Monday, 24 January 2022

ತೇಜಸ್ವಿಯವರ ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್

ಅಲೆಮಾರಿಯ ಅಂಡಮಾನ್ ವಿಶಿಷ್ಟ ರೀತಿಯ ಪ್ರವಾಸ ಮತ್ತು ಯಶೋಗಾಥೆ. ಇವೆರಡು ಭಾಗಗಳಲ್ಲೂ ವ್ಯಾಪಿಸಿರುವ ತೇಜಸ್ವಿಯವರ ಪ್ರಸ್ತುತ ಕೃತಿ ಅಸಂಖ್ಯಾತ ಓದುಗರಿಂದ ಓದಿಸಿಕೊಂಡಿದೆ. 1990 ರಲ್ಲಿ ಮೊದಲ ಮುದ್ರಣವನ್ನು ಕಂಡ ಈ ಕೃತಿ ಅನೇಕಾನೇಕ ಮರು ಮುದ್ರಣಗಳನ್ನು ಕಂಡಿದೆ. ಈ ಮಾತು ಕೃತಿಯ ಜನಪ್ರಿಯತೆಯನ್ನು ತೋರಿಸುತ್ತದೆ. ಅಲೆಮಾರಿಯ ಅಂಡಮಾನ್ ಒಂದು ಸಾಮಾನ್ಯ ಪ್ರವಾಸಕಥನವಲ್ಲ. ಸಾಮಾನ್ಯ ಪ್ರವಾಸಕಥನದಲ್ಲಿ ಪ್ರವಾಸಿಸಿದ ಸ್ಥಳದ ಇತಿಹಾಸ, ಜನ-ಜೀವನ, ಅಂಕಿ-ಅಂಶ, ಇತ್ಯಾದಿಗಳು ಇರುತ್ತವೆ. ಪ್ರಸ್ತುತ ಕಥನದಲ್ಲಿ ಇವೆಲ್ಲ ಕ್ವಚಿತ್ ಆಗಿ ಸಾಪೇಕ್ಷವಾಗಿ ಇಣುಕಿ ಮಾಯವಾಗುತ್ತವೆ. ಇವುಗಳಿಗೆ ಇಲ್ಲಿ ಅಂಥ ಪ್ರಾಧ್ಯಾನ್ಯವಿಲ್ಲ. ಪ್ರವಾಸಿಗನೊಬ್ಬನ ಸಾಮಾನ್ಯ ತಿಳಿವಳಿಕೆ, ನಿರೀಕ್ಷೆ, ಕುತೂಹಲಗಳು ಇಲ್ಲಿ ವಿಶಿಷ್ಟವಾಗಿ ತೆರೆದುಕೊಂಡಿವೆ. ಪರಿಸರ ಸಂಬಂಧಿಯಾದ ಕುತೂಹಲ ತೇಜಸ್ವಿಯವರ ಕೇಂದ್ರ ಬಿಂದುವಾಗಿರುವುದರಿಂದ ಆ ದೃಷ್ಟಿಯಲ್ಲಿಯೇ ಅಂಡಮಾನನ್ನು ಅವರು ಗ್ರಹಿಸಿ ದಾಖಲಿಸಿದ್ದಾರೆ. ಅವರು ಯಾವುದೇ ವಿವರವನ್ನು ದಾಖಲಿಸುವ ರೀತಿ, ವಿಧಾನ ಹಾಗೂ ಶೈಲಿಗಳು ಓದುಗನೊಂದಿಗೆ ನೈಜ ಸಂಭಾಷಣೆಯನ್ನು ನಡೆಸುತ್ತಿರುವ ಆತ್ಮೀಯನ ಸರಸ ಮಾತುಕತೆಯ ರೀತಿಯಲ್ಲಿರುವುದರಿಂದ ಹೆಚ್ಚು ಅಪ್ಯಾಯಮಾನವೆನಿಸುತ್ತವೆ. ಇದೇ ಕಾರಣದಿಂದ ತೇಜಸ್ವಿ ಓದುಗರಿಗೆ ಆಪ್ತರಾಗುವುದು. ಸರಳ ಪದಗಳನ್ನು ಬಳಸಿ ಸರಸವಾಗಿ ಮಾತಾಡುವುದು ಕಷ್ಟದ ಕೆಲಸ. ಅದನ್ನು ಹಾಗೆಯೇ ಬರಹದಲ್ಲಿ ಇಳಿಸುವುದು ಮತ್ತೂ ಕಷ್ಟದ ಕೆಲಸ. ತೇಜಸ್ವಿಯವರ ಬರಹ ಈ ಬಗೆಯದಾದ್ದರಿಂದ ಪತ್ರಿಕೆಯ ತಲೆಬರಹ ಓದಬಲ್ಲ ಜಾಣರಿಗೂ ಅವರು ಆಪ್ತವೆನಿಸಿದ್ದಾರೆ. ಸಾಮಾನ್ಯ ಓದುಗನನ್ನು ತಮ್ಮ ಭಾಷೆ-ಶೈಲಿಗಳಿಂದ ತಲುಪುವ ಶಕ್ತಿ ಇರುವ ತೇಜಸ್ವಿ ಈ ಶಕ್ತ ಮಾಧ್ಯಮವನ್ನು ಪರಿಸರ ಕಾಳಜಿಯ ಪ್ರಜ್ಞೆಯನ್ನು ಉಣಿಸಲು ಅಪರೂಪವಾಗಿ ಬಳಸಿಕೊಂಡಿದ್ದಾರೆ. ಅಮೂಲ್ಯವಾದ ಪರಿಸರವನ್ನು ಅಗ್ಗವಾಗಿ ನಾಶಗೊಳಿಸುವ ಪ್ರವೃತ್ತಿಗೆ ತಿಳಿಹೇಳುವುದು ಸುಲಭಸಾಧ್ಯವಲ್ಲ. ತಮ್ಮ ಬರಹ ಶಕ್ತಿಯನ್ನು ಈ ಸಾಧ್ಯತೆಗೆ ತೇಜಸ್ವಿ ಧಾರೆ ಎರೆದಿದ್ದಾರೆ. ಅಂಡಮಾನಿನ ಪ್ರವಾಸ ಕಥನದಲ್ಲೂ ಗಾಢವಾದ ಪರಿಸರ ಶೋಧ ಹಾಗೂ ಕಾಳಜಿಗಳು ತೆರೆದುಕೊಂಡಿವೆ. 

ಕನ್ನಡ ಸಾಹಿತ್ಯದಲ್ಲಿ ಪ್ರವಾಸ ಕಥನಗಳು ಬರತೊಡಗಿದ್ದು ಪಾಶ್ಚಾತ್ಯ ಸಾಹಿತ್ಯಿಕ ಪ್ರಭಾವದಿಂದ. 1890 ರಲ್ಲಿ ಪ್ರಕಟವಾದ ಕರ್ಕಿಯ ಸೂರಿ ವೆಂಕಟರಮಣ ಶಾಸ್ತ್ರೀಗಳ ‘ದಕ್ಷಿಣ ಭಾರತದ ಯಾತ್ರೆ’ ಕನ್ನಡದ ಮೊದಲ ಪ್ರವಾಸ ಸಾಹಿತ್ಯವಾದರೂ ನಿಜವಾಗಿ ವಿ.ಸೀಯವರ ‘ಪಂಪಾಯಾತ್ರೆ’ (1925) ಕನ್ನಡ ಪ್ರವಾಸಕಥನಗಳ ಮೂಲವಾಗಿ ಪರಿಗಣಿತವಾಗಿದೆ. ಇದಕ್ಕೆ ‘ದಕ್ಷಿಣ ಭಾರತದ ಯಾತ್ರೆ’ ಕೃತಿಯಲ್ಲಿ ಪ್ರವಾಸಿಯ ಕುತೂಹಲ ಸ್ವಾರಸ್ಯ ವಿವರ ಹೀನತೆ ಇರುವುದೂ ಒಂದು ಕಾರಣ. ತೀರ್ಥಕ್ಷೇತ್ರ, ಪುರಾಣಕತೆ, ಅವುಗಳ ಸಂದರ್ಶನದ ಲಾಭ ಇತ್ಯಾದಿಗಳನ್ನು ಯಾಂತ್ರಿಕವಾಗಿ ದಾಖಲಿಸಿದ್ದು ಮತ್ತೊಂದು ಕಾರಣ. ಅದೇನೇ ಇರಲಿ, ಪ್ರವಾಸ ಸಾಹಿತ್ಯ ಹೇಗಿರಬೇಕೆಂಬುದನ್ನು ವಿ.ಸೀ ತೋರಿಸಿದರು. ತರುವಾಯ 1936-97 ರಲ್ಲಿ ವಿ.ಕೆ. ಗೋಕಾಕರ ಮೂರು ಪ್ರವಾಸ ಕಥನಗಳು - ಸಮುದ್ರದಾಚೆಯಿಂದ (ಇಂಗ್ಲೆಂಡ್ ಕುರಿತು), ಸಮುದ್ರ ದೀಚೆಯಿಂದ (ಜಪಾನ್ ಕುರಿತು) ಇಂದಲ್ಲ ನಾಳೆ (ಅಮೆರಿಕಾ ಕುರಿತು) ಹೊರಬಂದವು. ತರುವಾಯ ಕಾರಂತರ ಅಬುವಿನಿಂದ ಬರ್ಮಾಕ್ಕೆ, ‘ಅಪೂರ್ವ ಪಶ್ಚಿಮ’, ಬಿ.ಜಿ.ಎಲ್ ಸ್ವಾಮಿಯವರ ‘ಅಮೇರಿಕದಲ್ಲಿ ನಾನು’, ಕೃಷ್ಣಾನಂದ ಕಾಮತರ ‘ನಾನೂ ಅಮೆರಿಕೆಗೆ ಹೋಗಿದ್ದೆ’, ಎ.ಎನ್. ಮೂರ್ತಿರಾಯರ ‘ಅಪರವಯಸ್ಕನ ಅಮೆರಿಕಾ ಯಾತ್ರೆ’, ಜಿ.ಎಸ. ಶಿವರುದ್ರಪ್ಪ ನವರ ‘ಮಾಸ್ಕೊದಲ್ಲಿ ಇಪ್ಪತ್ತೆರಡು ದಿನ’, ಕೆ.ಅನಂತರಾಮುರವರ ‘ಉದಯರವಿ ನಾಡಿನಲ್ಲಿ’, ಗೊರೂರರ ‘ಅಮೆರಿಕಾದಲ್ಲಿ ಗೊರೂರು’ ಕು.ಶಿ. ಹರಿದಾಸ ಭಟ್ಟರ ‘ಇತಾಲಿಯಾ ನಾನು ಕಂಡಂತೆ,’ ‘ಜಗದಗಲ’ ಇತ್ಯಾದಿ ಅಸಂಖ್ಯ ಪ್ರವಾಸ ಕಥನಗಳು ಹೊರಬಂದಿವೆ, ಹೊರಬರುತ್ತಿವೆ. ಇವುಗಳಲ್ಲಿ ಕಾರಂತ, ಕು.ಶಿ. ಗೊರೂರು, ಎ.ಎನ್. ಮೂರ್ತಿರಾವ್ ಹಾಗೂ ಅನಂತರಾಮುರವರ ಪ್ರವಾಸಕಥನಗಳನ್ನು ಹೊಸ ಬಗೆಯ ಓದಿಗಾಗಿ ಗಮನಿಸಬೇಕಾದವು. ಇಂಥ ಹೊಸ ಬಗೆಯ ಓದನ್ನು ತೇಜಸ್ವಿ ಅಲೆಮಾರಿಯ ಅಂಡಮಾನ್‍ನಲ್ಲಿ ಕಟ್ಟಿಕೊಟ್ಟಿದ್ದಾರೆ.

