್ಯಾವಹಾರಿಕ ದೃಷ್ಟಿಯಲ್ಲಿ ಅಲ್ಲದಿದ್ದರೆ ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬ ಹಾಗೂ ಕ್ಷುಲ್ಲಕವಾದ ಜಾತಿ, ಮತ, ಭ್ರಷ್ಟತೆಗಳಲ್ಲಿ ಕಳೆದುಹೋಗುತ್ತಿರುವ ಇಂದಿನ ಮಾನವ ಜನಾಂಗಕ್ಕೆ ಕುವೆಂಪು ಅವರು ತೋರಿಸಿದ ಆಧ್ಯಾತ್ಮಿಕ ಮಾರ್ಗ, ಸಮತೋಲಿತ ಬದುಕಿನ ಸ್ಪಷ್ಟ ದೃಷ್ಟಿಗಳು ಅಗತ್ಯವಾಗಿವೆ. ಎಲ್ಲವನ್ನೂ ಅರಗಿಸಿಕೊಂಡು ತಮ್ಮ ದರ್ಶನವನ್ನು ತಾವೇ ಕಂಡುಕೊಳ್ಳುವ ಅವರ ಕಾವ್ಯ-ಬದುಕಿನ ರೀತಿ ಆದರ್ಶವಾಗಬೇಕಿದೆ.






ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment