ನಮ್ಮದು ಜನತಂತ್ರ ವ್ಯವಸ್ಥೆ. ಇಲ್ಲಿ ಎಲ್ಲವನ್ನೂ ಜನರೇ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಅವ್ಯಸವ್ಥೆ ಮೇರೆ ಮೀರಿದಾಗ ಮಾತ್ರ ಇಲ್ಲಿ ಯಾರೂ ಹೇಳುವವರು, ಕೇಳುವವರು ಇಲ್ಲವೇ ಎಂಬ ಚರ್ಚೆ ಕಾಣಿಸುತ್ತದೆ. ಆಗ ಮಾತ್ರ ಸರ್ಕಾರದ, ಜನಪ್ರತಿನಿಧಿಗಳ ಪ್ರವೇಶವಾಗುತ್ತದೆ. ಅಲ್ಲಿಯವರೆಗೂ ಎಲ್ಲವೂ ಅದರ ಪಾಡಿಗೆ ಅದು ನಡೆಯುತ್ತದೆ. ಶಿಕ್ಷಣ, ಆರೋಗ್ಯ, ಆಹಾರ, ಕೃಷಿ, ಮೂಲಸೌಕರ್ಯ ಹೀಗೆ ಯಾವುದೇ ಕ್ಷೇತ್ರದಲ್ಲೂ ಈ ವಿದ್ಯಮಾನ ಸಾಮಾನ್ಯ. ನಾವು ಅದನ್ನು ಒಪ್ಪಿಕೊಂಡಿದ್ದೇವೆ. ಬೀದಿ ಬದಿ ವ್ಯಾಪಾರಿಗಳೂ ಇದಕ್ಕೆ ಹೊರತಲ್ಲ.
ಖ್ಯಾತ ಬ್ರಾಂಡುಗಳ ಚಪ್ಪಲಿ, ಪುಸ್ತಕ, ಪಾನಿಪುರಿ, ಚುರುಮುರಿ, ಬಟ್ಟೆ, ತಿಂಡಿತೀರ್ಥ, ಹಣ್ಣು, ಜ್ಯೂಸು, ಜುವೆಲ್ಲರಿ ಇತ್ಯಾದಿ ಏನುಂಟು ಏನಿಲ್ಲ? ಇವೆಲ್ಲವೂ ಬೆಂಗಳೂರಿನ ಫುಟ್‍ಪಾತ್ ಮೇಲೆ ಲಭ್ಯ. ನಿಜವಾಗಿ ಪಾದಚಾರಿ ಮಾರ್ಗಗಳು ಇಂದು ಈ ವ್ಯಾಪಾರಿಗಳಿಂದ ಆವೃತವಾಗಿವೆ. ವಾಹನ ನಿಲುಗಡೆ ಜಾಗದಲ್ಲೂ ಗಾಡಿಗಳನ್ನು ಇಟ್ಟುಕೊಂಡು ಅತಿತ್ತ ಸರಿಯದೇ ವಾಹನ ನಿಲುಗಡೆಯವರ ಮೇಲೆ ಹರಿಹಾಯವುದು, ಸಾರ್ವಜನಿಕ ರಸ್ತೆಯ ಹಕ್ಕೆಲ್ಲ ತಮಗೇ ಸೇರಿದ್ದು ಎಂಬಂತೆ ಈ ವ್ಯಾಪಾರಿಗಳು ವರ್ತಿಸುವುದು ಜನರ ಅನುಭವಕ್ಕೆ ಬರದಿರುವ ಮಾತಲ್ಲ. ಏನೋ ಹೊಟ್ಟೆಪಾಡು ಮಾಡಿಕೊಳ್ಳಲಿ ಬಿಡಿ ಎಂದು ಕ್ಷೇತ್ರದ ಜನಪ್ರತಿನಿಧಿಗಳು ಮತ ಬ್ಯಾಂಕಿನ ಮೇಲೆ ಕಣ್ಣಿಟ್ಟು ಇವರ ಮೇಲೆ ಔದಾರ್ಯ ತೋರಿದರೆ, ಪೊಲೀಸರು ಮತ್ತು ನಗರ ಪಾಲಿಕೆಯವರು ತಮ್ಮ ಹೊಟ್ಟೆಪಾಡಿಗಾಗಿ ಇವರನ್ನು ಬಿಟ್ಟುಕೊಡುವುದಿಲ್ಲ. ಹೀಗಾಗಿ ಹೈರಾಣಾಗುವವರು ಸಾಮಾನ್ಯ ಜನತೆ.