ಅಲೆಮಾರಿಯ ಅಂಡಮಾನ್ ನೂರ ಇಪ್ಪತ್ತೈದು ಪುಟಗಳಲ್ಲಿ ಚಿತ್ರಣಗೊಂಡಿದೆ. ಹದಿನೈದು ಅಧ್ಯಾಯಗಳಲ್ಲಿ ತೇಜಸ್ವಿ ತಮ್ಮೊಂದಿಗೆ ಓದುಗರನ್ನು ಅಂಡಮಾನ್‍ನಲ್ಲಿ ಸುತ್ತಿಸುತ್ತಾರೆ. ಅಂಡಮಾನ್‍ನಿಂದ ವಾಪಸ್ಸು ಬಂದ ವಿಮಾನಯಾನದ ನೆನಪಿನಿಂದ ಕಥೆಯನ್ನು ಹಿಮ್ಮುಖವಾಗಿ ಶುರುಮಾಡುತ್ತಾರೆ. ರನ್‍ವೇ ಮೊದಲ ಅಧ್ಯಾಯ. ರೈಲು, ಬಸ್ಸುಗಳಲ್ಲಿ ಸ್ಥಳಕಾಯ್ದಿರಿಸಿ, ಅದು ದೃಢಪಟ್ಟ ಮೇಲೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪ್ರಯಾಣಿಕರು ಪರದಾಡುವುದು ಭಾರತದ ನೆಲದಲ್ಲಿ ಸಾಮಾನ್ಯ. ಪೋರ್ಟ್ ಬ್ಲೇರ್ ಕೂಡ ಭಾರತದ ಅಂಗ. ಅಲ್ಲಿ ವಿಮಾನಯಾನದ ಅಧಿಕಾರಿಗಳ ನಡುವಿನ ಸಂವಹನದ ಕೊರತೆಯಿಂದ ತಮ್ಮ ತಂಡ ಪಟ್ಟ ಪರಿಪಾಟಲನ್ನು ಈ ಅಧ್ಯಾಯ ಹೇಳುತ್ತದೆ. ‘ಅಂಡಮಾನಿನ ಕನಸುಗಳು’ ಎರಡನೆಯ ಅಧ್ಯಾಯ. ಇಲ್ಲಿ ಅಂಡಮಾನಿನಂಥ ಪ್ರಶಾಂತ ಸ್ಥಳವನ್ನು ಪ್ರವಾಸಕ್ಕೆ ಪ್ರಶಸ್ತ ಸ್ಥಳವೆಂದು ತಾವು ಆರಿಸಿಕೊಂಡ ಬಗ್ಗೆ ಲೇಖಕರು ಬರೆಯುತ್ತಾರೆ. ಒಬ್ಬ ಪ್ರಜ್ಞಾವಂತನ ಚಿಂತನೆ ಇಲ್ಲಿ ಹರಿಯುತ್ತದೆ, ಓದುಗನಿಗೂ ಸಾಮಾನ್ಯವಾಗಿ ಕಾಡುವ ಈ ಪ್ರಶ್ನೆಗಳಿಗೆ ತೇಜಸ್ವಿ ಖಚಿತ ತಾತ್ತ್ವಿಕ ಸ್ವರೂಪವನ್ನು ನೀಡಿ ಓದುಗನೂ ಜೊತೆಯಲ್ಲಿ ಚಿಂತಿಸುವಂತೆ ಮಾಡುತ್ತಾರೆ. ದೇವಸ್ಥಾನಗಳು, ಪುಣ್ಯ ಕ್ಷೇತ್ರಗಳು ಮುಂತಾದವು ಏಕೆ ಅರ್ಥ ಕಳೆದುಕೊಂಡಿವೆ ಎಂಬ ಬಗ್ಗೆ ಅವರು ಹೀಗೆ ಚಿಂತಿಸುತ್ತಾರೆ. ‘ಪರಮಾರ್ಥ ಚಿಂತನೆಗೆ ಮಾನವನಿಗೆ ಅವಶ್ಯವಿರುವ ಏಕಾಂತವಾಗಲೀ ಗಂಭೀರ ಪರಿಸರವಾಗಲೀ ಈ ಕ್ಷೇತ್ರಗಳಲ್ಲಿ ಒಂದು ಚೂರಾದರೂ ಇರುತ್ತದೆಯೇ? ತಲೆ ಬೋಳಿಸಿಕೊಂಡು, ಕಿಟಕಿಗಳಿಗೆಲ್ಲಾ ತಮ್ಮ ಒದ್ದೆ ಬಟ್ಟೆಗಳನ್ನು ನೇತುಹಾಕಿಕೊಂಡು, ಬಸ್ಸಿನೊಳಗೆಲ್ಲಾ ವಾಂತಿ ಮಾಡಿಕೊಳ್ಳುತ್ತಾ ಸಾಗುವ ಈ ಪ್ರವಾಸಿಗಳ ಜೊತೆ ಕಣ್ಣು ಮೂಗು ಇರುವ ನರಮನುಷ್ಯ ಪ್ರವಾಸ ಹೋಗಲು ಸಾಧ್ಯವೆ? ಪಕ್ಕಾ ಐಹಿಕವಾದಿಗಳಾದ ಈ ಅರ್ಚಕರು, ಏಜೆಂಟರು, ಇವರ ಸ್ಪೆಷಲ್ ಪೂಜೆ, ಸೂಪರ್ ಪೂಜೆಗಳಿಂದ ಇವರ ಹುಂಡಿಗಳಿಗೆ ಹಣ ಹಾಕವುದರಿಂದ ಯಾರಿಗಾದರೂ ಪುಣ್ಯ ಪ್ರಾಪ್ತಿ ಸಾಧ್ಯವೆ? ಈ ನರಕಗಳಿಗೆ ಹೋಗುವುದರಿಂದ ದೊರೆಯುವ ಸ್ವರ್ಗವನ್ನು ನಾನೆಂದೋ ತ್ಯಜಿಸಿ ತಿಲಾಂಜಲಿ ಕೊಟ್ಟಿದ್ದೇನೆ’ (ಪುಟ.7).

ವಿದೇಶಿ ವಿನಿಮಯ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ತೆರೆದ ಪ್ರವಾಸೀ ಕೇಂದ್ರಗಳು ಪುಢಾರಿಗಳ, ಅಧಿಕಾರಿಗಳ ಅವ್ಯವಹಾರದ ತಾಣಗಳಾಗಿವೆ. ‘ಈ ದುರಾತ್ಮರ ಅವ್ಯವಹಾರಗಳು ಯಾವ ರೀತಿ ನಡೆಯುತ್ತದೆಂದರೆ ಮರ್ಯಾದೆ ಇರುವ ದಂಪತಿಗಳಾರೂ ಇತ್ತ ಸುಳಿಯಲು ಭಯಪಡುವ ಸ್ಥಿತಿ ಇದೆ. ಈ ಪ್ರವಾಸೀ ಧರ್ಮಗಳ ಒಳ ಚರಂಡಿ ವ್ಯವಸ್ಥೆಗಳೆಲ್ಲಾ ನಿರೋಧ್‍ಗಳು ಸಿಕ್ಕಿಕೊಂಡು ನೀರು ಹೋಗದಂತೆ ಕಟ್ಟಿಕೊಂಡಿರುತ್ತವೆ (ಪುಟ.8). ಇಂಥ ಕಡೆಗಳಲ್ಲಿ ವಾಸ್ತವವನ್ನು ನಿರ್ದಾಕ್ಷಿಣ್ಯವಾಗಿ ತೆರೆದಿಡುವ ಲೇಖಕರು ಓದುಗ ತನ್ನ ಸುತ್ತ ಆಗುವ ವ್ಯವಹಾರಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಪ್ರತಿಭಟಿಸುವಂತೆ ಮೌನವಾಗಿ ಪ್ರೇರೇಪಿಸುತ್ತಾರೆ.

