ಹದಿನಾರನೆಯ ಲೋಕಸಭೆಗೆ ಚುನಾವಣೆ ನಡೆದು ಫಲಿತಾಂಶ ಬಂದು ವಾರವೇ ಕಳೆಯಿತು (2014-ಮೇ). ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ ಈ ಚುನಾವಣೆ ಕುರಿತ ಚರ್ಚೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಏಕೆಂದರೆ ಮಾಧ್ಯಮಗಳು, ಗದ್ದುಗೆಯ ಕನಸು ಕಾಣುತ್ತಿದ್ದ ಗೆದ್ದ-ಸೋತ ಪ್ರಮುಖ ಪಕ್ಷಗಳು, ಯಾರಿಗೂ ಬಹುಮತ ಬರದಿದ್ದರೆ ಆಟವಾಡಿಸುವ ಭ್ರಮೆಯಲ್ಲಿದ್ದ ಪ್ರಾದೇಶಿಕ ಪಕ್ಷಗಳು-ಪುಡಿ ಪಕ್ಷಗಳು, ಒಂದೆರಡು ಸ್ಥಾನಗಳ ಕೊರತೆ ಬಿದ್ದರೆ ಲಾಭ ಮಾಡಿಕೊಳ್ಳುವ ಹವಣಿಕೆಯಲ್ಲಿದ್ದ ಪಕ್ಷೇತರರು, ಇವರೆಲ್ಲರ ಬೆಂಬಲಿಗರು, ಕಾರ್ಯಕರ್ತರು ಹೀಗೆ ಇವರೆಲ್ಲರಿಗೂ ಅನಿರೀಕ್ಷಿತ ಆಘಾತ ನೀಡಿದ ದೇಶದ ಜನಸಾಮಾನ್ಯರು ಇದುವರೆಗಿನ ಚುನಾವಣೆಯಲ್ಲೇ ಅತ್ಯಂತ ಹೆಚ್ಚು ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ಇಂಥ ಬೆಳವಣಿಗೆ ಅಗತ್ಯವೂ ಹೌದು. ಆದರೆ ಈ ಚರ್ಚೆಯ ಆಯಾಮಗಳನ್ನು ಗಮನಿಸುವುದು ಒಳಿತು.
ಈ ಫಲಿತಾಂಶದಿಂದ ಚಿಂತಕರು ಎಂದು ಗುರುತಿಸಿಕೊಂಡವರ ಸ್ಥಿತಿಯಂತೂ ಚಿಂತಾಜನಕವಾಗಿದೆ. ಪ್ರಚಾರದ ವೇಳೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಕೆಲವರಂತೂ ನಾಪತ್ತೆಯಾಗಿದ್ದಾರೆ. ಇನ್ನು ಕೆಲವರಿಗೆ ಜೀವನವೇ ಸಾಕಾಗಿದೆ. ಎಡಪಂಥೀಯ ಚಿಂತನೆಯಲ್ಲಿ ಗುರುತಿಸಿಕೊಂಡಿದ್ದವರೊಬ್ಬರು ಫಲಿತಾಂಶ ಬಂದ ನಾಲ್ಕು ದಿನಗಳ ನಂತರ ಭೇಟಿಯಾದರು. ಅವರ ಮುಖದಲ್ಲಿ ಯಾವ ಉತ್ಸಾಹವೂ ಇರಲಿಲ್ಲ. ಸೂತಕದ ಕಳೆ. ಏನಾಯ್ತು ಅಂದೆ. ದೇಶದಲ್ಲಿ ಪ್ರಳಯವೇ ಆಗಿ ಇವರೊಬ್ಬರೇ ಬದುಕಿದ್ದಾಗ ಆಗುವ ಹತಾಶೆ, ಸಂಕಟ, ಆಘಾತಗಳೆಲ್ಲ ಅವರಲ್ಲಿ ಮೈವೆತ್ತಿದ್ದವು. ಯಾಕೆಂದು ಕೇಳಿದರೆ ಮೋದಿ ಪ್ರಧಾನಿಯಾಗ್ತಾರಲ್ಲ, ಬಿಜೆಪಿ ಈ ಪಾಟಿ ಸ್ಥಾನ ಗೆದ್ದುಬಿಟ್ತಲ್ಲ ಅಂತೆಲ್ಲ ಗೋಳು ತೋಡಿಕೊಳ್ಳತೊಡಗಿದರು. ಹೋಗ್ಲಿ ಬಿಡಿ ಸಾರ್, ಜನತಂತ್ರ ವ್ಯವಸ್ಥೆಯಲ್ಲಿ ಒಮ್ಮೆ ಅವರು ಮತ್ತೊಮ್ಮೆ ಮತ್ತೊಬ್ಬರು ಮೇಲೆ ಕೆಳಗೆ ಆಗುವುದು ಸಹಜವಲ್ಲವೇ? ಅದನ್ಯಾಕೆ ಇಷ್ಟು ಸೀರಿಯಸ್ಸಾಗಿ ತಗೋತೀರಿ ಅಂದೆ. ಹಂಗಲ್ಲ ಸಾರ್, ನಿಮಗೆ ಅರ್ಥವಾಗಲ್ಲ, ದೇಶದ ಕತೆ ಏನು ಅಂತೆಲ್ಲ ವರಾತ ಶುರು ಇಟ್ಟುಕೊಂಡರು. ಪಾಪ ಅನಿಸ್ತು.
ಇತ್ತ ಮೋದಿ ಪ್ರಧಾನಿ ಆದರೆ ದೇಶ ಬಿಡುತ್ತೇನೆ ಎಂದಿದ್ದ ಅನಂತಮೂರ್ತಿಯವರ ವಿರುದ್ಧ ಮೋದಿ ಅಭಿಮಾನಿಗಳೋ ಪಕ್ಷದ ಕಾರ್ಯಕರ್ತರೋ ಪ್ರತಿಭಟನೆ ನಡೆಸುತ್ತ, ಮೂರ್ತಿಯವರು ಕೂಡಲೇ ದೇಶ ಬಿಡಲಿ ಎಂದು ಒಂದೆಡೆ ಕೂಗಿಕೊಳ್ಳುತ್ತಿದ್ದರೆ ಮತ್ತೊಂದಿಷ್ಟು ಅವಿವೇಕಿಗಳು ಮೂರ್ತಿಯವರಿಗೆ ಪರದೇಶಕ್ಕೆ ವೀಸಾ ಪಾಸ್‍ಪೋರ್ಟು ಮಾಡಿಸುತ್ತೇವೆ, ಒಂದು ರೂ.ಕೊಡಿ ಎನ್ನುವ ಕೆಲಸಕ್ಕೆ ಕೈ ಹಾಕಿದ್ದರು. ಇಂಥ ಒಬ್ಬರನ್ನು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಳ್ಳಬೇಕಾಯಿತು. ಅನಂತಮೂರ್ತಿಯವರು ಕೂಡ ನಮ್ಮ ಜನತಂತ್ರ ವ್ಯವಸ್ಥೆಯ ಭಾಗ, ನಿಮಗೆ ಇಷ್ಟವಾಗದಿದ್ದರೂ ವ್ಯವಸ್ಥೆಯ ಬಗ್ಗೆ ಅವರಿಗೆ ಅನಿಸಿದ್ದನ್ನು ಹೇಳುವ ಹಕ್ಕು ಖಂಡಿತ ಅವರಿಗೆ ಇದೆ. ಅವರು ಹಾಗಂದಿದ್ದಕ್ಕೆ ನೀವು ತೋರಿಸುತ್ತಿರುವ ಪ್ರತಿಕ್ರಿಯೆ ಯಾರೂ ಒಪ್ಪುವಂಥದ್ದಲ್ಲ ಎಂದೆ. ನೀವು ಸರಿ ಇಲ್ಲ ಅನ್ನುತ್ತ ಮುಖ ತಿರುಗಿಸಿದರು.