ಪೊಲೀಸರಿಗಂತೂ ಇಂಥ ವ್ಯಾಪಾರಿಗಳೇ ಹಣದ ಹುಂಡಿ ಇದ್ದಂತೆ. ಪೊಲೀಸರ ನೀಚತನ ನೋಡಲು ಕೆ ಆರ್ ಮಾರುಕಟ್ಟೆ ಬಳಿ ಮೇಲ್ಸೇತುವೆ ಕೆಳಗೆ ಮುಂಜಾನೆ ಆರರ ಸಮಯ ನಡೆಯುವ ರಸ್ತೆ ಬದಿಯ ಸಗಟು ವ್ಯಾಪಾರವನ್ನು ಗಮನಿಸಬೇಕು. ಬಿಡಿ ಗುಲಾಬಿ ಹೂವಿನಿಂದ ಹಿಡಿದು, ಐದು ರೂ. ತುಳಸೀ ಹಾರ, ಸಾವಿರಾರು ರೂ.ಗಳ ದೊಡ್ಡ ಅಲಂಕೃತ ಹಾರಗಳವರೆಗೆ, ಸೊಪ್ಪು, ತರಕಾರಿ, ಹಣ್ಣು ಇತ್ಯಾದಿ ಇತ್ಯಾದಿಗಳನ್ನು ರೈತರೋ, ದಲ್ಲಾಳಿಗಳೋ ನಿತ್ಯ ಅಲ್ಲಿ ಮಾರುತ್ತಾರೆ. ತಾಜಾ ಮಾಲುಗಳು ಅಗ್ಗದ ದರದಲ್ಲಿ ದೊರೆಯುವುದರಿಂದ ಚಿಲ್ಲರೆ ಅಂಗಡಿಗಳವರು, ಜನರು ಅಲ್ಲಿ ಖರೀದಿ ನಡೆಸುವುದು ಸಾಮಾನ್ಯ. ಏಳು ಗಂಟೆ ನಂತರ ಸಂಚಾರ ದಟ್ಟಣೆ ಆರಂಭವಾಗುವ ಕಾರಣ ಲಗುಬಗೆಯಲ್ಲಿ ವಹಿವಾಟು ನಡೆಯುತ್ತದೆ. ಆ ವಲಯದ ಪೊಲೀಸರೂ ಅಷ್ಟು ಹೊತ್ತಿಗೆ ಅಲ್ಲಿ ಹಾಜರು ಇರುತ್ತಾರೆ. ಬಂದೋಬಸ್ತ್ ಕಾರಣಕ್ಕಲ್ಲ. ಮಾಮೂಲಿ ವಸೂಲಿಗೆ! ಕುಕ್ಕೆಗೆ ತಲಾ ಐದೋ ಹತ್ತೋ ವಸೂಲಿ ರಾಜಾರೋಸು ನಡೆಯುತ್ತದೆ. ಪೊಲೀಸರೂ ಜಾಣರು. ಅವರೊಂದು ಬದಿ ನಿಲ್ಲುತ್ತಾರೆ. ಅವರ ಏಜೆಂಟ್ ಪ್ರತೀ ವ್ಯಾಪಾರಿಯ ಬಳಿ ಹೋಗಿ ವಸೂಲಿ ಆರಂಭಿಸುತ್ತಾನೆ. ಯಾಕೆಂದು ಕೇಳಿದರೆ ಪೊಲೀಸರತ್ತ ಕಣ್ಣುಹಾಯಿಸುತ್ತಾನೆ. ಚಕಚಕನೆ ಎಲ್ಲರ ಬಳಿ ಕಪ್ಪ ಸುಲಿದು ಪೊಲೀಸರಿಗೆ ಅರ್ಪಿಸಿ ಅವರ ಕೃಪಾಕಟಾಕ್ಷ ಪಡೆದ ಧನ್ಯತೆ ಪಡೆದು ಮಾಯವಾಗುತ್ತಾನೆ. ಹೀಗೆ ಮುಂಜಾನೆ ಸೂರ್ಯ ಹುಟ್ಟುವಾಗಲೇ ಆರಂಭವಾಗುವ ಪೊಲೀಸರ ಎಂಜಲು ಸೇವನೆ ಸಂಜೆಯಾಗುತ್ತಿದ್ದಂತೆ ತೀವ್ರವಾಗುತ್ತದೆ. ಹಾದಿ ಬದಿಯ ಹೊಟೇಲುಗಳು, ಚುರುಮುರಿ ಗಾಡಿಗಳು, ಹಣ್ಣಿನವರು, ಹೀಗೆ ಎಲ್ಲರೂ ನಿಗದಿತ ಕಪ್ಪ ಸಲ್ಲಿಸಲೇಬೇಕು. ಸಜ್ಜನ್‍ರಾವ್ ವೃತ್ತದ ಬಳಿ ಮಾರುಕಟ್ಟೆ ರಸ್ತೆ ಎಂಬ “ಫುಡ್ ಸ್ಟ್ರೀಟ್’’ ಇದೆ. ಲೆಕ್ಕಕ್ಕೆ ಅದು ಏಕಮುಖ ರಸ್ತೆ. ಆದರೆ ಸಂಜೆ ಎಂಟು ಗಂಟೆ ವೇಳೆಗೆ ಯಾರು ಎಲ್ಲಿ ಹೇಗೆ ನುಗ್ಗುತ್ತಿದ್ದಾರೆ ಎಂಬುದೇ ತಿಳಿಯದಷ್ಟು ದಟ್ಟಣೆ ಅಲ್ಲಿರುತ್ತದೆ. ಸಂಜೆ ನಾಲ್ಕರ ಆಸುಪಾಸಿನಲ್ಲಿ ಕಟ್ಟುನಿಟ್ಟಿನ ನಿಯಮ ಪಾಲಿಸುವ ಪೊಲೀಸರು ಆಮೇಲೆ ನಾಪತ್ತೆಯಾಗುತ್ತಾರೆ. ಅವರ ಜಾಗ ಏನಿದ್ದರೂ ಆ ರಸ್ತೆಯ ಒಂದು ಮೂಲೆ. ರಾತ್ರಿ ಹನ್ನೊಂದರ ನಂತರ ಎಲ್ಲ ಅಂಗಡಿಗಳ ಒಟ್ಟೂ ಕಪ್ಪ ಅವರ ಜೇಬು ಸೇರುತ್ತದೆ. ಅಲ್ಲಿನ ಪ್ರತಿ ಹಾದಿಬದಿ ಅಂಗಡಿಯವರೂ ವಾರದ ದಿನಗಳಲ್ಲಿ ತಲಾ 150 ರೂ. ವಾರಾಂತ್ಯದಲ್ಲಿ ತಲಾ 200 ರೂ. ಪೊಲೀಸರಿಗೆ ಪೀಕಬೇಕು. ಒಬ್ಬ ಚುರುಮುರಿ ಗಾಡಿಯವನು ನಿತ್ಯ ಐವರು ಪೇದೆಗಳಿಗೆ ತಲಾ 30 ರೂ.ನಂತೆ 150 ರೂ. ತೆರಲೇಬೇಕು. ಕೆಲವೊಮ್ಮೆ ಪೊಲೀಸ್ ಸಮವಸ್ತ್ರದಲ್ಲೇ ಸುಲಿಗೆ ನಡೆಯುತ್ತದೆ. ಈ ಎಂಜಲು ದರ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಸ್ವಲ್ಪ ದುಬಾರಿ. ಅವರು ತಲಾ 300 ರೂ. ತೆರಬೇಕು. ಕಪ್ಪ ಸಲ್ಲಿಸದಿದ್ದರೆ ಪೊಲೀಸರ ಅಸ್ತ್ರ, ನಾಗರಿಕ ಆರೋಗ್ಯ ಕಾಳಜಿ, ನೂರಾರು ನಿಯಮಗಳ ಪಟ್ಟಿ ಹೊರಬೀಳುತ್ತದೆ. ಅಂಗಡಿಯ ಎಲ್ಲ ದಾಸ್ತಾನು ಠಾಣೆ ಸೇರುತ್ತದೆ. ಅದನ್ನು ಬಿಡಿಸಿಕೊಳ್ಳಲು ಕನಿಷ್ಠ 500ರೂ. ತೆರಬೇಕು. ಇದೆಲ್ಲ ರಗಳೆ ಯಾಕೆಂದು ಸ್ಥಳದಲ್ಲೇ 150ರೂ.ಗಳಿಗೆ ವ್ಯವಹಾರ ಮುಕ್ತಾಯ ಕಾಣುತ್ತದೆ! ಎಂಥಾ ದುರಂತ. ಇದೆಲ್ಲ ಪೊಲೀಸ್ ಇಲಾಖೆಗೂ ಗೊತ್ತಿಲ್ಲ, ಭ್ರಷ್ಟಾಚಾರದ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ ಯಾವ ಪಕ್ಷದ ಯಾವ ಪುಢಾರಿಗೂ ಗೊತ್ತಿಲ್ಲ?!
ಬೆಂಗಳೂರಿನಲ್ಲಿ 30,000 ಹಾದಿಬದಿ ವ್ಯಾಪಾರಿಗಳಿದ್ದಾರೆÉಂದು ಬಿಬಿಎಂಪಿ ಅಂದಾಜಿಸಿದೆ. ಇವರಲ್ಲಿ 10,000 ಜನ ಆಹಾರ ಪದಾರ್ಥ ಮಾರುವವರು. ಬೆಂಗಳೂರಿನಲ್ಲಿ ಪಂಚತಾರಾ ಹೊಟೇಲುಗಳನ್ನು ಹೊರತುಪಡಿಸಿದರೆ ನೋಂದಾಯಿತ ಅಗ್ಗದ ಹೊಟೇಲುಗಳ ಸಂಖ್ಯೆ 3600. ಊರಿನ ಜನಸಂಖ್ಯೆ 75 ಲಕ್ಷ ದಾಟಿದೆ. ಈ ಜನರ ಬೇಡಿಕೆ, ಕೆಲಸದ ಸಮಯ ಮೊದಲಾದವುಗಳನ್ನು ಹೊಟೇಲುಗಳು ಪೂರೈಸಲಾರವು. ಅಲ್ಲದೇ ಹೊಟೇಲುಗಳು ಎದುರಿಸಬೇಕಾದ ಸಮಸ್ಯೆ ಒಂದೆರಡಲ್ಲ. ಆರೋಗ್ಯ ಇಲಾಖೆ, ತೂಕ ಮತ್ತು ಅಳತೆ ಇಲಾಖೆ, ಇಎಸ್‍ಐ, ಕಾರ್ಮಿಕ ಇಲಾಖೆ, ಅಗ್ನಿಶಾಮಕ ದಳ, ವಾಣಿಜ್ಯ ತೆರಿಗೆ, ಬಿಬಿಎಂಪಿಯ ನೀರು, ಒಳಚರಂಡಿ ವಿಭಾಗ, ಕಟ್ಟಡ ಮಾಲೀಕ, ಪೊಲೀಸ್ ಮೊದಲಾದವರ ಅನುಮತಿ, ಪರವಾನಿಗೆ, ಆಹಾರ ಬೆಲೆ ಇತ್ಯಾದಿಗಳಿಂದ ಹೊಟೇಲು ತಿಂಡಿ ಸ್ವಲ್ಪ ದುಬಾರಿಯೂ ಆಗುತ್ತದೆ. ಈ ಯಾವ ಕಟ್ಟುಪಾಡುಗಳೂ ಹಾದಿಬದಿಯವರಿಗೆ ಇಲ್ಲ. ಮಾಮೂಲು ಕೊಟ್ಟರೆ ಎಲ್ಲವೂ ಸರಿಯೇ. ಹೀಗಾಗಿ ಜನ ಹಾದಿಬದಿಯ ಅಗ್ಗದ ತಿಂಡಿ ತೀರ್ಥಕ್ಕೆ ಮುಗಿಬೀಳುತ್ತಿದ್ದಾರೆ. ಈ ಅಗ್ಗದ ತಿನಿಸುಗಳು ಆರೋಗ್ಯ ಕೆಡಿಸಿ ಎರಡರಷ್ಟು ಹೆಚ್ಚು ಹಣ ಬೇರೆಡೆ ಹೋಗುವಂತೆ ಮಾಡುತ್ತದೆ ಎಂಬುದು ಮಾತ್ರ ನಮ್ಮ ಅಕ್ಷರಸ್ಥರಿಗೆ ಇನ್ನೂ ಅರಿವಾಗಿಲ್ಲ.