‘ನಾನ್‍ಕೌರಿ’ ನಾಲ್ಕನೆಯ ಅಧ್ಯಾಯ. ಅವಸರದಲ್ಲಿ ಊರಿನಿಂದ ಮದ್ರಾಸ್‍ಗೆ ಹೊರಟ ವಿವರ ಸರಸವಾಗಿ ಮೂರನೆಯ ಅಧ್ಯಾಯದಲ್ಲಿ ಖಾಸಗಿ ಅನಿಸಿಕೆಯ ರೂಪದಲ್ಲಿ ತೆರೆದುಕೊಳ್ಳುತ್ತದೆ. ಆದರೆ ನಾಲ್ಕನೆಯ ಅಧ್ಯಾಯ ಭಾರತೀಯ ಕೆಳ-ಮಧ್ಯಮ ವರ್ಗದ ಜನರ ಅಸಹನೀಯ ಮನಃಸ್ಥಿತಿಗೆ ಹಿಡಿದ ಕನ್ನಡಿಯಾಗಿ ಸಾಮಾಜಿಕ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಈ ಅಧ್ಯಾಯದಲ್ಲಿ ತೇಜಸ್ವಿಯವರು ದೇಶವನ್ನು ಕುರಿತು ಯೋಚಿಸುವ ಧಾಟಿ ಅದರಲ್ಲೂ ಒಬ್ಬ ಭಗ್ನ ಆಶಾವಾದಿಯ ರೀತಿಯಲ್ಲಿ ತಮ್ಮೊಳಗೇ ಯೋಚಿಸಿ ಲಹರಿಯನ್ನು ಹರಿಯಬಿಡುವ ರೀತಿಗಳು ತೆರೆತೆರೆಯಾಗಿ ತೆರೆದುಕೊಂಡಿವೆ. ಸಮುದ್ರದಲ್ಲಿ ನಾನ್‍ಕೌರಿ ಹಡುಗು ಮುಂದೆ ಸರಿದಂತೆ ಭಾರತದ ಮುಖ್ಯ ಭೂಮಿ ದೂರವಾಗುತ್ತ ಬಂದಂತೆ ದೇಶ ಬಿಡುತ್ತಿರುವ ಭಾವುಕತೆ ಕಾಡತೊಡಗುತ್ತದೆ. ಲೇಖಕರಿಗೆ ಇರುವ ಬೌದ್ಧಿಕ ಪ್ರಜ್ಞೆ ಭಾವುಕರಾಗಲು ಬಿಡದೆ ವಾಸ್ತವತೆಯನ್ನು ನೆನೆದು ದೇಶವನ್ನು ಹಳಿಯುವಂತೆ ಮಾಡುತ್ತದೆ. ಲೇಖಕರು ಹೇಳಿಕೊಳ್ಳುತ್ತಾರೆ: “ನನಗೆ ಭಾರತದ ಭಯಜನಕ ಸ್ವರೂಪ ಒಮ್ಮೆಲೆ ಕಣ್ಣಿಗೆ ಕಟ್ಟಿತು. “ದರಿದ್ರ ದೇಶ! ನೋಡಿ ಹೇಗಿದೆ. ಆ ಬಡತನ! ಆ ರಾಜಕಾರಣಿಗಳು! ಆ ಭ್ರಷ್ಟಾಚಾರ! ಆ ಜನಸಂಖ್ಯೆ! ಆ ಪರಿಸರ ನಾಶ! ಸಾಕಪ್ಪಾ! ಈ ಶನಿಯನ್ನು ಬಿಟ್ಟು ದೂರ ಹೋಗುವುದಕ್ಕೆ ನನಗೇನೋ ಸಂತೋಷವೇ ಆಗುತ್ತಿದೆ” ಎಂದೆ (ಪು.20). ಕಂತ್ರಿ ರಾಜಕಾರಣಿಗಳ ಮುಖಾಂತರ, ಭ್ರಷ್ಟ ಅಧಿಕಾರಶಾಹಿಯ ಮುಖಾಂತರ, ಲಂಪಟ ಓಟುದಾರರ ಮುಖಾಂತರ ಕ್ಷಣಕ್ಷಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ದೇಶವನ್ನು ಪ್ರೇಮಿಸುವುದು ನಮಗೆ ಅಸಾಧ್ಯವಾಗಿ ಕಂಡಿತು (ಅಲ್ಲೇ). ಈ ಬಗೆಯ ಮಾತುಗಳಲ್ಲಿ ಒಬ್ಬ ಪ್ರಜ್ಞಾವಂತ ನಾಗರಿಕ ಅಸಹಾಯಕನಾಗಿ ವ್ಯಕ್ತಪಡಿಸುವ ಸಾತ್ವಿಕ ರೋಷವಿದೆ. ಹಡಗಿನ ವ್ಯವಸ್ಥೆಯ ಏರುಪೇರಿನ ಬಗ್ಗೆ ಲೇಖಕರು ಪ್ರಶ್ನಿಸಿದಾಗ, ಬಂಕರ್‍ಗಳಲ್ಲಿನ ಪ್ರಯಾಣಿಕರ ಸ್ವಭಾವದ ಪರಿಚಯ ಕ್ಯಾಪ್ಟನ್‍ನಿಂದ ದೊರೆಯುತ್ತದೆ. ಬಂಕರ್ ಪ್ರಯಾಣಿಕರ ಬಗ್ಗೆ ತಿಳಿಯಲು ಬಂಕರ್‍ಗೆ ಬಂದಾಗ ಕಂಡ ನರಕವನ್ನು ಚಿತ್ರಿಸುತ್ತಾರೆ...” ಬಂಕರ್ ವರ್ಗಕ್ಕೂ ಮಲಗಲು ಸ್ಥಳ, ಓಡಾಡಲು ಜಾಗ, ಸಾಮಾನುಗಳನ್ನು ಇಟ್ಟುಕೊಳ್ಳಲು ರ್ಯಾಕುಗಳು, ಸ್ನಾನ, ನೀರು ಎಲ್ಲ ಒದಗಿಸಿದ್ದರು. ಆದರೆ ಅವೆಲ್ಲವನ್ನು ಡೊಂಕಿಸಿ, ಮುರಿದು, ವಿರೂಪಗೊಳಿಸಿ, ಚಿಲಕಗಳೂ ನಾಪತ್ತೆ ಆಗಿದ್ದವು. ಈ ರೀತಿ ಹಡಗಿನಿಂದ ಕದ್ದೊಯ್ಯುವ ಯಾವ ಸಾಮಾನುಗಳೂ ಬೆಲೆಬಾಳುವುವಾಗಲೀ ಉಪಯುಕ್ತವಾದವಾಗಲೀ ಆಗಿರಲಿಲ್ಲ. ಆದರೂ ಹಡಬಿಟ್ಟಿ ಸಿಕ್ಕಿದ್ದನ್ನು ಹೊಡೆದುಕೊಳ್ಳುವ ನೀಚಬುದ್ಧಿಯಿಂದಲೇ ಇದನ್ನೆಲ್ಲ ಮಾಡಿದ್ದರು” (ಪುಟ.22). ಬಡವರ ಇಂಥ ವರ್ತನೆ ಮಾಕ್ರ್ಸ್‍ವಾದದ ಬಗ್ಗೆ ಲೇಖಕರಲ್ಲಿ ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಸ್ವಾರ್ಥಪರ ಜೀವಿಗಳು ಅಸಹ್ಯ ಹುಟ್ಟಿಸುತ್ತವೆ. ‘ಸಮುದ್ರದ ಮಧ್ಯೆ ಮುಳುಗಿ ಹೋಗುತ್ತೇವೆನ್ನುವ ಭಯ ಇಲ್ಲದಿದ್ದರೆ ಪ್ರಯಾಣಿಕರು ಹಡಗನ್ನೇ ಮುರಿದು ತಮ್ಮ ಸೂಟ್‍ಕೇಸಿಗೆ ತುಂಬಿಕೊಳ್ಳುತ್ತಿದ್ದರೋ ಏನೋ!’ (ಪು.24) ಎಂದು ವಿಷಾದಿಸುತ್ತಾರೆ. ಲೇಖಕರು ಉಲ್ಲೇಖಿಸುವ ಇಂಥ ಸಂದರ್ಭಗಳು ನಮ್ಮ ಸಹಜೀವಿಗಳ ಸಾಮಾನ್ಯ ವರ್ತನೆಗೆ ಹಿಡಿದ ಕನ್ನಡಿಯಾಗಿವೆ. ಸಮುದ್ರದೊಳಗಿನ ಅಂತರ್ಗಾಮಿ ಪ್ರವಾಹಗಳ ಬಗ್ಗೆ ಆಕಸ್ಮಿಕ ಎಂಬಂತೆ ಮಾಹಿತಿಗಳು ದೊರೆಯುತ್ತವೆ. ಸಾಗರ ಕುತೂಹಲಗಳ ಅಗರ. ಮೀನು ಹಿಡಿಯಲು ಗಾಳ ಹಾಕುತ್ತಿದ್ದ ಲೇಖರು ಸಮುದ್ರದ ಆಳ ತಿಳಿಯುವ ಸಾಹಸದಲ್ಲಿ ದಾರಕ್ಕೆ ಸೀಸದ ಸ್ಪಿನ್ನರ್ ಕಟ್ಟಿ ಸಮುದ್ರಕ್ಕೆಸೆಯುತ್ತಾರೆ. ಅದು ಭಾರವಾಗಿದ್ದರೂ ಮುಳುಗದೆ ಕೊಚ್ಚಿ ಹೋಗತೊಡಗುತ್ತದೆ. ಇದು ಅಂತರ್ಗಾಮಿ ಪ್ರವಾಹದ ಕೆಲಸವೆಂದು ಅರಿಯಲು ಹೆಚ್ಚು ತಡವಾಗುವುದಿಲ್ಲ. ಇಲ್ಲಿ ಬಿಸಿನೀರು ಹಾಗೂ ತಣ್ಣೀರು ಅಂತರ್ಗಾಮಿ ಪ್ರವಾಹಗಳ ಬಗ್ಗೆ ಆಸಕ್ತಿದಾಯಕ ಮಾಹಿತಿಯನ್ನು ಒದಗಿಸುತ್ತಾರೆ. ಅಂಡಮಾನಿನ ಝರವಾ, ಓಂಗೇ, ಸೆಂಟಿನಲ್ ಬುಡಕಟ್ಟುಗಳ ಬಗ್ಗೆ ಕೇಳಿ ತಿಳಿಯುತ್ತಾರೆ. ಗೊತ್ತುಗುರಿ ಇಲ್ಲದೆ ಒಂದು ಪ್ರಾಂತ್ಯದ ಪ್ರಾಣಿಗಳನ್ನು ಹೊಸ ಪ್ರಾಂತ್ಯಕ್ಕೆ ತಂದು ಬಿಟ್ಟಾಗ ಆಗುವ ಅನಾಹುತ ಏನೆಂಬುದನ್ನು ಜಿಂಕೆ ಸಂತತಿ ನಿಗ್ರಹ, ಮೆಗಾಪಾಡ್ (ಹಾರಲಾರದ ಹಕ್ಕಿ), ಊಂಬ್ಸಾಟ್ ಮುಂತಾದ ಜೀವಿಗಳ ಚರಿತ್ರೆಯ ಮೂಲಕ ಚಿಂತಿಸುತ್ತಾರೆ.