ಯಾವುದೋ ಐಡಿಯಾಲಜಿಗಳಿಗೆ ತಮ್ಮನ್ನು ಮಾರಿಕೊಂಡ ಇಂಥ ಎರಡು ಅತಿರೇಕಗಳ ನಡುವೆ ಜನ ಸಾಮಾನ್ಯರ ದೃಷ್ಟಿ ಮತ್ತು ತೀರ್ಪುಗಳಿವೆ. ಇವರು ಯಾರಿಗೂ ಅರ್ಥವಾಗುತ್ತಿಲ್ಲ! ಬಿಜೆಪಿ ಅನಿರೀಕ್ಷಿತ ಪ್ರಮಾಣದಲ್ಲಿ ಬಹುಮತ ಪಡೆದಿರಬಹುದು, ಕಾಂಗೈ ಅನಿರೀಕ್ಷಿತ ಸೋಲು ಕಂಡಿರಬಹುದು. ಇವರಿಬ್ಬರು ಇನ್ನೂ ಗೆಲುವಿನ ಸಂಭ್ರಮ ಹಾಗೂ ಸೋಲಿನ ಸಂಕಟದಲ್ಲಿದ್ದರೆ ಜನ ತಮ್ಮ ಕೆಲಸವಾಯಿತೆಂದು ತಮ್ಮ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಸಾಹಿತ್ಯವಾಗಲಿ, ರಾಜಕೀಯವಾಗಲಿ, ಯಾವುದೇ ಕ್ಷೇತ್ರದಲ್ಲಿ ಐಡಿಯಾಲಜಿಗೆ ಅಂಟಿಕೊಳ್ಳುವ ಪ್ರವೃತ್ತಿ ಅದರ ಅನುಯಾಯಿಗಳಿಗೆ, ಕಾರ್ಯಕರ್ತರಿಗೆ ಮುಖ್ಯವೂ ಅನಿವಾರ್ಯವೂ ಆಗಬಹುದು ಆದರೆ ಜನ ಸಾಮಾನ್ಯರಿಗೆ ಅಲ್ಲ. ಅದೀಗ ಮತ್ತೆ ಸಾಬೀತಾಗಿದೆ. ಈ ಬಾರಿ ಬಿಜೆಪಿಗೆ ಈ ಪಾಟಿ ಒಲಿದಿದ್ದಾರೆ ಅಂದರೆ ಬಿಜೆಪಿಯ ಐಡಿಯಾಲಜಿಗೆ ಜನ ತಮ್ಮನ್ನು ತಾವು ಅರ್ಪಿಸಿಕೊಂಡುಬಿಟ್ಟಿದ್ದಾರೆ ಅಂದೇನೂ ಅರ್ಥವಲ್ಲ. ಕಾಂಗೈ ತಿರಸ್ಕøತವಾಗಿದೆ ಅಂದರೆ ಅದರ ಐಡಿಯಾಲಜಿಗೆ ಇನ್ನು ಜಾಗವಿಲ್ಲ ಎಂದೂ ಅಲ್ಲ. ಈ ಫಲಿತಾಂಶದಿಂದ ಬಿಜೆಪಿ ಕೊಬ್ಬುವಂತಿಲ್ಲ, ಕಾಂಗೈ ಹತಾಶವಾಗಬೇಕಿಲ್ಲ. ಹಾಗಾದರೆ ರಾಜಕೀಯದವರಿಂದ ಜನ ಬಯಸುವುದೇನು?