ಬೆಂಗಳೂರಿನ ಕೆ ಆರ್ ಮಾರುಕಟ್ಟೆ, ಯಶವಂತಪುರದ ಆರ್‍ಎಂಸಿ ಯಾರ್ಡ್, ಶಿವಾಜಿ ನಗರ, ಮಲ್ಲೇಶ್ವರ, ಜಯನಗರ ಸಂಕೀರ್ಣ, ಬನಶಂಕರಿ, ಶ್ರೀನಗರ ಬಸ್ ನಿಲ್ದಾಣ, ಗಾಂಧೀ ಬಜಾರುಗಳಲ್ಲಿ ಬೀದಿವ್ಯಾಪಾರಿಗಳು ಹೆಚ್ಚು ಸಾಂದ್ರೀಕರಣವಾಗಿದ್ದಾರೆ. ಈಚೆಗೆ ಸರ್ಕಾರೇತರ ಸಂಸ್ಥೆಯೊಂದು ನಡೆಸಿದ ಸಮೀಕ್ಷೆ ಹೇಳುವಂತೆ ನಗರದ ಮೇಲ್ವರ್ಗದ ಕುಟುಂಬ ಹಣ್ಣು ಖರೀದಿಗೆ ಪ್ರತಿ ತಿಂಗಳು ಸುಮಾರು 1500 ರೂ, ಮಧ್ಯಮ ವರ್ಗದ ಕುಟುಂಬ ಎಲ್ಲ ಬಗೆಯ ಖರೀದಿಗೆ ಸುಮಾರು 3000 ರೂ. ಕೆಳ ವರ್ಗದ ಕುಟುಂಬ ಸುಮಾರು 800 ರೂ.ಗಳನ್ನು ಬೀದಿ ವ್ಯಾಪಾರಕ್ಕೆ ವ್ಯಯಿಸುತ್ತದೆ.
ಯಾವ ತೆರಿಗೆ ಬಾಧೆಯೂ ಇಲ್ಲದ, ಬಾಡಿಗೆ ಗೋಜಿಲ್ಲದ, ಬಂದಷ್ಟು ಲಾಭವಾಗುವ ಈ ವ್ಯಾಪಾರ ದಿನೇ ದಿನೇ ವ್ಯಾಪಕವಾಗುತ್ತಿದೆ. ನಿರುದ್ಯೋಗ ಸಮಸ್ಯೆ ಇದಕ್ಕೆ ಒಂದು ಕಾರಣವಾದರೆ, ನಿಯತ್ತಿನ ವ್ಯಾಪಾರ ವಹಿವಾಟಿಗೆ ಇರುವ ಸರ್ಕಾರದ ನೂರಾರು ನಿಯಮಾವಳಿಗಳು, ಬೀದಿ ವ್ಯಾಪಾರಕ್ಕೆ ಯಾವುದೇ ನೀತಿ ಇಲ್ಲದಿರುವುದು ಉಳಿದ ಕಾರಣಗಳು. ಈ ವ್ಯಾಪಾರಿಗಳು ಸಂಘ ಕಟ್ಟಿಕೊಂಡಿದ್ದರೂ ಅವರಿನ್ನೂ ಅಸಂಘಟಿತರೇ ಆಗಿದ್ದಾರೆ. ತೆರಿಗೆ ಕಟ್ಟದ ಕಾರಣ ಸರ್ಕಾರವೂ ಇವರಿಗೆ ಯಾವುದೇ ಸವಲತ್ತು ನೀಡಲು ಮುಂದಾಗುವುದಿಲ್ಲ. ಹೀಗಾಗಿ ಯಾವುದೇ ವಿಮೆ, ಕಾರ್ಮಿಕ ನಿಯಮದ ಅಡಿ ಇವರು ಬರುವುದಿಲ್ಲ. ನಿತ್ಯ ವ್ಯಾಪಾರ ಮಾಡುವುದು, ಒಂದಿಷ್ಟು ಎಂಜಲು ಬಿಸಾಡುವುದು, ಬಂದ ಲಾಭದಲ್ಲೇ ಜೀವನ ಸವೆಸುವುದು ಬಹಳಷ್ಟು ಜನರ ಕರ್ಮವಾಗಿದ್ದರೆ, ಇವರಲ್ಲೇ ಮುಖಂಡರಾದವರು ಭಾರೀ ಲಾಭವನ್ನೇ ಮಾಡುತ್ತಿದ್ದಾರೆ. ಚೀಟಿ ವ್ಯವಹಾರ, ರಿಯಲ್ ಎಸ್ಟೇಟ್ ದಂಧೆ ಮಾಡುವ ಬೀದಿವ್ಯಾಪಾರಿಗಳಿಗೇನೂ ಕೊರತೆ ಇಲ್ಲ.
ನಿತ್ಯ ನಡೆಯುವ ಈ ವಹಿವಾಟಿನಿಂದ ಸರ್ಕಾರಕ್ಕೆ ಆಗುವ ನಷ್ಟ, ಸಾರ್ವಜನಿಕರ ಆರೋಗ್ಯ ಹಾನಿ, ಪರಿಸರ ಮಾಲಿನ್ಯದ ಅಪಾಯ ಮತ್ತು ಪೊಲೀಸರಿಗೆ ಆಗುವ ಲಾಭದ ಅಂದಾಜು ಯಾರಿಗೂ ಇಲ್ಲ. ಇದರಿಂದ ಬೀದಿ ನಾಯಿ ಉತಾವಳಿಯೂ ಹೆಚ್ಚಿದೆ ಎಂದು ಸ್ವತಃ ಬಿಬಿಎಂಪಿಯೇ ಅಲವತ್ತುಕೊಳ್ಳುತ್ತದೆ.
ಈ ವ್ಯಾಪಾರದಿಂದ ಬೇಸತ್ತವರು ಪಾದಚಾರಿಗಳು ಮಾತ್ರ. ಹೀಗಾಗಿಯೇ ಈ ವ್ಯಾಪಾರಿಗಳಿಂದ ಮುಕ್ತಿ ಕೊಡಿಸುವಂತೆ 2008ರಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ದಾಖಲಾಗಿತ್ತು. ಈಗಾಗಲೇ ಸರ್ವೋಚ್ಚ ನ್ಯಾಯಾಲಯ ಮುಂಬೈ ಮೂಲದ ಇಂಥದ್ದೇ ಪ್ರಕರಣದ ಹಿನ್ನೆಲೆಯಲ್ಲಿ ನೀಡಿದ ಮಾರ್ಗದರ್ಶನವನ್ನು ಅನುಸರಿಸುವಂತೆ ಬಿಬಿಎಂಪಿ, ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶನ ಕೊಟ್ಟಿತ್ತು. ತಜ್ಞರ ಸಮಿತಿಯೊಂದನ್ನು ರಚಿಸಿ, ಬೀದಿ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗ ಗುರುತಿಸಿ ಸಾರ್ವಜನಿಕ ಆರೋಗ್ಯ ಮತ್ತು ಭದ್ರತೆ ವಹಿಸಿ ಎಂಬ ನಿರ್ದೇಶನಗಳುಳ್ಳ 16 ಅಂಶಗಳ ಸೂತ್ರವನ್ನು ಸರ್ವೋಚ್ಚ ನ್ಯಾಯಾಲಯ 2006ರಲ್ಲೇ ನೀಡಿದೆ. ಇದರ ಜಾರಿಯನ್ನು ಯಾರು ಮಾಡಬೇಕು, ಹೇಗೆ ಮಾಡಬೇಕು ಎಂಬುದೇ ತಿಳಿಯದ ಸರ್ಕಾರ ಎಲ್ಲವನ್ನೂ ಅದರ ಪಾಡಿಗೆ ಅದಿರಲಿ ಎಂದು ಬಿಟ್ಟಿದೆ. ನಗರ ಪಾಲಿಕೆ, ಪೊಲೀಸರು ಇತ್ತ ಏಕೆ ಕಣ್ಣು ಹಾಕುವುದಿಲ್ಲ ಎಂಬುದಂತೂ ಸ್ಪಷ್ಟ. ಸರ್ಕಾರವಾದರೂ ಯಾರ ಮೂಲಕ ಇದನ್ನು ಜಾರಿಗೊಳಿಸಬೇಕು? ಈಗ ಹೇಳಿ-ಜನತಂತ್ರ ವ್ಯವಸ್ಥೆಯಲ್ಲಿ ಎಲ್ಲವನ್ನೂ ಮಾಡಿಕೊಳ್ಳಬೇಕಾದ ಜನರೇ ಬೀದಿ ವ್ಯಾಪಾರಿಗಳಿಗೆ ಇದನ್ನೂ ಮಾಡಿಕೊಡಬೇಕೇ?
No comments:
Post a Comment