ಅಂಡಮಾನಿನ ಅಭಿವೃದ್ಧಿ ಯೋಜನೆಗಳು ಚಿಂತನೆಗೆ ಇಂಬು ಕೊಡುತ್ತವೆ. “ಅಂಡಮಾನ್ ಅಭಿವೃದ್ಧಿಯ ಇನ್ನೊಂದು ಯೋಜನೆಯೆಂದರೆ ಪೋರ್ಟ್‍ಬ್ಲೇರ್ ಪಟ್ಟಣವನ್ನು ತೆರಿಗೆ ರಹಿತ ಬಂದರನ್ನಾಗಿ ಪರಿವರ್ತಿಸಬೇಕೆನ್ನುವುದು” ಎಂಬ ವಿಷಯವನ್ನು ನಾಗರಿಕತೆಯ ಮತ್ತೊಂದು ತುದಿಯಲ್ಲಿ ನಿಂತು ಲೇಖಕರು ಪರಿಶೀಲಿಸುತ್ತಾರೆ. ಸಿಂಗಾಪುರ ಹಾಂಕಾಂಗ್‍ಗಳ ಮಾದರಿಯಲ್ಲಿ ಇದನ್ನೂ ಅಂತಾರಾಷ್ಟ್ರೀಯ ಷಾಪಿಂಗ್ ಸೆಂಟರ್ ಮಾಡುವ ಕೆಲಸದಿಂದ ಅಂಡಮಾನ್‍ನಲ್ಲಿ ಮಾದಕವಸ್ತು ವ್ಯಾಪಾರಿಗಳು, ಕಳ್ಳಸಾಗಣೆದಾರರು ಸ್ವರ್ಗ ಕಾಣುತ್ತಾರೆ. ಬಾರು, ವೇಶ್ಯಾಗೃಹ ತುಂಬಿ ತುಳುಕುತ್ತದೆ. ಸದ್ಯಕ್ಕೆ ಕಳ್ಳರು ಭಿಕ್ಷುಕರಿಂದ ಈ ಸ್ಥಳ ಫ್ರೀ ಪೋರ್ಟ್ ಆದ ಕೂಡಲೇ ಕಳ್ಳರು, ಭಿಕ್ಷುಕರು, ಸೂಳೆಯರು ದಾಳಿ ಇಡುವ ತಾಣವಾಗುತ್ತುದೆ. ಭಾರತದಿಂದ ಹೆಣ್ಣು ಮಕ್ಕಳ ಅಪಹರಣ ಹಾಗೂ ಸಾಗಣೆ ಶುರು ಆಗುತ್ತದೆ. ಪೋರ್ಟ್‍ಬ್ಲೇರ್ ಫ್ರೀಪೋರ್ಟ್ ಆಗುವ ಗಾಳಿ ವರ್ತಮಾನದಿಂದ ಮನೆ ಕಟ್ಟುವ ಸೈಟುಗಳ ಬೆಲೆ ತಾರಾಮಾರಿ ಏರತೊಡಗಿದೆ (ಪುಟ.57) ಎಂದು ಕಲ್ಪಿಸುತ್ತಾರೆ. ಅರಣ್ಯ ಹಾಗೂ ಸಮುದ್ರ ಉತ್ಪನ್ನ ವಹಿವಾಟಿಗೆ ಮಾತ್ರ ಅಂಡಮಾನ್ ಸೀಮಿತವಾಗಬೇಕು ಎನ್ನುವ ಲೇಖಕರು ರಾಜೀವ್‍ಗಾಂಧಿ ನಮ್ಮ ಜನತೆಗೆ ಹತ್ತಿಸಿರುವ ಇಪ್ಪತ್ತೊಂದನೆಯ ಶತಮಾನದ ಪಿತ್ತ ನೋಡಿದರೆ ಇನ್ನು ಹತ್ತು ವರ್ಷಗಳೊಳಗಾಗಿ ಅಂಡಮಾನ್ ವಾಶವಾಗಬಹುದೆಂದು ನನಗನ್ನಿಸುತ್ತದೆ’ (ಅದೇ) ಎನ್ನುತ್ತಾರೆ. ಇಂಥ ಅಭಿಪ್ರಾಯಗಳು ಭಾರತದ ಯಾವುದೇ ಗ್ರಾಮಕ್ಕೂ ಅಲ್ಲಿನ ಸಂಸ್ಕøತಿಗೂ ಅನ್ವಯವಾಗಬಹುದು.