ಕಾಲಧರ್ಮಕ್ಕೆ ಅನುಗುಣವಾಗಿ ಸ್ಪಂದಿಸುವ, ಬರೀ ಮಾತನಾಡದೇ ಕೆಲಸ ಮಾಡುವವರನ್ನು ಜನ ಗೌರವಿಸುವ ರೀತಿಯೇ ಬೇರೆ. ಜನತಂತ್ರ ವ್ಯವಸ್ಥೆಯಲ್ಲಿ ಕೆಲಸಕ್ಕೂ ಚಿಂತನೆಗೂ ವ್ಯಾಪಕ ಅವಕಾಶಗಳಿವೆ. ಜನತೆ ಇದನ್ನು ಗಮನಿಸುತ್ತಲೇ ಇರುತ್ತಾರೆ ಎಂಬ ಎಚ್ಚರ ಇಲ್ಲಿ ಕೆಲಸಮಾಡುವ ಎಲ್ಲರಿಗೂ ಇರಬೇಕಾದುದು ಅಗತ್ಯ. ಕಾಂಗೈ ಸೋತಿದ್ದಕ್ಕೆ ಅವರ ಪಕ್ಷದಲ್ಲಿ ಆತ್ಮಾವಲೋಕನ ನಡೆದು ಸೋನಿಯಾ, ರಾಹುಲ್ ಪದತ್ಯಾಗ ಬೇಡ ಅಂದರೆ ಅದು ಪಕ್ಷದವರ ತೀರ್ಮಾನ. ಆದರೆ ಜನತೆಯ ತೀರ್ಮಾನವಾಗಬೇಕಿಲ್ಲ. ಆ ಪಕ್ಷದಲ್ಲಿ ವಯಸ್ಸು, ಅನುಭವಗಳಲ್ಲಿ ರಾಹುಲ್-ಪ್ರಿಯಾಂಕ ಗಾಂಧಿಯ ಎರಡರಷ್ಟು ವಯಸ್ಸಾದವರಿದ್ದಾರೆ. ಅಂಥವರನ್ನೆಲ್ಲ ಮೂಲೆಗೆ ತಳ್ಳಿ, ಪಕ್ಷ ಹಾಗೂ ದೇಶದ ಅಧಿಕಾರಗಳನ್ನು ತಮ್ಮ ಮನೆತನದ ಜಹಗೀರು ಎಂಬಂತೆ ನೋಡುವುದನ್ನು ಜನ ಬಯಸಲಾರರು. ಕಾಂಗೈನಲ್ಲಿ ಅಂತಿಮ ತೀರ್ಮಾನ ಇರುವುದು ಯಾರಲ್ಲಿ ಎಂಬುದನ್ನು ಜನ ಅರ್ಥಮಾಡಿಕೊಂಡಿದ್ದಾರೆ. ದೇಶದ ಆರ್ಥಿಕತೆ ಸಂಕಷ್ಟದಲ್ಲಿದೆ, ಸುತ್ತಲ ದೇಶಗಳಿಂದ ಭೀತಿ ಎದುರಿಸುತ್ತಿದೆ, ಆಂತರಿಕ ಸಮಸ್ಯೆಗಳು ಉಲ್ಬಣವಾಗುತ್ತಿವೆ, ಆಹಾರ ಪದಾರ್ಥಗಳ ಬೆಲೆ ಗಗನ ದಾಟಿವೆ. ಇಂಥ ಸುಡು ಸಮಸ್ಯೆಗಳನ್ನು ನಿವಾರಿಸುವ ಸಾಮಥ್ರ್ಯ ಮೇಲ್ನೋಟಕ್ಕಾದರೂ ಸಾಬೀತಾಗುವ ವ್ಯಕ್ತಿಯ ಅಗತ್ಯ ಜನರಿಗಿದೆ. ಗಾಂಧಿ ವಂಶದ ಕುಡಿ ಎಂಬುದನ್ನು ಬಿಟ್ಟರೆ ರಾಹುಲ್‍ರಲ್ಲಿ ಇಂಥ ಯಾವ ಅನುಭವವೂ ಜನರಿಗೆ ಕಂಡಿಲ್ಲ. ಅವರ ಸಂದರ್ಶನ, ಮಾತುಕತೆಯ ಧಾಟಿಗಳನ್ನು ಕಂಡ ಜನ ಇದನ್ನು ಅರ್ಥಮಾಡಿಕೊಂಡಿದ್ದಾರೆ. ಹತ್ತು ವರ್ಷ ಆಡಳಿತ ನೀಡಿದ ಶುದ್ಧಾಂಗ ಮನಮೋಹನ ಸಿಂಗ್‍ರನ್ನು ರಾಹುಲ್ ಬೀಳ್ಕೊಡುಗೆ ಸಂದರ್ಭದಲ್ಲಿ ಕೂಡ ನಡೆಸಿಕೊಂಡ ರೀತಿ ಯಾರಿಗೂ ಸರಿ ಎನಿಸಿಲ್ಲ. ರಾಹುಲ್ ಪಕ್ಷದ ವರಿಷ್ಠ ಸ್ಥಾನದಲ್ಲಿರುವ ಕಾರಣ ಇವೆಲ್ಲ ಆ ಪಕ್ಷದವರಿಗೆ ಸರಿ ಎನಿಸಬಹುದು ಅಥವಾ ಹಿರಿ ತಲೆಗಳಿಗೆ ಸರಿ ಇಲ್ಲ ಅನಿಸಿದರೂ ಕುಟುಂಬ ನಿಷ್ಠೆ, ದಾಕ್ಷಿಣ್ಯದಿಂದ ಹೇಳಲು ಬಾಯಿ ಬರದೇ ಇರಬಹುದು. ಆದರೆ ಜನಸಾಮಾನ್ಯರು ತಮ್ಮನ್ನು ಯಾರಿಗೂ ತೆತ್ತುಕೊಂಡಿಲ್ಲ! ಅವರ ಅಭಿಪ್ರಾಯ ಸ್ಪಷ್ಟವಾಗಿದೆ.
ರಾಜ್ಯದಲ್ಲಿ ಕಾಂಗೈ ಆಡಳಿತ ನಡೆಸುತ್ತಿರುವ ಕಾರಣ ಹಾಗೂ ಜನಪ್ರಿಯ ಯೋಜನೆ ಜಾರಿ ಮಾಡಿದ ಕಾರಣ ಇಲ್ಲಿನ ಎಲ್ಲ ಸ್ಥಾನಗಳೂ ತಮ್ಮದೇ ಎಂದುಕೊಂಡಿದ್ದವರಿಗೂ ಫಲಿತಾಂಶ ಬಿಸಿ ಮುಟ್ಟಿಸಿದೆ. ಹಳಸಲು ಜಾತ್ಯತೀತ ವರಾತಗಳು, ಜನಪ್ರಿಯ ಯೋಜನೆಗಳನ್ನು ನೀಡಿ ಜನರನ್ನು ಸೆಳೆಯುವ ತಂತ್ರ, ಭಾಷಣಗಳ ಗಿಮಿಕ್‍ಗಳು ರಾಜಕೀಯದಲ್ಲಿ ಕೆಲಸಮಾಡುವ ಕಾಲ ದಶಕಗಳ ಹಿಂದೆಯೇ ಕಳೆದುಹೋಗಿದೆ. ಹೊಸ ಮತದಾರರ ಆಸೆ-ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸಾಂಪ್ರದಾಯಿಕ ರಾಜಕೀಯ ನೇತಾಗಳು ಹಾಗೂ ಪಂಡಿತರು ಖಂಡಿತ ಸೋತಿದ್ದಾರೆ. ಸರ್ಕಾರ ಅನ್ನಭಾಗ್ಯ ನೀಡಿದೆ, ಶಾದಿಭಾಗ್ಯ ನೀಡಿದೆ, ಸಾಲಮನ್ನಾ ಮಾಡಿದೆ ಆದರೂ ಜನ ಓಟು ಹಾಕಿಲ್ಲ ಅಂದರೆ ಜನ ದಡ್ಡರಲ್ಲ, ಹಾಗೆ ತಿಳಿದವರು ದಡ್ಡರು. ಇಂಥ ಜನಪ್ರಿಯ ಯೋಜನೆಗಳ ಹೊರೆ ಸುತ್ತುಬಳಸಿ ಇಂದಲ್ಲ ನಾಳೆ ತಮ್ಮ ಕಾಲನ್ನೇ ಸುತ್ತಿಕೊಳ್ಳುತ್ತವೆ ಎಂಬ ಅರಿವು ಜನರಿಗೆ ಇದೆ. ಯಾವುದೇ ಯೋಜನೆ ಕೊಡಿ, ಜನ ಬೇಡ ಎನ್ನುವುದಿಲ್ಲ. ಹಾಗೆಂದ ಮಾತ್ರಕ್ಕೆ ಅದನ್ನೆಲ್ಲ ಜನ ಒಪ್ಪಿದ್ದಾರೆ ಎಂದರ್ಥವಲ್ಲ. ವಾಸ್ತವಿಕತೆಗೆ ದೂರವಾದ ಸಂಗತಿಯನ್ನು ಒಪ್ಪಲು ಜನ ಕಣ್ಣು-ಕಿವಿ ಮುಚ್ಚಿ ಕೂತಿರುವುದಿಲ್ಲ. ಮಾಧ್ಯಮ-ಮಾಹಿತಿಗಳಿಂದ ಸುತ್ತಲ ವಿದ್ಯಮಾನಗಳ ಅರಿವು ಕ್ಷಣಕ್ಷಣಕ್ಕೂ ಜನರ ಮುಂದೆ ಬಂದು ಬೀಳುವ ಕಾಲ ಇದು. ರಚನಾತ್ಮಕ ಕೆಲಸ, ನೇರ ನಡೆ ಮತ್ತು ನುಡಿ ಕಿಂಚಿತ್ತಾದರೂ ಕಂಡು ವಿಶ್ವಾಸ ಹುಟ್ಟಿದರೆ ಜನಕ್ಕೆ ಅಷ್ಟು ಸಾಕು.
ಇಂದಿನ ವೇಗದ ಜೀವನಶೈಲಿಯಲ್ಲಿ ಜಾತಿ-ಧರ್ಮಗಳ ಕುರಿತ ಒಣ ಚರ್ಚೆಗಳಿಗೆ ಸಮಯ ಹಾಳು ಮಾಡಲು ಜನ ಸಿದ್ಧವಿಲ್ಲ. ಒಂದೊಂದು ಸತ್ಯವನ್ನು ಹೇಳುವ ಹಲವು ಐಡಿಯಾಲಜಿಗಳಿಗೆ ಕಿವಿಗೊಟ್ಟು ತಲೆ ಹಾಳುಮಾಡಿಕೊಳ್ಳಲೂ ಅವರು ತಯಾರಿಲ್ಲ. ಇದರ ಪರಿಣಾಮವೇ ಈ ಚುನಾವಣಾ ಫಲಿತಾಂಶ. ಇದನ್ನು ಅರ್ಥಮಾಡಿಕೊಳ್ಳದೇ ಗೆದ್ದವರ-ಸೋತವರ ಪರ ವಿರೋಧ; ಸಂಭ್ರಮ-ಸಂಕಟಗಳಲ್ಲೇ ಕಾಲ ಹರಣ ಮಾಡುತ್ತ ಕೂತರೆ ಅಂಥವರನ್ನು ನೋಡಿ ಜನಸಾಮಾನ್ಯರು ನಗಬಲ್ಲರೇ ವಿನಾ ಖಂಡಿತ ಅಳುವುದಿಲ್ಲ.
No comments:
Post a Comment