ಒಂದೊಂದು ಸನ್ನಿವೇಶ ಹಾಗೂ ವಿಷಯಗಳನ್ನು ಗಮನಿಸಿ ತಮ್ಮ ಆ ಕ್ಷಣದ ಚಿಂತನಾ ಲಹರಿಯನ್ನು ಹರಿಸಿ ಅಲ್ಲಿಗೆ ಅದನ್ನು ಇತ್ಯರ್ಥ ಮಾಡುತ್ತ ಹೋಗುವ ಲೇಖಕರು ತಾವೇ ಹೇಳಿದ ಪೂರ್ವ ನಿಲುವಿಗೆ ಕೆಲವೆಡೆ ವಿರುದ್ಧವಾಗಿ ಮಾತನಾಡತೊಡುಗುತ್ತಾರೆ. ಅಂಡಮಾನ್ ನಾಶವಾಗುವ ಭೀತಿ ವ್ಯಕ್ತಪಡಿಸಿದ ತರುವಾಯ ಅಂಡಮಾನ್‍ನಲ್ಲಿ ಹಣ, ರಾಜಕೀಯ ಇಲ್ಲದಿರುವ ಕಾರಣ ಜಾತಿ ದಳ್ಳುರಿ ಇಲ್ಲವೆನ್ನುತ್ತ ಅಂಡಮಾನ್ ಪ್ರಜ್ಞಾಪೂರ್ವಕವಾಗಿ ಇದನ್ನೂ ಉಳಿಸಿಕೊಳ್ಳದಿದ್ದರೆ ಭಾರತದ ಜಾತಿ ದಳ್ಳುರಿ ಇಲ್ಲಿಗೂ ಹಬ್ಬಿ ಪರಸ್ಪರ ಹೊಡೆದಾಡತೊಡಗುವಂತಾಗುತ್ತದೆ. ಅತ್ಯುತ್ತಮ ವಿದ್ಯಾಭ್ಯಾಸ ಉಳ್ಳ ಅಂಡಮಾನ್ ಒಂದಲ್ಲ ಒಂದು ದಿನ ನಮ್ಮ ದೇಶದ ಮಾದರಿ ರಾಜ್ಯವಾದೀತೆಂದು ಅನ್ನಿಸುತ್ತದೆ (ಪು.94) ಎಂದು ಹೇಳುತ್ತಾರೆ.

ಪೋರ್ಟ್ ಬ್ಲೇರ್‍ನಿಂದ ಬಾರಾಟಾಂಗ್‍ಗೆ ಹೋಗುವ ಸಂದರ್ಭದಲ್ಲಿ ಪ್ರಕೃತಿಯ ನಡುವೆ ಓಲಾಡುವ ಹಡಗು, ಮಿಂಚುವ ಅಲೆಗಳು, ಸರಿಯುವ ಕಾಡು, ದೂರದ ಪರ್ವತಗಳು ಪ್ರತಿಮೆಗಳಾಗುತ್ತ ಲೇಖಕರಿಗೆ ಅಂತರ್ಮುಖಿತೆಯನ್ನು ತರುತ್ತವೆ. ಮನುಷ್ಯನೇ ಇಲ್ಲದಿದ್ದಾಗಲೂ ಇವು ಹೀಗೆ ಇಲ್ಲಿಯೇ ನಿಜವಾಗಿಯೂ ಇದ್ದವೆ? ಇವನ್ನೆಲ್ಲಾ ಹೀಗೆ ನೋಡಿ ಪರಿಭಾವಿಸುತ್ತಿರುವ ನಾನು ನಿಜವೋ? ಈ ಅಂಡಮಾನ್ ನಿಜವೋ? ನಿಜ ಎಂದರೇನು? ಅಂಡಮಾನಿನ ಜ್ವಾಲಾಮುಖಿ ಸಿಡಿದು ಈ ಅಂಡಮಾನ್ ಆಕಾಶದಲ್ಲರ್ಧ ಸಾಗರದಲ್ಲರ್ಧ ಮಾಯವಾಗುತ್ತದೆಯೆ? ಏನು ವಿಚಿತ್ರ ಮಾಯೆ ಇದು? (ಪು.87) ಎಂಬ ಧ್ಯಾನಸ್ಥ ಮನಃಸ್ಥಿತಿಯಲ್ಲಿ ಅಲೌಕಿಕ ದರ್ಶನ ನೀಡುತ್ತಾರೆ. ಪುಣ್ಯ ಕ್ಷೇತ್ರಗಳ ದೊಂಬಿ ಇಂಥ ಮೌನ ಚಿಂತನೆಗೆ ಅವಕಾಶ ನೀಡದು. 

ಅಂಡಮಾನಿನ ಲಾಬ್‍ಸ್ಟರ್, ಮಡ್‍ಕ್ರ್ಯಾಬ್, ಸ್ವ್ಕಿಡ್, ನೀಲಿ ಮೀನು, ಡಾಲ್ಮಿನ್, ಮುಂತಾದ ಸಮುದ್ರ ಜೀವಿಗಳ ಪರಿಚಯ ಸಮುದ್ರ, ಸಮುದ್ರಯಾನ, ನೋವು, ನಲಿವು ಮುಂತಾದ ವಿವರಗಳೆಲ್ಲ ಕಿಂಚಿತ್ತೂ ಬೇಸರವಾಗದಂತೆ ದಾಖಲಾಗುತ್ತವೆ. ತೇಜಸ್ವಿಯವರ ಶೈಲಿಯಲ್ಲಿ ಜೀವಂತಿಕೆಯಿದೆ, ಲವಲವಿಕೆ ಇದೆ. ಪ್ರವಾಸಕಥನಗಳು ಕಂಡುಂಡ ವಿವರಗಳ ದಾಖಲೆಯಾದರೆ ಸಪ್ಪೆ ಎನಿಸುತ್ತದೆ. ಒಬ್ಬ ಸಾಮಾನ್ಯನಿಗೆ ಹೊಸ ಪರಿಸರ ಉಂಟು ಮಾಡುವ ಭಾವನೆ ಜೀವಂತವಾಗಿ ಒಡಮೂಡಿದಾಗ ಅಂಥ ಕಥನಕ್ಕೆ ಹೊಸತನ ಬರಬಲ್ಲುದು ತೇಜಸ್ವಿಯವರ ಬರಹ ಅಂಡಮಾನ್ ವೀಕ್ಷಿಸುವ ತೀವ್ರ ಚಪಲವನ್ನು ಉಂಟುಮಾಡುತ್ತದೆ. ಸುತ್ತಲಿನ ಮಾನುಷ ವ್ಯಾಪಾರಕ್ಕೆ ಬದಲಾಗಿ ಪ್ರಕೃತಿ ವ್ಯಾಪಾರದ ಜೀವಂತಿಕೆಯತ್ತ ಮನವೊಲಿಯುವಂತೆ ಮಾಡುತ್ತದೆ. ಕೃತಿಯ ಸಾರ್ಥಕತೆ ಇರುವುದೂ ಇಲ್ಲಿಯೆ.

ಮಹಾನದಿ ನೈಲ್‍ನ ಉಗಮ ಸ್ಥಾನದ ಅನ್ವೇಷಣೆಯ ಸಾಹಸ ವಿವರ ಎರಡನೆಯ ಭಾಗದಲ್ಲಿದೆ. ಸ್ಪೀಕೆಯ ಉತ್ಸಾಹ, ಅವಸರ ಶೋಧನೆ ಸ್ವಭಾವ, ಲಿವಿಂಗ್ ಸ್ಟೋನ್‍ರ ಹೃದಯವಂತಿಕೆ, ಸ್ಟಾನ್ಲಿಯ ನಿಷ್ಠಾವಂತಿಕೆ ಮುಂತಾದವು, ಬರ್ಬರ ಗುಲಾಮೀ ವ್ಯಾಪಾರದ ಅಮಾನುಷ ವರ್ತನೆಗಳು ಇಲ್ಲಿ ದಾಖಲಾಗಿವೆ. ಅನ್ಯಮೂಲಗಳನ್ನು ಆಧರಿಸಿದ ಈ ಭಾಗ ಉತ್ತಮ ಅನುವಾದಕ್ಕೊಂದು ಮಾದರಿಯಾಗಿದೆ. ನೈಲ್ ಬಗ್ಗೆ ಆಸಕ್ತಿಯನ್ನು ಹುಟ್ಟಿಸುತ್ತದೆ.

ಪ್ರಸ್ತುತ ಕನ್ನಡ ಸಾಹಿತ್ಯದಲ್ಲಿ ಪ್ರವಾಸಕಥನಗಳು, ಪರಿಸರ ಕಾಳಜಿ ವಿವರಗಳು ಸಾಕಷ್ಟು ಹೊರ ಬರುತ್ತಿದ್ದರೂ ತೇಜಸ್ವಿಯವರಂತೆ ಮಗುವಿನ ಮುಗ್ಧ ಕುತೂಹಲವನ್ನು ಬದ್ದಕ್ಕೂ ಉಳಿಸಿಕೊಂಡು ಆ ಕುರಿತ ಸಮಗ್ರ ವೈಜ್ಞಾನಿಕ ವಿವರವನ್ನು ದಾಖಲಿಸುವಂಥ ಅಪೂರ್ವ ಶೈಲಿ ಇನ್ಯಾರಲ್ಲೂ ಕಾಣುವುದಿಲ್ಲ. ಪರಿಸರ ಇಂದಿನ ಕಾಳಜಿ. ಆದರೆ ಅದು ತುಂಬ ಸೂಕ್ಷ್ಮ. ಪರಿಸರ ಪ್ರಜ್ಞೆ ಎಲ್ಲರಿಗೂ ದಕ್ಕುವುದಿಲ್ಲ. ಆದರೆ ಎಲ್ಲರೂ ತಿಳಿದುಕೊಳ್ಳಬಹುದು, ತಿಳಿಯಬೇಕು. ಅಂಥ ಜರೂರು ಇಂದು ಇದೆ. ಜನತೆ ತಿಳಿಯುವಂತೆ ಪ್ರಸ್ತುತಪಡಿಸುವಿಕೆ ಸಂವಹನದ ಒಂದು ಸವಾಲು. ಪ್ರವಾಸಕಥನ ಒಂದು ಬಗೆಯ ಪ್ರಬಂಧ. ತೇಜಸ್ವಿಯವರ ಬರಹವನ್ನು ‘ಪ್ರವಾಸೀ ಲಲಿತ ಪ್ರಬಂಧ’ ಎಂದು ಕರೆಯಬಹುದೇನೋ. ಈ ಬಗೆಯ ವೈಜ್ಞಾನಿಕ ಸವಿವರ ಸರಸ ಶೈಲಿ ಬಿ.ಜಿ.ಎಲ್. ಸ್ವಾಮಿಯವರಲ್ಲಿಯೂ ಇರುವುದನ್ನು ಕಾಣಬಹುದು. 

1934 ರ ಹೊತ್ತಿಗೆ ಪ್ರಕಟವಾದ ಶಿವರಾಮ ಕಾರಂತರ ‘ಚಿತ್ರಮಯ ದಕ್ಷಿಣ ಕನ್ನಡ’ ಅಥವಾ ‘ದಕ್ಷಿಣ ಕನ್ನಡ ಅಂದು-ಇಂದು’ ಅವೊತ್ತಿನ ಇಂಥ ಒಂದು ವಿಶಿಷ್ಟ ಕೃತಿ. ಕೆ.ಅನಂತರಾಮು ಅವರ ‘ದಕ್ಷಿಣದ ಸಿರಿನಾಡು’ ಕಳೆದ ಶತಮಾನಾಂತ್ಯದಲ್ಲಿ ಬಂದ ಇಂಥದ್ದೇ ಮತ್ತೊಂದು ಅಪೂರ್ವ ಕೃತಿ. ಇಂದಿನ ಕನ್ನಡ ಸಾಹಿತ್ಯ ರಚನೆಯಲ್ಲಿ ವಿದ್ವತ್ ಕೃತಿಗಳೂ ವಿರಳ, ಸರಸ ಕೃತಿಗಳೂ ವಿರಳ, ಎರಡೂ ಅಲ್ಲದ ಒಟ್ಟಾರೆ ಸಾಹಿತ್ಯಗಳು ಪುಂಖಾನುಪುಂಖವಾಗಿ ಹೊರಬರುತ್ತಿವೆಯಾದ ಕಾರಣ ತೇಜಸ್ವಿಯವರ ಅಪೂರ್ವ ಬರವಣಿಗೆ ಕನ್ನಡದ ಓದುಗಿನಿಗೆ ಸ್ವಾದ ವಿಶೇಷವಾಗಿ ಕಂಡರೆ ಆಶ್ಚರ್ಯವಿಲ್ಲ. ಈ ಕಾರಣಕ್ಕಾಗಿ ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ ಹೊಸತರ ಪರಿಚಯ, ನಾವೀನ್ಯ, ಅನನ್ಯತೆಗಳಿಂದ ತನ್ನ ತನವನ್ನು ಉಳಿಸಿಕೊಂಡಿದೆ. ಸಾಮಾಜಿಕ, ರಾಜಕೀಯ, ಪರಿಸರ, ವಿಜ್ಞಾನ ಆರ್ಥಿಕ ಹೀಗೆ ಎಲ್ಲ ಚಿಂತನೆಗಳೂ ಇಡಿಕಿರಿದ ಈ ಪುಟ್ಟ ಕೃತಿ ಪ್ರವಾಸ ಕಥನ ಒಳಗೊಳ್ಳಬಹುದಾದ ಸಾಧ್ಯತೆಯ ದರ್ಶನವನ್ನು ಮೂಡಿಸುವ ಕಾರಣ ಹೊಸ ಪ್ರವಾಸ ಕಥನ ತಂತ್ರವನ್ನು, ಸಾದೃಶ್ಯಾನುಭವ-ಅಮೂರ್ತ ಚಿಂತನೆಯ ಆಯಾಮಗಳ ಸಮಪಾಕವನ್ನು ಉಣಬಡಿಸುತ್ತದೆ.

ಸಮಕಾಲೀನ ಸಂದರ್ಭದಲ್ಲಿ ಔದ್ಯಮೀಕರಣ ಹಾಗೂ ಆರ್ಥಿಕ ಸಬಲೀಕರಣಗಳ ನೆಪದಲ್ಲಿ ಜಾಗತೀಕರಣ ಮುಂದಡಿ ಇಡುತ್ತಿದೆ. ಜಾಗತೀಕರಣ ಎಂದರೆ ಭೂಮಿಯ ಯಾವುದೇ ಮೂಲೆಯ ನೆಲದ ಅನನ್ಯತೆಯನ್ನು ಸಾರಸಗಟಾಗಿ ಅಲ್ಲಗಳೆಯುವುದು ಎಂದೇ ಅರ್ಥ. ಭೂಮಿಯ ಇಂಚಿನಷ್ಟು ಜಾಗಕ್ಕೂ ಅದರದೇ ಆದ ಅನನ್ಯತೆ ಇದೆ. ಈ ಅನನ್ಯತೆಯೇ ವೈವಿಧ್ಯಕ್ಕೆ ಕಾರಣವಾಗಿದೆ. ಜಾಗತೀಕರಣದಲ್ಲಿ ವಾಣಿಜ್ಯದ ಏಕೈಕ ಉದ್ದೇಶ ಎಲ್ಲವನ್ನೂ ಸಮಾನವಾಗಿ ತೂಗುವುದರಿಂದ ಅದಕ್ಕೆ ಅನನ್ಯತೆಯ ಪ್ರಜ್ಞೆ ಇಲ್ಲ ಎಂದು ತಿಳಿಯಬೇಕಾಗಿದೆ. ಅಂಡಮಾನ್ ಕೃತಿ ಇಂಥ ಪ್ರಜ್ಞಾಹೀನತೆಯ ಅಪಾಯಗಳನ್ನು ಗಂಭೀರವಾಗಿ ದಾಖಲಿಸಿದೆ. ಸರ್ಕಾರಿಯಾದ ಮಗ ಎಳವೆಯಲ್ಲಿ ಶ್ವಾಸಕೋಶದಲ್ಲಿ ನೀರು ತುಂಬುವ ಕಾಯಿಲೆಯಿಂದ ಸಾಯಲಿದ್ದ, ಯಾರೋ ಅಂಡಮಾನ್ ಹವೆಯ ಬಗ್ಗೆ ಹೇಳಿದರು. ಅದ್ಭುತವೆಂಬಂತೆ ತಿಂಗಳೊಪ್ಪತ್ತಿನಲ್ಲಿ ಯಾವ ಔಷಧವೂ ಇಲ್ಲದೆ ಕಾಯಿಲೆ ವಾಸಿಯಾಯ್ತು. ಆತ ಹಿಂದಿರುಗಲು ಒಪ್ಪದೆ ಅಲ್ಲೇ ಉಳಿದ (ಪು.32).

‘ಮೆಗಾಪಾಡ್’ ಎನ್ನುವುದು ಅಂಡಮಾನಿನ ಹಾರಲಾರದ ಹಕ್ಕಿ – ಮಾರಿಷಸ್ ದ್ವೀಪದಲ್ಲಿ ನಾಮಾವಶೇಷವಾದ ಡೋಡೋ ರೀತಿಯ ಹಾರಲಾರದ ಹಕ್ಕಿ. ವಿದೇಶೀ ಪ್ರಾಣಿಗಳಾದ ಹಂದಿ, ಆನೆ, ಮೊಲ, ಜಿಂಕೆ, ಅಳಿಲುಗಳ ದೆಸೆಯಿಂದ ಅದು ಈಗ ಅಂಡಮಾನಿನ ಎಲ್ಲಾ ದ್ವೀಪಗಳಲ್ಲೂ ನಾಶವಾಗಿದೆ (ಪು.39) ಭಾರತದಿಂದ ತಂದು ಬಿಟ್ಟ ಜಿಂಕೆ ಅತಿಯಾಗಿ ವೃದ್ಧಿಗೊಂಡು ಅದರ ನಿಗ್ರಹ ಸಾಧ್ಯವಾಗದೆ ಶಿಕಾರಿಗೆ ಪರವಾನಿಗೆ ನೀಡಲಾಗಿದೆ (ಪು.38) ಅಂಡಮಾನಿನಲ್ಲಿ ಪೆಡಾಕ್ ಎಂಬ ಮರವಿದೆ. ಭಾರತದ ತೇಗ, ಹೊನ್ನೆಗಳಿಗಿಂತ ಇದು ದುಬಾರಿ. ಅಲ್ಲಿನ ಕಿಟಿಕಿ ಬಾಗಿಲುಗಳಿಗೆ ಈ ಮರವೇ ಮೂಲ. ಸಾಗುವಾನಿಯನ್ನು ಅಂಡಮಾನಿನಲ್ಲಿ ಬೆಳೆಯುವ ಪ್ರಯತ್ನ ಮರ ಒಳಗೇ ಟೊಳ್ಳು ಬೀಳುವುದರಿಂದ ನಿಂತಿತು (ಪು.97). ಪೆಡಾಕ್ ಅಂಡಮಾನಿನಲ್ಲಿ ಮಾತ್ರ ಬೆಳೆಯುತ್ತದೆ – ಈ ಬಗೆಯ ಸೂಕ್ಷ್ಮ ಪರಿಸರ ಸಂಬಂಧವಾದ ಮಾಹಿತಿಗಳು ಕಣ್ತೆರೆಸುವಂಥವು.

ನಿಸರ್ಗದಲ್ಲಿ ಸಾವು ಮಾತ್ರ ಒಂದೇ ಬಗೆಯದು; ಜೀವ ವೈವಿಧ್ಯ ಅಲ್ಲ. ಸಮುದ್ರ ಕೂಡ ಅಂಡಮಾನಿನಲ್ಲಿ ಬೇರೆಯದೇ ಲಕ್ಷಣ ಪಡೆದಿದೆ (ಪು.39). ಅನನ್ಯತೆಯ ಮೂಲಕ ನಿಸರ್ಗ ಒಂದು ಬಗೆಯ ಸಮತೋಲನವನ್ನು ಕಾಪಾಡಿಕೊಂಡು ಬರುತ್ತಿರುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಮಾನವ ನಡೆಸುವ ಹಸ್ತಕ್ಷೇಪ ವಿನಾಶಕ್ಕೆ ಒಯ್ಯುತ್ತದೆ. ಅಂಡಮಾನ್ ಕತೆಯ ಮೂಲಕ ಸೂಕ್ಷ್ಮವಾದ ಭೌಗೋಳಿಕ, ಪರಿಸರಾತ್ಮಕ ಸಂಗತಿಗಳ ಬಗ್ಗೆ ನಮ್ಮ ಸುತ್ತ ನಾವು ಜಾಗೃತ ಪ್ರಜ್ಞೆಯನ್ನು ಸದಾ ಹೊಂದಿರುವಂತೆ ಲೇಖಕರು ಯತ್ನಿಸಿದ್ದಾರೆ. ಅವರ ಈ ಆಶಯ ಹಾಗೂ ಕಾಳಜಿಗಳು ಅಭಿವೃದ್ಧಿಯ ಹೆಸರಿನಲ್ಲಿ ಅಂಧಕಾರದ ನಾಗರಿಕ ಜಗತ್ತಿನ ರಾಜಕಾರಣಿಗಳು, ಅಧಿಕಾರಶಾಹಿಗಳು ಮತ್ತಿತರನ್ನು ತಟ್ಟುವ ಅಗತ್ಯವಿದೆ.






ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment